ಪಶ್ಚಿಮ ಬಂಗಾಳದ ಫಾಲ್ತಾ ವಿಧಾನಸಭಾ ಕ್ಷೇತ್ರದ ಮರುಮತದಾನಕ್ಕೆ ಕೇವಲ ಎರಡು ದಿನಗಳು ಬಾಕಿಯಿರುವಾಗಲೇ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಜಹಾಂಗೀರ್ ಖಾನ್ ಅವರು ಮಂಗಳವಾರ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಮೇ 21 ರಂದು ಮರುಮತದಾನ ನಿಗದಿಯಾಗಿದ್ದು, ಈ ಹಂತದಲ್ಲಿ ಅಭ್ಯರ್ಥಿಯ ನಿರ್ಧಾರವು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಫಾಲ್ತಾ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಿರುವುದರಿಂದ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಜಹಾಂಗೀರ್ ಖಾನ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಫಾಲ್ತಾದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು ಹಾಗೂ ಗರಿಷ್ಠ ಅಭಿವೃದ್ಧಿಯನ್ನು ಸಾಧಿಸುವುದು ನನ್ನ ಉದ್ದೇಶ. ನನ್ನ ಕನಸು ‘ಸೋನಾರ್ ಫಾಲ್ತಾ’ ನಿರ್ಮಾಣ ಮಾಡುವುದಾಗಿತ್ತು. ಮುಖ್ಯಮಂತ್ರಿಗಳು ನಮ್ಮ ಕ್ಷೇತ್ರದ ಜನರಿಗೆ ವಿಶೇಷ ಪ್ಯಾಕೇಜ್ ನೀಡುತ್ತಿದ್ದಾರೆ. ಹೀಗಾಗಿ, ಕ್ಷೇತ್ರದ ಅಭಿವೃದ್ಧಿ ಹಾಗೂ ಶಾಂತಿಯ ಹಿತದೃಷ್ಟಿಯಿಂದ ನಾನು ನಾಮಪತ್ರ ಹಿಂಪಡೆಯುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಜಹಾಂಗೀರ್ ಖಾನ್ ಅವರ ಈ ನಡೆಯಿಂದ ಟಿಎಂಸಿ ಪಕ್ಷವು ಅಂತರ ಕಾಯ್ದುಕೊಂಡಿದೆ. “ಇದು ಅವರ ವೈಯಕ್ತಿಕ ನಿರ್ಧಾರವೇ ಹೊರತು ಪಕ್ಷದ್ದಲ್ಲ” ಎಂದು ಟಿಎಂಸಿ ಹೇಳಿಕೆ ಬಿಡುಗಡೆ ಮಾಡಿದೆ. ಮೇ 4ರಂದು ಫಲಿತಾಂಶ ಪ್ರಕಟವಾದಾಗಿನಿಂದ ಫಾಲ್ತಾ ಕ್ಷೇತ್ರವೊಂದರಲ್ಲೇ 100ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಗಿದೆ, ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪಕ್ಷ ಆರೋಪಿಸಿದೆ.
ಇದನ್ನು ಓದಿದ್ದೀರಾ? ‘ನೋಡ್ತಾ ಇರಿ, ಬಂಗಾಳದ ಥರ ಕೇರಳನೂ ಗೆಲ್ತೀವಿ’: ಪ್ರಲ್ಹಾದ್ ಜೋಷಿ ಬಡಾಯಿ!
“ಚುನಾವಣಾ ಆಯೋಗವು ಈ ಬಗ್ಗೆ ಕುರುಡು ಮೌನ ವಹಿಸಿದೆ. ನಮ್ಮ ಬಹುತೇಕ ಕಾರ್ಯಕರ್ತರು ಬಿಜೆಪಿಯ ಬೆದರಿಕೆಯ ವಿರುದ್ಧ ಗಟ್ಟಿಯಾಗಿ ನಿಂತು ಹೋರಾಡುತ್ತಿದ್ದಾರೆ. ಆದರೆ, ಜಹಾಂಗೀರ್ ಖಾನ್ ಅವರು ಆಡಳಿತ ಯಂತ್ರದ ಒತ್ತಡ ಹಾಗೂ ಬೆದರಿಕೆಗೆ ಮಣಿದು ಕಣದಿಂದ ಹಿಂದೆ ಸರಿದಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ” ಎಂದು ಟಿಎಂಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಟಿಎಂಸಿ ಅಭ್ಯರ್ಥಿಯ ನಿರ್ಧಾರವನ್ನು ಲೇವಡಿ ಮಾಡಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, “ಚುನಾವಣಾ ಬೂತ್‌ಗಳಲ್ಲಿ ಕೂರಿಸಲು ಅವರಿಗೆ ಏಜೆಂಟರು ಸಹ ಸಿಗುವುದಿಲ್ಲ ಎಂಬ ಭಯದಿಂದ ಅವರು ಕಣದಿಂದ ಓಡಿಹೋಗಿದ್ದಾರೆ” ಎಂದಿದ್ದಾರೆ.




