ಅಪ್ಪಂದಿರಿಗಾಗಿ ಕ್ಷೇತ್ರ ತ್ಯಾಗ ಮಾಡಿದ ‘ದೊಡ್ಡವರ’ ಮಕ್ಕಳು

Date:

  • ವರುಣಾದಿಂದ ಸಿದ್ದರಾಮಯ್ಯ, ಟಿ.ನರಸೀಪುರದಿಂದ ಮಹದೇವಪ್ಪ
  • ಕ್ಷೇತ್ರ ತ್ಯಾಗ ಮಾಡಿದ ಮಕ್ಕಳಿಗೆ ಬಂಪರ್ ಆಫರ್ ಕೊಡುವುದೇ ಕಾಂಗ್ರೆಸ್


ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲಪಟ್ಟಿ ಬಿಡುಗಡೆಯಾಗಿದೆ. ಕುಟುಂಬ ರಾಜಕಾರಣದ ಪರಂಪರೆ ಮುಂದುವರೆಸುವಲ್ಲಿ ಕೆಲ ಅಪ್ಪ-ಮಕ್ಕಳ ಜೋಡಿ ಯಶಸ್ಸು ಕಂಡರೆ, ಅಪ್ಪಂದಿರಿಗಾಗಿ ಮಕ್ಕಳೇ ಕ್ಷೇತ್ರ ತ್ಯಾಗ ಮಾಡಿದ್ದೂ ಇದೆ.

ಅಪ್ಪ-ಮಕ್ಕಳ ಜೋಡಿಯಾಗಿ ದಾವಣಗೆರೆಯ ಶಾಮನೂರು ಶಿವಶಂಕರಪ್ಪ-ಮಲ್ಲಿಕಾರ್ಜುನ್, ಬೆಂಗಳೂರಿನ ಪ್ರಿಯಾಕೃಷ್ಣ- ಕೃಷ್ಣಪ್ಪ, ರಾಮಲಿಂಗಾರೆಡ್ಡಿ-ಸೌಮ್ಯಾರೆಡ್ಡಿ, ಕೋಲಾರದ ಕೆ ಎಚ್ ಮುನಿಯಪ್ಪ-ರೂಪಕಲಾ ಮತ್ತೊಮ್ಮೆ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.

ಆದರೆ ಇದೇ ಪಟ್ಟಿಗೆ ಈ ಬಾರಿ ಹೊಸದಾಗಿ ಹೆಸರು ಸೇರಿಸಿಕೊಳ್ಳಲು ಹೊರಟಿದ್ದ ಮಾಜಿ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಅವರ ಮೊದಲ ಪ್ರಯತ್ನವೇ ವಿಫಲವಾಗಿದೆ. ಇವರ ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರೂ ಈಗ ಪರೋಕ್ಷವಾಗಿ ಜೊತೆಯಾಗಿದ್ದಾರೆ.

ಹಳೆಮೈಸೂರು ಭಾಗದ ಕಾಂಗ್ರೆಸ್ ಜೋಡಿಗಳೆಂದೇ ಖ್ಯಾತರಾಗಿದ್ದವರು ಸಿದ್ದರಾಮಯ್ಯ ಹಾಗೂ ಡಾ. ಎಚ್ ಸಿ ಮಹದೇವಪ್ಪ. ನಿವೃತ್ತಿಯ ಅಂಚಿನಲ್ಲಿರುವ ಇಬ್ಬರೂ ನಾಯಕರು ತಮ್ಮ ಬಳಿಕ ಮಕ್ಕಳ ಮೂಲಕ ತಮ್ಮ ರಾಜಕಾರಣವನ್ನು ಮುಂದುವರೆಸಲು ಚಿಂತನೆ ನಡೆಸಿದ್ದರು.

ಅದರ ಪರಿಣಾಮ ಕಳೆದ ಚುನಾವಣೆಯಲ್ಲೇ ಸಿದ್ದರಾಮಯ್ಯ ತಮ್ಮ ಅದೃಷ್ಟದ ವರುಣಾ ಕ್ಷೇತ್ರವನ್ನು ಮಗ ಯತೀಂದ್ರಗೆ ಬಿಟ್ಟು, ದೂರದ ಬದಾಮಿಯಲ್ಲಿ ತಾವು ನಿಂತು ಅಪ್ಪ-ಮಕ್ಕಳ ಜೋಡಿಗೆ ಕೊಡುಗೆ ನೀಡಿದ್ದರು.

ಇದೇ ಪ್ರಯತ್ನವನ್ನು ಮಾಜಿ ಸಚಿವ ಮಹದೇವಪ್ಪನವರೂ 2018ರ ಚುನಾವಣೆಯಲ್ಲಿ ಮಾಡ ಹೊರಟಿದ್ದರು. ಅಂದಿನ ಸನ್ನಿವೇಶ ಅದಕ್ಕೆ ವಿರುದ್ಧವಾಗಿ ಮಗನಿಗೆ ಕ್ಷೇತ್ರ ಕೊಡಿಸಲು ಹೋಗಿ ತಾವೂ ಸ್ಥಾನ ಕಳೆದುಕೊಂಡು ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕಾದ ಸ್ಥಿತಿ ತಲುಪಿದ್ದರು.

ಹಾಲಿ ಚುನಾವಣೆಯಲ್ಲಿ ಹಿಂದಿನ ಪ್ರಯತ್ನದ ಭಾಗವಾಗಿ ಮಗನಿಗೆ ತಮ್ಮದೇ ಟಿ.ನರಸೀಪುರ ಕ್ಷೇತ್ರ ಬಿಟ್ಟುಕೊಟ್ಟು ತಾವು ನಂಜನಗೂಡು ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದರು.

ಆದರೆ ಈ ಬಾರಿಯೂ ಅದೃಷ್ಟ ಕೈ ಹಿಡಿಯದೆ, ನಂಜನಗೂಡು ಕ್ಷೇತ್ರದ ಮತ್ತೋರ್ವ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅಕಾಲಿಕ ಸಾವು, ಮಹದೇವಪ್ಪರನ್ನು ಆ ಕ್ಷೇತ್ರದಿಂದ ಹಿಂದೆ ಸರಿಯುವಂತೆ ಮಾಡಿತು.

ಹೀಗಾಗಿ ಧ್ರುವನಾರಾಯಣ್ ಪುತ್ರ ದರ್ಶನ್ ಗೆ ಕ್ಷೇತ್ರ ತ್ಯಾಗ ಮಾಡಿದ ಮಹದೇವಪ್ಪ ಕ್ಷೇತ್ರವಿಲ್ಲದೆ ನಿಂತಿದ್ದರು. ಮತ್ತೊಂದೆಡೆ ಹೊಸ ಕ್ಷೇತ್ರ ಹುಡುಕಾಟದಲ್ಲಿದ್ದ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆಗೆ ನಿಂತರೂ ಅಲ್ಲಿನ ವಾತಾವರಣ ಪೂರಕವಲ್ಲ ಎನ್ನುವ ಕಾರಣದಿಂದ ಮತ್ತೊಂದು ಕ್ಷೇತ್ರದ ತಲಾಶೆಯಲ್ಲಿದ್ದರು.

ಈ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಹಳೆ ಮೈಸೂರಿನಲ್ಲಿ ಮರಳಿ ಪಕ್ಷದ ವರ್ಚಸ್ಸು ವೃದ್ಧಿಸಲು ನಿರ್ಧರಿಸಿದ್ದರಿಂದ ಇಬ್ಬರೂ ನಾಯಕರಿಗೆ ಸೂಚನೆ ನೀಡಿ ತಮ್ಮ ತಮ್ಮ ಹಿಂದಿನ ಕ್ಷೇತ್ರಗಳಲ್ಲೇ ಕಣಕ್ಕಿಳಿಯಲು ಸೂಚಿಸಿತು. ಆ ಪರಿಣಾಮ ಸಿದ್ದರಾಮಯ್ಯ ವರುಣಾದಿಂದ, ಮಹದೇವಪ್ಪ ಟಿ ನರಸೀಪುರದಿಂದ ಸ್ಪರ್ಧೆ ಮಾಡಲು ಟಿಕೆಟ್ ಘೋಷಿಸಲಾಯಿತು.

ಅಪ್ಪಂದಿರ ರೀ ಎಂಟ್ರಿ ಕಾರಣದಿಂದ ಸುನೀಲ್ ಬೋಸ್ ಹಾಗೂ ಯತೀಂದ್ರ ಸಿದ್ದರಾಮಯ್ಯ ಈ ಬಾರಿ ಕ್ಷೇತ್ರ ತ್ಯಾಗ ಮಾಡಿ, ಚುನಾವಣಾ ರಾಜಕಾರಣದಿಂದ ಸದ್ಯಕ್ಕೆ ದೂರ ನಿಂತಿದ್ದಾರೆ.

ಮುಂದೇನು ?
ಅಪ್ಪಂದಿರಿಗಾಗಿ ಕ್ಷೇತ್ರ ತ್ಯಾಗ ಮಾಡಿರುವ ಯತೀಂದ್ರ ಹಾಗೂ ಸುನಿಲ್ ಬೋಸ್ ಇಬ್ಬರ ವಿಚಾರದಲ್ಲಿ ಈಗ ಮುಂದೇನು ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಇತ್ತ ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಅವರ ಮುಂದಿನ ಸಾಧ್ಯತೆಗಳು ಹೀಗಿವೆ.

ಎರಡು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ನಿಲ್ಲುವ ಯೋಚನೆ ಮಾಡಿದ್ದಾರೆ. ಹೀಗೆ ಎರಡೂ ಕ್ಷೇತ್ರಗಳಲ್ಲಿ ಅವರು ಗೆಲುವು ಕಂಡರೆ, ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಮಗನಿಗೆ ಆ ಕ್ಷೇತ್ರ ಬಿಟ್ಟುಕೊಡುವುದು. ಉಪ ಚುನಾವಣೆ ಮಾಡಿ ಗೆಲ್ಲಿಸಿಕೊಳ್ಳುವುದು.

ಒಂದು ವೇಳೆ ಒಂದು ಗೆದ್ದು ಒಂದು ಸೋತರೆ,ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಿಂದ ಯತೀಂದ್ರರನ್ನು ಅಭ್ಯರ್ಥಿಯನ್ನಾಗಿಸುವುದು.

ಇನ್ನು ಸುನಿಲ್ ಬೋಸ್ ವಿಚಾರಕ್ಕೆ ಬಂದರೆ, ಮಹದೇವಪ್ಪ ಕ್ಷೇತ್ರದಲ್ಲಿ ಗೆಲ್ಲುವುದರ ಜೊತೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸುನೀಲ್ ಗೆ ವಿಧಾನಪರಿಷತ್ ಸದಸ್ಯ ಸ್ಥಾನ ಕೊಡಿಸುವುದು. ಅಥವಾ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸ್ಪರ್ಧಾಳುವನ್ನಾಗಿಸುವುದು.

ಹೀಗೆ ಕ್ಷೇತ್ರಬಿಟ್ಟ ಮಕ್ಕಳಿಬ್ಬರ ಭವಿಷ್ಯಕ್ಕೆ ಹಿರಿಯರು ಲೆಕ್ಕಾಚಾರ ಮಾಡಿಕೊಂಡು ತಾವು ಈ ಬಾರಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಮಕ್ಕಳ ಜೊತೆಗೆ ಹಳೆ ಜೋಡಿಗೆ ಮೈಸೂರು ಭಾಗದಲ್ಲಿ ತಮ್ಮ ವರ್ಚಸ್ಸು ಬಳಸಿ ಪಕ್ಷವನ್ನು ಬಲಪಡಿಸಿ ಅಧಿಕಾರಕ್ಕೆ ತರುವ ಹೊಣೆಯೂ ಇದೆ. ಇವೆರಡನ್ನೂ ಇಬ್ಬರೂ ನಾಯಕರು ಹೇಗೆ ನಿರ್ವಹಿಸುತ್ತಾರೆ ಎನ್ನುವುದೇ ಮುಂದಿರುವ ಕುತೂಹಲ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್ ಸ್ಥಾಪನೆ: ಸಿದ್ದರಾಮಯ್ಯ ಭರವಸೆ

ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಹೇಳಿಕೆ ಸ್ಥಳದ ಅಭಾವವಿರುವ...

ಗುತ್ತಿಗೆದಾರರ ಬಾಕಿ ಹಣ ಪಾವತಿ ವಿಚಾರ: ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಕಿಡಿ

'ಇನ್ನೆಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕು?' ಹೈಕೋರ್ಟ್‌ ಕಿಡಿ ಬಾಕಿ ಪಾವತಿಯಲ್ಲೂ...

ಝೀರೋ ಟ್ರಾಫಿಕ್‌ನಲ್ಲಿ ಬಂದ ಮಗುವಿಗೆ ಚಿಕಿತ್ಸೆ ನೀಡದ ನಿಮ್ಹಾನ್ಸ್‌; ಸಾವು

ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಒಂದು ವರ್ಷದ ಪುಟ್ಟ ಕಂದಮ್ಮನಿಗೆ...

ಬಟ್ಟೆ ನೋಡಬೇಡಿ, ಮಾನವೀಯವಾಗಿ ಆರೋಗ್ಯ ಸೇವೆ ನೀಡಿ: ಸಿಎಂ ಸಿದ್ದರಾಮಯ್ಯ 

'ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದವಾಗಿದೆ' ...