"ಚರಂಡಿ ನೀರಿನ್ಯಾಗ ದಿನ ಹೋಗಾಕ ಹತ್ತಿವಿ…" ಇದು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಪ್ರಯಾಣಿಕರ ಅಳಲು. ಪ್ಲಾಟ್‌ಫಾರ್ಮ್-1ರಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್-1ರಲ್ಲಿ ಡ್ರೈನೇಜ್ ನೀರು ಹರಿದು ಹೋಗುತ್ತಿರುವ ಪರಿಣಾಮ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವಿಶೇಷವಾಗಿ ಬಾಗಲಕೋಟೆ, ಹುನಗುಂದ, ಹೊಸಪೇಟೆ ಸೇರಿದಂತೆ ವಿವಿಧ ಮಾರ್ಗಗಳ ಬಸ್‌ಗಳಿಗಾಗಿ ಪ್ರಯಾಣಿಕರು ಕಾಯುವ ಸ್ಥಳದಲ್ಲೇ ಚರಂಡಿ ನೀರು ಹರಿಯುತ್ತಿರುವುದು ಬಸ್ ನಿಲ್ದಾಣದ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪ್ಲಾಟ್‌ಫಾರ್ಮ್‌ನಲ್ಲಿ ಪಾದಚಾರಿಗಳು ಓಡಾಡುವ ಜಾಗದಲ್ಲೇ ಚರಂಡಿ ನೀರು ಹರಿಯುತ್ತಿರುವುದರಿಂದ ಪ್ರಯಾಣಿಕರು ಅನಿವಾರ್ಯವಾಗಿ ಅದೇ ನೀರನ್ನು ದಾಟಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ, ಸಂಜೆ ಸೇರಿದಂತೆ ಬಸ್‌ಗಳ ಸಂಚಾರ ಹೆಚ್ಚಾಗುವ ಸಮಯದಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ.
ಚರಂಡಿ ನೀರಿನ ದುರ್ವಾಸನೆಯಿಂದ, ಸೊಳ್ಳೆ ಮತ್ತಿತರೆ ಕೀಟಗಳ ಕಾಟವೂ ಹೆಚ್ಚಾಗಿದೆ. ಪ್ರತಿನಿತ್ಯ ಬಸ್ ನಿಲ್ದಾಣಕ್ಕೆ ಬರುವ ವೃದ್ಧರು, ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಪ್ರಯಾಣಿಕರು ಅನೈರ್ಮಲ್ಯದ ವಾತಾವರಣದಲ್ಲಿ ಬಸ್‌ಗಾಗಿ ಕಾಯಬೇಕಾಗಿದೆ.

ಚರಂಡಿ ನೀರು ಕಾಲಿಗೆ ತಾಗುವುದು, ಬಟ್ಟೆಗಳಿಗೆ ಸಿಡಿಯುವುದು ಮಾತ್ರವಲ್ಲದೆ, ನಿಲ್ದಾಣದ ಸುತ್ತಮುತ್ತಲಿನ ಪರಿಸರದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದ್ದು, ಪ್ರಯಾಣಿಕರ ಆರೋಗ್ಯದ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.
‘ಈ ಕೆಲಸ ನಮ್ಮದಲ್ಲ’ ಎನ್ನುವ ಅಧಿಕಾರಿಗಳು!
ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಾಗ, “ಈ ಕೆಲಸ ನಮ್ಮದಲ್ಲ. ಎಂಜಿನಿಯರ್‌ಗಳು ಮಾಡುತ್ತಾರೆ” ಎಂಬ ರೀತಿಯ ಉತ್ತರ ನೀಡುತ್ತಾರೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ಸಮಸ್ಯೆ ಹೇಳಿಕೊಂಡಾಗ ಯಾವ ವಿಭಾಗದ ಕೆಲಸ ಎಂಬುದನ್ನು ಪರಸ್ಪರ ಹೇಳಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕಿಂತ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ಸಂಬಂಧಪಟ್ಟ ಇಲಾಖೆಗಳ ಕರ್ತವ್ಯ ಎಂಬುದು ಪ್ರಯಾಣಿಕರ ಅಭಿಪ್ರಾಯ.
ಸಾರ್ವಜನಿಕರ ಓಡಾಟಕ್ಕೆಂದೇ ನಿರ್ಮಿಸಿರುವ ಬಸ್ ನಿಲ್ದಾಣದಲ್ಲಿ ಪಾದಚಾರಿ ಮಾರ್ಗವೇ ಚರಂಡಿ ನೀರಿನಿಂದ ಮುಳುಗುವಂತಾದರೆ, ನಿಲ್ದಾಣದ ಸ್ವಚ್ಛತೆ ಮತ್ತು ನಿರ್ವಹಣೆ ಯಾರ ಹೊಣೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
‘ಚರಂಡಿ ನೀರಿನ್ಯಾಗ ದಿನ ಹೋಗಾಕ ಹತ್ತಿವಿ…’
ಈ ಸಮಸ್ಯೆಯ ಕುರಿತು ಈದಿನ.ಕಾಮ್ ಜೊತೆಗೆ ಮಾತನಾಡಿದ ಪ್ರಯಾಣಿಕ ಅಲ್ಲಾ ಭಕ್ಷಿ ಕಿತ್ತೂರು “ನಾವು ಪ್ರತಿನಿತ್ಯ ಸರ್ಕಾರಿ ಬಸ್ಸಿನಲ್ಲೇ ಪ್ರಯಾಣ ಮಾಡಬೇಕು. ಆದರೆ ಬಸ್ ಹತ್ತಲು ಚರಂಡಿ ನೀರಿನಲ್ಲೇ ನಡೆದುಕೊಂಡು ಹೋಗಬೇಕಾಗಿದೆ. ಸಮಸ್ಯೆ ಬಗ್ಗೆ ಹೇಳಿದರೂ ಯಾರೂ ಸ್ಪಂದಿಸುತ್ತಿಲ್ಲ.” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುವ ಸಾರಿಗೆ ವ್ಯವಸ್ಥೆಯಲ್ಲಿ ಕನಿಷ್ಠ ಸ್ವಚ್ಛ ಮತ್ತು ಸುರಕ್ಷಿತ ವಾತಾವರಣವನ್ನು ಕಲ್ಪಿಸುವುದು ಅಗತ್ಯ. ಆದರೆ ವಿಜಯಪುರದಂತಹ ಪ್ರಮುಖ ಜಿಲ್ಲಾ ಕೇಂದ್ರದ ಬಸ್ ನಿಲ್ದಾಣದಲ್ಲೇ ಇಂತಹ ಅವ್ಯವಸ್ಥೆ ಕಂಡುಬರುತ್ತಿರುವುದು ಅಧಿಕಾರಿಗಳ ನಿರ್ವಹಣಾ ವೈಫಲ್ಯಕ್ಕೆ ಕನ್ನಡಿ ಹಿಡಿದಂತಾಗಿದೆ.
ಈದಿನ.ಕಾಮ್‌ಗೆ ಪ್ರತಿಕ್ರಿಯಿಸಿರುವ ಕೆಎಸ್‌ಆರ್‌ಟಿಸಿ ಅಧಿಕಾರಿ ಡೊಬಳೆ, “ಬಸ್ ನಿಲ್ದಾಣದ ಸಮೀಪದಲ್ಲಿ ಹಲವು ಕಾಮಗಾರಿಗಳು ನಡೆದಿದ್ದು, ಇದೀಗ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಕಾಮಗಾರಿಗಳಿಂದಾಗಿ ಸಾರ್ವಜನಿಕರಿಗೆ ಉಂಟಾಗಿರುವ ಸಮಸ್ಯೆಗಳನ್ನು ಗಮನಿಸಲಾಗಿದ್ದು, ಆದಷ್ಟು ಬೇಗ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಲಾಗುವುದು” ಎಂದು ತಿಳಿಸಿದ್ದಾರೆ.
ತಕ್ಷಣ ಸ್ವಚ್ಛಗೊಳಿಸಿ, ಶಾಶ್ವತ ಪರಿಹಾರ ಕಲ್ಪಿಸಲಿ:
ಚರಂಡಿ ನೀರು ಹರಿಯುತ್ತಿರುವ ಮೂಲವನ್ನು ಪತ್ತೆಹಚ್ಚಿ, ಡ್ರೈನೇಜ್ ವ್ಯವಸ್ಥೆಯನ್ನು ಸರಿಪಡಿಸುವ ಜೊತೆಗೆ ನೀರು ಮರುಕಳಿಸದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು. ತಾತ್ಕಾಲಿಕವಾಗಿ ನೀರು ತೆರವುಗೊಳಿಸುವುದಷ್ಟೇ ಅಲ್ಲದೆ, ಪ್ಲಾಟ್‌ಫಾರ್ಮ್-1ರ ಒಳಚರಂಡಿ ವ್ಯವಸ್ಥೆಯನ್ನು ಪರಿಶೀಲಿಸಿ ಅಗತ್ಯ ಕಾಮಗಾರಿ ಕೈಗೊಳ್ಳಬೇಕು.
ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಬಳಸುವ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಇಂತಹ ಮೂಲಭೂತ ಸಮಸ್ಯೆ ಮುಂದುವರಿದರೆ ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆಯಿದೆ.
ಹೀಗಾಗಿ ಸಂಬಂಧಪಟ್ಟ ಸಾರಿಗೆ ಹಾಗೂ ಇಂಜಿನಿಯರಿಂಗ್ ಅಧಿಕಾರಿಗಳು ಪರಸ್ಪರ ಜವಾಬ್ದಾರಿ ವರ್ಗಾಯಿಸುವುದನ್ನು ಬಿಟ್ಟು, ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಸಾರಿಗೆ ವ್ಯವಸ್ಥೆಯಲ್ಲಿ ಕನಿಷ್ಠ ಸ್ವಚ್ಛ ಮತ್ತು ಸುರಕ್ಷಿತ ವಾತಾವರಣ ಕಲ್ಪಿಸುವುದು ಆಡಳಿತ ಮಂಡಳಿಯ ಪ್ರಾಥಮಿಕ ಕರ್ತವ್ಯ. ತಾತ್ಕಾಲಿಕವಾಗಿ ನೀರು ತೆರವುಗೊಳಿಸುವುದಷ್ಟೇ ಅಲ್ಲದೆ, ಡ್ರೈನೇಜ್ ವ್ಯವಸ್ಥೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಅಧಿಕಾರಿಗಳ ಆಶ್ವಾಸನೆ ಮಾತಿಗೆ ಸೀಮಿತವಾಗದೆ, ತಕ್ಷಣವೇ ಕಾರ್ಯರೂಪಕ್ಕೆ ಬರಲಿ ಎಂಬುದು ಪ್ರಯಾಣಿಕರ ಆಶಯವಾಗಿದೆ.




