ನಟ ಮತ್ತು ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರೊಂದಿಗೆ ಹಲವು ವರ್ಷಗಳಿಂದ ನಿಕಟವರ್ತಿಯಾಗಿರುವ ಹಾಗೂ ಪ್ರಸ್ತುತ ಪಕ್ಷದ ಖಜಾಂಚಿಯಾಗಿರುವ ಪಿ. ವೆಂಕಟರಮಣನ್ ಅವರು, ಮೈಲಾಪುರ ವಿಧಾನಸಭಾ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಚುನಾವಣಾ ಸ್ಪರ್ಧೆಗೆ ಇಳಿದಿದ್ದಾರೆ. ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ, ತಮಿಳುನಾಡು ಬದಲಾವಣೆ ಬಯಸುತ್ತಿರುವುದರ ಬಗ್ಗೆ ಮಾತನಾಡಿದ್ದಾರೆ.
ಆರು ದಶಕಗಳಿಗೂ ಹೆಚ್ಚು ಕಾಲ ರಾಜ್ಯ ರಾಜಕಾರಣವನ್ನು ಆಳುತ್ತಿರುವ ಎರಡು ಪ್ರಮುಖ ದ್ರಾವಿಡ ಪಕ್ಷಗಳಿಗೆ ಪರ್ಯಾಯವಾಗಿ TVK ತನ್ನನ್ನು ಗುರುತಿಸಿಕೊಳ್ಳುತ್ತಿದೆ. TVK ಪಕ್ಷದಿಂದ ಜನ ಏನನ್ನು ನಿರೀಕ್ಷಿಸಬಹುದು?
ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಅವರಿಗೆ ಪ್ರಾಮಾಣಿಕತೆ ಬೇಕಾಗಿದೆ. ದಶಕಗಳಿಂದ ಕೆಲವು ಕುಟುಂಬಗಳೇ ಈ ರಾಜ್ಯವನ್ನು ಆಳುತ್ತಿವೆ, ಇದರಿಂದ ಮತದಾರರು ಬೇಸತ್ತಿದ್ದಾರೆ. ಇಂದು ಯುವಕರು ವಿದ್ಯಾವಂತರಾಗಿದ್ದಾರೆ, ಮಹಿಳೆಯರು ಹೆಚ್ಚು ಜಾಗೃತರಾಗಿದ್ದಾರೆ ಮತ್ತು ತಂತ್ರಜ್ಞಾನ ಮುಂದುವರಿದಿದೆ. ಹಳೆಯ ರಾಜಕೀಯ ಧೋರಣೆ ಈಗಿನ ಕಾಲಮಾನಕ್ಕೆ ಹೊಂದಿಕೆಯಾಗುತ್ತಿಲ್ಲ. ಈ ಕಾಲಮಾನ ಬಯಸುವ ರಾಜಕಾರಣವನ್ನು ತಮಿಳುನಾಡಿನಲ್ಲಿ TVK ಪ್ರಯತ್ನಿಸುತ್ತಿದೆ. ಯುವಕರು, ಮಹಿಳೆಯರು ಮತ್ತು ಹಿರಿಯ ನಾಗರಿಕರು ತಮ್ಮ ಆಶಯಗಳನ್ನು ಪೂರೈಸುವ ಟಿವಿಕೆಯಂತಹ ಪಕ್ಷವನ್ನು ಗೆಲ್ಲಿಸುವುದಕ್ಕೆ ಬಯಸಿದ್ದಾರೆ ಎನ್ನವ ವಿಶ್ವಾಸವಿದೆ.
ಪೆರಿಯಾರ್ ಇ.ವಿ. ರಾಮಸ್ವಾಮಿ ಅವರ ‘ನಾಸ್ತಿಕತೆ’ಯನ್ನು ಹೊರತುಪಡಿಸಿ ಉಳಿದ ಎಲ್ಲಾ ಸಿದ್ಧಾಂತವನ್ನು TVK ಒಪ್ಪಿಕೊಳ್ಳುತ್ತದೆ ಎಂದು ವಿಜಯ್ ಹೇಳಿದ್ದಾರೆ. ಹಾಗಾದರೆ ‘ಬ್ರಾಹ್ಮಣ್ಯ ವಿರೋಧಿ’ (Anti-Brahminism) ಸಿದ್ಧಾಂತದ ಬಗ್ಗೆ ನಿಮ್ಮ ನಿಲುವೇನು?
‘ಬ್ರಾಹ್ಮಣ್ಯ’ ಎಂದರೆ ದೀನ ದಲಿತರ ಮೇಲೆ, ಬಡವರ ಮೇಲೆ ಪ್ರಭುತ್ವ ಸಾಧಿಸುವ ಧೋರಣೆ. ʼಬ್ರಾಹ್ಮಣ್ಯʼ ಎನ್ನುವುದು ಬ್ರಾಹ್ಮಣ ಸಮುದಾಯಕ್ಕೆ ಸಂಬಂಧಿಸಿದ್ದಲ್ಲ. ಹಣವಂತರೂ ಕೂಡ ಬಡವರ ಮೇಲೆ ಪ್ರಭುತ್ವ ಸಾರುತ್ತಾರೆ. ಬ್ರಾಹ್ಮಣ್ಯ ವಿರೋಧಿ ಹಳೆಯ ಸಿದ್ಧಾಂತ. ಇಂದು ಅಂತಹ ಪರಿಸ್ಥಿತಿ ಅಸ್ತಿತ್ವದಲ್ಲಿಲ್ಲ. ಇಂದಿನ ಜನಾಂಗ ಬಹಳಷ್ಟು ಜಾಗೃತರಾಗಿದ್ದಾರೆ. ಆದ್ದರಿಂದ, ಇಂದಿನ ಸಮಾಜಕ್ಕೆ ಅದರ ಅವಶ್ಯಕತೆಯಿಲ್ಲ.
ಇದನ್ನೂ ಓದಿ : ಜಲದೊಳಗಣ ಕಿಚ್ಚು ಜಲವ ಸುಡಲಿಲ್ಲ- ದಲಿತ ಚಳವಳಿಯ ಮೌಲ್ಯ ಪ್ರಜ್ಞೆಯ ಹುಡುಕಾಟ
ತಮಿುಳುನಾಡಿನಲ್ಲಿ TVK ಪರ್ಯಾಯ ರಾಜಕಾರಣವನ್ನು ನೀಡುತ್ತದೆ ಎಂದು ಭರವಸೆ ನೀಡಿದ್ದೀರಿ. ಆದರೆ, ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದರೆ ಸಾಂಪ್ರದಾಯಿಕ ಪಕ್ಷಗಳಂತೆಯೇ ನಿಮ್ಮ ಪಕ್ಷವೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಜಾತಿಗೆ ಪ್ರಾಮುಖ್ಯತೆ ನೀಡಿದೆ. ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಕಡಿಮೆ ಪ್ರಾತಿನಿಧ್ಯ ನೀಡಲಾಗಿದೆ ಎಂಬ ಟೀಕೆಯೂ ಇದೆಯಲ್ಲ?
ತಮಿಳುನಾಡಿನ ಚುನಾವಣೆ ಜಾತಿಯ ಮೇಲೆ ಅವಲಂಬಿತವಾಗಿಲ್ಲ. ನನ್ನ ಕ್ಷೇತ್ರದ ಉದಾಹರಣೆಯನ್ನೇ ತೆಗೆದುಕೊಳ್ಳಿ, ಇಲ್ಲಿ ಬ್ರಾಹ್ಮಣರು ಹೆಚ್ಚಿದ್ದಾರೆ ಎಂದು ಜನರು ಹೇಳುತ್ತಾರೆ. ಆದರೆ, ಅಲ್ಲಿರುವ 1.94 ಲಕ್ಷ ಮತದಾರರಲ್ಲಿ ಕೇವಲ 40,000 ಜನರು ಮಾತ್ರ ಬ್ರಾಹ್ಮಣರು. ಉಳಿದವರು ದಶಕಗಳ ಹಿಂದೆ ಬೇರೆಡೆಗಳಿಂದ ವಲಸೆ ಬಂದು ನೆಲೆಸಿದವರು. ಇಡೀ ರಾಜ್ಯದ ಪರಿಸ್ಥಿತಿಯೂ ಹೀಗೆಯೇ ಇದೆ.
ನಾವು ಅಭ್ಯರ್ಥಿಗಳನ್ನು ಅವರ ಕಾರ್ಯಚಟುವಟಿಕೆ ಮತ್ತು ಜನಪ್ರಿಯತೆಯ ಆಧಾರದ ಮೇಲೆ ಆಯ್ಕೆ ಮಾಡಿದ್ದೇವೆ. ಮಹಿಳೆಯರು ಮತ್ತು ಅಲ್ಪಸಂಖ್ಯಾತರ ವಿಷಯಕ್ಕೆ ಬಂದರೆ, ಆಸಕ್ತಿ ತೋರಿಸಿದವರಿಗೆ ನಾವು ಟಿಕೆಟ್ ನೀಡಿದ್ದೇವೆ. ನಾವು ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವುದಿಲ್ಲ.
ಪ್ರಶ್ನೆ: ನಿಮ್ಮ ಕ್ಷೇತ್ರದಲ್ಲಿ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಯಾವುವು?
ಹಲವಾರು ಸಮಸ್ಯೆಗಳು ಪದೇ ಪದೇ ಕೇಳಿಬರುತ್ತಿವೆ. ಮೊದಲನೆಯದು ಸರ್ಕಾರಿ ಶಾಲೆಗಳ ಸ್ಥಿತಿ. ಶಾಲೆಗಳು ಮತ್ತು ಮಾದಕ ದ್ರವ್ಯಗಳ ಹಾವಳಿ ಹೆಚ್ಚುತ್ತಿದೆ. ಜನ ಭಯಭೀತರಾಗಿದ್ದಾರೆ. ಕ್ಷೇತ್ರದ ಜನರು ಕೇವಲ ರಾಜಕೀಯ ಭರವಸೆಗಳನ್ನು ಬಯಸುತ್ತಿಲ್ಲ, ಬದಲಿಗೆ ಸುರಕ್ಷಿತ ವಾತಾವರಣ ಮತ್ತು ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ.
ಎರಡನೆಯದು ಮಹಿಳೆಯರ ಸುರಕ್ಷತೆ, ವಿಶೇಷವಾಗಿ ಕೊಳಗೇರಿ ನಿವಾಸಿಗಳ ಸಮಸ್ಯೆ. ಐವತ್ತು ವರ್ಷಗಳಿಂದ ಅವರು ಅಲ್ಲಿಯೇ ವಾಸಿಸುತ್ತಿದ್ದಾರೆ, ಆದರೆ ಸರ್ಕಾರ ಇನ್ನೂ ಅವರಿಗೆ ನಿವೇಶನ ನೀಡಿಲ್ಲ, ಮನೆಗಳನ್ನು ಕಟ್ಟಿಕೊಟ್ಟಿಲ್ಲ. ಒಕ್ಕಲೆಬ್ಬಿಸುವ ಭೀತಿಯಿಂದ ಅವರು ದೂರು ನೀಡುವುದಕ್ಕೂ ಭಯಪಡುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುವುದಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
TVK ಹಲವಾರು ವಿಷಯಗಳ ಬಗ್ಗೆ ಬಹಿರಂಗವಾಗಿ ಸರ್ಕಾರವನ್ನು ಟೀಕಿಸಿದೆ. ಆದರೆ ದಲಿತ ಯುವಕ ಕವಿನ್ ಸೆಲ್ವಗಣೇಶ್ ಅವರ “ಮರ್ಯಾದಾ ಹತ್ಯೆ”, ಕೇಂದ್ರ ಬಜೆಟ್ ಮತ್ತು ತಿರುಪರಂಕುಂದ್ರಂ ದೇವಾಲಯದ ವಿವಾದ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ಮೌನ ವಹಿಸಿದೆ. ಯಾಕೆ?
ನಮಗೆ ಜನರ ಜೀವನ ಮುಖ್ಯ. ಇಂತಹ ಘಟನೆಗಳನ್ನು ಕೇವಲ ಹೇಳಿಕೆಗಳ ಮೂಲಕ ಖಂಡಿಸುವ ಬದಲು, ಜನರ ಜೀವನವನ್ನು ಸುಧಾರಿಸಲು ನಾವು ಶ್ರಮಿಸುತ್ತಿದ್ದೇವೆ. ನಾವು ಜನರೊಂದಿಗೆ ಇದ್ದೇವೆ. ನಾವು ಪ್ರತಿಯೊಂದು ವಿಷಯದಿಂದ ಸುದ್ದಿ ಆಗುವುದಕ್ಕೆ ಬಯಸುವುದಿಲ್ಲ. ಅದು ರಾಜಕೀಯವಲ್ಲ. ಆದರೆ ಮಹತ್ವದ ವಿಷಯಗಳ ಬಗ್ಗೆ ನಾವು ಖಂಡಿತವಾಗಿ ಧ್ವನಿ ಎತ್ತಿದ್ದೇನೆ. ಮುಂದೆಯೂ ಧ್ವನಿ ಎತ್ತುತ್ತೇವೆ.
ನಿಮ್ಮ ಪಕ್ಷದ “ರಾಜಕೀಯ ಶತ್ರು” ಪಕ್ಷವಾದ DMK ಪಕ್ಷವನ್ನು ಟೀಕಿಸುತ್ತಲೇ ಇರುತ್ತೀರಿ. ಆದರೆ, ನಿಮ್ಮ “ಸೈದ್ಧಾಂತಿಕ ಶತ್ರು” ಪಕ್ಷವಾದ BJP ಬಗ್ಗೆ ಮೌನವೇಕೆ?
ಇದು ರಾಜ್ಯ ಚುನಾವಣೆ ಆಗಿರುವುದರಿಂದ, ರಾಜ್ಯದಲ್ಲಿ ನಮ್ಮ ಪ್ರಮುಖ ಎದುರಾಳಿಯನ್ನು ನಾವು ಗುರಿ ಮಾಡುತ್ತಿದ್ದೇವೆ. ಸಂಸತ್ ಚುನಾವಣೆಗಳು ಬಂದಾಗ, ನಾವು ಖಂಡಿತವಾಗಿಯೂ ಬಿಜೆಪಿ ವಿರುದ್ಧ ಹೋರಾಡುತ್ತೇವೆ.
ವಿಜಯ್ ಅವರು ಸಾರ್ವಜನಿಕವಾಗಿ ಅಥವಾ ಜನರ ಮಧ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಇತರೆ ಪಕ್ಷಗಳು ಟೀಕಿಸುತ್ತಿವೆ.
ನಮ್ಮ ನಾಯಕರಾದ ವಿಜಯ್ ಪ್ರತಿ ಜಿಲ್ಲೆ ಮತ್ತು ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡಿ ಜನರನ್ನು ಭೇಟಿ ಮಾಡಲು ಬಯಸುತ್ತಾರೆ ಎಂದು ಪದೇ ಪದೇ ಹೇಳಿದ್ದಾರೆ. ಆದರೆ, ಕಾರ್ಯಕ್ರಮಗಳ ಆಯೋಜನೆಗೆ ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಆಡಳಿತ ಅನುಮತಿ ನೀಡುವ ವಿಷಯದಲ್ಲೂ ರಾಜಕೀಯ ಮಾಡುತ್ತಿವೆ. ಜನರೊಂದಿಗೆ ಬೆರೆಯುವುದಕ್ಕಾಗಿಯೇ ವಿಜಯ್ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಅವರು ಎಂದಿಗೂ ಜನರೊಂದಿಗೆಯೇ ಇರುತ್ತಾರೆ.
ಇನ್ನು, ಪ್ರತಿ ಕ್ಷೇತ್ರದಲ್ಲೂ ಅವರೇ ಅಭ್ಯರ್ಥಿ. ನಾವೆಲ್ಲರೂ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದೇವೆ ಅಷ್ಟೆ.
ಸೌಜನ್ಯ : The New Indian Express
ಕನ್ನಡಕ್ಕೆ : ಶ್ರೀರಾಜ್ ವಕ್ವಾಡಿ




