- ಅಂತಿಮ ಗೆಲುವು ನಮ್ಮದೆ ಎಂದ ಸಿದ್ದರಾಮಯ್ಯ
- ‘ರಾಹುಲ್ ಗಾಂಧಿ ಧ್ವನಿ ಉಡುಗಿಸಲಾಗದು’
ಮೋದಿ ಉಪನಾಮದ ಟೀಕೆಯ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ಇದು ರಾಹುಲ್ ಗಾಂಧಿಯೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಅಲ್ಲ, ಇದು ಇಡೀ ದೇಶದ ಜನತೆಗೆ ಸಂಬಂಧಿಸಿದ್ದು ಎಂದು ಹರಿಹಾಯ್ದಿದ್ದಾರೆ.
2019ರ ಏಪ್ರಿಲ್ 19ರಂದು ರಾಹುಲ್ ಗಾಂಧಿ ಅವರು ಕರ್ನಾಟಕದ ಕೋಲಾರದಲ್ಲಿ ನಡೆದ ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ “ಎಲ್ಲ ಕಳ್ಳರೂ ಮೋದಿ ಉಪನಾಮವನ್ನೇಕೆ ಹೊಂದಿದ್ದಾರೆ” ಎಂದು ವ್ಯಂಗ್ಯವಾಡಿದ್ದರು. ರಾಹುಲ್ ಗಾಂಧಿ ಅವರ ಹೇಳಿಕೆ ಖಂಡಿಸಿ ಗುಜರಾತಿನ ಮಾಜಿ ಸಚಿವ ಪೂರ್ಣೇಶ್ ಮೋದಿ ಪ್ರಕರಣ ದಾಖಲಿಸಿದ್ದರು.
ರಾಹುಲ್ ಗಾಂಧಿ ಅವರಿಗೆ ಜೈಲು ಶಿಕ್ಷೆ ವಿಧಿಸಿರುವ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ರಾಹುಲ್ ಗಾಂಧಿ ಅವರು ಸತ್ಯವನ್ನು ಹೇಳಿ, ಜನಜಾಗೃತಿ ಮೂಡಿಸುತ್ತಿದ್ದರು. ಅವರ ಧ್ವನಿಯನ್ನು ಸುಳ್ಳು ಮೊಕದ್ದಮೆಗಳು ಮತ್ತು ಮಾಧ್ಯಮಗಳ ಮೂಲಕ ಅಪಪ್ರಚಾರದಿಂದ ಉಡುಗಿಸಲಾಗದು. ರಾಹುಲ್ ಗಾಂಧಿಯವರ ಜೊತೆ ಇಡೀ ದೇಶ ಇದೆ” ಎಂದು ಟ್ವೀಟ್ ಮಾಡಿದ್ದಾರೆ.
“ಸೂರತ್ ಸೆಷನ್ಸ್ ನ್ಯಾಯಾಲಯದ ತೀರ್ಪು ಅಂತಿಮ ಅಲ್ಲ, ಮೇಲಿನ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ಭರವಸೆ ನಮಗಿದೆ. ಸುಳ್ಳು ಪ್ರಚಾರ, ಪೊಳ್ಳು ಬೆದರಿಕೆಗಳು ಹೇಡಿಗಳ ಲಕ್ಷಣ. ಇದರಿಂದಾಗಿ ತಲೆ ತಗ್ಗಿಸುವ ಪ್ರಶ್ನೆಯೇ ಇಲ್ಲ. ನ್ಯಾಯಾಂಗದ ಹೋರಾಟ ಮುಂದುವರಿಯಲಿದೆ, ಅಂತಿಮ ಗೆಲುವು ನಮ್ಮದೇ ಆಗಿರುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಇದು ರಾಹುಲ್ ಗಾಂಧಿ ಅವರೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಅಲ್ಲ, ಇದು ಇಡೀ ದೇಶದ ಜನತೆಗೆ ಸಂಬಂಧಿಸಿದ್ದು. ಸರ್ಕಾರದ ವಿರುದ್ಧ ಮಾತನಾಡಿದವರ ಮೇಲೆ ಕೇಂದ್ರ ಬಿಜೆಪಿ ಸರ್ಕಾರ ನೂರಾರು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ. ಇಂದು ರಾಹುಲ್ ಗಾಂಧಿ ಅವರು, ನಾಳೆ ನಾವು ಕೂಡ ಆಗಬಹುದು ಎಚ್ಚರ” ಎಂದು ಹೇಳಿದ್ದಾರೆ.