ಇರಾನ್ ಮತ್ತು ಅಮೆರಿಕ ನಡುವಿನ ಮಹಾ ಸಮರ ಈಗ ಜಗತ್ತಿನ ಅತ್ಯಂತ ಪ್ರಮುಖ ತೈಲ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯ ನಿಯಂತ್ರಣದವರೆಗೆ ಬಂದುನಿಂತಿದೆ . ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ "ನಾವು ಹಾರ್ಮುಜ್ ಜಲಸಂಧಿಯನ್ನು ನಮ್ಮ ಹತೋಟಿಗೆ ತೆಗೆದುಕೊಳ್ಳಲಿದ್ದೇವೆ" ಎಂದು ಘೋಷಿಸಿದ್ದರೆ, ಇರಾನ್ "ಜಲಸಂಧಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಇದು ನಮಗೆ ಹತ್ತಾರು ಪರಮಾಣು ಬಾಂಬ್ಗಳಿಗಿಂತಲೂ ಹೆಚ್ಚು ಶಕ್ತಿಶಾಲಿ" ಎಂದು ತಿರುಗೇಟು ನೀಡಿದೆ.
ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮ ಏರ್ಪಟ್ಟ ಬೆನ್ನಲ್ಲೇ, ಜಗತ್ತಿನ ಅತ್ಯಂತ ಕಾರ್ಯನಿರತ ತೈಲ ಸಾರಿಗೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯ ನಿಯಂತ್ರಣದ ವಿಷಯ ಈಗ ಜಾಗತಿಕ ರಾಜತಾಂತ್ರಿಕ ಸಮರದ ಕೇಂದ್ರಬಿಂದುವಾಗಿದೆ. ಕಳೆದ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇರಾನ್ ಈ ಪ್ರಮುಖ ಜಲಮಾರ್ಗವನ್ನು ಸಂಪೂರ್ಣವಾಗಿ ನಿರ್ಬಂಧಿಸಿತ್ತು. ಇದರಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿ, ಇಂಧನ ಬೆಲೆಗಳು ಗಗನಕ್ಕೇರಿದ್ದವು. ಆದರೆ ಪ್ರಸ್ತುತ ಕದನ ವಿರಾಮದ ಒಪ್ಪಂದದ ಪ್ರಕಟಣೆ ಹೊರಬೀಳುತ್ತಿದ್ದಂತೆ ಕಚ್ಚಾ ತೈಲ ಬೆಲೆಯಲ್ಲಿ ಶೇಕಡಾ 15ರಷ್ಟು ಭಾರೀ ಕುಸಿತ ಕಂಡುಬಂದಿದೆ.
ಉತ್ತರಕ್ಕೆ ಇರಾನ್ ಮತ್ತು ದಕ್ಷಿಣಕ್ಕೆ ಒಮಾನ್ ಹಾಗೂ ಯುಎಇ (UAE) ದೇಶಗಳ ನಡುವೆ ಕೇವಲ 50 ಕಿಲೋಮೀಟರ್ನಷ್ಟು ಪ್ರವೇಶ ದ್ವಾರವನ್ನು ಹಾಗೂ ಕಿರಿದಾದ ಭಾಗದಲ್ಲಿ ಕೇವಲ 33 ಕಿಲೋಮೀಟರ್ನಷ್ಟು ಅಗಲವನ್ನು ಹೊಂದಿರುವ ಈ ಜಲಸಂಧಿಯು, ಪರ್ಷಿಯನ್ ಗಲ್ಫ್ ಅನ್ನು ಅರಬ್ಬೀ ಸಮುದ್ರ ಮತ್ತು ಒಮಾನ್ ಗಲ್ಫ್ಗೆ ಜೋಡಿಸುವ ಏಕೈಕ ಕೊಂಡಿಯಾಗಿದೆ. ಜಗತ್ತಿನ ಒಟ್ಟು ತೈಲ ಮತ್ತು LNGಯ ಶೇಕಡಾ 20ರಷ್ಟು ಭಾಗ ಕೇವಲ ಈ ಹಾರ್ಮುಜ್ ಜಲಸಂಧಿಯ ಮೂಲಕವೇ ಹಾದುಹೋಗುತ್ತದೆ. 2025ರ ಅಂದಾಜಿನ ಪ್ರಕಾರ, ದಿನಕ್ಕೆ ಸುಮಾರು 2 ಕೋಟಿ ಬ್ಯಾರೆಲ್ ತೈಲ ಮತ್ತು ತೈಲ ಉತ್ಪನ್ನಗಳು ಇಲ್ಲಿಂದಲೇ ರಫ್ತಾಗುತ್ತಿದ್ದು(ಇದು ಜಾಗತಿಕ ಕಡಲ ತೈಲ ವ್ಯಾಪಾರದ ಕಾಲು ಭಾಗವಾಗಿದೆ), ಇದರ ವಾರ್ಷಿಕ ವ್ಯಾಪಾರದ ಮೌಲ್ಯ ಬರೋಬ್ಬರಿ 600 ಬಿಲಿಯನ್ ಡಾಲರ್ ಆಗಿದೆ ಎಂಬುದು ತಿಳಿದುಬಂದಿದೆ.

ಈ ಜಲಸಂಧಿಯು ಜಗತ್ತಿನ ಅತಿದೊಡ್ಡ ಕಚ್ಚಾ ತೈಲ ಟ್ಯಾಂಕರ್ಗಳು ಚಲಿಸುವಷ್ಟು ಆಳವಾಗಿದ್ದು, ಕೇವಲ ಇರಾನ್ ಮಾತ್ರವಲ್ಲದೆ ಸೌದಿ ಅರೇಬಿಯಾ, ಇರಾಕ್, ಕುವೈತ್, ಕತಾರ್, ಯುಎಇ ಮತ್ತು ಬಹ್ರೇನ್ನಂತಹ ಪ್ರಮುಖ ಗಲ್ಫ್ ದೇಶಗಳು ತಮ್ಮ ತೈಲ ರಫ್ತಿಗೆ ಇದನ್ನೇ ಅವಲಂಬಿಸಿವೆ. ಅದರಲ್ಲೂ ಜಾಗತಿಕ LNG ಅನಿಲದ ಶೇ.20ರಷ್ಟು ಭಾಗ ಪ್ರಮುಖವಾಗಿ ಕತಾರ್ನಿಂದ ಮತ್ತು ಯುಎಇನಿಂದ ಇದೇ ಮಾರ್ಗವಾಗಿ ರಫ್ತಾಗುತ್ತದೆ. ನೈಸರ್ಗಿಕ ಅನಿಲವನ್ನು ಅದರ ಮೂಲ ಗಾತ್ರಕ್ಕಿಂತ 600 ಪಟ್ಟು ಕಡಿಮೆ ಜಾಗವನ್ನು ಆಕ್ರಮಿಸುವಂತೆ ದ್ರವರೂಪಕ್ಕೆ ಪರಿವರ್ತಿಸಿ ಈ ಎಲ್ಎನ್ಜಿ ಹಡಗುಗಳ ಮೂಲಕ ಸಾಗಿಸಲಾಗುತ್ತದೆ. ಇದನ್ನು ತಲುಪಬೇಕಾದ ದೇಶಗಳಲ್ಲಿ ಮತ್ತೆ ಅನಿಲವಾಗಿ ಪರಿವರ್ತಿಸಿ ಕಾಯಿಸಲು, ಅಡುಗೆಗೆ ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ.
ಇಷ್ಟೇ ಅಲ್ಲದೆ, ಮಧ್ಯಪ್ರಾಚ್ಯದಲ್ಲಿ ನೈಸರ್ಗಿಕ ಅನಿಲವನ್ನು ಬಳಸಿ ತಯಾರಿಸಲಾಗುವ ರಸಗೊಬ್ಬರ ವ್ಯಾಪಾರದ ಮೂರನೇ ಒಂದು ಭಾಗ ಇದೇ ಮಾರ್ಗದ ಮೂಲಕ ನಡೆಯುತ್ತದೆ. ನಿಖರವಾಗಿ ಹೇಳುವುದಾದರೆ, ಜಾಗತಿಕ ಕಡಲ ಯೂರಿಯಾ ವ್ಯಾಪಾರದ ಮೂರನೇ ಒಂದು ಭಾಗ, ಅಮೋನಿಯಾ ವ್ಯಾಪಾರದ ಮೂರನೇ ಒಂದು ಭಾಗ ಮತ್ತು ಜಾಗತಿಕ ಸಲ್ಫರ್ ರಫ್ತಿನ ಶೇ.40ರಷ್ಟು ಭಾಗ(ಒಟ್ಟಾರೆಯಾಗಿ ಜಾಗತಿಕ ರಸಗೊಬ್ಬರ ವ್ಯಾಪಾರದ ಶೇ.30ರಷ್ಟು) ಇದರ ಮೂಲಕವೇ ಸಾಗುತ್ತದೆ. ಜತೆಗೆ ಮಧ್ಯಪ್ರಾಚ್ಯ ದೇಶಗಳಿಗೆ ಅಗತ್ಯವಿರುವ ಆಹಾರ, ಔಷಧ ಮತ್ತು ತಂತ್ರಜ್ಞಾನದ ಸರಕುಗಳ ಆಮದಿಗೂ ಇದು ಪ್ರಮುಖ ಚಾನಲ್ ಆಗಿದೆ.
ವಿಶ್ವಸಂಸ್ಥೆಯ ನಿಯಮಗಳ ಪ್ರಕಾರ ದೇಶಗಳು ತಮ್ಮ ಕರಾವಳಿಯಿಂದ 12 ನಾಟಿಕಲ್ ಮೈಲಿವರೆಗೆ ಪ್ರಾದೇಶಿಕ ಸಮುದ್ರದ ಮೇಲೆ ನಿಯಂತ್ರಣ ಹೊಂದಬಹುದು. ಹಾರ್ಮುಜ್ ಜಲಸಂಧಿಯ ಕಿರಿದಾದ ಭಾಗವು ಸಂಪೂರ್ಣವಾಗಿ ಇರಾನ್ ಮತ್ತು ಒಮಾನ್ ದೇಶಗಳ ಪ್ರಾದೇಶಿಕ ನೀರಿನ ವ್ಯಾಪ್ತಿಯಲ್ಲೇ ಬರುತ್ತದೆ. ಸಾಮಾನ್ಯ ದಿನಗಳಲ್ಲಿ ತಿಂಗಳಿಗೆ 3,000ಕ್ಕೂ ಹೆಚ್ಚು ಹಡಗುಗಳು ಸಂಚರಿಸುತ್ತಿದ್ದ ಈ ಮಾರ್ಗದಲ್ಲಿ, ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದಿಂದಾಗಿ ಸಂಚಾರ ಶೇ.95ರಷ್ಟು ಕುಸಿದಿತ್ತು. ಇರಾನ್ ತನ್ನ ಡ್ರೋನ್ಗಳು, ಕ್ಷಿಪಣಿಗಳು ಮತ್ತು ಸಮುದ್ರದ ಮೈನ್ಗಳ ಮೂಲಕ ಭೀತಿ ಒಡ್ಡಿದ್ದರಿಂದ ವಾಣಿಜ್ಯ ಹಡಗುಗಳ ಸಂಚಾರ ದುಸ್ತರವಾಗಿತ್ತು.

‘ಯುನೈಟೆಡ್ ಅಗೇನ್ಸ್ಟ್ ನ್ಯೂಕ್ಲಿಯರ್ ಇರಾನ್’ ಸಂಸ್ಥೆಯ ಪ್ರಕಾರ, ಏಪ್ರಿಲ್ 2ರ ವೇಳೆಗೆ ಕನಿಷ್ಠ 24 ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದಿದ್ದು, 3 ಹಡಗುಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದವು ಎನ್ನಲಾಗಿದೆ. ಜಾಗತಿಕ ರಿಸ್ಕ್ ಮ್ಯಾನೇಜ್ಮೆಂಟ್ನ ಮುಖ್ಯ ವಿಶ್ಲೇಷಕ ಆರ್ನೆ ಲೋಹ್ಮನ್ ರಾಸ್ಮುಸ್ಸೆನ್ ಅವರ ಪ್ರಕಾರ, ಹಡಗುಗಳ ಮೇಲೆ ದಾಳಿಯ ಭೀತಿಯಿಂದಾಗಿ ಇನ್ಶೂರೆನ್ಸ್ ಸಿಗುವುದೇ ಅಸಾಧ್ಯವಾಗಿದ್ದು, ತೀರಾ ದುಬಾರಿಯಾಗಿತ್ತು ಎನ್ನಲಾಗಿದೆ.
ಈ ಬಿಕ್ಕಟ್ಟಿನಿಂದಾಗಿ ಏಷ್ಯಾ ಮತ್ತು ಆಫ್ರಿಕಾ ಖಂಡದ ದೇಶಗಳು ತೀವ್ರ ತೊಂದರೆಗೆ ಒಳಗಾಗಿದ್ದವು. ಏಕೆಂದರೆ ಇರಾನ್ ರಫ್ತು ಮಾಡುವ ಒಟ್ಟು ತೈಲದ ಶೇ.90ರಷ್ಟು ಭಾಗವನ್ನು ಚೀನಾವೊಂದೇ ಖರೀದಿಸುತ್ತದೆ. ಏಷ್ಯಾದಲ್ಲಿ ಇಂಧನ ಕೊರತೆಯಿಂದಾಗಿ ದಿನನಿತ್ಯದ ಬದುಕು ಹದಗೆಟ್ಟು, ಸರ್ಕಾರಗಳು ನೌಕರರಿಗೆ ವರ್ಕ್ ಫ್ರಮ್ ಹೋಮ್ ಆದೇಶಿಸಿದ್ದವು, ಕೆಲಸದ ದಿನಗಳನ್ನು ಕಡಿತಗೊಳಿಸಿದ್ದವು, ರಾಷ್ಟ್ರೀಯ ರಜೆಗಳನ್ನು ಘೋಷಿಸಿ ಇಂಧನ ಉಳಿಸಲು ವಿಶ್ವವಿದ್ಯಾಲಯಗಳನ್ನು ಬೇಗನೇ ಮುಚ್ಚಿದ್ದವು. ಆಫ್ರಿಕಾದಲ್ಲಿ ದಕ್ಷಿಣ ಸುಡಾನ್ ಮತ್ತು ಮಾರಿಷಸ್ ದೇಶಗಳು ವಿದ್ಯುತ್ ಬಳಕೆಯನ್ನು ನಿರ್ಬಂಧಿಸಿದರೆ, ಯುರೋಪಿನಲ್ಲಿ ಸ್ಲೊವೇನಿಯಾ ದೇಶವು ತೈಲ ರೇಷನಿಂಗ್ ಪದ್ಧತಿಯನ್ನು ಜಾರಿಗೆ ತಂದ ಮೊದಲ ಐರೋಪ್ಯ ಒಕ್ಕೂಟದ ರಾಷ್ಟ್ರವಾಯಿತು.
ಈ ಸಂಘರ್ಷದ ಅವಧಿಯಲ್ಲಿ ಅಮೆರಿಕ ಜಲಸಂಧಿಗೆ ಯಾವುದೇ ಯುದ್ಧನೌಕೆಗಳನ್ನು ಕಳುಹಿಸದೆ, ತನ್ನ ಮಿಲಿಟರಿ ಪ್ರತಿಕ್ರಿಯೆಯನ್ನು ಕೇವಲ ವೈಮಾನಿಕ ದಾಳಿಗಳಿಗೆ ಸೀಮಿತಗೊಳಿಸಿತ್ತು. ಮಾರ್ಚ್ 18ರಂದು ಅಮೆರಿಕ ಸೇನೆಯು ಜಲಸಂಧಿಯಲ್ಲಿದ್ದ ಇರಾನ್ನ ಹಡಗು, ಕ್ರೂಸ್ ಕ್ಷಿಪಣಿ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಚೀನಾ ಸೇರಿದಂತೆ ಇತರ ಮಿತ್ರರಾಷ್ಟ್ರಗಳು ಜಲಸಂಧಿಯ ರಕ್ಷಣೆಗೆ ಯುದ್ಧನೌಕೆಗಳನ್ನು ಕಳುಹಿಸಬೇಕೆಂದು ಕೋರಿದ್ದರು. ಆದರೆ ಯಾರೂ ಉತ್ಸಾಹ ತೋರದಿದ್ದಾಗ ಅಮೆರಿಕಕ್ಕೆ ಯಾರ ಸಹಾಯವೂ ಬೇಡವೆಂದು ಟ್ರಂಪ್ ಹೇಳಿದ್ದರು. ಇತಿಹಾಸವನ್ನು ನೋಡಿದರೆ, 1980ರ ದಶಕದ ಇರಾನ್-ಇರಾಕ್ ಯುದ್ಧದ ಸಮಯದಲ್ಲೂ ಇಂತಹದ್ದೇ ‘ಟ್ಯಾಂಕರ್ ಯುದ್ಧ’ ನಡೆದು ತಟಸ್ಥ ಹಡಗುಗಳ ಮೇಲೆ ದಾಳಿಯಾದಾಗ, ಅಮೆರಿಕದ ಯುದ್ಧನೌಕೆಗಳು ಕುವೈತ್ನ ಟ್ಯಾಂಕರ್ಗಳಿಗೆ ಬೆಂಗಾವಲಾಗಿ ನಿಂತಿದ್ದವು. ಇದು ಎರಡನೇ ಮಹಾಯುದ್ಧದ ನಂತರ ನಡೆದ ಅತ್ಯಂತ ದೊಡ್ಡ ನೌಕಾ ಕಾರ್ಯಾಚರಣೆಯಾಗಿತ್ತು.

ಕದನ ವಿರಾಮದ ಮುನ್ನವೂ ಕೆಲವು ಹಡಗುಗಳು ಸಂಚರಿಸಿದ್ದವು. ಮಾರ್ಚ್ 24ರಂದು ಇರಾನ್ ತನ್ನ ವಿಶ್ವಸಂಸ್ಥೆಯ ಮಿಷನ್ ಮೂಲಕ, “ಶತ್ರುತ್ವವಿಲ್ಲದ ಹಡಗುಗಳು” ಇರಾನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಂಚರಿಸಬಹುದೆಂದು ತಿಳಿಸಿತ್ತು.
ಬಿಬಿಸಿ ವೆರಿಫೈ ವಿಶ್ಲೇಷಣೆಯ ಪ್ರಕಾರ, ಮಾರ್ಚ್ 1 ರಿಂದ 20ರ ನಡುವೆ ಸುಮಾರು 100 ಹಡಗುಗಳು ಸಂಚರಿಸಿದ್ದು, ಅದರಲ್ಲಿ ಮೂರನೇ ಒಂದು ಭಾಗ ಇರಾನ್ ಸಂಬಂಧಿತ ಹಡಗುಗಳಾಗಿದ್ದವು. ಮಾರ್ಚ್ 1 ರಿಂದ 15 ರ ನಡುವೆ 11 ಚೀನಾ ಸಂಬಂಧಿತ ಹಡಗುಗಳು ಸಂಚರಿಸಿದ್ದವು ಮತ್ತು ಮಾರ್ಚ್ 31ರಂದು ಚೀನಾದ ಕಾಸ್ಕೋ ಸಂಸ್ಥೆಯ ಎರಡು ಹಡಗುಗಳು ಸೇರಿದಂತೆ ಮೂರು ಹಡಗುಗಳು ಹಾದುಹೋದಾಗ ಬೀಜಿಂಗ್ ಕೃತಜ್ಞತೆ ಸಲ್ಲಿಸಿತ್ತು. ಕನಿಷ್ಠ 8 ಭಾರತೀಯ ಧ್ವಜದ ಎಲ್ಪಿಜಿ ಟ್ಯಾಂಕರ್ಗಳು ಹಾಗೂ ಏಪ್ರಿಲ್ 3ರಂದು ಫ್ರಾನ್ಸ್ನ ಸಿಎಮ್ಎ ಸಿಜಿಎಮ್ ಸಂಸ್ಥೆಯ ಕಂಟೇನರ್ ಹಡಗು (ಇದು ದಾಟಿದ ಮೊದಲ ಪಾಶ್ಚಾತ್ಯ ಹಡಗು), ಮೂರು ಒಮಾನ್ ಮತ್ತು ಒಂದು ಜಪಾನ್ ದೇಶದ ಗ್ಯಾಸ್ ಕ್ಯಾರಿಯರ್ ಜಲಸಂಧಿಯನ್ನು ದಾಟಿದ್ದವು.
ಜಲಸಂಧಿಯ ಮುಚ್ಚುವಿಕೆಯ ಭೀತಿಯಿಂದಾಗಿ ಸೌದಿ ಅರೇಬಿಯಾ ದಿನಕ್ಕೆ 50 ಲಕ್ಷ ಬ್ಯಾರೆಲ್ ಸಾಮರ್ಥ್ಯದ 1,200 ಕಿಮೀ ಉದ್ದದ ‘ಈಸ್ಟ್-ವೆಸ್ಟ್ ಕಚ್ಚಾ ತೈಲ ಪೈಪ್ಲೈನ್’ ಅನ್ನು ಅಭಿವೃದ್ಧಿಪಡಿಸಿದೆ ಮತ್ತು ಯುಎಇ ತನ್ನ ತೈಲಕ್ಷೇತ್ರಗಳನ್ನು ಫುಜೈರಾ ಬಂದರಿಗೆ ಸಂಪರ್ಕಿಸುವ 15 ಲಕ್ಷ ಬ್ಯಾರೆಲ್ ಸಾಮರ್ಥ್ಯದ ಪೈಪ್ಲೈನ್ ನಿರ್ಮಿಸಿದೆ. ಆದರೆ ಈ ಪರ್ಯಾಯ ಮಾರ್ಗಗಳನ್ನು ಬಳಸಿದರೂ ಜಾಗತಿಕ ತೈಲ ಪೂರೈಕೆಯಲ್ಲಿ ದಿನಕ್ಕೆ 80ರಿಂದ 100 ಲಕ್ಷ ಬ್ಯಾರೆಲ್ಗಳಷ್ಟು ಭಾರೀ ಕುಸಿತ ಉಂಟಾಗುತ್ತದೆ. ಅದರಲ್ಲೂ ಫುಜೈರಾ ಬಂದರಿನ ಮೇಲೂ ಡ್ರೋನ್ ದಾಳಿಗಳು ನಡೆದು ಪೂರೈಕೆಗೆ ಸಂಕಷ್ಟ ಒದಗಿ ಬಂದಿತ್ತು.
ಜೂನ್ 17ರಂದು ಅಮೆರಿಕ ಮತ್ತು ಇರಾನ್ ನಡುವೆ ಸಹಿ ಮಾಡಲಾಗಿದ್ದ MoU ಈಗ ಸಂಪೂರ್ಣವಾಗಿ ಮುರಿದುಬಿದ್ದಿದೆ. ಅಮೆರಿಕ ಇರಾನ್ ಮೇಲಿನ ಕಡಲ ದಿಗ್ಬಂಧನವನ್ನು ತೆಗೆದುಹಾಕಿ, ತೈಲ ರಫ್ತಿಗೆ ನಿರ್ಬಂಧ ವಿನಾಯಿತಿ ನೀಡಿ, ಇರಾನ್ನ ಫ್ರೀಜ್ ಆಗಿದ್ದ ಹಣವನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿತ್ತು. ಪ್ರತಿಯಾಗಿ ಇರಾನ್ 60 ದಿನಗಳ ಕಾಲ ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ನಿಯಮವಿತ್ತು. ಇರಾನ್ ಇದನ್ನು ತನ್ನ ಕರಾವಳಿಯ ಉದ್ದಕ್ಕೂ ಹೊಸ ಮಾರ್ಗದ ಮೂಲಕ ನಿರ್ವಹಿಸಲು ಯೋಜಿಸಿದರೆ, ಅಮೆರಿಕ ನೌಕಾಪಡೆಯು ಒಮಾನ್ ಕರಾವಳಿಯ ಉದ್ದಕ್ಕೂ ಪರ್ಯಾಯ ಮಾರ್ಗವನ್ನು ಸಿದ್ಧಪಡಿಸಿತು. ಇದನ್ನು ಇರಾನ್ ಒಪ್ಪಂದದ ಉಲ್ಲಂಘನೆ ಎಂದು ಕರೆದರೆ, ಅಮೆರಿಕದ ಮಾರ್ಗವನ್ನು ಬಳಸಿದ ಮೂರು ಟ್ಯಾಂಕರ್ಗಳ ಮೇಲೆ ಇರಾನ್ ದಾಳಿ ನಡೆಸಿತು. ಇದರಿಂದ ಕೆರಳಿದ ಟ್ರಂಪ್ “ಕದನ ವಿರಾಮ ಅಂತ್ಯಗೊಂಡಿದೆ” ಎಂದು ಘೋಷಿಸಿ ಇರಾನ್ ಮೇಲೆ ನೂರಾರು ವೈಮಾನಿಕ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಇರಾನ್ನ ಐಆರ್ಸಿಸಿ ಜಲಸಂಧಿಯನ್ನು ʼಮುಂದಿನ ಆದೇಶದವರೆಗೆʼ ಮುಚ್ಚಿ ಅಮೆರಿಕದ ಗಲ್ಫ್ ನೆಲೆಗಳು ಮತ್ತು ಜೋರ್ಡಾನ್ ಮೇಲೆ ಪ್ರತಿದಾಳಿ ನಡೆಸಿತು.

ಈ ಮಧ್ಯೆ, ಕತಾರ್ ದೇಶವು ತನ್ನ ಭೂಪ್ರದೇಶ, ಜೋರ್ಡಾನ್ ಮತ್ತು ಇತರ ಗಲ್ಫ್ ದೇಶಗಳ ಮೇಲೆ ಇರಾನ್ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ತೀವ್ರವಾಗಿ ಖಂಡಿಸಿತು. ಕ್ಷಿಪಣಿಗಳ ಅವಶೇಷಗಳು ಬಿದ್ದಿದ್ದರಿಂದ ಕತಾರ್ನಲ್ಲಿ ಮೂವರು ಗಾಯಗೊಂಡಿದ್ದರು. ಕತಾರ್ ವಿದೇಶಾಂಗ ಸಚಿವಾಲಯವು ಪರಿಸ್ಥಿತಿ ತಿಳಿಯಾಗುವವರೆಗೆ ಪರ್ಷಿಯನ್ ಗಲ್ಫ್ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಹಡಗು ಮಾಲೀಕರಿಗೆ ಸೂಚಿಸಿತು.
“ಹಾರ್ಮುಜ್ ಜಲಸಂಧಿಯು ಇರಾನ್ಗೆ ಹತ್ತಾರು ಪರಮಾಣು ಬಾಂಬ್ಗಳಿಗಿಂತಲೂ ಹೆಚ್ಚು ಶಕ್ತಿಶಾಲಿ ಮತ್ತು ಕಾರ್ಯತಂತ್ರದ ಅತ್ಯಂತ ಪ್ರಮುಖ ಅಸ್ತ್ರವಾಗಿದೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಮಾತುಕತೆಗಿಂತಲೂ ಹೆಚ್ಚಾಗಿ ಹಾರ್ಮುಜ್ ಜಲಸಂಧಿಯ ಮೇಲಿನ ತನ್ನ ಸಾರ್ವಭೌಮತ್ವ ಮತ್ತು ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಿದೆ. ಕಳೆದ 25 ವರ್ಷಗಳಿಂದ ಅಮೆರಿಕ ಮತ್ತು ಇರಾನ್ ನಡುವಿನ ಅತಿ ದೊಡ್ಡ ವಿವಾದವಾಗಿದ್ದ ಪರಮಾಣು ವಿಷಯವನ್ನು ಇರಾನ್ ಚಾಣಾಕ್ಷತನದಿಂದ ಮುಂದಿನ ಸುತ್ತಿನ ಮಾತುಕತೆಗೆ ತಳ್ಳಿ, ಜಲಸಂಧಿಯ ವಿಷಯವನ್ನು ಮುಂಚೂಣಿಗೆ ತಂದಿದೆ” ಎಂಬುದು ಇರಾನ್ನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ಸಲಹೆಗಾರ ಮತ್ತು ಐಆರ್ಸಿಸಿ ಮಾಜಿ ಕಮಾಂಡರ್ ಮೊಹ್ಸೇನ್ ರೆಜಾಯಿ ಅವರ ಅಭಿಪ್ರಾಯವಾಗಿದೆ.
ಅಮೆರಿಕ ಈಗ ಇರಾನ್ನ ಕ್ಷಿಪಣಿಗಳು ಅಥವಾ ಹಿಜ್ಬುಲ್ಲಾ, ಹಮಾಸ್, ಹೌತಿಗಳೊಂದಿಗಿನ ಸಂಬಂಧದ ಬಗ್ಗೆ ಮಾತನಾಡುತ್ತಿಲ್ಲ, ಬದಲಿಗೆ ಕೇವಲ ಜಲಸಂಧಿಯ ಮುಕ್ತ ಸಂಚಾರದ ಬಗ್ಗೆ ಮಾತನಾಡುತ್ತಿದೆ. ಇರಾನ್ ತಾನು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಆಯಕಟ್ಟಿನ ಜಯ ಸಾಧಿಸಿರುವುದಾಗಿ ನಂಬಿದೆ. ಏಕೆಂದರೆ ಜಲಸಂಧಿಯನ್ನು ಮುಚ್ಚುವ ಸಾಮರ್ಥ್ಯವೇ ಅಮೆರಿಕವನ್ನು ಮಾತುಕತೆಗೆ ಬರುವಂತೆ ಮಾಡಿತ್ತು. ಹಾಗಾಗಿ ಅಮೆರಿಕ ಒಮಾನ್ ಮೂಲಕ ಪರ್ಯಾಯ ಮಾರ್ಗ ನಿರ್ಮಿಸಿದರೆ ಇರಾನ್ಗೆ ತನ್ನ ಬಲವಾದ ಹಿಡಿತ ಕೈತಪ್ಪುತ್ತದೆಂಬ ಭೀತಿ ಇರಬಹುದು.
ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಾವು ಹಾರ್ಮುಜ್ ಜಲಸಂಧಿಯನ್ನು ನಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದೇವೆ ಮತ್ತು ಜಾಗತಿಕ ಹಡಗು ಸಂಚಾರವನ್ನು ರಕ್ಷಿಸಿದ್ದಕ್ಕಾಗಿ ನಮಗೆ ಸೂಕ್ತ ಪರಿಹಾರ ಸಿಗಬೇಕು. ಇರಾನ್ನವರು 47 ವರ್ಷಗಳಿಂದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ” ಎಂದು ಅತ್ಯಂತ ಕಠಿಣ ಮತ್ತು ಆಕ್ರಮಣಕಾರಿ ಹೇಳಿಕೆ ನೀಡಿದ್ದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಇರಾನ್ನ ಸುಪ್ರೀಂ ಲೀಡರ್ ಆಪ್ತ ಸಲಹೆಗಾರ ಅಲಿ ಅಕ್ಬರ್ ವೆಲಾಯತಿ, “ಜಲಸಂಧಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ದೇಶವನ್ನು ಪ್ರೀತಿಸುವ ಯಾವುದೇ ಇರಾನಿಯನ್ ಇದಕ್ಕೆ ಒಪ್ಪುವುದಿಲ್ಲ. ಭವಿಷ್ಯದಲ್ಲಿ ಶತ್ರುಗಳಿಗೆ ಶರಣಾಗದಿರಲು ಈಗಲೇ ಜಲಸಂಧಿಯನ್ನು ರಕ್ಷಿಸುವುದು ಅಗತ್ಯ” ಎಂದು ತಿರುಗೇಟು ನೀಡಿದರು.

ಅಮೆರಿಕ ಜಗತ್ತಿನ ಅತ್ಯಂತ ಶಕ್ತಿಶಾಲಿ ನೌಕಾಪಡೆಯನ್ನು ಹೊಂದಿದ್ದರೂ, ಹಾರ್ಮುಜ್ ಜಲಸಂಧಿಯನ್ನು ದೀರ್ಘಕಾಲದವರೆಗೆ ತನ್ನ ಸಂಪೂರ್ಣ ಹತೋಟಿಯಲ್ಲಿಡುವುದು ಮಿಲಿಟರಿ, ಭೌಗೋಳಿಕ ಮತ್ತು ಆರ್ಥಿಕವಾಗಿ ಅಷ್ಟು ಸುಲಭವಲ್ಲ. ಏಕೆಂದರೆ ಇರಾನ್ ಈ ಜಲಸಂಧಿಯ ಉತ್ತರ ಕರಾವಳಿ ಮತ್ತು ಕ್ಯೂಶಮ್, ಹಾರ್ಮುಜ್ನಂತಹ ಆಯಕಟ್ಟಿನ ದ್ವೀಪಗಳನ್ನು ನಿಯಂತ್ರಿಸುತ್ತದೆ. ಇರಾನ್ ತನ್ನ ಸುದೀರ್ಘ ಕರಾವಳಿಯುದ್ದಕ್ಕೂ ಕ್ಷಿಪಣಿ ಲಾಂಚರ್ಗಳು, ಡ್ರೋನ್ಗಳನ್ನು ನಿಯೋಜಿಸಿರುವುದರಿಂದ ಅಮೆರಿಕನ್ ಯುದ್ಧನೌಕೆಗಳಿಗೆ ಮತ್ತು ಏರ್ಕ್ರಾಫ್ಟ್ ಕ್ಯಾರಿಯರ್ಗಳಿಗೆ ಇಲ್ಲಿ ಕಾರ್ಯಾಚರಣೆ ನಡೆಸುವುದು ದೊಡ್ಡ ಸವಾಲಾಗಿದೆ.
ಇದಲ್ಲದೆ, ಮಿಲಿಟರಿ ಹಡಗುಗಳನ್ನು ಕಾವಲಿಟ್ಟರೂ ವಿಮಾ ವೆಚ್ಚ ಹೆಚ್ಚಾಗುವುದರಿಂದ ವಾಣಿಜ್ಯ ಸಂಸ್ಥೆಗಳು ಬರಲು ಹೆದರುತ್ತವೆ. ಸೌದಿ ಅರೇಬಿಯಾ, ಕತಾರ್, ಯುಎಇ, ಕುವೈತ್ ಮತ್ತು ಬಹ್ರೇನ್ನಂತಹ ಅಮೆರಿಕದ ಮಿತ್ರ ರಾಷ್ಟ್ರಗಳೂ ಕೂಡ ತಮ್ಮ ಸ್ವಂತ ತೈಲ ಮೂಲಗಳಿಗೆ ಮತ್ತು ಮೂಲಸೌಕರ್ಯಗಳಿಗೆ ಧಕ್ಕೆಯಾಗುವ ಭೀತಿಯಿಂದ ಅಮೆರಿಕದ ನೇರ ಸೇನಾ ಆಡಳಿತವನ್ನು ಪೂರ್ಣವಾಗಿ ಬೆಂಬಲಿಸುತ್ತಿಲ್ಲ. ಅಲ್ಲದೆ ಇಂತಹ ದೀರ್ಘಕಾಲೀನ ಕಾರ್ಯಾಚರಣೆಗೆ ಅಮೆರಿಕಕ್ಕೂ ಭಾರೀ ಆರ್ಥಿಕ ವೆಚ್ಚವಾಗುತ್ತದೆ. ಹಾಗಾಗಿ, ಈ ಜಲಸಂಧಿಯ ಹೋರಾಟವು ಇಡೀ ವಿಶ್ವದ ಆರ್ಥಿಕತೆಯ ಭವಿಷ್ಯವನ್ನು ನಿರ್ಧರಿಸುವ ಹಂತ ತಲುಪಿದೆ.




