- ಅರುಣಾಚಲ ಪ್ರದೇಶ ರಾಜ್ಯದ 11 ಸ್ಥಳಗಳ ಹೆಸರು ಬದಲಿಸಿದ ಚೀನಾ
- ಚೀನಾದಿಂದ ಮರುನಾಮಕರಣ ಸ್ಥಳಗಳಿಗೆ ಝಂಗ್ನಾನ್ ಎಂದು ಹೆಸರು
ಅರುಣಾಚಲ ಪ್ರದೇಶ ರಾಜ್ಯದಲ್ಲಿ ಹಕ್ಕು ಸಾಧಿಸಲು ಚೀನಾ ತನ್ನ ಪ್ರಯತ್ನ ಮುಂದುವರಿಸಿದೆ. ಮತ್ತೆ ಇಲ್ಲಿನ 11 ಸ್ಥಳಗಳ ಹೆಸರುಗಳನ್ನು ಬದಲಿಸಿದೆ. ಚೀನಾದ ಅತಿಕ್ರಮಣಕಾರಿ ಪ್ರವೃತ್ತಿಯನ್ನು ಖಂಡಿಸಿದ ಭಾರತ, ಹೊಸ ಹೆಸರುಗಳನ್ನು ತಿರಸ್ಕರಿಸಿದೆ.
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಮೂರನೇ ಹಂತದಲ್ಲಿ ಹೆಸರುಗಳನ್ನು ಬದಲಿಸಿದೆ ಎಂದು ಸೋಮವಾರ (ಏಪ್ರಿಲ್ 3) ವರದಿಯಾಗಿದೆ.
ಹೆಸರು ಬದಲಿಸುವ ಚೀನಾದ ಕ್ರಮವನ್ನು ಭಾರತ ಟೀಕಿಸಿದೆ. ಅರುಣಾಚಲ ಪ್ರದೇಶ ದೇಶದ ಅವಿಭಾಜ್ಯ ಅಂಗ ಎಂದು ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಕುರಿತು ಹೇಳಿಕೆ ನೀಡಿ, “ನಾವು ಈ ರೀತಿಯ ಹಲವು ವರದಿ ನೋಡಿದ್ದೇವೆ. ಚೀನಾ ಇಂತಹ ಪ್ರಯತ್ನ ಮಾಡಿರುವುದು ಇದೇ ಮೊದಲಲ್ಲ. ಇದನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿದ್ದೇವೆ. ಅರುಣಾಚಲ ರಾಜ್ಯವು ಈ ಹಿಂದೆ, ಈಗ ಹಾಗೂ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ. ಇದು ಬೇರ್ಪಡಿಸಲಾಗದ ಭಾಗ. ಹೊಸದಾಗಿ ಸೃಷ್ಟಿಸಿದ ಹೆಸರು ಇಡುವುದರಿಂದ ವಾಸ್ತವ ಬದಲಾಗುವುದಿಲ್ಲ” ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಐದು ಶಿಖರಗಳು, ಎರಡು ಭೂ ಪ್ರದೇಶಗಳು, ಎರಡು ವಸತಿ ಪ್ರದೇಶಗಳು ಮತ್ತು ಎರಡು ನದಿಗಳ ಹೆಸರನ್ನು ಬದಲಿಸಿ ಚೀನಾ ಭಾನುವಾರ (ಏಪ್ರಿಲ್ 2) ಪಟ್ಟಿ ಬಿಡುಗಡೆ ಮಾಡಿದೆ.
ಇದು ಸ್ಥಳಗಳ ಹೆಸರುಗಳು ಮತ್ತು ಅವುಗಳ ಅಧೀನದ ಆಡಳಿತ ಜಿಲ್ಲೆಗಳ ವರ್ಗವನ್ನು ಸಹ ಪಟ್ಟಿ ಮಾಡಿದೆ. ಈ 11 ಪ್ರದೇಶಗಳಿಗೆ ಚೈನೀಸ್, ಟಿಬೆಟಿಯನ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ ಈ ಹೆಸರುಗಳನ್ನು ನೀಡಲಾಗಿದೆ.
ಮರುನಾಮಕರಣ ಮಾಡಿದ ಸ್ಥಳಗಳನ್ನು ಚೀನಾ ಝಂಗ್ನಾನ್ ಎಂದು ಕರೆದಿದೆ. ಇದು ಟಿಬೆಟ್‌ನ ದಕ್ಷಿಣ ಭಾಗ ಎಂದು ಹೇಳಿಕೊಂಡಿದೆ. ಚೀನಾ ಮೂರನೇ ಬಾರಿಗೆ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಏಕಪಕ್ಷೀಯವಾಗಿ ಹೆಸರು ಬದಲಾಯಿಸಿದೆ ಎಂದು ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಹೇಳಿದೆ ಎಂದು ವರದಿಯಾಗಿದೆ.
ಚೀನಾ, ಅರುಣಾಚಲ ಪ್ರದೇಶ ಸ್ಥಳಗಳ ಹೆಸರುಗಳನ್ನು ಬದಲಿಸುತ್ತಿರುವುದು ಇದು ಮೂರನೇ ಬಾರಿ. 2018 ಹಾಗೂ 2021ರಲ್ಲಿಯೂ ಇಂತಹದೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಹಿಂದೆ ಬೀಜಿಂಗ್ 2017ರ ಏಪ್ರಿಲ್‌ನಲ್ಲಿ ಆರು ಮತ್ತು 2021ರ ಡಿಸೆಂಬರ್‌ನಲ್ಲಿ 15 ಅರುಣಾಚಲ ಪ್ರದೇಶ ರಾಜ್ಯದ ಸ್ಥಳಗಳನ್ನು ಮರುನಾಮಕರಣ ಮಾಡುವ ಏಕಪಕ್ಷೀಯ ಘೋಷಣೆಗಳನ್ನು ಮಾಡಿತ್ತು. ಈ ಹಿಂದೆಯೂ ಭಾರತ ಚೀನಾದ ಈ ನಿರ್ಧಾರ ತಳ್ಳಿಹಾಕಿತ್ತು.
ಈ ಸುದ್ದಿ ಓದಿದ್ದೀರಾ? ಕೋಮು ಹಿಂಸಾಚಾರ ಬಗ್ಗೆ ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್
ಭಾರತ ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ಜಿ20 ಸರಣಿ ಕಾರ್ಯಕ್ರಮಗಳ ಭಾಗವಾಗಿ ಮಹತ್ವದ ಸಭೆ ನಡೆಸಿತ್ತು. ಈ ಸಭೆಯಲ್ಲಿ ಚೀನಾ ಭಾಗವಹಿಸಿರಲಿಲ್ಲ. ವಿವಾದಿತ ಅರುಣಾಚಲ ಪ್ರದೇಶದಲ್ಲಿ ಜಿ20 ಸಭೆ ಆಯೋಜನೆ ಕುರಿತು ಚೀನಾ ಪರೋಕ್ಷ ಅಸಮಾಧಾನ ಹೊಂದಿತ್ತು.