ರಸಗೊಬ್ಬರ ಕೊರತೆ, ಜೋಳ ಖರೀದಿ ಬಾಕಿ ಹಣಪಾವತಿ ಹಾಗೂ ಕಳಪೆ ಬೀಜ ಮಾರಾಟ ತಡೆಯಬೇಕು ಸೇರಿ ನಾನಾ ಬೇಡಿಕೆಗಳ ಬಗ್ಗೆ ಜಿಲ್ಲಾಡಳಿತ ಗಮನಕ್ಕೆ ತಂದರೂ ಬಗೆಹರಿಸದೆ ಕಾರಣಕ್ಕೆ ಜೂನ್ 16 ರಂದು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಚಾಮರಸ ಮಾಲಿಪಾಟೀಲ್ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ ರೈತರಿಂದ ಖರೀದಿಸಿದ ಜೋಳದ ಹಣ ಇಂದಿಗೂ ಪಾವತಿಯಾಗಿಲ್ಲ. ಶೇ.85 ರಷ್ಟು ರೈತರಿಗೆ ಹಣ ಬಾಕಿಯಿದೆ. ಜಿಲ್ಲಾಧಿಕಾರಿಗಳಿಗೆ ಕುರಿತು ದೂರು ನೀಡಿದ್ದು ವಾರದೊಳಗೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಇಂದಿಗೂ ಬಾಕಿ ಹಣ ಪಾವತಿಯಾಗಿಲ್ಲ. ಜಿಲ್ಲೆಯಲ್ಲಿ 12 ಲಕ್ಷ 50 ಸಾವಿರ ಕ್ವಿಂಟಾಲ್ ಜೋಳ ಖರೀದಿ ಮಾಡಲಾಗಿದ್ದು, 10 ವರೆ ಲಕ್ಷ ಕ್ವಿಂಟಾಲ್ ಹಣ ಬಾಕಿಯಿದೆ ಎಂದರು.
ಮುಂಗಾರು ಪ್ರಾರಂಭವಾಗಿದ್ದು ಬೀಜ, ರಸಗೊಬ್ಬರ ಖರೀದಿಸಲು ರೈತರ ಬಳಿ ಹಣವಿಲ್ಲದ ಸ್ಥಿತಿಯಿಂದ ಬಡ್ಡಿ ಸಾಲದ ಮೊರೆ ಹೋಗುವ ಸ್ಥಿತಿಯನ್ನು ಜೀವನ್ಮರಣ ಮಾಡಿದೆ ಎಂದು ಆರೋಪಿಸಿದರು.
ಹತ್ತಿ ಖರೀದಿ ಮಾಡಿರುವ ಸರಕಾರ ಒಂದು ವಾರದಲ್ಲಿ ರೈತರಿಗೆ ಹಣ ನೀಡಿದೆ. ಆದರೆ ಜೋಳ ಖರೀದಿ ಮಾಡಿದ ಹಣ ಮಾತ್ರ ಪಾವತಿ ಮಾಡುತ್ತಿಲ್ಲ. ಮುಂಗಾರು ಪ್ರಾರಂಭವಾಗುತ್ತಿದ್ದು ರಸಗೊಬ್ಬರ ಕೊರತೆ ಅಭಾವ ಎದುರಾಗಿದೆ. ನೀರಾವರಿ ಪ್ರದೇಶದಲ್ಲಿ ನೀರು ಹರಿಕೆ ಪ್ರಾರಂಭವಾಗಿಲ್ಲ. ಮತ್ತಷ್ಟು ರಸಗೊಬ್ಬರ ಬೇಡಿಕೆ ಹೆಚ್ಚಳವಾಗಲಿದ್ದು ರೈತರಿಗೆ ತೀವ್ರ ಆತಂಕ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಕದ ಯಾದಗಿರಿ ಜಿಲ್ಲೆಯಲ್ಲಿ ಎಲ್ಲ ರೈತರಿಗೆ ರಸಗೊಬ್ಬರ ದೊರೆಯುವಂತೆ ಅಲ್ಲಿ ಜಿಲ್ಲಾಧಿಕಾರಿಗಳು ಎಕರೆವಾರು ರಸಗೊಬ್ಬರ ನಿಗಧಿ ಮಾಡಿದ್ದಾರೆ. ಅದೇ ಮಾದರಿಯಲ್ಲಿ ಜಿಲ್ಲೆಯಲ್ಲಿಯೂ ಎಲ್ಲ ರೈತರಿಗೆ ರಸಗೊಬ್ಬರ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ರಸಗೊಬ್ಬದೊಂದಿಗೆ ಇತರೆ ಗೊಬ್ಬರ ಖರೀದಿ ಮಾಡುವಂತೆ ಒತ್ತಾಯಿಸುತ್ತಿದ್ದು ತಡೆಯಬೇಕೆಂದರು.
26 ಸಾವಿರ ರೂ ರಸಗೊಬ್ಬರ ಖರೀದಿ ಮಾಡಿದ ರೈತರಿಗೆ 9257 ರೂ ಇತರೆ ಗೊಬ್ಬರ ಖರೀದಿ ಮಾಡಬೇಕೆಂದು ಷರತ್ತು ವಿಧಿಸಲಾಗುತ್ತಿದೆ. ಕೂಡಲೇ ಅನಗತ್ಯ ಹೊರೆಯನ್ನು ತಡೆಯಲು ಜಿಲ್ಲಾಡಳಿತ ಮುಂದಾಗಬೇಕೆಂದರು. ಕೃಷಿ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘವೇ ದೂರು ನೀಡಲಿದೆ ಎಂದು ಎಚ್ಚರಿಸಿದರು.
ನೀರಾವರಿ ಪ್ರದೇಶದ ಉಪ ಕಾಲುವೆಗಳು ಸ್ವಚ್ಚತೆಗೊಂಡಿಲ್ಲ, ಮುಖ್ಯ ಕಾಲುವೆ, ಉಪಕಾಲುವೆಗಳು ಹೂಳು ತೆಗೆಯದೇ ಇರುವದಿರಂದ ಸಮಸ್ಯೆ ಎದುರಾಗಿದೆ . ಸರಕಾರ 20 ಸಾವಿರ ಕೋಟಿ ನೀರಾವರಿ ಯೋಜನೆಗಳಿಗೆ ಕಾಯ್ದಿರಿಸುವುದಾಗಿ ಹೇಳುತ್ತಿದ್ದರು ಕಾಲುವೆ ಸ್ವಚ್ಚತಾ ಕಾರ್ಯ ಕೈಗೊಳ್ಳಬೇಕೆಂದರು.
ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತರ ಸಮಸ್ಯೆಗಳ ಕುರಿತು ನೂತನ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ರೈತ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸುವ ಭರವಸೆ ನೀಡಿದ್ದಾರೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೊಹರಂ ಪ್ರಯುಕ್ತ ಬೀದಿದೀಪ, ಸಿಸಿ ಕ್ಯಾಮರಾ ಅಳವಡಿಕೆಗೆ ಡಿವೈಎಫ್ಐ ಆಗ್ರಹ
ಈ ವೇಳೆ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ,ಬಸವರಾಜ ಮಾಲಿಪಾಟೀಲ್, ಸಿದ್ದಯ್ಯಸ್ವಾಮಿ, ಲಿಂಗನಗೌಡ ಪಾಟೀಲ್ ಇದ್ದರು.





