ಡಾಲರ್ ಏಕಸ್ವಾಮ್ಯವನ್ನು ಎದುರಿಸಿ, ಗ್ಲೋಬಲ್ ಸೌತ್ ದೇಶಗಳಿಗೆ ನೈಜ ಶಕ್ತಿ ನೀಡುವ ದೃಢತೆ ಇಂದಿನ ಭಾರತಕ್ಕಿದೆಯೇ? ಇಸ್ರೇಲ್ ಮತ್ತು ಇರಾನ್ ನಡುವೆ ದ್ವಂದ್ವ ನಿಲುವು, ರಷ್ಯಾದಿಂದ ತೈಲ ಖರೀದಿಯಲ್ಲೂ ಅಮೆರಿಕದ ಒತ್ತಡಕ್ಕೆ ಜಾರುವ ಎಡಬಿಡಂಗಿ ವಿದೇಶಾಂಗ ನೀತಿ— 'ವಿಶ್ವಗುರು' ಪ್ರತಿಬಿಂಬದ ಹಿಂದೆ ಅಡಗಿರುವ ಮೋದಿ ಸರ್ಕಾರದ ತತ್ವರಹಿತ ರಾಜತಾಂತ್ರಿಕತೆ ದೇಶವನ್ನು ಎತ್ತ ಸಾಗಿಸುತ್ತಿದೆ? ಬ್ರಿಕ್ಸ್ ಅಂಗಳದಲ್ಲಿ ಭಾರತದ ಅಸಲಿ ಸಾಮರ್ಥ್ಯವೇನು?
ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಕೇವಲ ಕೆಲವು ಪಾಶ್ಚಿಮಾತ್ಯ ದೇಶಗಳ ಹಾಗೂ ಅಮೆರಿಕದ ಡಾಲರ್ ಪಾರಮ್ಯವನ್ನು ಎದುರಿಸಿ, ಅಭಿವೃದ್ಧಿಶೀಲ ರಾಷ್ಟ್ರಗಳ ದನಿಯನ್ನು ಮುಂಚೂಣಿಗೆ ತರಲು ರೂಪುಗೊಂಡ ಸಂಸ್ಥೆಯೇ ಬ್ರಿಕ್ಸ್ (BRICS). ಆರಂಭದಲ್ಲಿ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ (BRIC) ಎಂಬ ನಾಲ್ಕು ದೇಶಗಳ ಒಕ್ಕೂಟವಾಗಿ ಪ್ರಾರಂಭವಾದ ಈ ಸಂಸ್ಥೆ, ಇಂದು ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಯುಎಇ, ಸೌದಿ ಅರೇಬಿಯಾ ಹಾಗೂ ಇಂಡೋನೇಷ್ಯಾ ಸೇರಿದಂತೆ ಹನ್ನೊಂದು ಪೂರ್ಣಪ್ರಮಾಣದ ಸದಸ್ಯ ರಾಷ್ಟ್ರಗಳನ್ನು ಮತ್ತು ಅನೇಕ ಸಹಭಾಗಿ ರಾಷ್ಟ್ರಗಳನ್ನು ಒಳಗೊಂಡಿದೆ.
ಇಡೀ ಜಗತ್ತಿನ ಜಿಡಿಪಿಯ ಸುಮಾರು 40% ಮತ್ತು ಜಾಗತಿಕ ಜನಸಂಖ್ಯೆಯ ಸುಮಾರು ಅರ್ಧದಷ್ಟು ಭಾಗವನ್ನು ಪ್ರತಿನಿಧಿಸುವ ಈ ವೇದಿಕೆಯು ಸದ್ಯ ಬಹುಧ್ರುವೀಯ ಜಗತ್ತಿನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಸಂಸ್ಥೆಯ ಆರಂಭಿಕ ದಿನಗಳಲ್ಲಿ ದೇಶದ ಮಾಜಿ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ವಹಿಸಿದ ದೂರದೃಷ್ಟಿಯ ಪಾತ್ರ ಮಹತ್ವದ್ದು. ಆದರೆ ತದನಂತರದ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಭಾರತದ ವಿದೇಶಾಂಗ ನೀತಿಯಲ್ಲಾದ ಎಡಬಿಡಂಗಿ ನಿಲುವುಗಳು ದೇಶವು ಎತ್ತ ಸಾಗುತ್ತಿದೆ ಎಂದು ನಾವು ನಿಂತು ನೋಡುವಂತಾಗಿದೆ.
ಬ್ರಿಕ್ಸ್ನಲ್ಲಿ ಡಾ. ಮನ್ಮೋಹನ್ ಸಿಂಗ್ ದೂರದೃಷ್ಟಿ
2001ರಲ್ಲಿ ಜಿಮ್ ಒ ನೀಲ್ (Jim O’Neill) ಅವರು ‘Building Better Global Economic BRICs’ ಲೇಖನದ ಮೂಲಕ ಈ ನಾಲ್ಕು ದೇಶಗಳು ಜಾಗತಿಕ ಆರ್ಥಿಕತೆಯನ್ನು ಮುನ್ನಡೆಸಲಿವೆ ಎಂದು ಆರ್ಥಿಕ ಮುನ್ಸೂಚನೆ ನೀಡಿದ್ದರು. ಆದರೆ, ಅದನ್ನು ಕೇವಲ ಆರ್ಥಿಕ ಸಿದ್ಧಾಂತವಾಗಿ ಉಳಿಸದೆ, ಅಂತಾರಾಷ್ಟ್ರೀಯ ರಾಜಕೀಯ ಮತ್ತು ಹಣಕಾಸು ವೇದಿಕೆಯಾಗಿ ರೂಪಿಸುವಲ್ಲಿ ದೇಶದ ಅಂದಿನ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ಅವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು.
2008ರ ಜಾಗತಿಕ ಆರ್ಥಿಕ ಕುಸಿತದ ನಂತರ ಪಾಶ್ಚಿಮಾತ್ಯ ದೇಶಗಳ ಆರ್ಥಿಕ ನೀತಿಗಳು ಇಡೀ ಜಗತ್ತನ್ನು ಸಂಕಷ್ಟಕ್ಕೆ ಈಡುಮಾಡಿದ್ದನ್ನು ಮನಗಂಡ ಡಾ. ಸಿಂಗ್, 2009ರ ರಷ್ಯಾದ ಯೆಕಟೇರಿನ್ಬರ್ಗ್ನಲ್ಲಿ ನಡೆದ ಮೊದಲ ಅಧಿಕೃತ ಸಭೆಯಲ್ಲಿ ಬ್ರಿಕ್ಸ್ ವೇದಿಕೆಯನ್ನು ಸಕ್ರಿಯಗೊಳಿಸಿದರು. ಜಾಗತಿಕ ಆಡಳಿತದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕೇವಲ ಪಾಶ್ಚಿಮಾತ್ಯ ದೇಶಗಳ ತೀರ್ಮಾನಗಳಷ್ಟೇ ಅಂತಿಮವಲ್ಲ; ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಸಮಾನ ಪ್ರಾತಿನಿಧ್ಯ ಬೇಕು ಎಂದು ಸ್ಪಷ್ಟವಾಗಿ ಒತ್ತಾಯಿಸಿದರು.
2012ರಲ್ಲಿ ದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಡಾ. ಮನ್ಮೋಹನ್ ಸಿಂಗ್ ಅವರು ವಿಶ್ವಬ್ಯಾಂಕ್ (World Bank) ಮತ್ತು ಐಎಂಎಫ್ನಂತಹ ಸಂಸ್ಥೆಗಳಿಗೆ ಪರ್ಯಾಯವಾಗಿ ಅಭಿವೃದ್ಧಿಶೀಲ ದೇಶಗಳಿಗೆ ನೆರವಾಗಲು “ಬ್ರಿಕ್ಸ್ ಡೆವಲಪ್ಮೆಂಟ್ ಬ್ಯಾಂಕ್” ಸ್ಥಾಪನೆಯ ಕಲ್ಪನೆಯನ್ನು ಮುಂದಿಟ್ಟರು. ಇದೇ ಪ್ರಸ್ತಾವನೆಯು 2014ರಲ್ಲಿ ‘ನ್ಯೂ ಡೆವಲಪ್ಮೆಂಟ್ ಬ್ಯಾಂಕ್’ (NDB) ಆಗಿ ಅಧಿಕೃತವಾಗಿ ಕಾರ್ಯಾಚರಣೆಗೆ ಬಂದಿತು. ಇದರೊಂದಿಗೆ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ‘ಕಂಟಿಂಜೆಂಟ್ ರಿಸರ್ವ್ ಅರೇಂಜ್ಮೆಂಟ್’ (CRA) ವ್ಯವಸ್ಥೆಯನ್ನೂ ರೂಪಿಸಲಾಯಿತು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಭಾರತವು ಜಾಗತಿಕ ಆರ್ಥಿಕ ಸಂಸ್ಥೆಗಳಲ್ಲಿ (Bretton Woods Institutions) ಮೂಲಭೂತ ಸುಧಾರಣೆಗಳನ್ನು ತರಲು ಬ್ರಿಕ್ಸ್ ಅನ್ನು ಧ್ವನಿಯಾಗಿ ಬಳಸಿಕೊಂಡಿತು. ಯಾವುದೇ ಪ್ರಭಾವಕ್ಕೆ ಒಳಗಾಗದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಿಕ್ಸ್ ದೇಶಗಳ ಶಕ್ತಿಯನ್ನು ಸಾಬೀತುಪಡಿಸಲು ಅವರು ಸ್ಪಷ್ಟ ನಕ್ಷೆಯನ್ನು ನೀಡಿದ್ದರು.
ಮೋದಿ ಭಾರತದ ವಿದೇಶಾಂಗ ನೀತಿ ಎತ್ತ ಸಾಗುತ್ತಿದೆ?
ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ವಿದೇಶಾಂಗ ನೀತಿಯು ಎಡಬಿಡಂಗಿಯಾಗಿ ಸಾಗುತ್ತಿದೆ. ಯುಪಿಎ ಆಡಳಿತಾವಧಿಯಲ್ಲಿ, ಅದರಲ್ಲೂ ಮುಖ್ಯವಾಗಿ ಡಾ. ಮನ್ಮೋಹನ್ ಸಿಂಗ್ ಅವರ ಪ್ರಧಾನಿ ಅವಧಿಯಲ್ಲಿ, ಭಾರತದ ರಾಜತಾಂತ್ರಿಕತೆಯು ‘ಬಹುಪಕ್ಷೀಯ ಸೌಹಾರ್ದತೆ’, ವಿಶ್ವಸಂಸ್ಥೆ/ಬ್ರಿಕ್ಸ್ನಂತಹ ಬಹುರಾಷ್ಟ್ರೀಯ ವೇದಿಕೆಗಳಲ್ಲಿ ಸಂಸ್ಥೆಗಳ ರಚನೆ ಮತ್ತು ಜಾಗತಿಕ ಹಣಕಾಸು ಚೌಕಟ್ಟಿನಲ್ಲಿ ಸುಧಾರಣೆ ತರುವುದಕ್ಕೆ ಆದ್ಯತೆ ನೀಡಿತ್ತು. ಆದರೆ ಮೋದಿ ಅವಧಿಯಲ್ಲಿ ಬರೀ ಅಮೆರಿಕ, ಚೀನಾ, ರಷ್ಯಾದ ಮಾತಿಗೆ-ಮರ್ಜಿಗೆ ಗಂಟುಬಿದ್ದು ಸಾಗುವ ದೇಶವಾಗಿ ಭಾರತ ಮುನ್ನಡೆಯುತ್ತಿದೆ.
ಬ್ರಿಕ್ಸ್ ಅನ್ನು ಆರಂಭದಲ್ಲಿ ಅಮೆರಿಕನ್ ಡಾಲರ್ನ ಏಕಸ್ವಾಮ್ಯಕ್ಕೆ ಸವಾಲು ಹಾಕಲು ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ಶಕ್ತಿ ನೀಡಲು ಮನ್ಮೋಹನ್ ಸಿಂಗ್ ಅವರಂತಹ ಅರ್ಥಶಾಸ್ತ್ರಜ್ಞರು ಬಳಸಿಕೊಂಡಿದ್ದರು. ಆದರೆ, ಮೋದಿ ಆಡಳಿತದಲ್ಲಿ ಭಾರತವು ಬ್ರಿಕ್ಸ್ ವೇದಿಕೆಯನ್ನು ಪೂರ್ಣಪ್ರಮಾಣದಲ್ಲಿ ಅಮೆರಿಕ-ವಿರೋಧಿ ಅಸ್ತ್ರವಾಗಿ ಬೆಳೆಯಲು ಬಿಡುತ್ತಿಲ್ಲ. ಬದಲಿಗೆ ಅಮೆರಿಕದ ಒತ್ತಡಕ್ಕೆ ಮಣಿದು, ಡಾಲರ್ ಪರ್ಯಾಯವಾಗಿ ‘ಬ್ರಿಕ್ಸ್ ಜಂಟಿ ಕರೆನ್ಸಿ’ ತರುವ ಪ್ರಸ್ತಾವನೆಗಳಿಗೆ ಭಾರತ ನಿರಾಸಕ್ತಿ ತೋರುತ್ತಿದೆ.
ಉಕ್ರೇನ್ ಯುದ್ಧ ಆರಂಭವಾದಾಗ, ಅಮೆರಿಕ ಮತ್ತು ಯುರೋಪ್ ದೇಶಗಳು ರಷ್ಯಾ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿದಾಗ ಭಾರತದ ನಿಲುವು ಗೊಂದಲಮಯವಾಗಿತ್ತು. ಪಾಶ್ಚಿಮಾತ್ಯ ದೇಶಗಳು ಅಸಮಾಧಾನಗೊಂಡಾಗ ರಷ್ಯಾದಿಂದ ತೈಲ ಖರೀದಿಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವುದು, ನಂತರ ಮತ್ತೆ ಹೆಚ್ಚಿಸುವುದು- ಹೀಗೆ ನಿರ್ದಿಷ್ಟ ದೃಢತೆ ಇಲ್ಲದ ನಿಲುವನ್ನು ಭಾರತ ಪ್ರದರ್ಶಿಸಿತು. ಅದರಲ್ಲೂ ಅಮೆರಿಕದ ಒತ್ತಡಕ್ಕೆ ಮಣಿದು ರಷ್ಯಾದಿಂದ ತೈಲ ಖರೀದಿ ಕಡಿಮೆ ಮಾಡಿ, ಅಮೆರಿಕ ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಅಧಿಕಗೊಳಿಸಿತು.
ವಾಸ್ತವದಲ್ಲಿ ರಷ್ಯಾದಲ್ಲಿ ಕಡಿಮೆ ಬೆಲೆಗೆ ಕಚ್ಚಾ ತೈಲ ದೊರೆಯುತ್ತದೆ. ರಷ್ಯಾದಿಂದ ಆಮದು ಮಾಡಿಕೊಳ್ಳುವ ಒಂದು ಬ್ಯಾರೆಲ್ ಕಚ್ಚಾ ತೈಲಕ್ಕೆ ಭಾರತವು ಪ್ರಸ್ತುತ ಸರಿಸುಮಾರು $80 ರಿಂದ $85 ಡಾಲರ್ ಪಾವತಿಸುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಸುಮಾರು $96 ರಿಂದ $100 ರ ಆಸುಪಾಸಿನಲ್ಲಿದ್ದು, ರಷ್ಯಾ ಭಾರತಕ್ಕೆ ಬ್ಯಾರೆಲ್ಗೆ ಸುಮಾರು $2 ರಿಂದ $3 ಡಾಲರ್ಗಳಷ್ಟು ಅಲ್ಪ ರಿಯಾಯಿತಿಯನ್ನು ನೀಡುತ್ತಿದೆ. ಆದರೆ ಅದನ್ನು ಬಿಟ್ಟು ಅಮೆರಿಕದ ಒತ್ತಡಕ್ಕೆ ಮಣಿದ ಭಾರತ ಅಮೆರಿಕ, ಮಧ್ಯಪ್ರಾಚ್ಯ ದೇಶಗಳಿಂದ ತೈಲ ಖರೀದಿ ಹೆಚ್ಚಿಸಿದೆ. ಅಂದರೆ ಪ್ರತಿ ಬ್ಯಾರೆಲ್ಗೆ ಸುಮಾರು $100.05 (ಅಮೇರಿಕನ್ ಡಾಲರ್) ಪಾವತಿಸುತ್ತಿದೆ. ಈ ಮೂಲಕ ಮೋದಿ ಸರ್ಕಾರ ಸಾಮಾನ್ಯ ಜನರ ಮೇಲೆ ಹೊರೆ ಹೆಚ್ಚಿಸುತ್ತಿದೆ.
ಇನ್ನೊಂದೆಡೆ ಚೀನಾ ಗಡಿ ಬಿಕ್ಕಟ್ಟಿನ ವಿಷಯದಲ್ಲಿ ಮೋದಿ ಸರ್ಕಾರದ ನಿಲುವು ಎಂಥದ್ದು? 2020ರ ಗಲ್ವಾನ್ ಸಂಘರ್ಷದ ನಂತರ, ಗಡಿ ಭಾಗದಲ್ಲಿ ಚೀನಾ ಭಾರತದ ಭೂಭಾಗವನ್ನು ಅತಿಕ್ರಮಿಸಿಕೊಂಡಿದೆ ಎಂಬ ಆರೋಪಗಳಿವೆ. ಸ್ಥಳೀಯರು ಹಲವಾರು ಬಾರಿ ಹೇಳುತ್ತಿದ್ದಾರೆ. ಆದರೆ ಸರ್ಕಾರವು ಸೂಕ್ತ ಮತ್ತು ಕಠಿಣ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿಲ್ಲ. ಬದಲಾಗಿ “ಯಾರೂ ನಮ್ಮ ಗಡಿಯೊಳಗೆ ಬಂದಿಲ್ಲ” ಎಂದು ಪ್ರಧಾನಿ ಹೇಳುತ್ತಲೇ ಬಂದಿದ್ದಾರೆ. ಚೀನಾದ ಅತಿಕ್ರಮಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನೊಂದೆಡೆ ಅರುಣಾಚಲ ಪ್ರದೇಶದ ಸ್ಥಳೀಯರ ಮಾತನ್ನೂ ಮೋದಿ ಸರ್ಕಾರ ಕಡೆಗಣಿಸುತ್ತಿದೆ. ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಅರುಣಾಚಲ ಚೀನಾದ ಪಾಲಾಗುವುದು ನಿಸ್ಸಂಶಯ.
ಇವೆಲ್ಲವುದನ್ನೂ ಬಿಟ್ಟು ಪ್ಯಾಲೇಸ್ತಿನ್, ಇರಾನ್ ವಿಚಾರಕ್ಕೆ ಬಂದಾಗ ಮೋದಿ ಸರ್ಕಾರದ ನಿಲುವು ಬದಲಾಗುತ್ತಲೇ ಇರುತ್ತದೆ. ಭಾರತವು ಈ ಹಿಂದಿನಿಂದಲೂ ಪ್ಯಾಲೇಸ್ತಿನ್, ಇರಾನ್ ಬೆಂಬಲಿತ ಪ್ರಗತಿಪರ ನಿಲುವು ತಳೆಯುತ್ತಿತ್ತು. ಆದರೆ ಮೋದಿ ಕಾಲದಲ್ಲಿ ಭಾರತ ಇಸ್ರೇಲ್ ಮತ್ತು ನಿಕಟ ನಾಯಕತ್ವದ ಜೊತೆ ಅತಿಯಾದ ಆತ್ಮೀಯತೆ ಬೆಳೆಸಿಕೊಂಡಿದೆ. ಕಷ್ಟದ ಸಮಯದಲ್ಲಿ ಇರಾನ್ ಅಥವಾ ಯುಎಇ ಕಡೆಗೆ ಜಾರುವ ಮೂಲಕ ‘ತತ್ವರಹಿತ ವಿದೇಶಾಂಗ ನೀತಿ’ಯನ್ನು ಅನುಸರಿಸಲಾಗುತ್ತಿದೆ.
ಒಟ್ಟಿನಲ್ಲಿ ಬ್ರಿಕ್ಸ್ನಂತಹ ಬಹುರಾಷ್ಟ್ರೀಯ ಶಕ್ತಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯು ಜಾಗತಿಕ ರಾಜತಾಂತ್ರಿಕತೆಗಿಂತ ಹೆಚ್ಚಾಗಿ ದೇಶೀಯ ರಾಜಕೀಯ ಪ್ರಚಾರ ಮತ್ತು ವ್ಯಕ್ತಿತ್ವ ಆಧಾರಿತ ಪ್ರತಿಬಿಂಬಕ್ಕೆ ಸೀಮಿತವಾಗಿದೆ. ಡಾ. ಮನ್ಮೋಹನ್ ಸಿಂಗ್ ಅವರ ಕಾಲದಲ್ಲಿ ‘ನ್ಯೂ ಡೆವಲಪ್ಮೆಂಟ್ ಬ್ಯಾಂಕ್’ನಂತಹ ಕ್ರಾಂತಿಕಾರಿ ಹಾಗೂ ದೀರ್ಘಕಾಲೀನ ಮೂಲಸೌಕರ್ಯಗಳನ್ನು ರಚಿಸುವಲ್ಲಿ ಭಾರತ ಮುಂಚೂಣಿಯಲ್ಲಿತ್ತು. ಆದರೆ ಮೋದಿ ಅವರ ಆಡಳಿತದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಕೇವಲ ‘ವಿಶ್ವಗುರು’ ಎಂಬ ಪೋಸ್ಟರ್ ಶೀರ್ಷಿಕೆಗಳನ್ನು ಪಡೆಯುವುದಕ್ಕಷ್ಟೇ ಆದ್ಯತೆ ನೀಡಲಾಗುತ್ತಿದೆ. ಅಮೆರಿಕದ ಪ್ರಭಾವ ಹಾಗೂ ಚೀನಾದ ಸವಾಲುಗಳ ಮಧ್ಯೆ ದೃಢವಾದ ಸ್ವತಂತ್ರ ನಿಲುವು ತಳೆಯುವ ಬದಲು, ಮೋದಿ ಸರ್ಕಾರ ನಿರಂತರವಾಗಿ ವಿವೇಚನಾರಹಿತ ನಿಲುವು ತಳೆದು ಆರ್ಥಿಕ ಕಾರ್ಯತಂತ್ರಗಳಿಂದ ದೂರ ಸರಿಯುತ್ತಿದೆ.
ಇದಲ್ಲದೆ, ಬದಲಾಗುತ್ತಿರುವ ಜಾಗತಿಕ ಬಲಾಬಲಗಳ ನಡುವೆ ಮೋದಿ ಸರ್ಕಾರದ ವಿದೇಶಾಂಗ ನೀತಿಯು ತತ್ವಾಧಾರಿತವಾಗಿರದೆ ಎಡಬಿಡಂಗಿ ಹಂತಕ್ಕೆ ತಲುಪಿದೆ. ಚೀನಾ ಗಡಿ ಅತಿಕ್ರಮಣದಂತಹ ಸೂಕ್ಷ್ಮ ವಿಚಾರದಲ್ಲಿ ಸ್ಪಷ್ಟತೆ ನೀಡದೆ ಮುಚ್ಚಿಡುವ ಯತ್ನ, ಉಕ್ರೇನ್ ಯುದ್ಧ ಹಾಗೂ ರಷ್ಯಾದ ತೈಲ ಖರೀದಿಯ ವಿಚಾರದಲ್ಲಿ ಪಾಶ್ಚಿಮಾತ್ಯರ ಒತ್ತಡಕ್ಕೆ ಕಂಗೆಡುವುದು ಮತ್ತು ಇಸ್ರೇಲ್-ಇರಾನ್ ಬಿಕ್ಕಟ್ಟಿನಲ್ಲಿ ನಿಖರವಾದ ಕಟ್ಟುಪಾಡುಗಳಿಲ್ಲದೆ ಓಲಾಡುವುದು ಭಾರತದ ದೀರ್ಘಕಾಲೀನ ನಾಯಕತ್ವದ ಪ್ರತಿಷ್ಠೆಗೆ ಧಕ್ಕೆ ತಂದಿದೆ. ಬ್ರಿಕ್ಸ್ ಸಂಘಟನೆಯು ಇಂದು ಹನ್ನೊಂದು ದೇಶಗಳ ಬಲಾಢ್ಯ ಶಕ್ತಿಯಾಗಿ ಬೆಳೆಯುತ್ತಿದ್ದರೂ, ಭಾರತವು ಅದರಲ್ಲಿ ಮುಖ್ಯ ಸೂತ್ರಧಾರಿಯಾಗುವ ಬದಲು ಕೇವಲ ಪ್ರಸಕ್ತ ವಿದ್ಯಮಾನಗಳನ್ನು ಸುಮ್ಮನೆ ನಿಂತು ನೋಡುವ ‘ವೀಕ್ಷಕ’ನಾಗಿ ಉಳಿದಿರುವುದು ಮೋದಿ ಅವರ ರಾಜತಾಂತ್ರಿಕ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




