ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ‘ಫಾರ್ಮ್-7’ ನಮೂನೆಗಳನ್ನು ಅಪಾರ ಪ್ರಮಾಣದಲ್ಲಿ ಮತ್ತು ಅಕ್ರಮವಾಗಿ ಸಲ್ಲಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ಫಾರ್ಮ್-7 ದುರ್ಬಳಕೆ ಮತ್ತು ಸುಧಾರಣಾ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಉತ್ತರ ಪ್ರದೇಶದಲ್ಲಿ ಸುಮಾರು 2.5 ಕೋಟಿ ಮತದಾರರನ್ನು ಮತಪಟ್ಟಿಯಿಂದ ಅಳಿಸಿ ಹಾಕಲಾಗಿದೆ. ಅರ್ಹರ ಹೆಸರುಗಳನ್ನು ಅಳಿಸಲು ಫಾರ್ಮ್—7ಅನ್ನು ಅಗಾಧವಾಗಿ ದುರ್ಬಳಕೆ ಮಾಡಿಕೊಳ್ಳಾಗಿದೆ ಎಂದು ಕಾಂಗ್ರೆಸ್ ಸಂಸದ ತನುಜ್ ಪುನಿಯಾ ಹಾಗೂ ಇತರರು ಅರ್ಜಿ ಸಲ್ಲಿಸಿದ್ದರು. ಅರ್ಜಿಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿದೆ. “ಅರ್ಜಿದಾರರು ಆಕ್ಷೇಪಿಸಿರುವ ಮತ್ತು ಇದುವರೆಗೆ ಬಗೆಹರಿಯದೆ ಉಳಿದಿರುವ ಸಮಸ್ಯೆಗಳು ಮತ್ತು ಗೊಂದಲಗಳ ಕುರಿತು ಸಂಪೂರ್ಣ ವಿವರಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಬೇಕು” ಎಂದು ತಾಕೀತು ಮಾಡಿದೆ.
ಅಲ್ಲದೆ, “ಅರ್ಜಿದಾರರು ಎತ್ತಿರುವ ಪ್ರಶ್ನೆಗಳನ್ನು ಚುನಾವಣಾ ಆಯೋಗವು ಕೂಲಂಕಷವಾಗಿ ಪರಿಶೀಲಿಸಬೇಕು. ತಕ್ಷಣವೇ ಅಗತ್ಯ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳಬೇಕು. ಬಳಿಕ, ನ್ಯಾಯಾಲಯಕ್ಕೆ ಅನುಸರಣಾ ವರದಿಯನ್ನೂ ಒದಗಿಸಬೇಕು” ಎಂದು ನಿರ್ದೇಶಿಸಿದೆ.
ವಿಚಾರಣೆ ವೇಳೆ, ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ನಿರ್ದಿಷ್ಟ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು ಒಂದೇ ಕ್ಷೇತ್ರದಲ್ಲಿ ಬರೋಬ್ಬರಿ 32 ಫಾರ್ಮ್-7 ಅರ್ಜಿಗಳನ್ನು ಸಾಮೂಹಿಕವಾಗಿ ಸಲ್ಲಿಸಲಾಗಿದೆ ಎಂದು ಪೀಠದ ಗಮನಕ್ಕೆ ತಂದರು.
ಚುನಾವಣಾ ಆಯೋಗದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಡಿ.ಎಸ್ ನಾಯ್ಡು , ಸಾಮೂಹಿಕವಾಗಿ ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಆ ಅರ್ಜಿಗಳ ಮೇಲೆ ಯಾವುದೇ ಅಕ್ರಮ ಕ್ರಮ ಜರುಗಿಸಿಲ್ಲ ಎಂದು ಹೇಳಿದ್ದಾರೆ.
“ನಮ್ಮ ಅಧಿಕಾರಿಗಳು ಈ ರೀತಿ ಬಂದ ಸಾಲು ಸಾಲು ಅರ್ಜಿಗಳನ್ನು ಪರಿಶೀಲಿಸಿದಾಗ ಅವು ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ಕಂಡುಬಂದಿದೆ. ಹಾಗಾಗಿ ನಾವು ಆ ಅರ್ಜಿಗಳ ಆಧಾರದ ಮೇಲೆ ಯಾವುದೇ ಹೆಸರುಗಳನ್ನು ಡಿಲೀಟ್ ಮಾಡಿಲ್ಲ ಅಥವಾ ಕ್ರಮ ತೆಗೆದುಕೊಂಡಿಲ್ಲ” ಎಂದು ಅವರು ಕೋರ್ಟ್‌ಗೆ ತಿಳಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಕೂಡ ಪ್ರತ್ಯೇಕ ಪ್ರಕರಣಗಳಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಚಾಟ ಬೀಸಿದ್ದು, ಬಲರಾಮ್‌ಪುರ ಮತ್ತು ಅಮೇಥಿ ಜಿಲ್ಲೆಗಳಲ್ಲಿ ನೈಜ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಾನೂನುಬಾಹಿರವಾಗಿ ಕೈಬಿಟ್ಟು, ಊರಿನಲ್ಲೇ ಇಲ್ಲದವರ ಹೆಸರುಗಳನ್ನು ಸೇರಿಸಿರುವುದಕ್ಕೆ ಸಂಬಂಧಿಸಿದಂತೆ ಅಸಮಾಧನ ವ್ಯಕ್ತಪಡಿಸಿದೆ.
ಫಾರ್ಮ್-7 ದುರುಪಯೋಗ ಮತ್ತು ‘ವೋಟ್ ಚೋರಿ’ ಹುನ್ನಾರ
ಚುನಾವಣಾ ಆಯೋಗದ ಸ್ಪಷ್ಟ ನಿಯಮಗಳ ಪ್ರಕಾರ, ‘ಫಾರ್ಮ್-7’ ಎನ್ನುವುದು ಮತದಾರರ ಪಟ್ಟಿಯಲ್ಲಿ ಯಾರಾದರೂ ಮೃತಪಟ್ಟಿದ್ದರೆ, ಶಾಶ್ವತವಾಗಿ ಸ್ಥಳಾಂತರಗೊಂಡಿದ್ದರೆ ಅಥವಾ ನಕಲಿ ಹೆಸರಿದ್ದರೆ ಅವರ ಹೆಸರುಗಳನ್ನು ಅಳಿಸಲು ಮಾತ್ರವೇ ಸಲ್ಲಿಸಬೇಕು.
ಕಾನೂನಿನ ಪ್ರಕಾರ, ಒಬ್ಬ ಸಾಮಾನ್ಯ ಮತದಾರ ಕೇವಲ ತನ್ನ ಅಥವಾ ತನ್ನ ಕುಟುಂಬದ ಸದಸ್ಯರ ಹೆಸರುಗಳ ಬಗ್ಗೆ ಮಾತ್ರ ಈ ಆಕ್ಷೇಪಣಾ ಅರ್ಜಿ ಸಲ್ಲಿಸಲು ಅವಕಾಶವಿದೆ. ರಾಜಕೀಯ ಪಕ್ಷಗಳು ನೇಮಿಸುವ ಬೂತ್ ಮಟ್ಟದ ಏಜೆಂಟ್‌ಗಳು (BLA) ದಿನಕ್ಕೆ ಗರಿಷ್ಠ 10 ಅರ್ಜಿಗಳನ್ನು ಮತ್ತು ಸಂಪೂರ್ಣ ಪರಿಷ್ಕರಣೆಯ ಅವಧಿಯಲ್ಲಿ ಒಟ್ಟಾರೆಯಾಗಿ ಗರಿಷ್ಠ 30 ಆಕ್ಷೇಪಣೆಗಳನ್ನು ಮಾತ್ರ ಸಲ್ಲಿಸಬಹುದು. ಆದರೆ ಪ್ರಸ್ತುತ ಈ ಕಾನೂನು ಚೌಕಟ್ಟನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಬಿಜೆಪಿಗೆ ಸಂಬಂಧಿಸಿದ ಒಬ್ಬನೇ ವ್ಯಕ್ತಿ ಅಥವಾ ಏಜೆಂಟ್ ಒಂದೇ ದಿನದಲ್ಲಿ 100 ರಿಂದ 500ಕ್ಕೂ ಹೆಚ್ಚು ನಮೂನೆಗಳನ್ನು ರಾಶಿ-ರಾಶಿಯಾಗಿ ಸಲ್ಲಿಸುತ್ತಿರುವುದು ಬೆಳಕಿಗೆ ಬಂದಿದೆ.
ನಕಲಿ ಸಹಿ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿ, ವಿರೋಧ ಪಕ್ಷಗಳ ಬೆಂಬಲಿಗ ಮತದಾರರು ಮತ್ತು ನಿರ್ದಿಷ್ಟ ಸಮುದಾಯಗಳ ಮತದಾರರನ್ನೇ ಗುರಿಯಾಗಿಸಿಕೊಂಡು ಅವರ ಹೆಸರುಗಳನ್ನು ಡಿಲೀಟ್ ಮಾಡಿಸಲು ‘ಸೈಬರ್ ದರೋಡೆ’ ಮಾದರಿಯ ಸಂಚು ರೂಪಿಸಲಾಗಿದೆ. ಜನಪ್ರತಿನಿಧಿ ಕಾಯ್ದೆಯಡಿ ನಕಲಿ ಅರ್ಜಿ ಸಲ್ಲಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗಟ್ಟಲು ಅವಕಾಶವಿದ್ದರೂ, ಆಯೋಗ ಯಾವುದೇ ಎಫ್‌ಐಆರ್ ದಾಖಲಿಸದೆ ಮೌನ ವಹಿಸಿದ್ದು ಫಾರ್ಮ್-7 ಅರ್ಜಿ ಸಲ್ಲಿಸುವ ಸಂಚುಕೋರರಿಗೆಧೈರ್ಯ ತುಂಬಿದಂತಾಗಿದೆ.
ಈ ರೀತಿಯ ದುರುಪಯೋಗದಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಲಕ್ಷಾಂತರ ನೈಜ ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಪ್ರಮುಖವಾಗಿ ಪಶ್ಚಿಮ ಬಂಗಾಳದಲ್ಲಿ 6 ಲಕ್ಷ, ಉತ್ತರ ಪ್ರದೇಶದಲ್ಲಿ 2.6 ಲಕ್ಷ, ಬಿಹಾರದಲ್ಲಿ 3 ಲಕ್ಷಕ್ಕೂ ಹೆಚ್ಚು ಹಾಗೂ ಗುಜರಾತ್, ಉತ್ತರಾಖಂಡಗಳಲ್ಲಿ ಸಾವಿರಾರು ಮತಗಳು ಕಡಿತಗೊಂಡಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತೀರಾ ಸಣ್ಣ ಅಂತರದ ಗೆಲುವು ದಾಖಲಾದ ಸುಮಾರು 48 ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿನ ಅಂತರಕ್ಕಿಂತಲೂ ಈ ರೀತಿ ಫಾರ್ಮ್-7 ಮೂಲಕ ಡಿಲೀಟ್ ಮಾಡಿಸಲಾದ ಮತಗಳ ಸಂಖ್ಯೆಯೇ ಹೆಚ್ಚಾಗಿತ್ತು ಎಂಬ ಆಘಾತಕಾರಿ ಅಂಕಿಅಂಶಗಳು ಬಹಿರಂಗಗೊಂಡಿವೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಪತ್ರಿಕಾಗೋಷ್ಠಿ ನಡೆಸಿ, “ಮತಪಟ್ಟಿಯಿಂದ ನಕಲಿ ಅರ್ಜಿ ಸಲ್ಲಿಸಿ ನೈಜ ಮತದಾರರನ್ನು ಹೊರಹಾಕುತ್ತಿರುವ ಕಳ್ಳರನ್ನು ಆಯೋಗವೇ ರಕ್ಷಿಸುತ್ತಿದೆ” ಎಂದು ನೇರ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯ ಆಳಂದ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆ ವೇಳೆ 5,994 ಮತಗಳನ್ನು ಅಳಿಸಲು ಹೊರರಾಜ್ಯದ ಮೊಬೈಲ್ ಸಂಖ್ಯೆಗಳನ್ನು ಬಳಸಿ ನಕಲಿ ಲಾಗಿನ್ ಸೃಷ್ಟಿಸಿದ್ದು ಸಿಐಡಿ ತನಿಖೆಯಲ್ಲಿದ್ದು, ತನಿಖೆಗೆ ಅಗತ್ಯವಾದ ಐಪಿ ಅಡ್ರೆಸ್ ವಿವರಗಳನ್ನು ನೀಡಲು ಆಯೋಗ ವಿಳಂಬ ಧೋರಣೆ ತೋರುತ್ತಿದೆ ಎಂಬ ಆರೋಪಗಳೂ ಇವೆ.
ಕರ್ನಾಟಕದಲ್ಲೂ ಫಾರ್ಮ್-7 ದುರ್ಬಳಕೆ
ಕರ್ನಾಟಕದಲ್ಲೂ ಸುಮಾರು 67,000ಕ್ಕೂ ಹೆಚ್ಚು ಮತದಾರರ ವಿರುದ್ಧ ಫಾರ್ಮ್-7 ಅಡಿಯಲ್ಲಿ ಅಕ್ರಮ ಆಕ್ಷೇಪಣೆಗಳನ್ನು ಸಲ್ಲಿಸಿರುವುದು ಪತ್ತೆಯಾಗಿದೆ.
1. ಬಬಲೇಶ್ವರ ಕ್ಷೇತ್ರ (ವಿಜಯಪುರ): ಸಚಿವ ಎಂ.ಬಿ. ಪಾಟೀಲ್ ಪ್ರತಿನಿಧಿಸುವ ಈ ಕ್ಷೇತ್ರದಲ್ಲಿ ಕೇವಲ 7 ವ್ಯಕ್ತಿಗಳು ಸೇರಿ ಬರೋಬ್ಬರಿ 1,564 ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅಧಿಕಾರಿಗಳ ವಿಚಾರಣೆ ಮುಗಿಯುವ ಕಡೆಯ ಎರಡು ದಿನಗಳಲ್ಲಿ (ಸೆಪ್ಟೆಂಬರ್ 22 ಮತ್ತು 23) 1,500ಕ್ಕೂ ಹೆಚ್ಚು ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡು ಈ ಅರ್ಜಿಗಳನ್ನು ಸುರಿಯಲಾಗಿತ್ತು, ಇದರಿಂದಾಗಿ ನೋಟಿಸ್ ನೀಡಿ ದಾಖಲೆ ಪರಿಶೀಲಿಸಲು ಸಮಯವೇ ಸಿಗದೆ ಹೆಸರುಗಳು ಡಿಲೀಟ್ ಆಗಲಿ ಎಂಬುದು ಅವರ ಸಂಚಾಗಿತ್ತು. ಆಕ್ರಮ ಬಯಲಾಗುತ್ತಿದ್ದಂತೆ ಅರ್ಜಿ ಹಿಂಪಡೆಯುವುದಾಗಿ ಪತ್ರ ನೀಡಲು ಅವರು ಯತ್ನಿಸಿದ್ದಾರೆ.
2. ಮೂಡಿಗೆರೆ ಮತ್ತು ಮಡಿಕೇರಿ: ಮೂಡಿಗೆರೆಯಲ್ಲಿ ಬಿಜೆಪಿ ಪದಾಧಿಕಾರಿಯೊಬ್ಬರ ಹೆಸರು ಮತ್ತು ಫೋನ್ ನಂಬರ್ ಬಳಸಿ ನಕಲಿ ಸಹಿಯೊಂದಿಗೆ ಅರ್ಜಿ ಸಲ್ಲಿಸಲಾಗಿತ್ತು. ಅದೇ ರೀತಿ ಕೊಡಗಿನ ಬ್ಯಾಡಗೊಟ್ಟದ ಬೂತ್ ಸಂಖ್ಯೆ 21ರಲ್ಲಿ ಕೇವಲ ಒಂದೇ ದಿನದಲ್ಲಿ 63 ಮುಸ್ಲಿಂ ಮತದಾರರ ವಿರುದ್ಧ ಮುದ್ರಿತ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ವಿಚಾರಣೆಯ ವೇಳೆ ಸೋಮವಾರಪೇಟೆಯ ಬಿಜೆಪಿ ಕಚೇರಿಯಿಂದಲೇ ಈ ಮುದ್ರಿತ ‘ಟೂಲ್ ಕಿಟ್’ಗಳನ್ನು ನೀಡಲಾಗಿತ್ತು ಎಂಬ ಸತ್ಯವನ್ನು ಏಜೆಂಟ್‌ಗಳು ಒಪ್ಪಿಕೊಂಡಿದ್ದಾರೆ. ಬೆಳಗಾವಿ ಉತ್ತರದಲ್ಲಿ 600ಕ್ಕೂ ಹೆಚ್ಚು ಹಾಗೂ ಭಾಲ್ಕಿ, ಶಿವಮೊಗ್ಗದಲ್ಲೂ ಇಂತಹುದೇ ಅಕ್ರಮಗಳು ಕಂಡುಬಂದಿವೆ.
ಈ ಲೇಖನ ಓದಿದ್ದೀರಾ?: ಗಡಿಯಲ್ಲಿ ಚೀನಾ ಅತಿಕ್ರಮಣ; ಮೌನಕ್ಕೆ ಸರಿದ 56 ಇಂಚಿನ ಎದೆಯ ಮೋದಿ!
ರಾಜ್ಯದಲ್ಲಿ ಒಟ್ಟು 45 ರಿಂದ 50 ಲಕ್ಷ ಮತದಾರರನ್ನು ಪಟ್ಟಿಯಿಂದ ಹೊರಹಾಕಲು ಬಿಜೆಪಿ ಫಾರ್ಮ್-7 ಅನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮತ ಕಳವು ಷಡ್ಯಂತ್ರದ ವಿರುದ್ಧ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಸಚಿವರ ನಿಯೋಗವು ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ತೆರಳಿ ಧರಣಿ ನಡೆಸಿ ಕಠಿಣ ದೂರು ಸಲ್ಲಿಸಿತು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಕದಲುವುದಿಲ್ಲ ಎಂದು ಪಟ್ಟು ಹಿಡಿದ ಪರಿಣಾಮ, ರಾಜ್ಯ ಚುನಾವಣಾ ಆಯುಕ್ತರು ತಕ್ಷಣವೇ ಎಚ್ಚೆತ್ತುಕೊಂಡು, ನಿಯಮಬಾಹಿರವಾಗಿ ಹಾಗೂ ಅಕ್ರಮವಾಗಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಿದ ಪ್ರತಿಯೊಬ್ಬ ಕಿಡಿಗೇಡಿಯ ವಿರುದ್ಧ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಿ ಕ್ರಿಮಿನಲ್ ಕ್ರಮ ಜರುಗಿಸುವಂತೆ ರಾಜ್ಯದ ಎಲ್ಲ ಇಆರ್‌ಒ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.
ಆದಾಗ್ಯೂ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಚಿತ್ತಾಪುರ ಕ್ಷೇತ್ರವನ್ನು ಹೊರತುಪಡಿಸಿ, ಬೇರೆ ಯಾವುದೇ ವಿಧಾನಸಭಾ ಕ್ಷೇತ್ರಗಳಲ್ಲಿ ಈವರೆಗೆ ಅಕ್ರಮ ಫಾರ್ಮ್-7 ಸಲ್ಲಿಸಿದವರ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿಲ್ಲ.



