ವಂದೇ ಮಾತರಂ ಹಾಡುವುದು ಕಡ್ಡಾಯವೇ? ಸಂವಿಧಾನ ಸಭೆ ನಿರ್ಧಾರದಿಂದ ‘ಬಿಜೋಯ್ ಇಮ್ಯಾನ್ಯುವೆಲ್’ ತೀರ್ಪಿನ ತನಕ

Date:

2026ರ ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ತಿದ್ದುಪಡಿ ಕಾಯ್ದೆಯು 'ವಂದೇ ಮಾತರಂ' ಗೀತೆಯನ್ನು ತಡೆಯುವುದನ್ನು ಅಥವಾ ಅದಕ್ಕೆ ಅಡ್ಡಿಪಡಿಸುವುದನ್ನು ಅಪರಾಧ ಎಂದು ಹೇಳುತ್ತದೆ. ಆದರೆ ಪ್ರತಿಯೊಬ್ಬರು ಕಡ್ಡಾಯವಾಗಿ ಹಾಡಲೇಬೇಕು ಎಂದಾಗಲಿ ಅಥವಾ ಆರೂ ಚರಣಗಳನ್ನು ಗಾಯನ ಮಾಡಬೇಕು ಎಂದಾಗಲಿ ಹೇಳಲ್ಲ. ಹಾಗೆಯೇ 1986ರ ಐತಿಹಾಸಿಕ 'ಬಿಜೋಯ್ ಇಮ್ಯಾನ್ಯುವೆಲ್' ಪ್ರಕರಣ ಸುಪ್ರೀಂ ಕೋರ್ಟ್ ತೀರ್ಪು, ವ್ಯಕ್ತಿಯ ಧಾರ್ಮಿಕ ನಂಬಿಕೆ, ಮನಸ್ಸಾಕ್ಷಿಗೆ ಧಕ್ಕೆಯಾಗುವ ವೇಳೆ ಮೌನವಾಗಿರುವ ಹಕ್ಕನ್ನು ಎತ್ತಿಹಿಡಿಯುತ್ತದೆ.

ವಂದೇ ಮಾತರಂ – ಸದ್ಯ ಬಿಜೆಪಿಗರೂ ತನ್ನ ದುರಾಡಳಿತದಿಂದ ಜನರನ್ನು ಬೇರೆಡೆ ಸೆಳೆಯಲು ಬಳಸಿಕೊಳ್ಳುತ್ತಿರುವ ಒಂದು ರಾಜಕೀಯ ಅಸ್ತ್ರ. ಅದೂ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮತಬ್ಯಾಂಕ್ ತುಂಬಿಸಿಕೊಳ್ಳಲು ಕುತಂತ್ರ ನಡೆಸುತ್ತಿದ್ದ ಬಿಜೆಪಿಯ ಬತ್ತಳಿಕೆಯಲ್ಲಿ ಅಳಿದುಳಿದ ಬಾಣಗಳಲ್ಲಿ ವಂದೇ ಮಾತರಂ ಕೂಡ ಒಂದು. ಅದರ ಪ್ರಯೋಗ ಇಂದಿಗೂ ಬಿಜೆಪಿ ಮುಂದುವರೆಸುತ್ತಿದೆ, ಗುರಿ ತಪ್ಪಿದಾಗ ಮತ್ತೊಂದು ಅಂಬು ತೆಗೆದು ನಿಲ್ಲುತ್ತದೆ.

- Advertisement -

ಅದರಂತೆ ಇತ್ತೀಚೆಗೆ ಭಾರತದ ಸಂಸತ್ತು ರಾಷ್ಟ್ರಗೀತೆಗೆ ನೀಡಲಾಗಿರುವ ಕ್ರಿಮಿನಲ್ ಕಾನೂನು ರಕ್ಷಣೆಯನ್ನು ‘ವಂದೇ ಮಾತರಂ’ ಗೀತೆಗೂ ವಿಸ್ತರಿಸಿದೆ. ಆದರೆ ರಾಜಕೀಯ ಸೌಹಾರ್ದತೆ, ಮಾಧ್ಯಮಗಳ ಪ್ರಚಾರದ ಆಚೆಗೆ, ಸಂವಿಧಾನ ಸಭೆಯ ಮೂಲ ಆಶಯಗಳು, ಪ್ರಸ್ತುತ ಜಾರಿಗೆ ಬಂದಿರುವ ತಿದ್ದುಪಡಿ ಕಾಯ್ದೆಯ ನಿಖರ ಪಠ್ಯ ಹಾಗೂ 1986ರ ಸುಪ್ರೀಂ ಕೋರ್ಟ್‌ನ ‘ಬಿಜೋಯ್ ಇಮ್ಯಾನ್ಯುವೆಲ್ ವಿರುದ್ಧ ಕೇರಳ ರಾಜ್ಯ’ ಪ್ರಕರಣದ ತೀರ್ಪನ್ನು ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ. ಆಗಲೇ ನಮಗೆ ಕಾನೂನಾತ್ಮಕ ವಾಸ್ತವ ತಿಳಿಯುತ್ತದೆ. ಕಾನೂನು ವ್ಯಕ್ತಿಗತ ಮನಸ್ಸಾಕ್ಷಿ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿಯೇ ಇದೆ ಎಂಬುದು ಸ್ಪಷ್ಟವಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಇದನ್ನೂ ಓದಿ: ಈ ದಿನ ಸಂಪಾದಕೀಯ | ವಂದೇ ಮಾತರಂ ಕಡ್ಡಾಯದ ಹಿಂದಿರುವುದು ದೇಶಭಕ್ತಿಯಲ್ಲ, ಪಶ್ಚಿಮ ಬಂಗಾಳ ಗೆಲ್ಲುವುದು!

ಸಂವಿಧಾನ ಸಭೆಯಲ್ಲಿ ನಡೆದ್ದೇನು?

ಅಷ್ಟಕ್ಕೂ ರಾಷ್ಟ್ರಗೀತೆ ಆಯ್ಕೆಯ ವಿಷಯವು ಸಂವಿಧಾನ ಸಭೆಯಲ್ಲಿ ಕೂಡಲೇ ತೀರ್ಮಾನವಾಗಲಿಲ್ಲ. 1950ರ ಜನವರಿ 24ರಂದು ನಡೆದ ಸಂವಿಧಾನ ಸಭೆಯ ಅಂತಿಮ ಸಭೆಯಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರು ‘ಜನ ಗಣ ಮನ’ ದೇಶದ ಅಧಿಕೃತ ರಾಷ್ಟ್ರಗೀತೆಯಾಗಿರುತ್ತದೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಐತಿಹಾಸಿಕ ಪಾತ್ರ ವಹಿಸಿದ ‘ವಂದೇ ಮಾತರಂ’ ಗೀತೆಗೆ ‘ಜನ ಗಣ ಮನ’ ಗೀತೆಗೆ ಸಮಾನವಾದ ಗೌರವ ಮತ್ತು ಸ್ಥಾನಮಾನ ನೀಡಲಾಗುವುದು ಎಂದು ಘೋಷಿಸಿದರು. ಆದರೆ ಸಂವಿಧಾನ ‘ವಂದೇ ಮಾತರಂ’ ಗೀತೆಯನ್ನು ‘ರಾಷ್ಟ್ರೀಯ ಗೀತೆ’ ಎಂದು ಪ್ರತ್ಯೇಕವಾಗಿ ಅಥವಾ ಅಧಿಕೃತವಾಗಿ ಘೋಷಿಸಲಿಲ್ಲ. ಅದರ ಸ್ಥಾನಮಾನವು ಡಾ. ರಾಜೇಂದ್ರ ಪ್ರಸಾದ್ ಅವರ ಹೇಳಿಕೆ ಮತ್ತು ಅದಾದ ಬಳಿಕ ನಡೆಸಿಕೊಂಡು ಬಂದ ಸಾಂಪ್ರದಾಯಿಕ ಆಚರಣೆಗೆ ಮಾತ್ರ ಸೀಮಿತವಾಗಿದೆ.

ಇವೆಲ್ಲವುದಕ್ಕೂ ಮುಖ್ಯ ಕಾರಣ 1930ರ ದಶಕದಲ್ಲಿ ನಡೆದ ಘಟನೆಗಳು. ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ‘ಆನಂದಮಠ’ ಕಾದಂಬರಿಯ ಭಾಗವಾದ ವಂದೇ ಮಾತರಂ ಗೀತೆಯ ನಂತರದ ಚರಣಗಳು ದುರ್ಗೆ, ಲಕ್ಷ್ಮಿ, ಸರಸ್ವತಿ ಮುಂತಾದ ಹಿಂದೂ ದೇವತೆಗಳನ್ನು ಆರಾಧಿಸುವ ಧಾರ್ಮಿಕ ಮತ್ತು ಪೂಜಾ ಸ್ವರೂಪದ ಸಾಲುಗಳನ್ನು ಹೊಂದಿವೆ. 1937ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮುಸ್ಲಿಂ ಲೀಗ್ ಸೇರಿದಂತೆ ವಿವಿಧ ಕಡೆಯಿಂದ ಬಂದ ಆಕ್ಷೇಪಣೆಗಳನ್ನು ಪರಿಗಣಿಸಿ, ಯಾವುದೇ ದೇವತೆಯ ಉಲ್ಲೇಖವಿಲ್ಲದ, ಪ್ರಾಕೃತಿಕ ಸೌಂದರ್ಯವನ್ನು ವರ್ಣಿಸುವ ಮೊದಲ ಎರಡು ಚರಣಗಳನ್ನು ಮಾತ್ರ ಸಾರ್ವಜನಿಕ ಹಾಗೂ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡಲು ನಿರ್ಣಯಿಸಿತು. 1950ರಲ್ಲಿ ಸಂವಿಧಾನ ಸಭೆಯು ಇದೇ ಸುಸಂಸ್ಕೃತ ರಾಜಿಯನ್ನು ಮುಂದುವರಿಸಿತು. ಬಲವಂತದ ಧಾರ್ಮಿಕ ಆಚರಣೆಯನ್ನು ನಾಗರಿಕರ ಮೇಲೆ ಹೇರಬಾರದು ಎಂಬುದು ನಮ್ಮ ಗಣರಾಜ್ಯದ ಸಂಸ್ಥಾಪಕರ ಸ್ಪಷ್ಟ ನಿರ್ಧಾರವಾಗಿತ್ತು.

ಈಗ 2026ರ ತಿದ್ದುಪಡಿ ಕಾಯ್ದೆ ಹೇಳುವುದೇನು?

ಬಿಜೆಪಿಯ ರಾಜಕೀಯದ ಭಾಗವೇ 2026ರ ಜುಲೈನಲ್ಲಿ ಅಂಗೀಕರಿಸಲಾದ ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ವಿಧೇಯಕ. ಈ ತಿದ್ದುಪಡಿ ಅಂಗೀಕಾರಕ್ಕೆ ಬಿಜೆಪಿ ಎಷ್ಟು ತಡವರಿಸುತ್ತಿತ್ತು ಎಂದರೇ ಸಂಸತ್ತಿನಲ್ಲಿ ವಿಸ್ತೃತ ಚರ್ಚೆಯೇ ನಡೆದಿಲ್ಲ, ಅದಕ್ಕೆ ಅವಕಾಶವನ್ನೂ ಬಿಜೆಪಿ ನೀಡಿಲ್ಲ. ಆದರೆ ವಂದೇ ಮಾತರಂ ಹಾಡಲೇಬೇಕು, ಹಾಡದವರು ದೇಶದ್ರೋಹಿಗಳೆಂದು ಹೇಳಿಕೊಳ್ಳುವವರ ಮಾತಿಗೆ ಕಿವಿಗೊಡುವ ಮುನ್ನ ಈ ಕಾಯ್ದೆಯು ವಾಸ್ತವವಾಗಿ ಏನು ಹೇಳುತ್ತದೆ ಎಂಬುದನ್ನು ಸರಿಯಾಗಿ ಗ್ರಹಿಸುವುದು ಅಗತ್ಯ.

ಕಾಯ್ದೆಯ ತಿದ್ದುಪಡಿಗೊಂಡ 3ನೇ ವಿಭಾಗವು ಎರಡು ಸ್ಪಷ್ಟ ಅಪರಾಧಗಳನ್ನು ಮಾತ್ರ ಶಿಕ್ಷೆಗೆ ಒಳಪಡಿಸುತ್ತದೆ:

  1. ರಾಷ್ಟ್ರಗೀತೆ ಅಥವಾ ರಾಷ್ಟ್ರೀಯ ಗೀತೆಯನ್ನು ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವುದು.
  2. ಗೀತೆ ಗಾಯನದಲ್ಲಿ ನಿರತರಾಗಿರುವ ಸಭೆಗೆ ಅಡ್ಡಿಪಡಿಸುವುದು ಅಥವಾ ಗೊಂದಲ ಉಂಟುಮಾಡುವುದು.

ಮೇಲೆ ಉಲ್ಲೇಖಿಸಿರುವ ಈ ಎರಡು ಅಪರಾಧ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ತಿದ್ದುಪಡಿ ಕಾಯ್ದೆ ಅವಕಾಶ ನೀಡುತ್ತದೆ. ಆದರೆ, ಈ ಕಾಯ್ದೆಯು ಎಲ್ಲೂ ವಂದೇ ಮಾತರಂನ ಆರೂ ಚರಣಗಳನ್ನು ಹಾಡುವುದು ಕಡ್ಡಾಯ ಎಂದಾಗಲಿ ಅಥವಾ ನಾಗರಿಕರು ಕಡ್ಡಾಯವಾಗಿ ಧ್ವನಿಗೂಡಿಸಿ ಹಾಡಲೇಬೇಕು ಎಂದಾಗಲಿ ಹೇಳುವುದಿಲ್ಲ.

ಕಾಯ್ದೆಯ ಪ್ರಕಾರ ಯಾವುದೇ ಸಭೆಯಲ್ಲಿ ಈ ಗೀತೆಯನ್ನು ಹಾಡಲಾಗುತ್ತಿದ್ದರೆ, ಆ ಗಾಯನವನ್ನು ತಡೆಯಬಾರದು ಮತ್ತು ಅಡ್ಡಿಪಡಿಸಬಾರದು. ಅಂದರೆ ಕಾಯ್ದೆಯು ಗಾಯನ ಪ್ರಕ್ರಿಯೆಗೆ ರಕ್ಷಣೆ ನೀಡುತ್ತದೆಯೇ ಹೊರತು, ಪ್ರತಿಯೊಬ್ಬ ಪ್ರಜೆಯೂ ಅದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲೇಬೇಕು ಎಂದು ಬಲವಂತಪಡಿಸುವುದಿಲ್ಲ.

ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂವಿಧಾನದ ಆಶಯ ಮುಖ್ಯ

ವಂದೇ ಮಾತರಂನ ಮೊದಲ ಎರಡು ಚರಣ ಹೊರತುಪಡಿಸಿ 3ರಿಂದ 6ನೇ ಚರಣಗಳು ಸ್ಪಷ್ಟವಾಗಿ ದೇವತಾರಾಧನೆಯ ಸ್ವರೂಪದಲ್ಲಿದೆ. ದೇವತೆಗಳ ಹೆಸರನ್ನು ಒಳಗೊಂಡಿವೆ. ಏಕದೇವೋಪಾಸನೆ ಅಥವಾ ಬೇರೆ ನಂಬಿಕೆಗಳನ್ನು ಅನುಸರಿಸುವ ಇತರೆ ಭಾರತೀಯರು ಅಂದರೆ ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಮೊದಲಾದವರು ತಮ್ಮ ಧಾರ್ಮಿಕ ಚೌಕಟ್ಟನ್ನು ಮೀರಿ ದೇವತಾ ಆರಾಧನೆಯ ಸಾಲುಗಳನ್ನು ಹಾಡುವುದು ಅವರ ಮನಸ್ಸಾಕ್ಷಿಗೆ ವಿರುದ್ಧವಾಗಬಹುದು. ಈ ಸಂದರ್ಭದಲ್ಲಿ ನಾವು ಸಂವಿಧಾನದ ಆಶಯವನ್ನು ಮತ್ತೆ ನೆನೆಯಬೇಕಾಗುತ್ತದೆ. ಸಂವಿಧಾನದ ವಿಧಿ 25 ಮತ್ತು 26 ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಹಾಗೂ ವೈಚಾರಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಖಾತರಿಪಡಿಸುತ್ತವೆ. ಯಾವುದೇ ಸಾಮಾನ್ಯ ಕಾನೂನು ಅಥವಾ ಸಂಸತ್ತಿನ ಕಾಯ್ದೆಯು ಸಂವಿಧಾನದ ಮೂರನೇ ಭಾಗದಲ್ಲಿರುವ ಈ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ.

ಇದನ್ನೂ ಓದಿ: ಗಾಂಧಿ-ಟ್ಯಾಗೋರ್ ಹಾದಿಯಲ್ಲೇ ಪಯಣ: ‘ವಂದೇ ಮಾತರಂ’ 2 ಪ್ಯಾರಾಗಳನ್ನಷ್ಟೇ ಹಾಡಲು ಕಾಂಗ್ರೆಸ್ ನಿರ್ಣಯ

‘ಬಿಜೋಯ್ ಇಮ್ಯಾನ್ಯುವೆಲ್’ ತೀರ್ಪು ಏನು ಹೇಳುತ್ತದೆ?

compelled speech ಅಥವಾ ಬಲವಂತದ ರಾಷ್ಟ್ರಭಕ್ತಿ ಪ್ರದರ್ಶನದ ವಿಷಯ ಬಂದಾಗ 1986ರ ‘ಬಿಜೋಯ್ ಇಮ್ಯಾನ್ಯುವೆಲ್ ವಿರುದ್ಧ ಕೇರಳ ರಾಜ್ಯ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅತ್ಯಂತ ಪ್ರಮುಖ ಮೈಲಿಗಲ್ಲು. ಈ ಪ್ರಕರಣದಲ್ಲಿ, ‘ಜೆಹೋವಾಸ್ ವಿಟ್ನೆಸ್’ (Jehovah’s Witnesses) ಪಂಥಕ್ಕೆ ಸೇರಿದ ಮೂವರು ಮಕ್ಕಳು ಶಾಲೆಯ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ಹಾಡುವಾಗ ಗೌರವಪೂರ್ವಕವಾಗಿ ಎದ್ದು ನಿಂತು ಮೌನವಾಗಿದ್ದರು. ತಮ್ಮ ಧರ್ಮದ ಪ್ರಕಾರ ದೇವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಅಥವಾ ಯಾವುದನ್ನೂ ಆರಾಧಿಸಲು ಅವಕಾಶವಿಲ್ಲದ ಕಾರಣ ಅವರು ಹಾಡಲು ನಿರಾಕರಿಸಿದ್ದರು. ಇದಕ್ಕಾಗಿ ಶಾಲೆಯು ಅವರನ್ನು ಹೊರಹಾಕಿತ್ತು. ಪ್ರಕರಣವನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಒ. ಚಿನ್ನಪ್ಪ ರೆಡ್ಡಿ ಅವರ ಪೀಠವು ಮಹತ್ವದ ತೀರ್ಪು ನೀಡಿತ್ತು.

ಸಂವಿಧಾನದ ವಿಧಿ 19(1)(a) ಅಡಿಯಲ್ಲಿ ಸಿಗುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ‘ಮೌನವಾಗಿರುವ ಹಕ್ಕನ್ನೂ’ ನೀಡುತ್ತದೆ. ಹಾಗೆಯೇ ವಿಧಿ 25(1) ರ ಅಡಿಯಲ್ಲಿ ವ್ಯಕ್ತಿಯ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ನಡೆಯುವ ಹಕ್ಕು ಮೂಲಭೂತವಾದದ್ದು. ಇನ್ನು ವಿಧಿ 51A ನಲ್ಲಿ ಉಲ್ಲೇಖಿಸಲಾದ ಮೂಲಭೂತ ಕರ್ತವ್ಯಗಳನ್ನು (ರಾಷ್ಟ್ರ ಚಿಹ್ನೆಗಳಿಗೆ ಗೌರವ ನೀಡುವುದು) ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಸ್ಪಷ್ಟಪಡಿಸಿದೆ.

ಹಾಗೆಯೇ ರಾಷ್ಟ್ರಗೀತೆಯನ್ನು ಗೌರವಯುತವಾಗಿ ಎದ್ದು ನಿಂತು, ಯಾವುದೇ ಅಡ್ಡಿಪಡಿಸದೆ ಮೌನವಾಗಿ ಆಲಿಸುವುದು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ರಾಷ್ಟ್ರಗೀತೆಗೇ ಈ ನಿಯಮ ಅನ್ವಯವಾಗುವಾಗ, ಸ್ಪಷ್ಟವಾಗಿ ಧಾರ್ಮಿಕ ಸಾಲುಗಳನ್ನು ಹೊಂದಿರುವ ವಂದೇ ಮಾತರಂನ ಗಾಯನದ ಸಂದರ್ಭದಲ್ಲೂ ಇದೇ ತತ್ವ ಸಂಪೂರ್ಣವಾಗಿ ಅನ್ವಯವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಂವಿಧಾನ ಸಭೆಯ ನಿರ್ಧಾರ, 2026ರ ತಿದ್ದುಪಡಿ ಕಾಯ್ದೆಯ ಸ್ಪಷ್ಟ ಸಾಲುಗಳು ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಒಟ್ಟಾಗಿ ಪರಿಶೀಲಿಸಿದಾಗ ಸಿಗುವ ತೀರ್ಮಾನವೊಂದೇ. ಅದೇನೆಂದರೆ 2026ರ ತಿದ್ದುಪಡಿಯು ವಂದೇ ಮಾತರಂ ಗೀತೆಗೆ ಅಡ್ಡಿಪಡಿಸುವುದನ್ನು ಅಪರಾಧವೆಂದು ಪರಿಗಣಿಸುತ್ತದೆಯೇ ಹೊರತು, ಅದನ್ನು ಪ್ರತಿಯೊಬ್ಬರೂ ಹಾಡಲೇಬೇಕೆಂದು ಕಡ್ಡಾಯಗೊಳಿಸುವುದಿಲ್ಲ.

ಹಾಗೆಯೇ ಧಾರ್ಮಿಕ ಅಥವಾ ವೈಚಾರಿಕ ಕಾರಣಗಳಿಂದಾಗಿ ಈ ಗೀತೆಯ ಸಾಲುಗಳನ್ನು ಹಾಡಲು ಇಷ್ಟಪಡದ ನಾಗರಿಕರು, ಗಾಯನ ನಡೆಯುವಾಗ ಗೌರವಯುತವಾಗಿ, ಮೌನವಾಗಿ ನಿಲ್ಲುವ ಮೂಲಕ ತಮ್ಮ ಸಂವಿಧಾನಿಕ ಹಕ್ಕನ್ನು ಚಲಾಯಿಸಬಹುದು. ದೇಶದ ಸಂವಿಧಾನ ಮತ್ತು ಕಾನೂನು ವ್ಯವಸ್ಥೆಯು ನಾಗರಿಕರ ಸಹಿಷ್ಣುತೆ ಮತ್ತು ಧಾರ್ಮಿಕ ಮನಸ್ಸಾಕ್ಷಿಯ ರಕ್ಷಣೆಗೆ ಸಂಪೂರ್ಣ ಬೆಂಬಲವಾಗಿ ನಿಲ್ಲುತ್ತದೆ.

ಮೂಲ: ಹ್ಯಾರಿಸ್ ಬೀರನ್, ರಾಜ್ಯಸಭಾ ಸಂಸದರು ಮತ್ತು ವಕೀಲರು (ದಿ ಹಿಂದೂ)

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ ಬಿದ್ದ ಸಮುದಾಯ ಭವನ

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ...

‌ಬೀದರ್‌ | ಮತದಾನ ಹಕ್ಕು ಕಸಿಯುವ ʼಎಸ್‌ಐಆರ್ʼ ಪ್ರಕ್ರಿಯೆ ವಿರೋಧಿಸಿ ಅ.12ರಂದು ಪ್ರತಿಭಟನೆ

ದೇಶಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಮತದಾರರನ್ನು ಕೈಬಿಡಲಾಗಿರುವುದನ್ನು ಆರೋಪಿಸಿ,...

ವಿಜಯಪುರ | ದಸಂಸ ರಾಜ್ಯ ಸಂಘಟನಾ ಸಂಚಾಲಕಿಯಾಗಿ ಪ್ರತಿಭಾ ಹೊಸಮನಿ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ...

ʼವೋಟ್‌ ಚೋರಿʼ ಆರೋಪಕ್ಕೆ ಪುರಾವೆ ಅಗತ್ಯʼ: ಚುನಾವಣಾ ಆಯೋಗದ ಪರ 124 ನಿವೃತ್ತ ಅಧಿಕಾರಿಗಳ ಪತ್ರ

ಚುನಾವಣಾ ಅಕ್ರಮಗಳ ಆರೋಪಗಳಿಗೆ ವಿಶ್ವಾಸಾರ್ಹ ಪುರಾವೆಗಳು ಅಗತ್ಯ ಎಂದು ಪ್ರತಿಪಾದಿಸಿರುವ 124...