ಅಂಬೇಡ್ಕರ್ ಅವರಿಗೆ 1947ರ ಆಗಸ್ಟ್ 15 ಅಂತಿಮ ಗುರಿಯಾಗಿರಲಿಲ್ಲ. ಅದು ಹೊಸ ಪ್ರಯಾಣದ ಆರಂಭವಾಗಿತ್ತು. ರಾಜಕೀಯ ಸ್ವಾತಂತ್ರ್ಯವನ್ನು ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವಾಗಿ ಪರಿವರ್ತಿಸುವುದೇ ಅವರ ದೃಷ್ಟಿಯಲ್ಲಿ ಸ್ವಾತಂತ್ರ್ಯದ ಪೂರ್ಣತೆಯಾಗಿತ್ತು. ಆ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕಾಂಗ್ರೆಸ್ ನಾಯಕರ ಮಾದರಿಯಂತೆ ಅಳೆಯುವುದಕ್ಕಿಂತ, ಭಾರತೀಯ ಸ್ವಾತಂತ್ರ್ಯದ ಅರ್ಥವನ್ನೇ ವಿಸ್ತರಿಸಿದ ನಾಯಕ ಎಂದು ನೋಡುವುದು ಹೆಚ್ಚು ಸಮರ್ಪಕ.
ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತು ಮಾತನಾಡುವಾಗ ಸಾಮಾನ್ಯವಾಗಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾ಼ದ್, ಚಂದ್ರಶೇಖರ್ ಆಜಾ಼ದ್ ಸೇರಿದಂತೆ ಬಹುತೇಕರ ಹೆಸರುಗಳು ಮುಂಚೂಣಿಗೆ ಬರುತ್ತವೆ. ಈ ಹೋರಾಟವನ್ನು ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸುವುದಕ್ಕಾಗಿ ನಡೆದ ಅಸಹಕಾರ, ಸತ್ಯಾಗ್ರಹ, ನಾಗರಿಕ ಅಸಹಕಾರ, ಕ್ವಿಟ್ ಇಂಡಿಯಾದಂತಹ ಹಲವಾರು ಚಳವಳಿಗಳ ದೃಷ್ಟಿಯಿಂದ ಮಾತ್ರ ನೋಡಿದರೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ವಿಭಿನ್ನವಾಗಿ ಕಾಣಿಸುತ್ತದೆ. ಅವರು ಕಾಂಗ್ರೆಸ್ ನೇತೃತ್ವದ ಪ್ರಮುಖ ಬ್ರಿಟಿಷ್ ವಿರೋಧಿ ಜನಾಂದೋಲನಗಳ ನಾಯಕರಾಗಿರಲಿಲ್ಲ. ಕೆಲವು ಸಂದರ್ಭಗಳಲ್ಲಿ ಅವುಗಳ ಕಾರ್ಯತಂತ್ರವನ್ನೇ ಅಂಬೇಡ್ಕರ್ ಕಟುವಾಗಿ ಟೀಕಿಸಿದ್ದರು.
ಆದರೆ, ಸ್ವಾತಂತ್ರ್ಯವೆಂದರೆ ಕೇವಲ ವಿದೇಶಿ ಆಡಳಿತಗಾರ ದೇಶ ಬಿಟ್ಟು ಹೋಗುವುದೇ? ಅಥವಾ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಸಮಾನ ನಾಗರಿಕನಾಗಿ ಬದುಕುವ ಹಕ್ಕು ಪಡೆಯುವುದೂ ಸ್ವಾತಂತ್ರ್ಯದ ಭಾಗವೇ? ಎಂಬುದನ್ನು ಕೇಂದ್ರದಲ್ಲಿಟ್ಟುಕೊಂಡಾಗ ಅಂಬೇಡ್ಕರ್‌ರ ಕೊಡುಗೆ ಭಾರತೀಯ ಸ್ವಾತಂತ್ರ್ಯ ಹೋರಾಟದ ಮತ್ತೊಂದು ಅತ್ಯಂತ ಮಹತ್ವದ ಧಾರೆಯಾಗಿ ಕಾಣಿಸುತ್ತದೆ. ಕೊಲಂಬಿಯಾ ವಿಶ್ವವಿದ್ಯಾಲಯದ ಅಂಬೇಡ್ಕರ್ ಕುರಿತ ದಾಖಲೆಗಳೂ ಅವರನ್ನು ವಸಾಹತು ಭಾರತದಲ್ಲಿ ದಲಿತರ ಹಕ್ಕುಗಳು ಮತ್ತು ಸಾಮಾಜಿಕ ಮಾನ್ಯತೆಗಾಗಿ ಸ್ವತಂತ್ರ ರಾಜಕೀಯ ಹೋರಾಟವನ್ನು ಕಟ್ಟಿದ ಪ್ರಮುಖ ನಾಯಕನೆಂದು ಗುರುತಿಸುತ್ತವೆ.
ಅಂಬೇಡ್ಕರ್‌ರ ರಾಜಕೀಯ ಚಿಂತನೆಯಲ್ಲಿದ್ದ ‘ಯಾರಿಗೆ ಸ್ವಾತಂತ್ರ್ಯ?’ ಎಂಬ ಪ್ರಶ್ನೆ ಬಹಳ ಸರಳವಾದರೂ ಆ ಕಾಲದ ರಾಷ್ಟ್ರೀಯ ರಾಜಕಾರಣಕ್ಕೆ ಅತ್ಯಂತ ಅಸೌಕರ್ಯಕರವಾಗಿತ್ತು: ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದರೆ ಸಾಕೇ, ಅಥವಾ ಭಾರತದೊಳಗಿನ ಶೋಷಿತ ಜನರಿಗೂ ಸ್ವಾತಂತ್ರ್ಯ ಸಿಗಬೇಕೇ? ಎನ್ನುವ ಪ್ರಶ್ನೆಯನ್ನು ಈ ಭಾರತೀಯ ಸಮಾಜದಿಂದ ಅವರಿಗಾದ ಅನುಭವವೇ ಹುಟ್ಟುಹಾಕಿತ್ತು. ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದಲ್ಲಿ ಒಂದು ಕಡೆ ಭಾರತೀಯರು ವಿದೇಶಿ ಸಾಮ್ರಾಜ್ಯದ ಅಧೀನದಲ್ಲಿದ್ದರು. ಇನ್ನೊಂದು ಕಡೆ ಭಾರತದ ಕೋಟ್ಯಂತರ ದಲಿತರು ತಮ್ಮದೇ ಸಮಾಜದಲ್ಲಿ ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟು ಸಾರ್ವಜನಿಕ ಬಾವಿಯಿಂದ ನೀರು ಕುಡಿಯಲು, ಶಾಲೆಗೆ ಹೋಗಲು, ದೇವಸ್ಥಾನ ಪ್ರವೇಶಿಸಲು, ಸಾರ್ವಜನಿಕ ಸ್ಥಳಗಳನ್ನು ಬಳಸಲು ಮತ್ತು ಗೌರವಯುತವಾಗಿ ಬದುಕಲೂ ಕೂಡ ಅವಕಾಶವಿಲ್ಲದ ಸ್ಥಿತಿಯಲ್ಲಿದ್ದರು.
This video cannot be played in your browser. Open the video directly
ಹೀಗಿರುವಾಗ ಬ್ರಿಟಿಷರು ಹೊರಟುಹೋದರೆ ಮಾತ್ರ ದಲಿತನ ಜೀವನದಲ್ಲಿ ನಿಜವಾದ ಸ್ವಾತಂತ್ರ್ಯ ಬರಬಹುದೇ? ಎಂಬುದು ಅಂಬೇಡ್ಕರ್‌ರನ್ನು ಕಾಡುತ್ತಿತ್ತು. ಅದಕ್ಕಾಗಿಯೇ ರಾಜಕೀಯ ಸುಧಾರಣೆಗೆ ಮುಂಚೆ ಅಥವಾ ಅದರ ಜತೆಯಲ್ಲಿಯೇ ಸಾಮಾಜಿಕ ಪುನರ್‌ರಚನೆ ಅಗತ್ಯವೆಂದು ಅವರು ಪ್ರತಿಪಾದಿಸಿದರು. ಅವರ Annihilation of Caste(ಜಾತಿ ವಿನಾಶ) ಕೃತಿಯ ಚಿಂತನೆಯನ್ನೇ ಉಲ್ಲೇಖಿಸುವುದಾದರೆ, ರಾಜಕೀಯ ಸುಧಾರಣೆಯನ್ನು ಸಾಮಾಜಿಕ ಸುಧಾರಣೆಯಿಂದ ಬೇರ್ಪಡಿಸಲಾಗುವುದಿಲ್ಲ ಎಂಬುದಕ್ಕೆ ಅಂಬೇಡ್ಕರ್ ಅವರ ದಾಖಲೆಗಳೇ ಹೇಳುತ್ತವೆ.
ಅಂದರೆ, ಗಾಂಧಿ ನೇತೃತ್ವದ ರಾಷ್ಟ್ರೀಯ ಚಳವಳಿಗೆ ಬ್ರಿಟಿಷ್ ಸಾಮ್ರಾಜ್ಯ ಪ್ರಮುಖ ಎದುರಾಳಿಯಾಗಿದ್ದರೆ, ಅಂಬೇಡ್ಕರ್‌ರ ಹೋರಾಟಕ್ಕೆ ಸಾಮ್ರಾಜ್ಯಶಾಹಿಯ ಜತೆಗೆ ಜಾತಿ ವ್ಯವಸ್ಥೆಯೂ ಒಂದು ಅಧಿಕಾರ ವ್ಯವಸ್ಥೆಯಾಗಿತ್ತು.
ಮತದಾನದ ಹಕ್ಕಿನಿಂದ ಆರಂಭವಾದ ರಾಜಕೀಯ ಹೋರಾಟ
ಅಂಬೇಡ್ಕರ್‌ರ ರಾಜಕೀಯ ಪ್ರವೇಶವನ್ನು ನೋಡಿದರೆ ಆರಂಭದಿಂದಲೇ ಅವರು ಶೋಷಿತ ಸಮುದಾಯಗಳಿಗೆ ಸ್ವತಂತ್ರ ರಾಜಕೀಯ ಧ್ವನಿ ಸಿಗಬೇಕೆಂದು ಬಯಸಿದ್ದದ್ದು ಸ್ಪಷ್ಟವಾಗುತ್ತದೆ.
ಭಾರತದ ಚುನಾವಣಾ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸುತ್ತಿದ್ದ ಸೌತ್‌ಬರೋ ಸಮಿತಿಯ ಮುಂದೆ ಅವರು ಮತದಾನದ ಹಕ್ಕು ಮತ್ತು ರಾಜಕೀಯ ಪ್ರತಿನಿಧಿತ್ವದ ಪ್ರಶ್ನೆಯನ್ನು ಎತ್ತಿದರು. ಸುಪ್ರೀಂ ಕೋರ್ಟ್ ಪ್ರಕಟಿಸಿರುವ ಅವರ ಜೀವನಚರಿತ್ರೆಯ ಪ್ರಕಾರ, ಅವರು ಈ ಅವಧಿಯಲ್ಲೇ ಸಾರ್ವತ್ರಿಕ ವಯಸ್ಕ ಮತದಾನದ ಪರವಾಗಿ ಅಭಿಪ್ರಾಯ ಸಲ್ಲಿಸಿದ್ದರು ಎಂಬುದ್ದು ಗಮನಾರ್ಹ. ಇದು ಮಹತ್ವದ ಸಂಗತಿ. ಏಕೆಂದರೆ ಆ ಕಾಲದಲ್ಲಿ ಮತದಾನದ ಹಕ್ಕು ಆಸ್ತಿ, ಆದಾಯ, ಶಿಕ್ಷಣ ಮೊದಲಾದ ಅರ್ಹತೆಗಳಿಗೆ ಸೀಮಿತವಾಗಿತ್ತು. ಆದರೆ ಅಂಬೇಡ್ಕರ್‌ರಿಗೆ ಪ್ರಜಾಪ್ರಭುತ್ವ ಎಂದರೆ ಮೇಲ್ವರ್ಗದ ವಿದ್ಯಾವಂತರ ಆಡಳಿತವಲ್ಲ; ಸಮಾಜದ ಕಟ್ಟ-ಕಡೆಯ ವ್ಯಕ್ತಿಗೂ ರಾಜಕೀಯ ಶಕ್ತಿ ದೊರೆಯುವ ವ್ಯವಸ್ಥೆಯಾಗಿತ್ತು.
ಅವರ ಪ್ರಸಿದ್ಧ ಘೋಷಣೆಗಳಲ್ಲಿರುವ “Educate, Agitate, Organise”(ಶಿಕ್ಷಣ ಪಡೆಯಿರಿ, ಹೋರಾಡಿರಿ, ಸಂಘಟಿತರಾಗಿರಿ) ಎಂಬ ಆಶಯವೂ ಇದೇ ರಾಜಕೀಯ ದೃಷ್ಟಿಯ ಮುಂದುವರೆದಿದೆ.
ಸ್ವಾತಂತ್ರ್ಯ ಹೋರಾಟದೊಳಗಿನ ಮತ್ತೊಂದು ಸ್ವಾತಂತ್ರ್ಯ ಹೋರಾಟ ಮಹಾಡ್ ಸತ್ಯಾಗ್ರಹ
1927ರ ಮಹಾಡ್ ಸತ್ಯಾಗ್ರಹ ಅಂಬೇಡ್ಕರ್‌ರ ರಾಜಕೀಯ ಜೀವನದ ತಿರುವಾಯಿತು. ಮಹಾರಾಷ್ಟ್ರದ ಮಹಾಡ್ ಪಟ್ಟಣದಲ್ಲಿದ್ದ ಚಾವ್ದಾರ್ ಕೆರೆ ಸಾರ್ವಜನಿಕ ಸಂಪನ್ಮೂಲವಾಗಿದ್ದರೂ ದಲಿತರಿಗೆ ಅದರಿಂದ ನೀರು ಕುಡಿಯಲು ಅವಕಾಶವಿರಲಿಲ್ಲ. ಹಾಗಾಗಿ ಅಂಬೇಡ್ಕರ್ ಅವರು ಸಾವಿರಾರು ದಲಿತರೊಂದಿಗೆ ಕೆರೆಯತ್ತ ತೆರಳಿ, ಕೆರೆಯ ನೀರು ಕುಡಿಯುವ ಮೂಲಕ ಮಾನವ ಸಮಾನತೆಯನ್ನು ಘೋಷಿಸಿದರು.
ಸುಪ್ರೀಂ ಕೋರ್ಟ್‌ನ ಅಧಿಕೃತ ದಾಖಲೆಯ ಪ್ರಕಾರ, 1927ರ ಮಾರ್ಚ್ 20ರಂದು ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಚಾವ್ದಾರ್ ಕೆರೆಯ ನೀರನ್ನು ಕುಡಿಯುವ ಮೂಲಕ ಸಾರ್ವಜನಿಕ ಸಂಪನ್ಮೂಲಗಳ ಮೇಲಿನ ಸಮಾನ ಹಕ್ಕನ್ನು ಪ್ರತಿಪಾದಿಸಿದರು. ನಂತರ ಡಿಸೆಂಬರ್‌ನಲ್ಲಿ ನಡೆದ ಸಮಾವೇಶದಲ್ಲಿ ಮನುಸ್ಮೃತಿಯ ಪ್ರತಿಯನ್ನು ದಹಿಸುವ ಮೂಲಕ ಜಾತಿ ಅಸಮಾನತೆಯನ್ನು ನ್ಯಾಯೀಕರಿಸುವ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿರುವುದು ಉಲ್ಲೇಖನೀಯ.
ಈ ಸತ್ಯಾಗ್ರಹದ ಅರ್ಥ ಕೇವಲ “ನೀರು ಕುಡಿಯುವ ಹಕ್ಕು” ಅಲ್ಲ. ʼನಾವೂ ಮನುಷ್ಯರು; ಸಾರ್ವಜನಿಕ ಬದುಕಿನಲ್ಲಿ ನಮಗೂ ಸಮಾನ ಸ್ಥಾನವಿದೆ” ಎಂಬ ನಾಗರಿಕ ಹಕ್ಕಿನ ಘೋಷಣೆ. ಇದರಿಂದ ಬ್ರಿಟಿಷರ ವಿರುದ್ಧ ಉಪ್ಪಿನ ಸತ್ಯಾಗ್ರಹ ಹೇಗೆ ವಸಾಹತುಶಾಹಿ ಅಧಿಕಾರಕ್ಕೆ ಸವಾಲು ಹಾಕಿತೋ, ಮಹಾಡ್ ಸತ್ಯಾಗ್ರಹ ಭಾರತೀಯ ಸಮಾಜದೊಳಗಿನ ಜಾತಿ ಅಧಿಕಾರಕ್ಕೆ ಸವಾಲು ಹಾಕಿತು ಎಂಬುದು ಇದರಿಂದ ತಿಳಿಯುತ್ತದೆ.
ಮುಂದೆ ನಾಸಿಕ್‌ನ ಕಾಳರಾಮ ದೇವಸ್ಥಾನ ಪ್ರವೇಶ ಚಳವಳಿ ಸೇರಿದಂತೆ ಹಲವು ಹೋರಾಟಗಳ ಮೂಲಕ ಅಂಬೇಡ್ಕರ್ ಸಾಮಾಜಿಕ ಸಮಾನತೆಯನ್ನು ಸಾರ್ವಜನಿಕ ರಾಜಕೀಯದ ಕೇಂದ್ರಕ್ಕೆ ತಂದರು.
ಕಾಂಗ್ರೆಸ್‌ನಿಂದ ಸ್ವತಂತ್ರವಾದ ದಲಿತ ರಾಜಕೀಯ ಏಕೆ?
ದಲಿತರ ಭವಿಷ್ಯವನ್ನು ಕಾಂಗ್ರೆಸ್, ಹಿಂದೂ ಮೇಲ್ವರ್ಗ ಅಥವಾ ಬ್ರಿಟಿಷ್ ಸರ್ಕಾರ ಯಾರೊಬ್ಬರ ಕೃಪೆಗೂ ಒಪ್ಪಿಸಬಾರದು ಎಂಬುದು ಅಂಬೇಡ್ಕರ್‌ರ ಪ್ರಮುಖ ರಾಜಕೀಯ ನಿಲುವುಗಳಲ್ಲಿ ಒಂದು.
1930ರ ನಾಗಪುರದ Depressed Classes Congress(ಶೋಷಿತ ವರ್ಗಗಳ ಕಾಂಗ್ರೆಸ್)ನಲ್ಲಿ ಅವರು ಒಂದೆಡೆ ಬ್ರಿಟಿಷ್ ವಸಾಹತು ಆಡಳಿತದ ದುಷ್ಪರಿಣಾಮಗಳನ್ನೂ ಟೀಕಿಸಿದರು; ಇನ್ನೊಂದೆಡೆ ದಲಿತರು ಸರ್ಕಾರ ಮತ್ತು ಕಾಂಗ್ರೆಸ್ ಎರಡರಿಂದಲೂ ರಾಜಕೀಯವಾಗಿ ಸ್ವತಂತ್ರವಾಗಿ ಸಂಘಟಿಸಿಕೊಳ್ಳಬೇಕೆಂತಲೂ ಹೇಳಿದರು. ಕೊಲಂಬಿಯಾ ವಿಶ್ವವಿದ್ಯಾಲಯದ ಅಂಬೇಡ್ಕರ್ ಕಾಲರೇಖೆಯೂ ಈ ನಿಲುವನ್ನು ದಾಖಲಿಸಿದೆ. ಇಲ್ಲಿಯೇ ಅಂಬೇಡ್ಕರ್ ಮತ್ತು ಕಾಂಗ್ರೆಸ್ ನಾಯಕತ್ವದ ನಡುವೆ ಮೂಲಭೂತ ವ್ಯತ್ಯಾಸ ಕಾಣಿಸುತ್ತದೆ.
ʼಕಾಂಗ್ರೆಸ್ ತನ್ನನ್ನು ಭಾರತದ ಜನರ ರಾಷ್ಟ್ರೀಯ ಪ್ರತಿನಿಧಿಯಾಗಿ ಕಂಡರೂ ದಲಿತರು ತಮ್ಮ ಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡದಿದ್ದರೆ, ಮೇಲ್ಜಾತಿಯ ಬಹುಮತ ಆಯ್ಕೆ ಮಾಡುವ ವ್ಯಕ್ತಿಯೇ ಅವರ ನಿಜವಾದ ಪ್ರತಿನಿಧಿಯಾಗಲು ಹೇಗೆ ಸಾಧ್ಯʼ ಎಂಬುದನ್ನು ಅಂಬೇಡ್ಕರ್ ಪ್ರಶ್ನಿಸಿದ್ದರು. ಇದು ಅವರ ಮುಂದಿನ ರಾಜಕೀಯ ಹೋರಾಟದ ಕೇಂದ್ರ ವಿಷಯವಾಯಿತು.
ಸೈಮನ್ ಆಯೋಗ ಮತ್ತು ಅಂಬೇಡ್ಕರ್
1928ರಲ್ಲಿ ಭಾರತೀಯ ಸಂವಿಧಾನಾತ್ಮಕ ಸುಧಾರಣೆಗಳನ್ನು ಪರಿಶೀಲಿಸಲು ಬಂದ ಸೈಮನ್ ಆಯೋಗದ ಮುಂದೆ ಅಂಬೇಡ್ಕರ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ನಂತರ 1930–32ರ ಲಂಡನ್ ದುಂಡುಮೇಜಿನ ಸಮ್ಮೇಳನಗಳಲ್ಲಿಯೂ ಅವರು ಶೋಷಿತ ವರ್ಗಗಳ ಪ್ರತಿನಿಧಿಯಾಗಿ ಭಾಗವಹಿಸಿದರು. ಇದನ್ನೇ ನಂತರದ ಕಾಲದಲ್ಲಿ ಅಂಬೇಡ್ಕರ್ ವಿರೋಧಿಗಳು ʼಅವರು ಬ್ರಿಟಿಷರೊಂದಿಗೆ ಕೆಲಸ ಮಾಡಿದರುʼ ಎಂಬ ಆರೋಪಕ್ಕೆ ಬಳಸಿಕೊಂಡರು.
ಆದರೆ ಅಂಬೇಡ್ಕರ್‌ರ ದೃಷ್ಟಿಯಲ್ಲಿ ಪ್ರಶ್ನೆ ಬೇರೆಯೇ ಇತ್ತು. ಭಾರತಕ್ಕೆ ರೂಪುಗೊಳ್ಳಲಿರುವ ಯಾವುದೇ ಹೊಸ ಆಡಳಿತ ವ್ಯವಸ್ಥೆಯಲ್ಲಿ ದಲಿತರಿಗೆ ರಾಜಕೀಯ ಭದ್ರತೆ ಇಲ್ಲದಿದ್ದರೆ, ಬ್ರಿಟಿಷ್ ಆಡಳಿತದ ಜಾಗದಲ್ಲಿ ಸಾಮಾಜಿಕವಾಗಿ ಪ್ರಬಲ ಜಾತಿಗಳ ಆಡಳಿತ ಬಂದರೂ ದಲಿತರ ಪರಿಸ್ಥಿತಿ ಮೂಲಭೂತವಾಗಿ ಬದಲಾಗುವುದಿಲ್ಲ ಎಂಬುದು ಅವರ ಆತಂಕವಾಗಿತ್ತು.
ಹೀಗಾಗಿ ಬ್ರಿಟಿಷರೊಂದಿಗೆ ನಡೆದ ಸಂವಿಧಾನಾತ್ಮಕ ಮಾತುಕತೆಯ ವೇದಿಕೆಯನ್ನು ಅವರು ಬ್ರಿಟಿಷ್ ಆಳ್ವಿಕೆಯನ್ನು ಶಾಶ್ವತಗೊಳಿಸುವುದಕ್ಕಾಗಿ ಅಲ್ಲ, ಸ್ವತಂತ್ರ ಭಾರತದ ಭವಿಷ್ಯದ ಅಧಿಕಾರ ಹಂಚಿಕೆಯಲ್ಲಿ ಅಸ್ಪೃಶ್ಯ ಸಮುದಾಯಗಳ ಸ್ಥಾನವನ್ನು ಖಚಿತಪಡಿಸಲು ಬಳಸಿದರು ಎಂಬುದು ಅವರ ರಾಜಕೀಯದ ಸ್ವರೂಪವನ್ನು ಹೆಚ್ಚು ಸಮರ್ಪಕವಾಗಿ ವಿವರಿಸುತ್ತದೆ.
ದುಂಡುಮೇಜಿನ ಸಮ್ಮೇಳನ: ಭಾರತ ಮಾತ್ರವಲ್ಲ, ‘ದಲಿತ ಭಾರತ’ದ ಧ್ವನಿ
1930ರಿಂದ 1932ರವರೆಗೆ ಲಂಡನ್‌ನಲ್ಲಿ ನಡೆದ ದುಂಡುಮೇಜಿನ ಸಮ್ಮೇಳನಗಳು ಅಂಬೇಡ್ಕರ್‌ರನ್ನು ಅಖಿಲ ಭಾರತೀಯ ಮಟ್ಟದ ನಾಯಕನನ್ನಾಗಿಸಿದವು. ಅಲ್ಲಿ ಅಂಬೇಡ್ಕರ್, Depressed Classes ಎಂದು ಕರೆಯಲ್ಪಡುತ್ತಿದ್ದ ದಲಿತರಿಗೆ ಪ್ರತ್ಯೇಕ ರಾಜಕೀಯ ಪ್ರತಿನಿಧಿತ್ವ ಬೇಕೆಂದು ಬಲವಾಗಿ ವಾದಿಸಿದರು. ಏಕೆಂದರೆ, ರಾಜಕೀಯ ಶಕ್ತಿಯಿಲ್ಲದೆ ಸಾಮಾಜಿಕವಾಗಿ ಶೋಷಿತ ವರ್ಗಗಳು ಮೇಲ್ಜಾತಿ ಪ್ರಾಬಲ್ಯದಿಂದ ಮುಕ್ತರಾಗಲು ಸಾಧ್ಯವಿಲ್ಲ ಎಂಬುದನ್ನು ಅವರು ಅರಿತಿದ್ದರು.
ಅದರ ಭಾಗವಾಗಿಯೇ ಅವರು ಪ್ರತ್ಯೇಕ ಮತದಾರ ಮಂಡಳಿ Separate Electorate(ಪ್ರತ್ಯೇಕ ಮತದಾರರ ಕ್ಷೇತ)ನ ಬೇಡಿಕೆಯನ್ನು ಮುಂದಿಟ್ಟರು. ದಲಿತ ಮತದಾರರು ತಮ್ಮ ಪ್ರತಿನಿಧಿಗಳನ್ನು ಸ್ವತಂತ್ರವಾಗಿ ಆಯ್ಕೆ ಮಾಡುವ ವ್ಯವಸ್ಥೆ ಬೇಕೆಂಬುದು ಅದರ ಉದ್ದೇಶವಾಗಿತ್ತು. ಅಂಬೇಡ್ಕರ್ ಈ ವ್ಯವಸ್ಥೆಯಲ್ಲಿ ದಲಿತರನ್ನು ಪ್ರತ್ಯೇಕಿಸುವ ಕ್ರಮವಾಗಿ ನೋಡಲಿಲ್ಲ; ಅವರ ರಾಜಕೀಯ ಸ್ವಾಯತ್ತತೆಗೆ ಅಗತ್ಯವಾದ ರಕ್ಷಣೆಯೆಂದು ಪರಿಗಣಿಸಿದರು.
ಗಾಂಧಿ–ಅಂಬೇಡ್ಕರ್ ಸಂಘರ್ಷ ಮತ್ತು ಪೂನಾ ಒಪ್ಪಂದ
1932ರಲ್ಲಿ ಬ್ರಿಟಿಷ್ ಪ್ರಧಾನಿ ರಾಮ್ಸೆ ಮ್ಯಾಕ್‌ಡೊನಾಲ್ಡ್ ಘೋಷಿಸಿದ ಕಮ್ಯುನಲ್ ಅವಾರ್ಡ್(Communal Award) ಅಡಿಯಲ್ಲಿ ಬ್ರಾಹ್ಮಣೇತರರಲ್ಲದ ಮತ್ತು ದಲಿತ ವರ್ಗದವರಾದ ‘ಶೋಷಿತ ಸಮುದಾಯಗಳಿಗೆ(Depressed Classes) ಪ್ರತ್ಯೇಕ ಮತಕ್ಷೇತ್ರಗಳನ್ನು ಹಾಗೂ 78 ಮೀಸಲು ಸ್ಥಾನಗಳನ್ನು ನೀಡಲಾಯಿತು. ಈ ವ್ಯವಸ್ಥೆಯ ಮೂಲಕ ಅವರು ತಮ್ಮದೇ ಪ್ರತಿನಿಧಿಯನ್ನು ಆಯ್ಕೆ ಮಾಡಲು ಮತ್ತು ಎರಡು ಮತಗಳ ಹಕ್ಕನ್ನು(Double Vote) ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಮಹಾತ್ಮ ಗಾಂಧೀಜಿ ಇದನ್ನು ತೀವ್ರವಾಗಿ ವಿರೋಧಿಸಿದರು. ಅಲ್ಲದೆ ಅವರು ಯರವಾಡ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಇದರಿಂದಾಗಿ ಅಂಬೇಡ್ಕರ್‌ರ ಮೇಲೆ ಅಪಾರ ಒತ್ತಡ ಉಂಟಾಯಿತು.
ಕೊನೆಗೆ 1932ರ ಸೆಪ್ಟೆಂಬರ್‌ನಲ್ಲಿ ಪೂನಾ ಒಪ್ಪಂದವಾಯಿತು. ಪ್ರತ್ಯೇಕ ಮತದಾರ ಮಂಡಳಿಯ ಬೇಡಿಕೆಯನ್ನು ಕೈಬಿಡಲಾಯಿತು; ಬದಲಾಗಿ ಜಂಟಿ ಮತದಾರ ವ್ಯವಸ್ಥೆಯೊಳಗೆ ದಲಿತರಿಗೆ ಮೀಸಲು ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಪೂನಾ ಒಪ್ಪಂದವು ಪ್ರಾಂತೀಯ ವಿಧಾನಸಭೆಗಳಲ್ಲಿ Depressed Classesಗೆ 148 ಮೀಸಲು ಸ್ಥಾನಗಳನ್ನು ಒದಗಿಸಿತು.
ಈ ಘಟನೆಯನ್ನು ʼಗಾಂಧಿ ಮತ್ತು ಅಂಬೇಡ್ಕರ್ ಒಟ್ಟಾಗಿ ಬ್ರಿಟಿಷರ divide-and-rule(ಒಡೆದು ಆಳುವುದು) ಯೋಜನೆಯನ್ನು ಸೋಲಿಸಿದರುʼ ಎಂದು ಸರಳವಾಗಿ ಹೇಳುವುದು ಇತಿಹಾಸಕ್ಕೆ ಸರಿಹೊಂದುವುದಿಲ್ಲ. ಅಂಬೇಡ್ಕರ್ ನಂತರವೂ ಪ್ರತ್ಯೇಕ ರಾಜಕೀಯ ಪ್ರತಿನಿಧಿತ್ವದ ತಮ್ಮ ಮೂಲ ವಾದವನ್ನು ಬಿಟ್ಟುಬಿಟ್ಟಿರಲಿಲ್ಲ ಮತ್ತು ಪೂನಾ ಒಪ್ಪಂದದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಸಂಖ್ಯಾತ್ಮಕ ಬಹುಮತದ ಆಡಳಿತವೇ ಪ್ರಜಾಪ್ರಭುತ್ವವಲ್ಲ; ಅಲ್ಪಸಂಖ್ಯಾತ ಹಾಗೂ ಶೋಷಿತ ಸಮುದಾಯಗಳಿಗೆ ನಿಜವಾದ ರಾಜಕೀಯ ಧ್ವನಿ ಇರಬೇಕು. ಎಂಬುದರಲ್ಲಿ ಅಂಬೇಡ್ಕರ್ ಅವರ ಸ್ವಾತಂತ್ರ್ಯದ ಪರಿಕಲ್ಪನೆ ಸ್ಪಷ್ಟವಾಗುತ್ತದೆ.
ಒಬ್ಬ ಮನುಷ್ಯ ತನ್ನದೇ ದೇಶದಲ್ಲಿ ಮನುಷ್ಯನಾಗಿ ಬದುಕಲು ಯಾರ ಅನುಮತಿಗಾಗಿ ಕಾಯಬೇಕು?
ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆಯ ಅಭ್ಯಾಸವನ್ನು ಉದಾಹರಿಸುವ ಉದ್ದೇಶದಿಂದ ಅಂಬೇಡ್ಕರ್ 1935-36ರ ಅವಧಿಯಲ್ಲಿ ಬಿ.ಆರ್. ಅಂಬೇಡ್ಕರ್ ಅವರು ವೇಟಿಂಗ್ ಫಾರ್ ಎ ವೀಸಾ” ಎಂಬ ಕೃತಿಯನ್ನು ಬರೆದರು. ಅವರು ಬದುಕಿನುದ್ದಕ್ಕೂ ಸ್ವತಃ ಅನುಭವಿಸಿದ ಅಸ್ಪೃಶ್ಯತೆ ಮತ್ತು ಜಾತಿ ಅವಮಾನಗಳ ಘಟನೆಗಳನ್ನು ದಾಖಲಿಸಿದ್ದಾರೆ. ಇದು ಕೇವಲ ವೈಯಕ್ತಿಕ ನೋವಿನ ಕಥೆಯಲ್ಲ; ಭಾರತದ ಜಾತಿ ವ್ಯವಸ್ಥೆ, ಒಬ್ಬ ವ್ಯಕ್ತಿಯ ನೀರು ಕುಡಿಯುವ ಹಕ್ಕು, ವಸತಿ, ಪ್ರಯಾಣ, ಶಿಕ್ಷಣ, ಉದ್ಯೋಗ ಮತ್ತು ಮಾನವ ಘನತೆಯ ಹಕ್ಕನ್ನೇ ಹೇಗೆ ನಿರಾಕರಿಸುತ್ತಿತ್ತು ಎಂಬುದಕ್ಕೆ ನೇರ ಸಾಕ್ಷ್ಯವಾಗಿದೆ.
ʼVisaʼ ಎಂಬ ಪದವನ್ನು ರೂಪಕವಾಗಿಯೂ ಅರ್ಥಮಾಡಿಕೊಳ್ಳಬಹುದು. ಅಂಬೇಡ್ಕರ್‌ಗೆ ವಿದೇಶ ಪ್ರವೇಶಿಸಲು ಬೇಕಾದ ವೀಸಾಕ್ಕಿಂತಲೂ, ಭಾರತೀಯ ಸಮಾಜದೊಳಗೆ ಸಮಾನ ಮನುಷ್ಯನಾಗಿ ಪ್ರವೇಶಿಸಲು ಕಾಣದ ಒಂದು ‘ಸಾಮಾಜಿಕ ವೀಸಾ’ ಬೇಕಾದಂತಿತ್ತು. ಅಸ್ಪೃಶ್ಯತೆಯನ್ನು ಕೇವಲ ಧಾರ್ಮಿಕ ಆಚರಣೆ ಅಥವಾ ವೈಯಕ್ತಿಕ ಪೂರ್ವಾಗ್ರಹವೆಂದು ನೋಡುವುದಿಲ್ಲ. ಅದು ಸಮಾಜದ ಪ್ರತಿಯೊಂದು ಕ್ಷೇತ್ರವನ್ನೂ ಆವರಿಸಿರುವ ವ್ಯವಸ್ಥಿತ ದಮನ ಎಂದು ತೋರಿಸುತ್ತಾರೆ. ವಿದೇಶದಲ್ಲಿ ಜ್ಞಾನ ಮತ್ತು ಗೌರವ ಗಳಿಸಿದ ಅಂಬೇಡ್ಕರ್, ತಮ್ಮದೇ ದೇಶದಲ್ಲಿ ನೀರು ಕುಡಿಯಲು, ವಾಸಿಸಲು ಮತ್ತು ಮನುಷ್ಯನಾಗಿ ಗೌರವ ಪಡೆಯಲು ಹೋರಾಡಬೇಕಾದ ದುರಂತವನ್ನು Waiting for a Visa ಕೃತಿಯಲ್ಲಿ ದಾಖಲಿಸಿದ್ದಾರೆ.
ಜಾತಿ ಮತ್ತು ವರ್ಗ ಎರಡನ್ನೂ ಎದುರಿಸಿದ ರಾಜಕೀಯ
ಅಂಬೇಡ್ಕರ್‌ರನ್ನು ಕೇವಲ ದಲಿತ ರಾಜಕಾರಣದ ನಾಯಕನೆಂದು ಮಾತ್ರ ನೋಡುವುದೂ ಅಪೂರ್ಣ. 1936ರಲ್ಲಿ ಅವರು Independent Labour Party(ಸ್ವತಂತ್ರ ಕಾರ್ಮಿಕ ಪಕ್ಷ)ಯನ್ನು ಸ್ಥಾಪಿಸಿದರು. ಇದು ಕಾರ್ಮಿಕರು, ರೈತರು ಮತ್ತು ದಲಿತರ ಸಮಸ್ಯೆಗಳನ್ನು ಒಟ್ಟಾಗಿ ರಾಜಕೀಯ ವೇದಿಕೆಗೆ ತರುವ ಪ್ರಯತ್ನವಾಗಿತ್ತು. 1937ರ ಬಾಂಬೆ ಪ್ರಾಂತೀಯ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಿದ 17 ಸ್ಥಾನಗಳ ಪೈಕಿ 15 ಸ್ಥಾನಗಳನ್ನು ಗೆದ್ದಿತು. ನಂತರ 1942ರಲ್ಲಿ ಅವರು ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟ(All India Scheduled Castes Federation)ವನ್ನು ಸ್ಥಾಪಿಸಿದರು. ಇದರಿಂದ ಅವರ ಚಿಂತನೆಯ ಮತ್ತೊಂದು ಆಯಾಮ ಸ್ಪಷ್ಟವಾಗುತ್ತದೆ.
ಜಾತಿ ಶೋಷಣೆಯನ್ನು ನಿವಾರಿಸದೆ ವರ್ಗ ಸಮಾನತೆ ಸಾಧ್ಯವಿಲ್ಲ; ಅದೇ ವೇಳೆ ಆರ್ಥಿಕ ಶೋಷಣೆಯನ್ನು ಕಡೆಗಣಿಸಿ ಕೇವಲ ಸಾಮಾಜಿಕ ಗೌರವದಿಂದಲೂ ಪೂರ್ಣ ಮುಕ್ತಿ ಸಾಧ್ಯವಿಲ್ಲ ಎಂಬ ವಿಶಾಲ ದೃಷ್ಟಿ ಅಂಬೇಡ್ಕರ್ ಅವರ ರಾಜಕೀಯದಲ್ಲಿತ್ತು. ಹೀಗಾಗಿ ಅಂಬೇಡ್ಕರ್‌ರ ಸ್ವಾತಂತ್ರ್ಯದ ಕಲ್ಪನೆಯಲ್ಲಿ ಮತದಾನದ ಹಕ್ಕು, ಉದ್ಯೋಗ, ಶಿಕ್ಷಣ, ಕಾರ್ಮಿಕರ ರಕ್ಷಣೆ, ಆರ್ಥಿಕ ಅವಕಾಶ ಮತ್ತು ಸಾಮಾಜಿಕ ಗೌರವ ಎಲ್ಲವೂ ಪರಸ್ಪರ ಸಂಬಂಧಿಸಿದವು.
ಕ್ವಿಟ್ ಇಂಡಿಯಾ ಚಳವಳಿ: ಅಂಬೇಡ್ಕರ್‌ರ ಅತ್ಯಂತ ವಿವಾದಾತ್ಮಕ ನಿಲುವು
ಅಂಬೇಡ್ಕರ್‌ರ ಸ್ವಾತಂತ್ರ್ಯ ಹೋರಾಟದ ಪಾತ್ರವನ್ನು ಚರ್ಚಿಸುವಾಗ 1942ರ ಕ್ವಿಟ್ ಇಂಡಿಯಾ ಚಳವಳಿಯ ಬಗ್ಗೆ ಮಾತನಾಡದೆ ಇರುವುದು ಇತಿಹಾಸವನ್ನು ಅರ್ಧಕ್ಕೇ ಬಿಟ್ಟಂತಾಗುತ್ತದೆ.
ಮಹಾತ್ಮ ಗಾಂಧಿ ಮತ್ತು ಕಾಂಗ್ರೆಸ್ ʼಬ್ರಿಟಿಷರು ಭಾರತ ಬಿಟ್ಟು ತೊಲಗಲಿʼ ಎಂಬ ಘೋಷಣೆಯೊಂದಿಗೆ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದಾಗ ಅಂಬೇಡ್ಕರ್ ಅದನ್ನು ಬೆಂಬಲಿಸಲಿಲ್ಲ. ಅದರ ಕಾರ್ಯತಂತ್ರವನ್ನು ಅವರು ತೀವ್ರವಾಗಿ ಟೀಕಿಸಿದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ಹಾಗೂ ಫ್ಯಾಸಿಸ್ಟ್ ಶಕ್ತಿಗಳ ಬೆದರಿಕೆಯ ನಡುವೆ ಆಡಳಿತ ವ್ಯವಸ್ಥೆಯನ್ನು ಅಸ್ಥಿರಗೊಳಿಸುವುದು ಭಾರತವನ್ನು ಇನ್ನಷ್ಟು ಅಪಾಯಕ್ಕೆ ಸಿಲುಕಿಸಬಹುದು ಎಂಬುದು ಅವರ ವಾದದ ಒಂದು ಭಾಗವಾಗಿತ್ತು. ಅಂಬೇಡ್ಕರ್‌ರ ಕ್ವಿಟ್ ಇಂಡಿಯಾ ವಿರೋಧವನ್ನು ಇತಿಹಾಸ ಅಧ್ಯಯನಗಳೂ ಸ್ಪಷ್ಟವಾಗಿ ದಾಖಲಿಸಿವೆ.
ಅದೇ 1942ರಲ್ಲಿ ಅವರು ಬ್ರಿಟಿಷ್ ಭಾರತದ ವೈಸರಾಯ್ ಕಾರ್ಯಕಾರಿ ಮಂಡಳಿಯಲ್ಲಿ ಕಾರ್ಮಿಕರ ಸದಸ್ಯ( Labour Member)ರಾಗಿ ಸೇರಿದರು. 1946ರವರೆಗೆ ಅದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರು. ಇದು ಅಂಬೇಡ್ಕರ್‌ರ ರಾಜಕೀಯ ಜೀವನದ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗುವ ಅಧ್ಯಾಯ. ಆದರೆ ಅದರ ಹಿನ್ನೆಲೆಯನ್ನೂ ನೋಡಬೇಕು.
ಅವರು ಆ ಅಧಿಕಾರವನ್ನು ಕಾರ್ಮಿಕ ನೀತಿ, ಕಾರ್ಮಿಕರ ಕಲ್ಯಾಣ, ಸಾಮಾಜಿಕ ಭದ್ರತೆ ಮತ್ತು ಕೈಗಾರಿಕಾ ಸಂಬಂಧಗಳ ಪ್ರಶ್ನೆಗಳನ್ನು ಮುಂದಿಡಲು ಬಳಸಿಕೊಂಡರು. ಆ ಅವಧಿಯಲ್ಲಿ ಅಂಬೇಡ್ಕರ್ ಕಾರ್ಮಿಕ ಸದಸ್ಯರಾಗಿ ಅಖಿಲ ಭಾರತ ಮಟ್ಟದ ಸಾಮಾಜಿಕ ಭದ್ರತಾ ವ್ಯವಸ್ಥೆ ರೂಪಿಸುವ ಪ್ರಯತ್ನಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರೆಂದು ಆಧುನಿಕ ಕಾರ್ಮಿಕ ಇತಿಹಾಸ ಅಧ್ಯಯನಗಳು ದಾಖಲಿಸುತ್ತವೆ. ಹೀಗಾಗಿ ಈ ಅವಧಿಯನ್ನು ಅರ್ಥಮಾಡಿಕೊಳ್ಳಲು ಎರಡು ಸಂಗತಿಗಳನ್ನೂ ಒಟ್ಟಿಗೆ ಒಪ್ಪಿಕೊಳ್ಳಬೇಕು. ಅವರು ಕ್ವಿಟ್ ಇಂಡಿಯಾ ಚಳವಳಿಯ ಭಾಗವಾಗಿರಲಿಲ್ಲ; ಅದೇ ಸಮಯದಲ್ಲಿ ವಸಾಹತು ಆಡಳಿತದೊಳಗೆ ದೊರೆತ ಅಧಿಕಾರವನ್ನು ಕಾರ್ಮಿಕರು ಮತ್ತು ಹಿಂದುಳಿದ ಸಮುದಾಯಗಳ ಹಕ್ಕುಗಳಿಗೆ ಬಳಸಲು ಪ್ರಯತ್ನಿಸಿದರು.
ಹಾಗಾದರೆ ಅಂಬೇಡ್ಕರ್ ಬ್ರಿಟಿಷ್ ಪರವಾಗಿದ್ದರೇ? ಎನ್ನುವುದಾದರೆ ʼಹೌದುʼ ಅಥವಾ ʼಇಲ್ಲʼ ಎಂಬ ಉತ್ತರ ಇತಿಹಾಸದ ಸಂಕೀರ್ಣತೆಯನ್ನು ಹಿಡಿಯುವುದಿಲ್ಲ. ಏಕೆಂದರೆ ಅಂಬೇಡ್ಕರ್ ಬ್ರಿಟಿಷ್ ಸಾಮ್ರಾಜ್ಯವನ್ನು ಭಾರತದ ಆದರ್ಶ ಆಡಳಿತವೆಂದು ಪರಿಗಣಿಸಿದವರಲ್ಲ. ವಸಾಹತು ಆಡಳಿತದ ಆರ್ಥಿಕ ಮತ್ತು ರಾಜಕೀಯ ವೈಫಲ್ಯಗಳನ್ನು ಟೀಕಿಸಿದ್ದರು. ಆದರೆ ಕಾಂಗ್ರೆಸ್ ಹೇಳಿದ ಪ್ರತಿಯೊಂದು ಬ್ರಿಟಿಷ್ ವಿರೋಧಿ ಹೋರಾಟದ ವಿಧಾನವನ್ನೂ ಒಪ್ಪಿಕೊಂಡವರೂ ಅಲ್ಲ. ಆದರೂ ಅವರ ರಾಜಕೀಯದಲ್ಲಿ ʼಬ್ರಿಟಿಷರು ಹೊರಟುಹೋದ ನಂತರ ಅಧಿಕಾರ ಯಾರ ಕೈಗೆ ಹೋಗುತ್ತದೆ? ಎಂಬ ಒಂದು ನಿರಂತರ ಎಚ್ಚರಿಕೆ ಇತ್ತು.
ಭಾರತದ ಸಾಮಾಜಿಕ ರಚನೆ ಬದಲಾಗದೆ ಅಧಿಕಾರ ಮೇಲ್ಜಾತಿ ಮತ್ತು ಆರ್ಥಿಕವಾಗಿ ಪ್ರಬಲ ಗುಂಪುಗಳ ಕೈಯಲ್ಲಿ ಕೇಂದ್ರೀಕೃತವಾದರೆ ಅದನ್ನು ದಲಿತರು ʼಸ್ವರಾಜ್ಯʼ ಎಂದು ಹೇಗೆ ಅನುಭವಿಸಬೇಕು ಎಂಬುದು ಅವರ ಪ್ರಶ್ನೆಯಾಗಿತ್ತು. ಅಂಬೇಡ್ಕರ್‌ಗೆ ʼವಿದೇಶಿ ಆಡಳಿತ ವಿರುದ್ಧ ಭಾರತೀಯ ಆಡಳಿತʼ ಎಂಬುದು ಮಾತ್ರ ಪ್ರಶ್ನೆಯಾಗಿರಲಿಲ್ಲ. ಅವರಿಗೆ ʼಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನ ಮೇಲೆ ಪ್ರಭುತ್ವ ಸಾಧಿಸದ ಸಮಾಜ ಹೇಗೆ ನಿರ್ಮಾಣವಾಗಬೇಕು?ʼ ಎಂಬುದು ಇನ್ನೂ ದೊಡ್ಡ ಪ್ರಶ್ನೆಯಾಗಿತ್ತು.
ಇದಕ್ಕಾಗಿಯೇ ಕೆಲವೊಮ್ಮೆ ಅವರು ಬ್ರಿಟಿಷ್ ಸರ್ಕಾರದೊಂದಿಗೆ ಮಾತುಕತೆ ನಡೆಸಿದರು; ಕೆಲವೊಮ್ಮೆ ಅದೇ ಸರ್ಕಾರದ ನೀತಿಗಳನ್ನು ಟೀಕಿಸಿದರು; ಕಾಂಗ್ರೆಸ್‌ನ್ನು ಟೀಕಿಸಿದರು; ಗಾಂಧಿಯವರೊಂದಿಗೆ ಸಂಘರ್ಷಿಸಿದರು; ಕಾರ್ಮಿಕರ ಪರವಾಗಿ ರಾಜಕೀಯ ಪಕ್ಷ ಕಟ್ಟಿದರು; ದಲಿತರಿಗೆ ಸ್ವತಂತ್ರ ರಾಜಕೀಯ ಸಂಘಟನೆ ನಿರ್ಮಿಸಿದರು. ಏಕೆಂದರೆ ಅವರ ರಾಜಕೀಯದ ಸ್ಥಿರತೆ ʼಬ್ರಿಟಿಷ್ ಸರ್ಕಾರವೂ ಅಲ್ಲ, ಕಾಂಗ್ರೆಸ್ ಕೂಡ ಅಲ್ಲ; ಶೋಷಿತ ಜನರ ರಾಜಕೀಯ ಸ್ವಾಯತ್ತತೆ ಕೇಂದ್ರಬಿಂದುವಾಗಿತ್ತು.
ಅಂಬೇಡ್ಕರ್ ಮತ್ತು ಗಾಂಧಿ: ವಿರುದ್ಧ ದಾರಿಗಳಲ್ಲಿದ್ದರೂ ಒಂದೇ ಭಾರತದ ಪ್ರಶ್ನೆ
ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಸಂಘರ್ಷವನ್ನು ವೈಯಕ್ತಿಕ ವೈರವಾಗಿ ನೋಡುವುದು ಸರಿಯಲ್ಲ. ಗಾಂಧಿ ಅಸ್ಪೃಶ್ಯತೆಯನ್ನು ಹಿಂದೂ ಸಮಾಜದ ಪಾಪವೆಂದು ಪರಿಗಣಿಸಿ ಅದನ್ನು ಸುಧಾರಿಸಲು ಬಯಸಿದರು. ಅಂಬೇಡ್ಕರ್ ಜಾತಿ ವ್ಯವಸ್ಥೆಯ ರಚನೆಯನ್ನೇ ಪ್ರಶ್ನಿಸಿ ಅದನ್ನು ನಿರ್ಮೂಲನೆ ಮಾಡಬೇಕೆಂದರು.
ಗಾಂಧಿ ಸಮಾಜದ ʼಹೃದಯ ಪರಿವರ್ತನೆʼಗೆ ಹೆಚ್ಚಿನ ಮಹತ್ವ ನೀಡಿದರೆ, ಅಂಬೇಡ್ಕರ್ ಕಾನೂನು, ರಾಜಕೀಯ ಶಕ್ತಿ, ಪ್ರತಿನಿಧಿತ್ವ ಮತ್ತು ನಾಗರಿಕ ಹಕ್ಕುಗಳ ಭದ್ರತೆಗೆ ಹೆಚ್ಚಿನ ಮಹತ್ವ ನೀಡಿದರು. ಗಾಂಧಿಯವರಿಗೆ ರಾಷ್ಟ್ರೀಯ ಏಕತೆ ಪ್ರಮುಖವಾಗಿದ್ದರೆ, ಅಂಬೇಡ್ಕರ್‌ರಿಗೆ ಸಮಾನತೆ ಇಲ್ಲದ ಏಕತೆ ಅಪಾಯಕಾರಿ ಎನ್ನುವುದಾಗಿತ್ತು. ಹೀಗಾಗಿ ಅವರಿಬ್ಬರ ನಡುವಿನ ವಿವಾದವು ಭಾರತೀಯ ಸ್ವಾತಂತ್ರ್ಯ ಹೋರಾಟದೊಳಗಿನ ಮಹತ್ವದ ತಾತ್ವಿಕ ಚರ್ಚೆಯಾಗಿತ್ತು.
ಮೊದಲು ದೇಶಕ್ಕೆ ಸ್ವಾತಂತ್ರ್ಯವೇ?
ಮೊದಲು ಸಮಾಜಕ್ಕೆ ಸಮಾನತೆಯೇ?
ಅಥವಾ ಎರಡನ್ನೂ ಒಂದೇ ಸಮಯದಲ್ಲಿ ಸಾಧಿಸಬೇಕೇ? ಎಂಬ ಪ್ರಶ್ನೆಗೆ ಅಂಬೇಡ್ಕರ್‌ರ ಉತ್ತರ ಮೂರನೆಯದಾಗಿತ್ತು.
ಸ್ವಾತಂತ್ರ್ಯದ ಮುನ್ನಡೆ ಸಂವಿಧಾನದತ್ತ
1946ರಲ್ಲಿ ಅಂಬೇಡ್ಕರ್ ಸಂವಿಧಾನ ಸಭೆಗೆ ಆಯ್ಕೆಯಾದರು. 1947ರ ಆಗಸ್ಟ್ 15ರಂದು ಅವರು ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಭಾರತದ ಸಂವಿಧಾನ ರಚನೆಯ ಪ್ರಕ್ರಿಯೆಯನ್ನು ಮುನ್ನಡೆಸಿದರು. ಇದು ಅಂಬೇಡ್ಕರ್‌ರ ಸ್ವಾತಂತ್ರ್ಯ ಹೋರಾಟದ ಕೊನೆಯ ಮತ್ತು ಅತ್ಯಂತ ಮಹತ್ವದ ರಾಜಕೀಯ ಫಲವೆಂದು ಹೇಳಬಹುದು.
1920ರ ದಶಕದಲ್ಲಿ ಸಾರ್ವಜನಿಕ ಕೆರೆಯ ನೀರಿಗೆ ಹಕ್ಕು ಕೇಳಿದ ವ್ಯಕ್ತಿಯೇ 1940ರ ದಶಕದ ಅಂತ್ಯದಲ್ಲಿ ಪ್ರತಿಯೊಬ್ಬ ಭಾರತೀಯನೂ ಕಾನೂನಿನ ಮುಂದೆ ಸಮಾನ ಎಂಬ ಗಣರಾಜ್ಯದ ಸಂವಿಧಾನ ರೂಪಿಸುವ ಕೇಂದ್ರ ಸ್ಥಾನಕ್ಕೆ ಬಂದರು.
ಅಸ್ಪೃಶ್ಯತೆ ನಿಷೇಧ, ಕಾನೂನಿನ ಮುಂದೆ ಸಮಾನತೆ, ಧರ್ಮ–ಜಾತಿ–ಲಿಂಗ ಆಧಾರಿತ ಭೇದಭಾವಕ್ಕೆ ನಿರ್ಬಂಧ, ಮೂಲಭೂತ ಹಕ್ಕುಗಳು, ಸಂವಿಧಾನಾತ್ಮಕ ಪರಿಹಾರದ ಹಕ್ಕು, ಹಿಂದುಳಿದ ಸಮುದಾಯಗಳ ಪ್ರತಿನಿಧಿತ್ವ ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳು ಇವೆಲ್ಲವೂ ಸ್ವಾತಂತ್ರ್ಯವನ್ನು ಕೇವಲ ಬ್ರಿಟಿಷ್ ಧ್ವಜ ಇಳಿಸುವುದರಿಂದ ಮೀರಿದ ನಾಗರಿಕ ಸ್ವಾತಂತ್ರ್ಯವನ್ನಾಗಿ ರೂಪಿಸಿದವು.
ಅಂಬೇಡ್ಕರ್‌ರ ದೃಷ್ಟಿಯಲ್ಲಿ ರಾಜಕೀಯ ಪ್ರಜಾಪ್ರಭುತ್ವ ಮಾತ್ರ ಸಾಕಾಗುವುದಿಲ್ಲ. ಅದರ ತಳಹದಿಯಲ್ಲಿ ಸಾಮಾಜಿಕ ಪ್ರಜಾಪ್ರಭುತ್ವ ಇರಬೇಕು; ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳು ಒಂದನ್ನೊಂದು ಬಿಟ್ಟಿರಲು ಸಾಧ್ಯವಿಲ್ಲ ಎಂದು ಅವರು ಸಂವಿಧಾನ ಸಭೆಯಲ್ಲಿ ಎಚ್ಚರಿಸಿದ್ದರು. ಸುಪ್ರೀಂ ಕೋರ್ಟ್‌ನ ಅಂಬೇಡ್ಕರ್ ದಾಖಲೆಗಳಲ್ಲಿಯೂ ಈ ಭಾಷಣವನ್ನು ದಾಖಲಿಸಲಾಗಿದೆ.
ಹಾಗಾದರೆ ಅಂಬೇಡ್ಕರ್‌ರನ್ನು ‘ಸ್ವಾತಂತ್ರ್ಯ ಹೋರಾಟಗಾರ’ ಎಂದು ಕರೆಯಬಹುದೇ?
ಇದು ಮುಖ್ಯವಾಗಿ ನಾವು ʼಸ್ವಾತಂತ್ರ್ಯ ಹೋರಾಟʼವನ್ನು ಹೇಗೆ ವ್ಯಾಖ್ಯಾನಿಸುತ್ತೇವೆ ಎಂಬುದರ ಮೇಲೆ ಅವಲಂಬಿಸಿದೆ. ಸ್ವಾತಂತ್ರ್ಯ ಹೋರಾಟ ಎಂದರೆ ಕೇವಲ ಕಾಂಗ್ರೆಸ್ ನೇತೃತ್ವದ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ನಾಗರಿಕ ಅಸಹಕಾರ ಮತ್ತು ಕ್ವಿಟ್ ಇಂಡಿಯಾ ಚಳವಳಿಗಳಲ್ಲಿ ನೇರವಾಗಿ ಭಾಗವಹಿಸಿ ಬ್ರಿಟಿಷ್ ಸರ್ಕಾರದ ವಿರುದ್ಧ ಬಂಧನಕ್ಕೊಳಗಾಗುವುದಷ್ಟೇ ಎಂದು ವ್ಯಾಖ್ಯಾನಿಸಿದರೆ ಅಂಬೇಡ್ಕರ್‌ರನ್ನು ಗಾಂಧಿ, ನೆಹರು ಅಥವಾ ಪಟೇಲರ ಮಾದರಿಯ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುವುದು ಇತಿಹಾಸಾತ್ಮಕವಾಗಿ ಸರಿಯಾಗುವುದಿಲ್ಲ. ಅವರು ಕಾಂಗ್ರೆಸ್‌ನ ಪ್ರಮುಖ ಜನಾಂದೋಲನಗಳಿಂದ ಸ್ವತಂತ್ರವಾಗಿದ್ದರು ಮತ್ತು ಕೆಲವು ಸಂದರ್ಭಗಳಲ್ಲಿ ಅವುಗಳನ್ನು ನೇರವಾಗಿ ವಿರೋಧಿಸಿದ್ದರು.
ಆದರೆ ಭಾರತದ ಸ್ವಾತಂತ್ರ್ಯ ಹೋರಾಟವನ್ನು ವಸಾಹತುಶಾಹಿಯಿಂದ ಮುಕ್ತಿಗೊಳಿಸುವುದರ ಜತೆಗೆ, ಭಾರತೀಯ ಸಮಾಜವನ್ನು ಪ್ರಜಾಪ್ರಭುತ್ವ, ಸಮಾನತೆ ಮತ್ತು ನಾಗರಿಕ ಹಕ್ಕುಗಳ ಆಧಾರದಲ್ಲಿ ಪುನರ್‌ನಿರ್ಮಿಸುವ ದೀರ್ಘ ಹೋರಾಟ ಎಂದು ನೋಡಿದರೆ ಅಂಬೇಡ್ಕರ್ ಅದರ ಅತ್ಯಂತ ಪ್ರಮುಖ ನಿರ್ಮಾತೃಗಳಲ್ಲಿ ಒಬ್ಬರು.
ಗಾಂಧಿಯವರ ಹೋರಾಟವು ಬ್ರಿಟಿಷರಿಗೆ ʼಭಾರತ ಬಿಟ್ಟು ಹೋಗಿʼ ಎಂದು ಹೇಳಿದ್ದರೆ, ಅಂಬೇಡ್ಕರ್‌ರ ಹೋರಾಟವು, ಸ್ವತಂತ್ರವಾಗಲಿದ್ದ ಭಾರತಕ್ಕೆ: ʼನಿಮ್ಮದೇ ದೇಶದ ಕೋಟ್ಯಂತರ ಜನರನ್ನು ಸಮಾನ ಮನುಷ್ಯರೆಂದು ಸ್ವೀಕರಿಸಿʼ ಎಂದು ಸವಾಲು ಹಾಕಿತ್ತು. ಮೊದಲನೆಯ ಹೋರಾಟವಿಲ್ಲದೆ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಸಾಧ್ಯವಾಗುತ್ತಿರಲಿಲ್ಲ. ಎರಡನೆಯ ಹೋರಾಟವಿಲ್ಲದೆ ಆ ರಾಜಕೀಯ ಸ್ವಾತಂತ್ರ್ಯ ಕೋಟ್ಯಂತರ ಶೋಷಿತರಿಗೆ ಅರ್ಥಪೂರ್ಣವಾಗುತ್ತಿರಲಿಲ್ಲ.
ರಾಜಕೀಯ ಸ್ವರಾಜ್ಯಕ್ಕೆ ಸಾಮಾಜಿಕ ಸ್ವರಾಜ್ಯದ ಅರ್ಥ ಕೊಟ್ಟ ನಾಯಕ ಅಂಬೇಡ್ಕರ್ ಅವರ ವಿಶಿಷ್ಟ ಕೊಡುಗೆ ಇಲ್ಲಿಯೇ ಇದೆ. ಅವರು ರಾಷ್ಟ್ರವನ್ನು ಕೇವಲ ಭೌಗೋಳಿಕ ಪ್ರದೇಶವಾಗಿ ನೋಡಲಿಲ್ಲ. ಪರಸ್ಪರ ಸಮಾನ ನಾಗರಿಕರೆಂದು ಒಪ್ಪಿಕೊಳ್ಳದ ಜನರ ಗುಂಪು ರಾಜಕೀಯವಾಗಿ ಸ್ವತಂತ್ರವಾದ ಮಾತ್ರಕ್ಕೆ ಸಂಪೂರ್ಣ ಪ್ರಜಾಪ್ರಭುತ್ವ ರಾಷ್ಟ್ರವಾಗುವುದಿಲ್ಲ ಎಂಬುದು ಅವರ ಚಿಂತನೆಯ ಸಾರವಾಗಿತ್ತು.
ಆ ಕಾರಣಕ್ಕಾಗಿಯೇ ಅವರು:
- ಮತದಾನದ ಹಕ್ಕಿಗಾಗಿ ಹೋರಾಡಿದರು;
- ಸಾರ್ವಜನಿಕ ನೀರಿನ ಹಕ್ಕಿಗಾಗಿ ಸತ್ಯಾಗ್ರಹ ನಡೆಸಿದರು;
- ಅಸ್ಪೃಶ್ಯತೆಯನ್ನು ಪ್ರಶ್ನಿಸಿದರು;
- ಜಾತಿ ವ್ಯವಸ್ಥೆಯನ್ನೇ ನಿರ್ಮೂಲನೆ ಮಾಡಬೇಕೆಂದರು;
- ದಲಿತರಿಗೆ ಸ್ವತಂತ್ರ ರಾಜಕೀಯ ಪ್ರತಿನಿಧಿತ್ವ ಕೇಳಿದರು;
- ಕಾರ್ಮಿಕರು ಮತ್ತು ರೈತರ ಪ್ರಶ್ನೆಗಳನ್ನು ರಾಜಕೀಯಕ್ಕೆ ತಂದರು;
- ಬಹುಮತದ ಅಧಿಕಾರಕ್ಕೆ ಸಂವಿಧಾನಾತ್ಮಕ ಮಿತಿಗಳು ಬೇಕೆಂದರು;
ಕೊನೆಗೆ ಸ್ವತಂತ್ರ ಭಾರತದ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುವ ಸಂವಿಧಾನ ರೂಪಿಸುವಲ್ಲಿ ಕೇಂದ್ರ ಪಾತ್ರ ವಹಿಸಿದರು. ಅವರ ಈ ವಿಶಾಲ ಸಾಮಾಜಿಕ–ರಾಜಕೀಯ ಪಯಣವನ್ನು ಸುಪ್ರೀಂ ಕೋರ್ಟ್ ಮತ್ತು Constitution of India ದಾಖಲೆಗಳು ವಿವರಿಸುತ್ತವೆ.
ಹೀಗಾಗಿ ಅಂಬೇಡ್ಕರ್ ಅವರ ಸ್ವಾತಂತ್ರ್ಯ ಹೋರಾಟದ ಪಾತ್ರವನ್ನು ಅರ್ಥಮಾಡಿಕೊಳ್ಳಲು ಒಂದು ವಾಕ್ಯ ಸಾಕಾಗಬಹುದು: ಏನೆಂದರೆ ಅವರು ಮುಖ್ಯವಾಗಿ ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸುವ ಹೋರಾಟದ ನಾಯಕನಾಗಿರಲಿಲ್ಲ; ಅವರು ಸ್ವತಂತ್ರವಾಗಲಿದ್ದ ಭಾರತದಲ್ಲಿ ಮನುಷ್ಯನನ್ನು ಜಾತಿ, ಅಸ್ಪೃಶ್ಯತೆ, ಸಾಮಾಜಿಕ ಗುಲಾಮಗಿರಿ ಮತ್ತು ಬಹುಮತದ ದಬ್ಬಾಳಿಕೆಯಿಂದ ಮುಕ್ತಗೊಳಿಸುವ ಹೋರಾಟದ ಮಹತ್ವದ ನಾಯಕನಾಗಿದ್ದರು ಎಂಬುದು ಸ್ಪಷ್ಟ.
ಅಂಬೇಡ್ಕರ್‌ಗೆ 1947ರ ಆಗಸ್ಟ್ 15 ಅಂತಿಮ ಗುರಿಯಾಗಿರಲಿಲ್ಲ. ಅದು ಹೊಸ ಪ್ರಯಾಣದ ಆರಂಭವಾಗಿತ್ತು. ರಾಜಕೀಯ ಸ್ವಾತಂತ್ರ್ಯವನ್ನು ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವಾಗಿ ಪರಿವರ್ತಿಸುವುದೇ ಅವರ ದೃಷ್ಟಿಯಲ್ಲಿ ಸ್ವಾತಂತ್ರ್ಯದ ಪೂರ್ಣತೆಯಾಗಿತ್ತು. ಆ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕಾಂಗ್ರೆಸ್ ನಾಯಕರ ಮಾದರಿಯಂತೆ ಅಳೆಯುವುದಕ್ಕಿಂತ, ಭಾರತೀಯ ಸ್ವಾತಂತ್ರ್ಯದ ಅರ್ಥವನ್ನೇ ವಿಸ್ತರಿಸಿದ ನಾಯಕ ಎಂದು ನೋಡುವುದು ಹೆಚ್ಚು ಸಮರ್ಪಕ.
ಬ್ರಿಟಿಷರು ಭಾರತವನ್ನು ಆಳಬಾರದು ಎಂಬುದು ರಾಷ್ಟ್ರೀಯ ಚಳವಳಿಯ ಘೋಷಣೆಯಾಗಿದ್ದರೆ, ಯಾವ ಭಾರತೀಯನೂ ಮತ್ತೊಬ್ಬ ಭಾರತೀಯನ ಮೇಲೆ ಜನ್ಮದ ಕಾರಣದಿಂದ ಪ್ರಭುತ್ವ ನಡೆಸಬಾರದು ಎಂಬುದು ಅಂಬೇಡ್ಕರ್‌ರ ಸ್ವಾತಂತ್ರ್ಯದ ಘೋಷಣೆಯಾಗಿತ್ತು. ಈ ಎರಡೂ ಕನಸುಗಳು ಒಂದಾಗುವಲ್ಲಿಯೇ ಆಧುನಿಕ ಭಾರತದ ಪ್ರಜಾಪ್ರಭುತ್ವದ ಪೂರ್ಣ ಅರ್ಥ ಅಡಗಿದೆ.





