ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲು ದೆಹಲಿ ಪೊಲೀಸರು ಅನುಮತಿ ನೀಡುತ್ತಿಲ್ಲ, ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಬೇಕು ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಶೀಘ್ರದಲ್ಲೇ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ದೆಹಲಿಯ ಜಂತರ್ ಮಂತರ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿಜೆಪಿ ಮತ್ತು ವಿವಿಧ ಸಂಘಟನೆಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ದೆಹಲಿ ಪೊಲೀಸ್ ಆಡಳಿತವು ಅವಕಾಶ ನೀಡುತ್ತಿಲ್ಲ ಹಾಗೂ ನಿರ್ಬಂಧಗಳನ್ನು ವಿಧಿಸುತ್ತಿದೆ ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ತುರ್ತು ವಿಚಾರಣೆಗೆ ವಿನಂತಿಸಿದ ಹಿನ್ನೆಲೆಯಲ್ಲಿ, ಅರ್ಜಿಯನ್ನು ಲಿಸ್ಟ್ ಮಾಡಲು ನ್ಯಾಯಪೀಠವು ಸಮ್ಮತಿಸಿದೆ.
ಇದನ್ನೂ ಓದಿ: ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಗೋವಾ, ಕೋಲ್ಕತ್ತದಲ್ಲಿ ಸಿಜೆಪಿ ‘ಮೋರ್ಚಾ’
ಎಸ್‌ಐಆರ್ ಸೇರಿದಂತೆ ಚುನಾವಣಾ ಆಯೋಗದ ಹಲವು ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡಿರುವ ಆರೋಪವನ್ನು ಹೊತ್ತಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದರೆ ಪೊಲೀಸರು ಪದೇ ಪದೇ ಪ್ರತಿಭಟನೆಗೆ ಅನುಮತಿಯನ್ನು ನಿರಾಕರಿಸುತ್ತಿದ್ದಾರೆ.
ದೆಹಲಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿವಿಧ ವಿಷಯಗಳ ಮೇಲಿನ ಪ್ರತಿಭಟನೆಗಳ ಸಂದರ್ಭದಲ್ಲಿ ದೆಹಲಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುತ್ತಿದ್ದು, ಪ್ರತಿಭಟನಾಕಾರರನ್ನು ತಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು.
ಆದರೆ ನಾಗರಿಕರಿಗೆ ಶಾಂತಿಯುತವಾಗಿ ಸಭೆ ಸೇರಲು ಮತ್ತು ಪ್ರತಿಭಟಿಸಲು ಸಂವಿಧಾನಬದ್ಧ ಹಕ್ಕಿದೆ ಎಂಬುದನ್ನು ಎತ್ತಿಹಿಡಿಯಬೇಕೆಂದು ಅರ್ಜಿದಾರರು ಪೀಠಕ್ಕೆ ಮನವಿ ಮಾಡಿದ್ದಾರೆ.
ಇದೀಗ ಈ ಅರ್ಜಿಯ ವಿಚಾರಣೆಯನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಇಂದಿನ ನಡಾವಳಿಯಲ್ಲಿ ಸೂಚಿಸಿದೆ.




