ಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾಗಬೇಕಿದ್ದವರು ಸೋಲಿನ ಗಾಯ ಕೆರೆಯುತ್ತಾ ಕೂತಾಗ..

Date:

ರಾಜ್ಯದಲ್ಲಿ ಕಾಂಗ್ರೆಸ್ ಅಲೆಯ ನಡುವೆ ಕೂಡ ಶಿವಶಂಕರ ರೆಡ್ಡಿ ಮತ್ತು ರಮೇಶ್‌ಕುಮಾರ್ ಸೋತಿದ್ದರಲ್ಲಿ ಅವರ ವೈಯಕ್ತಿಕ ತಪ್ಪುಗಳು, ಕ್ಷೇತ್ರದ ಅಭಿವೃದ್ಧಿ ಕುರಿತ ನಿರ್ಲಕ್ಷ್ಯ ಪ್ರಧಾನ ಪಾತ್ರ ವಹಿಸಿವೆ. ಇವರಿಬ್ಬರ ಸೋಲು ಈಗ ಗೆದ್ದು ಮಂತ್ರಿ ಆಗಲಿರುವವರಿಗೆ ಹಾಗೂ ಎಲ್ಲ ಪಕ್ಷಗಳ ಶಾಸಕರಿಗೆ ಒಂದು ಪಾಠವಾಗಬೇಕಿದೆ.

ಸಿದ್ದರಾಮಯ್ಯ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಒಟ್ಟು 34 ಮಂದಿ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಹಜವಾಗಿಯೇ ಸಚಿವ ಪದವಿ ಸಿಕ್ಕವರು ಖುಷಿಯಾಗಿದ್ದರೆ, ಸಿಗದಿದ್ದವರು ಅಸಮಾಧಾನಗೊಂಡಿದ್ದಾರೆ.

ಇವರಿಗಿಂತಲೂ ಅಸಹಾಯಕತೆ, ಪಶ್ಚಾತ್ತಾಪದಿಂದ ಪರಿತಾಪ ಪಡುತ್ತಿರುವವರ ಮತ್ತೊಂದು ಗುಂಪಿದೆ. ಗೆದ್ದಿದ್ದರೆ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಗಳಾಗುವ ಅವಕಾಶವಿದ್ದು, ಚುನಾವಣೆಯಲ್ಲಿ ಸೋತವರ ಗುಂಪು ಅದು. ಅದರಲ್ಲಿ ಪ್ರಮಖರಾದವರು ಗೌರಿಬಿನೂರಿನ ಎನ್ ಎಚ್ ಶಿವಶಂಕರ ರೆಡ್ಡಿ ಮತ್ತು ಶ್ರೀನಿವಾಸಪುರದ ರಮೇಶ್ ಕುಮಾರ್.      

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಎನ್ ಎಚ್ ಶಿವಶಂಕರ ರೆಡ್ಡಿ ಗೌರಿಬಿದನೂರಿನ ಶಾಸಕರಾಗಿ ಐದು ಬಾರಿ ಆಯ್ಕೆಯಾಗಿದ್ದವರು. ಸತತ 24 ವರ್ಷಗಳ ಕಾಲ ಕ್ಷೇತ್ರದ ಶಾಸಕರಾಗಿದ್ದವರು. ಇಷ್ಟು ಸುದೀರ್ಘ ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದರು ಎಂದರೆ ಅವರು ಜನಾನುರಾಗಿಯೇ ಇರಬಹುದು ಎಂದು ಕೆಲವರಿಗೆ ಅನ್ನಿಸಬಹುದು. ಆದರೆ, ವಾಸ್ತವ ಹಾಗೇನೂ ಇರಲಿಲ್ಲ. ಕೆಲವೊಮ್ಮೆ ಕಾಂಗ್ರೆಸ್‌ನ ಮತಗಳಿಂದ, ಕೆಲವೊಮ್ಮೆ ವಿರೋಧಿ ಅಭ್ಯರ್ಥಿಗಳ ನಡುವಿನ ಮತವಿಭಜನೆಯಿಂದ, ಕೆಲವೊಮ್ಮೆ ಸಮರ್ಥ ವಿರೋಧಿಗಳಿಲ್ಲದೇ.. ಹೀಗೆ ಒಂದೊಂದು ಬಾರಿ ಒಂದೊಂದು ಕಾರಣಕ್ಕೆ ಗೆದ್ದವರು ಅವರು. ಸತತ ಐದು ಬಾರಿ ಜಯಭೇರಿ ಬಾರಿಸಿದ ಅವರು ಗೆದ್ದು ಕ್ಷೇತ್ರಕ್ಕೆ ಏನು ಮಾಡಿದರು ಎಂದು ನೋಡಿದರೆ, ನಿರಾಶೆಯಾಗುತ್ತದೆ.

ಈ ಸುದ್ದಿ ಓದಿದ್ದೀರಾ: ಆಡಳಿತಕ್ಕೆ ಹೊಸ ರೂಪ; ಸಚಿವ ಸಂಪುಟದ ಎಲ್ಲ 34 ಸ್ಥಾನ ಭರ್ತಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರಿನ ಉತ್ತರಕ್ಕೆ ಬೆಂಗಳೂರಿಗೆ 70 ಕಿಮೀ ದೂರವಿರುವ ಗೌರಿಬಿದನೂರು ಕ್ಷೇತ್ರದ ಸ್ಥಿತಿಗತಿ ನೋಡಿದರೆ, ಶಿವಶಂಕರ ರೆಡ್ಡಿಯ ವೈಫಲ್ಯ ಏನು ಅನ್ನುವುದು ಗೊತ್ತಾಗುತ್ತದೆ. ಕ್ಷೇತ್ರದಲ್ಲಿ ಯಾವುದೇ ಉದ್ಯೋಗ ಸೃಷ್ಟಿಯ ಕೆಲಸವೇ ನಡೆದಿಲ್ಲ. ಕಾರ್ಖಾನೆಗಳ ಸ್ಥಾಪನೆ ಆಗಿಲ್ಲ. ಆಂಧ್ರದ ಗಡಿಗೆ ಹೊಂದಿಕೊಂಡಂತೆ ಕೆಐಎಡಿಬಿಯಿಂದ ಕೈಗಾರಿಕಾ ಪ್ರದೇಶ ಸ್ಥಾಪನೆಯಾಗಿದ್ದರೂ ದೂರದ ಕಾರಣಕ್ಕೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಅಲ್ಲಿ ನಿರೀಕ್ಷಿತ ಬೆಳವಣಿಗೆ ಆಗಿಲ್ಲ. ಹೀಗಾಗಿ ಇವತ್ತಿಗೂ ಕ್ಷೇತ್ರದ ಜನ ಹತ್ತಿರದ ದೊಡ್ಡಬಳ್ಳಾಪುರ, ಬೆಂಗಳೂರಿಗೆ ಬಸ್ಸು, ಟ್ರೈನುಗಳಲ್ಲಿ ಪ್ರತಿನಿತ್ಯ ಓಡಾಡಿಕೊಂಡು ಸಣ್ಣಪುಟ್ಟ ಕೆಲಸ ಮಾಡಿ ಬದುಕುತ್ತಿದ್ದಾರೆ. ಕ್ಷೇತ್ರದ ಹಳ್ಳಿ ಹಳ್ಳಿಗಳ ಗಂಡಸರು ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಾಗಿದ್ದಾರೆ.

ಉದ್ಯೋಗ ಇರಲಿ, ಕ್ಷೇತ್ರದ ಜನರಿಗೆ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸುವುದರಲ್ಲಿಯೂ ಸತತ 24 ವರ್ಷದ ಶಾಸಕ ಶಿವಶಂಕರ ರೆಡ್ಡಿ ಸೋತಿದ್ದಾರೆ. ಅನೇಕ ಹಳ್ಳಿಗಳಿಗೆ ಸರಿಯಾದ ರಸ್ತೆಗಳಿಲ್ಲ. ನಿರಂತರ ಮರಳು ಗಣಿಗಾರಿಕೆಯಿಂದ ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು, ಕುಡಿಯುವ ನೀರಿಗೂ ಜನ ಪರದಾಡುತ್ತಿದ್ದಾರೆ. ಇನ್ನು ಹಿಂದೆ ಜಾಲಪ್ಪ ಸಂಸದರಾಗಿದ್ದಾಗ ಆಗಿದ್ದ ಚೆಕ್ ಡ್ಯಾಮ್‌ಗಳೆಷ್ಟೋ ಅಷ್ಟೇ; ನೀರಾವರಿಗೆ ಶಾಸಕರು ಯಾವ ಪ್ರಯತ್ನವನ್ನೂ ಮಾಡಿದವರಲ್ಲ. ಗೌರಿಬಿದನೂರು ಪಟ್ಟಣದ ರಸ್ತೆಗಳು ಮತ್ತು ಅಲ್ಲಿನ ಕುಡಿಯುವ ನೀರಿನ ಸ್ಥಿತಿ ನೋಡಿದರೆ, ಶಿವಶಂಕರ ರೆಡ್ಡಿಯವರ ನಿರ್ಲಕ್ಷ್ಯ ಯಾವ ಪರಿಯಲ್ಲಿತ್ತು ಎನ್ನುವುದು ಅರ್ಥವಾಗುತ್ತದೆ.

ಗೌರಿಬಿದನೂರು ರಸ್ತೆ

ಗೌರಿಬಿದನೂರಿನ ರಸ್ತೆಗಳ ದುಃಸ್ಥಿತಿ

ಇಷ್ಟಾದರೂ ಶಿವಶಂಕರ ರೆಡ್ಡಿ ತೀರಾ ಕೆಟ್ಟವರೇನಲ್ಲ, ಒಳ್ಳೆಯವರು; ಮೆಲು ಮಾತಿನವರು ಎಂದು ಅವರು ಅನುಯಾಯಿಗಳು ಸಮರ್ಥಿಸಿಕೊಳ್ಳುತ್ತಾರೆ. ಆತ ವೈಯಕ್ತಿಕವಾಗಿ ಎಂಥವರು ಎನ್ನುವುದಕ್ಕಿಂತಲೂ ಆತ ಎಂಥ ಕೆಲಸಗಾರ, ತನ್ನ ಕ್ಷೇತ್ರವನ್ನು ಹೇಗಿಟ್ಟುಕೊಂಡಿದ್ದಾರೆ, ಜನರಿಗೆ ಹೇಗೆ ಮಿಡಿಯುತ್ತಾರೆ ಎನ್ನುವುದು ಮುಖ್ಯ. ಕ್ಷೇತ್ರದ ಅಭಿವೃದ್ಧಿಗಾಗಲಿ, ಜನರ ಒಳಿತಿಗಾಗಲಿ, ಮೂಲಸೌಕರ್ಯಗಳ ಅಭಿವೃದ್ಧಿಗಾಗಲಿ, ಶಿವಶಂಕರ ರೆಡ್ಡಿ ಎಂದೂ ಬಡಿದಾಡಿದವರಲ್ಲ; ಪ್ರಜ್ಞಾಪೂರ್ವಕವಾಗಿ ಯಾವ ವಿಶೇಷ ಪ್ರಯತ್ನವನ್ನೂ ಮಾಡಿದವರಲ್ಲ. ಯಾವುದಾದರೂ ಯೋಜನೆ ತನ್ನಿಂದ ತಾನೇ ಬಂದರೆ ಬರಬಹುದು, ಜನರಿಗೆ ಏನಾದರೂ ಒಳಿತಾದರೆ ಆಗಬಹುದು ಎನ್ನುವುದು ಅವರ ಧೋರಣೆಯಾಗಿತ್ತು. ಜೊತೆಗೆ ಭ್ರಷ್ಟಾಚಾರದಲ್ಲಿಯೂ ಅವರು ಹಿಂದೆ ಬಿದ್ದಿರಲಿಲ್ಲ. ಮೊನ್ನಿನ ಚುನಾವಣೆಗೆ ಒಂದು ತಿಂಗಳ ಮುಂಚೆಯೂ ಖಾಸಗಿ ಚಾನೆಲ್‌ವೊಂದರ ರಹಸ್ಯ ಕಾರ್ಯಾಚರಣೆಯಲ್ಲಿ ಶಿವಶಂಕರ ರೆಡ್ಡಿಯ ಲಂಚಾವತಾರ ಬಯಲಾಗಿತ್ತು. ಇದೆಲ್ಲಕ್ಕಿಂತಲೂ ಹೆಚ್ಚಾಗಿ ಸ್ವಜನಪಕ್ಷಪಾತ ಇವರ ಅತಿ ದೊಡ್ಡ ರೋಗವಾಗಿತ್ತು. ತನ್ನ ಹಿಂದಿರುವ, ಹತ್ತಿರದ ನೆಂಟರಾಗಿದ್ದ ಮೂರ್ನಾಲ್ಕು ಮಂದಿಗೆ ಬಿಟ್ಟರೆ ಯಾರಿಗೂ ಎಂದೂ ಮಿಡಿದವರೇ ಅಲ್ಲ ಅವರು.

ಈ ಸುದ್ದಿ ಓದಿದ್ದೀರಾ: ನೂತನ ಸಂಸತ್ ಭವನದ ಹೊರಗೆ ಪ್ರತಿಭಟನೆಗೆ ಯತ್ನ; ಕುಸ್ತಿಪಟುಗಳ ಮೇಲೆ ಪೊಲೀಸ್ ದೌರ್ಜನ್ಯದ ಆರೋಪ

ಶಿವಶಂಕರ ರೆಡ್ಡಿಯ ಇಚ್ಛಾಶಕ್ತಿಯ ಕೊರತೆ, ನಿಷ್ಕ್ರಿಯತೆ, ನಿರ್ಲಕ್ಷ್ಯದಿಂದ ಗೌರಿಬಿದನೂರು ಕ್ಷೇತ್ರದ ಜನತೆ ರೋಸಿಹೋಗಿದ್ದರು. ಹಿಂದೆ ಎರಡು ಮೂರು ಬಾರಿ ಸ್ವಲ್ಪದರಲ್ಲಿ ಗೆದ್ದು ಬಚಾವಾಗಿದ್ದ ಅವರನ್ನು ಸೋಲಿಸಲೇಬೇಕೆಂದು ಈ ಬಾರಿ ಮತದಾರರು ತೀರ್ಮಾನಿಸಿದ್ದರು. ಜನ ಅವರ ಶಾಸಕತ್ವದ ಬಗ್ಗೆ ಹತಾಶಾಗಿದ್ದರ ಫಲವಾಗಿ 37 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಶಿವಶಂಕರ ರೆಡ್ಡಿ ಸೋತರು.

ತನ್ನ ವಿರುದ್ಧ ಗೆದ್ದ ಪುಟ್ಟಸ್ವಾಮಿ ಗೌಡ ದುಡ್ಡಿನ ಕುಳವೆಂದು, ಮತದಾರರನ್ನು ಕೊಂಡುಕೊಂಡರೆಂದು ಶಿವಶಂಕರ ರೆಡ್ಡಿ ಸೋತ ಮೇಲೆ ಗೋಳಾಡುತ್ತಿದ್ದಾರೆ. 24 ವರ್ಷಗಳಿಂದ ಅನೇಕ ದುಡ್ಡಿನ ಕುಳಗಳು ಬಂದರೂ ಜನ ಯಾಕೆ ತನ್ನನ್ನು ಗೆಲ್ಲಿಸಿದರೆಂಬುದನ್ನು ಅವರು ಮರೆತಿದ್ದಾರೆ. ಅಷ್ಟೇ ಏಕೆ, ಪಕ್ಕದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಯ ಸುಧಾಕರ್ ಸಿಕ್ಕಾಪಟ್ಟೆ ದುಡ್ಡು ಚೆಲ್ಲಿದರೂ ಯಾಕೆ ಸೋತರು, ಹೆಚ್ಚು ಹಣ ವೆಚ್ಚ ಮಾಡದೇ ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ ಹೇಗೆ ಗೆದ್ದರು ಎನ್ನುವುದನ್ನಾದರೂ ಶಿವಶಂಕರ ರೆಡ್ಡಿ ಅರ್ಥ ಮಾಡಿಕೊಳ್ಳಬೇಕಾಗಿದೆ. ತಮ್ಮ ಲೋಪವನ್ನು ಅವರು ಒಪ್ಪಿಕೊಳ್ಳಬೇಕಾಗಿದೆ. ಕನಿಷ್ಠ ಪಕ್ಷ ಅವರು ವರ್ಷಕ್ಕೆ ಹತ್ತು ಹಳ್ಳಿಗಳ ಬಗ್ಗೆ ಗಮನ ಹರಿಸಿದ್ದರೂ 24 ವರ್ಷಗಳಲ್ಲಿ ಗೌರಿಬಿದನೂರು ನಂದನವನದಂತೆ ಇರಬೇಕಿತ್ತು.

ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅಲ್ಪಾವಧಿಗೆ ಕೃಷಿ ಸಚಿವರಾಗಿದ್ದ ಶಿವಶಂಕರ ರೆಡ್ಡಿ ಗೆದ್ದಿದ್ದರೆ ಈ ಬಾರಿಯೂ ಸಚಿವರಾಗುವುದು ನಿಶ್ಚಿತವಾಗಿತ್ತು. ಆದರೆ, ತಮ್ಮ ದಿವ್ಯ ನಿರ್ಲಕ್ಷ್ಯದಿಂದ ಜನರ ವಿಶ್ವಾಸ ಕಳೆದುಕೊಂಡು ಪರಾಜಿತರಾದ ಅವರು ಈಗ ಮನೆಯಲ್ಲಿ ಕೂತು ಸೋಲಿನ ಗಾಯ ಕೆರೆದುಕೊಳ್ಳುತ್ತಾ ತಮ್ಮದೇ ಸರ್ಕಾರವಿದ್ದರೂ ತಾವೇನೂ ಮಾಡಲಾಗುತ್ತಿಲ್ಲವಲ್ಲ ಎಂದು ಹಳಹಳಿಸುತ್ತಿದ್ದಾರೆ. ಈ ಮೂಲಕ ಅವರು ತಮ್ಮ ರಾಜಕೀಯ ಜೀವನದ ಗೋಲ್ಡನ್ ಚಾನ್ಸ್‌ ಕಳೆದುಕೊಂಡಿದ್ದಾರೆ. ಅವರಿಂದಾಗಿ ಗೌರಿಬಿದನೂರು ಕ್ಷೇತ್ರಕ್ಕೂ ಮಂತ್ರಿಗಿರಿ ಕೈತಪ್ಪಿದೆ.  

ಗೆದ್ದ ನಂತರ ಮತದಾರರ ಬಳಿಗೆ ಹೋಗುವುದು, ಅಧಿಕಾರ ಇದ್ದಾಗ ಜನರನ್ನು ಕನಿಷ್ಠ ಪ್ರೀತಿಯಿಂದ ಮಾತನಾಡಿಸುವುದು, ತಮ್ಮನ್ನು ಹುಡುಕಿಕೊಂಡು ಬಂದು ಕಷ್ಟ ನಷ್ಟ ಹೇಳಿಕೊಂಡವರಿಗೆ ಕಾನೂನು ರೀತ್ಯ ಸಹಾಯ ಮಾಡುವುದು, ಕ್ಷೇತ್ರದ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಮಾಡಿದ್ದರೆ ಅವರು ಗೆಲ್ಲುತ್ತಿದ್ದರು; ಗೆದ್ದು ಮಂತ್ರಿಯಾಗುತ್ತಿದ್ದರು. ಅದರಿಂದ ಕ್ಷೇತ್ರಕ್ಕೂ ಸಹಾಯವಾಗುತ್ತಿತ್ತು. ಹೀಗಾಗಿ ಶಿವಶಂಕರ ರೆಡ್ಡಿಯವರ ಸೋಲು ಪರೋಕ್ಷವಾಗಿ ಕ್ಷೇತ್ರಕ್ಕೂ ಆದ ನಷ್ಟವಾಗಿದೆ.

ಇದೇ ಸೀಮೆಯಲ್ಲಿ ಇದೇ ರೀತಿ ಸೋತು ಮನೆಯಲ್ಲಿ ಕೂತಿರುವವರು ರಮೇಶ್ ಕುಮಾರ್. ಇದುವರೆಗೆ ಆರು ಬಾರಿ ಶಾಸಕರಾಗಿದ್ದವರು ಅವರು. ಸ್ಪೀಕರ್ ಆಗಿ, ಆರೋಗ್ಯ ಸಚಿವರಾಗಿ ರಾಜ್ಯದಲ್ಲಿ ಸಾಕಷ್ಟು ಹೆಸರು ಮಾಡಿದವರು ರಮೇಶ್‌ ಕುಮಾರ್. ಅವರು ಕೂಡ ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಅಷ್ಟಾಗಿ ತಲೆಕೆಡಿಸಿಕೊಂಡವರಲ್ಲ ಎನ್ನುವ ಆರೋಪಗಳಿವೆ. ಮೂಲಸೌಕರ್ಯ ಒದಗಿಸಿಲ್ಲ ಎಂದು ಬೈರಪಲ್ಲಿ ಮತ್ತು ಕೊಳ್ಳೂರು ಗ್ರಾಮಗಳ ಮತದಾರರು ಈ ಬಾರಿ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಇಷ್ಟಾದರೂ ಗೌರಿಬಿದನೂರಿನ ಶಿವಶಂಕರ ರೆಡ್ಡಿಗೆ ಹೋಲಿಸಿದರೆ, ರಮೇಶ್‌ಕುಮಾರ್ ಶ್ರೀನಿವಾಸಪುರದಲ್ಲಿ ಕ್ಷೇತ್ರದಲ್ಲಿ ಒಂದಿಷ್ಟು ಕೆಲಸ ಮಾಡಿದ್ದಾರೆ.

ಚುನಾವಣೆ ಬಹಿಷ್ಕಾರ

ಚುನಾವಣೆ ಬಹಿಷ್ಕರಿಸಿದ್ದ ಶ್ರೀನಿವಾಸಪುರದ ಮತದಾರರು

74 ವರ್ಷದ ರಮೇಶ್ ಕುಮಾರ್ ಮತ್ತು 75 ವರ್ಷದ ಜಿ ಕೆ ವೆಂಕಟಶಿವಾರೆಡ್ಡಿ ಇಬ್ಬರಿಗೂ ಇದು ಕೊನೆಯ ಚುನಾವಣೆಯಾಗಿತ್ತು. ಒಂದೊಂದು ಬಾರಿ ಒಬ್ಬೊಬ್ಬರು ಗೆಲ್ಲುವ ಸಂಪ್ರದಾಯವನ್ನು ಮುರಿದು 2018ರಲ್ಲಿಯೂ ಸತತ ಎರಡನೇ ಬಾರಿಗೆ ರಮೇಶ್‌ ಕುಮಾರ್ ಅವರೇ ಗೆದ್ದಿದ್ದರು. ಹೀಗಾಗಿ ವೆಂಕಟಶಿವಾರೆಡ್ಡಿಗೆ ಸೋಲಿನ ಅನುಕಂಪ ಇತ್ತು. ಅದಕ್ಕಿಂತಲೂ ಹೆಚ್ಚಾಗಿ ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡರಂಥ ಕೆಲವರು ಸ್ವಪಕ್ಷೀಯರು ಕೊಟ್ಟ ಒಳೇಟು ರಮೇಶ್‌ಕುಮಾರ್‌ಗೆ ದುಬಾರಿಯಾಯಿತು.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಮೇಶ್‌ಕುಮಾರ್, ಸ್ವಂತ ಪಕ್ಷದ ಕೆ ಎಚ್ ಮುನಿಯಪ್ಪ ಅವರನ್ನು ಸೋಲಿಸಲು ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಜೊತೆ ಕೈ ಜೋಡಿಸಿದ್ದರು ಎನ್ನುವುದು ಕೂಡ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಮುಳುವಾಗಿದೆ ಎನ್ನಲಾಗುತ್ತಿದೆ. ತಮ್ಮ ಡೋಂಟ್ ಕೇರ್ ಪ್ರವೃತ್ತಿಯಿಂದಲೂ ಅವರು ಕೆಲವರ ವಿರೋಧ ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಇದೆಲ್ಲದರ ಪರಿಣಾಮವಾಗಿ ಸಿದ್ದರಾಮಯ್ಯ ಅವರ ಸಮವಯಸ್ಕರಾದ, ರಾಜಕಾರಣದಲ್ಲಿ ಒಂದಿಷ್ಟು ಹೆಸರೂ ಕೂಡ ಮಾಡಿದ್ದ ರಮೇಶ್ ಕುಮಾರ್ ಜೆಡಿಎಸ್‌ನ ವೆಂಕಟಶಿವಾರೆಡ್ಡಿ ವಿರುದ್ಧ ಸೋತಿದ್ದಾರೆ.

ಇದನ್ನು ಮೊದಲೇ ಅರಿತಿದ್ದರಿಂದಲೇ ರಮೇಶ್‌ಕುಮಾರ್ ಸಿದ್ದರಾಮಯ್ಯ ಅವರನ್ನು ಕೋಲಾರದಿಂದ ಸ್ಪರ್ಧಿಸಲು ಒತ್ತಾಯಿಸಿದ್ದರು. ಅವರು ಕೋಲಾರಕ್ಕೆ ಬಂದರೆ, ಜಿಲ್ಲೆಯ ಇತರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲು ಸಹಕಾರಿಯಾಗುತ್ತದೆ ಎನ್ನುವುದು ಅವರ ಅನಿಸಿಕೆಯಾಗಿತ್ತು. ಕೊನೆಗೆ ಸಿದ್ದರಾಮಯ್ಯ ವರುಣಾದಿಂದ ಮಾತ್ರ ಸ್ಪರ್ಧಿಸುತ್ತಾರೆ ಎಂದು ಘೋಷಣೆಯಾದಾಗ ರಮೇಶ್‌ಕುಮಾರ್ ಮುನಿಸಿಕೊಂಡು ತಾನೂ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹಟ ಹಿಡಿದಿದ್ದರು. ಕೊನೆಗೆ ಕರ್ನಾಟಕ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಅವರೇ ರಮೇಶ್‌ಕುಮಾರ್ ಅವರನ್ನುಸಮಾಧಾನ ಪಡಿಸಿ ಚುನಾವಣೆಗೆ ನಿಲ್ಲುವಂತೆ ಮನವೊಲಿಸಿದ್ದರು.       

ಈ ಸುದ್ದಿ ಓದಿದ್ದೀರಾ: ಕಲುಷಿತ ನೀರು ಸೇವನೆ ಘಟನೆ; ತುರ್ತು ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

ವಿಚಿತ್ರ ಅಂದರೆ, ಶಿವಶಂಕರ ರೆಡ್ಡಿ ನೆರೆಯ ಚಿಕ್ಕಬಳ್ಳಾಪುರದ  ಕೆ ಸುಧಾಕರ್ ಅವರನ್ನು ಸೋಲಿಸಲು ಕೆಲಸ ಮಾಡಿದ್ದರು. ರಮೇಶ್‌ಕುಮಾರ್ ಕೂಡ ಕೆ ಸುಧಾಕರ್ ಅವರನ್ನು ಸೋಲಿಸಲು ಶ್ರಮಿಸಿದ್ದರು. ಕೆ ಸುಧಾಕರ್ ತಾನೇನು ಕಡಿಮೆ ಇಲ್ಲ ಎನ್ನುವಂತೆ ಶಿವಶಂಕರ ರೆಡ್ಡಿ ಮತ್ತು ರಮೇಶ್‌ಕುಮಾರ್ ಸೋಲಿಗೆ ತಂತ್ರ ಹೆಣೆದಿದ್ದರು. ಹೀಗೆ ಪರಸ್ಪರ ಒಬ್ಬರನ್ನೊಬ್ಬರು ಸೋಲಿಸಬೇಕೆಂದು ಪ್ರಯತ್ನಿಸುತ್ತಿದ್ದ ಇವರು ಮೂವರನ್ನೂ ಮತದಾರರು ಸೋಲಿಸಿ ಮನೆಯಲ್ಲಿ ಕೂರಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಲೆಯ ನಡುವೆ ಕೂಡ ಶಿವಶಂಕರ ರೆಡ್ಡಿ ಮತ್ತು ರಮೇಶ್‌ಕುಮಾರ್ ಸೋತಿದ್ದರಲ್ಲಿ ಅವರ ವೈಯಕ್ತಿಕ ತಪ್ಪುಗಳು, ಕ್ಷೇತ್ರದ ಅಭಿವೃದ್ಧಿ ಕುರಿತ ನಿರ್ಲಕ್ಷ್ಯ ಪ್ರಧಾನ ಪಾತ್ರ ವಹಿಸಿವೆ ಎನ್ನುವುದು ನಿಸ್ಸಂಶಯ. ಇವರಿಬ್ಬರ ಸೋಲು ಈಗ ಗೆದ್ದು ಮಂತ್ರಿಗಳಾಗಿರುವವರಿಗೆ ಹಾಗೂ ಎಲ್ಲ ಪಕ್ಷಗಳ ಶಾಸಕರಿಗೆ ಒಂದು ಪಾಠವಾಗಬೇಕಿದೆ.

ಅಧಿಕಾರ ಇದ್ದಾಗ ಜನರ ಬಳಿ ಹೋಗಬೇಕು, ಅವರ ಸಮಸ್ಯೆ ಕೇಳಿ, ಆದಷ್ಟೂ ಅವರಿಗೆ ಸ್ಪಂದಿಸಬೇಕು. ಅಧಿಕಾರ ಎನ್ನುವುದು ಜನ ತಮಗೆ ಕೊಟ್ಟಿರುವ ಜವಾಬ್ದಾರಿ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಜನ ಹಣ ಕೊಟ್ಟರೆ ಓಟು ಹಾಕುತ್ತಾರೆ ಎನ್ನುವ ಭಾವನೆ ಬಿಟ್ಟು, ಜನರ ಕೆಲಸ ಮಾಡಿಕೊಡದಿದ್ದರೆ ನಾಳೆ ಅವರಿಗೂ ಇದೇ ಗತಿ. ಆಗ ಕೈ ಕೈ ಹಿಸುಕಿಕೊಂಡು ಪಶ್ಚಾತ್ತಾಪ ಪಡುವ ಬದಲು ಎಲ್ಲ ಶಾಸಕರೂ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ.         

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. very nice ,learning educative analysis ,
    a driving lesson for all.in all elected power corridors

    about 40 percent may vote on caste calculation about forty MAY vote on money and caste
    but balance vote on development expectation, candidate history of performance, temperament nature,
    resulting in future expectation ,and this 20 percent decide election ,purely my personal view

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಬಿಜೆಪಿ ಗೆಲುವಿಗೆ 13 ರಾಜ್ಯಗಳ ಸವಾಲು! ಆಕ್ಸಿಸ್ ಎಂಡಿ ಗುಪ್ತಾ ಹೇಳುವುದೇನು? 

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂಬ...

ಲೋಕಸಭಾ ಚುನಾವಣೆ | ಬೆಂಗಳೂರಲ್ಲಿ ಏ.24 ರಿಂದ 26 ರವರೆಗೆ ಸೆಕ್ಷನ್ 144 ಜಾರಿ

ಲೋಕಸಭಾ ಚುನಾವಣೆ ಹಿನ್ನೆಲೆ, ಏಪ್ರಿಲ್ 24ರ ಸಂಜೆ 6ರಿಂದ ಏಪ್ರಿಲ್ 26ರವರ...

ರಾಹುಲ್ V/s ಪಿಣರಾಯಿ; ಕೇರಳದಲ್ಲಿ ಲೋಕಸಭಾ ಚುನಾವಣಾ ಅಬ್ಬರ

ಕೇರಳದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಮತದಾನಕ್ಕೆ ಒಂದು ವಾರವಷ್ಟೇ ಬಾಕಿ...

ಕಲಬುರಗಿಯಲ್ಲಿ ಬಿಜೆಪಿಗೆ ಹಿನ್ನಡೆ; ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್‌ ಸೇರ್ಪಡೆ

ಲೋಕಸಭೆ ಚುನಾವಣೆಯ ವೇಳೆ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಮಾಜಿ...