ಜೂನ್ 9ರಂದು ‘ಪ್ರೊಪಬ್ಲಿಕಾ’ ಪ್ರಕಟಿಸಿರುವ ತನಿಖಾ ವರದಿಯು ಸ್ಫೋಟಕ ಸಂಗತಿಗಳ ಮೂಲಕ ರಾಜಕಾರಣದ ಕರಾಳ ಮುಖಗಳನ್ನು ಅನಾವರಣ ಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುಟುಂಬ ಮತ್ತು ಅಂಬಾನಿ ಒಡೆತನದ ರಿಲಯನ್ಸ್ ನಡುವಿನ ಕೊಳುಕೊಡುಗೆಗಳು, ಎರಡು ಫ್ಯಾಮಿಲಿಗಳ ನಡುವಿನ ಸ್ವಹಿತಾಸಕ್ತಿಗಳನ್ನು ತೆರೆದಿಟ್ಟಿವೆ. ಅಮೆರಿಕ ಅಧ್ಯಕ್ಷನ ನಿರಂತರ ದಾಳಿಗೆ ಹೆದರಿದ ಅಂಬಾನಿ, ಕನಿಷ್ಠ 100 ಮಿಲಿಯನ್ ಡಾಲರ್ (800+ ಕೋಟಿ ರೂಪಾಯಿ) ಬಂಡವಾಳವನ್ನು ಟ್ರಂಪ್ ಅವರ ಹಿರಿಯ ಮಗನ ಶೇರ್ ಗಳಿರುವ ಕಂಪನಿಗೆ ಹೂಡಿಕೆ ಮಾಡಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನಾದ ಡೊನಾಲ್ಡ್ ಟ್ರಂಪ್ ಜೂನಿಯರ್, ರಹಸ್ಯವಾಗಿ ಶೇರುಗಳನ್ನು ಹೊಂದಿದ್ದ ಟೆಕ್ಸಾಸ್ ಮೂಲದ ಸ್ಟಾರ್ಟ್‌ಅಪ್ ಕಂಪನಿಯ ಹೆಸರು- ‘ಅಮೆರಿಕಾ ಫಸ್ಟ್ ರಿಫೈನಿಂಗ್’ (AFR). ರಿಲಯನ್ಸ್ ಕಂಪನಿ ಹೂಡಿಕೆ ಮಾಡಲು ಹೆಜ್ಜೆ ಇಡುವ ಮುನ್ನ ಎಎಫ್‌ಆರ್ ತೀವ್ರ ಆರ್ಥಿಕ, ಆಡಳಿತಾತ್ಮಕ ಮತ್ತು ಕಾನೂನು ಬಿಕ್ಕಟ್ಟಿನಲ್ಲಿ ಸಿಲುಕಿ ಮುಳುಗುವ ಸ್ಥಿತಿಯಲ್ಲಿತ್ತು. ಗಲ್ಫ್ ಕರಾವಳಿಯ ಪೋರ್ಟ್ ಆಫ್ ಬ್ರೌನ್ಸ್‌ವಿಲ್ಲೆಯಲ್ಲಿ ಬೃಹತ್ ತೈಲ ಸಂಸ್ಕರಣಾಗಾರ ನಿರ್ಮಿಸುವ ಗುರಿ ಹೊಂದಿದ್ದ ಈ ಕಂಪನಿಗೆ, ಹಣ ಹೂಡಲು ಯಾರೂ ಮನಸ್ಸು ಮಾಡಿರಲಿಲ್ಲ. ಬಂಡವಾಳ ಸಂಗ್ರಹಿಸಲು ಸಾಧ್ಯವಾಗದೆ ಕಳೆದ ಹತ್ತು ವರ್ಷಗಳಿಂದ ತೀವ್ರ ಆರ್ಥಿಕ ಕೊರತೆ ಎದುರಿಸುತ್ತಿತ್ತು ಎಎಫ್‌ಆರ್.
ಈ ಕಂಪನಿಯ ಸಿಇಒ ಜಾನ್ ಕ್ಯಾಲ್ಸ್ ಮತ್ತು ಆತನ ಸಂಸ್ಥೆಗಳ ವಿರುದ್ಧ ವಂಚನೆ ಆರೋಪಗಳನ್ನು ಮಾಡಿ ಬೇರೆ ಬೇರೆ ಪಾಲುದಾರರು ಕೋರ್ಟ್‌ಗಳಲ್ಲಿ ಸಾಲು ಸಾಲು ಮೊಕದ್ದಮೆಗಳನ್ನು ಹೂಡಿದ್ದರು. ಒಂದು ಹಂತದಲ್ಲಿ, ಇವರ ವಿರುದ್ಧ ಎಂಟು ಕಂಪನಿಗಳು ಏಕಕಾಲದಲ್ಲಿ ಕಾನೂನು ಸಮರ ಸಾರಿದ್ದವು. ಯೋಜನೆಗಳ ಎಲ್ಲಾ ಗಡುವುಗಳನ್ನು ಸರಣಿಯಾಗಿ ಮಿಸ್ ಮಾಡಿಕೊಂಡಿದ್ದರಿಂದ, ಇಂಧನ ಉದ್ಯಮದ ದೊಡ್ಡ ಹೂಡಿಕೆದಾರರು ಈ ಕಂಪನಿಯಲ್ಲಿ ವಿಶ್ವಾಸ ಕಳೆದುಕೊಂಡಿದ್ದರು. ಹೀಗಿದ್ದಾಗ ಅಂಬಾನಿ ಕಂಪನಿ ಬೃಹತ್ ಬಂಡವಾಳ ಹೂಡಿಕೆ ಮಾಡಿದ್ದು ಏಕೆ?
ಈ ಹಿಂದೆ ಟ್ರಂಪ್ ಮತ್ತು ಅಂಬಾನಿ ಸಂಬಂಧ ಚೆನ್ನಾಗಿಯೇ ಇತ್ತು. 2024ರಲ್ಲಿ ಮುಂಬೈನಲ್ಲಿ ಹಮ್ಮಿಕೊಳ್ಳಲಾಗಿದ್ದ ರಿಯಲ್ ಎಸ್ಟೇಟ್ ಯೋಜನೆಯೊಂದಕ್ಕಾಗಿ ರಿಲಯನ್ಸ್ ಸಂಸ್ಥೆಯು ಟ್ರಂಪ್ ಸಂಸ್ಥೆಗೆ ಬರೋಬ್ಬರಿ 10 ಮಿಲಿಯನ್ ಡಾಲರ್ (ಸುಮಾರು 80+ ಕೋಟಿ ರೂಪಾಯಿ) ಹಣವನ್ನು ‘ಅಭಿವೃದ್ಧಿ ಶುಲ್ಕ’ವಾಗಿ ಪಾವತಿಸಿತ್ತು. ಅದೇ ವರ್ಷ (2024) ಭಾರತದಲ್ಲಿ ನಡೆದ ಅನಂತ್ ಅಂಬಾನಿಯ (ಮುಖೇಶ್ ಅಂಬಾನಿ ಅವರ ಕಿರಿಯ ಮಗ) ಮದುವೆ ಸಂದರ್ಭದಲ್ಲಿ ಪ್ರೀ ವೆಡ್ಡಿಂಗ್ ಪಾರ್ಟಿಗೆ ಡೊನಾಲ್ಡ್ ಟ್ರಂಪ್ ಅವರ ಮಗಳಾದ ಇವಾಂಕಾ ಟ್ರಂಪ್ ಹಾಜರಾಗಿದ್ದರು. ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡಾಗ, ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಅವರ ಅದ್ಧೂರಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮುಖೇಶ್ ಅಂಬಾನಿ ಅವರು ವೈಯಕ್ತಿಕವಾಗಿ ಭಾರತದಿಂದ ತೆರಳಿದ್ದರು. ಅಷ್ಟೇ ಅಲ್ಲದೆ, ಅಲ್ಲಿ ನಡೆದ ಖಾಸಗಿ ಔತಣಕೂಟದಲ್ಲಿ ಭಾಗವಹಿಸಿ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಫೋಟೋಗೆ ಪೋಸ್ ನೀಡಿದ್ದರು. ಹೀಗಿದ್ದ ಟ್ರಂಪ್ ಮತ್ತು ಅಂಬಾನಿ ಕುಟುಂಬದ ನಡುವಿನ ಸಂಬಂಧ ಇತ್ತೀಚೆಗೆ ಹಳಸಿತ್ತು. ಟ್ರಂಪ್ ಅವರ ತಾಳಕ್ಕೆ ತಕ್ಕಂತೆ ಅಂಬಾನಿ ಕಂಪನಿ ಎದ್ದು ಕುಣಿಯಲು ಸಿದ್ಧವಿರಲಿಲ್ಲ. ಟ್ರಂಪ್ ತನ್ನ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಿ, ರಿಲಯನ್ಸ್ ಕಂಪನಿಯು ತನ್ನ ಕುಟುಂಬದ ಹಿತಾಸಕ್ತಿಯ ಮರ್ಜಿಗೆ ಬೀಳುವಂತೆ ನೋಡಿಕೊಂಡಿದ್ದಾರೆ.
2022ರಲ್ಲಿ ರಷ್ಯಾ ದೇಶವು ಉಕ್ರೇನ್ ಮೇಲೆ ಆಕ್ರಮಣ ಮಾಡಿದಾಗಿನಿಂದ, ರಿಲಯನ್ಸ್ ಸಂಸ್ಥೆಯು ರಷ್ಯಾದಿಂದ ಭಾರೀ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು, ಸಂಸ್ಕರಿಸಿ, ಬಿಲಿಯನ್ಗಟ್ಟಲೆ ಡಾಲರ್ ಲಾಭ ಗಳಿಸುತ್ತಿತ್ತು. ಇದರಿಂದ ಕೋಪಗೊಂಡ ಅಧ್ಯಕ್ಷ ಟ್ರಂಪ್, ರಷ್ಯಾದ ಇಂಧನ ಆದಾಯಕ್ಕೆ ತಡೆ ಹಾಕಲು 2025ರ ಆಗಸ್ಟ್‌ನಲ್ಲಿ ಭಾರತದ ಮೇಲಿನ ಸುಂಕಗಳನ್ನು ದಿಢೀರನೆ ಶೇಕಡಾ 50ಕ್ಕೆ ದ್ವಿಗುಣಗೊಳಿಸಿದರು. ರಿಲಯನ್ಸ್ನಂತಹ ಸಂಸ್ಥೆಗಳು ರಷ್ಯಾದಿಂದ ತೈಲ ಖರೀದಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಮಾಡುವುದೇ ಇದರ ನೇರ ಉದ್ದೇಶವಾಗಿತ್ತು.
ಟ್ರಂಪ್ ಅವರ ಶ್ವೇತಭವನದ ಮುಖ್ಯ ವ್ಯಾಪಾರ ಸಲಹೆಗಾರರಾಗಿದ್ದ ಪೀಟರ್ ನವರೊ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿ, “ಭಾರತದ ರಾಜಕೀಯ ಸಂಪರ್ಕ ಹೊಂದಿರುವ ಇಂಧನ ದೈತ್ಯರು ಪುಟಿನ್ ಅವರ ಯುದ್ಧದ ಯಂತ್ರಕ್ಕೆ ಹಣ ಒದಗಿಸುತ್ತಿದ್ದಾರೆ” ಎಂದು ಕಟುವಾಗಿ ವಾಗ್ದಾಳಿ ನಡೆಸಿದ್ದರು. ಇದು ನೇರವಾಗಿ ಅಂಬಾನಿ ಕುಟುಂಬವನ್ನು ಉದ್ದೇಶಿಸಿ ಮಾಡಿದ ಗಂಭೀರ ಜಾಗತಿಕ ಆರೋಪವಾಗಿತ್ತು.
ವೆನೆಜುವೆಲಾ ಮತ್ತು ಇರಾನ್ ದೇಶಗಳ ಮೇಲೆ ಅಮೆರಿಕ ಕಟ್ಟುನಿಟ್ಟಿನ ಆರ್ಥಿಕ ನಿರ್ಬಂಧಗಳನ್ನು ಹೇರಿತ್ತು. ಜಗತ್ತಿನಲ್ಲೇ ಅತಿ ದೊಡ್ಡ ತೈಲ ಶುದ್ಧೀಕರಣ ಘಟಕ ಹೊಂದಿರುವ ರಿಲಯನ್ಸ್ ಸಂಸ್ಥೆಗೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. ಇದರಿಂದಾಗಿ ಆ ದೇಶಗಳಿಂದ ಮುಕ್ತವಾಗಿ ಕಚ್ಚಾ ತೈಲ ಖರೀದಿಸಲು ರಿಲಯನ್ಸ್‌ಗೆ ತಾಂತ್ರಿಕ ಮತ್ತು ಕಾನೂನು ಅಡೆತಡೆಗಳು ಎದುರಾದವು. ಒಂದು ವೇಳೆ ಅಮೆರಿಕದ ಅನುಮತಿ (ಪರವಾನಗಿ) ಇಲ್ಲದೆ ವ್ಯಾಪಾರ ಮುಂದುವರಿಸಿದ್ದರೆ, ರಿಲಯನ್ಸ್ ಸಂಸ್ಥೆಯು ಜಾಗತಿಕವಾಗಿ ಕಪ್ಪುಪಟ್ಟಿಗೆ ಸೇರುವ ಭೀತಿಯಲ್ಲಿತ್ತು.
ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆಯನ್ನು ಆರ್ಥಿಕವಾಗಿ ಹತ್ತಿಕ್ಕಲು ಟ್ರಂಪ್ ಸರ್ಕಾರವು ಸುಂಕದ ಅಸ್ತ್ರ ಹಾಗೂ ಜಾಗತಿಕ ನಿರ್ಬಂಧಗಳ ಮೂಲಕ ಭಾರೀ ಒತ್ತಡ ಹೇರಿತ್ತು. ಇದೇ ಕಾರಣಕ್ಕಾಗಿ, ಉಂಟಾಗಿದ್ದ ಉದ್ವಿಗ್ನತೆಯನ್ನು ‘ಸರಾಗಗೊಳಿಸಲು’ ಮತ್ತು ಟ್ರಂಪ್ ಆಡಳಿತದ ಕೆಂಗಣ್ಣಿಗೆ ಮತ್ತಷ್ಟು ಗುರಿಯಾಗದಿರಲು ಅಂಬಾನಿ ಕುಟುಂಬವು ಏನಾದರೂ ಕೊಡುಗೆಯನ್ನು ನೀಡಲೇಬೇಕಾಯಿತು. ಹೀಗಾಗಿ ಟ್ರಂಪ್ ಜೂನಿಯರ್ ರಹಸ್ಯ ಪಾಲುದಾರಿಕೆ ಹೊಂದಿದ್ದ ಟೆಕ್ಸಾಸ್ ಕಂಪನಿಗೆ ದೊಡ್ಡ ಮೊತ್ತದ ಹೂಡಿಕೆ ಮಾಡಬೇಕಾಗಿ ಬಂತು ಎಂದು ವರದಿ ವಿಶ್ಲೇಷಿಸಿದೆ.
ನವೆಂಬರ್ ವ್ಯವಹಾರ
ಟ್ರಂಪ್ ನೇತೃತ್ವದ ಸರ್ಕಾರವು ಒಂದೆಡೆ ರಿಲಯನ್ಸ್ ವಿರುದ್ಧ ಕಠಿಣ ನಿಲುವು ವಿಧಿಸಿದ್ದ ಅವಧಿಯಲ್ಲೇ ಮತ್ತೊಂದೆಡೆ ಟ್ರಂಪ್ ಫ್ಯಾಮಿಲಿ ಹಿಂಬದಿಯಿಂದ ವ್ಯವಹಾರ ಕುದುರಿಸಲು ಮುಂದಾಯಿತು. 2025ರ ನವೆಂಬರ್‌ನಲ್ಲಿ ಡೊನಾಲ್ಡ್ ಟ್ರಂಪ್ ಜೂನಿಯರ್ ಭಾರತಕ್ಕೆ ಭೇಟಿ ನೀಡಿದಾಗ ಅಂಬಾನಿ ಕುಟುಂಬ ಅವರನ್ನು ಅತ್ಯಂತ ಅದ್ಧೂರಿಯಾಗಿ ಬರಮಾಡಿಕೊಂಡಿತು. ಮುಖೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ಅವರು ಟ್ರಂಪ್ ಜೂನಿಯರ್ ಅವರನ್ನು ತಮ್ಮ ಖಾಸಗಿ ಮೃಗಾಲಯಕ್ಕೆ ಕರೆದೊಯ್ದು ಸುತ್ತಾಡಿಸಿದರು. ಅಷ್ಟೇ ಅಲ್ಲದೆ, ರಾತ್ರಿಯ ಔತಣಕೂಟದಲ್ಲಿ ಇಬ್ಬರೂ ಜೊತೆಯಾಗಿ ಗುಜರಾತಿ ಜಾನಪದ ನೃತ್ಯ (ಗರ್ಬಾ/ದಾಂಡಿಯಾ) ಮಾಡುವ ಮೂಲಕ ವೈಯಕ್ತಿಕ ಮಟ್ಟದಲ್ಲಿ ಸಂಬಂಧವನ್ನು ಗಟ್ಟಿಗೊಳಿಸಿಕೊಂಡರು.
ಟ್ರಂಪ್ ಜೂನಿಯರ್ ಭಾರತದ ಪ್ರವಾಸ ಮುಗಿಸಿ ಅಮೆರಿಕಕ್ಕೆ ಮರಳಿದ ಮುಂದಿನ ವಾರದಲ್ಲೇ, ಟೆಕ್ಸಾಸ್‌ನ ಅಪರಿಚಿತ ತೈಲ ಸಂಸ್ಕರಣಾ ಸ್ಟಾರ್ಟ್ಅಪ್ ಕಂಪನಿಯಾದ ‘ಅಮೆರಿಕಾ ಫಸ್ಟ್ ರಿಫೈನಿಂಗ್’ (AFR) ಪರವಾಗಿ ಕಾಗದಪತ್ರಗಳು ಸಿದ್ಧವಾದವು. ಈ ಕಂಪನಿಯಲ್ಲಿ ಡೊನಾಲ್ಡ್ ಟ್ರಂಪ್ ಜೂನಿಯರ್ ರಹಸ್ಯವಾಗಿ ಷೇರುಗಳನ್ನು ಹೊಂದಿದ್ದರು. ಒಂದು ದಶಕದಿಂದ ಹಣ ಸಿಗದೆ, ಸಾಲದ ಸುಳಿಗೆ ಸಿಲುಕಿ ದಿವಾಳಿಯಾಗಿದ್ದ ಈ ಕಂಪನಿಗೆ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆ ಕನಿಷ್ಠ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿತು.
ಈ ಹೂಡಿಕೆಯ ಒಪ್ಪಂದವು ಕೇವಲ ಸಾಮಾನ್ಯ ಕಾರ್ಪೊರೇಟ್ ವ್ಯವಹಾರವಾಗಿರಲಿಲ್ಲ. ರಿಲಯನ್ಸ್‌ನ ಇಂಧನ ವ್ಯವಹಾರವನ್ನು ನೋಡಿಕೊಳ್ಳುವ ಅನಂತ್ ಅಂಬಾನಿ ಅವರೇ ಸ್ವತಃ ಈ ಟೆಕ್ಸಾಸ್ ರಿಫೈನರಿ ಒಪ್ಪಂದಕ್ಕಾಗಿ ಹಲವು ತಿಂಗಳುಗಳ ಕಾಲ ವೈಯಕ್ತಿಕವಾಗಿ ಕೆಲಸ ಮಾಡಿ, ಒಪ್ಪಂದವು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುವಂತೆ ನೋಡಿಕೊಂಡರು.
ಈ ಒಪ್ಪಂದದ ಮೂಲಕ ಅಂಬಾನಿಯವರು ಜಾಗತಿಕ ಇಂಧನ ಮಾರುಕಟ್ಟೆಗೆ ಒಂದು ಪ್ರಬಲ ಸಂದೇಶ ರವಾನಿಸಿದರು. “ಅಮೆರಿಕದ ನೆಲದಲ್ಲೇ ಬೃಹತ್ ತೈಲ ಸಂಸ್ಕರಣಾಗಾರ ನಿರ್ಮಿಸುವ ಯೋಜನೆಗೆ ನೂರಾರು ಕೋಟಿ ಹೂಡುವ ಭರವಸೆ ನೀಡುವ ಮೂಲಕ, ರಿಲಯನ್ಸ್ ಸಂಸ್ಥೆಯು ಟ್ರಂಪ್ ಅವರ ‘ವೈರಿ’ಯ ಸ್ಥಾನದಿಂದ ‘ಪರಮ ಮಿತ್ರ’ನ ಸ್ಥಾನಕ್ಕೆ ಜಿಗಿಯಿತು” ಎಂದು ಬ್ಲೂಮ್‌ಬರ್ಗ್ ಪತ್ರಿಕೆ ಬಣ್ಣಿಸುತ್ತದೆ. ಅಮೆರಿಕಕ್ಕೆ ಆರ್ಥಿಕ ಲಾಭ ಮಾಡಿಕೊಡುವ ಮೂಲಕ ಟ್ರಂಪ್ ಸರ್ಕಾರದ ಕೋಪವನ್ನು ತಣ್ಣಗಾಗಿಸುವುದು ಇದರ ಮುಖ್ಯ ತಂತ್ರವಾಗಿತ್ತು.
ಈ ಲೇಖನ ಓದಿದ್ದೀರಾ?: ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದತಿ; ಸೋಲುವ ಪಂದ್ಯವನ್ನು ಮೋಸದಿಂದ ಗೆದ್ದ ಬಿಜೆಪಿ!
ಅಂಬಾನಿ ಕುಟುಂಬ ಕೈಗೊಂಡ ಈ ಕಾರ್ಯತಂತ್ರದ ಪರಿಣಾಮವಾಗಿ, ಫೆಬ್ರವರಿ 2026ರ ವೇಳೆಗೆ ಅಮೆರಿಕ ಸರ್ಕಾರವು ಭಾರತದ ಮೇಲಿನ ಸುಂಕಗಳನ್ನು ನಾಟಕೀಯವಾಗಿ ಕಡಿಮೆ ಮಾಡಿತು. ಅಷ್ಟೇ ಅಲ್ಲದೆ, ರಿಲಯನ್ಸ್ ಸಂಸ್ಥೆಗೆ ವೆನೆಜುವೆಲಾದಿಂದ ಕಚ್ಚಾ ತೈಲ ಖರೀದಿಸಲು ವಿಶೇಷ ಪರವಾನಗಿ ಸಿಕ್ಕಿತು ಮತ್ತು ರಷ್ಯಾದ ತೈಲ ಖರೀದಿಯ ಮೇಲಿನ ಕಟ್ಟುನಿಟ್ಟಿನ ನಿರ್ಬಂಧಗಳಿಂದಲೂ ವಿನಾಯಿತಿ ದೊರೆಯಿತು.
ಅಂತಿಮವಾಗಿ ಮಾರ್ಚ್ 2026 ರಲ್ಲಿ, ಸ್ವತಃ ಅಧ್ಯಕ್ಷ ಟ್ರಂಪ್ ಅವರೇ ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಅಂಬಾನಿ ಕಂಪನಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಮೂಲಕ ಅಂಬಾನಿ ಕುಟುಂಬವು ಟ್ರಂಪ್ ದಾಳಿಯನ್ನು ತಡೆದು ತನ್ನ ಇಂಧನ ಸಾಮ್ರಾಜ್ಯವನ್ನು ಸಂಪೂರ್ಣವಾಗಿ ರಕ್ಷಿಸಿಕೊಂಡಿತು ಎಂದು ಪ್ರೊಪಬ್ಲಿಕಾ ವರದಿ ವಿವರಿಸುತ್ತದೆ.
ಆರೋಪ ನಿರಾಕರಣೆ
ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ವಕ್ತಾರರು ಈ ವ್ಯವಹಾರವನ್ನು ನಿರಾಕರಿಸಿದ್ದಾರೆ. “ಟ್ರಂಪ್ ಜೂನಿಯರ್ ಅವರು ಅಮೆರಿಕಾ ಫಸ್ಟ್ ರಿಫೈನಿಂಗ್ (AFR) ಕಂಪನಿಯಲ್ಲಿ ಕೇವಲ ಒಬ್ಬ ನಿಷ್ಕ್ರಿಯ ಅಲ್ಪಸಂಖ್ಯಾತ ಹೂಡಿಕೆದಾರರಾಗಿದ್ದಾರೆ ಮತ್ತು ಕಂಪನಿಯ ದೈನಂದಿನ ಯಾವುದೇ ಕಾರ್ಯಾಚರಣೆಯ ಪಾತ್ರದಲ್ಲಿ ಅವರು ಭಾಗಿಯಾಗಿಲ್ಲ. ಯಾವುದೇ ಹೂಡಿಕೆಗಾಗಿ ಸರ್ಕಾರವನ್ನು ಬಳಸಿಕೊಂಡಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಇತ್ತ ಭಾರತದ ರಿಲಯನ್ಸ್ ಸಂಸ್ಥೆಯೂ ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದೆ. “ರಿಲಯನ್ಸ್ ಮಾಡಿದ ಈ ಹೂಡಿಕೆಗೂ ಮತ್ತು ಅಮೆರಿಕ ಸರ್ಕಾರವು ಸುಂಕ ಕಡಿತಗೊಳಿಸಿದ ಅಥವಾ ತೈಲ ಖರೀದಿಗೆ ಪರವಾನಗಿ ನೀಡಿದ ನಿರ್ಧಾರಗಳಿಗೂ ಯಾವುದೇ ಸಂಬಂಧವಿಲ್ಲ. ಈ ಹೂಡಿಕೆಯನ್ನು ಕೇವಲ ವಾಣಿಜ್ಯ ಅರ್ಹತೆ, ಕಾರ್ಯತಂತ್ರದ ಹೊಂದಾಣಿಕೆ ಮತ್ತು ಭವಿಷ್ಯದ ಮೌಲ್ಯ ಸೃಷ್ಟಿಯ ಆಧಾರದ ಮೇಲೆ ಮಾಡಲಾಗಿದೆ” ಎಂದು ರಿಲಯನ್ಸ್ ತಿಳಿಸಿದೆ.
ಟೆಕ್ಸಾಸ್ ಸಂಸ್ಥೆಯು ಈ ವರದಿಯ ಎಲ್ಲ ಅಂಶಗಳು ‘ಸುಳ್ಳು’ ಎಂದು ಜರಿದಿದೆ. “ಈ ಒಪ್ಪಂದದಲ್ಲಿ ಯಾವುದೇ ರೀತಿಯ ಹಿತಾಸಕ್ತಿಗಳ ಸಂಘರ್ಷ ನಡೆದಿಲ್ಲ” ಎಂದು ವೈಟ್ ಹೌಸ್ ಪ್ರತಿಕ್ರಿಯಿಸಿದೆ. ಆದರೆ ಈ ಒಪ್ಪಂದವು ಕೇವಲ ಒಂದು ಸಾಮಾನ್ಯ ವಾಣಿಜ್ಯ ವ್ಯವಹಾರವಾಗಿ ಕಂಡುಬರುತ್ತಿಲ್ಲ. ಹತ್ತು ವರ್ಷಗಳಿಂದ ಹೂಡಿಕೆ ಸಿಗದೆ ಮುಳುಗುತ್ತಿದ್ದ ಕಂಪನಿಗೆ ಅಂಬಾನಿ ಕುಟುಂಬವು 100 ಮಿಲಿಯನ್ ಡಾಲರ್ ನಷ್ಟು ಬೃಹತ್ ಬಂಡವಾಳ ಹೂಡಿದ್ದು ಹೇಗೆ? ರಿಲಯನ್ಸ್ ಸಂಸ್ಥೆಗೆ ಪೂರಕವಾದ ಅಮೆರಿಕದ ವಿದೇಶಾಂಗ ನೀತಿಗಳು ಜಾರಿಯಾಗಿದ್ದು ಆಕಸ್ಮಿಕವೇ? – ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಅಪಾರ ಪಾಂಡಿತ್ಯವೇನೂ ಬೇಕಿಲ್ಲ.
ರಾಜಕೀಯ ಅಧಿಕಾರ ಮತ್ತು ದೊಡ್ಡ ಇಂಧನ ಉದ್ಯಮಗಳು ಒಂದಾದಾಗ ಏನಾಗುತ್ತದೆ ಎಂಬುದಕ್ಕೆ ಈ ವಿದ್ಯಮಾನ ಕ್ಲಾಸಿಕ್ ಉದಾಹರಣೆ. ನಾಯಕರ ವೈಯಕ್ತಿಕ ಒಪ್ಪಂದಗಳು ದೇಶದ ಅಧಿಕೃತ ನಿರ್ಧಾರಗಳ ಮೇಲೆಯೇ ಪ್ರಭಾವ ಬೀರಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ಒಪ್ಪಂದವನ್ನು ಟ್ರಂಪ್ ಸರ್ಕಾರವು ‘ಅಮೆರಿಕದ ಆರ್ಥಿಕತೆಗೆ ಸಿಕ್ಕ ಜಯ’ ಎಂದು ಕರೆಯುತ್ತಿದೆ. ಆದರೆ ವಿಮರ್ಶಕರು ಇದನ್ನು ‘ಅಧಿಕಾರ ದುರ್ಬಳಕೆ ಮತ್ತು ಕುಟುಂಬ ರಾಜಕಾರಣದ ಪರಮಾವಧಿ’ ಎಂದು ಟೀಕಿಸುತ್ತಿದ್ದಾರೆ.



