ಸಮುದ್ರ ತೀರದಲ್ಲಿ ಫುಟ್‌ಬಾಲ್ ಆಟವಾಡುತ್ತಿದ್ದ ವೇಳೆ ಇಬ್ಬರು ಯುವಕರು ನೀರುಪಾಲಾದ ಘಟನೆ ಕೇರಳದ ಕೋಝಿಕ್ಕೋಡ್‌ನಲ್ಲಿ ಭಾನುವಾರ ನಡೆದಿದೆ.
ಕೋಝಿಕ್ಕೋಡ್ ಬೀಚ್‌ನ ಲಯನ್ಸ್ ಪಾರ್ಕ್ ಬಳಿ ಭಾನುವಾರ ಬೆಳಗ್ಗೆ ಐವರು ಸ್ನೇಹಿತರು ಫುಟ್‌ಬಾಲ್ ಆಡುತ್ತಿದ್ದ ವೇಳೆ ಚೆಂಡು ಸಮುದ್ರಕ್ಕೆ ಬಿದ್ದಿತ್ತು. ಚೆಂಡು ತರಲೆಂದು ನೀರಿಗೆ ಇಳಿದ ಬಾಲಕನಿಗೆ ಈಜು ಬಾರದ ಕಾರಣ ನೀರಲ್ಲಿ ಮುಳುಗಿದ್ದಾನೆ. ಈ ವೇಳೆ ಆತನನ್ನು ರಕ್ಷಿಸಲು ಇಬ್ಬರು ಸ್ನೇಹಿತರು ಸಮುದ್ರಕ್ಕೆ ಜಿಗಿದ್ದಿದ್ದಾರೆ. ಮೂವರೂ ಸಹ ಮರಳಿ ದಡ ಸೇರದೇ ಇದ್ದಾಗ ಬದಿಯಲ್ಲಿದ್ದ ಇಬ್ಬರು ಸಹಾಯಕ್ಕಾಗಿ ಬೊಬ್ಬೆ ಹಾಕಿದ್ದಾರೆ. ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬರು ನೆರವಿಗೆ ಧಾವಿಸಿದ್ದು, ಓರ್ವ ಯುವಕನ್ನು ನೀರಿನಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಉಳಿದಿಬ್ಬರು ನೀರು ಪಾಲಾಗಿದ್ದಾರೆ.

ನಾಪತ್ತೆಯಾಗಿರುವ ಕೋಝಿಕ್ಕೋಡ್ ನಗರದ ವಳವಣ್ಣ ನಿವಾಸಿಗಳಾದ ಮೊಹಮ್ಮದ್ ಆದಿಲ್ (18) ಮತ್ತು ಆದಿಲ್ ಹಸನ್ (16) ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕರಾವಳಿ ಪೊಲೀಸ್ ಪಡೆ, ಅಗ್ನಿಶಾಮಕ ದಳದ ಸಿಬ್ಬಂದಿ, ಮುಳುಗು ತಜ್ಞರು ಹಾಗೂ ಮೀನುಗಾರರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಚೆಂಡನ್ನು ತೆಗೆಯಲು ನೀರಿಗಿಳಿದ ವೇಳೆ ಎತ್ತರದ ಅಲೆಗಳ ಹೊಡೆತಕ್ಕೆ ಸಿಲುಕಿ ಬಾಲಕರು ಕೊಚ್ಚಿಹೋಗಿದ್ದಾರೆ ಎಂದು ಕರಾವಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜೋಸಿ ಟಿ ಕೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.