ಬದುಕು ಮುಗಿಯಿತು ಎಂದುಕೊಂಡಿದ್ದ ಕ್ಷಣದಿಂದಲೇ ಹೊಸ ಬದುಕಿನತ್ತ ಹೆಜ್ಜೆ ಇಟ್ಟರು. ಸಾವಿನ ಕದ ತಟ್ಟಿ ಮರಳಿ ಬಂದರು. ಕುಟುಂಬದ ಆರ್ಥಿಕ ಸಂಕಷ್ಟದಿಂದ ಓದು ಕೈಬಿಟ್ಟರು. ನೆಟ್‌ವರ್ಕ್ ಮಾರ್ಕೆಟಿಂಗ್ ಕೆಲಸಕ್ಕೆ ಸೇರಿದರು. ಆದರೆ ಅಲ್ಲಿಯೂ ಯಶಸ್ಸು ಸಿಗಲಿಲ್ಲ. ಕೊನೆಗೆ ಕುಟುಂಬದವರ ನೆರವಿನಿಂದ ಮತ್ತೆ ಓದಿನತ್ತ ಮುಖ ಮಾಡಿದ ಬಡ ರೈತನ ಮಗ ಇಂದು 12 ಚಿನ್ನದ ಪದಕಗಳ ಒಡೆಯ.
ದಾವಣಗೆರೆಯ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ ಎಚ್.ಎಂ. ವಿಶ್ವನಾಥ್ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಬ್ಯಾಂಕ್ ಪಡೆದು 12 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ದಾವಣಗೆರೆ ಸಮೀಪದ ಬಸಾಪುರ ಗ್ರಾಮದ ಮಂಜುನಾಥ ಹಾಗೂ ನಾಗಮ್ಮ ದಂಪತಿಯ ಪುತ್ರ ವಿಶ್ವನಾಥ್ ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿ. ಪಿಯುಸಿ ಬಳಿಕ ಬಿಎಸ್‌ಸಿ ವ್ಯಾಸಂಗಕ್ಕೆ ಸೇರಿದ್ದರು. ಆದರೆ ಒಂದು ವರ್ಷದ ಬಳಿಕ ಅವರಿಗೆ ಮಾರಕ ಡೆಂಗಿ ಕಾಯಿಲೆ ಬಾಧಿಸಿತು. ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕೇವಲ 9 ಸಾವಿರಕ್ಕೆ ಕುಸಿದಿತ್ತು. ಪರಿಸ್ಥಿತಿ ಗಂಭೀರವಾಗಿದ್ದು, ಬದುಕುಳಿಯುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದರು.
ಆದರೆ ವಿಶ್ವನಾಥ್ ಗಟ್ಟಿ ಮನೋಸ್ಥೆರ್ಯದಿಂದ ಕಾಯಿಲೆಯನ್ನು ಗೆದ್ದು ಬದುಕಿಗೆ ಮರಳಿದರು.
ಓದಿನ ಆಸೆ ಬಿಟ್ಟಿದ್ದರು
ತಂದೆ-ತಾಯಿಗೆ ವಯಸ್ಸಾಗುತ್ತಿದ್ದಂತೆ ಕುಟುಂಬದ ಜವಾಬ್ದಾರಿಯೂ ಹೆಚ್ಚಾಯಿತು. ಹೀಗಾಗಿ ಓದುವ ಆಸೆಯನ್ನು ಬದಿಗಿಟ್ಟು ಹರ್ಬಲ್ ಕಂಪನಿಯೊಂದರಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್ ಕೆಲಸಕ್ಕೆ ಸೇರಿದರು. ಆದರೆ ನಿರೀಕ್ಷಿಸಿದಂತೆ ಬದುಕು ಸಾಗಲಿಲ್ಲ.
ಈ ಸಂದರ್ಭದಲ್ಲಿ ಕುಟುಂಬದವರು ವಿಶ್ವನಾಥ್ ಅವರ ಕೈ ಹಿಡಿದರು. ಭಾವ ನರೇಂದ್ರ, ಚಿಕ್ಕಪ್ಪ ರಾಜೇಶ್ ಹಾಗೂ ದೊಡ್ಡಪ್ಪ ಗುರುಶಾಂತಪ್ಪ ಅವರು ಸೇರಿ ಶುಲ್ಕ ಪಾವತಿಸಿ ಅವರನ್ನು ಎಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದರು.
ಇತ್ತ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದ ಕಿರಿಯ ಸಹೋದರ ಷಣ್ಮುಖ ಅವರು ಟ್ರಾನ್ಸ್‌ಪೋರ್ಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಅಣ್ಣನ ವಿದ್ಯಾಭ್ಯಾಸಕ್ಕೆ ನೆರವಾದರು. ಕುಟುಂಬದ ನಿರ್ವಹಣೆಯ ಜತೆಗೆ ಅಣ್ಣನ ಸಂಪೂರ್ಣ ಓದಿಗೂ ಬೆಂಬಲವಾಗಿ ನಿಂತರು.
ಕುಟುಂಬದವರ ತ್ಯಾಗ, ಪ್ರೋತ್ಸಾಹ ಹಾಗೂ ವಿಶ್ವನಾಥ್ ಅವರ ಪರಿಶ್ರಮ ಕೊನೆಗೂ ಫಲ ನೀಡಿದೆ. ಕಷ್ಟಗಳ ನಡುವೆಯೂ ಓದಿನಲ್ಲಿ ನಿರಂತರವಾಗಿ ಶ್ರಮಿಸಿದ ಅವರು ವಿಟಿಯುನಲ್ಲಿ ಪ್ರಥಮ ಬ್ಯಾಂಕ್ ಜತೆಗೆ 12 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.
ಸಿಕ್ಕ ಸಮಯದಲ್ಲೇ ಶ್ರದ್ಧೆಯ ಓದು
“ಚಿನ್ನದ ಪದಕ ಪಡೆಯಲು ಗ್ರಹಿಕೆ ಮತ್ತು ಮನನ ಸಾಮರ್ಥ್ಯ ಮುಖ್ಯ. ಕಾಲೇಜಿನಲ್ಲಿ ಶ್ರದ್ಧೆಯಿಂದ ಕಲಿಯಬೇಕು. ಇಡೀ ರಾತ್ರಿ ಅಥವಾ ನಸುಕಿನಲ್ಲಿ ಓದುವುದು ನನ್ನ ರೂಢಿಯಲ್ಲ. ಸಿಕ್ಕಷ್ಟೇ ಸಮಯದಲ್ಲಿ ಮಗ್ನನಾಗಿ ಓದುವುದು ಹಾಗೂ ಪರೀಕ್ಷೆಯಲ್ಲಿ ಉತ್ತರಗಳನ್ನು ಹೇಗೆ ಬರೆಯಬೇಕು ಎಂಬ ಜಾಣ್ಮ ಮುಖ್ಯ. ಚಿನ್ನದ ಪದಕ ಪಡೆದಿರುವುದರಿಂದ ಹೆತ್ತವರು ಹಾಗೂ ಸಂಬಂಧಿಕರ ಶ್ರಮ ಸಾರ್ಥಕವಾಗಿದೆ ಎನ್ನಿಸುತ್ತಿದೆ” ಎಂದು ವಿಶ್ವನಾಥ್ ಹೇಳಿದ್ದಾರೆ.
ಸಾವಿನಂಚಿನಿಂದ ಪಾರಾಗಿ, ಆರ್ಥಿಕ ಸಂಕಷ್ಟದ ನಡುವೆಯೂ ಓದಿನ ಕನಸನ್ನು ಮತ್ತೆ ಬೆಳೆಸಿಕೊಂಡ ಅವರು, ಕುಟುಂಬದ ಬೆಂಬಲ ಮತ್ತು ಸ್ವಂತ ಪರಿಶ್ರಮದಿಂದ ವಿಟಿಯುನಲ್ಲಿ 12 ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ. ಕಷ್ಟ ಬಂದಾಗ ಕುಗ್ಗದೆ, ಅವಕಾಶ ಸಿಕ್ಕಾಗ ಅದನ್ನು ಸದುಪಯೋಗಪಡಿಸಿಕೊಂಡರೆ ಬದುಕಿನ ದಿಕ್ಕನ್ನೇ ಬದಲಿಸಬಹುದು ಎಂಬುದಕ್ಕೆ ವಿಶ್ವನಾಥ್ ಅವರ ಸಾಧನೆ ಉತ್ತಮ ಉದಾಹರಣೆಯಾಗಿದೆ.




