ಭಾರತೀಯ ಸಂಸದೀಯ ಇತಿಹಾಸದಲ್ಲಿ ‘ವಿಶೇಷ ಅಧಿವೇಶನ’ಗಳು ಯಾವಾಗಲೂ ಕುತೂಹಲ ಮತ್ತು ರಾಜಕೀಯ ತಲ್ಲಣಗಳಿಗೆ ಕಾರಣವಾಗಿವೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕರೆದಿರುವ ವಿಶೇಷ ಅಧಿವೇಶನ ಇಡೀ ದೇಶದ ಗಮನ ಸೆಳೆದಿದೆ. ವಿಶೇಷವಾಗಿ, ದಶಕಗಳಿಂದ ನೆನೆಗುದಿಗೆ ಬಿದ್ದಿರುವ ‘ಮಹಿಳಾ ಮೀಸಲಾತಿ ಮಸೂದೆ’ (ನಾರಿ ಶಕ್ತಿ ವಂದನ್ ಅಧಿನಿಯಮ್) ಈ ಅಧಿವೇಶನದ ಕೇಂದ್ರಬಿಂದುವಾಗಿದ್ದರೂ, ಸರ್ಕಾರ ಅನುಸರಿಸುತ್ತಿರುವ ‘ಗೌಪ್ಯತೆ’ಯ ಕಾರ್ಯತಂತ್ರ ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಯಾವುದೇ ಅಧಿವೇಶನ ನಡೆಯುವ ಮೊದಲು ಅದರ ಕಾರ್ಯಸೂಚಿ (Agenda) ಬಗ್ಗೆ ಸ್ಪಷ್ಟತೆ ಇರುವುದು ಸಂಸದೀಯ ವ್ಯವಸ್ಥೆಯ ವಾಡಿಕೆ. ಆದರೆ, ಈ ಬಾರಿ ಅಧಿವೇಶನದ ಕಾರ್ಯಸೂಚಿಯನ್ನು ಅಧಿಕೃತವಾಗಿ ಪ್ರಕಟಿಸದೆ ಕೊನೆಯ ಕ್ಷಣದವರೆಗೂ ಗುಟ್ಟಾಗಿಟ್ಟಿರುವುದು ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ.
“ವಿವರಗಳನ್ನೇ ನೀಡದೆ ಮುಚ್ಚಿಟ್ಟುಕೊಂಡಿರುವ ಸರ್ಕಾರ, ಚರ್ಚೆಗೆ ಪೂರಕವಾದ ವಾತಾವರಣವನ್ನು ಹೇಗೆ ನಿರ್ಮಿಸಲು ಸಾಧ್ಯ?” ಎನ್ನುವ ಪ್ರತಿಪಕ್ಷಗಳ ಪ್ರಬಲ ಪ್ರಶ್ನೆಯನ್ನು ಖಂಡಿತವಾಗಿ ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ.
ಇದನ್ನೂ ಓದಿ : ಸಂಗೀತಪ್ರೇಮಿಗಳ ಎದೆತಣಿಸಿದ ಅಸಲಿ ಪ್ರತಿಭೆ ಆಶಾ ಭೋಸ್ಲೆ
ಸಂಸತ್ತಿನಲ್ಲಿ ಮುಕ್ತ ಚರ್ಚೆ ಅತ್ಯಗತ್ಯ. ಮಸೂದೆಯ ಕರಡು ಪ್ರತಿ ಅಥವಾ ಉದ್ದೇಶಿತ ತಿದ್ದುಪಡಿಯ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡದಿದ್ದರೆ, ಸಂಸದರು ಗುಣಮಟ್ಟದ ಚರ್ಚೆಯಲ್ಲಿ ಪಾಲ್ಗೊಳ್ಳುವುದು ಹೇಗೆ ಎಂಬ ಆತಂಕವನ್ನು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ವ್ಯಕ್ತಪಡಿಸಿವೆ.
ಮಹಿಳಾ ಮೀಸಲಾತಿ ಮಸೂದೆ ಕೇವಲ ಒಂದು ಕಾಯ್ದೆಯಲ್ಲ, ಅದು ರಾಜಕೀಯ ಪ್ರಾತಿನಿಧ್ಯದ ಹಕ್ಕು. 1996 ರಿಂದಲೂ ವಿವಿಧ ಸರ್ಕಾರಗಳು ಇದನ್ನು ಮಂಡಿಸಲು ಪ್ರಯತ್ನಿಸಿದರೂ, ಒಮ್ಮತದ ಕೊರತೆಯಿಂದಾಗಿ ಅದು ವಿಫಲವಾಗುತ್ತಲೇ ಬಂದಿದೆ.
ಈಗಿನ ಸರ್ಕಾರ ಇದನ್ನು ‘ಮಾಸ್ಟರ್ ಸ್ಟ್ರೋಕ್’ ಆಗಿ ಬಳಸಲು ಹೊರಟಿದೆ. ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹಿಳಾ ಮತದಾರರನ್ನು ಸೆಳೆಯಲು ಇದು ಪ್ರಬಲ ಅಸ್ತ್ರವಾಗುತ್ತದೆ ಎನ್ನುವುದು ರಾಜಕೀಯ ಚರ್ಚೆಗೆ ಮೂಲ ಕಾರಣ. ಇನ್ನು, ಒಬಿಸಿ (OBC) ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗೆ ಈ ಮಸೂದೆಯೊಳಗೆ ಪ್ರತ್ಯೇಕ ಮೀಸಲಾತಿ ಇರಬೇಕೆಂದು ಪ್ರಾದೇಶಿಕ ಪಕ್ಷಗಳು (ಜೆಡಿಯು, ಆರ್.ಜೆ.ಡಿ ಎಸ್‌ಪಿ) ಆಗ್ರಹಿಸುತ್ತಿವೆ. ಸರ್ಕಾರದ ಗೌಪ್ಯತೆಯ ಹಿಂದೆ ಈ ಸಂಕೀರ್ಣ ಸವಾಲುಗಳನ್ನು ನಿಭಾಯಿಸುವ ತಂತ್ರವೂ ಇದೆಯೇ ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಎಲ್ಲಾ ಕಾರ್ಯವೈಖರಿಗಳು, ನಿರ್ಧಾರಗಳು ರಾಜಕೀಯವಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಈಡಾಗಿವೆ ಮತ್ತು ಅದರ ಆಳ ಅಗಲ ಚರ್ಚೆಯಿಲ್ಲದೇ ಜಾರಿಗೆ ಬಂದಿವೆ. ನೋಟು ಅಮಾನ್ಯೀಕರಣದಿಂದ ಹಿಡಿದು 370ನೇ ವಿಧಿಯ ರದ್ದತಿಯವರೆಗೆ ಎಲ್ಲವೂ ಗೌಪ್ಯವಾಗಿಯೇ ನಡೆದಿವೆ. ಈಗ ಮಹಿಳಾ ಮೀಸಲಾತಿ ಮಸೂದೆಯೂ ಅದರ ಮುಂದುವರಿದ ಅಧ್ಯಾಯ. ಇಷ್ಟೆಲ್ಲಾ ತರಾತುರಿಯ ನಿರ್ಧಾರಕ್ಕೆ ಈ ಮಸೂದೆಯ ಯಶಸ್ಸಿನ ಸಂಪೂರ್ಣ ಶ್ರೇಯಸ್ಸನ್ನು ತನ್ನದಾಗಿಸಿಕೊಳ್ಳುವುದು ಆಡಳಿತ ಪಕ್ಷದ ಉದ್ದೇಶವಾಗಿ ಕಂಡುಬರುತ್ತಿದೆ.
ಮುಂದಿರುವ ಸವಾಲುಗಳೇನು?
ಮಹಿಳಾ ಮೀಸಲಾತಿ ಜಾರಿಯಾಗಬೇಕಾದರೆ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಅನಿವಾರ್ಯ. ಇದು ತಕ್ಷಣಕ್ಕೆ ಸಾಧ್ಯವೇ ಅಥವಾ ಮುಂದಿನ ದಶಕಕ್ಕೆ ತಳ್ಳಲ್ಪಡುತ್ತದೆಯೇ ಎಂಬುದು ಮುಖ್ಯ ಪ್ರಶ್ನೆ. ಇನ್ನು, ಕ್ಷೇತ್ರ ಪುನರ್ವಿಂಗಡಣೆ ದಕ್ಷಿಣದ ರಾಜ್ಯಗಳ ಸಂಸದೀಯ ಸ್ಥಾನಗಳ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಈಗಾಗಲೇ ಇದೆ. ಇದನ್ನು ಮಹಿಳಾ ಮೀಸಲಾತಿಯೊಂದಿಗೆ ಹೇಗೆ ತಳುಕು ಹಾಕಲಾಗುತ್ತದೆ ಎಂಬುದು ಕುತೂಹಲಕಾರಿ ವಿಷಯ.
ಮಹಿಳಾ ಮೀಸಲಾತಿ ಮಸೂದೆ (ನಾರಿ ಶಕ್ತಿ ವಂದನ ಅಧಿನಿಯಮ) ಸಂಸತ್ತಿನಲ್ಲಿ ಅಂಗೀಕಾರಗೊಂಡಿದ್ದರೂ, ಅದನ್ನು ಜಾರಿಗೆ ತರುವುದು ಸವಾಲಿನ ಪ್ರಶ್ನೆಯಾಗಿಯೇ ಉಳಿದಿದೆ. ಈ ಮಸೂದೆಯನ್ನು ‘ಜನಗಣತಿ’ ಮತ್ತು ‘ಕ್ಷೇತ್ರ ಪುನರ್ವಿಂಗಡಣೆ’ (Delimitation) ಪ್ರಕ್ರಿಯೆಗಳೊಂದಿಗೆ ತಳುಕು ಹಾಕಿರುವುದು ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದೆ.
ಕ್ಷೇತ್ರ ಪುನರ್ವಿಂಗಡಣೆಯ ನಂತರ ಲೋಕಸಭಾ ಕ್ಷೇತ್ರಗಳ ಸಂಖ್ಯೆ 543 ರಿಂದ 816ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಕ್ಷೇತ್ರಗಳ ಸಂಖ್ಯೆ ಹೆಚ್ಚಾದಾಗ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬಹುದು ಎಂಬುದು ಸಕಾರಾತ್ಮಕ ಅಂಶವಾದರೂ, ಅದು ರಾಜ್ಯಗಳ ನಡುವಿನ ರಾಜಕೀಯ ಶಕ್ತಿಯ ಅಸಮತೋಲನಕ್ಕೆ ಕಾರಣವಾಗಬಾರದು ಎನ್ನುವ ವಿಶ್ಲೇಷಣೆಯನ್ನು ತಳ್ಳಿಹಾಕುವಂತಿಲ್ಲ.
ಒಟ್ಟಿನಲ್ಲಿ, ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗುವುದು ಸ್ವಾಗತಾರ್ಹ ಬೆಳವಣಿಗೆಯಾದರೂ, ಅದನ್ನು ತರುವ ಹಾದಿಯಲ್ಲಿ ಪಾರದರ್ಶಕತೆ ಇರಬೇಕೆಂಬುದು ಪ್ರತಿಪಕ್ಷಗಳ ನ್ಯಾಯಸಮ್ಮತ ಆಗ್ರಹವಾಗಿದೆ. ಮಹಿಳಾ ಮೀಸಲಾತಿ ಕೇವಲ ಮಹಿಳಾ ಸಬಲೀಕರಣದ ವಿಷಯವಾಗಿ ಉಳಿಯದೆ, ಭಾರತದ ಒಕ್ಕೂಟ ವ್ಯವಸ್ಥೆ, ರಾಜ್ಯಗಳ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದ ಸಂಕೀರ್ಣ ಸಂಘರ್ಷವಾಗಿ ರೂಪಾಂತರಗೊಂಡಿದೆ. ಅಂತಿಮವಾಗಿ, ಸಂತ್ತಿನಲ್ಲಿ ನಡೆಯುವ ಚರ್ಚೆಗಳು ಕೇವಲ ಸಂಖ್ಯೆಗಳ ಬಲದ ಮೇಲೆ ನಿರ್ಧಾರವಾಗದೆ, ಅರ್ಥಪೂರ್ಣ ಸಮಾಲೋಚನೆಯ ಮೂಲಕ ತಾರ್ಕಿಕ ಅಂತ್ಯ ಕಾಣಬೇಕಿದೆ.





