ಡಿಕೆ ಮತ್ತು ಬಿಕೆ ಅವರನ್ನು ಸೈದ್ಧಾಂತಿಕವಾಗಿ ಹೋಲಿಸಲು ಸಾಧ್ಯವಿಲ್ಲ. ಡಿಕೆ ಮೃದು ಹಿಂದುತ್ವವನ್ನು ಪಾಲಿಸುವ ವ್ಯಕ್ತಿಯಂತೆ ಭಾಸವಾಗುತ್ತಾರೆ. ಆದರೆ ಬಿಕೆ ಹಿಂದೂ ಧರ್ಮದ ಪಾಲಕರಾದರೂ ಮತೀಯವಾದಿ ಶಕ್ತಿಗಳನ್ನು ಎಂದಿಗೂ ಹತ್ತಿರಕ್ಕೆ ಬಿಟ್ಟುಕೊಂಡವರಲ್ಲ.
ಕರ್ನಾಟಕ ಕಾಂಗ್ರೆಸ್‌ನಲ್ಲೀಗ ಡಿಕೆ- ಬಿಕೆ ಪರ್ವ ಎಂದೇ ಮಾತುಗಳು ಚಾಲ್ತಿಗೆ ಬಂದಿವೆ. ಅಹಿಂದ ನಾಯಕ ಸಿದ್ದರಾಮಯ್ಯನವರಿಂದ ಪ್ರಭಾವಿ ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಕುರ್ಚಿ ಹಸ್ತಾಂತರವಾಯಿತು. ಇತ್ತ ಡಿ.ಕೆ. ಅವರ ಕೈಲಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷಗಿರಿಯು ಅಹಿಂದ ಸಮುದಾಯದ ಫೈಯರ್ ಬ್ರಾಂಡ್ ಬಿ.ಕೆ. ಹರಿಪ್ರಸಾದ್ ಅವರಿಗೆ ವರ್ಗಾವಣೆಯಾಯಿತು. ಈ ಎರಡು ಬದಲಾವಣೆಗಳ ಮೂಲಕ ಕಾಂಗ್ರೆಸ್ ಪಕ್ಷವು ಹೊಸ ರಾಜಕೀಯ ಸಮೀಕರಣಗಳನ್ನಂತೂ ಹೆಣೆದಿದೆ.
ಡಿಕೆ ಮತ್ತು ಬಿಕೆ ಕಾಂಗ್ರೆಸ್ ಪಕ್ಷದ ಕಟ್ಟಾಳುಗಳು ಎಂದೇ ಗುರುತಿಸಲ್ಪಟ್ಟವರು. ರಾಜ್ಯ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ, ಅಧಿಕಾರ ತಂದುಕೊಡುವಲ್ಲಿ ಡಿಕೆ ಪಾತ್ರ ವಹಿಸಿದರೆ, ರಾಷ್ಟ್ರಮಟ್ಟದಲ್ಲಿ ಹೈಕಮಾಂಡ್ನ ನಿಷ್ಠಾವಂತರಾಗಿ ಸುಮಾರು ಹದಿನೆಂಟು ರಾಜ್ಯಗಳ ಉಸ್ತುವಾರಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಹೆಗ್ಗಳಿಕೆ ಬಿಕೆ ಅವರದ್ದು. ಡಿಕೆ ಅವರು ರಾಜಕೀಯದಲ್ಲಿ ಬೆಳೆಯುವ ಆರಂಭಿಕ ದಿನಗಳಲ್ಲಿ ಒಮ್ಮೆ ಕಾಂಗ್ರೆಸ್ನಿಂದ ಹೊರಹಾಕಲ್ಪಟ್ಟಿದ್ದರು. ಆದರೆ ಪಕ್ಷೇತರರಾಗಿ ನಿಂತು, ಚುನಾವಣೆಯಲ್ಲಿ ಗೆದ್ದು ಮತ್ತೆ ಮಾತೃಪಕ್ಷಕ್ಕೆ ಮರಳಿದರು. ಇವರು ಪಕ್ಷದ ಕಟ್ಟಾಳಾಗಿ ಬೆಳೆದು, ಐಟಿ, ಇಡಿ ದಾಳಿಗಳಿಗೆಲ್ಲ ಜಗ್ಗದೆ ಕಾಂಗ್ರೆಸ್ನಲ್ಲೇ ಉಳಿದಿದ್ದರಿಂದ ‘ಕನಕಪುರ ಬಂಡೆ’ ಎಂದೇ ಖ್ಯಾತರಾದರು. ಬಿಕೆ ಅವರು 1972ರಿಂದ ಈವರೆಗೂ ಎಂದಿಗೂ ಹೊರಹೋದವರಲ್ಲ. ಇಂದಿರಾ ಗಾಂಧಿ, ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರ ಕಾಲದವರೆಗೆ ಪಕ್ಷವನ್ನು ಸಂಘಟಿಸಿದ ಗಾಂಧಿ ಕುಟುಂಬದ ಅತ್ಯಾಪ್ತರು. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗುವ ಅವಕಾಶ ಒದಗಿಬಂದರೂ ‘ಸೋನಿಯಾ ಗಾಂಧಿ ಅವರಿಲ್ಲದ ಕ್ಯಾಬಿನೆಟ್ ನಲ್ಲಿ ನಾನಿರುವುದಿಲ್ಲ’ ಎಂಬ ನಿರ್ಧಾರ ಪ್ರಕಟಿಸಿದವರು ಹರಿಪ್ರಸಾದ್.
ಡಿಕೆ ಮತ್ತು ಬಿಕೆ ಅವರನ್ನು ಒಟ್ಟಿಗೆ ನೋಡುವುದೆಂದರೆ- ಒಂದೇ ಆಲದ ಮರದ ಎರಡು ವಿಭಿನ್ನ ಬಿಳಲು ಬೇರುಗಳನ್ನು ನೋಡಿದಂತೆ. ಕಾಂಗ್ರೆಸ್ ಪಕ್ಷವು ಮೂಲದಲ್ಲಿ ಬಹುತ್ವವನ್ನು ಪ್ರತಿಪಾದಿಸುತ್ತದೆ. ಬಹುಶಃ ಡಿಕೆ ಮತ್ತು ಬಿಕೆ ಬಹುತ್ವದ ಸಂಕೇತಗಳಾಗಿಯೂ ಪಕ್ಷದೊಳಗೆ ಕಾಣಿಸುತ್ತಾರೆ. ಈ ಇಬ್ಬರ ಕೈಗೆ ಪಕ್ಷವನ್ನು ನೀಡಿರುವುದರ ಹಿಂದೆ ರಾಜಕೀಯ ಮುನ್ನೋಟಗಳಂತೂ ಇವೆ.
ಒಕ್ಕಲಿಗರ ಮನ ಗೆಲ್ಲಲು ಡಿಕೆ ಅಸ್ತ್ರ
ಹಳೇ ಮೈಸೂರು ಹೇಳಿಕೇಳಿ ಒಕ್ಕಲಿಗರ ಪ್ರಾಬಲ್ಯದ ಪ್ರದೇಶ. ಸಾಂಪ್ರದಾಯಿಕವಾಗಿ ಇಲ್ಲಿ ದೇವೇಗೌಡರ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷದ ನಡುವೆಯೇ ಹಣಾಹಣಿ ನಡೆಯುತ್ತಾ ಬಂದಿದೆ. ಇನ್ನೊಂದೆಡೆ ಒಕ್ಕಲಿಗರ ನಡುವೆ ಬೇರು ಬಿಡದ ಹೊರತು, ಕರ್ನಾಟಕದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೇರಲು ಸಾಧ್ಯವಿಲ್ಲ. ಹೀಗಾಗಿ ಕೋಮುರಾಜಕಾರಣವನ್ನು ಹಳೇಮೈಸೂರು ಭಾಗದಲ್ಲಿ ವಿಸ್ತರಿಸುವ ಕಸರತ್ತನ್ನು ಸಂಘಪರಿವಾರ ಕಳೆದೈದು ವರ್ಷಗಳಿಂದ ನಿರಂತರ ಮಾಡುತ್ತಿದೆ. ಈಗ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಚಾಲ್ತಿಯಲ್ಲಿದ್ದರೂ ತನ್ನ ನೆಲೆಯನ್ನು ಒಕ್ಕಲಿಗರ ಪ್ರದೇಶದಲ್ಲಿ ವಿಸ್ತರಿಸಿಕೊಳ್ಳುವ ಪ್ರಯತ್ನಗಳನ್ನು ಬಿಜೆಪಿ ನಿಲ್ಲಿಸುವುದಿಲ್ಲ. ಈ ತ್ರಿಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಒಂದು ಮಟ್ಟಿಗೆ ಒಕ್ಕಲಿಗರ ಮತಬ್ಯಾಂಕ್ ಉಳಿಸಿಕೊಳ್ಳಲೇಬೇಕು. ಆ ಪ್ರಯತ್ನದ ಮುಖವಾಗಿಯೂ ಡಿ.ಕೆ. ಶಿವಕುಮಾರ್ ನಾಯಕತ್ವ ಕಾಣಿಸಿಕೊಳ್ಳುತ್ತದೆ.
ಎಚ್.ಡಿ.ದೇವೇಗೌಡರಿಗೆ ಎದುರಾಳಿಯಾಗಿ ಒಕ್ಕಲಿಗ ನಾಯಕತ್ವ ಬೆಳೆಯದಿದ್ದರೆ ಅಸ್ತಿತ್ವ ಕಷ್ಟವೆಂದು ಅರಿತ್ತಿದ್ದ ಕಾಂಗ್ರೆಸ್, ಎಸ್.ಎಂ. ಕೃಷ್ಣ ಮತ್ತು ಡಿ.ಕೆ. ಶಿವಕುಮಾರ್ ಅವರತ್ತ ನೋಡಿತು. ಒಂದು ಕಾಲಘಟ್ಟದಲ್ಲಿ ಕೃಷ್ಣ ಅವರು ಪಕ್ಷವನ್ನು ಮುನ್ನಡೆಸಿದರು. ಕೃಷ್ಣ ಅವರು ನೇಪಥ್ಯಕ್ಕೆ ಸರಿದ ಮೇಲೆ ಆ ಜಾಗವನ್ನು ತುಂಬಬೇಕಾದ ಜವಾಬ್ದಾರಿ ಡಿಕೆ ಅವರ ಹೆಗಲ ಮೇಲೆ ಬಿದ್ದಿದೆ.
ಸಮುದಾಯಯದ ಲೀಡರ್ ಎಂಬ ಮಾಸ್ ಇಮೇಜ್ ಸೃಷ್ಟಿಸಿಕೊಳ್ಳಬೇಕಾದದ್ದು ಡಿಕೆ ಅವರಿಗಿರುವ ಬಹುದೊಡ್ಡ ಸವಾಲು. ಈ ಸವಾಲು ಮೆಟ್ಟಿ ನಿಲ್ಲಬೇಕಾದರೆ ದೇವೇಗೌಡರ ಕುಟುಂಬವನ್ನು ಕೌಂಟರ್ ಮಾಡಲೇಬೇಕು. ಡಿಕೆಯವರು ರಾಜಕಾರಣವನ್ನು ಪ್ರವೇಶಿಸಿದ ದಿನಗಳಿಂದಲೂ ದೇವೇಗೌಡರ ಫ್ಯಾಮಿಲಿಗೆ ಮಗ್ಗಲು ಮುಳ್ಳಾಗಿಯೇ ಬೆಳೆದಿದ್ದಾರೆಂಬುದನ್ನು ಚುನಾವಣಾ ಇತಿಹಾಸ ಹೇಳುತ್ತದೆ. 1985ರಲ್ಲಿ ಡಿಕೆ ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸುತ್ತಾರೆ. ಇನ್ನೂ ಮೀಸೆ ಚಿಗುರುವ ವಯಸ್ಸಿನಲ್ಲಿಯೇ ಎಚ್ಡಿಡಿ ವಿರುದ್ಧ ಅಂದಿನ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ 15,000 ಮತಗಳಿಂದ ಸೋಲುತ್ತಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಮನ್ನಣೆ ಸಿಗುತ್ತದೆ.
1989ರಲ್ಲಿ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಜನತಾ ಪಕ್ಷದ ಯು.ಕೆ. ಸ್ವಾಮಿ ಅವರನ್ನು ಸೋಲಿಸಿ, 27ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಡಿಕೆ ವಿಧಾನಸಭೆ ಪ್ರವೇಶಿಸುತ್ತಾರೆ. ಎಸ್. ಬಂಗಾರಪ್ಪನವರ ಸಂಪುಟದಲ್ಲಿ ಕಿರಿಯ ವಯಸ್ಸಿಗೆ ಸಚಿವರಾಗುತ್ತಾರೆ. 1994ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದಾಗ, ಧೃತಿಗೆಡದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮತ್ತೆ ಸಾತನೂರಿನಲ್ಲಿ ಭರ್ಜರಿ ಜಯ ಸಾಧಿಸಿದ ಅವರು, ಮರಳಿ ಕಾಂಗ್ರೆಸ್ ಸೇರುತ್ತಾರೆ. 1999ರಲ್ಲಿ ಮತ್ತೆ ದೇವೇಗೌಡರ ಕುಟುಂಬವನ್ನು ಎದುರಿಸಬೇಕಾಗಿ ಬರುತ್ತದೆ. ದೇವೇಗೌಡರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರು ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿದಾಗ, ಶಿವಕುಮಾರ್ ಅವರು ಎಚ್ಡಿಕೆ ಅವರನ್ನು ಸೋಲಿಸಿ ರಾಜಕೀಯದಲ್ಲಿ ‘ಜೈಂಟ್ ಕಿಲ್ಲರ್’ (ಮಹಾನಾಯಕನನ್ನು ಗೆದ್ದವರು) ಎಂಬ ಖ್ಯಾತಿ ಪಡೆಯುತ್ತಾರೆ. ಎಸ್.ಎಂ. ಕೃಷ್ಣ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ (1999-2004) ಡಿಕೆ ಅವರು ನಗರಾಭಿವೃದ್ಧಿ ಮತ್ತು ಸಹಕಾರ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಾರೆ. ಕೃಷ್ಣ ಅವರ ಕಾಲದಲ್ಲಿ ಡಿಕೆ ಏರುಗತಿಯಲ್ಲಿ ಬೆಳೆದರೆಂದೇ ರಾಜಕೀಯ ವಿಶ್ಲೇಷಕರು ಗುರುತಿಸುತ್ತಾರೆ.
2004ರ ಲೋಕಸಭೆ ಚುನಾವಣೆಯಲ್ಲಿ ಅಂದಿನ ಕನಕಪುರ ಕ್ಷೇತ್ರದಲ್ಲಿ ಪತ್ರಕರ್ತೆ ತೇಜಸ್ವಿನಿ ಗೌಡ ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸಿ ದೇವೇಗೌಡರನ್ನು ಸೋಲಿಸಿದ್ದು, 2013ರ ಆಗಸ್ಟ್ನಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಉಪಚುನಾವಣೆಯಲ್ಲಿ ಡಿಕೆ ಸುರೇಶ್ ಅವರನ್ನು ಕಣಕ್ಕಿಳಿಸಿ ಜೆಡಿಎಸ್ನ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು ಮಣಿಸಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್ ಎದುರು ಡಿಕೆ ಸುರೇಶ್ ಸೋತಿದ್ದು- ಇವೆಲ್ಲವೂ ಉಭಯ ಕುಟುಂಬಗಳ ರಾಜಕೀಯ ಕದನವನ್ನು ಹೇಳುತ್ತವೆ. ಆದರೆ 2023ರ ರಾಜ್ಯವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ರೀತಿಯ ಚುನಾವಣಾ ಯಂತ್ರಾಂಗವನ್ನು ತಂದವರು ಡಿ.ಕೆ ಶಿವಕುಮಾರ್. ಪಕ್ಷಕ್ಕಾಗಿ ಕೇವಲ ಬೆವರನ್ನಷ್ಟೇ ಹರಿಸಲಿಲ್ಲ. ರಾಜಕಾರಣದಲ್ಲಿ ಸಂಪಾದಿಸಿದ ಹಣವನ್ನೂ ಹರಿಸಿದ್ದರು.
ಶಿವಕುಮಾರ್ ಅವರನ್ನು 2019ರಲ್ಲಿ ಇಡಿ ಬಂಧಿಸಿತ್ತು. ದೆಹಲಿಯ ತಿಹಾರ್ ಜೈಲಿನಲ್ಲಿ 50 ದಿನ ಕಳೆದ ನಂತರ ಡಿಕೆಯವರಿಗೆ ಜಾಮೀನು ಮಂಜೂರಾಯಿತು. ಅವರು ಬೆಂಗಳೂರಿಗೆ ಮರಳಿದಾಗ, ಕಾಂಗ್ರೆಸ್ ನಾಯಕರು ವಿಮಾನ ನಿಲ್ದಾಣದಿಂದ ಬೃಹತ್ ರೋಡ್ ಶೋ ಆಯೋಜಿಸಿದ್ದರು. ಡಿಕೆ ಬಂಧನವು ಒಕ್ಕಲಿಗ ಸಮುದಾಯಕ್ಕೆ ಮಾಡಿದ ‘ಅಪಮಾನ’ ಎಂದು ಪ್ರಚಾರ ಮಾಡಲು ಕಾಂಗ್ರೆಸ್ ಯತ್ನಿಸಿತ್ತು. ಅಂದರೆ ಕಾಂಗ್ರೆಸ್ ನೊಳಗೆ ಒಕ್ಕಲಿಗ ಲೀಡರ್ ಆಗಿ ಡಿಕೆಯವರು ಗುರುತಿಸಲ್ಪಡತೊಡಗಿದರು.
ಕರ್ನಾಟಕ ರಾಜಕೀಯ ಚರಿತ್ರೆಯನ್ನು ನೋಡಿದರೆ ಜೆಡಿಎಸ್ ಮತ್ತು ಬಿಜೆಪಿಯ ಸಾಂಪ್ರದಾಯಿಕ ಮತದಾರರು ಒಗ್ಗೂಡಿದಾಗ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಯಾವಾಗೆಲ್ಲ ಕಾಂಗ್ರೆಸ್ ಪಕ್ಷವು ಈ ಎರಡು ಪಕ್ಷಗಳ ಮತಕೋಟೆಯನ್ನು ಭೇದಿಸಿದೆಯೋ ಆಗೆಲ್ಲವೂ ಜಯಭೇರಿ ಭಾರಿಸಿದೆ. ಎಸ್.ಎಂ. ಕೃಷ್ಣ ಅವರ ನಾಯಕತ್ವ ಇದಕ್ಕೆ ಸಾಕ್ಷಿಯಾಗಿತ್ತು. ಇದು ಕಾಂಗ್ರೆಸ್‌ಗೆ ಗೊತ್ತಿರುವುದರಿಂದಲೇ ಡಿ.ಕೆ. ಅವರನ್ನು ಜೆಡಿಎಸ್- ಬಿಜೆಪಿಯ ಎದುರಾಳಿಯಾಗಿ ಕಾಂಗ್ರೆಸ್ ನಿಲ್ಲಿಸಿದೆ. ಆದರೆ ಡಿಕೆ ಅವರಿಗೆ ಈ ಸವಾಲು ಸುಲಭವಲ್ಲ.
‘ಭ್ರಷ್ಟ’, ‘ಅಧಿಕಾರ ಬಳಸಿ ಏನೂ ಬೇಕಾದರೂ ಮಾಡಬಲ್ಲ ಹುಂಬ’ ಎಂಬ ಇಮೇಜ್ ಮೊದಲಿನಿಂದಲೂ ಡಿಕೆ ಅವರಿಗಿದೆ. ಅದು ಎಷ್ಟರ ಮಟ್ಟಿಗೆ ಸತ್ಯವೋ ಸುಳ್ಳೊ ಎಂಬುದು ಬೇರೆಯ ವಿಚಾರ. ಆದರೆ ಅಂತಹದ್ದೊಂದು ಇಮೇಜ್ ಅವರ ಸುತ್ತ ರೂಪುಗೊಂಡಿದೆ. ಭ್ರಷ್ಟಾಚಾರ ಮೈಗೆತ್ತಿಕೊಳ್ಳದೆ ಇದ್ದ ಸಿದ್ದರಾಮಯ್ಯನಂಥವರನ್ನೇ ಕೇಂದ್ರ ತನಿಖಾ ಸಂಸ್ಥೆಗಳ ಕುಣಿಕೆಗೆ ಸಿಕ್ಕಿಸಲು ಬಿಜೆಪಿ ಯತ್ನಿಸಿತ್ತು. ಹೀಗಿರುವಾಗ ಈಗಾಗಲೇ ಇ.ಡಿ, ಸಿಬಿಐ ಸಂಕಷ್ಟಗಳನ್ನು ಎದುರಿಸಿರುವ ಡಿಕೆ ಅವರ ಮೇಲೆ ಕೇಂದ್ರವು ಮತ್ತೊಂದು ಸುತ್ತಿನ ಕಾರ್ಯಾಚರಣೆಗೆ ಇಳಿಯಬಹುದು. ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಯ ಮೇಲೆ ದಾಳಿ ಮಾಡುವ ಮೂಲಕ ಕಾಂಗ್ರೆಸ್ಸಿನ ನೈತಿಕ ಸ್ಥೈರ್ಯವನ್ನೂ ಕಸಿಯಬಹುದು. ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್ ಕೂಡ ಇಂತಹ ದಾಳಿಗಳನ್ನು ಬೆಂಬಲಿಸಿ, ಡಿಕೆಯವರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸಬಹುದು. ಇಂತಹ ರಾಜಕೀಯ ಅಡಕತ್ತರಿಗಳಿಗೆ ಸಿಗಬಾರದೆಂದರೆ ಡಿಕೆ ಆದಷ್ಟು ಬೇಗ, ಸಮುದಾಯದ ನಾಯಕ ಎಂಬ ಇಮೇಜ್ ಕಟ್ಟಿಕೊಳ್ಳಬೇಕಾಗುತ್ತದೆ. ‘ಡಿಕೆಯವರನ್ನು ಮುಟ್ಟಿದರೆ, ಒಂದು ಸಮುದಾಯದ ವೋಟ್ ಬ್ಯಾಂಕ್ ಎದುರು ಹಾಕಿಕೊಂಡಂತೆ, ಡಿಕೆ ಅವರನ್ನು ಮುಟ್ಟಿದರೆ ಕರ್ನಾಟಕದ ಒಬ್ಬ ಜನಪ್ರಿಯ ಮುಖ್ಯಮಂತ್ರಿಯನ್ನು ಮುಟ್ಟಿದಂತೆ, ಡಿಕೆ ಸಹವಾಸಕ್ಕೆ ಹೋದರೆ ಅಧಿಕಾರ ಹಿಡಿಯುವುದು ಕಷ್ಟವಾಗುತ್ತದೆ’ ಎಂಬ ಸಂದೇಶ ರವಾನಿಸುವಷ್ಟರ ಮಟ್ಟಿಗೆ ಇಮೇಜ್ ಬೆಳೆದರೆ ಮಾತ್ರ ಡಿಕೆಯವರ ಅಸ್ತಿತ್ವ ಉಳಿಯುತ್ತದೆ. ಆದರೆ ಒಕ್ಕಲಿಗ ಸಮುದಾಯದ ಹಿತಾಸಕ್ತಿಗೆ ವಿರುದ್ಧವಾದ ಬಿಡದಿ ಟೌನ್ ಶಿಪ್ ನಂತಹ ಯೋಜನೆಗಳ ಹಿಂದೆ ಹೋದರೆ ಡಿಕೆ ಪರ್ವ ಎರಡು ವರ್ಷಕ್ಕೆ ನಿಂತುಹೋಗುವ ಅಪಾಯವೂ ಇದೆ.
ಹರಿಪ್ರಸಾದ್ ನೇಮಕ ಫಲಕೊಡುವುದೇ?
ಕರಾವಳಿಯನ್ನು ಕೋಮುಪ್ರಯೋಗ ಶಾಲೆ ಎಂದು ಗುರುತಿಸಿ ದಶಕಗಳೇ ಉರುಳಿದವು. ಆದರೆ ಇಲ್ಲಿ ಕಾಂಗ್ರೆಸ್ ಸರಿಯಾಗಿ ಕೆಲಸ ಮಾಡಿದರೆ, ಸಂಘಪರಿವಾರದ ಎಲ್ಲ ಆಟೋಪಗಳನ್ನು ದಾಟಿ ಗೆಲ್ಲುವ ಸಾಧ್ಯತೆಯಂತೂ ಇದೆ.
2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಟ್ಟು 19 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಆದರೆ 2018ರ ವೇಳೆಗೆ ಬಿಜೆಪಿ ತೀವ್ರತರನಾದ ಕೋಮುರಾಜಕಾರಣವನ್ನು ನಡೆಸಿತು. ಕರ್ನಾಟಕದಲ್ಲಿ ಹಿಂದೂಗಳ ಕಗ್ಗೊಲೆ ನಡೆಯುತ್ತಿದೆ ಎಂದು ಉಯಿಲೆಬ್ಬಿಸಿತು. ಇದೆಲ್ಲರ ಕಾರಣ 19 ಕ್ಷೇತ್ರಗಳಲ್ಲಿ 3ರಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತು. 2023ರ ವೇಳೆಗೆ ಬಿಜೆಪಿಯ ಭಾರೀ ದುರಾಳಿತ, ಆಡಳಿತ ವಿರೋಧಿ ಅಲೆಯಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದರೂ ಕರಾವಳಿ ಕರ್ನಾಟಕದಲ್ಲಿ ಕೇವಲ 3 ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಷ್ಟೇ ಸಾಧ್ಯವಾಯಿತು. ಆದರೆ ಈಗ ಲೆಕ್ಕಾಚಾರ ಮೊದಲಿನಂತೆ ಇಲ್ಲ.
ಬಿಜೆಪಿ ಅಧಿಕಾರವಧಿಯಲ್ಲಿ ಮತೀಯವಾದಿ ಸಂಘಟನೆಗಳು ಅಟ್ಟಹಾಸ ಮೆರೆದಿದ್ದವು. 2023ರ ಚುನಾವಣೆ ಬಳಿಕವೂ ಇದೇ ಸಮಸ್ಯೆ ಮುಂದುವರಿದಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಕೋಮು ಸಂಘಟನೆಗಳಿಗೆ ಕಡಿವಾಣ ಹಾಕಲು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ಕರಾವಳಿ ಜಿಲ್ಲೆಗಳಿಗೆ ನೇಮಿಸಿದೆ. ಇದೇ ವೇಳೆಯಲ್ಲಿ ಮುನ್ನಲೆಗೆ ಬಂದ ಧರ್ಮಸ್ಥಳದ ಚಿನ್ನಯ್ಯ ಪ್ರಕರಣದಿಂದಾಗಿ ಕರಾವಳಿಯ ಹಿಂದುತ್ವವಾದಿ ಸಂಘಟನೆಗಳು ಎರಡು ಭಾಗಗಳಾಗಿ ಹೋಗಿವೆ. ಹಿಂದುತ್ವ ರಾಜಕಾರಣ ಮಾಡುವ ಬಿಜೆಪಿ, ಒಂದು ಗುಂಪಿನ ಪರ ವಕಾಲತ್ತು ವಹಿಸಿ, ಇನ್ನೊಂದು ಗುಂಪಿನ ವಿರೋಧವನ್ನು ಕಟ್ಟಿಕೊಂಡಿದೆ. ಇಂತಹ ಸನ್ನಿವೇಶದಲ್ಲಿ ಹರಿಪ್ರಸಾದ್ ಅವರ ನೇಮಕ ಹಲವು ಪ್ರಯೋಗಗಳಿಗೆ ಮುನ್ಸೂಚನೆಗಳನ್ನು ನೀಡಿದೆ.
ಈ ಲೇಖನ ಓದಿದ್ದೀರಾ?: ಸಂಜಯ್ ಗಾಂಧಿ ಸಾವಿಗೀಡಾದಾಗ ಪಿ. ಲಂಕೇಶ್ ಬರೆದದ್ದು: ಮುಳ್ಳಿನ ತೋಟದ ಕನಸುಗಾರ
ಹರಿಪ್ರಸಾದ್ ಅವರು ಹುಟ್ಟಿ ಬೆಳೆದದ್ದು ಬೆಂಗಳೂರೇ ಆದರೂ, ಅವರು ಮೂಲತಃ ಕರಾವಳಿಯವರು; ಮುಖ್ಯವಾಗಿ ದೊಡ್ಡ ಸಂಖ್ಯೆಯಲ್ಲಿರುವ ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದವರು. ಇಲ್ಲಿ ಕೋಮುವಾದದ ಬಲಿಪಶುಗಳಾಗಿರುವವರು, ಜೈಲುಸೇರಿದವರು ಬಿಲ್ಲವರೇ ಹೆಚ್ಚು. ಈ ರಕ್ತಸಿಕ್ತ ಚರಿತ್ರೆಯಲ್ಲಿ ಕಾಲಾಳುಗಳಾಗಿ ಹಾಳಾದವರು ‘ನನ್ನ ಜನಗಳು’ ಎಂಬ ಜಾಗೃತ ಪ್ರಜ್ಞೆ ಹರಿಪ್ರಸಾದ್ ಅವರಿಗೆ ಇದೆ. ಹರಿಪ್ರಸಾದ್ ಅವರು ಕೇವಲ ಚುನಾವಣಾ ರಾಜಕೀಯ ಮಾಡುವವರಲ್ಲ, ಸೈದ್ಧಾಂತಿಕವಾಗಿ ಸಿಡಿದೇಳಬಲ್ಲವರು. ಬಿಜೆಪಿಯ ಮಾತೃಸಂಸ್ಥೆಯಾದ ಆರ್ಎಸ್ಎಸ್ ಐಡಿಯಾಲಜಿಯ ಮೂಲಕ್ಕೆ ಕೈಹಾಕಿ, ಅದರ ಇತಿಹಾಸ ಜಾಲಾಡಬಲ್ಲ ಛಾತಿ ಉಳ್ಳವರು. ಆರ್ಎಸ್ಎಸ್ ಥರದ ಸೈದ್ಧಾಂತಿಕ ಶಕ್ತಿಯನ್ನು ಸೋಲಿಸಬೇಕಾದರೆ, ಕೇವಲ ರಾಜಕಾರಣ ಮಾಡಿದರೆ ಸಾಲದು, ಬದಲಾಗಿ ಗಟ್ಟಿಯಾದ ಸಾಂಸ್ಕೃತಿಕ ರಾಜಕಾರಣವೇ ನಡೆದುಹೋಗಬೇಕು. ಇದನ್ನು ಹರಿಪ್ರಸಾದ್ ಮಾಡಬಲ್ಲರು.
2025ರ ಡಿಸೆಂಬರ್ನಲ್ಲಿ ಮಂಗಳೂರಿನಲ್ಲಿ ಹರಿಪ್ರಸಾದ್ ಅವರು ಮುಂದೆ ನಿಂತು ನಡೆಸಿದ ‘ಗುರು ಗಾಂಧಿ ಸಂವಾದಕ್ಕೆ ನೂರು ವರ್ಷ’ ಸಮಾರಂಭವೇ ಅವರ ಸಾಂಸ್ಕೃತಿಕ ರಾಜಕಾರಣಕ್ಕೆ ಸಾಕ್ಷಿ. ಸ್ವಾತಂತ್ರ್ಯ ಪೂರ್ವದಲ್ಲಿ ಕೇರಳದಲ್ಲಿ ನಡೆದ ವೈಯಕಂ ದೇವಾಲಯ ಪ್ರವೇಶ ಸತ್ಯಾಗ್ರಹದ ಸಂದರ್ಭದಲ್ಲಿ ಗಾಂಧೀಜಿಯವರು ಕೇರಳಕ್ಕೆ ಬಂದಿದ್ದರು. ಆಗ ಪ್ರಸಿದ್ಧ ಸಮಾಜ ಸುಧಾರಕ, ಬಿಲ್ಲವ ಸಮಾಜದ ಸಾಂಸ್ಕೃತಿಕ ಅಸ್ಮಿತೆಯಾಗಿದ್ದ ನಾರಾಯಣ ಗುರುಗಳನ್ನು ಭೇಟಿ ಮಾಡಿ ಸಂವಾದ ನಡೆಸಿದ್ದರು. ಈ ಚಾರಿತ್ರಿಕ ಘಟನೆಗೆ ನೂರು ವರ್ಷ ಆದ ಹಿನ್ನೆಲೆಯಲ್ಲಿ ಹರಿಪ್ರಸಾದ್ ಅವರು ಮಂಗಳೂರಿನಲ್ಲಿ ಕಾರ್ಯಕ್ರಮ ಮಾಡಿ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರೆಸಿ ಮಾತನಾಡಿಸಿದ್ದರು. ಇಷ್ಟಕ್ಕೆ ಬಿಡದೆ ಈ ಕಾರ್ಯಕ್ರಮವನ್ನು ಕೇರಳಕ್ಕೂ ತೆಗೆದುಕೊಂಡು ಹೋಗಿ ರಾಹುಲ್ ಗಾಂಧಿಯವರನ್ನು ಕರೆಸಿದ್ದರು. ಕರಾವಳಿಯ ಬಿಲ್ಲವರು ಕೋಮುವಾದದ ಬಿಗಿಮುಷ್ಟಿಯಿಂದ ಬಿಡಿಸಿಕೊಂಡರೆ, ಅದರ ನೇರ ಲಾಭ ಆಗುವುದು ಕಾಂಗ್ರೆಸ್ ಪಕ್ಷಕ್ಕೆ!
ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಬಿಲ್ಲವ ನಾಯಕ ಜನಾರ್ದನ ಪೂಜಾರಿಯವರು ನೇಪಥ್ಯಕ್ಕೆ ಸರಿದಂತೆ, ಬಿಲ್ಲವರು ಕೂಡ ಕಾಂಗ್ರೆಸ್ ನಿಂದ ದೂರವಾದಂತೆ ಕಾಣುತ್ತಿದ್ದರು. ಮತ್ತೆ ಬಿಲ್ಲವ ನಾಯಕತ್ವವು ಪಕ್ಷಕ್ಕೆ ದೊರೆತಿರುವುದು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಪ್ರಭಾವಿ ಒಬಿಸಿ ನಾಯಕರಾಗಿದ್ದ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಇಳಿಸಿದ ಮೇಲೆ, ಒಬಿಸಿ ನಾಯಕತ್ವದ ಅಭಾವ ತಲೆದೋರದಂತೆ ಎಚ್ಚರಿಕೆ ವಹಿಸಬೇಕಾಗಿತ್ತು. ಹರಿಪ್ರಸಾದ್ ಅವರು ದೇವರಾಜು ಅರಸು ಅವರ ರಾಜಕಾರಣವನ್ನು ನೋಡಿಕೊಂಡು ಬಂದವರು. ಹೀಗಾಗಿ ಸಿದ್ದರಾಮಯ್ಯನವರ ನಂತರದ ಒಬಿಸಿ ನಾಯಕರಾಗುವ ಸಾಧ್ಯತೆಯೂ ಅವರಿಗೆ ಇದೆ. ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ, ಒಂದು ಬಾರಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿರುವ ಅವರಿಗೆ ಅನುಭವಕ್ಕೇನು ಕೊರತೆ ಇಲ್ಲ.
ಕೊನೆಯ ಮಾತು
ಡಿಕೆ ಮತ್ತು ಬಿಕೆ ಅವರನ್ನು ಸೈದ್ಧಾಂತಿಕವಾಗಿ ಹೋಲಿಸಲು ಸಾಧ್ಯವಿಲ್ಲ. ಡಿಕೆ ಮೃದು ಹಿಂದುತ್ವವನ್ನು ಪಾಲಿಸುವ ವ್ಯಕ್ತಿಯಂತೆ ಭಾಸವಾಗುತ್ತಾರೆ. ಆದರೆ ಬಿಕೆ ಹಿಂದೂ ಧರ್ಮದ ಪಾಲಕರಾದರೂ ಮತೀಯವಾದಿ ಶಕ್ತಿಗಳನ್ನು ಎಂದಿಗೂ ಹತ್ತಿರಕ್ಕೆ ಬಿಟ್ಟುಕೊಂಡವರಲ್ಲ. “ನಾನು ಹಿಂದೂ. ನನ್ನ ಹಿಂದೂ ಧರ್ಮ ಸ್ವಾಮಿ ವಿವೇಕಾನಂದರ ಹಿಂದೂ ಧರ್ಮ. ನನ್ನ ಹಿಂದೂ ಧರ್ಮ ಗಾಂಧಿ, ನೆಹರೂ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ನಂಬಿಕೆ ಇಟ್ಟಿದ್ದ ಹಿಂದೂ ಧರ್ಮ. ಸಾವರ್ಕರ್ ಮತ್ತು ಗೋಲ್ವಲ್ಕರ್ ನಂಬಿದ್ದ ಹಿಂದುತ್ವಕ್ಕೆ ನಾನು ಸದಾ ವಿರೋಧಿ. ಬಂಚ್ ಆಫ್ ಥಾಟ್ಸ್ ರಿಟನ್ ಬೈ ಬಂಚ್ ಆಫ್ ಫೂಲ್ಸ್. ನಾವು ಬಾಬಾಸಾಹೇಬರ ಸಂವಿಧಾನಕ್ಕೆ ಬದ್ಧರಾಗಿದ್ದೇವೆ. ಅವರಿಗೆ (ಸಂಘಪರಿವಾರದವರಿಗೆ) ಬಂಚ್ ಆಫ್ ಥಾಟ್ಸ್ ಕೃತಿಯೇ ಸಂವಿಧಾನ” ಎಂದು ರಾಜ್ಯಸಭೆಯಲ್ಲಿಯೇ ಗುಡುಗಿದ್ದವರು ಬಿಕೆ ಹರಿಪ್ರಸಾದ್. ಇಷ್ಟು ಗಟ್ಟಿತನವನ್ನು ಡಿಕೆ ಅವರಲ್ಲಿ ನಿರೀಕ್ಷಿಸುವುದು ತಪ್ಪಾಗುತ್ತದೆ. ಆದರೆ ಡಿಕೆ ಅವರ ಪಕ್ಷ ನಿಷ್ಠೆಯೂ ಪ್ರಶ್ನಾತೀತ.
ಡಿಕೆ ಅವರ ಆಗಮನದಿಂದ ಬಿಜೆಪಿಗೂ ಸವಾಲು ಎದುರಾಗುತ್ತದೆ ಎಂಬ ಅಭಿಪ್ರಾಯಗಳಿವೆ. ಯಾಕೆಂದರೆ ಡಿಕೆ ಅವರು ಸಿದ್ದರಾಮಯ್ಯನವರಂತಲ್ಲ. ಮಠಮಾನ್ಯಗಳಿಗೆ ಹೋಗುತ್ತಾರೆ. ಸ್ವಾಮೀಜಿಯವರು ನಿಧನರಾದಾಗ ಭಾವುಕರಾಗಿ ಕಣ್ಣೀರು ಹಾಕುತ್ತಾರೆ. ಕುಂಕುಮ ವಿಭೂತಿಗಳಿಂದ ಮಿಂದೇಳುತ್ತಾರೆ. ಇಂತಹ ವ್ಯಕ್ತಿಯನ್ನು ಶಿವಧಾರ, ಜನಿವಾರಗಳೆಂದು ಟೀಕೆ ಮಾಡುವುದು ಕಷ್ಟವಾಗುತ್ತದೆ. ಕಟ್ಟರ್ ಸೈದ್ಧಾಂತಿಕ ಸ್ಪಷ್ಟತೆಯ ಬಿಕೆ ಮತ್ತು ಹಿಂದುತ್ವವಾದಿಗಳಿಗೆ ಅಚ್ಚರಿಯಾಗುವಂತೆ ನಡೆದುಕೊಳ್ಳಬಲ್ಲ ಡಿಕೆ- ಈ ಎರಡು ಸಮತೋಲನಗಳ ನಡುವೆ ಕಾಂಗ್ರೆಸ್ ಹಾಕಿರುವ ಹೆಜ್ಜೆಗಳು ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ತಂದುಕೊಡಬಹುದೇ? ತೂತುಬಿದ್ದ ದೋಣಿಯಂತಾಗಿರುವ ರಾಜ್ಯ ಬಿಜೆಪಿ ನಾಯಕತ್ವವನ್ನು ನೋಡಿದರೆ, ಸದ್ಯಕ್ಕೆ ಕಾಂಗ್ರೆಸ್ ಪ್ರಯೋಗ ಮೇಲುಗೈ ಸಾಧಿಸಿದಂತೆಯೇ ತೋರುತ್ತಿದೆ.



