ದೆಹಲಿಯ ಸಾರ್ವಜನಿಕ ಸ್ಥಳಗಳು ಹಾಗೂ ಸಾರಿಗೆ ವ್ಯವಸ್ಥೆಯನ್ನು ಬಳಸುವಾಗ ಪ್ರತಿಯೊಬ್ಬ ಮಹಿಳೆಯೂ ತಾನು ಸುರಕ್ಷಿತ ಎಂಬ ಭಾವನೆ ಹೊಂದುವುದನ್ನು ಖಚಿತಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಮಹಿಳಾ ಸುರಕ್ಷತೆಯ ಆತಂಕಗಳನ್ನು ದೂರ ಮಾಡಲು ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (ಎನ್‌ಸಿಆರ್) ಇತ್ತೀಚೆಗೆ ನಡೆದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ನೇತೃತ್ವದ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. “ರಾತ್ರಿ 10 ಗಂಟೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗಲಿ ಅಥವಾ ಮೆಟ್ರೊ ಹಾಗೂ ರಸ್ತೆಯ ಮೂಲಕ ಪ್ರಯಾಣಿಸುವಾಗಲಿ, ದೆಹಲಿಯ ಪ್ರತಿಯೊಬ್ಬ ಮಹಿಳೆಯೂ ನಿರ್ಭಯವಾಗಿ ಓಡಾಡುವಂತಿರಬೇಕು” ಎಂದು ಪೀಠ ಹೇಳಿದೆ.
ಕಲ್ಕಾಜಿ ಬಳಿಯ ಆಸ್ತಾ ಕುಂಜ್ ಉದ್ಯಾನದಲ್ಲಿ 17 ವರ್ಷದ ಬಾಲಕಿಯ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ, ಸ್ವರೂಪ್ ನಗರದಲ್ಲಿ ಅಪ್ರಾಪ್ತೆಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಗ್ರೇಟರ್ ನೋಯ್ಡಾದಿಂದ ದೆಹಲಿಗೆ ಬರುತ್ತಿದ್ದ ಬಸ್‌ನಲ್ಲಿ 16 ವರ್ಷದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯದಂತಹ ಸರಣಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಸೆಪ್ಟೆಂಬರ್ 28ರಂದು ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು.
ನಿರ್ಭಯಾ ಪ್ರಕರಣದಿಂದ ಪಾಠ ಕಲಿತಿಲ್ಲವೇ?:
This video cannot be played in your browser. Open the video directly
ಸಾರ್ವಜನಿಕ ಉದ್ಯಾನಗಳು, ರಸ್ತೆಗಳು ಹಾಗೂ ಬಸ್‌ಗಳನ್ನು “ಹೆಚ್ಚಿನ ಅಪಾಯದ ವಲಯ”ಗಳಾಗಲು ಬಿಡಬಾರದು ಎಂದಿರುವ ನ್ಯಾಯಪೀಠ, ‘2012ರ ನಿರ್ಭಯಾ ಪ್ರಕರಣದಿಂದ ನಾವು ಏನಾದರೂ ಪಾಠ ಕಲಿತ್ತಿದ್ದೇವೆಯೇ?’ ಎಂದು ಕಟುವಾಗಿ ಪ್ರಶ್ನಿಸಿದೆ. ಸಾರ್ವಜನಿಕ ಸುರಕ್ಷತೆಯು ಸಂವಿಧಾನದ 21ನೇ ವಿಧಿಯಡಿ ಬರುವ ‘ದೌರ್ಜನ್ಯರಹಿತ ಹಾಗೂ ಘನತೆಯಿಂದ ಬದುಕುವ ಮೂಲಭೂತ ಹಕ್ಕಿಗೆ’ ಸಂಬಂಧಿಸಿದೆ. ಮಹಿಳೆಯರಿಗೆ ಮೂಲಭೂತ ಸುರಕ್ಷತೆ ಒದಗಿಸುವಲ್ಲಿ ದೆಹಲಿ ಸರ್ಕಾರ ಮತ್ತು ಪೊಲೀಸರದ್ದು ‘ವ್ಯವಸ್ಥಿತ ವೈಫಲ್ಯ’ (Systemic failure) ಎಂದು ಟೀಕಿಸಿರುವ ಕೋರ್ಟ್, ರಾಜಧಾನಿಯ ಸಾರ್ವಜನಿಕ ಸ್ಥಳಗಳ ಭದ್ರತಾ ಲೆಕ್ಕಪರಿಶೋಧನೆ (Audit) ನಡೆಸುವಂತೆ ಸೂಚಿಸಿದೆ.
ಆಸ್ತಾ ಕುಂಜ್ ಉದ್ಯಾನದ ಆಡಿಟ್ ವರದಿ:
ಸೆಪ್ಟೆಂಬರ್ 21ರಂದು ಆಸ್ತಾ ಕುಂಜ್ ಉದ್ಯಾನದಲ್ಲಿ ನಡೆದ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ದೆಹಲಿ ಅಭಿವೃದ್ಧಿ ಪ್ರಾಧಿಕಾರ (DDA) ನಡೆಸಿದ ಸುರಕ್ಷತಾ ಪರಿಶೀಲನೆಯಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಡಿಡಿಎ ನಿರ್ವಹಣೆಯ 736 ಉದ್ಯಾನಗಳ ಪೈಕಿ ಕೇವಲ 16 ಉದ್ಯಾನಗಳಲ್ಲಿ ಮಾತ್ರ ಸಿಸಿಟಿವಿ ಕ್ಯಾಮೆರಾಗಳಿವೆ! 190 ಉದ್ಯಾನಗಳನ್ನು ಅತಿ ಹೆಚ್ಚು ಅಪಾಯಕಾರಿ ವಲಯಗಳೆಂದು ಗುರುತಿಸಲಾಗಿದ್ದು, 520 ಉದ್ಯಾನಗಳಿಗೆ ಹೆಚ್ಚುವರಿ ವಿದ್ಯುತ್ ದೀಪಗಳು ಹಾಗೂ 323 ಉದ್ಯಾನಗಳಿಗೆ ಹೆಚ್ಚಿನ ಸಿಸಿಟಿವಿಗಳ ಅಗತ್ಯವಿದೆ ಎಂಬುದು ವರದಿಯಿಂದ ತಿಳಿದುಬಂದಿದೆ.
ಉದ್ಯಾನಗಳಲ್ಲಿನ ಕಾಂಪೌಂಡ್ ಭದ್ರತೆ, ಗೇಟ್‌ಗಳು, ಶೌಚಾಲಯಗಳು ಮತ್ತು ಪಾಳುಬಿದ್ದ ಕಟ್ಟಡಗಳು ಕೂಡ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಆಸ್ತಾ ಕುಂಜ್ ಉದ್ಯಾನವನದಲ್ಲಿಯೇ ಸಿಸಿಟಿವಿ ಅಳವಡಿಸಲು 30ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಲಾಗಿದೆ. ಈ ಉದ್ಯಾನವು ನಿರ್ಜನ ಪ್ರದೇಶ ಹಾಗೂ ದಟ್ಟ ಮರಗಳಿಂದ ಆವೃತವಾಗಿರುವುದರಿಂದ ಕಣ್ಗಾವಲು ಇಡುವುದು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯರ ಮೇಲೆ ನಿರ್ಬಂಧ ಸರಿಯಲ್ಲ: ಸಿಎಂ
ಕತ್ತಲಾದ ಮೇಲೆ ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳ ಮುಕ್ತ ಪ್ರವೇಶದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಪ್ರತಿಕ್ರಿಯಿಸಿದ್ದಾರೆ. “ಮಹಿಳಾ ಸುರಕ್ಷತೆಯನ್ನು ಖಚಿತಪಡಿಸುವುದು ಎಂದರೆ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲೆ ನಿರ್ಬಂಧಗಳನ್ನು ವಿಧಿಸುವುದಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಪಾಯಕಾರಿ ಸ್ಥಳಗಳಲ್ಲಿ ಉತ್ತಮ ದೀಪದ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾಗಳು ಮತ್ತು ಹೆಚ್ಚುವರಿ ಭದ್ರತಾ ಸಿಬ್ಬಂದಿಯ ನಿಯೋಜನೆಗೆ ಅವರು ಒತ್ತಾಯಿಸಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದ್ದಾರೆ.





