ಸೈದ್ಧಾಂತಿಕ ಸ್ಪಷ್ಟತೆಯ ಬಿ.ಕೆ ಹರಿಪ್ರಸಾದ್ ಕಾಂಗ್ರೆಸ್ಸಿಗೆ ಹೊಸ ಹುಮ್ಮಸ್ಸು ತರಬಲ್ಲರೆ?

Date:

1978ರಲ್ಲಿ ಇಂದಿರಾ ಗಾಂಧಿಯವರು ಚಿಕ್ಕಮಗಳೂರು ಲೋಕಸಭೆಯಿಂದ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಪಾದರಸದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಮತ್ತು ಪ್ರಖರ ವಾಕ್‌ಪಟುವಾಗಿದ್ದ ಹರಿಪ್ರಸಾದ್ ಅವರು ಸಂಜಯ್ ಗಾಂಧಿಯವರ ಕಣ್ಣಿಗೆ ಬೀಳುತ್ತಾರೆ. ದೆಹಲಿಗೆ ತೆರಳುವಾಗ ಜೊತೆಯಲ್ಲೇ ಹರಿಪ್ರಸಾದ್ ಅವರನ್ನು ಕರೆದೊಯ್ದ ಸಂಜಯ್ ಗಾಂಧಿಯವರು ಪಕ್ಷದ ಪ್ರಮುಖ ಜವಾಬ್ದಾರಿಗಳನ್ನು ವಹಿಸುತ್ತಾ ಹೋಗುತ್ತಾರೆ. ಆನಂತರ ಹರಿಪ್ರಸಾದ್ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.

- Advertisement -

“Bunch of thoughts written by a bunch of fools. ನಾನು ಹಿಂದು, ನನ್ನ ಹಿಂದು ಧರ್ಮ ಸಹಿಷ್ಣುತೆಯನ್ನು ಹೇಳುತ್ತದೆ. ಸ್ವಾಮಿ ವಿವೇಕಾನಂದರ ಹಿಂದು ಧರ್ಮ ನನ್ನದು. ಗಾಂಧಿ, ನೆಹರೂ, ಸರ್ದಾರ್ ಪಟೇಲ್ ಅವರು ನಂಬಿಕೆ ಇಟ್ಟಿದ್ದಂತಹ ಹಿಂದು ಧರ್ಮ ನನ್ನದು. ಸಾವರ್ಕರ್ ಮತ್ತು ಗೋಲ್ವಾಲ್ಕರ್ ಪ್ರತಿಪಾದಿಸುವ ಹಿಂದುತ್ವ ನನ್ನದ್ದಲ್ಲ” ಎಂದು ಸದನದಲ್ಲೇ ಹೇಳಿದ್ದವರು ಬಿ.ಕೆ ಹರಿಪ್ರಸಾದ್.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

‘ನನ್ನ ಜಾತಿ ಕಾಂಗ್ರೆಸ್, ನನ್ನ ಧರ್ಮ ಸಂವಿಧಾನ’ ಎನ್ನುವ ಬಿಕೆಎಚ್ ಅವರ ‘ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬದ್ಧತೆ’ ಪ್ರಶ್ನಾತೀತ. ಸುಮಾರು ಐದು ದಶಕಗಳ ರಾಜಕಾರಣದಲ್ಲಿ ಎಂದಿಗೂ ಪಕ್ಷ ನಿಷ್ಠೆ ಬದಲಿಸಿದವರಲ್ಲ. ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ, ಕಾರ್ಯಕರ್ತರ ಎದೆಯಲ್ಲಿ ಆತ್ಮವಿಶ್ವಾಸ ತುಂಬಬಲ್ಲ ದಿಟ್ಟ ನಾಯಕ ಹರಿಪ್ರಸಾದ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಲವು ರಾಜ್ಯಗಳು, ಹಲವು ರೀತಿಯ ರಾಜಕಾರಣಿಗಳು, ಭಿನ್ನ ಸಂಸ್ಕೃತಿಗಳು, ವಿವಿಧ ಭಾಷೆಗಳು ಮತ್ತು ಜನಗಳನ್ನು ನೋಡಿದವರು ಬಿಕೆ ಹರಿಪ್ರಸಾದ್. ದೇಶದ ಉದ್ದಗಲಕ್ಕೂ ಸಂಚರಿಸಿ ಪಕ್ಷ ಸಂಘಟನೆ ಮಾಡಿದ ಅನುಭವವಿರುವ ಇವರಿಗೆ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನ ದೊರೆತ ಮೇಲೆ, ಕರ್ನಾಟಕದ ಪ್ರಜ್ಞಾವಂತ ವಲಯವಂತೂ ಭರವಸೆಯ ಕಣ್ಣುಗಳಿಂದ ನೋಡುತ್ತಿದೆ.

ಕೆಂಪಯ್ಯ ಮತ್ತು ಕೆ.ಗುಣವತಿ ದಂಪತಿಯ ಮಗನಾದ ಬಿ.ಕೆ.ಹರಿಪ್ರಸಾದ್ ಅವರು ಹುಟ್ಟಿದ್ದು 1954ರ ಜುಲೈ 29ರಂದು. ಹರಿಪ್ರಸಾದ್ ಅವರಿಗೆ ಹೋರಾಟದ ಗುಣ ಅವರ ರಕ್ತದಲ್ಲೇ ಬಂದಿತ್ತು. ಹರಿಪ್ರಸಾದ್ ಅವರ ತಂದೆ ಕೆಂಪಯ್ಯ ಅವರು ಬಂಟ್ವಾಳ ತಾಲೂಕಿನ ಅರಳ ಗ್ರಾಮದವರು. ಅರಳ ಗ್ರಾಮದ ಬಂಗಾರಬೆಟ್ಟುವಿನಲ್ಲಿ ನಡೆದ ಭೂ ಮಾಲಿಕರ ಜೊತೆಗಿನ ಸಂಘರ್ಷ ಸ್ವಾಭಿಮಾನಿಯಾಗಿದ್ದ ಕೆಂಪಯ್ಯ ಅವರನ್ನು ಊರು ಬಿಡುವಂತೆ ಮಾಡಿತ್ತು. ಇದು ಕರಾವಳಿಯ ಪ್ರತಿ ಬಿಲ್ಲವ ಕುಟುಂಬದ ತಂದೆ ತಾಯಂದಿರು, ಅಜ್ಜ ಅಜ್ಜಿಯಂದಿರು ಅನುಭವಿಸಿದ ಬದುಕು ಎನ್ನುತ್ತಾರೆ ಕರಾವಳಿ ಜನತೆ. ಅಂತಹ ಅನುಭವ ಕಥನಗಳು ಬಿಕೆಎಚ್ ಅವರ ವ್ಯಕ್ತಿತ್ವವನ್ನು ಗಟ್ಟಿ ಮಾಡಿದ್ದವು.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಹರಿಪ್ರಸಾದ್ ಅವರಿಗೆ ವಿದ್ಯಾರ್ಥಿ ದಿಸೆಯಿಂದಲೂ ರಾಜಕಾರಣದಲ್ಲಿ ಭಾರೀ ಆಸಕ್ತಿ. ತಂದೆಗಾಗಲೀ, ಕುಟುಂಬದ ಇತರರಿಗಾಗಲೀ ಹರಿಪ್ರಸಾದ್ ಅವರ ರಾಜಕೀಯದ ಕನಸು ಇಷ್ಟವಾಗುತ್ತಿರಲಿಲ್ಲ. ಆದರೆ ಬಿಕೆಎಚ್ ತಮ್ಮ ಗುರಿ ಬದಲಿಸಲಿಲ್ಲ. 1967, 1968, 1969- ಈ ಅವಧಿಯಲ್ಲಿ ಸೇವಾದಳದ ಶಿಸ್ತಿನಲ್ಲಿ, ಎನ್.ಎಸ್. ಹರ್ಡೀಕರ್ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ಹರಿಪ್ರಸಾದ್, ದಿವಂಗತ ದೇವರಾಜ ಅರಸು ಅವರ ಸಾಮಾಜಿಕ ನ್ಯಾಯ ಮತ್ತು ರಾಜಕಾರಣದಿಂದ ಪ್ರಭಾವಿತರಾದರು. 1972ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸದಸ್ಯತ್ವ ಸ್ವೀಕಾರ ಮಾಡಿದರು.

1973ರಿಂದ 1977 ಮತ್ತು 1977ರಿಂದ 1978ರ ನಡುವೆ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್‌ ಸದಸ್ಯರಾಗಿ ಕೆಲಸ ಮಾಡಿದರು. 1972ರಿಂದ 1973ರ ನಡುವೆ ಎಂಇಎಸ್‌ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. 1975-1976ರಲ್ಲಿ ಹೈಗ್ರೌಂಡ್ ಬ್ಲಾಕ್ ಕಾಂಗ್ರೆಸ್ ಚೇರ್ಮೆನ್ ಆಗಿದ್ದರು. 1977-1978ರಲ್ಲಿ ಎಸ್‌ಜೆಆರ್‌ಸಿ ಕಾನೂನು ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಹೀಗೆ ವಿದ್ಯಾರ್ಥಿಯಾಗಿದ್ದ ಸಮಯದಿಂದಲೇ ರಾಜಕಾರಣದ ಸಂಪರ್ಕ ಬೆಳೆಸಿಕೊಳ್ಳುತ್ತಾರೆ.

ಹರಿಪ್ರಸಾದ್ ಅವರ ಬದುಕಿನ ಪಥ ಮತ್ತೊಂದು ದಿಕ್ಕಿಗೆ ಹೊರಳಿದ್ದು ಮಾತ್ರ 1978ರ ಬಳಿಕ. 1978ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರು ಚಿಕ್ಕಮಗಳೂರು ಲೋಕಸಭೆಯಿಂದ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಪಾದರಸದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಮತ್ತು ಪ್ರಖರ ವಾಕ್‌ಪಟುವಾಗಿದ್ದ ಹರಿಪ್ರಸಾದ್ ಅವರು ಸಂಜಯ್ ಗಾಂಧಿಯವರ ಕಣ್ಣಿಗೆ ಬೀಳುತ್ತಾರೆ. ದೆಹಲಿಗೆ ತೆರಳುವಾಗ ಜೊತೆಯಲ್ಲೇ ಹರಿಪ್ರಸಾದ್ ಅವರನ್ನು ಕರೆದೊಯ್ದ ಸಂಜಯ್ ಗಾಂಧಿಯವರು ಪಕ್ಷದ ಪ್ರಮುಖ ಜವಾಬ್ದಾರಿಗಳನ್ನು ವಹಿಸುತ್ತಾ ಹೋಗುತ್ತಾರೆ. ಆನಂತರ ಹರಿಪ್ರಸಾದ್ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.

1979ರಿಂದ 81ರವರೆಗೆ ಅಖಿಲ ಭಾರತ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿಯಾಗಿ, 1989ರಿಂದ 1990ರವರೆಗೆ ಅಖಿಲ ಭಾರತ ಯುವ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷರಾಗಿ, 1994ರಿಂದ 1996ರವರೆಗೆ ಕರ್ನಾಟಕ ರಾಜ್ಯ ಸಂಸದರ ವೇದಿಕೆ ಸಂಯೋಜಕರಾಗಿ, 1997ರಿಂದ 1998ರವರೆಗೆ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಜಂಟಿ ಕಾರ್ಯದರ್ಶಿಯಾಗಿ, 2000-2001ರಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಸೇವಾದಳದ ಅಧ್ಯಕ್ಷರಾಗಿ, 2001ರಿಂದ 2006ರವರೆಗೆ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಕಾರ್ಯದರ್ಶಿಯಾಗಿ, 2006-2018ರವರೆಗೆ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡು ಅವರು ಮಾಡಿರುವ ಪಕ್ಷ ಸಂಘಟನೆ ಗಮನಾರ್ಹ.

ಗುಜರಾತ್‌, ಪುದುಚ್ಚೇರಿ, ದಿಯೂ ಮತ್ತು ದಮನ್‌, ಗೋವಾ, ದಾದರ್‌ ನಗರ್‌ ಹವೇಲಿ, ಹರ್ಯಾಣ, ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್‌, ಒಡಿಶಾ, ಬಿಹಾರ, ರಾಜಸ್ಥಾನ, ಪಂಜಾಬ್‌, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ತ್ರಿಪುರ, ಮಣಿಪುರ ಮತ್ತು ಉತ್ತರ ಪ್ರದೇಶ ಈ ರಾಜ್ಯಗಳ ಉಸ್ತುವಾರಿ ಕಾರ್ಯದರ್ಶಿಯಾಗಿ ಹರಿಪ್ರಸಾದ್ ಅವರು ಮಾಡಿದ ಕೆಲಸಗಳನ್ನು ಪಕ್ಷ ಎಂದಿಗೂ ಮರೆಯುವುದಿಲ್ಲ. 2019ರಲ್ಲಿ ಛತ್ತೀಸ್ ಗಡ, ಒಡಿಸ್ಸಾ, ಜಾರ್ಖಂಡ್ ರಾಜ್ಯಗಳ ಚುನಾವಣಾ ಉಸ್ತುವಾರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಈಗ ಹರ್ಯಾಣ ರಾಜ್ಯ ಉಸ್ತುವಾರಿಯೂ ಆಗಿದ್ದಾರೆ. ಇಂದಿರಾ ಗಾಂಧಿ, ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಕಾಲದವರೆಗೂ ಅವರು ಹೈಕಮಾಂಡ್‌ಗೆ ಪ್ರಿಯವಾದ ಸಂಘಟಕ.

ರಾಜೀವ್ ಗಾಂಧಿಯವರು ಹರಿಪ್ರಸಾದ್ ಅವರನ್ನು 1990ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಗೆ ಕರೆತರುತ್ತಾರೆ. 2004ರಲ್ಲಿ ಸೋನಿಯಾ ಗಾಂಧಿಯವರ ಸೂಚನೆಯಂತೆ ಮತ್ತೆ ರಾಜ್ಯಸಭೆಗೆ ಮರುಪ್ರವೇಶಿಸುತ್ತಾರೆ. 2013 ಮತ್ತು 2014ರಲ್ಲಿ ರಾಹುಲ್ ಗಾಂಧಿಯವರು ಹರಿಪ್ರಸಾದ್ ಅವರನ್ನು ಮತ್ತೆ ರಾಜ್ಯಸಭೆಗೆ ಕಳುಹಿಸುತ್ತಾರೆ.

ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಹರಿಪ್ರಸಾದ್ ಅವರು ಕರ್ನಾಟಕ ರಾಜ್ಯದ ಜನರ ದನಿಯಾಗಿ ಕೆಲಸ ಮಾಡಿದ್ದಾರೆ. ರಾಜ್ಯದ ಸಮಸ್ಯೆಗಳನ್ನು ಸದನದಲ್ಲಿ ದಿಟ್ಟವಾಗಿ ಪ್ರಸ್ತಾಪಿಸಿದ್ದಾರೆ. ಅಷ್ಟೇ ಅಲ್ಲ, ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ ರಾಜ್ಯ ರಾಜಕಾರಣದಲ್ಲೂ ಛಾಪು ಮೂಡಿಸಿದ ಹರಿಪ್ರಸಾದ್ ಅವರು, 2022ರ ಜನವರಿ 27ರಿಂದ 2023ರ ಮೇವರೆಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಗಮನ ಸೆಳೆದರು. ‘ಚಿಂತಕರ ಚಾವಡಿ’ ಎಂಬ ಅರ್ಥದಿಂದ ದೂರವಾಗುತ್ತಿದ್ದ ಮೇಲ್ಮನೆಗೆ, ಅದರ ನಿಜಗುಣವನ್ನು ಮರಳಿ ತಂದವರು ಹರಿಪ್ರಸಾದ್ ಎಂದೇ ಬಣ್ಣಿಸಲಾಗುತ್ತದೆ.

ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿಗೆ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯದ ಸಲಹಾ ಸಮಿತಿಗೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಆರೋಗ್ಯ-ಕುಟುಂಬ ಕಲ್ಯಾಣ ಸಮಿತಿಗಳ ಸಲಹಾ ಸಮಿತಿ, ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಮಿತಿ ಹಾಗೂ ಕಾರ್ಮಿಕ ಕಲ್ಯಾಣ ಸಮಿತಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಮಿತಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ- ಇವುಗಳೆಲ್ಲದರಲ್ಲೂ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಅವರದ್ದು.

ಅಷ್ಟೇ ಅಲ್ಲ, ಭಾರತ-ಟರ್ಕಿ ಸಂಸದೀಯ ಸ್ನೇಹಕೂಟಕ್ಕೆ, ಭಾರತ-ಪೋಲೆಂಡ್ ಸಂಸದೀಯ ಸ್ನೇಹ ಕೂಟಕ್ಕೆ, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರಾಗಿ, ಕೇಂದ್ರ ರೇಷ್ಮೆ ಮಂಡಳಿಗೆ, ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ, ಕಾಫಿ ಮಂಡಳಿಗೆ, ಪೆಟ್ರೋಲಿಯಂ ಮತ್ತು ಸ್ವಾಭಾವಿಕ ಅನಿಲ ಸಮಿತಿಗೆ, ಮಾಹಿತಿ ತಂತ್ರಜ್ಞಾನ ಸಮಿತಿಗೆ, ರಾಷ್ಟ್ರೀಯ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಮಂಡಳಿಗೆ, ವಿಮಾ ಕಾನೂನು (ತಿದ್ದುಪಡಿ) ಮಸೂದೆಯ ರಾಜ್ಯಸಭೆಯ ಸಲಹಾ ಸಮಿತಿಗೆ, ಹಿಂದುಳಿದ ವರ್ಗಗಳ ಸಮಿತಿಗೆ, ಕಲ್ಲಿದ್ದಲು ಮತ್ತು ಉಕ್ಕು ಸಮಿತಿಗೆ, ರಾಸಾಯನಿಕ ಮತ್ತು ರಸಗೊಬ್ಬರ ಸಮಿತಿ ಸದಸ್ಯ, ಆಹಾರ ನಿರ್ವಹಣೆ ಜಂಟಿ ಸಮಿತಿಗೆ ಸದಸ್ಯರಾಗಿದ್ದರು.

22ನೇ ಯುವ ಒಲಿಂಪಿಕ್ ಕ್ಯಾಂಪ್‌ಗಾಗಿ 1980ರಲ್ಲಿ ಮಾಸ್ಕೋಗೆ ಭೇಟಿನೀಡಿದ್ದ ನಿಯೋಗದ ನೇತೃತ್ವ ವಹಿಸಿದ್ದರು. ಅಲಿಪ್ತ ಚಳವಳಿಯ ನೇತಾರರಲ್ಲಿ ಒಬ್ಬರಾಗಿದ್ದ ಸರ್ ಜೋಸೆಫ್ ಬೋಸ್ ನಿಧನದ ಪ್ರಯುಕ್ತ ಬೆಲ್ಗ್ರೇಡ್‌ಗೆ ಭೇಟಿ ನೀಡಿದ್ದರು. ಸ್ಪೇನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಯುವ ಸಮಾವೇಶದಲ್ಲಿ ಭಾಗಿಯಾಗಿದ್ದರು. 1989ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವಾಗ ಚುನಾವಣಾ ಅಧ್ಯಯನ ಪ್ರವಾಸ ತಂಡದ ನೇತೃತ್ವ ವಹಿಸಿದ್ದರು. ಗುಲಾಮಗಿರಿ ಕುರಿತು ಲಂಡನ್‌ನ ವೆಸ್ಟ್‌ಮಿನಿಸ್ಟರ್‌ನಲ್ಲಿ ನಡೆದ ಚರ್ಚೆಯಲ್ಲಿ ಭಾಗಿಯಾಗಿದ್ದರು. ಹೀಗೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದವರೆಗೂ ಕೆಲಸ ಮಾಡಿದ ಅನುಭವ ಬಿಕೆಎಚ್ ಅವರಿಗಿದೆ.

ನೈತಿಕ ಬಲ, ಸಂಘಟನೆಯ ಶಕ್ತಿ ಹೊಂದಿರುವ ಹರಿಪ್ರಸಾದ್ ಅವರನ್ನು ಎದುರಾಳಿಗಳು ಮುಟ್ಟಿ ಸುಧಾರಿಸಿಕೊಳ್ಳುವುದು ಕಷ್ಟ. ಯಾಕೆಂದರೆ ಅವರು ಕೇವಲ ಅನುಭವಿಯಷ್ಟೇ ಅಲ್ಲ, ಆಳವಾದ ಅಧ್ಯಯನಶೀಲರೂ ಹೌದು. ಓದು ಅವರ ಶಕ್ತಿ. ಮಾತಿನಲ್ಲೇ ಮಣಿಸಬಲ್ಲ ಗಟ್ಟಿ ಕಾಳು, ಹರಿಪ್ರಸಾದ್.

ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗುವ ಅವಕಾಶವಿದ್ದರೂ, ಸೋನಿಯಾ ಗಾಂಧಿಯವರಿಲ್ಲದ ಕ್ಯಾಬಿನೆಟ್ ನಲ್ಲಿ ಇರುವುದಕ್ಕೆ ಅವರ ಮನಸ್ಸು ಒಪ್ಪಲಿಲ್ಲ. ಪಕ್ಷ ಸಂಘಟನೆಯೇ ಸಾಕು ಎಂದು ನಿರ್ಧರಿಸಿದ್ದ ಹರಿಪ್ರಸಾದ್ ಅವರು ಅಧಿಕಾರಕ್ಕಾಗಿ ಆಸೆಪಟ್ಟವರಲ್ಲ. ಹೀಗಾಗಿ ಸೋನಿಯಾ ಗಾಂಧಿಯವರ ನಂಬುಗೆಯ ಬಳಗದಲ್ಲಿ ಹರಿಪ್ರಸಾದ್ ಅವರ ಹೆಸರು ಇದ್ದೇ ಇರುತ್ತದೆ.

17ನೇ ಲೋಕಸಭಾ ಚುನಾವಣೆ ಘೋಷಣೆಯಾಗಿತ್ತು. ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ಸುದ್ದಿ ಹರಿದಾಡಿತ್ತು. ಮೋದಿಯವರಿಗೆ ಪ್ರತಿಸ್ಪರ್ಧಿಯಾಗಬಲ್ಲ ಹೆಸರನ್ನು ಮುಂದಿಡಲು ಕಾಂಗ್ರೆಸ್ ಪಕ್ಷ ಯೋಚಿಸಿದಾಗ ಕಂಡಂತಹ ಏಕಮಾತ್ರ ಮುಖವೇ ಹರಿಪ್ರಸಾದ್. ಕಟ್ಟರ್ ಹಿಂದುತ್ವ ವಿರೋಧಿಯಾಗಿ ಗುರುತಿಸಲಾಗುವ ಹರಿಪ್ರಸಾದ್ ಅವರು, ಯಾವುದೇ ಧಾರ್ಮಿಕ ಶ್ರದ್ಧೆಯನ್ನು ವಿರೋಧಿಸಿದವರಲ್ಲ. ಸ್ವಹಿತಾಸಕ್ತಿಗಳ ಕಪಿಮುಷ್ಟಿಗೆ ಸಿಲುಕುತ್ತಿದ್ದ ಬೆಂಗಳೂರಿನ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಾಲಯವನ್ನು ರಕ್ಷಿಸಿದ್ದನ್ನು ಹರಿಪ್ರಸಾದ್ ಆಪ್ತರು ಸದಾ ನೆನಪಿಸಿಕೊಳ್ಳುತ್ತಾರೆ.

ಪರಿವಾರ, ತಳವಾರ, ಸಿದ್ಧಿ ಸಮುದಾಯಗಳ ಪರವಾಗಿ ರಾಜ್ಯಸಭೆಯಲ್ಲಿ ಅವರು ಮಾಡಿದ ಭಾಷಣ, ತಳಸಮುದಾಯಗಳ ಬಗ್ಗೆ ಅವರಿಗಿರುವ ಖಚಿತ ಒಳನೋಟಗಳನ್ನು ಅನಾವರಣ ಮಾಡಿತ್ತು. ಜೊತೆಗೆ ಕೊಡವ ಸಮಾಜದ ವೈವಿಧ್ಯತೆಯನ್ನು ಗುರುತಿಸಿ, ಅವರಿಗೆ ವಿಶೇಷ ಸ್ಥಾನಮಾನ ಕೊಡಬೇಕೆಂದು ಆಗ್ರಹಿಸಿದ್ದರು.

ಹಿಂದುಳಿದ ವರ್ಗಗಳ ಪರವಾಗಿ ಅವರು ತಮ್ಮ ರಾಜಕೀಯದುದ್ದಕ್ಕೂ ದನಿ ಎತ್ತುತ್ತಾ ಬಂದಿರುವುದು ಕಾಣಿಸುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಲಭ್ಯವಿರುವ ಮೀಸಲಾತಿಯ ಮಾದರಿಯಲ್ಲಿ ರಾಜ್ಯಸಭೆ ಮತ್ತು ವಿಧಾನಸಭೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಂತೆ ಕೋರಿ ವೈಎಸ್ಆರ್ ಕಾಂಗ್ರೆಸ್‌ನ ವಿಜಯ ಸಾಯಿ ರೆಡ್ಡಿ ಅವರು ಖಾಸಗಿ ಮಸೂದೆಯನ್ನು ಮಂಡಿಸಿದಾಗ, ಅದನ್ನು ಬೆಂಬಲಿಸಿ ಹರಿಪ್ರಸಾದ್ ಮಾತನಾಡುತ್ತಾ ಒಬಿಸಿಗಳು ಎದುರಿಸುತ್ತಿರುವ ಜಾತಿ ತಾರತಮ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ‘ಸಂವಿಧಾನ (123ನೇ ತಿದ್ದುಪಡಿ) ಮಸೂದೆ’ಯ ಚರ್ಚೆಯ ಸಂದರ್ಭದಲ್ಲಿ ಅವರು ರಾಜ್ಯಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ್ದರು. “ಮೀಸಲಾತಿ ಎಂಬುದು ಭಿಕ್ಷೆಯಲ್ಲ, ಅದು ನಮ್ಮ ಹಕ್ಕು” ಎಂದು ಪ್ರತಿಪಾದಿಸಿದ್ದ ಅವರು, ದೇವರಾಜ ಅರಸು ಅವರು ಎಳೆದ ಸಾಮಾಜಿಕ ನ್ಯಾಯದ ಬಂಡಿಯನ್ನು ಮುಂದಕ್ಕೆ ಕೊಂಡೊಯ್ಯುವ ಸಾರಥಿಯಾಗಿಯೂ ಗುರುತಿಸಲ್ಪಡುತ್ತಿದ್ದಾರೆ.

ಹಿಂದುಳಿದ ಬಿಲ್ಲವ ಸಮುದಾಯವನ್ನು ಕೋಮುವಾದಿಗಳ ಬಿಗಿಮುಷ್ಟಿಯಿಂದ ಹೊರತಂದು ಉನ್ನತಿಗೇರಿಸಲು ಹರಿಪ್ರಸಾದ್ ಅವರು ಶ್ರಮಿಸುತ್ತಿರುವುದು ಸ್ಪಷ್ಟ. ಬಿಲ್ಲವ ಸಮಾಜವು ನಾರಾಯಣ ಗುರುಗಳ ಹಾದಿಯಲ್ಲಿ ಸಾಗಬೇಕು, ಗಾಂಧಿ ಚಿಂತನೆಗಳನ್ನು ಅರಿಯಬೇಕು ಎಂಬುದು ಹರಿಪ್ರಸಾದ್ ಅವರ ದೂರದೃಷ್ಟಿತ್ವ. 2025ರ ಡಿಸೆಂಬರ್‌ ನಲ್ಲಿ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಗುರು-ಗಾಂಧಿ ಸಂವಾದ ಶತಮಾನೋತ್ಸವ’ ಕಾರ್ಯಕ್ರಮ ಬಿ.ಕೆ.ಎಚ್ ಅವರಿಗಿರುವ ಸಾಂಸ್ಕೃತಿಕ ರಾಜಕಾರಣದ ಮುನ್ನೋಟಕ್ಕೆ ಕನ್ನಡಿ ಹಿಡಿಯುತ್ತದೆ.  ಪ್ರಸಿದ್ಧ ವೈಕಂ ಸತ್ಯಾಗ್ರಹದಲ್ಲಿ ಭಾಗಿಯಾಗಲು ಗಾಂಧೀಜಿಯವರು ಕೇರಳಕ್ಕೆ ಬಂದಿದ್ದ ಸಂದರ್ಭದಲ್ಲಿ ನಾರಾಯಣ ಗುರುಗಳ ಜೊತೆ ಐತಿಹಾಸಿಕ ಸಂವಾದ ನಡೆಸಿದ್ದರು. ಆ ಚಾರಿತ್ರಿಕ ಘಟನೆಗೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಹರಿಪ್ರಸಾದ್ ಅವರ ಮುಂದಾಳತ್ವದಲ್ಲಿ ರೂಪುಗೊಂಡ ‘ಗುರು-ಗಾಂಧಿ’ ಕಾರ್ಯಕ್ರಮ ಕೇವಲ ಯಾವುದೋ ಒಂದು ಸಮಾರಂಭವಾಗಿರಲಿಲ್ಲ. ಬಿಲ್ಲವ ಸಮುದಾಯ ತನ್ನ ನಿಜವಾದ ಚಾರಿತ್ರಿಕ, ಸಾಮಾಜಿಕ ಬೇರುಗಳನ್ನು ಮರುಶೋಧಿಸಿಕೊಳ್ಳುವ ಪ್ರಯತ್ನ ಅದಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ, ಈ ದುರಿತ ಕಾಲದಲ್ಲಿ ಇಂತಹ ಸಾಂಸ್ಕೃತಿಕ ಹೆಜ್ಜೆಗಳ ಅಗತ್ಯತೆಯನ್ನು ಮನಗಂಡ ಹರಿಪ್ರಸಾದ್ ಈ ಕಾರ್ಯಕ್ರಮವನ್ನು ಕೇರಳದಲ್ಲೂ ಆಯೋಜಿಸಿದರು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಆ ಸಮಾರಂಭದಲ್ಲಿ ಭಾಗಿಯಾಗಿದ್ದರು.

ದೇಶದಲ್ಲಿ ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಮತ್ತು ಹಿಂದುಳಿದ ವರ್ಗಗಳಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ಹೋರಾಟದಲ್ಲಿ ಸಂಸತ್ತಿನ ಒಳಗೆ ಹರಿಪ್ರಸಾದ್ ಪ್ರಮುಖ ಪಾತ್ರ ವಹಿಸಿದ್ದರು. “ಜಾತಿ ಆಧಾರಿತ ಜನಗಣತಿಯನ್ನು ಬಹಿರಂಗಪಡಿಸಬೇಕು ಮತ್ತು ಅದರ ಆಧಾರದ ಮೇಲೆ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಹಂಚಬೇಕು” ಎಂದು ಕರ್ನಾಟಕ ವಿಧಾನ ಪರಿಷತ್ ಮತ್ತು ರಾಷ್ಟ್ರ ಮಟ್ಟದಲ್ಲಿ ನಿರಂತರವಾಗಿ ಒತ್ತಾಯಿಸುತ್ತಾ ಬಂದವರು ಹರಿಪ್ರಸಾದ್.

ಈ ಲೇಖನ ಓದಿದ್ದೀರಾ?: ರಾಮಮಂದಿರ ದೇಣಿಗೆ ದುರುಪಯೋಗ: ಬಿಜೆಪಿಯ ಬ್ರಿಜ್ ಭೂಷಣ್ ಆರೋಪಗಳ ಸುತ್ತ

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದಾಗಲಂತೂ ಸೈದ್ಧಾಂತಿಕವಾಗಿ ಹರಿಪ್ರಸಾದ್ ಅವರಿಗೆ ಹರಿಪ್ರಸಾದ್ ಅವರೇ ಸಾಟಿ ಎಂದು ಬಿಡಿಸಿ ಹೇಳಬೇಕಿಲ್ಲ. “ಈ ʼಹಾವಿನ ಪುರʼದ ಕಚೇರಿ ಮೇಲೆ ತ್ರಿವರ್ಣಧ್ವಜ ಹಾರಿಸಲು 52 ವರ್ಷ ಬೇಕಾಯಿತು. ನಾನು ಕನ್ನಡಾಭಿಮಾನಿ. ನಾಗಪುರವನ್ನು ನಾನು ಹಾವಿನಪುರ ಎಂದೇ ಕರೆಯೋದು” ಎಂದು ಶಾಸನ ಸಭೆಯಲ್ಲೇ ಹೇಳಿಕೆ ನೀಡಿದ್ದರು. “ಬಿಜೆಪಿಯವರು ಅತ್ಯಾಚಾರಿಗಳು” ಎಂದು ಖಾರವಾಗಿ ಪ್ರತಿಕ್ರಿಯಿಸಿ, ಆ ಹೇಳಿಕೆಗೆ ಬದ್ಧರಾಗಿ ನಿಲ್ಲಬಲ್ಲರು ಎಂಬುದೇ ಹರಿಪ್ರಸಾದ್ ತಾಕತ್ತು.

ಕಾಂಗ್ರೆಸ್ ಸರ್ಕಾರ ಬರೆದುಕೊಟ್ಟ ಭಾಷಣವನ್ನು ಪೂರ್ಣ ಓದದೆ ಅಸಹಕಾರ ತೋರಿದ್ದ ರಾಜ್ಯಪಾಲರನ್ನು ಸದನದ ಒಳಗೆ ಅಡ್ಡಗಟ್ಟಿ, “ನೀವು ಈ ರಾಜ್ಯದ ಜನತೆಗೆ ಅವಮಾನ ಮಾಡುತ್ತಿದ್ದೀರಿ” ಎಂದು ಹರಿಪ್ರಸಾದ್ ಗಟ್ಟಿಯಾಗಿ ಹೇಳಿದ್ದರು. ಅಂದಿನ ನೂಕಾಟದಲ್ಲಿ ಅವರ ಜುಬ್ಬ ಹಿಂಬದಿಯಲ್ಲಿ ಹರಿದಿತ್ತು.

“ನನ್ನ ಬಟ್ಟೆಯನ್ನು ಹಿಂದಿನಿಂದ ಹರಿದಿದ್ದಾರೆ. ಮುಂದೆ ಬರಲು ಧೈರ್ಯವಿಲ್ಲದ ರಣಹೇಡಿಗಳಿವರು. ಆರೆಸ್ಸೆಸ್‌ – ಬಿಜೆಪಿಯವರು ಬ್ರಿಟಿಷರ ಬೂಟು ನೆಕ್ಕಿದವರು. ಮುಂದೆ ಬರುವುದಕ್ಕೆ ಅವರಿಗೆ ಧೈರ್ಯವಿಲ್ಲ. ಗವರ್ನರ್ ಮೂಲಕ ಕರ್ನಾಟಕ ರಾಜ್ಯದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ನಾಗಪುರ ಯೂನಿವರ್ಸಿಟಿಯಲ್ಲಿ ತಯಾರಾಗಿರುವವರು ನಾವಲ್ಲ. ನಾವು ಬೆಂಗಳೂರು ಯೂನಿವರ್ಸಿಟಿಯಲ್ಲಿ ತಯಾರಾಗಿರುವವರು” ಎಂದು ಹರಿಪ್ರಸಾದ್ ಗುಡುಗಿದ ರೀತಿ, ಅವರ ಗಟ್ಟಿತನಕ್ಕೆ ಕನ್ನಡಿ ಹಿಡಿದಿತ್ತು.

ಕರಾವಳಿಗೆ ದಕ್ಷ ಪೊಲೀಸ್ ಅಧಿಕಾರಿಗಳನ್ನು ಪೋಸ್ಟಿಂಗ್ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು, ಕೋಮುವಾದಿ ಚಟುವಟಿಕೆಗಳನ್ನು ತಕ್ಕಮಟ್ಟಿಗೆ ಹತ್ತಿಕ್ಕುವುದಕ್ಕೆ ಕಾರಣರಾದರು. ಕುವೆಂಪು, ಗೋವಿಂದ ಪೈ, ಶಿವರಾಮ ಕಾರಂತ, ದೇವನೂರು ಮಹಾದೇವರಂತಹ ಚಿಂತಕರ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ, ಅವರ ಚಿಂತನೆಗಳನ್ನು ರಾಜಕಾರಣದಲ್ಲಿ ಅಳವಡಿಸಲು ಯತ್ನಿಸುವ ಹರಿಪ್ರಸಾದ್ ಅವರ ಬದ್ಧತೆ ದೊಡ್ಡದು. ಕೋಮುವಾದದ ಪ್ರಬಲ ವಿರೋಧಿಯಾದ ಹರಿಪ್ರಸಾದ್ ಅವರ ಹೆಗಲ ಮೇಲೆ ಸಾಕಷ್ಟು ಜವಾಬ್ದಾರಿಗಳಂತೂ ಇವೆ. ಕೋಮುವಾದಿ ರಾಜಕಾರಣವನ್ನು ಮೃದು ಹಿಂದುತ್ವದಿಂದ ಸೋಲಿಸಲು ಸಾಧ್ಯವಿಲ್ಲ. ಅದನ್ನು ಸೆಕ್ಯುಲರ್ ಮತ್ತು ಸಾಮಾಜಿಕ ನ್ಯಾಯ ಚಳವಳಿಗಳ ಮೂಲಕವೇ ಹಿಮ್ಮೆಟ್ಟಿಸಬೇಕು. ಕೋಮುವಾದದ ಬೇರುಗಳನ್ನು ಬಲ್ಲ, ಸೈದ್ಧಾಂತಿಕ ರಾಜಕಾರಣ ಮಾಡಬಲ್ಲ ಕೆಲವೇ ಕೆಲವು ಕಾಂಗ್ರೆಸ್ಸಿಗರಲ್ಲಿ ಹರಿಪ್ರಸಾದ್ ಒಬ್ಬರೆಂಬ ಕಾರಣಕ್ಕೆ ಪ್ರಜ್ಞಾವಂತ ಸಮಾಜ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಕಾಂಗ್ರೆಸ್ ಪಕ್ಷಕ್ಕೆ ಬಿಕೆಎಚ್ ಯಾವ ರೂಪವನ್ನು ಕೊಡುತ್ತಾರೆಂಬ ಕುತೂಹಲ ಎಲ್ಲರಿಗೂ ಇದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಕದನ ವಿರಾಮ ಎಂಬುದು ಬರಿ ಕಣ್ಣೊರೆಸುವ ತಂತ್ರ’; ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆ ಆಕ್ರೋಶ

ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದಲ್ಲಿ ಇಸ್ರೇಲ್ ಪಡೆಗಳು ನಡೆಸುತ್ತಿರುವ ಹಿಂಸಾಚಾರ ಮತ್ತು ಮಾನವಹಕ್ಕುಗಳ...

ಸೋಮನಾಥ ದೇಗುಲದ ಸುತ್ತ ಮಾಂಸಾಹಾರ ನಿಷೇಧ ಮುಂದುವರಿಕೆ; ಏಕಸದಸ್ಯ ಪೀಠದ ಆದೇಶಕ್ಕೆ ಗುಜರಾತ್ ಹೈಕೋರ್ಟ್ ತಡೆ

ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಂಸಾಹಾರ ತಯಾರಿಕೆ, ಮಾರಾಟ...

SIR ­| ಫಾರ್ಮ್-7 ದುರ್ಬಳಕೆ: ವರದಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ತಾಕೀತು!

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ‘ಫಾರ್ಮ್-7’ ನಮೂನೆಗಳನ್ನು ಅಪಾರ ಪ್ರಮಾಣದಲ್ಲಿ...

ವಿಮಲ್ ಜಾಹೀರಾತು ವಿವಾದ: ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ ನಟ ಅಜಯ್ ದೇವಗನ್! 

'ವಿಮಲ್ ಏಲಕ್ಕಿ' ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಇಲಾಖೆ...