ಸಂಗೀತಪ್ರೇಮಿಗಳ ಎದೆತಣಿಸಿದ ಅಸಲಿ ಪ್ರತಿಭೆ ಆಶಾ ಭೋಸ್ಲೆ

Date:

ಆಶಾ ಭೋಸ್ಲೆ ಇಂದು ನಮ್ಮ ನಡುವೆ ಇಲ್ಲದಿದ್ದರೂ, ಅರವತ್ತು ವರ್ಷಗಳ ಕಾಲ ತಮ್ಮ ಸಿರಿಕಂಠದಿಂದ ಸಂಗೀತಪ್ರೇಮಿಗಳ ಎದೆತಣಿಸಿದ ಅವರ ಹಾಡುಗಳು ನಮ್ಮೊಂದಿಗಿವೆ. ಅವರ ವೈವಿಧ್ಯತೆ, ವಿಭಿನ್ನತೆ ಮತ್ತು ಸಂಗೀತದೊಂದಿಗಿನ ತಲ್ಲೀನತೆ ಅವರನ್ನು ಜೀವಂತ ದಂತಕಥೆಯನ್ನಾಗಿಸಿದೆ.  

ಪತ್ರಕರ್ತ ರಾಜದೀಪ್ ಸರ್ದೇಸಾಯಿ, ತಮ್ಮ ‘ಎಕ್ಸ್’ನಲ್ಲಿ ಸಣ್ಣ ಹಾಡಿನ ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಅದು ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ ಮತ್ತು ಗಾಯಕಿ ಆಶಾ ಭೋಸ್ಲೆಯವರು ಹಾಡಿರುವ ಒಂದು ಹಾಡಿನ ದೃಶ್ಯ. 1972ರಲ್ಲಿ ಬಿಡುಗಡೆಯಾದ ರಾಜೇಶ್ ಖನ್ನಾ ಮತ್ತು ಮುಮ್ತಾಜ್ ನಟಿಸಿರುವ ‘ಅಪ್ನಾ ದೇಶ್’ ಚಿತ್ರದ ‘ದುನಿಯಾ ಮೇ ಲೋಗೋ ಕೋ…’ ಹದಿಹರೆಯದವರನ್ನು ಹುಚ್ಚೆಬ್ಬಿಸಿದ ಹಾಡಿನ ದೃಶ್ಯ.

- Advertisement -

ಆ ಕಾಲಕ್ಕೆ ಅದು ಭಾರೀ ಕ್ರೇಜ್ ಹುಟ್ಟಿಸಿದ ಜನಪ್ರಿಯ ಚಿತ್ರಗೀತೆಯಾಗಿತ್ತು. ಅದಕ್ಕೆ ತಕ್ಕಂತೆ ವೆಸ್ಟರ್ನ್ ಸಂಗೀತ ಸಂಯೋಜನೆಯಿತ್ತು. ಪಾಪ್ ಶೈಲಿಯ ಗಡುಸು ಧ್ವನಿಗೆ ಸ್ವತಃ ಬರ್ಮನ್ ದನಿಗೂಡಿಸಿದ್ದರೆ, ಅದಕ್ಕೆ ವಿರುದ್ಧವಾದ ತಣ್ಣನೆಯ ಫೀಮೇಲ್ ಸಿಂಗರ್ ಆಗಿ ಆಶಾ ಭೋಸ್ಲೆ ಹಾಡಿದ್ದರು.   

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಅದೇ ಹಾಡನ್ನು ಖಾಸಗಿ ಸಮಾರಂಭವೊಂದರಲ್ಲಿ ಆರ್.ಡಿ. ಬರ್ಮನ್ ಮತ್ತು ಆಶಾ ಭೋಸ್ಲೆ ಮತ್ತೊಮ್ಮೆ ಹಾಡಿದ್ದರು. ಹಾಡುವಾಗಿನ ಅವರ ಹಾವಭಾವ, ಸಂಗೀತದ ವಾದ್ಯಗಳನ್ನು ನುಡಿಸುವ ನಟನೆ, ಅದಕ್ಕೆ ತಕ್ಕ ಬರ್ಮನ್ ನೃತ್ಯ. ಪಕ್ಕದಲ್ಲಿ ಅದಕ್ಕೆ ತದ್ವಿರುದ್ಧವಾಗಿ ಸೌಮ್ಯವಾಗಿ ನಿಂತು ಹಾಡುತ್ತಿರುವ ಆಶಾ ಭೋಸ್ಲೆ- ನಿಜಕ್ಕೂ ಅದೊಂದು ಅಪರೂಪದ ವಿಡಿಯೋ ತುಣುಕು.

ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ ಮತ್ತು ಗಾಯಕಿ ಆಶಾ ಭೋಸ್ಲೆಯ ಜೋಡಿಯೇ, ಹೇಳಿಮಾಡಿಸಿದ ಅಪರೂಪದ ಅಪೂರ್ವ ಜೋಡಿ. ಅದರಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ಗಾಯನ ಹದವರಿತು ಮಿಳಿತಗೊಂಡಿತ್ತು. ಭಾರತೀಯ ಸಿನಿಪ್ರಿಯರಿಗೆ ಬೇಕಾದ ಸಂಗೀತ ಧಾರೆಯನ್ನು ಎದೆಗೆ ದಾಟಿಸಿತ್ತು.

WhatsApp Image 2026 04 13 at 14.03.11
ಆಶಾ ಭೋಸ್ಲೆ ಮತ್ತು ಆರ್.ಡಿ. ಬರ್ಮನ್

ಆ ಜೋಡಿ ಹಕ್ಕಿಯಲ್ಲಿ ಒಂದಾದ ಹಾಡುವ ಹಕ್ಕಿ ಆಶಾ ಭೋಸ್ಲೆ ನಿನ್ನೆ ಭಾನುವಾರ, ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ಮಹಾನ್ ಗಾಯಕಿ ಭಾರತೀಯ ಸಂಗೀತ ಲೋಕದಲ್ಲಿ, 6 ದಶಕಗಳ ಕಾಲ 12 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ದಾಖಲೆ ನಿರ್ಮಿಸಿದ್ದಾರೆ. ಹಿಂದಿ ಸೇರಿದಂತೆ 20ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ(ಕನ್ನಡದ ಮೂರು ಚಿತ್ರಗಳಿಗೂ ಹಾಡಿದ್ದಾರೆ) ತಮ್ಮದೇ ಆದ ಛಾಪು ಮೂಡಿಸಿದ ಮರೆಯಲಾರದ ಗಾಯಕಿ ಎನಿಸಿಕೊಂಡಿದ್ದಾರೆ.

ಆಶಾ ಭೋಸ್ಲೆ 1933ರ ಸೆಪ್ಟೆಂಬರ್ 8ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದರು. ಕೊಂಕಣ ಮೂಲದ ರಂಗಭೂಮಿ ಹಿನ್ನೆಲೆಯಿಂದ ಬಂದ ಅವರ ಕುಟುಂಬ ಕಲಾ ಕುಟುಂಬವಾಗಿತ್ತು. ಸಂಗೀತ ಮತ್ತು ಹಿಂದೂಸ್ಥಾನಿ ಗಾಯಕರಾಗಿದ್ದ ತಂದೆ ಪಂಡಿತ್ ದೀನಾನಾಥ್ ಮಂಗೇಶ್ಕರ್, ಬಾಲ್ಯದಲ್ಲಿಯೇ ಸಂಗೀತದ ಪಾಠಗಳನ್ನು ಕಲಿಸಿದರು. ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರಿಯಾಗಿದ್ದರು. ಆದರೆ, ತಂದೆಯ ಅಕಾಲಿಕ ನಿಧನದಿಂದ ಕುಟುಂಬ ಸಂಕಷ್ಟಕ್ಕೆ ನಿಲುಕಿತು. ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಬಹಳ ಚಿಕ್ಕ ವಯಸ್ಸಿನಲ್ಲಿ, ಸಹೋದರಿಯರು ಹಾಡಲು ಆರಂಭಿಸಿದರು.

ಆಶಾ ಭೋಸ್ಲೆ ಅವರು ತುಂಬಾ ಕಿರಿಯ ವಯಸ್ಸಿನಲ್ಲಿಯೇ, ಹದಿನಾರರ ಹರೆಯದಲ್ಲಿ ಮನೆಯವರ ವಿರೋಧದ ನಡುವೆಯೇ ಪ್ರೇಮ ವಿವಾಹವಾಗಿದ್ದರು. ಲೋಕ ತಿಳಿಯುವ ಮುನ್ನವೇ ಮೂರು ಮಕ್ಕಳ ತಾಯಿಯಾಗಿದ್ದರು. ಈ ನಿರ್ಧಾರ ಮೊದಲೇ ಸಂಕಷ್ಟದಲ್ಲಿದ್ದ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿತು. ಇದರಿಂದ ಸಹೋದರಿ ಲತಾ ಅವರೊಂದಿಗೆ ಮಾತು ಬಿಡಲು ಕೂಡ ಕಾರಣವಾಯಿತು. ಕುಟುಂಬದಿಂದ ದೂರವಾದ ಆಶಾ, ಪ್ರೇಮಿಸಿ ಮದುವೆಯಾಗಿದ್ದರೂ, ಅಲ್ಲಿಯೂ ಅವರಿಗೆ ನೆಮ್ಮದಿ ಇಲ್ಲವಾಗಿತ್ತು. ಕೌಟುಂಬಿಕ ಕಲಹ, ವಿಚ್ಛೇದನದಿಂದ ನೊಂದು ಬೆಂದುಹೋಗಿದ್ದರು. ಆ ಬೆಂದ ಜೀವಕ್ಕೆ ಗಾಯನ ಸಂಜೀವಿನಿಯಾಗಿ ಒದಗಿಬಂದಿತ್ತು. ಅದರಿಂದ ಸಿಕ್ಕ ಜನಪ್ರಿಯತೆ, ಖ್ಯಾತಿ, ಹಣ ಎಲ್ಲವನ್ನು ಮರೆಸಿತ್ತು.

ಇದನ್ನು ಓದಿದ್ದೀರಾ?: ಸ್ಥಿರಚಿತ್ರಕ್ಕೆ ಚಲನೆಯ ಜೀವ: ಚಿತ್ರಕಲೆ ಮತ್ತು ಸಿನಿಮಾದ ಬೆಸುಗೆ 

ಲತಾ ಮತ್ತು ಆಶಾ- ಇಬ್ಬರೂ ಒಂದೇ ಕುಟುಂಬದ ಕುಡಿಗಳಾದರೂ, ಇಬ್ಬರೂ ಸಹ ಅತ್ಯುತ್ತಮ ಗಾಯಕಿಯರಾಗಿ ಹೆಸರು ಮಾಡಿದ್ದರೂ, ಭಾರತೀಯ ಚಿತ್ರರಂಗದಲ್ಲಿ ಇಬ್ಬರೂ ತಮ್ಮದೇ ಆದ ಸ್ಥಾನ ಪಡೆದಿದ್ದರು. ಲತಾ ಭಾವಪೂರ್ಣ ಗೀತೆಗಳಿಗೆ ಪ್ರಸಿದ್ಧರಾದರೆ; ಆಶಾ ಪಾಶ್ಚಾತ್ಯ ಶೈಲಿಯ ಹಾಡುಗಳಿಗೆ ಜನಪ್ರಿಯರಾಗಿದ್ದರು. ಈ ರೀತಿಯ ಪ್ರತ್ಯೇಕ ಗುರುತು ಇದ್ದರೂ, ಕೆಲವೊಮ್ಮೆ ಅವಕಾಶಗಳ ವಿಷಯದಲ್ಲಿ ಇಬ್ಬರ ನಡುವೆ ಸ್ಪರ್ಧೆಯೂ ಇತ್ತು. ಸಂಗೀತ ನಿರ್ದೇಶಕರ ಆಯ್ಕೆಯಿಂದಾಗಿ ಇಬ್ಬರ ನಡುವೆ ವೈಮನಸ್ಸಿಗೂ ಕಾರಣವಾಗಿತ್ತು.

ಲತಾ ಮತ್ತು ಆಶಾರ ಪ್ರತಿಭೆಯನ್ನು ಸೀಳಿ ನೋಡುವ ಸಮಾಜ ಮತ್ತು ಮಾಧ್ಯಮಗಳಿಂದ, ಅತಿ ಹೆಚ್ಚು ನೊಂದವರು ಆಶಾ ಭೋಸ್ಲೆಯವರು. ಏಕೆಂದರೆ, ಅವಕಾಶಗಳು ಅರಸಿ ಬರುತ್ತಿದ್ದುದು ಹೆಚ್ಚಾಗಿ ಅಕ್ಕನಿಗೆ. ಆಶಾ ಎಂದಾಕ್ಷಣ ಕ್ಯಾಬರೆ ಎಂದು ಬ್ರ್ಯಾಂಡ್ ಮಾಡಲಾಗಿತ್ತು. ಅದರಲ್ಲೂ ಮಾಧ್ಯಮಗಳು ಬೇಕೆಂದೇ ಇಬ್ಬರ ನಡುವೆ ಗೆರೆ ಕೊರೆದು, ಯಾರು ಶ್ರೇಷ್ಠ ಎಂಬ ಪ್ರಶ್ನೆ ಎತ್ತುತ್ತಿದ್ದವು. ಆ ಪ್ರಶ್ನೆ ಎದುರಾದಾಗಲೆಲ್ಲ ಆಶಾ ಭಾರೀ ಮುಜುಗರಕ್ಕೆ ಒಳಗಾಗುತ್ತಿದ್ದರು. ತಾನು ಅಕ್ಕನಿಗಿಂತ ಭಿನ್ನ ಎಂದು ತಮ್ಮ ಹಾಡುಗಳ ಮೂಲಕ ತೋರಿದರೂ, ಚಿತ್ರರಂಗ ಇಬ್ಬರ ಪ್ರತಿಭೆಯನ್ನು ಸಮಾನವಾಗಿ ದುಡಿಸಿಕೊಂಡರೂ, ಅಲ್ಲೊಂದು ತಾರತಮ್ಯ ಅವರಿಗೇ ಗೊತ್ತಿಲ್ಲದಂತೆ ನೆಲೆಯಾಗಿತ್ತು.

ಹಾಗೆ ನೋಡಿದರೆ, ಆಶಾ ಮತ್ತು ಲತಾ ನಡುವಿನ ‘ಮುನಿಸು’ ಒಂದು ಶಾಶ್ವತ ವೈಮನಸ್ಯವಲ್ಲ. ಅದು ಜೀವನದ ಕೆಲವು ಹಂತಗಳಲ್ಲಿ ಉಂಟಾದ ಭಿನ್ನಾಭಿಪ್ರಾಯಗಳು ಮತ್ತು ಪರಿಸ್ಥಿತಿಯ ಪರಿಣಾಮಗಳು ಮಾತ್ರ. ಲತಾ ಮಂಗೇಶ್ಕರ್ ಹೆಚ್ಚು ಸಂಯಮಿತ ಮತ್ತು ಸಂಪ್ರದಾಯಬದ್ಧ ಶೈಲಿಯನ್ನು ಅನುಸರಿಸಿದರೆ; ಆಶಾ ಭೋಸ್ಲೆ ಹೆಚ್ಚು ಮುಕ್ತ ಮನಸ್ಸಿನ, ಪ್ರಯೋಗಶೀಲ ವ್ಯಕ್ತಿತ್ವ ಹೊಂದಿದವರು. ಈ ವ್ಯತ್ಯಾಸವೂ ಅವರ ನಡುವಿನ ಅಂತರಕ್ಕೆ ಕಾರಣವಾಯಿತು. ವಯಸ್ಸಾದಂತೆ, ಮಾಗಿದಂತೆ ಒಂದಾಗಿದ್ದವರು, ಮತ್ತೆ ಒಂದಾದರು. ಪರಸ್ಪರ ಗೌರವ ಮತ್ತು ಸ್ನೇಹವನ್ನು ಕಾಪಾಡಿಕೊಂಡರು. ಹಲವಾರು ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಪ್ರಶಂಸಿಸಿಕೊಂಡರು. ಕೊನೆಯಲ್ಲಿ ಅವರ ಸಂಬಂಧದಲ್ಲಿ ಪ್ರೀತಿ ಮತ್ತು ಗೌರವವೇ ಮುಖ್ಯವಾಗಿ ಉಳಿಯಿತು.

WhatsApp Image 2026 04 13 at 14.05.25
ಅಕ್ಕ ಲತಾ ಮಂಗೇಶ್ಕರ್ ಜೊತೆ ಆಶಾ ಭೋಸ್ಲೆ

ಇಷ್ಟಾದರೂ, ಈ ಇಬ್ಬರು ಸಹೋದರಿಯರ ಮೇಲಿನ ಅಪವಾದವೊಂದು ಹಾಗೇ ಉಳಿಯಿತು. ಅದು ಹೊಸ ತಲೆಮಾರಿನ ಅನೇಕ ಗಾಯಕಿಯರ ಅವಕಾಶಗಳನ್ನು ಕಿತ್ತುಕೊಂಡರೆಂಬ ಅಪವಾದ. ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯಿದ್ದ ಸಂದರ್ಭದಲ್ಲಿ; ಅನೇಕ ಸಂಗೀತ ನಿರ್ದೇಶಕರು, ನಿರ್ಮಾಪಕರು ಇವರ ಮಾತು ಕೇಳುತ್ತಿದ್ದ ಸಮಯದಲ್ಲಿ ಪ್ರತಿಭಾವಂತ ಹೊಸ ಗಾಯಕಿಯರಿಗೆ ಅಡ್ಡಗಾಲು ಹಾಕಿದರು, ಅವರ ಅವಕಾಶಗಳನ್ನು ಕಿತ್ತುಕೊಂಡು ಏಕಸ್ವಾಮ್ಯ ಮೆರೆದರು ಎಂಬ ದೂರು ಇದೆ, ಇರಲಿ.   

ಆದರೆ ಆಶಾ ಭೋಸ್ಲೆ ಅವರ ಆರಂಭದ ಸಂಗೀತ ಜೀವನವು ಕೂಡ ಸವಾಲಿನಿಂದ ಕೂಡಿತ್ತು. ಆರಂಭದಲ್ಲಿ ಸಣ್ಣಮಟ್ಟದ ಹಾಡುಗಳಿಂದ ಆರಂಭವಾದ ಅವರ ಪ್ರಯಾಣ, ಶ್ರಮ ಮತ್ತು ಪ್ರತಿಭೆಯಿಂದ ಹಂತ ಹಂತವಾಗಿ ಮೇಲೇರಿ ಸಂಗೀತಲೋಕದ ಶಿಖರವಾದರು. ಆರಂಭದಲ್ಲಿ ಸಂಗೀತ ನಿರ್ದೇಶಕ ಒ.ಪಿ. ನಯ್ಯರ್, ಅವಕಾಶ ನೀಡಿ ಬೆಳೆಸಿದರೆ; ಮುಂದೆ ಆರ್.ಡಿ. ಬರ್ಮನ್, ಆಶಾರನ್ನು ಜೀವನಸಂಗಾತಿಯನ್ನಾಗಿ ಸ್ವೀಕರಿಸಿದ್ದೂ ಅಲ್ಲದೆ, ಅವರ ಕಂಠಸಿರಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದರು.

ಆಶಾ ಭೋಸ್ಲೆ ಅವರು, ಒಂದೇ ರೀತಿಯ ಹಾಡುಗಳಿಗೆ ಸೀಮಿತವಾಗದವರು. ಕ್ಯಾಬರೆ, ಗಝಲ್‌, ಪಾಪ್‌, ಫೋಕ್‌, ಭಜನ್, ಕ್ಲಾಸಿಕಲ್‌ ಸೇರಿದಂತೆ ಎಲ್ಲಾ ಶೈಲಿಗಳಲ್ಲಿಯೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಅವರ ಧ್ವನಿಯ ಏರಿಳಿತ, ಲವಲವಿಕೆ ಮತ್ತು ಪ್ರಯೋಗಶೀಲತೆ ಅವರನ್ನು ಇತರರಿಗಿಂತ ಭಿನ್ನವಾಗಿಸಿದೆ. ಅವರ ಕಂಠಕ್ಕೆ ತಕ್ಕಂತೆ ಅವರಿಗೆ ಸಿಕ್ಕ ಆರ್.ಡಿ. ಬರ್ಮನ್ ಅವರ ವಿಶಿಷ್ಟ ಬಗೆಯ ಸಂಗೀತ, ಬೇರೆಯದೇ ಸಂಗೀತ ನಾದವನ್ನು ಭಾರತೀಯರಿಗೆ ಉಣಬಡಿಸಿದವು. ‘ಪಿಯಾ ತೋ ಅಬ್ ತೋ ಆಜಾ…’, ‘ದಮ್ ಮಾರೋ ದಮ್…’, ‘ಚುರಾಲಿಯ ಹೈ ತುಮ್‌ನೆ ಜೋ ದಿಲ್ ಕೋ…’ದಂತಹ ಆ ಹಸ್ಕಿ ವಾಯ್ಸ್‌ಗೆ ಹದಿಹರೆಯದವರು ಹುಚ್ಚೆದ್ದು ಕುಣಿದರು.

ಇದನ್ನು ಓದಿದ್ದೀರಾ?: ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ಇಂತಹ ಆಶಾರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ. ಅವರು ಭಾರತ ಮಾತ್ರವಲ್ಲದೆ ವಿಶ್ವದ ಹಲವೆಡೆ ಸಂಗೀತ ಕಾರ್ಯಕ್ರಮಗಳನ್ನು ನಡೆಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತಿ ಗಳಿಸಿದ್ದಾರೆ. ಜೀವನದ ಸಂಕಷ್ಟಗಳನ್ನು ಎದುರಿಸಿ, ತಮ್ಮ ಪರಿಶ್ರಮದಿಂದಲೇ ಉನ್ನತ ಸ್ಥಾನಕ್ಕೆ ಏರಿದ ಅವರು ಅನೇಕ ಯುವ ಗಾಯಕರಿಗೆ ಪ್ರೇರಣೆಯಾಗಿದ್ದಾರೆ. ಅವರು ಇಂದು ನಮ್ಮ ನಡುವೆ ಇಲ್ಲದಿದ್ದರೂ, ಅರವತ್ತು ವರ್ಷಗಳ ಕಾಲ ತಮ್ಮ ಸಿರಿಕಂಠದಿಂದ ಸಂಗೀತಪ್ರೇಮಿಗಳ ಎದೆತಣಿಸಿದ ಅವರ ಹಾಡುಗಳು ನಮ್ಮೊಂದಿಗಿವೆ. ಅವರ ವೈವಿಧ್ಯತೆ, ವಿಭಿನ್ನತೆ ಮತ್ತು ಸಂಗೀತದೊಂದಿಗಿನ ತಲ್ಲೀನತೆ ಅವರನ್ನು ಜೀವಂತ ದಂತಕಥೆಯನ್ನಾಗಿಸಿದೆ.  

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | SIR ರದ್ದತಿ ಆಗ್ರಹಿಸಿ ಸಿಪಿಐ(ಎಂ)ನಿಂದ ಮೇಣದಬತ್ತಿ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...