ವಿಪಕ್ಷಗಳ ಪ್ರಮುಖ ಬೇಡಿಯಾಗಿದ್ದ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ತಿಳಿಸಿದ್ದಾರೆ.
ಮಸೂದೆಯ ಹೆಚ್ಚಿನ ವಿವರಗಳು ಇನ್ನೂ ಸಾರ್ವಜನಿಕವಾಗಿಲ್ಲವಾದರೂ, ಲೋಕಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಒದಗಿಸುವ ಉದ್ದೇಶವನ್ನು ಮಸೂದೆ ಹೊಂದಿದೆ.

ಹೊಸ ಸಂಸತ್ ಕಟ್ಟಡಕ್ಕೆ ಮಂಗಳವಾರ ಅಧಿವೇಶನ ವರ್ಗಾವಣೆಯಾಗುವ ಮೊದಲೇ ಈ ನಿರ್ಧಾರವನ್ನು ಕೇಂದ್ರ ಸರ್ಕಾರವು ಕೈಗೊಂಡಿದೆ.
ಹೊಸ ಸಂಸತ್ತಿನ ಕಟ್ಟಡದ ಮೊದಲ ಅಧಿವೇಶನದಲ್ಲಿ ಇದನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ.
ಕೇಂದ್ರದ ಈ ನಿಲುವನ್ನು ಸ್ವಾಗತಿಸಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, “ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ಜಾರಿಗಾಗಿ ಬಹಳ ದಿನಗಳಿಂದ ಒತ್ತಾಯಿಸುತ್ತಾ ಬಂದಿದೆ. ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಮತ್ತು ಮಸೂದೆಯ ವಿವರಗಳನ್ನು ಎದುರು ನೋಡುತ್ತೇವೆ. ತೆರೆಮರೆಯ ರಾಜಕಾರಣದ ಬದಲು, ವಿಶೇಷ ಅಧಿವೇಶನಕ್ಕೂ ಮುನ್ನಾ ನಡೆದ ಸರ್ವಪಕ್ಷ ಸಭೆಯಲ್ಲಿ ಈ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಒಮ್ಮತ ಮೂಡಿಸಬಹುದಿತ್ತು” ಎಂದು ತಿಳಿಸಿದ್ದಾರೆ.