2020ರ ಈಶಾನ್ಯ ದೆಹಲಿ ಗಲಭೆ ಹಾಗೂ 2019ರ ಡಿಸೆಂಬರ್‌ನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ (ಎಸ್‌ಐಟಿ) ಕೋರಿ ಹಾಗೂ ದ್ವೇಷ ಭಾಷಣ ಮಾಡಿದ ವಿವಿಧ ರಾಜಕೀಯ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸರಣಿ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. 2020ರಿಂದಲೂ ವಿಚಾರಣೆ ಹಂತದಲ್ಲಿದ್ದ ಈ ಅರ್ಜಿಗಳನ್ನು ನ್ಯಾಯಮೂರ್ತಿ ವಿವೇಕ್ ಚೌಧರಿ ಮತ್ತು ನ್ಯಾಯಮೂರ್ತಿ ಮನೋಜ್ ಜೈನ್ ಅವರಿದ್ದ ವಿಭಾಗೀಯ ಪೀಠವು ತಿರಸ್ಕರಿಸಿದೆ. ತೀರ್ಪಿನ ವಿವರವಾದ ಪ್ರತಿ ಇನ್ನಷ್ಟೇ ಪ್ರಕಟವಾಗಬೇಕಿದೆ.
ದೆಹಲಿ ಗಲಭೆಗೆ ಪ್ರಚೋದನೆ ನೀಡಿದ ದ್ವೇಷ ಭಾಷಣಗಳಿಗಾಗಿ ಬಿಜೆಪಿ ನಾಯಕರಾದ ಪರ್ವೇಶ್ ವರ್ಮಾ, ಕಪಿಲ್ ಮಿಶ್ರಾ ಮತ್ತು ಅನುರಾಗ್ ಠಾಕೂರ್ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಬೇಕೆಂದು ಒಂದು ಅರ್ಜಿಯಲ್ಲಿ ಕೋರಲಾಗಿತ್ತು. ಮತ್ತೊಂದು ಅರ್ಜಿಯಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಆಪ್‌ನ ಮನೀಶ್ ಸಿಸೋಡಿಯಾ, ಅಮಾನತುಲ್ಲಾ ಖಾನ್, ಎಐಎಂಐಎಂನ ಅಕ್ಬರುದ್ದೀನ್ ಓವೈಸಿ, ವಾರಿಸ್ ಪಠಾಣ್, ವಕೀಲ ಮಹಮೂದ್ ಪ್ರಾಚಾ, ಹರ್ಷ ಮಂದರ್, ಮುಫ್ತಿ ಮೊಹಮ್ಮದ್ ಇಸ್ಮಾಯಿಲ್, ನಟಿ ಸ್ವರಾ ಭಾಸ್ಕರ್ ಮತ್ತು ಉಮರ್ ಖಾಲಿದ್ ಅವರ ಭಾಷಣಗಳನ್ನು ಉಲ್ಲೇಖಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿತ್ತು. ಜೊತೆಗೆ ಸಲ್ಮಾನ್ ಖುರ್ಷಿದ್ ಮತ್ತು ಅಸಾದುದ್ದೀನ್ ಓವೈಸಿ ವಿರುದ್ಧವೂ ದೂರು ದಾಖಲಿಸುವಂತೆ ಮತ್ತೊಬ್ಬ ಅರ್ಜಿದಾರರು ಕೋರಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಗಳ ಹಿಂದೆ ಅಂತರರಾಷ್ಟ್ರೀಯ ಪಿತೂರಿ ಇದ್ದು, ಇದಕ್ಕೆ ಒದಗಿಸಲಾದ ಆರ್ಥಿಕ ನೆರವಿನ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯಿಂದ ತನಿಖೆ ನಡೆಸಬೇಕು ಎಂದು ಅರ್ಜಿಯೊಂದರಲ್ಲಿ ಒತ್ತಾಯಿಸಲಾಗಿತ್ತು. ಇದೇ ವೇಳೆ, ಗಲಭೆಯ ಸಂದರ್ಭದಲ್ಲಿ ದೆಹಲಿ ಪೊಲೀಸ್, ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್) ಮತ್ತು ಇತರ ಸರ್ಕಾರಿ ಸಿಬ್ಬಂದಿ ಎಸಗಿದ್ದಾರೆನ್ನಲಾದ ಹಿಂಸಾಚಾರ ಮತ್ತು ಕರ್ತವ್ಯಲೋಪದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಮಾಜಿ ಸಂಸದೆ ಬೃಂದಾ ಕಾರಟ್ ಮತ್ತು ಜಮಿಯತ್ ಉಲೇಮಾ-ಎ-ಹಿಂದ್ ಪರವಾಗಿ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು.
2019ರ ಜಾಮಿಯಾ ಹಿಂಸಾಚಾರ ಪ್ರಕರಣದಲ್ಲಿ, ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಮಿತಿಮೀರಿದ ಬಲಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಈ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಂದ ಸ್ವತಂತ್ರ ಸಂಸ್ಥೆಗೆ ವರ್ಗಾಯಿಸುವಂತೆ ಕೋರಲಾಗಿತ್ತು. ಆದರೆ, ಈ ಪ್ರತಿಭಟನಾ ಸಭೆಯನ್ನು ‘ಕಾನೂನುಬಾಹಿರ ಗುಂಪುಗಾರಿಕೆ’ ಎಂದು ಬಣ್ಣಿಸಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ), ಇದು ಅನಿವಾರ್ಯವಾಗಿ ಪೊಲೀಸ್ ಕಾರ್ಯಾಚರಣೆಗೆ ಎಡೆಮಾಡಿಕೊಟ್ಟಿತು ಎಂದು ಈ ಹಿಂದೆ ಅಭಿಪ್ರಾಯಪಟ್ಟಿತ್ತು. ವಿಶ್ವವಿದ್ಯಾಲಯ ಹಾಗೂ ನ್ಯೂ ಫ್ರೆಂಡ್ಸ್ ಕಾಲೊನಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಈಗಾಗಲೇ ಸಂಗ್ರಹಿಸಿ, ಸುರಕ್ಷಿತವಾಗಿರಿಸಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.
This video cannot be played in your browser. Open the video directly
ಈ ಪ್ರಕರಣಗಳು ದೀರ್ಘಕಾಲದಿಂದ ಬಾಕಿ ಉಳಿದಿರುವುದನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್, ಆದಷ್ಟು ಬೇಗ ವಿಚಾರಣೆ ನಡೆಸಿ ಇತ್ಯರ್ಥಪಡಿಸುವಂತೆ 2023ರ ಅಕ್ಟೋಬರ್‌ನಲ್ಲಿ ದೆಹಲಿ ಹೈಕೋರ್ಟ್‌ಗೆ ಸೂಚನೆ ನೀಡಿತ್ತು. ಇದೀಗ ಎಲ್ಲ ಅರ್ಜಿಗಳನ್ನು ಏಕಕಾಲದಲ್ಲಿ ವಜಾಗೊಳಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ಅಂತಿಮ ತೀರ್ಪಿನ ಪ್ರತಿಯಲ್ಲಿ ವಜಾಗೊಳಿಸಲು ಸೂಕ್ತ ಕಾರಣಗಳನ್ನು ಒದಗಿಸಿರುವುದಾಗಿ ತಿಳಿಸಿದೆ.





