ಅಸ್ಸಾಂ ಕಾಂಗ್ರೆಸ್ ಯುವ ಘಟಕದ ಉಚ್ಚಾಟಿತ ನಾಯಕಿಯೊಬ್ಬರ ಗೌರವಕ್ಕೆ ಧಕ್ಕೆ ತಂದ ಆರೋಪದಲ್ಲಿ ಕರ್ನಾಟಕ ಮೂಲದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ.
ತನಗೆ ಮಾನಸಿಕ ಹಿಂಸೆ ನೀಡಿದ್ದಾರೆಂದು ಆರೋಪಿಸಿ ಅಸ್ಸಾಂ ಕಾಂಗ್ರೆಸ್ ಯುವ ಘಟಕದ ಉಚ್ಚಾಟಿತ ನಾಯಕಿ ಶ್ರೀನಿವಾಸ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಗೌಹಾಟಿ ಹೈಕೋರ್ಟ್ ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಶ್ರೀನಿವಾಸ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತ್ತು.
ಈ ಸುದ್ದಿ ಓದಿದ್ದೀರಾ? ಅದಾನಿ ಸಮೂಹದ ತನಿಖೆಗೆ ಸೆಬಿಗೆ ಮೂರು ತಿಂಗಳು ಸಮಯ ನೀಡಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಹಾಗೂ ಸಂಜಯ್ ಕರೋಲ್ ಅವರ ಪೀಠವು ಜುಲೈ 10 ರೊಳಗೆ ತಮ್ಮ ಉತ್ತರವನ್ನು ಕೋರಿ ಅಸ್ಸಾಂ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಶ್ರೀನಿವಾಸ್ ಅವರನ್ನು ₹50,000 ಬಾಂಡ್ ಮತ್ತು ಒಂದು ಅಥವಾ ಎರಡು ಶ್ಯೂರಿಟಿಗಳನ್ನು ಪಡೆದು ನಿರೀಕ್ಷಣಾ ಜಾಮೀನು ನೀಡುವಂತೆ ನ್ಯಾಯಾಲಯ ಆದೇಶಿಸಿತು. ತನಿಖೆಗೆ ಸಹಕರಿಸುವಂತೆ ಶ್ರೀನಿವಾಸ್ ಅವರಿಗೆ ನಿರ್ದೇಶನ ನೀಡಿದ ನ್ಯಾಯಾಲಯ ಈ ಸಂಬಂಧ ಅಸ್ಸಾಂ ಸರ್ಕಾರಕ್ಕೂ ನೋಟಿಸ್ ನೀಡಿತು.
“ಎಫ್ಐಆರ್ ದಾಖಲಿಸಲು ಒಂದು ತಿಂಗಳ ವಿಳಂಬವನ್ನು ಪರಿಗಣಿಸಿ, ಅರ್ಜಿದಾರರು ಮಧ್ಯಂತರ ರಕ್ಷಣೆಗೆ ಅರ್ಹರಾಗಿದ್ದಾರೆ” ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.