ಒಳ ಮೀಸಲಾತಿಯು ಸಾಮಾಜಿಕ ನ್ಯಾಯಕ್ಕೆ ಅಗತ್ಯವಾಗಿತ್ತು. ಆದರೆ ಒಳ ಮೀಸಲಾತಿಯ ನೆಪದಲ್ಲಿ ದಲಿತರನ್ನು ಒಡೆಯುವ ಕುತಂತ್ರವೂ ನಡೆಯಿತು. ‘ಸಮುದಾಯ ಎಡವಿದ್ದೆಲ್ಲಿ?’ ಎಂದು ಎಚ್ಚರಗೊಳ್ಳಲು ಇದು ಸಕಾಲ ಎನ್ನುತ್ತಾರೆ ಹೋರಾಟಗಾರರು.
ಕರ್ನಾಟಕದ ರಾಜಕೀಯ, ಸಾಮಾಜಿಕ ಚರಿತ್ರೆಯನ್ನು ನೋಡಿದರೆ ಹೊಲೆಯರು (ಬಲಗೈ) ಮತ್ತು ಮಾದಿಗರು (ಎಡಗೈ) ಇತಿಹಾಸದುದ್ದಕ್ಕೂ ಎಷ್ಟೇ ವಾಗ್ವಾದಗಳನ್ನು ಮಾಡಿದ್ದರೂ ‘ದಲಿತ ಚಳವಳಿ’ ಎಂಬ ಮಹಾ ಆಲದಮರದಡಿ ಒಂದಾಗಿಯೇ ಮುನ್ನಡೆದಿದ್ದಾರೆ. “ನಾವಿಬ್ಬರೂ ಅಸ್ಪೃಶ್ಯರಷ್ಟೇ” ಎಂಬ ಅರಿವಿನಲ್ಲಿ ಕೋಮುವಾದಿ ಮತ್ತು ಜಾತಿವಾದಿ ಶಕ್ತಿಗಳ ವಿರುದ್ಧ ಈ ಸಮುದಾಯಗಳು ಒಗ್ಗೂಡಿ ಹೋರಾಡಿವೆ.
ಎಡಗೈ ಮತ್ತು ಬಲಗೈ ಮುಂದಾಳತ್ವದಲ್ಲೇ ರಾಜ್ಯದ ನೂರೊಂದು ಪರಿಶಿಷ್ಟ ಜಾತಿಗಳು ಈ ನೆಲದಲ್ಲಿ ದಲಿತ ಚಳವಳಿಯನ್ನು ಕಟ್ಟಿದವು ಎಂದು ಯಾವುದೇ ಹೋರಾಟಗಾರರು ನಿಸ್ಸಂಶಯವಾಗಿ ಹೇಳುತ್ತಾರೆ. ಚರಿತ್ರೆಯುದ್ದಕ್ಕೂ ಏರುಪೇರುಗಳು, ವೈರುಧ್ಯಗಳು ಬಂದಾಗಲೂ ಬುದ್ಧನ ಕಾರುಣ್ಯ, ಬಾಬಾಸಾಹೇಬರು ತೋರಿದ ಹೋರಾಟದ ಹಾದಿಯನ್ನು ದಲಿತರು ಮರೆಯಲಿಲ್ಲ. ಆದರೆ ಅಸ್ಪೃಶ್ಯ ಸಮುದಾಯಗಳ ನಡುವೆ ಒಳಮೀಸಲಾತಿ ವಿಚಾರದಲ್ಲಿ ದೊಡ್ಡ ಮಟ್ಟದ ಕಂದಕ ಈ ವರ್ಷ ಸ್ಪಷ್ಟವಾಗಿ ಗೋಚರಿಸಿತ್ತು.
ಮೂವತ್ತೈದು ವರ್ಷಗಳ ಒಳಮೀಸಲಾತಿ ಹೋರಾಟದಲ್ಲಿ ಎಡಗೈ ಮತ್ತು ಬಲಗೈ ಸಮುದಾಯದ ನಡುವೆ ಭಿನ್ನಾಭಿಪ್ರಾಯಗಳು ಇದ್ದಾಗಲೂ ಅವುಗಳನ್ನು ಜೊತೆಯಲ್ಲಿಟ್ಟುಕೊಂಡೇ ಚಳವಳಿಯನ್ನು ಮುನ್ನಡೆಸಲಾಗಿತ್ತು. ಒಳಮೀಸಲಾತಿ ಅತ್ಯಗತ್ಯ ಎಂದು ಉಭಯ ಸಮುದಾಯಗಳ ಮುಂದಾಳುಗಳು ಪ್ರತಿಪಾದಿಸಿದ್ದರು. ಹೀಗಿರುವಾಗ ಒಳಮೀಸಲಾತಿಯೇ ಬೇಡ ಎನ್ನುವ ಮಟ್ಟಿಗೆ ಮಾತುಗಳು ಬಂದಿದ್ದು ಎಲ್ಲಿಂದ? ಇವುಗಳಿಗೆ ಕಾರಣವಾದವರು ಯಾರು? ಎರಡು ಸಮುದಾಯಗಳ ನಡುವೆ ಬೆಂಕಿ ಹಚ್ಚಲು ಸಕ್ರಿಯವಾಗಿ ಕೆಲಸ ಮಾಡಿದ ಕೈಗಳಾದರೂ ಯಾವುವು? ಬಲಿಷ್ಠ ದಲಿತ ಚಳವಳಿಯ ನೆಲವಾದ ಕರ್ನಾಟಕದಲ್ಲಿ ಇಂತಹ ಇಬ್ಭಾಗಕ್ಕೆ ಅವಕಾಶ ದೊರೆತದ್ದು ಹೇಗೆ? ಈಗ ಒಳಮೀಸಲಾತಿಯೇನೋ ತಕ್ಕಮಟ್ಟಿಗೆ ಜಾರಿಯಾಗಿದೆ, ಸಮುದಾಯ ಮುಂದೇನು ಮಾಡಲು ಬಯಸುತ್ತಿದೆ? – ಹೀಗೆ ಹತ್ತಾರು ಪ್ರಶ್ನೆಗಳನ್ನು ಹೊತ್ತು ಹೊರಟಾಗ ಹೋರಾಟಗಾರರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಆಗಿರುವ ಗಾಯಗಳ ಮೂಲಗಳನ್ನು ಸ್ಪಷ್ಟವಾಗಿ ತೋರಿಸಿ, ಸರಿಯಾದ ಮಲಾಮು ಹಚ್ಚುವ ಮಾತುಗಳನ್ನು ತಿಳಿಸಿದ್ದಾರೆ. ಬೆಂದ ಮನೆಯಲ್ಲಿ ‘ಗಳ’ ಇರಿಯುವ ಕೈಗಳು ಅವಕಾಶಕ್ಕಾಗಿ ಕಾದು ಕುಳಿತಿರುವಾಗ, ಆಗಿರುವ ಪ್ರಮಾದಗಳನ್ನು ಸರಿಪಡಿಸುವ ಇಂಗಿತ ಹೋರಾಟಗಾರರಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ಎಡಬಲದಲ್ಲಿದ್ದ ಕೋಮುವಾದಿ ಪಡೆಗಳೇ ಬಿರುಕಿಗೆ ಕಾರಣ: ಹೆಣ್ಣೂರು ಶ್ರೀನಿವಾಸ್
“ಎರಡು ಸಮುದಾಯಗಳ ನಡುವೆ ಬಿರುಕು ಮೂಡಿದ್ದು ಸ್ಪಷ್ಟವಾಗಿ ಕಂಡಿತು. ಆದರೆ ಎಡ-ಬಲಗಳೆರಡೂ ದಲಿತ ಚಳವಳಿ ಎಂಬ ಕರುಳ ಬಾಂಧವ್ಯದಲ್ಲಿ ಎಂದಿಗೂ ಗಟ್ಟಿಯಾಗಿವೆ. ಈ ಕರುಳ ಬಳ್ಳಿಗಳನ್ನು ಕತ್ತರಿಸಲು ಎರಡು ಬದಿಯಲ್ಲಿಯೂ ಕೋಮುವಾದಿ ಪಡೆಗಳು ಸಕ್ರಿಯವಾಗಿ ಕೆಲಸ ಮಾಡಿದವು” ಎನ್ನುತ್ತಾರೆ ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರ ಮತ್ತು ಎಡಗೈ ಸಮುದಾಯದ ಹೆಣ್ಣೂರು ಶ್ರೀನಿವಾಸ್.
“ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿಯನ್ನು ಜಾರಿಗೆ ತರಲೇಬೇಕು ಎಂಬ ಆಗ್ರಹವನ್ನು ಕರ್ನಾಟಕದಲ್ಲಿ ಮೊಟ್ಟಮೊದಲಿಗೆ ಮುನ್ನಲೆಗೆ ತಂದಿದ್ದೇ ದಲಿತ ಸಂಘರ್ಷ ಸಮಿತಿ (ದಸಂಸ). ಕೆಲವರಿಗೆ ಈ ಇತಿಹಾಸ ಗೊತ್ತಿಲ್ಲ. ದಸಂಸದೊಳಗೆ ಒಳಮೀಸಲಾತಿಯ ಪ್ರಶ್ನೆ ಜೀವಂತವಾಗಿತ್ತು. ಸರ್ಕಾರ ಜಸ್ಟಿಸ್ ಸದಾಶಿವ ಆಯೋಗವನ್ನು ರಚಿಸುವವರೆಗೂ ನಿರಂತರ ಒತ್ತಡಗಳನ್ನು ದಸಂಸ ಸೃಷ್ಟಿಸಿತ್ತು. ಆದರೆ ಕಾಲಾನಂತರದಲ್ಲಿ ಈ ಹೋರಾಟವು ಜಾತಿ ಗುಂಪುಗಳ ಕೈಗೆ ಹೋಯಿತು. ಆಗ ಸಹಜವಾಗಿ ದಸಂಸ ನೇಪಥ್ಯಕ್ಕೆ ಸರಿದಂತೆ ಕಂಡಿತು. ಈಗಲೂ ದಸಂಸವೇ ಸಮಸ್ತ ದಲಿತರನ್ನು, ದಲಿತರ ಸಮಸ್ಯೆಗಳನ್ನು ಆಲಿಸಬಲ್ಲ ಸಂಘಟನಾತ್ಮಕ ಶಕ್ತಿ ಹೊಂದಿರುವ ಏಕೈಕ ಸಂಘಟನೆ. ಇಲ್ಲಿ ಎಡ-ಬಲ ಸಮುದಾಯಗಳೆರಡೂ ಇವೆ. ಒಳಮೀಸಲಾತಿ ಜಾರಿಗೆ ಕೇವಲ ಮಾದಿಗರಷ್ಟೇ ದನಿ ಎತ್ತುತ್ತಿದ್ದಾರೆಂಬಂತೆ ಚಿತ್ರಿಸಲಾಗುತ್ತಿದೆ. ವಾಸ್ತವದಲ್ಲಿ ಒಳಮೀಸಲಾತಿಗಾಗಿ ಹೋರಾಡಿದ ಬಲಗೈ ಸಮುದಾಯದ ದೊಡ್ಡ ಪಡೆಯೇ ಇದೆ” ಎನ್ನುತ್ತಾರೆ ಶ್ರೀನಿವಾಸ್.
“ಎಡಗೈ- ಬಲಗೈ ಸಮುದಾಯದ ಬಿರುಕುಗಳನ್ನು ಬೆಳೆಸಲು ಎರಡೂ ಸಮುದಾಯದೊಳಗೂ ಕೋಮುವಾದಿಗಳ ಕೈ ಆಳುಗಳು ಕೆಲಸ ಮಾಡಿದರು. ಸಮುದಾಯಗಳೆರಡೂ ಅಶಾಂತಿಯಲ್ಲಿವೆ ಎಂದು ಬಿಂಬಿಸಿ, ಒಳಲಾಳವನ್ನು ಮರೆಮಾಚುವ ಮಸಲತ್ತು ಮಾಡಿದರು. ಈ ಎರಡು ಗುಂಪಿಗೂ ವಾದಿರಾಜ ಸಾಮರಸ್ಯ ಎಂಬ ಸಂಘಪರಿವಾರದ ಬ್ರಾಹ್ಮಣನೇ ಸೂತ್ರಧಾರನಾಗಿದ್ದ” ಎಂದು ಅವರು ವಿವರಿಸುತ್ತಾರೆ.

“ಸಮುದಾಯಗಳ ನಡುವೆ ಬಿರುಕು ಮೂಡಿಸಲು ಎರಡು ಕಡೆಯೂ ಆಟ ಆಡುತ್ತಿದ್ದ ಸಂಘಿಪಡೆಗಳ ಕಾರ್ಯವೈಖರಿಯನ್ನು ಹೋರಾಟಗಾರರು ಸೂಕ್ಷ್ಮವಾಗಿ ಗಮನಿಸಿದರೂ ಏನೂ ಮಾಡದೆ ಇದ್ದದ್ದು ತಪ್ಪಾಯಿತು. ಮೈಸೂರು ಭಾಗದಲ್ಲಿ ಬಲಗೈ ಸಮುದಾಯ ದೊಡ್ಡಮಟ್ಟದಲ್ಲಿದೆ. ಎಡಗೈ ಮುಖವಾಡ ಹೊತ್ತ ಕೋಮುವಾದಿ ಪಡೆಯು ಮೈಸೂರು ಭಾಗವನ್ನು ಟಾರ್ಗೆಟ್ ಮಾಡಿತು. ಬಲಗೈ ಸಮುದಾಯದ ನಾಯಕ ಡಾ. ಎಚ್.ಸಿ. ಮಹದೇವಪ್ಪ ಅವರನ್ನು ಪದೇಪದೇ ನಿಂದಿಸಲಾಯಿತು. ಮಹದೇವಪ್ಪನವರನ್ನು ವ್ಯಕ್ತಿಗತವಾಗಿ ಕೆಣಕುತ್ತಾ ಹೋದ ಈ ಗುಂಪು, ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳತೊಡಗಿತು. ಇತ್ತ ಹೊಲೆಯ ಸಮುದಾಯ ತಪ್ಪು ತಿಳಿಯಲಾರಂಭಿಸಿತು. ಮಹದೇವಪ್ಪನವರ ಮೇಲಾಗುತ್ತಿದ್ದ ನಿಂದನೆಯು ಸಮುದಾಯಕ್ಕಾದ ನಿಂದನೆ ಎಂದು ಬಲಗೈನವರು ಭಾವಿಸಿದರು. ಸಂಘಪರಿವಾರಕ್ಕೆ ಬೇಕಾಗಿದ್ದು ಇದೇ ಆಟ. ಎಡಗೈ ಮತ್ತು ಬಲಗೈ ಕಿತ್ತಾಡಿಕೊಂಡು ಇದ್ದರೆ ಮಾತ್ರ ಕೋಮುವಾದಿ ಕಾರ್ಯಾಚರಣೆ ಸುಲಭವೆಂದು ಸಂಘಕ್ಕೆ ಗೊತ್ತಿತ್ತು. ದಾಳಿ ಮಾಡುತ್ತಿರುವುದು ಎಡಗೈ ಗುಂಪಿನ ಸಂಘಿ ಪಡೆ ಎಂಬುದನ್ನು ಬಲಗೈ ಸಮುದಾಯ ಸ್ಪಷ್ಟವಾಗಿ ಗುರುತಿಸದಾಯಿತು” ಎಂದು ಒಳರಾಜಕಾರಣವನ್ನು ಬಿಚ್ಚಿಡುತ್ತಾರೆ ಶ್ರೀನಿವಾಸ್.
ಸಮುದಾಯಗಳ ನಡುವೆ ಬೆಂಕಿ ಹಚ್ಚಿದ ಮತ್ತಷ್ಟು ಬೆಳವಣಿಗೆಗಳು ಯಾವುವೆಂದು ಅವರು ‘ಈದಿನ,ಕಾಮ್’ದ ಜೊತೆ ದಾಖಲಿಸಿದ್ದಾರೆ: “ಮಹಾದೇವಪ್ಪನವರ ಬಳಿಕ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿಯವರನ್ನು ಸಂಘಿಪಡೆ ಟಾರ್ಗೆಟ್ ಮಾಡಿದ್ದು, ಬಲಗೈ ಸಮುದಾಯವನ್ನು ಮತ್ತಷ್ಟು ಕೆಣಕಿಬಿಟ್ಟಿತು. ಒಳಮೀಸಲಾತಿ ಜಾರಿ ಮಾಡಿಸುವುದು ಸಂಘಿ ಗುಂಪಿನ ಉದ್ದೇಶವಾಗಿರಲಿಲ್ಲ. ಸಮುದಾಯಗಳ ನಡುವೆ ಬೆಂಕಿ ಹಚ್ಚುವುದೇ ಅವರ ಅಜೆಂಡಾವಾಗಿದೆ ಎಂಬುದನ್ನು ಗುರುತಿಸದ ಬಲಗೈ ಸಮುದಾಯವು ಆತುರಾತುರವಾಗಿ ಪ್ರತಿಕ್ರಿಯೆ ನೀಡತೊಡಗಿತು. ಇನ್ನು ಬಲಗೈ ಕಡೆ ಕೆಲಸ ಮಾಡುತ್ತಿದ್ದ ಸಂಘಿ ಪಡೆಯ ಬಗ್ಗೆ ಹೇಳಲೇಬೇಕು. ಕೊಳ್ಳೇಗಾಲದ ಮಾಜಿ ಶಾಸಕ ಎನ್.ಮಹೇಶ್ ಅವರು ‘ನೋಡಿ ಇನ್ನ ಮೂವತ್ತು ವರ್ಷಗಳ ಕಾಲ ಹೊಲೆಯರಿಗೆ ಯಾವುದೇ ಹುದ್ದೆಗಳು ಸಿಗುವುದಿಲ್ಲ. ನೀವು ಯಾವುದೇ ಕಾರಣಕ್ಕೂ ರೋಸ್ಟರ್ ಆಗಲು ಬಿಡಬಾರದು’ ಎಂದು ಸಮುದಾಯವನ್ನು ಪ್ರಚೋದಿಸಿದರು. ಬಲಗೈ ಗುಂಪಿನ ಸರ್ಕಾರಿ ನೌಕರನೊಬ್ಬ ಸಮುದಾಯದ ವೇದಿಕೆ ಮೇಲೆ ನಿಂತು, ಜಸ್ಟಿಸ್ ನಾಗಮೋಹನ ದಾಸ್ ಆಯೋಗದ ವರದಿಯಲ್ಲಿನ ಅಂಕಿ-ಅಂಶಗಳನ್ನು ತಿರುಚಿ ಬೇಕಾಬಿಟ್ಟಿ ಅರ್ಧ ಸತ್ಯಗಳನ್ನು ಹೇಳತೊಡಗಿದನು. ನನ್ನ ಹೋರಾಟ ಜೀವನದ ಅನುಭವದ ಪ್ರಕಾರ ಹೇಳುವುದಾದರೆ, ಹೀಗೆ ಅಂಕಿ-ಅಂಶಗಳನ್ನು ತಿರುಚಿದ ಆ ವ್ಯಕ್ತಿಗೆ ಬಿಜೆಪಿಯಿಂದ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿರುವ ಆಸಕ್ತಿ ಇದೆ. ಮೈಸೂರು ಭಾಗದಲ್ಲಿ ಬಿಜೆಪಿಯೊಳಗೆ ದಲಿತ ನಾಯಕತ್ವ ಇಲ್ಲವಾಗಿದೆ. ಶ್ರೀನಿವಾಸ್ ಪ್ರಸಾದ್ ಅವರ ನಿರ್ಗಮನದ ನಂತರ ಉಂಟಾಗಿರುವ ನಿರ್ವಾತವನ್ನು ತಾನು ಪಡೆಯಬಲ್ಲೆ ಎಂಬ ರಾಜಕೀಯ ದುರಾಲೋಚನೆ ಈ ಆ ವ್ಯಕ್ತಿಗಿದೆ. ಹಾಗಾಗಿಯೇ ಸ್ವಾರ್ಥಕ್ಕಾಗಿ ಸಮುದಾಯವನ್ನು ಪ್ರಚೋದಿಸಿದಂತೆ ಕಾಣುತ್ತದೆ” ಎಂದು ತಿಳಿಸುತ್ತಾರೆ.
“ನಾನು ಗಮನಿಸಿದಂತೆ ಜ್ಞಾನಪ್ರಕಾಶ ಸ್ವಾಮೀಜಿಯವರು ಸಮುದಾಯಗಳನ್ನು ಬೆಸೆಯಬೇಕೆಂಬ ಚಿಂತನೆಯನ್ನು ಉಳ್ಳವರೇ ಆಗಿದ್ದಾರೆ. ಆದರೆ ಸ್ವಾಮೀಜಿ ಮತ್ತು ಮಹದೇವಪ್ಪ ಅವರನ್ನು ಪದೇಪದೇ ಕೆಣಕಿದ ಎಡಗೈ ಸಂಘಿ ಬಣದ ಕಾರಣ ಸ್ವಾಮೀಜಿಯವರ ಮೇಲೂ ಒತ್ತಡ ಸೃಷ್ಟಿಯಾಯಿತು. ಇಂತಹ ಬಿಕ್ಕಟ್ಟಿನಲ್ಲಿ ಸ್ವಾಮೀಜಿ ಸಮುದಾಯದ ಪರ ನಿಲ್ಲಲೇಬೇಕಾಯಿತು. ಇಲ್ಲವಾದರೆ ಸಮುದಾಯ ಅವರ ವಿರುದ್ಧ ಮುನಿಸಿಕೊಳ್ಳುವ ಅಪಾಯವಿತ್ತು. ಸಹಜವಾಗಿ ಜ್ಞಾನಪ್ರಕಾಶ ಸ್ವಾಮೀಜಿಯವರು ಪಂಚಿಂಗ್ ಹೇಳಿಕೆಗಳನ್ನು ನೀಡುತ್ತಾರೆ. ಹೋರಾಟದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ‘ಒಳಮೀಸಲಾತಿ ಬಿಸಾಕು, ಅಂಬೇಡ್ಕರ್ ಮೀಸಲಾತಿ ಸಾಕು’ ಎಂದುಬಿಟ್ಟರು. ಸ್ವಾಮೀಜಿ ಒಳಮೀಸಲಾತಿ ವಿರೋಧಿ ಎಂದು ಬಿಂಬಿಸಿ, ಆ ಮೂಲಕ ಇಡೀ ಬಲಗೈ ಸಮುದಾಯವೇ ಒಳಮೀಸಲಾತಿ ವಿರುದ್ಧ ಇದೆ ಎಂದು ತೋರಿಸಲು ಈ ಹೇಳಿಕೆ ಅವಕಾಶ ನೀಡಿತು. ಅವರ ವಿಡಿಯೊ ತುಣುಕು ವೈರಲ್ ಆದ ಬೆನ್ನಲ್ಲೇ ನಾನು ಸ್ವಾಮೀಜಿಯವರಿಗೆ ಕರೆ ಮಾಡಿ, ‘ಯಾಕೆ ಹೀಗೆ ಮಾತನಾಡಿದ್ದೀರಿ’ ಎಂದು ಕೇಳಿದೆ. ‘ಶ್ರೀನಿವಾಸ್, ನಾನು ಮಾತನಾಡುವ ಭರದಲ್ಲಿ ಆವೇಶಕ್ಕೊಳಗಾಗಿ ಹಾಗೆ ಹೇಳಿರಬಹುದು. ನಾನು ಒಳಮೀಸಲಾತಿಯನ್ನು ವಿರೋಧಿಸಲು ಸಾಧ್ಯವೇ?’ ಎಂದು ಕೇಳಿದ್ದರು. ಇದೇ ವಾಸ್ತವ. ಸ್ವಾಮೀಜಿ ಮನುಷ್ಯ ಸಹಜ ನಡವಳಿಕೆಯನ್ನು ತೋರಿದ್ದರೆ ವಿನಃ ಉದ್ದೇಶಪೂರ್ವಕ ಪ್ರಚೋದನೆ ಮಾಡಿದವರಲ್ಲ. ಮುಂದಿನ ದಿನಗಳಲ್ಲಿ ಎಡಗೈ ಮತ್ತು ಬಲಗೈ ಸಮುದಾಯಗಳೆರಡೂ ಒಂದಾಗಿ ಐಕ್ಯತಾ ಸಮಾವೇಶ ನಡೆಸಲು ಚಿಂತನೆ ನಡೆಯುತ್ತಿದೆ. ನಮ್ಮ ನಡುವೆ ಬಿರುಕುಗಳು ಎದ್ದೇಳಲು ಕಾರಣವಾಗಿರುವ ಸಂಗತಿಗಳನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಈಗ ಆಗಿರುವ ಗಾಯಗಳನ್ನು ನೋಡಿಕೊಳ್ಳುವಾಗ ನಾವು ಎಲ್ಲಿ ಎಡವಿದ್ದೇವೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ” ಎನ್ನುತ್ತಾರೆ.

“ಈಗ ಹೊಲೆಯವರ ವಿರುದ್ಧ ಮಾತನಾಡುತ್ತಿರುವ ಮಾದಿಗರನ್ನು ಗಮನಿಸಬೇಕು. ಆ ಮಾತುಗಳ್ಯಾವುದೂ ಮಾದಿಗರ ಮನದಿಂದ ಬಂದವುಗಳಲ್ಲ. ಅದರ ಹಿಂದೆ ಇರುವುದು ವಾದಿರಾಜ ಸಾಮರಸ್ಯ. ನನಗೂ ವಾದಿರಾಜ ಒಮ್ಮೆ ಕರೆ ಮಾಡಿದ್ದ. ಬಿಜೆಪಿ ಅಧಿಕಾರದಲ್ಲಿದ್ದಾಗ ನೀವೆಲ್ಲ ಹೋರಾಟ ಮಾಡಿದ್ದೀರಿ. ಈಗ ಯಾಕೆ ನೀವು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ ಅಂತ ಕೇಳಿದ್ದ. ನನಗೆ ವಿಪರೀತ ಕೋಪಬಂದಿತು. ನಾವು ಏನು ಮಾಡಬೇಕು, ಯಾರನ್ನು ಪ್ರಶ್ನಿಸಬೇಕು ಅಂತ ನಿನ್ನಿಂದ ಕೇಳಬೇಕೆನಯ್ಯ?, ನಮ್ಮ ಸಮುದಾಯಗಳ ಸಮಸ್ಯೆಯನ್ನು ನಾವೇ ಬಗೆಹರಿಸುತ್ತೇವೆ. ಇದರಲ್ಲಿ ತಲೆ ಹಾಕಲು ನೀನು ಯಾರು ಅಂತ ಕೇಳಿದ್ದೆ. ಆಮೇಲೆ ಆತ ನನ್ನ ಸುಳಿಯಲಿಲ್ಲ. ಒಬ್ಬರನ್ನೊಬ್ಬರನ್ನು ಎತ್ತಿಕಟ್ಟುವುದೇ ವಾದಿರಾಜನ ಕೆಲಸ” ಎಂದು ಎಚ್ಚರಿಸುತ್ತಾರೆ.
“ನಾವು ಎಲ್ಲಿ ಎಡವಿದೆವು, ಯಾರಿಂದ ಎಡವಿದೆವು, ಆವೇಶದಲ್ಲಿ ಎಲ್ಲಿ ತಪ್ಪು ಮಾಡಿದೆವು ಎಂದು ನಿಧಾನಕ್ಕೆ ಗೊತ್ತಾಗಿದೆ” ಎನ್ನುವ ಶ್ರೀನಿವಾಸ್, ಒಳಮೀಸಲಾತಿ ವಿಚಾರದಲ್ಲಿ ಮುಂದೆ ಆಗಬೇಕಿರುವ ಕಾರ್ಯಗಳನ್ನು ಹಂಚಿಕೊಂಡಿದ್ದಾರೆ.
“ಹೊಲೆಯ ಮಾದಿಗರಿಬ್ಬರಿಗೂ ಪ್ರಾತಿನಿಧ್ಯದಲ್ಲಿ ಅನ್ಯಾಯವಾಗಿದೆ. ಭೋವಿ, ಲಂಬಾಣಿಗಳಿಗೆ ಹೆಚ್ಚುಪಾಲು ಹೋಗಿದೆ. ಮೀಸಲಾತಿಯ ರೋಸ್ಟರ್ ಬಿಂದು ತಕ್ಕಮಟ್ಟಿಗೆ ಸರಿಯಾಗಿದ್ದರೂ, ಮುಂದಿನ ದಿನಗಳಲ್ಲಿ ಮತ್ತಷ್ಟು ತಿದ್ದುಪಡಿಗಳನ್ನು ಕಾಣಬೇಕಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಒಳಮೀಸಲಾತಿ ಬರಬೇಕಿದೆ. ರಾಜ್ಯದಲ್ಲಿ ಸುಮಾರು ಆರು ಸಾವಿರ ಗ್ರಾಮ ಪಂಚಾಯಿತಿಗಳಿವೆ. ಒಳಮೀಸಲಾತಿ ಬಂದರೆ ಕನಿಷ್ಠವೆಂದರೂ 4000ದಿಂದ 5000 ಪಂಚಾಯಿತಿಯಲ್ಲಿ ಹೊಲೆಯ ಮತ್ತು ಮಾದಿಗರು ದೊಡ್ಡ ಪ್ರಮಾಣದಲ್ಲಿ ಗೆಲ್ಲುತ್ತಾರೆ. ಬಿಜಾಪುರ ಜಿಲ್ಲೆಯನ್ನೇ ನೋಡಿ. 12 ಜಿಲ್ಲಾ ಪಂಚಾಯಿತಿ ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ ಸುಮಾರು 9 ಮಂದಿ ಲಂಬಾಣಿಗಳಿದ್ದಾರೆ. ಕ್ಷೇತ್ರವನ್ನು ನೋಡಿದರೆ ಹೊಲೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಕನಿಷ್ಠ 6 ಮಂದಿ ಹೊಲೆಯರು ಅಲ್ಲಿ ಇರಬೇಕಿತ್ತು. ಕನಿಷ್ಠ ಮೂವರು ಮಾದಿಗರು ಗೆಲ್ಲಬೇಕಿತ್ತು. ಒಬ್ಬನೇ ಒಬ್ಬ ಮಾದಿಗ ಅಭ್ಯರ್ಥಿ ಅಲ್ಲಿಲ್ಲ. ಹೀಗೆ ಪ್ರತಿ ಜಿಲ್ಲೆಯ ಅಂಕಿ-ಅಂಶ ತೆಗೆದರೆ ಎಡಗೈ ಮತ್ತು ಬಲಗೈಗೆ ಆಗಿರುವ ಅನ್ಯಾಯ ತಿಳಿಯುತ್ತದೆ” ಎಂದು ಮಾಹಿತಿ ನೀಡಿದರು.
ವರ್ಗೀಕರಣಕ್ಕೆ ದನಿಯಾಗಿದ್ದ ಡಿ.ಎಸ್.ಎಸ್: ಮಾವಳ್ಳಿ ಶಂಕರ್
“ಎರಡು ದಶಕಗಳ ಕಾಲ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ದಲಿತರ ಪ್ರಾತಿನಿಧಿಕ ದನಿಯಾಗಿತ್ತು. ದಲಿತರ ಒಡಲ ಒಳಗಡೆ ಡಿಎಸ್‌ಎಸ್ ಇತ್ತು. 90ರ ದಶಕದಲ್ಲಿ ದಲಿತರೊಳಗೆ ಹಂಚಿಕೆ ವಿಚಾರ ಮುನ್ನೆಲೆಗೆ ಬಂದಿತು. ಪ್ರತಿರೋಧಗಳು ಹುಟ್ಟಿಕೊಂಡವು. ಅವಿಭಜಿತ ಆಂಧ್ರದಲ್ಲಿ ಹುಟ್ಟಿದ ಕೂಗು ಕರ್ನಾಟಕಕ್ಕೂ ಕಾಲಿಟ್ಟಿತು. ನಮ್ಮಲ್ಲೂ ಒಳಮೀಸಲಾತಿ ಕೂಗು ಉಂಟಾದಾಗ ಅವುಗಳನ್ನು ಬಗೆಹರಿಸಬೇಕೆಂದು ಡಿಎಸ್‌ಎಸ್ ಮುಂದಾಯಿತು. ಮೀಸಲಾತಿಯನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಸಮಾರಂಭಗಳು, ಸೆಮಿನಾರ್ ಗಳಾದವು. ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಮೇಲೆ ಡಿಎಸ್‌ಎಸ್ ತೀವ್ರ ಒತ್ತಡ ತಂದ ಕಾರಣ ಜಸ್ಟಿಸ್ ಬಾಲಕೃಷ್ಣ ಆಯೋಗವನ್ನು ರಚಿಸಲಾಗಿತ್ತು. ಅವರು ತೀರಿಹೋದರು. ಸಂಸದರಾಗಿದ್ದ ಹನುಮಂತಯ್ಯ ಅವರಿಗೆ ಜವಾಬ್ದಾರಿ ವಹಿಸಲಾಯಿತು. ಅವರು ಮುಂದುವರಿಯಲಿಲ್ಲ. ಮುಂದೆ ಮುಖ್ಯಮಂತ್ರಿಯಾದ ಧರಂ ಸಿಂಗ್ ಅವರು ಸದಾಶಿವ ಆಯೋಗವನ್ನು ರಚನೆ ಮಾಡಿದರು. ಅದು ಸುಮಾರು ಏಳು ವರ್ಷಗಳ ಬಳಿಕ ವರದಿಕೊಟ್ಟಿತು. ಆ ವರದಿ ಅಪೂರ್ಣ ಅಂತ ಕೂಗು ಎದ್ದಿತು. ಆನಂತರದಲ್ಲಿ ಒಳಮೀಸಲಾತಿ ಹೋರಾಟ ಬೇರೆಬೇರೆ ಸ್ವರೂಪ ಪಡೆದುಕೊಳ್ಳಲು ಶುರುವಾಗಿದ್ದು ಇತಿಹಾಸ. ದಸಂಸದ ದನಿ ಹಿಂದಕ್ಕೆ ಸರಿಯಿತು. ಸಮುದಾಯಗಳು ಬಿಡಿಬಿಡಿಯಾಗಿ ಇದನ್ನು ಕೈಗೆ ತೆಗೆದುಕೊಳ್ಳಲು ಆರಂಭಿಸಿದವು. ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಿದ್ದ ಚಳವಳಿ ಪ್ರತ್ಯೇಕತೆಯನ್ನು ಪ್ರಚೋದಿಸಲು ಶುರುಮಾಡಿತು. ಆದರೆ ಎಲ್ಲರನ್ನೂ ಒಳಗೊಂಡೇ ಚಳವಳಿ ನಡೆಯಬೇಕು ಮತ್ತು ಮೀಸಲಾತಿ ವರ್ಗೀಕರಣ ಆಗಬೇಕೆಂಬ ಸ್ಪಷ್ಟ ನಿರ್ಧಾರವನ್ನು ಡಿಎಸ್‌ಎಸ್ ತೆಗೆದುಕೊಂಡಿತ್ತು” ಎನ್ನುತ್ತಾರೆ ದಸಂಸ ಸಂಚಾಲಕ ಮಾವಳ್ಳಿ ಶಂಕರ್.
“ಒಂದು ಮಾಡಬೇಕಿದ್ದ ವರ್ಗೀಕರಣ ಕಂದಕ ಸೃಷ್ಟಿ ಮಾಡುವತ್ತ ಹೋಗಿದ್ದು ಬೇಸರದ ಸಂಗತಿ. ಒಂದಾಗಿ ಇರಬೇಕಿದ್ದ ಗೂಡಿಗೆ ನಾವೇ ಬೆಂಕಿ ಇಟ್ಟುಕೊಂಡು ಓಡಾಡುತ್ತಿದ್ದೇವೆ. ಇದರ ಹಿಂದೆ ಆರ್‌ಎಸ್‌ಎಸ್ ಸಂಪೂರ್ಣವಾಗಿ ಭಾಗಿ ಆಗಿರುವುದನ್ನು ನೋಡುತ್ತಿದ್ದೇವೆ. ವಾದಿರಾಜ ಎಂಬಾತ ಸಂಪೂರ್ಣ ಮೇಲುಗೈ ಸಾಧಿಸಿದ. ಆತನೇ ಇದನ್ನು ಲೀಡ್ ಮಾಡಲು ಶುರು ಮಾಡಿದ. ಬಿಜೆಪಿಯ ಮಂತ್ರಿ, ಶಾಸಕರನ್ನು ಆತನೇ ನಿಯಂತ್ರಿಸಿದ. ನಮ್ಮ ನೋವನ್ನು ನಾವೇ ನೋಡಕೊಳ್ಳಬೇಕಿತ್ತು. ಇದರಲ್ಲಿ ಆರ್‌ಎಸ್‌ಎಸ್ ಮೂಗು ತೂರಿಸಲು ಬಿಡಬಾರದಿತ್ತು. ನಮಗೇನು ಬುದ್ಧಿವಂತಿಕೆ ಇರಲಿಲ್ಲವೇ? ನಮ್ಮವರೇ ಆತನನ್ನು ಸಭೆಗಳಿಗೆ ಬಿಟ್ಟುಕೊಂಡರು. ಆತನ ಮೂಲಕ ಸಭೆಗಳಲ್ಲಿ ಮಾತನಾಡಿಸಿದರು. ಇದಕ್ಕೆ ಅವಕಾಶ ನೀಡಬಾರದಿತ್ತು” ಎನ್ನುತ್ತಾರೆ.

“ರೋಸ್ಟರ್ ಬಿಂದುವನ್ನು ಸ್ವಲ್ಪ ಜಾಗರೂಕತೆಯಿಂದ ಮೊದಲೇ ಮಾಡಿದ್ದರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಉರಿವ ಮನೆಯಲ್ಲಿ ಗಳ ಇರಿಯುವವರು ಕಾಯುತ್ತಿರುತ್ತಾರೆ. ಒಗ್ಗಟ್ಟಾಗಿ ಇರುವುದು ಅವರಿಗೆ ಬೇಕಿರುವುದಿಲ್ಲ. ಸ್ವಹಿತಾಸಕ್ತಿಯೇ ಮುಖ್ಯವಾಗಿರುತ್ತದೆ. ಮೊದಲೆಲ್ಲ ಛಲವಾದಿ ಎಲ್ಲಿತ್ತು? ಬಲಗೈ ಎಲ್ಲಿತ್ತು?- ನಾವು ಕೇಳಿಯೇ ಇಲ್ಲ. 2000ನೇ ಇಸವಿಯವರೆಗೆ ಎಲ್ಲಿದ್ದರು ಇವರು? ಇವರಿಗೆ ಜನ ಯಾಕೆ ಮನ್ನಣೆ ಕೊಡುತ್ತಿದ್ದಾರೆ? ಇವರ ಹಿಂದೆ ಯಾರಿದ್ದಾರೆ? ದಲಿತ ಸಂಘರ್ಷ ಸಮಿತಿ ಮಾತನಾಡಿದರೆ ಬೇಳೆ ಬೇಯುವುದಿಲ್ಲ. ಸಮುದಾಯಗಳನ್ನು ವಿಘಟನೆ ಮಾಡುವ ಕೆಲಸವನ್ನು ಸ್ವಾರ್ಥಕ್ಕಾಗಿ ಮಾಡುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ಒಳಮೀಸಲಾತಿಯನ್ನು ಸರ್ಕಾರ ಮಾಡಿದೆ. ಅಲೆಮಾರಿಗೆ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿದೆ. ಸಮುದಾಯದ ಮುಂದೆ ದೊಡ್ಡ ಸವಾಲುಗಳಿವೆ ಎಂಬುದನ್ನು ಮನಗಾಣಬೇಕಿದೆ” ಎನ್ನುವ ಮಾವಳ್ಳಿಯವರು, “ಕರ್ನಾಟಕದಲ್ಲಿ ಬಲಾಢ್ಯ ಜಾತಿಗಳು ಒಂದಾಗುತ್ತಿವೆ. ಮೇಲ್ಜಾತಿ ಮಠಗಳ ಪಾರುಪತ್ಯ ಕಾಣುತ್ತಿದೆ. ನಮ್ಮ ಐಕ್ಯತೆಯನ್ನು ಗಟ್ಟಿಮಾಡಿಕೊಳ್ಳಬೇಕು. ಬಾಬಾಸಾಹೇಬರ ಕನಸನ್ನು ನನಸು ಮಾಡಬೇಕು. ಭೂಮಿ ಹಕ್ಕು, ಶಿಕ್ಷಣ ಹಕ್ಕು ಕಸಿಯಲಾಗುತ್ತಿದೆ. ಖಾಸಗೀಕರಣ ಹೆಚ್ಚಾಗುತ್ತಿದೆ. ಒಳಮೀಸಲಾತಿ ಆದ ತಕ್ಷಣ ನಮ್ಮ ಮೇಲೆ ದೌರ್ಜನ್ಯಗಳು ಕಡಿಮೆಯಾಗುತ್ತವೆಯೇ? ನಮಗೆ ಸಿಗಬೇಕಾದ ಅವಕಾಶ ಸಿಕ್ಕಿಬಿಡುತ್ತವೆಯೇ? ನಾವು ಹೋರಾಟ ಮಾಡಲೇಬೇಕು. ಹಾಗಾಗಿ ಒಗ್ಗಟ್ಟು ಮುಖ್ಯ. ಪ್ರಭುತ್ವ ನಮ್ಮ ಪರವಾಗಿ ಯಾವತ್ತೂ ಇಲ್ಲ. ಮೀಸಲಾತಿ ಪ್ರಮಾಣ ಹೆಚ್ಚಿಸಿಕೊಳ್ಳಲು ಹೋರಾಟ ಮಾಡಬೇಕಿದೆ. ಭೂಮಿ ಹಂಚಿಕೆಗಾಗಿ ದನಿ ಎತ್ತಬೇಕು. ಶಿಕ್ಷಣ ನಮ್ಮ ಮಕ್ಕಳಿಗೆ ಸಮರ್ಪಕವಾಗಿ ತಲುಪಬೇಕು. ಗಾಯವನ್ನು ದೊಡ್ಡದು ಮಾಡುವುದರಿಂದ ಲಾಭವಿಲ್ಲ” ಎಂದು ಕಿವಿಮಾತು ಹೇಳುತ್ತಾರೆ.
‘ಅನ್ನದ ಹಂಚಿಕೆಯಲ್ಲಿ ವ್ಯತ್ಯಾಸವಾದರೆ ಒಗ್ಗಟ್ಟು ಮುರಿಯುತ್ತದೆ: ಶ್ರೀಧರ್ ಕಲಿವೀರ
ದಲಿತ ಸಂಘರ್ಷ ಸಮಿತಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಶ್ರೀಧರ್ ಕಲಿವೀರ ಅವರು ಒಳಮೀಸಲಾತಿ ಪರವಾಗಿ ನಿರಂತರ ದನಿ ಎತ್ತಿದ ಪ್ರಮುಖರು. ಬಲಗೈ ಸಮುದಾಯದವರಾದ ಅವರು 2000ನೇ ಇಸವಿಯಲ್ಲೇ ಪ್ರಜಾವಾಣಿ ಪತ್ರಿಕೆಯಲ್ಲಿ ಒಳಮೀಸಲಾತಿ ಪರವಾಗಿ ಲೇಖನ ಪ್ರಕಟಿಸಿದ್ದರು. ಎಸ್.ಎಂ.ಕೃಷ್ಣ ಸರ್ಕಾರದ ಮೇಲೆ ಒತ್ತಡ ಹಾಕಲು ಬೃಹತ್ ಚಳವಳಿಯನ್ನು ಸಂಘಟಿಸಿದವರಾದ ಕಲಿವೀರ ಅವರು, ದಲಿತ ಸಮುದಾಯಕ್ಕೆ ಇರಬೇಕಾದ ತಾಯ್ತನದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
“101 ಜಾತಿಗಳ ಒಗ್ಗಟ್ಟಿನ ಮೂಲಮಂತ್ರ- ಸಂವಿಧಾನದಲ್ಲಿ ಸಿಕ್ಕಿರುವ ಮೀಸಲಾತಿಯನ್ನು ಜನಸಂಖ್ಯೆಯ ಆಧಾರದಲ್ಲಿ ಹಂಚಿಕೊಳ್ಳುವುದರಲ್ಲಿ ಅಡಗಿದೆ. ಉಣ್ಣುವ ಅನ್ನವನ್ನು ನಾವೆಲ್ಲರೂ ಸೇರಿ ಹಂಚಿಕೊಂಡು ತಿಂದಾಗ ಸಹೋದರತ್ವ ಹೆಚ್ಚಾಗುತ್ತದೆ. ಇನ್ನೊಬ್ಬರ ಅನ್ನವನ್ನು ಮತ್ತೊಬ್ಬರು ಕಸಿದು ತಿಂದಾಗ ಅಲ್ಲಿ ಅಸಮಾಧಾನ, ಅಸಹಕಾರ, ಅಶಾಂತಿ, ಅನೈಕ್ಯತೆ ಉಂಟಾಗುತ್ತದೆ. ಅನ್ನದ ಹಂಚಿಕೆಯಲ್ಲಿ ವ್ಯತ್ಯಾಸವಾದಾಗ ಒಗ್ಗಟ್ಟು ಒಡೆದು ಹೋಗುತ್ತದೆ. ಜನಸಂಖ್ಯಾ ಆಧಾರದಲ್ಲಿ ಆ ಅನ್ನವನ್ನು ಹಂಚಿದರೆ ಒಬ್ಬರ ಮೇಲೆ ಒಬ್ಬರಿಗೆ ಅಸಮಾಧಾನ ಇರುವುದಿಲ್ಲ, ಬದಲಿಗೆ ಭ್ರಾತೃತ್ವ, ಸಹಕಾರ ಮೂಡುತ್ತದೆ. ಮುಂದಿನ ಹೋರಾಟಕ್ಕೆ ಬಲ ಬರುತ್ತದೆ. ಮುಂದೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಆಗಬೇಕು. ಆ ಹೋರಾಟ ಶುರುವಾಗಬೇಕು. ಅದಕ್ಕಾಗಿ ನೂರೊಂದು ಜಾತಿಯಲ್ಲಿ ಒಗ್ಗಟ್ಟು ಆಗಬೇಕಲ್ಲವೇ?” ಎಂದು ಕೇಳುತ್ತಾರೆ.

“ಒಳಮೀಸಲಾತಿಗೂ ಒಗ್ಗಟ್ಟಿಗೂ ನೇರ ಸಂಬಂಧವಿದೆ. ಒಗ್ಗಟ್ಟು ಮೂಡಲು ಕಾಲ ಪಕ್ವವಾಗಿದೆ. ಸಣ್ಣಪುಟ್ಟ ಸಮಸ್ಯೆಗಳಿದಾಗ್ಯೂ ಒಳಮೀಸಲಾತಿ ಜಾರಿಯಾಗಿದೆ. ಅವುಗಳನ್ನು ಸರಿಪಡಿಸಲು ಹೋರಾಟ ಮಾಡಬಹುದು. ಅದು ಪರಸ್ಪರ ತಿಳಿವಳಿಕೆಯಿಂದ ಆಗಬೇಕಾದ ಹೋರಾಟವೇ ಹೊರತು, ಪರಸ್ಪರ ದ್ವೇಷದಿಂದ ಆಗಬೇಕಾದ ಹೋರಾಟವಲ್ಲ. ದ್ವೇಷ ದ್ವೇಷವನ್ನೇ ಹುಟ್ಟಿಸುತ್ತದೆ. ಹಂಚಿಕೆ ಪ್ರೀತಿಯನ್ನು ಹುಟ್ಟಿಸುತ್ತದೆ. ಒಳಮೀಸಲಾತಿ ಎಂದರೆ ಹಂಚಿಕೆ. ಒಗ್ಗಟ್ಟು ಮೂಡಿಸಲು ಈಗ ನೆಲ ಹದವಾಗಿದೆ” ಎಂದು ಮಾರ್ಮಿಕವಾಗಿ ನುಡಿಯುತ್ತಾರೆ.
ಇತಿಹಾಸವನ್ನು ಮೆಲುಕು ಹಾಕುವ ಅವರು, “ದಲಿತ ಸಂಘರ್ಷ ಸಮಿತಿ ಇಲ್ಲಿ ಚಳವಳಿಯನ್ನು ಕೈಗೆತ್ತಿಕೊಂಡಿದ್ದರಿಂದ ಆದ ಪರಿಣಾಮ ದೊಡ್ಡದು. ಆಂಧ್ರ- ತೆಲಂಗಾಣದಲ್ಲಿ ಕಂಡ ಬಿರುಕು ಇಲ್ಲಿ ಕಾಣಲಿಲ್ಲ. ಎಸ್.ಎಂ. ಕೃಷ್ಣ ಅವರ ಬಳಿ ಹೋದಾಗ ಕೇವಲ ಮಾದಿಗರಿರಲಿಲ್ಲ. ಹೊಲೆಯ ಮಾದಿಗ ಭೋವಿ ಲಂಬಾಣಿ ಸೇರಿದಂತೆ ಎಲ್ಲ ಜಾತಿಗಳ ಮುಖಂಡರು ಸೇರಿಯೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದೆವು. ಹಂಚಿಕೊಳ್ಳಲು ನಾವು ಸಿದ್ದವಿದ್ದೇವೆ ಎಂದು ತಿಳಿಸಿದ್ದೆವು. ಚಳವಳಿ ಆದಾಗಲೂ ನಾವು ಬಾಂಧವ್ಯವನ್ನು ಉಳಿಸಿಕೊಂಡೇ ಹೋದೆವು. ಕೃಷ್ಣಪ್ಪನವರ ಸಮಾಧಿ ಹರಿಹರದಿಂದ ಬೆಂಗಳೂರಿಗೆ ನಾವು ಪಾದಯಾತ್ರೆ ಮಾಡಿದ್ದೆವು. ಆ ಡಿಎಸ್‌ಎಸ್ ಪಾದಯಾತ್ರೆಯಲ್ಲಿ ನೂರೊಂದು ಜಾತಿಗಳು ಇದ್ದವು. ಚಳವಳಿಯನ್ನು ಮಾಡುವಾಗಲೂ ಆ ಬಾಂಧವ್ಯವನ್ನು ಉಳಿಸಿಕೊಂಡಿದ್ದೆವು” ಎಂದು ನೆನಪಿಕೊಳ್ಳುತ್ತಾರೆ.
ಮುಂದುವರಿದು, “ಡಿಎಸ್‌ಎಸ್ ಜಾತಿಗಳನ್ನು ಒಗ್ಗೂಡಿಸುತ್ತಿತ್ತು. ಆದರೆ ಜಾತಿ ಹೆಸರಲ್ಲಿ ಸಂಘಗಳನ್ನು ಮಾಡಿದವರು ಪರಸ್ಪರ ಇನ್ನೊಂದು ಜಾತಿಗಳ ವಿರುದ್ಧ ಅನಗತ್ಯ ಹೇಳಿಕೆಗಳನ್ನು ನೀಡಲು ಶುರುಮಾಡಿದರು. ಮನುಸ್ಮೃತಿಯ ಶ್ರೇಣೀಕರಣ ಮನಸ್ಥಿತಿ ಕೇವಲ ಬ್ರಾಹ್ಮಣರಲ್ಲಿ ಮಾತ್ರ ಇದೆ ಎಂಬುದು ತಪ್ಪು. ಮನುಸ್ಮೃತಿಯ ಪ್ರಭಾವ ಪರಿಶಿಷ್ಟ ಜಾತಿಯವರಲ್ಲೂ ಇದೆ. ಮನುಸ್ಮೃತಿಯ ಪ್ರಭಾವಕ್ಕೆ ಒಳಗಾಗಿರುವ ಎಸ್‌ಸಿಗಳು ಇನ್ನೊಬ್ಬರನ್ನು ಅಸಹನೆಯಿಂದ ನೋಡುತ್ತಾರೆ, ಹಂಚಿಕೆಯನ್ನು ವಿರೋಧಿಸುತ್ತಾರೆ. ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ಸಿದ್ಧಾಂತದಲ್ಲಷ್ಟೇ ನಂಬಿಕೆ ಇಟ್ಟು, ಹಂಚಿಕೊಂಡು ತಿನ್ನಲು ಹೇಳುತ್ತದೆ. ನಾಗಮೋಹನ ದಾಸ್ ಆಯೋಗವು ಜನಸಂಖ್ಯೆಯ ಅಂಕಿಅಂಶಗಳು ಸರಿಯಾಗಿ ನೀಡಿಲ್ಲ ಎಂದು ಜಾತಿ ಸಂಘಟನೆಗಳು ತಕರಾರು ತೆಗೆದವು. ಯಾವುದೇ ಆಯೋಗ ಶೇ.100ರಷ್ಟು ಜಾತಿಸಂಖ್ಯೆಯನ್ನು ಹೇಳುವುದು ಕಷ್ಟವಿರುತ್ತದೆ. ಯಾಕೆಂದರೆ ಹಳ್ಳಿಯ ಮೂಲೆಮೂಲೆಯಲ್ಲಿ ಪರಿಶಿಷ್ಟ ಜಾತಿಯವರು ವಾಸಿಸುತ್ತಾರೆ. ಕೆಲ ಅಲೆಮಾರಿಗಳಿಗಂತೂ ಹಳ್ಳಿಗಳೂ ಇಲ್ಲ, ಆಧಾರ್ ಕಾರ್ಡ್ ಕೂಡ ಇಲ್ಲ. ಅಂಥವರನ್ನೆಲ್ಲ ಹುಡುಕಿ ನಿಖರವಾದ ಅಂಕಿ-ಸಂಖ್ಯೆ ಹೇಳುವುದು ಕಷ್ಟವಾಗುತ್ತದೆ. ಹಾಗಾಗಿ ಸಣ್ಣಪುಟ್ಟ ವ್ಯತ್ಯಾಸಗಳಾಗುತ್ತವೆ. ಆದರೆ ನಮ್ಮೊಳಗೆ ತಾಯ್ತನ ಇರಬೇಕಲ್ಲವೇ? 0.2 ಪರ್ಸೆಂಟ್ ನಮ್ಮ ಜಾತಿಯಲ್ಲಿ ವ್ಯತ್ಯಾಸವಾದ ಮಾತ್ರಕ್ಕೆ ಅದನ್ನು ಇಂಡಿಯಾ ಪಾಕಿಸ್ತಾನದ ವಾರ್ ರೀತಿ ಬೆಳೆಸಬಾರದಲ್ಲವೇ? ಆದರೆ ಜಾತಿ ಸಂಘಟನೆಗಳು ಕೆಲವು ಸಲ ಇದನ್ನು ಮಾಡುತ್ತವೆ. ಅದು ಅವರ ಸ್ವಾರ್ಥ” ಎಂದು ಅರಿವು ಮೂಡಿಸುತ್ತಾರೆ.
“ತಳಸಮುದಾಯಗಳು ಒಂದಾಗಿ ಇರಬೇಕೆಂಬ ಅರಿವು ನಮ್ಮಲ್ಲಿ ಇರಬೇಕಾಗುತ್ತದೆ. ಸಣ್ಣ ವಿಚಾರಕ್ಕೆಲ್ಲ ಭಾವೋದ್ವೇಗಕ್ಕೆ ಒಳಗಾಗಿ, ಜಾತಿಜಾತಿಗಳನ್ನು ಎತ್ತಿಕಟ್ಟುವ ಕೆಲಸವನ್ನು ಕೆಲವು ಜಾತಿ ಸಂಘಟನೆಗಳು ಮಾಡಿವೆ. ಅವಿಭಜಿತ ಆಂಧ್ರಕ್ಕೆ ಹೋಲಿಸಿ ಕರ್ನಾಟಕವನ್ನು ನೋಡಿದರೆ ಒಳಮೀಸಲಾತಿ ಹೋರಾಟದಲ್ಲಿ ಕೊಲೆ, ಅತ್ಯಾಚಾರ, ಹೊಡೆದಾಟ ನಡೆದಿಲ್ಲ. ಅದಕ್ಕೆ ದಲಿತ ಸಂಘರ್ಷ ಸಮಿತಿ ಕಾರಣ. ಶಾಂತಿ ಮತ್ತು ನ್ಯಾಯವನ್ನು ನಾವು ಕಾಪಾಡಿದ್ದೇವೆ. ಶಾಂತಿ ಕಾಪಾಡಬೇಕೆಂದು ನ್ಯಾಯ ಬಿಟ್ಟುಕೊಟ್ಟಿಲ್ಲ. ನ್ಯಾಯ ಮಾಡಲೇಬೇಕೆಂದು ನಾವು ಹಿಂಸೆಗೆ ಇಳಿದಿಲ್ಲ. ಈ ಎರಡೂ ಪ್ರಜಾಪ್ರಭುತ್ವದ ಗುಣಗಳು. ಶಾಂತಿ ಮತ್ತು ನ್ಯಾಯವನ್ನು ಒಟ್ಟಿಗೆ ಕರೆದೊಯ್ಯುವ ಗುಣವನ್ನು ಅಂಬೇಡ್ಕರ್ ನಮಗೆ ಕಲಿಸಿದ್ದಾರೆ. ಯಾವುದೇ ಸರ್ಕಾರಿ ಆದೇಶವಾದರೂ ಒಂದಿಷ್ಟು ದೋಷವಾಗುತ್ತವೆ. ಇದನ್ನೆಲ್ಲ ಇಂಡಿಯಾ ಪಾಕಿಸ್ತಾನ ಯುದ್ಧದಂತೆ ಮಾಡಲು ಹೋದರೆ ಅವಿವೇಕವಾಗುತ್ತದೆ. ನಮ್ಮನ್ನು ತುಳಿಯುತ್ತಿರುವ ಮೇಲ್ಜಾತಿಗಳ ಮುಂದೆ ನಾವು ಅವಿವೇಕಿಗಳಂತೆ ನಡೆದುಕೊಳ್ಳಬಾರದು. ಹಂಚಿ ತಿನ್ನುವುದರಲ್ಲೂ ತಾಯ್ತನ ಇದೆ ಎಂಬುದನ್ನು ತೋರಿಸಿದರೆ ತಾನೆ, ಮೇಲ್ಜಾತಿಗಳ ವಿರುದ್ಧ ಗೆಲ್ಲುವುದು? ಸಣ್ಣ ವಿಚಾರಕ್ಕೆ ಕೊಲೆಗಳನ್ನು ಮಾಡುತ್ತಾ ಹೋದರೆ, ಈ ದೇಶದಲ್ಲಿ ನಾವು ಬಚಾವಾಗಲು ಸಾಧ್ಯವೇ?” ಎಂದು ಅಂತಃಕರಣದಿಂದ ಪ್ರಶ್ನಿಸುತ್ತಾರೆ.
“ತುಳಿಯುವ ಕಾಲುಗಳು ದಷ್ಟಪುಷ್ಟವಾಗಿವೆ. ಹಾಗೆಂದು ನಾವು ತುಳಿಸಿಕೊಳ್ಳಲು ಹೋಗಬಾರದು. ತುಳಿತಕ್ಕೊಳಗಾದವರ ಕೈಗಳೆಲ್ಲ ಒಗ್ಗಟ್ಟಾಗಿದ್ದರೆ, ತುಳಿಯುತ್ತಿರುವ ಕಾಲುಗಳನ್ನು ಎತ್ತಿ ಆಚೆ ಬೀಸಾಕಬಹುದಲ್ಲವೇ? ಎಡಗೈ- ಬಲಗೈ ಎನ್ನುವುದನ್ನು ಬಿಡಬೇಕು. ಪರಸ್ಪರ ಲವ್, ಪರಸ್ಪರ ಸ್ಮೈಲ್, ಪರಸ್ಪರ ಹಗ್ಗಿಂಗ್- ಇಷ್ಟಾದರೆ ಸಾಕು ಸಮಸ್ಯೆ ಬಗೆಹರಿದಂತೆ. ಹದಿನೈದು ಪರ್ಸೆಂಟ್ ಹಂಚಿಕೊಳ್ಳಲು ಮೂವತ್ತು ವರ್ಷ ತೆಗೆದುಕೊಂಡಿದ್ದೇವೆ ಎಂದರೆ, ಅಂಬೇಡ್ಕರ್ ಅವರಿಂದ ನಾವು ಏನೂ ಕಲಿತ್ತಿಲ್ಲ ಅಂತ ಅರ್ಥ” ಎಂದು ಮಾರ್ಮಿಕವಾಗಿ ನುಡಿದರು.
ನೌಕರ ವರ್ಗವೇ ಬಿರುಕಿಗೆ ಕಾರಣ: ಮೋಹನ್ ರಾಜ್
ಒಳಮೀಸಲಾತಿಗಾಗಿ ಹೋರಾಡಿರುವ ಮತ್ತೊಬ್ಬ ಬಲಗೈ ಮುಖಂಡರು, ದಲಿತ ಚಳವಳಿಕಾರರು ಆದ ಮೋಹನ್ ರಾಜ್ ಅವರು ಬಿರುಕಿನ ಮೂಲಗಳನ್ನು ಹೀಗೆ ಶೋಧಿಸುತ್ತಾರೆ: “ನೌಕರರು ಮತ್ತು ರಾಜಕಾರಣಿಗಳು ಎಂದಿಗೂ ಸಮುದಾಯದ ಪರ ಇರುವುದಿಲ್ಲ. ಉಭಯ ಸಮುದಾಯಗಳಲ್ಲೂ ಇವರು ವಿಷಬೀಜವನ್ನು ಬಿತ್ತಿದರು. ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿಯವರು ಪ್ರವೇಶ ಮಾಡಬಾರದಿತ್ತು. ಮಾದಾರ ಚೆನ್ನಯ್ಯ ಸ್ವಾಮೀಜಿ ರಾಜಕೀಯ ಮಾಡುತ್ತಿದ್ದಾರೆಂದು, ಇತ್ತ ಅಂಬೇಡ್ಕರ್ ಹೆಸರೇಳುವ ಜ್ಞಾನಪ್ರಕಾಶರು ಕೂಡ ಬೀದಿಗಿಳಿದದ್ದು ಸರಿಯಾಗಲಿಲ್ಲ. ಬಾಬಾಸಾಹೇಬರ ಹೆಸರು ಹೇಳುವವರಿಗೆ ತಾಯಿ ಹೃದಯ ಇರಬೇಕಿತ್ತು. ವಿರೋಧ ಮಾಡದೆ ಸುಮ್ಮನೆ ಇದ್ದಿದ್ದರೂ ಇಷ್ಟು ಬಿರುಕು ಉಂಟಾಗುತ್ತಿರಲಿಲ್ಲ. ಇಲ್ಲಿ ಹೊಟ್ಟೆ ತುಂಬಿದ ನೌಕರ ವರ್ಗವಿದೆ. ಎರಡೂ ಕಡೆಯಲ್ಲೂ ಬೆಂಕಿ ಹಾಕುವ ಮಂದಿ ಇವರು. ನಮ್ಮ ಮೀಸಲಾತಿ ಹೋಗುತ್ತಿದೆ, ಉದ್ಯೋಗ ಕಿತ್ತುಕೊಳ್ಳಲಾಗುತ್ತಿದೆ ಎಂದು ಕೂಗು ಎಬ್ಬಿಸಿದರು. ರಾಜಕಾರಣಿಗಳು ಇದಕ್ಕೆ ತುಪ್ಪ ಸುರಿದರು” ಎಂದು ಬೇಸರ ವ್ಯಕ್ತಪಡಿಸಿದರು.

“ಬಿ.ಕೃಷ್ಣಪ್ಪನವರು ಯಾವಾಗಲೂ ನಮಗೆ ಹೇಳುತ್ತಿದ್ದ ಒಂದು ಮಾತು ನೆನಪಾಗುತ್ತದೆ. ಹೊಲೆಯರು ಮತ್ತು ಮಾದಿಗರು ತಾ ಮೇಲು, ತಾ ಮೇಲು, ಮೇಲು ಎಂದು ಕೂಗಾಡುತ್ತಿದ್ದಾರೆ, ಆದರೆ ಇಬ್ಬರ ಮೇಲೂ ಒಂದು ಕತ್ತಿ ತೂಗಾಡುತ್ತಿದೆ, ಅದು ಹೊಲೆಯರ ತಲೆಯೋ, ಮಾದಿಗರ ತಲೆಯೋ ಎಂದು ನೋಡುವುದಿಲ್ಲ- ಇದು ಕೃಷ್ಣಪ್ಪನವರು ಕೊಟ್ಟ ಎಚ್ಚರಿಕೆ”- ಎಂದು ನೆನಪು ಮಾಡಿಕೊಂಡರು ಮೋಹನ್ ರಾಜ್.
ಆರ್‌ಎಸ್‌ಎಸ್ ಬಿರುಕು ತಂದಿತು, ಜೊತೆಗೆ ಸಾಮಾಜಿಕ ನ್ಯಾಯದ ಪ್ರಶ್ನೆಯೂ ಇತ್ತು: ವೆಂಕಟಗಿರಿ
ಹಿರಿಯ ದಲಿತ ಹೋರಾಟಗಾರ, ಮಂಡ್ಯ ಜಿಲ್ಲೆಯ ವೆಂಕಟಗಿರಿ ಅವರು ಒಳಮೀಸಲಾತಿ ಹೋರಾಟದ ಮತ್ತಷ್ಟು ನೆನಪುಗಳನ್ನು ಮೆಲುಕು ಹಾಕುತ್ತಾರೆ. “ವಿಭಜಿತ ಆಂಧ್ರದಲ್ಲಿ ಹುಟ್ಟಿದ ಮಾದಿಗ ದಂಡೋರ ಕರ್ನಾಟಕಕ್ಕೆ ಕಾಲಿಟ್ಟಾಗ, ಅದು ಮಾಡಬಹುದಾದ ಅಪಾಯಗಳನ್ನು ಡಿಎಸ್‌ಎಸ್ ಊಹಿಸಿತ್ತು. ಯಾಕೆಂದರೆ ಅದರ ಹಿಂದೆ ಆರ್‌ಎಸ್‌ಎಸ್ ಕೆಲಸ ಮಾಡುತ್ತಿತ್ತು. ಒಳಮೀಸಲಾತಿಯ ಪ್ರಶ್ನೆಯಲ್ಲಿ ಸಾಮಾಜಿಕ ನ್ಯಾಯವಿತ್ತು. ಆದರೆ ಅದನ್ನು ಬಳಸಿಕೊಂಡು ಒಡಕು ಮೂಡಿಸಲು ಆರ್‌ಎಸ್‌ಎಸ್ ಕೆಲಸ ಶುರು ಮಾಡಿತ್ತು” ಎನ್ನುತ್ತಾರೆ.

“ಆ ಸಂದರ್ಭದಲ್ಲಿ ಬೀದರ್ ನಿಂದ ಬೆಂಗಳೂರಿನವರೆಗೆ ಮಾದಿಗ ದಂಡೋರ ಪಾದಯಾತ್ರೆ ಹಮ್ಮಿಕೊಂಡಿತ್ತು. ಇದರ ಅಪಾಯ ಮನಗಂಡ ಡಿಎಸ್‌ಎಸ್ ಬಿ.ಕೃಷ್ಣಪ್ಪನವರ ಸಮಾಧಿ ಸ್ಥಳದಿಂದ ಬೆಂಗಳೂರಿಗೆ ಪಾದಯಾತ್ರೆ ಶುರು ಮಾಡಿತು. ಇತ್ತ ದಂಡೋರ ಹೋರಾಟವನ್ನು ಕೈಬಿಟ್ಟಿತು. ಮಾಲಾ- ಮಾದಿಗ ಸಂಘರ್ಷದಿಂದ ಉಂಟಾಗಿರುವ ಸಮಸ್ಯೆಗಳನ್ನು ದಸಂಸ ವಿಶೇಷವಾಗಿ ಅಧ್ಯಯನ ಮಾಡಿತ್ತು. ಎಂ.ಜಯಣ್ಣ, ಶ್ರೀಧರ್ ಕಲಿವೀರ್, ಓ ಶ್ರೀಧರನ್, ಎನ್. ಶಿವಣ್ಣ ಮೊದಲಾದವರು ಸೇರಿ ಅಧ್ಯಯನ ನಡೆಸಿದ್ದರು. ಮಾಲಾ ಮಾದಿಗ ಸಂಘರ್ಷ ಕರ್ನಾಟದಲ್ಲಿ ಘಟಿಸಬಾರದೆಂದೇ ಅವಿರತ ಶ್ರಮಿಸಿದೆವು. ಬಿ.ಕೃಷ್ಣಪ್ಪನವರ ಕಟ್ಟಿದ ಕರ್ನಾಟಕದ ದಲಿತ ಸಂಘರ್ಷ ಸಮಿತಿಯು, ಎಲ್ಲ ಜಾತಿಗಳಿಗೆ ನ್ಯಾಯ ದೊರಕಿಸುವುದು ತಮ್ಮ ಜವಾಬ್ದಾರಿ ಎಂದು ಭಾವಿಸಿತ್ತು. ಒಂದು ಜಾತಿಯ ಹೆಸರಲ್ಲಿ ಹೋರಾಟ ಮಾಡಿದರೆ ತಪ್ಪಾಗುತ್ತದೆ ಎಂದು ಎಲ್ಲ ಜಾತಿಗಳನ್ನು ಒಟ್ಟಿಗೆ ಇಟ್ಟುಕೊಂಡು ಮುಂದೆ ಹೋದೆವು. ಎಸ್.ಎಂ. ಕೃಷ್ಣ ಅವರಿಗೆ ಘೇರಾವ್ ಹಾಕಿ ಬಂಧನಕ್ಕೆ ಒಳಗಾದ ಬಲಗೈನವರಲ್ಲಿ ನಾನೂ ಒಬ್ಬ. ಜೈ ಜೈ ಮಾದಿಗ ಎಂದು ಜಾತಿ ಸಂಘಟನೆಗಳು ಹುಟ್ಟಿಕೊಂಡಾಗ ಪ್ರತ್ಯೇಕ ಚಳವಳಿ ಕಾಣಿಸಿಕೊಂಡಿತು. ಜೊತೆಜೊತೆಯಲ್ಲೇ ಹೋಗಿದ್ದರೆ ಇಂದು ಬಿಕ್ಕಟ್ಟು ಉಂಟಾಗುತ್ತಿರಲಿಲ್ಲ” ಎಂದು ಹೇಳುತ್ತಾರೆ. ಒಳಮೀಸಲಾತಿಯನ್ನು ವಿರೋಧಿಸುವವರೇ ನಿಜವಾದ ಅಂಬೇಡ್ಕರ್ ವಿರೋಧಿಗಳು ಎಂಬುದು ಅವರ ಅಭಿಪ್ರಾಯ.
ಹೊಲೆಯರೆಂದೂ ಅಫೋಸ್ ಮಾಡಲಿಲ್ಲ: ಎಸ್. ಮಾರೆಪ್ಪ
ರಾಯಚೂರು ಭಾಗದಲ್ಲಿ ಒಳಮೀಸಲಾತಿ ಹೋರಾಟವನ್ನು ಮುನ್ನಡೆಸಿದವರಲ್ಲಿ ವಕೀಲ ಎಸ್. ಮಾರೆಪ್ಪ ಪ್ರಮುಖರು. ಇತ್ತೀಚಿನ ದಿನಗಳಲ್ಲಿ ಸಮುದಾಯದೊಳಗೆ ಉಂಟಾದ ಬಿರುಕಿನ ಸಂಬಂಧ ‘ಈದಿನ’ಕ್ಕೆ ಪ್ರತಿಕ್ರಿಯಿಸಿದ ಅವರು, “ಯಾರೋ ಇಬ್ಬರ ಮಾತುಗಳನ್ನು ಕೇಳಿಕೊಂಡು, ಇಡೀ ಮಾದಿಗರೇ ಹೀಗೆ ಇದ್ದಾರೆಂದು ಹೊಲೆಯ ಸಮುದಾಯ ಹೊರಟಂತೆ ಕಾಣುತ್ತಿತ್ತು. ಈ ಹಿಂದೆ ಎಂದೂ ಕೂಡ ನಮ್ಮ ಹೋರಾಟಗಳಿಗೆ ಹೊಲೆಯರು ಅಫೋಸ್ ಮಾಡಿದ್ದಿಲ್ಲ. ಸುಮ್ಮನೆ ನಾವು ಅವರನ್ನು ದೂರಬಾರದು. ಆದರೆ ಮಾದಿಗ ಮುಖವಾಗಿ ಕಾಣಿಸಿಕೊಂಡ ಯಾರೋ ಇಬ್ಬರಿಗೆ ಪ್ರತಿಕ್ರಿಯೆ ಕೊಡುವುದಕ್ಕೆ ಬಂದ ಹೊಲೆಯರು, ಇಡೀ ಬಲಗೈ ಸಮುದಾಯವೇ ಚಳವಳಿಯ ವಿರುದ್ಧ ಇದೆ ಎಂಬಂತೆ ಕಾಣಿಸಿಕೊಂಡರು” ಎಂದು ಟೀಕೆಯನ್ನು ದಾಖಲಿಸಿದರು.

“ರೋಸ್ಟರ್ ಬಿಂದು ವಿಚಾರದಲ್ಲಿ ತಪ್ಪು ಮಾತುಗಳನ್ನು ಬಲಗೈನವರು ಆಡಬಾರದಿತ್ತು. ರೋಸ್ಟರ್ ಬಿಂದುವಿನಲ್ಲಿ ಈಗಲೂ ಸರಿಯಾಗಿಲ್ಲ. ಹೆಚ್ಚು ಅನ್ಯಾಯವಾದನಿಗೆ ಮೊದಲು ಸಿಗಲಿ ಎಂದು ಯೋಚಿಸಬೇಕಿತ್ತು. ಮೂರು ವರ್ಗಕ್ಕೂ ಒಮ್ಮೆಗೆ ಸಿಗಬೇಕೆಂದು ಹೋದದ್ದು ಸರಿಯಲ್ಲ. ಹೊಲೆಯ ಮಾದಿಗರು 15 ವರ್ಷ ಹಿಂದೆಯೇ ದೊಡ್ಡ ಮಟ್ಟದ ಒಗ್ಗಟ್ಟು ತೋರಿದ್ದರೆ 15 ಲಕ್ಷ ಪೋಸ್ಟ್‌ಗಳು ಅಖಿಲ ಭಾರತ ಮಟ್ಟದಲ್ಲಿ ಪ್ರೈವೇಟ್ ಆಗುತ್ತಿರಲಿಲ್ಲ. 20ರಿಂದ 30 ಪಬ್ಲಿಕ್ ಸೆಕ್ಟರ್‌ಗಳು ಖಾಸಗಿಯಾಗುತ್ತಿರಲಿಲ್ಲ” ಎಂದು ವಿಷಾದಿಸಿದರು.
ಸರ್ಕಾರದ ಬೇಜಾಬ್ದಾರಿ ಬಗ್ಗೆ ಒಳಮೀಸಲಾತಿ ಹೋರಾಟಗಾರರ ಸಿಟ್ಟು!
2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ವಿಚಾರದಲ್ಲಿ ತೋರಿದ ಅಸಡ್ಡೆಯೂ ದಲಿತರಲ್ಲಿನ ಒಡಕಿಗೆ ಪೂರಕವಾಗಿತ್ತು ಎಂಬುದನ್ನು ಹೋರಾಟಗಾರರು ಗುರುತಿಸದೆ ಇರುವುದಿಲ್ಲ. 2024ರ ಆಗಸ್ಟ್ 1ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ, ಸರ್ಕಾರ ನಿಧಾನಗತಿಯಲ್ಲಿಯೇ ಹೆಜ್ಜೆ ಹಾಕಿತು. ಜಸ್ಟಿಸ್ ನಾಗಮೋಹನ್ ದಾಸ್ ಆಯೋಗದ ವರದಿಯನ್ನೂ ಪರಿಪೂರ್ಣವಾಗಿ ಜಾರಿಗೆ ತರಲಿಲ್ಲ. ಸಿದ್ದರಾಮಯ್ಯನವರು ದಿಟ್ಟ ನಿಲುವುಗಳನ್ನು ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕಿದ್ದನ್ನೂ ಈ ಸಂದರ್ಭದಲ್ಲಿ ಹೋರಾಟಗಾರರು ದಾಖಲಿಸುತ್ತಾರೆ. ಅದರಲ್ಲೂ ಅಲೆಮಾರಿಗಳನ್ನು ಸ್ಪೃಶ್ಯರ ಗುಂಪಿನಲ್ಲೇ ಉಳಿಸಿದ ನಿರ್ಧಾರವನ್ನು ಹೋರಾಟಗಾರರು ಮೆಚ್ಚಿಕೊಳ್ಳುವುದಿಲ್ಲ.
ಸಂಪೂರ್ಣ ಸಮಾಧಾನವೇನೂ ಇಲ್ಲ, ಒಗ್ಗಟ್ಟು ಮುಖ್ಯ: ಕೌತಾಳ್
“ಸರ್ಕಾರ ಮಾಡಿರುವ ವರ್ಗೀಕರಣವನ್ನು ಒಪ್ಪಿಕೊಳ್ಳುತ್ತೇವೆ. ಆದರೆ ದೊಡ್ಡ ಸಮಾಧಾನವೇನೂ ಅಲ್ಲ. ಸಿದ್ದರಾಮಯ್ಯ ಅವರ ಸರ್ಕಾರದ ನಿರ್ಧಾರಗಳು ಸಂಪೂರ್ಣ ಸಮಾಧಾನ ತರಲಿಲ್ಲ. ಸುಪ್ರೀಂಕೋರ್ಟ್‌ನ ಮೂಲ ಆಶಯವು ಹಂಚಿಕೆಯಲ್ಲಿ ಪಾಲನೆಯಾಗಲಿಲ್ಲ. ಅಸಮಾನರ ಜೊತೆ ಸಮಾನರನ್ನು ಹಾಕುವಂತಿರಲಿಲ್ಲ. ಅವಕಾಶವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ” ಎನ್ನುತ್ತಾರೆ ಒಳಮೀಸಲಾತಿ ಹೋರಾಟಗಾರ ಬಸವರಾಜ್ ಕೌತಾಳ್.
“ಜಸ್ಟಿಸ್ ನಾಗಮೋಹನ ದಾಸ್ ಆಯೋಗ ವರದಿ ನ್ಯಾಯಯುತವಾಗಿತ್ತು. ಸುಪ್ರೀಂಕೋರ್ಟ್‌ನ ಒಂದು ಸಾಲನ್ನೂ ಆಯೋಗ ಉಲ್ಲಂಘನೆ ಮಾಡಿರಲಿಲ್ಲ. ಬಲಾಢ್ಯರ ಓಲೈಕೆಗಾಗಿ ಹೊಸದಾಗಿ ವರ್ಗೀಕರಣ ಮಾಡಲಾಯಿತು. ನಮ್ಮ ಜನರಿಂದಲೇ ಪ್ರತಿರೋಧ ಬಂದಿದ್ದು ನೋವನ್ನು ತಂದಿತ್ತು” ಎನ್ನುವ ಅವರು, “ಇಂದು ನಮ್ಮ ಸುತ್ತಮುತ್ತ ಸಂಘಪರಿವಾರ, ಸನಾತನವಾದಿಗಳು ನಕಲಿ ನ್ಯಾಯಪರವಾದಿ ಆರ್‌ಎಸ್‌ಎಸ್‌ನವರು ಒಳಮೀಸಲಾತಿಯ ಅಜೆಂಡಾ ತೆಗೆದುಕೊಂಡು ಬಿರುಕು ಸೃಷ್ಟಿಸಿ ಮಾಡಿದ್ದಾರೆ. ಈ ಬಿರುಕನ್ನು ರಾಜಕೀಯವಾಗಿ ಬಳಸಿಕೊಳ್ಳಲು ನೋಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಲಿ, ಯಾರಿಗೆ ಅನ್ಯಾಯವಾಗಿದೆ ಅನಿಸಬಾರದು ಎಂಬ ನಿರ್ಧಾರವನ್ನು ತೆಗೆದುಕೊಂಡು ತಾಯ್ತನ ಪ್ರದರ್ಶಿಸಿದೆವು. ತಾರ್ಕಿಕ ಪರಿಹಾರ ಕಂಡುಕೊಳ್ಳುವುದು ಮಾದಿಗ ಸಮುದಾಯದ ಉದ್ದೇಶವಾಗಿತ್ತು” ಎಂದು ವಿವರಿಸಿದರು.

“ಅಸ್ಪೃಶ್ಯ ಸಮುದಾಯಗಳು ಒಂದಾಗಿ ಖಾಸಗಿ ಮೀಸಲಾತಿಗಾಗಿ ಐಕ್ಯತಾ ಹೋರಾಟ ಮಾಡಬೇಕಿದೆ. ನಮ್ಮೊಳಗೆ ಎಷ್ಟೇ ವೈವಿಧ್ಯತೆಗಳಿದ್ದರೂ ಏಕತೆಯನ್ನು ಕಟ್ಟುವ ಜವಾಬ್ದಾರಿ ಒಳಮೀಸಲಾತಿ ಹೋರಾಟಗಾರರ ಮೇಲೂ ಇದೆ. ಅಲೆಮಾರಿಗಳಿಗೆ ನ್ಯಾಯ ಕೊಡಿಸಬೇಕಿದೆ. ಇಡೀ ದಲಿತ ಸಮುದಾಯವನ್ನು ಐಕ್ಯತೆಗೊಳಿಸಿ, ಮುಂದಿನ ಹೋರಾಟ ಮಾಡಬೇಕು. ದ್ವೇಷಬಿತ್ತುವ ಕೆಲಸವನ್ನು ವ್ಯವಸ್ಥಿತವಾಗಿ ಆರ್‌ಎಸ್‌ಎಸ್ ಮಾಡುತ್ತಿದೆ. ಸರ್ಕಾರದ ನಿರ್ಧಾರವನ್ನು ಮತ್ತಷ್ಟು ವಿರೋಧ ಮಾಡಿ, ಮುಂದುವರಿಸುವುದು ಬೇಡ ಅನಿಸಿಬಿಟ್ಟಿದೆ” ಎಂದು ಸ್ಪಷ್ಟಪಡಿಸಿದರು.
ಅಲೆಮಾರಿಗಳು ಕೇಳಿದ್ದು ಒಂದು, ಆಗಿದ್ದು ಇನ್ನೊಂದು: ಡಾ. ಎ.ಎಸ್. ಪ್ರಭಾಕರ
ಹೊಲೆಯ ಮಾದಿಗರ ನಡುವೆ ಕಿತ್ತಾಟಗಳು ನಡೆಯುವಾಗ ನಿಜಕ್ಕೂ ತಬ್ಬಲಿಯಾಗಿದ್ದು ಅಲೆಮಾರಿಗಳು. ಸ್ಪಶ್ಯ ಸಮುದಾಯಗಳಿರುವ ಸಿ ಗುಂಪಿನಿಂದ ಹೊರಗಿಟ್ಟು, ಪ್ರತ್ಯೇಕವಾಗಿ ಮೀಸಲಾತಿ ನೀಡಿ ಎಂಬ ಅಲೆಮಾರಿಗಳ ಕೂಗನ್ನು ಸರ್ಕಾರ ಕೇಳಿಸಿಕೊಳ್ಳಲೇ ಇಲ್ಲ.
ಕಾಂಗ್ರೆಸ್ ಸರ್ಕಾರ ಮತ್ತು ಸಿದ್ದರಾಮಯ್ಯನವರ ಮೇಲೆ ಭಾರೀ ಭರವಸೆ ಇಟ್ಟುಕೊಂಡಿದ್ದ ಅಲೆಮಾರಿ ಮುಖಂಡರು ನೋವುಂಡರಷ್ಟೇ. ಅಂತಿಮ ಘಟ್ಟದವರೆಗೂ ಅವರು ಸರ್ಕಾರದೊಂದಿಗೆ ಸೆಣಸಾಡಿದರೆ ಹೊರತು, ಸ್ಪಷ್ಟ ನ್ಯಾಯ ಸಿಗಲೇ ಇಲ್ಲ. ಕೊನೆಗೆ ಅಲೆಮಾರಿಗಳನ್ನು ಸಿ ಗುಂಪಿನಲ್ಲೇ ಉಳಿಸಿ, ಅದರೊಳಗೆ ಶೇ. 20ರಷ್ಟು ಉದ್ಯೋಗಗಳನ್ನು ಎತ್ತಿಡುವುದಾಗಿ ಸರ್ಕಾರ ನಿರ್ಧಾರ ತೆಗೆದುಕೊಂಡಿತು. ಈ ಕುರಿತು ಅಲೆಮಾರಿಗಳ ದನಿ, ಡಾ. ಎ.ಎಸ್. ಪ್ರಭಾಕರ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
“ನಮಗೆ ಪ್ರತ್ಯೇಕ ಕೋಟಾ ಕೊಡಲು ಸಾಧ್ಯವಾಗದಿದ್ದರೆ, ಮಾದಿಗರ ಜೊತೆಯಲ್ಲಿ ಅಲೆಮಾರಿಗಳನ್ನು ಸೇರಿಸಿ, ಎ ಗುಂಪಿನಲ್ಲಿ ಇನ್ನೊಂದು ಪರ್ಸೆಂಟ್ ಮೀಸಲಾತಿ ಹೆಚ್ಚಳ ಮಾಡಿರಿ ಎಂದು ಕೋರಿದ್ದೆವು. ಅಲೆಮಾರಿಗಳಲ್ಲಿ ಓದಿದವರು ಸಿಗುವುದು ಕಷ್ಟ. ನಿಗದಿತ ಹುದ್ದೆಗಳಿಗೆ ಯಾರೂ ದೊರಕದಿದ್ದರೆ, ಎರಡು ವರ್ಷ ಬ್ಯಾಕ್ ಲಾಗ್ ಎಂದು ತೋರಿಸಿ, ನಂತರ ಮಾದಿಗರಿಗೆ ಅದನ್ನು ವರ್ಗಾಯಿಸಿ ಎಂದು ಬೇಡಿಕೆ ಇಟ್ಟಿದ್ದೆವು. ಹೀಗೆ ಮಾಡುವುದರಿಂದ ಅಲೆಮಾರಿಗೆ ಒಂದು ಪರ್ಸೆಂಟ್ ಕೊಟ್ಟಂತೆಯೂ ಆಗುತ್ತದೆ. ಮೂವತ್ತೈದು ವರ್ಷ ಹೋರಾಟ ಮಾಡಿದ ಮಾದಿಗರಿಗೆ ಹೆಚ್ಚು ಪಾಲು ಸಿಕ್ಕಂತೆಯೂ ಆಗುತ್ತದೆ ಎಂಬುದು ಅಲೆಮಾರಿಗಳ ಉದ್ದೇಶವಾಗಿತ್ತು. ಅದು ತಕ್ಕಮಟ್ಟಿಗೆ ನ್ಯಾಯಯುತವೂ ಆಗಿತ್ತು. ಇದಕ್ಕೆ ಒಪ್ಪಿಕೊಂಡಿದ್ದ ಸರ್ಕಾರ ನಂತರ ನಿರ್ಧಾರ ಕೈಗೊಂಡಿದ್ದೇ ಬೇರೆಯಾಗಿತ್ತು” ಎಂದು ಬೇಸರ ವ್ಯಕ್ತಪಡಿಸುತ್ತಾರೆ.

“ಅಲೆಮಾರಿ ನಿಗಮದೊಳಗೆ ಕೊರಚ, ಕೊರಮ ಸಮುದಾಯಗಳನ್ನು ಸೇರಿಸಿರುವುದರಿಂದ ಶೇ.80ರಷ್ಟು ಪಾಲನ್ನು ಅವರೇ ಪಡೆಯುತ್ತಿದ್ದಾರೆ. ಅಲೆಮಾರಿಗಳಿಗೆ ಅನ್ಯಾಯವಾಗುತ್ತಿದೆ. 49 ಅಲೆಮಾರಿಗೆ ಪ್ರತ್ಯೇಕ ನಿಗಮ ಮಾಡಿಕೊಡಿ. ಕೊರಮ, ಕೊರಚರಿಗೆ ನುಲಿಯ ಚಂದಯ್ಯ ನಿಗಮ ಮಾಡಿರಿ ಎಂದು ಮನವಿ ಮಾಡಿದ್ದೆವು. ಅದು ಕೂಡ ಆಗಲಿಲ್ಲ. ಅಲೆಮಾರಿಗಳು ಏಕಾಏಕಿ ಕೋರ್ಟ್ ಮೆಟ್ಟಿಲೇರಿರಲಿಲ್ಲ. ಎಲ್ಲ ಮಾತುಕತೆ, ಹೋರಾಟಗಳು ನಡೆದು ಸಫಲವಾಗದೆ ಇದ್ದಾಗ ನ್ಯಾಯಾಲಯದ ಕದ ತಟ್ಟಿದ್ದೆವು. ಕನಿಷ್ಠ ನಿಗಮ ಮತ್ತು ಪ್ಯಾಕೇಜ್ ಘೋಷಣೆ ಮಾಡಿದ್ದರೂ ಸಮುದಾಯಕ್ಕೆ ವಿಶ್ವಾಸ ಮೂಡುತ್ತಿತ್ತು. ಸರ್ಕಾರ ಆ ಕೆಲಸ ಮಾಡಲಿಲ್ಲ” ಎನ್ನುತ್ತಾ ತಾವು ಎದುರಿಸಿದ ಅಸಹಾಯಕತೆಯನ್ನು, ಅನಾಥಪ್ರಜ್ಞೆಯನ್ನು ಹಂಚಿಕೊಂಡರು. ಹೊಲೆಯ ಮಾದಿಗ ಸಮುದಾಯದ ಕಿತ್ತಾಟವು ಕರ್ನಾಟಕದಲ್ಲಿ ಕೋಮುವಾದಿಗಳಿಗೆ ಅವಕಾಶ ಒದಗಿಸುತ್ತಿದೆ, ಇತ್ತ ಅಲೆಮಾರಿಗಳನ್ನು ಬಳಸಿಕೊಂಡು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕಾಂಗ್ರೆಸ್‌ಗೆ ಪೆಟ್ಟುಕೊಡಲು ಸಂಘಪರಿವಾರ ಮುಂದಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೀಸಲಾತಿ ಹೆಚ್ಚಳ ಉಳಿಸಿಕೊಳ್ಳಲು ಪ್ರಯತ್ನಿಸದ ಸರ್ಕಾರ: ಅಂಬಣ್ಣ
“ಶೇ. 17ರಷ್ಟು ಮೀಸಲಾತಿ ಪ್ರಮಾಣದಲ್ಲಿ ಒಳಮೀಸಲಾತಿಯನ್ನು ಜಾರಿಗೆ ತಂದಿದ್ದ ಸರ್ಕಾರ, ಕೊನೆಗೆ ಶೇ. 15ಕ್ಕೆ ಇಳಿಸಿಕೊಂಡಿದ್ದು ಸರಿಯಲ್ಲ” ಎನ್ನುತ್ತಾರೆ ಒಳಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್.
“ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಬದ್ಧವಾಗಬೇಕಿತ್ತು. ಪರಿಶಿಷ್ಟರ ಮೀಸಲಾತಿ ಹೆಚ್ಚಳವು ಶೇ.50ರಷ್ಟು ಮೀಸಲಾತಿ ಮಿತಿಗೆ ಅನ್ವಯವಾಗುವುದಿಲ್ಲ ಎಂದು ಸರ್ಕಾರ ವಾದಿಸಬೇಕಿತ್ತು. ಅದಾಗಲಿಲ್ಲ. ಸಾಮಾಜಿಕ ನ್ಯಾಯದ ಭಾಗವಾಗಿ ಒಳಮೀಸಲಾತಿ ಹಂಚಿಕೆಯಾಗಲಿಲ್ಲ” ಎಂದು ತಿಳಿಸಿದರು.

“ರಾಜಕೀಯ ತುಷ್ಟೀಕರಣಕ್ಕೆ ಸರ್ಕಾರ ಮುಂದಾಯಿತು. ಅಲೆಮಾರಿಗಳನ್ನು ಅಧೋಗತಿಗೆ ತಳ್ಳಿತು. ಅವರಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡಬೇಕಿತ್ತು. ಕುಚೇಷ್ಟೆಗಳಿಗೆ ಅವಕಾಶವನ್ನೇ ನೀಡಬಾರದಿತ್ತು. ಜಸ್ಟಿಸ್ ದಾಸ್ ಆಯೋಗವನ್ನು ಯಥಾವತ್ತು ಜಾರಿಗೆ ತರಬೇಕಿತ್ತು. ಆಂಧ್ರದಲ್ಲಿ ತೆಲಂಗಾಣದಲ್ಲಿ ರೋಸ್ಟರ್ ನಲ್ಲಿ ಸಮಸ್ಯೆಯಾಗಲಿಲ್ಲ. ಇಲ್ಲಿ ಏಕೆ ಸಮಸ್ಯೆಯಾಯಿತು?” ಎಂದು ಕೇಳಿದರು.
‘ಅರಸು ಕಾಲದ ರಾಜಕೀಯ ಪ್ರಮಾದ’; ಕೋಡಿಹಳ್ಳಿ ಸಂತೋಷ್ ಒಳನೋಟ
“ಆಂಧ್ರ ಮತ್ತು ತೆಲಂಗಾಣದಲ್ಲಿ ಪರಿಶಿಷ್ಟರೊಳಗೆ ಸ್ಪೃಶ್ಯ ಜಾತಿಗಳ ಸಮಸ್ಯೆ ಇಲ್ಲ. ಕರ್ನಾಟಕದಲ್ಲಿನ ಸ್ಪೃಶ್ಯ ಸಮುದಾಯಗಳ ಪ್ರಭಾವವೂ ಸಿದ್ದರಾಮಯ್ಯನವರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಸ್ಪೃಶ್ಯರು ಪರಿಶಿಷ್ಟರ ಪಟ್ಟಿಯಲ್ಲಿ ಇಲ್ಲವಾಗಿದ್ದರೆ ಒಳಮೀಸಲಾತಿ ಇಷ್ಟು ಕಗ್ಗಂಟಾಗುತ್ತಿರಲಿಲ್ಲ. ಆದರೆ ಸ್ಪೃಶ್ಯರು ಪರಿಶಿಷ್ಟರ ಪಟ್ಟಿಯಲ್ಲಿ ಉಳಿಯಲು ದೇವರಾಜ ಅರಸು ಅವರು ಮಾಡಿದ ರಾಜಕಾರಣವೇ ಕಾರಣ” ಎನ್ನುತ್ತಾರೆ ಒಳಮೀಸಲಾತಿ ಹೋರಾಟಗಾರ, ಚಿಂತಕ ಕೋಡಿಹಳ್ಳಿ ಸಂತೋಷ್.
“ಹೊಲೆಯ ಮಾದಿಗ ಮತ್ತು ಸ್ಪೃಶ್ಯರು- ಈ ಮೂವರನ್ನು ಸಿದ್ದರಾಮಯ್ಯ ಬ್ಯಾಲೆನ್ಸ್ ಮಾಡಬೇಕಾಗಿತ್ತು. ಭೋವಿ, ಲಂಬಾಣಿ, ಕೊರಚ, ಕೊರಮರನ್ನು ಪರಿಶಿಷ್ಟರಲ್ಲಿ ಇರಿಸುವುದು ಬೇಡ ಎಂದು ಎಪ್ಪತ್ತರ ದಶಕದಲ್ಲೇ ಎಲ್.ಜಿ. ಹಾವನೂರು ಅವರು ಸರ್ಕಾರಕ್ಕೆ ವರದಿ ಕೊಟ್ಟಿದ್ದರು. ಆದರೆ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ರಾಜಕೀಯ ಲೆಕ್ಕಾಚಾರ ಬೇರೆಯಾಗಿತ್ತು. ದಲಿತ ಸಮುದಾಯದ ಬಸವಲಿಂಗಪ್ಪ, ಎನ್.ರಾಚಯ್ಯ ಅವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಮುಖಗಳಾಗಿದ್ದರು. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಪಾರುಪತ್ಯದಷ್ಟೇ ಕರ್ನಾಟಕದಲ್ಲಿನ ಎಡ ಮತ್ತು ಬಲ ಸಮುದಾಯದ ಸಂಖ್ಯಾಬಲವನ್ನು ಪ್ರತಿಸ್ಪರ್ಧಿಯಂತೆ ಅರಸು ಕಂಡಿದ್ದರು. ಎಡ-ಬಲದ ಬಲ ಇದ್ದಷ್ಟು ಕಾಲ ತಮ್ಮ ಕುರ್ಚಿಗೆ ಆಪತ್ತು ಎಂದು ಅವರು ಭಾವಿಸಿದ್ದರು. ದಲಿತ ಸಿಎಂ ವಿಚಾರ ಬಂದಾಗ ಸಿದ್ದರಾಮಯ್ಯನವರು ಹೇಗೆ ವಿಚಲಿತರಾಗುತ್ತಿದ್ದರೋ ಅದೇ ರೀತಿ ಅಂದು ಅರಸು ಅವರು ದಲಿತ ನಾಯಕತ್ವದ ಪ್ರಭಾವವನ್ನು ಎದುರಿಸುತ್ತಿದ್ದರು. ಹೀಗಾಗಿ ದಲಿತ ನಾಯಕರನ್ನು ಆತಂಕದಲ್ಲಿ ಇಟ್ಟು, ತಮ್ಮ ಅಧಿಕಾರವನ್ನು ಬಲಪಡಿಸಿಕೊಳ್ಳುವ ಸಲುವಾಗಿ ಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟರ ಪಟ್ಟಿಯೊಳಗೆ ಮುಂದುವರಿಸಿದರು. ಅಂದು ಹಾವನೂರರ ಆತಂಕವನ್ನು ಅರಸು ನಿರ್ಲಕ್ಷಿಸಿದರು. ಈಗ ಸಿದ್ದರಾಮಯ್ಯ ಅವರು ನಾಗಮೋಹನ ದಾಸ್ ಆಯೋಗದ ವರದಿಯನ್ನು ಯಥಾವತ್ತು ಒಪ್ಪಿಕೊಳ್ಳಲಿಲ್ಲ. ಸಿದ್ದರಾಮಯ್ಯನಂತಹ ನುರಿತ ರಾಜಕಾರಣಿಯಿಂದಲೇ ಇದನ್ನು ಸರಿಯಾಗಿ ಅನುಷ್ಠಾನಕ್ಕೆ ತರಲು ಆಗಲಿಲ್ಲ ಎಂಬುದು ವೈಯಕ್ತಿಕವಾಗಿ ನೋವಿನ ಸಂಗತಿ” ಎಂದರು.

“ರೋಸ್ಟರ್ ಬಿಂದುವಿನಲ್ಲಿ ಮತ್ತೆ ಸಮಸ್ಯೆಯಾಗಿದೆ. ಪರಿಶಿಷ್ಟರಿನಲ್ಲಿನ ಎ, ಬಿ, ಸಿ- ಈ ಮೂರು ಗುಂಪುಗಳಿಗೂ ಏಕಕಾಲದಲ್ಲಿ ಹುದ್ದೆಗಳು ಸಿಗದೆ ಇರುವ ನೇಮಕಾತಿಗಳನ್ನು ಸಾಮಾನ್ಯ ಎಂದು ಘೋಷಿಸಿರುವುದರಿಂದ ದೊಡ್ಡ ಮಟ್ಟದ ಅನ್ಯಾಯ ಹೊಲೆಯ ಮತ್ತು ಮಾದಿಗರಿಬ್ಬರಿಗೂ ಆಗುತ್ತದೆ. ವಿಶ್ವವಿದ್ಯಾಲಯಗಳ ಬಾಗಿಲು ಬಹುತೇಕ ಎಡಗೈ- ಬಲಗೈಗೆ ಮುಚ್ಚಿದಂತೆಯೇ ಸರಿ. ಮೈಸೂರು ಮತ್ತು ತುಮಕೂರು ಭಾಗದಲ್ಲಿ ಎಡಗೈ ಮತ್ತು ಬಲಗೈ ತಮ್ಮ ಪಾರುಪತ್ಯ ಮುಂದುವರಿಸಬಹುದು. ಆದರೆ ಇಡೀ ರಾಜ್ಯವನ್ನು ಪರಿಗಣನೆಗೆ ತೆಗೆದುಕೊಂಡರೆ ಕೊಲಂಭೋಗಳೇ ಮೇಲುಗೈ ಸಾಧಿಸುತ್ತಾರೆ. ವಿಶ್ವವಿದ್ಯಾನಿಲಯಗಳ ನೇಮಕಾತಿಯಲ್ಲಿ ಸ್ಪೃಶ್ಯರು ದೊಡ್ಡ ಮಟ್ಟದಲ್ಲಿ ಒಳನುಗ್ಗುತ್ತಾರೆ. ಇಬ್ಬರ ಹೊಡೆದಾಟದಿಂದಾಗಿ ಮುಂದಿನ ಚುನಾವಣೆಯಲ್ಲಿ ಸ್ಪೃಶ್ಯರಿಗೆ ಹೆಚ್ಚಿನ ಲಾಭ ಆಗುತ್ತದೆ. ಈ ಅರಿವು ಇಲ್ಲವಾಗಿದ್ದು ನಮ್ಮ ದುರಂತ” ಎಂದು ಭವಿಷ್ಯದ ಪಲ್ಲಟಗಳನ್ನು ವಿಶ್ಲೇಷಿಸಿದರು.
ಕೊನೆಯ ಮಾತು
ಕೊರತೆಗಳ ನಡುವೆಯೇ ಒಳಮೀಸಲಾತಿ ಜಾರಿಯಾಗಿರುವುದನ್ನು ಸಮುದಾಯಗಳು ಸ್ವಾಗತಿಸುತ್ತಿವೆ. ಹೋರಾಟದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ ಎಂಬುದು ಹಲವರ ಅಭಿಪ್ರಾಯ. ಆದರೆ ಒಳಮೀಸಲಾತಿ ಸಿಕ್ಕ ಮಾತ್ರಕ್ಕೆ ದಲಿತರ ನೋವುಗಳು ನಿಲ್ಲುವುದಿಲ್ಲ. ಈವರೆಗೆ ದಲಿತರು ಏನನ್ನು ಪಡೆದಿದ್ದಾರೋ ಅದೆಲ್ಲವೂ ಹೋರಾಟದಿಂದಲೇ ಪಡೆದಿದ್ದಾರೆ ಹೊರತು, ಪ್ರಭುತ್ವವು ತಾನಾಗಿಯೇ ಏನನ್ನೂ ಕೊಟ್ಟಿಲ್ಲ ಎಂಬ ಎಚ್ಚರವನ್ನು ಚಳವಳಿಯ ನಾಯಕರು ನೀಡುತ್ತಿದ್ದಾರೆ.
ಒಳಮೀಸಲಾತಿ ಸಂಬಂಧ ಹೋರಾಟಗಾರರ ಅಭಿಪ್ರಾಯಗಳನ್ನು ದಾಖಲಿಸಲು ಹೊರಟಾಗ ಮುಕ್ತವಾಗಿ ವ್ಯಕ್ತವಾಗಿದ್ದು ಒಗ್ಗಟ್ಟಿನ ಮಂತ್ರವಷ್ಟೇ. ಎಡ ಮತ್ತು ಬಲ ಸಮುದಾಯಗಳ ರಾಜಕಾರಣಿಗಳ ಮಾತುಗಳನ್ನೂ ದಾಖಲಿಸಲು ಪ್ರಯತ್ನಿಸಲಾಯಿತು. ಆದರೆ ಒಳಮೀಸಲಾತಿ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಲು ಅವರು ಹಿಂದೇಟು ಹಾಕಿಬಿಟ್ಟರು!



