ಈ ವರ್ಷದ ಮುಂಗಾರು ಮಳೆ ಸ್ವಲ್ಪ ತಡವಾಗಿ ಆರಂಭವಾದರೂ ರೈತರಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಉತ್ತಮ ಮಳೆಯ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ವಿಶೇಷವಾಗಿ ಹೆಸರು (ಹೆಸರು ಕಾಳು) ಬೆಳೆಯತ್ತ ರೈತರ ಒಲವು ಹೆಚ್ಚಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಈ ವರ್ಷ 47,752 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತನೆ ಗುರಿ ಹೊಂದಲಾಗಿದೆ. ಹೆಸರು ಬೆಳೆಗೆ ಪ್ರಮುಖ ಕೇಂದ್ರವಾಗಿರುವ ರಾಮದುರ್ಗ ತಾಲ್ಲೂಕಿನಲ್ಲಿ ಇದುವರೆಗೆ 24,371 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದ್ದು, ಇನ್ನೂ ಬಿತ್ತನೆ ಕಾರ್ಯ ಮುಂದುವರೆದಿದೆ. ಕಳೆದ ವರ್ಷ ಇದೇ ತಾಲ್ಲೂಕಿನಲ್ಲಿ 18,735 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿತ್ತು. ಹೀಗಾಗಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೆಳೆ ಬೆಳೆಯುವ ನಿರೀಕ್ಷೆ ಮೂಡಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 7,52,312 ಹೆಕ್ಟೇರ್ ವಿವಿಧ ಬೆಳೆಗಳ ಬಿತ್ತನೆ ಗುರಿ ನಿಗದಿ ಪಡಿಸಲಾಗಿದ್ದು, ಇದಕ್ಕಾಗಿ 37,543 ಕ್ವಿಂಟಾಲ್ ವಿವಿಧ ಬೀಜಗಳು ಹಾಗೂ 30.5 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದೆ.
ಮಾರ್ಚ್ 1ರಿಂದ ಮೇ 31ರವರೆಗೆ ಸುರಿಯುವ ಪೂರ್ವ ಮುಂಗಾರು ಮಳೆಯ ಪ್ರಮಾಣವೂ ಈ ಬಾರಿ ಉತ್ತಮವಾಗಿದೆ. ಮೇ ಅಂತ್ಯದವರೆಗೆ ವಾಡಿಕೆಯಂತೆ 86 ಮಿ.ಮೀ. ಮಳೆಯಾಗಬೇಕಿದ್ದರೆ, ಈ ಬಾರಿ 109 ಮಿ.ಮೀ. ಮಳೆಯಾಗಿದ್ದು, ಶೇ. 28ರಷ್ಟು ಅಧಿಕ ಮಳೆ ದಾಖಲಾಗಿದೆ. ಇದು ಬಿತ್ತನೆ ಕಾರ್ಯಕ್ಕೆ ಅನುಕೂಲಕರ ವಾತಾವರಣ ಒದಗಿಸಿದೆ.
ಆದರೆ, ರಸಗೊಬ್ಬರ ವಿತರಣೆಯ ಲಿಂಕ್ ಪದ್ಧತಿ ಹಾಗೂ ಡಿಎಪಿ ಗೊಬ್ಬರದ ಬೆಲೆ ಏರಿಕೆ ರೈತರಲ್ಲಿ ಆತಂಕ ಮೂಡಿಸಿದೆ. ಸದ್ಯ ದೊಡ್ಡ ಪ್ರಮಾಣದ ಕೊರತೆ ಕಂಡುಬರದಿದ್ದರೂ, ಬೆಳೆ ಬೆಳವಣಿಗೆಯ ಹಂತದಲ್ಲಿ ಗೊಬ್ಬರದ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ.
ಈ ಕುರಿತು ಈ ದಿನ.ಕಾಮ್ ಜತೆ ರಾಮದುರ್ಗ ತಾಲ್ಲೂಕಿನ ರೈತ ಮಹಿಳೆ ಮಂಜುಳಾ ಶಿಲಕಾರ ಮಾತನಾಡಿ, “ನಾವು ನಾಲ್ಕು ಎಕರೆ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಿದ್ದೇವೆ. ಹಿಂದೆ ಎತ್ತುಗಳಿಂದ ಬಿತ್ತನೆ ಮಾಡಿಸುತ್ತಿದ್ದೆವು. ಈಗ ಟ್ರ್ಯಾಕ್ಟರ್ ಮೂಲಕ ಬಿತ್ತನೆ ಮಾಡುತ್ತಿದ್ದೇವೆ. ಡೀಸೆಲ್ ಬೆಲೆ ಏರಿಕೆಯಿಂದ ಟ್ರ್ಯಾಕ್ಟರ್ ಬಾಡಿಗೆ ಕೂಡ ಹೆಚ್ಚಾಗಿದೆ. ಡಿಎಪಿ ಗೊಬ್ಬರದ ಬೆಲೆಯೂ ಏರಿಕೆಯಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆಯುತ್ತವೆ. ಉತ್ತಮ ಮಳೆ ಬಂದು ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ರೈತರ ಶ್ರಮಕ್ಕೆ ಫಲ ಸಿಗುತ್ತದೆ” ಎಂದು ಹೇಳಿದರು.
ಮುಂಗಾರು ಮಳೆಯ ಅನುಕೂಲಕರ ವಾತಾವರಣದಿಂದ ಈ ವರ್ಷ ಹೆಸರು ಬೆಳೆಯ ವಿಸ್ತೀರ್ಣ ಹೆಚ್ಚಾಗುವ ನಿರೀಕ್ಷೆ ಇದ್ದು, ಉತ್ತಮ ಇಳುವರಿಯ ಕನಸಿನೊಂದಿಗೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಈ ಕುರಿತು ಈ ದಿನ.ಕಾಮ್ ಜತೆ ರಾಮದುರ್ಗ ತಾಲ್ಲೂಕಿನ ಕೃಷಿ ಇಲಾಖೆಯ ಅಧಿಕಾರಿ ಶ್ರೀನಾಥ ಚಿಮ್ಮಲಗಿ ಮಾತನಾಡಿ, ತಾಲ್ಲೂಕಿನಲ್ಲಿ ಇದುವರೆಗಗೂ ಒಟ್ಟು 3,471 ಹೆಕ್ಟೇರ್ ಪ್ರದೇಶದಲ್ಲಿ ಹೆಸರು (ಹೆಸರುಕಾಳು) ಬಿತ್ತನೆ ಮಾಡಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ರಸಗೊಬ್ಬರದ ಯಾವುದೇ ಕೊರತೆ ಇಲ್ಲ. ಅಲ್ಲದೆ, ರಸಗೊಬ್ಬರ ಅಂಗಡಿಗಳಲ್ಲಿ ಲಿಂಕ್ ಆಧಾರದಲ್ಲಿ ರಸಗೊಬ್ಬರ ವಿತರಣೆ ಮಾಡದಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸರ್ಕಾರದಿಂದ ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ (DAP) ಬಳಕೆಯನ್ನು ಉತ್ತೇಜಿಸುವಂತೆ ಆದೇಶ ಬಂದಿದ್ದು, ರೈತರಿಗೆ ಈ ಕುರಿತು ಜಾಗೃತಿ ಮೂಡಿಸಿ ಅವುಗಳನ್ನು ಬಳಸುವಂತೆ ಸಲಹೆ ನೀಡಲಾಗುತ್ತಿದೆ. ಎಂದರು.
ಯೂರಿಯಾ ಗೊಬ್ಬರವನ್ನು ಎಫ್‌ಐಡಿ (FID) ಮಾಡಿಸಿಕೊಂಡ ರೈತರಿಗೆ ಎಕರೆಗೆ ಒಂದು ಚೀಲದಂತೆ ವಿತರಣೆ ಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿ ಸುಮಾರು ಶೇ.95 ರಷ್ಟು ರೈತರು ಈಗಾಗಲೇ ಎಫ್‌ಐಡಿ ಮಾಡಿಸಿಕೊಂಡಿದ್ದಾರೆ. ಉಳಿದ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಎಫ್‌ಐಡಿ ಮಾಡಿಸಿಕೊಳ್ಳಬಹುದು. ಅಗತ್ಯ ನೆರವು ನೀಡಲಾಗುವುದು” ಎಂದು ಶ್ರೀನಾಥ ಚಿಮ್ಮಲಗಿ ತಿಳಿಸಿದರು.
ಉತ್ತಮ ಮುಂಗಾರು ಮಳೆಯ ಅನುಕೂಲಕರ ವಾತಾವರಣದಿಂದ ಈ ವರ್ಷ ಬೆಳಗಾವಿ ಜಿಲ್ಲೆಯಲ್ಲಿ ಹೆಸರು ಬೆಳೆಯ ವಿಸ್ತೀರ್ಣ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆ ಮೂಡಿದೆ. ಒಂದೆಡೆ ಉತ್ತಮ ಮಳೆಯು ರೈತರಲ್ಲಿ ಆಶಾಭಾವನೆ ಮೂಡಿಸಿದ್ದರೆ, ಮತ್ತೊಂದೆಡೆ ರಸಗೊಬ್ಬರ ಬೆಲೆ ಏರಿಕೆ, ಡೀಸೆಲ್ ದರ ಏರಿಕೆ ಹಾಗೂ ಕೃಷಿ ವೆಚ್ಚದ ಹೆಚ್ಚಳ ಸವಾಲಾಗಿ ಪರಿಣಮಿಸಿದೆ.
ಆದರೂ, ಉತ್ತಮ ಇಳುವರಿ ಮತ್ತು ಲಾಭದಾಯಕ ಬೆಲೆಯ ನಿರೀಕ್ಷೆಯೊಂದಿಗೆ ರೈತರು ಕೃಷಿ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಿದ್ದು, ಸರ್ಕಾರವು ರಸಗೊಬ್ಬರ ಬೆಲೆ ಕಡಿಮೆ ಮಾಡಿದರೆ ರೈತರಿಗೆ ಆರ್ಥಿಕ ಹೊರೆ ಕಡಿಮೆಯಾಗಿ ಅನುಕೂಲವಾಗಲಿದೆ.





