ಈ ದಿನ ಸಂಪಾದಕೀಯ |ತೈಲ ದರಗಳ ಮೋಸ: ಗ್ರಾಹಕನಿಗೆ ಬೆಲೆ ಏರಿಕೆಯೇ’ಖಾಯಂ’ ಶಿಕ್ಷೆ?

Date:

ಕಡಿಮೆ ಕಾಸು ಕೊಟ್ಟು ಕಚ್ಚಾತೈಲ ಖರೀದಿಸುವ ಸರ್ಕಾರ, ಆ ಲಾಭವನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಲು ಒಂದು ಪಾರದರ್ಶಕ ವ್ಯವಸ್ಥೆ ಇಲ್ಲ ಏಕೆ? ಚುನಾವಣೆ ಹತ್ತಿರವಿದ್ದಾಗ ಮಾತ್ರ ಬೆಲೆ ಇಳಿಕೆಯಾಗುತ್ತದಲ್ಲ ಹೇಗೆ? ದೇಶದ ಅಭಿವೃದ್ಧಿಗಾಗಿ ತೆರಿಗೆ ಸಂಗ್ರಹಿಸುವುದು ತಪ್ಪಲ್ಲ, ಆದರೆ ಈಗಾಗಲೇ ಹಸಿದಿರುವವರ ಬೆನ್ನಿಗೆ ಬಂಡೆ ಹೊರಿಸುವುದು ನ್ಯಾಯವೇ? ಈ ಪ್ರಶ್ನೆಗಳಿಗೆ ಸರ್ಕಾರಗಳು ಉತ್ತರ ಕೊಟ್ಟುಬಿಡಲಿ!

ಆರ್ಥಿಕ ವ್ಯವಸ್ಥೆಯಲ್ಲಿ ಕಚ್ಚಾತೈಲವನ್ನು ‘ಕಪ್ಪು ಚಿನ್ನ’ ಎಂದು ಪರಿಗಣಿಸಲಾಗುತ್ತದೆ. ಇದು ಜಗತ್ತಿನ ಸಾರಿಗೆ, ಕೈಗಾರಿಕೆ ಮತ್ತು ಸರಕು ಸಾಗಣೆಯ ಜೀವನಾಡಿ. ಈ ಜೀವನಾಡಿಯ ದರಗಳು ಇಳಿದಾಗಲೆಲ್ಲಾ, ಅದರ ಉತ್ಪನ್ನಗಳಾದ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ಗಳ ದರವೂ ಕಡಿಮೆಯಾಗಬೇಕಲ್ಲವೇ ಎನ್ನುವುದು ಸಾಮಾನ್ಯರ ತರ್ಕ ಮತ್ತು ಪ್ರಶ್ನೆ. ಆದರೆ, ಕ್ರೂಡ್‌ ಆಯಿಲ್ ದರ ಇಳಿಯುತ್ತಿರುವ ಹೊತ್ತಿನಲ್ಲಿಯೂ‌ ತೈಲ ಬೆಲೆ ಏರುತ್ತಿರುವುದೊಂದು ವಿರೋಧಾಭಾಸ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಬ್ಯಾರಲ್‌ಗೆ 70-80 ಡಾಲರ್‌ಗೆ ಕುಸಿದಿದೆ. ದೇಶದ ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಒಡೆತನದ ಪೆಟ್ರೋಲ್ ಬಂಕ್‌ಗಳು ಮಾತ್ರ ಏರಿದ ದರದಲ್ಲೇ ತೈಲ ಬಿಕರಿ ಮಾಡುತ್ತಿವೆ.

- Advertisement -

ಭಾರತವು ತನ್ನ ಇಂಧನ ಅಗತ್ಯದ ಸುಮಾರು 85% ಕ್ಕಿಂತ ಹೆಚ್ಚು ಕಚ್ಚಾತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಸೌದಿ ಅರೇಬಿಯಾ, ಇರಾಕ್, ಅಮೆರಿಕ ಮತ್ತು ರಷ್ಯಾದಂತಹ ದೇಶಗಳಿಂದ ಬರುವ ಈ ಕಚ್ಚಾತೈಲವನ್ನು ಭಾರತದ ರಿಲಯನ್ಸ್, ಐಒಸಿ (IOC), ಬಿಪಿಸಿಎಲ್ (BPCL) ಸೇರಿದಂತೆ ಇತರೆ ದೊಡ್ಡ ಕಂಪನಿಗಳು ಬೃಹತ್ ಸಂಸ್ಕರಣಾಗಾರಗಳಲ್ಲಿ (Refineries) ಸಂಸ್ಕರಿಸಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯನ್ನಾಗಿ ಪರಿವರ್ತಿಸುತ್ತವೆ. ಅಂದರೆ, ನಾವು ಆಮದು ಮಾಡಿಕೊಳ್ಳುವುದು ಕಚ್ಚಾ ರೂಪವನ್ನೇ ಹೊರತು ಅಂತಿಮ ಉತ್ಪನ್ನಗಳನ್ನಲ್ಲ ಎನ್ನುವುದು ತಿಳಿದಿರುವ ಸಂಗತಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

7 ದಿನಗಳಲ್ಲಿ 8 ಇ-ಮೇಲ್‌ಗಳು; ಆದರೂ ಮತಪಟ್ಟಿಯಲ್ಲಿ ಉಳಿಯಲಿಲ್ಲ...

90 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ 97 ಮತದಾರರು ಎಂಬ ಸಂಖ್ಯೆ ಅತಿ ಚಿಕ್ಕದಾಗಿ ಕಾಣಬಹುದು. ಆದರೆ, ಗೋವಾದ ಈ 97 ಮತದಾರರ ಪ್ರಕರಣವು ಚುನಾವಣಾ ಆಯೋಗದ ಕಾರ್ಯವಿಧಾನ,...

ಮತದಾರರ ಪಟ್ಟಿ: ನಿರ್ಧಾರ ತೆಗೆದುಕೊಳ್ಳುವುದು, ಜಾರಿಗೆ ತರುವುದು ಯಾರು?

ಗೋವಾದ 97 ಮತದಾರರ ಪ್ರಕರಣ ಚುನಾವಣಾ ವ್ಯವಸ್ಥೆಯ ಮುಂದಿರುವ ಒಂದು ಮಹತ್ವದ ಪ್ರಶ್ನೆಯನ್ನು ಎದುರುತರುತ್ತದೆ: ಸ್ಥಳೀಯ ಮಟ್ಟದ ಮತದಾರರ ನೋಂದಣಿ ಅಧಿಕಾರಿಗಳು (ERO) ದಾಖಲೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿಯಲ್ಲಿ ಸೇರಿಸಲು ಅರ್ಹರೆಂದು ಕಂಡುಕೊಂಡ...

ಇನ್ನು ಈ ದೇಶದ ಗ್ರಾಹಕ ಪಾವತಿಸುವ ಬೆಲೆಯ ಸುಮಾರು 45% ರಿಂದ 50% ಭಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ಅಬಕಾರಿ ಸುಂಕ ಮತ್ತು ಮೌಲ್ಯವರ್ಧಿತ ತೆರಿಗೆಯ (VAT) ರೂಪದಲ್ಲಿ ನೇರವಾಗಿ ಸರ್ಕಾರದ ಬೊಕ್ಕಸ ಸೇರುತ್ತದೆ. ಉದಾಹರಣೆಗೆ, ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿ ಎಂದಿಟ್ಟುಕೊಳ್ಳೋಣ, ಅದರಲ್ಲಿ ಕೇವಲ 50 ರೂಪಾಯಿ ಆಸುಪಾಸಿನ ಮೊತ್ತ ಮಾತ್ರ ತೈಲದ ನಿಜವಾದ ಮೌಲ್ಯ ಮತ್ತು ಸಂಸ್ಕರಣಾ ವೆಚ್ಚ. ಉಳಿದ ಅರ್ಧದಷ್ಟು ಭಾಗವನ್ನು (ಸುಮಾರು 45-50 ರೂ.) ತೆರಿಗೆ ರೂಪದಲ್ಲಿ ಜನರಿಂದ ವಸೂಲಿ ಮಾಡಿದ ಹಣ ಸರ್ಕಾರದ ಖಜಾನೆ ಸೇರುತ್ತದೆ.

ಜಾಗತಿಕವಾಗಿ ಕಚ್ಚಾತೈಲದ ಬೆಲೆ ಏರಿದಾಗ, ಇದರಿಂದಲೇ ಬೆಲೆ ಏರಿಸುತ್ತಿದ್ದೇವೆ ಎಂದು ಹೇಳುವ ಸರ್ಕಾರ, ದರ ಇಳಿದಾಗ ಮಾತ್ರ ಸೊಲ್ಲೆತ್ತುವುದಿಲ್ಲ. ಈ ದ್ವಂದ್ವ ನೀತಿಯೇ ಜನರನ್ನ ಮೂರ್ಖರನ್ನಾಗಿ ಮಾಡುವ ಅತಿದೊಡ್ಡ ಕಳ್ಳಾಟ. 2014-15ರ ಅವಧಿಯಲ್ಲಿ ಕಚ್ಚಾತೈಲದ ದರ ಭಾರೀ ಕುಸಿದಾಗ, ಸರ್ಕಾರ ಅದರ ಲಾಭವನ್ನು ಜನರಿಗೆ ನೀಡುವ ಬದಲು, ಅಬಕಾರಿ ಸುಂಕವನ್ನು (Excise Duty) ಮತ್ತೂ ಹೆಚ್ಚಿಸಿತು. ಅಂದರೆ, ಜಾಗತಿಕವಾಗಿ ಬೆಲೆ ಇಳಿದಾಗ ಸರ್ಕಾರ ತೆರಿಗೆ ಹೆಚ್ಚಿಸಿ, ಆ ಲಾಭವನ್ನು ತನ್ನ ಬೊಕ್ಕಸಕ್ಕೆ ಬಾಚಿಕೊಂಡಿತು. ಏಕಾಏಕಿ ರೂಪಾಯಿಗಳ ಲೆಕ್ಕದಲ್ಲಿ ದರ ಏರಿಸಿ ಬಳಿಕ, ಚುನಾವಣೆ ಹತ್ತಿರವಿರುವಾಗ ಪೈಸೆ ಲೆಕ್ಕದಲ್ಲಿ ದರ ಇಳಿಕೆ ಮಾಡಿ, ಜನರಿಗೆ ‘ಉಪಕಾರ’ ಮಾಡುತ್ತಿದ್ದೇವೆಂಬ ಭ್ರಮೆ ಸೃಷ್ಟಿಸಲಾಗುತ್ತಿದೆ. ಇದು ಅನ್ಯಾಯ.

ಕೇಂದ್ರ ಸರ್ಕಾರ, ಯುದ್ಧ ಶುರುವಾದಾಗಿನಿಂದ ಹಾರ್ಮುಜ್ ಜಲಸಂಧಿ ಮುಚ್ಚಿದೆ, ಯುದ್ಧದಿಂದ ತೈಲ ಕಂಪನಿಗಳು ನಷ್ಟದಲ್ಲಿವೆ ಎಂದು ಕುಂಟು ಸಬೂಬು ಹೇಳಿಕೊಂಡು ಕಳೆದ ವರ್ಷ ಹಂತ ಹಂತವಾಗಿ ಸುಮಾರು 10 ರೂಪಾಯಿಗಳಷ್ಟು ಪೆಟ್ರೋಲ್‌, ಡೀಸೆಲ್‌ ದರ ಏರಿಸಿತು. ಡಿಸೆಂಬರ್‌ನಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 63 ಡಾಲರ್ ಇತ್ತು. ಆಗ ಭಾರತದಲ್ಲಿ ಪೆಟ್ರೋಲ್ ಬೆಲೆ 94 ರೂ.ನಿಂದ 100 ರೂ. ಮಾರ್ಚ್‌ನಲ್ಲಿ ಬ್ಯಾರಲ್‌ ಕ್ರೂಡ್‌ ಆಯಿಲ್ 90 ರಿಂದ 102 ಡಾಲರ್‌ ತಲುಪಿತು. ಆಗಲೂ ಪೆಟ್ರೋಲ್‌ ಬೆಲೆ 102 ರೂ. ಇತ್ತು. ಕಚ್ಚಾತೈಲದ ಬೆಲೆ ಹೆಚ್ಚಾಗಲೀ, ಕಡಿಮೆಯಾಗಲೀ, ನಮ್ಮವರು ಮಾತ್ರ ಏರಿಸುತ್ತಲೇ ಇದ್ದಾರೆ. ಸರ್ಕಾರ ಪ್ರತಿ ಬಾರಿ ಫ್ಯೂಯಲ್‌ ರೇಟ್‌ ಹೆಚ್ಚಿಸುವಾಗ ಹೇಳುವ ಕಾರಣಗಳು ಈಗ ಹಳಸಿವೆ. ಸತ್ಯ ಏನೆಂಬುದು ಜಗಜ್ಜಾಹೀರು.

ಈಗ ಭಾರತದಲ್ಲಿ ಪೆಟ್ರೋಲ್‌ ಬೆಲೆ ಬರೋಬ್ಬರಿ 110-116 ರೂ. ಬ್ಯಾರಲ್‌ ಕಚ್ಚಾತೈಲದ ಬೆಲೆ ಸುಮಾರು 72 ಡಾಲರ್ (6,840 ರೂ). ಈಗ ಬರುತ್ತಿರುವುದಂತೂ ಎಥನಾಲ್ ಮಿಶ್ರಿತ ಪೆಟ್ರೋಲ್. ಒಂದು ಕಡೆ ವಾಹನಗಳ ಎಂಜಿನ್‌ಗಳಿಗೆ ತೊಂದರೆ, ಇನ್ನೊಂದು ಕಡೆ ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ. ಈಗ ನಮ್ಮಲ್ಲಿರುವ ಬಹುತೇಕ ದ್ವಿಚಕ್ರ ವಾಹನಗಳು ಹಳೆಯವು. ಅವು ಯಾವುವೂ 80% ಎಥನಾಲ್ ತಡೆದುಕೊಳ್ಳುವ ಶಕ್ತಿ ಹೊಂದಿಲ್ಲ. ಅಲ್ಲಿಗೆ ಕಥೆ ಮುಗಿಯಿತು! 

ತೈಲ ಕಂಪನಿಗಳು (OMCs) ಲಾಭಕ್ಕಾಗಿ ಕೆಲಸ ಮಾಡುತ್ತವೆ ಎನ್ನುವುದೇನೋ ನಿಜ. ಆದರೆ, ದರ ಇಳಿದಾಗ ಅವು ಏಕೆ ಲಾಭದ ಮಿತಿಯನ್ನು ಕಾಯ್ದುಕೊಳ್ಳುತ್ತವೆ? ಇಂಧನ ದರ ನಿಯಂತ್ರಿಸುವುದು ಕೇವಲ ಕಂಪನಿಗಳ ಕೆಲಸವಲ್ಲ, ಅದು ಸರ್ಕಾರದ ಹೊಣೆಗಾರಿಕೆಯೂ. ತೈಲ ದರವನ್ನು ಜಿಎಸ್‌ಟಿ (GST) ವ್ಯಾಪ್ತಿಗೆ ತಂದರೆ ಬೆಲೆ ಅರ್ಧಕ್ಕೆ ಇಳಿಯಬಹುದು. ಆದರೆ, ಸರ್ಕಾರಗಳ ‘ತೆರಿಗೆಯ ಹಸಿವು’ ಇದಕ್ಕೆ ಅಡ್ಡಿಯಾಗಿದೆ. ರಾಜ್ಯಗಳಿಗೆ ವ್ಯಾಟ್ (VAT) ಮೂಲಕ ಬರುವ ಆದಾಯ ಮತ್ತು ಕೇಂದ್ರಕ್ಕೆ ಅಬಕಾರಿ ಸುಂಕದ ಮೂಲಕ ಬರುವ ಆದಾಯವನ್ನು ಬಿಟ್ಟುಕೊಡಲು ಯಾವ ಸರ್ಕಾರವೂ ಸಿದ್ಧವಿಲ್ಲ. ಸರ್ಕಾರಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಇದರ ನೇರ ಪರಿಣಾಮ ಬೀಳುತ್ತಿರುವುದು ಸಾರಿಗೆ ವೆಚ್ಚದ ಮೇಲೆ.

ಪೆಟ್ರೋಲ್-ಡೀಸೆಲ್ ದರ ಕೇವಲ ಕಾರು, ಬೈಕುಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಡೀಸೆಲ್ ಬೆಲೆ ಏರಿದರೆ, ಲಾರಿಗಳ ಸಾಗಣೆ ವೆಚ್ಚ ಹೆಚ್ಚುತ್ತದೆ. ಸಾಗಣೆ ವೆಚ್ಚ ಹೆಚ್ಚಿದರೆ, ತರಕಾರಿ, ಹಾಲು, ದಿನಬಳಕೆಯ ವಸ್ತುಗಳ ಬೆಲೆ ಏರುತ್ತದೆ. ಅಂದರೆ, ಒಬ್ಬ ಬಡ ಕೂಲಿ ಕಾರ್ಮಿಕ ಕೂಡ ಬೆಲೆ ಏರಿಕೆಯ ಬಿಸಿಯನ್ನ ನೇರವಾಗಿ ಅನುಭವಿಸಬೇಕಾಗುತ್ತದೆ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಆರ್‌ಟಿಐನಿಂದ ಬಯಲಾಯ್ತು ಮೋದಿ ಮತ್ತು ಗೋದಿ ಮೀಡಿಯಾದ ಅಸಲಿ ಬಣ್ಣ!

ಸರ್ಕಾರಗಳು ಏನೇ ಸಮರ್ಥನೆ ಕೊಟ್ಟುಕೊಳ್ಳಲಿ. ಆದರೆ, ಜನಸಾಮಾನ್ಯರ ಕೊಳ್ಳುವ ಶಕ್ತಿಯನ್ನು ಪಾತಾಳಕ್ಕೆ ತುಳಿಯುತ್ತಿರುವುದೇ ನಿಜ. ದರ ಇಳಿಸಿದರೆ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎಂಬ ವಾದ ಬೂಟಾಟಿಕೆಯದು. ಇಂಧನ ಬೆಲೆ ಇಳಿಕೆಯಾದರೆ ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತವೆ, ಸರಕುಗಳ ಸಾಗಣೆ ಸುಗಮವಾಗುತ್ತದೆ. ಇದು ದೀರ್ಘಾವಧಿಯಲ್ಲಿ ಸರ್ಕಾರಕ್ಕೆ ಹೆಚ್ಚಿನ ತೆರಿಗೆಯನ್ನೇ ತಂದುಕೊಡುತ್ತದೆ. ಆದರೆ, ದೃಷ್ಟಿಕೋನ ಕೇವಲ ಲಾಭಕ್ಕೆ ಸೀಮಿತವಾದಾಗ ಇಂತಹ ಜನಪರ ಆಲೋಚನೆಗಳು, ನಿರ್ಧಾರಗಳು ಜಾರಿಗೆ ಬರುವುದಿಲ್ಲ.

ಕಡಿಮೆ ಕಾಸು ಕೊಟ್ಟು ಕಚ್ಚಾತೈಲ ಖರೀದಿಸುವ ಸರ್ಕಾರ, ಆ ಲಾಭವನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಲು ಒಂದು ಪಾರದರ್ಶಕ ವ್ಯವಸ್ಥೆ ಇಲ್ಲ ಏಕೆ? ಚುನಾವಣೆ ಹತ್ತಿರವಿದ್ದಾಗ ಮಾತ್ರ ಬೆಲೆ ಇಳಿಕೆಯಾಗುತ್ತದಲ್ಲ ಇದು ಹೇಗೆ? ದೇಶದ ಅಭಿವೃದ್ಧಿಗಾಗಿ ತೆರಿಗೆ ಸಂಗ್ರಹಿಸುವುದು ತಪ್ಪಲ್ಲ, ಆದರೆ ಈಗಾಗಲೇ ಹಸಿದಿರುವವರ ಬೆನ್ನ ಮೇಲೆ ಕಲ್ಲೇರುವುದು ನ್ಯಾಯವೇ? ಈ ಪ್ರಶ್ನೆಗಳಿಗೆ ಯಾರಾದರೂ ಉತ್ತರ ಕೊಟ್ಟುಬಿಡಲಿ!

ಒಂದು ದೇಶದ ಆರ್ಥಿಕತೆ ಜನಸಾಮಾನ್ಯನ ಸಂತೋಷದ ಮೇಲೆ ನಿಲ್ಲಬೇಕು. ಆಡಂಬರ ಬೇಡ, ಕನಿಷ್ಠ ಸಾಧಾರಣವಾಗಿಯಾದರೂ ನೆಮ್ಮದಿಯಾಗಿ ಬದುಕುವುದರ ಮೇಲೆ ನಿಲ್ಲಬೇಕು. ಯಾವುದೇ ಸರ್ಕಾರ ನ್ಯಾಯಪರ, ಜನಪರವಾಗಿರುವುದೇ ಆದಲ್ಲಿ ಅದು ಯಾವುದೇ ರೀತಿಯ ಹಣದುಬ್ಬರ, ದರ ಏರಿಕೆಯನ್ನು ತಮಗೆ ಬೇಕಾದ ಅಸ್ತ್ರವನ್ನಾಗಿ ಬಳಸಕೂಡದು. ಸರ್ಕಾರ ತೈಲ ಬೆಲೆ ನಿಗದಿಯಲ್ಲಿ ಪಾರದರ್ಶಕತೆ ತರಲಿ, ತೆರಿಗೆಯ ಹೊರೆ ತಗ್ಗಿಸಿ, ಜನಸಾಮಾನ್ಯನ ಬದುಕಿಗೆ ನ್ಯಾಯ ಒದಗಿಸಲಿ. ಕೇವಲ ಅಧಿಕಾರಕ್ಕಾಗಿ ದರ ಇಳಿಸುವ ಅಗ್ಗದ ರಾಜಕಾರಣವನ್ನ ಬಿಟ್ಟು, ದೇಶದ ಆರ್ಥಿಕತೆಯನ್ನು ಸ್ಥಿರಗೊಳಿಸುವ ದಿಟ್ಟತನ ಪ್ರದರ್ಶಿಸಲಿ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

7 ದಿನಗಳಲ್ಲಿ 8 ಇ-ಮೇಲ್‌ಗಳು; ಆದರೂ ಮತಪಟ್ಟಿಯಲ್ಲಿ ಉಳಿಯಲಿಲ್ಲ ಗೋವಾದ 97 ಅರ್ಹರ ಹೆಸರು!

90 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ 97...

ಮತದಾರರ ಪಟ್ಟಿ: ನಿರ್ಧಾರ ತೆಗೆದುಕೊಳ್ಳುವುದು, ಜಾರಿಗೆ ತರುವುದು ಯಾರು?

ಗೋವಾದ 97 ಮತದಾರರ ಪ್ರಕರಣ ಚುನಾವಣಾ ವ್ಯವಸ್ಥೆಯ ಮುಂದಿರುವ ಒಂದು ಮಹತ್ವದ...

ಸಿಇಸಿ ಗ್ಯಾನೇಶ್ ದೇಶದ್ರೋಹಿ; ಕೂಡಲೇ ರಾಜೀನಾಮೆ ನೀಡಲಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅತಿ ದೊಡ್ಡ ದೇಶದ್ರೋಹಿ ಎಂಬುದು ಬಹಿರಂಗವಾಗಿದೆ....

ಗ್ಯಾನೇಶ್‌ ಕುಮಾ‌ರ್ – ಮೇಧಾ ರೂಪಂ: ತಪ್ಪು ಕಾರಣಗಳಿಗಾಗಿ ಸುದ್ದಿಯ ಸುಳಿಯಲ್ಲಿ ಐಎಎಸ್ ಅಪ್ಪ-ಮಗಳ ಜೋಡಿ

ಉನ್ನತ ಸಾಂವಿಧಾನಿಕ ಹಾಗೂ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿರುವ ಐಎಎಸ್ ಅಧಿಕಾರಿಗಳಾದ ಅಪ್ಪ–ಮಗಳ...