ಹೀಗಿದ್ದರು… ಮೂಡುಬಾಗಿಲು ರಾಮಪ್ಪನವರು

Date:

ತೀರ್ಥಹಳ್ಳಿಯ ಸಮಾಜವಾದಿ ಬದುಕಿನ ಕೊನೆಯ ಕೊಂಡಿಯಂತಿದ್ದ,  ಶಾಂತವೇರಿ ಗೋಪಾಲಗೌಡರ ಕಾಲದ ಕೆಂದಾಳಬೈಲಿನ ಮೂಡುಬಾಗಿಲು ರಾಮಪ್ಪನವರು ಇತ್ತೀಚೆಗೆ ತೀರಿಹೋದರು. ತಾವು ಉಡುತ್ತಿದ್ದ ಆ ಬಿಳಿಯ ಅಡ್ಡ ಪಂಚೆ ಮತ್ತು ಅರ್ಧ ತೋಳಿನ ಬಿಳಿಯ ಅಂಗಿಯಷ್ಟೇ ಅವರ ಬದುಕು ಕೂಡ ಶುಭ್ರವಾದುದು.

ಇದೀಗ ಅಭ್ಯರ್ಥಿಗಳಾಗಿ ಪ್ರಚಾರದಲ್ಲಿ ತೊಡಗಿರುವವರು ಬೂತ್ವಾರು ಭಾಷಣಗಳನ್ನು ಮಾಡುತ್ತಾರೆ. ಒಂದು ಬೂತ್‌ನಿಂದ ಮತ್ತೊಂದು ಬೂತ್‌ಗೆ ಹೋಗುವಾಗ ಚಾಚೂತಪ್ಪದೆ ಈ ಹಿಂದೆ ಮಾಡಿದ್ದ ಭಾಷಣದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಅದೇ ಭಾಷಣವನ್ನು ಭಜನೆಯಂತೆ ಪಠಿಸುತ್ತಾ ಹೋಗುವುದು ರಾಜಕಾರಣದ ಲಕ್ಷಣವಾಗಿದೆ. ಆದರೆ ನನ್ನ ನಾಯಕ ಶಾಂತವೇರಿ ಗೋಪಾಗೌಡರು, ಒಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾಡಿದ್ದ ಭಾಷಣವನ್ನು ಮತ್ತೊಂದು ಸಭೆಯಲ್ಲಿ ಮಾಡುತ್ತಿರಲಿಲ್ಲ. ಬೇರೆ ಬೇರೆಯದೇ ಭಿನ್ನ ವಿಭಿನ್ನ ವಿಷಯಗಳನ್ನು ಎತ್ತಿಕೊಂಡು ಮಾತಾಡುತ್ತಿದ್ದರು. ನೂರಾರು ಹಳ್ಳಿಗಳ ವೈವಿಧ್ಯಮಯ ಸಮಸ್ಯೆಯ ಆಳವನ್ನು ತಿಳಿದುಕೊಂಡೇ ಮಾತಾಡುತ್ತಿದ್ದರು. ಕೇಳುಗರು ಗೌಡರ ಭಾಷಣ ಕೇಳಲು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಾ ತರಬೇತುಗೊಳ್ಳುತ್ತಿದ್ದರು. ಹಳ್ಳಿಯೊಂದರ ನೀರಿನ ಹಾಹಾಕಾರವನ್ನು ಅಂತಾರಾಷ್ಟ್ರೀಯ ನದಿನೀರಿನ ವ್ಯಾಜ್ಯಕ್ಕೆ ಸಮೀಕರಿಸುತ್ತಿದ್ದರು. ಕಾಂಗ್ರೆಸ್ಸಿನ ಘಟಾನುಘಟಿ ಮುಖಂಡರು ಕೂಡ ಗೌಡರ ವಿಚಾರಪೂರ್ಣ ಭಾಷಣ ಕೇಳಲು ಹಾತೊರೆಯುತ್ತಿದ್ದರು.

- Advertisement -

ಮಲೆನಾಡು ಭಾಗಕ್ಕೆ ‘ಶಿವಶಂಕರ ಟ್ರಾನ್ಸ್‌ಪೋರ್ಟ್ ಕಂಪೆನಿ’ ಎಂಬ ಹೆಸರಿನ ಬಸ್ಸುಗಳ ಮೂಲಕ ಚಿರಪರಿಚಿತರಾದ ಕುಂದಾದ್ರಿಯ ಶ್ರೀನಿವಾಸಗೌಡರು ಪ್ರಭಾವಶಾಲಿಗಳು. ಬಹುದೊಡ್ಡ ಹಿಡುವಳಿದಾರರು. ಎಸ್ಟೇಟ್ ಮಾಲೀಕರು. ಇವರ ಹಾವ ಭಾವ, ಮಾತಿನ ಶೈಲಿ, ಬಳಸುತ್ತಿದ್ದ ಇಂಗ್ಲಿಷು, ಮನೆಯಲ್ಲಿ ಇವರು ಶುದ್ಧತೆಗೆ ಕೊಡುತ್ತಿದ್ದ ಮಹತ್ವದ ದೆಸೆಯಿಂದ ಇವರನ್ನು ಇಂಗ್ಲಿಷ್ ಗೌಡರು ಎಂದೂ ಕರೆಯುತ್ತಿದ್ದರು. ರಾಮಪ್ಪನವರ ತಂದೆ ಕಾಂಗ್ರೆಸ್ಸಿನ ಮುಖ್ಯ ನಾಯಕರಲ್ಲಿ ಒಬ್ಬರು. ಇಂತಹ ಕಟ್ಟಾ ಕಾಂಗ್ರೆಸ್ ವ್ಯಕ್ತಿ ಕೆಂದಾಳಬೈಲಿಗೆ ಗೋಪಾಲಗೌಡರು ಚುನಾವಣಾ ಭಾಷಣ ಮಾಡಲು ಬರುವ ಸಮಯವನ್ನು ಬೇರೆಯವರಿಂದ ಕೇಳಿ ತಿಳಿದು ತಪ್ಪದೆ ಹಾಜರಾಗುತ್ತಿದ್ದರು. ಗೌಡರ ಮನಮುಟ್ಟುವ ಭಾಷಣ ಕೇಳಿ ಮನದುಂಬಿಸಿಕೊಂಡು ಮರಳುತ್ತಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೌಡರ ಸಭೆಗೆ ನೇರವಾಗಿ ಬರಲು ಹೆದರುತ್ತಿದ್ದರು. ಪಕ್ಷ ವಿರೋಧಿ ಚಟುವಟಿಕೆಯ ಅಪವಾದಕ್ಕೆ ಗುರಿಯಾಗುವ ಭಯ ಅವರುಗಳಿಗೆ ಇತ್ತು. ಗಿಡ ಗಂಟಿಗಳ ಮರೆಯಲ್ಲಿ ಕದ್ದು ಕೂತು ಭಾಷಣ ಕೇಳಿಸಿಕೊಂಡು ಹೋಗುತ್ತಿದ್ದರು. ಸೋಷಲಿಸ್ಟ್ ಪಕ್ಷದ ಕಾರ್ಯಕರ್ತರಂತೂ ಬೆಂಕಿ ಹಾಕಿಕೊಂಡು ಗೌಡರ ಭಾಷಣಕ್ಕಾಗಿ ರಾತ್ರಿ ಹನ್ನೆರಡಾದರೂ ಕಾದು ಕುಳಿತುಕೊಳ್ಳುತ್ತಿದ್ದರು. ಆ ಕಾಲದಲ್ಲಿ ಮನಸ್ಸಿಗೆ ಹಿಡಿಸುವ ಭಾಷಣ ಮಾಡುತ್ತಾ ಮತದಾರರನ್ನು ಓಲೈಸುತ್ತಾ ಹೋಗುವ ಕಲೆಯಲ್ಲಿ ಗೌಡರನ್ನು ಮೀರಿಸುವುದು ಸಾಧ್ಯವೇ ಇರಲಿಲ್ಲ. ಒಂದೊಂದು ಮತ ಕೇಂದ್ರದಲ್ಲಿ ಒಂದೊಂದು ವಿಷಯಗಳನ್ನಿಟ್ಟುಕೊಂಡು ಮಾತಾಡುತ್ತಿದ್ದ ಗೌಡರ ಭಾಷಣದಿಂದ ಪ್ರಭಾವಿತರಾದ ಸೋಷಲಿಸ್ಟ್ ಪಕ್ಷದ ಕಾರ್ಯಕರ್ತರು ಹಳ್ಳಿಗಳಲ್ಲಿ ಚುನಾವಣೆ ನಡೆಸುವಲ್ಲಿ ಸಮರ್ಥರಾಗುತ್ತಿದ್ದರು. ಆದರೆ ಇಂದು ಚುನಾವಣೆ ಸಮಯದಲ್ಲಿ ಮತದಾರರು ರಾತ್ರಿ ಹನ್ನೆರಡಾದರೂ ಕಾಯುತ್ತಾರೆ. ವ್ಯತ್ಯಾಸವೆಂದರೆ ಇಂದು ಕಾಯುವುದು ವಿಚಾರಪೂರ್ಣ ಚುನಾವಣಾ ಪ್ರಚಾರದ ಭಾಷಣಗಳಿಗಲ್ಲ; ಹಣ ಹಂಚುವವರು ಎಷ್ಟು ಹೊತ್ತಿಗೆ ತಮ್ಮ ಕಡೆ ಬರುತ್ತಾರೆ ಎಂಬುದಕ್ಕೆ. ಗೌಡರ ಕಾಲದಲ್ಲಿ ಹಣವೆಂಬುದು ಇರಲೇ ಇಲ್ಲ!

ಇದನ್ನು ಓದಿದ್ದೀರಾ?: ಕೆ.ಟಿ. ಶಿವಪ್ರಸಾದ್‌ ಎಂಬ ಕಲಾವಿದನೊಡನೆ ಕಲರವ

ತಮ್ಮ ಎಂಭತ್ತೇಳು ವರ್ಷಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಸವೆಸಿರುವ ಮೂಡುಬಾಗಿಲು ರಾಮಪ್ಪನವರು ಅಚಾನಕ್ಕಾಗಿ ಶಿವಮೊಗ್ಗದ ಕಾರ್ಯಕ್ರಮವೊಂದರಲ್ಲಿ ಸಿಕ್ಕರು. ಆಗುಂಬೆ ಹೋಬಳಿಯ ಸಂಪೂರ್ಣ ಜವಾಬುದಾರಿಯನ್ನು ಹೊತ್ತು ಗೋಪಾಲಗೌಡರ ಚುನಾವಣೆಯನ್ನು ಯಶಸ್ವಿಯಾಗಿ ಪೂರೈಸಿದ ರಾಮಪ್ಪನವರನ್ನು ಮಾತಾಡಿಸಿದಾಗ ಹಳೆಯದನ್ನು ಮೆಲುಕು ಹಾಕತೊಡಗಿದರು. ಇವರ ಮೆಲುಕು ಹಾಕುವ ಉಲ್ಲಾಸಕ್ಕೆ ವಯಸ್ಸು ಹಿಂದೆ ಸರಿಯಿತು. ಸೋಷಲಿಸ್ಟ್ ಪಕ್ಷದ ವತಿಯಿಂದ ತಾಲೂಕು ಬೋರ್ಡ್ ಪ್ರವೇಶಿಸಿದ್ದು ಮಾತ್ರವಲ್ಲ, ರೈತ ಚಳವಳಿ ಮುಂದುವರಿಯಲು ಇವರ ಕೊಡುಗೆ ಅಪಾರವಾಗಿತ್ತು. ಈಗಿನ ಚುನಾವಣೆಗಳು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿರುವ ಬಗೆಗಿನ ನೋವು ಅವರನ್ನು ಕಾಡುತ್ತಿತ್ತು.

ಎಂಭತ್ತರ ದಶಕದ ಆರಂಭದಲ್ಲಿ ಆಗುಂಬೆ ಸಮೀಪದ ದಟ್ಟ ಕಾನನದೊಳಗೆ ಹೆಬ್ಬಂಡೆಯಾಕಾರದ ಆಕಾಶದ ಸನಿಹಕ್ಕೆ ಬೆಳೆದು ನಿಂತ ಗುಳು ಮಾವಿನ ಮರಗಳು ದರೆಗುರುಳುತ್ತವೆ. ಅದರ ತೆಪ್ಪೆ ಅಥವಾ ಸಿಪ್ಪೆ ಸುಗಂಧದ ಸುವಾಸನೆಯನ್ನು ಹೊರ ಸೂಸುತ್ತವೆ ಎಂಬ ಕಾರಣಕ್ಕಾಗಿ ಅರಣ್ಯ ಗುತ್ತಿಗೆದಾರರಿಂದ ಈ ಕುಕೃತ್ಯ ನಡೆಯುತ್ತದೆ. ತೀರ್ಥಹಳ್ಳಿಯ ಸಂಸ್ಕೃತಿ ಮಂದಿರದ ಆವರಣದಲ್ಲಿ ಬಹುದೊಡ್ಡ ರೈತ ಸಭೆ ನಡೆದಾಗ ತನ್ನೂರಿನ ಗುಳುಮಾವಿನ ಮರಗಳು ಕಾಣೆಯಾಗುತ್ತಿರುವುದನ್ನು ನವಿರಾಗಿ ವಿವರಿಸುತ್ತಿದ್ದ ರೀತಿ ಇನ್ಬೂ ಕಿವಿಗಪ್ಪಳಿಸುತ್ತಿದೆ. ನಾನು ಎರಡನೆ ಪಿಯುಸಿಯಲ್ಲಿ ಓದುತ್ತಿದ್ದಾಗ ನಡೆದ ಅಂದಿನ ಸಭೆಯಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಎಚ್.ಎಸ್. ರುದ್ರಪ್ಪ, ಎನ್.ಡಿ. ಸುಂದರೇಶ್ ಅವರು ಮೂಡುಬಾಗಿಲು ರಾಮಪ್ಪನವರಿಗೆ ಬೆಂಬಲವಾಗಿ ನಿಂತ ಬಗೆಯೂ ಕೂಡ ಅಮೋಘವಾಗಿತ್ತು. ಕಡಿದಾಳು ಶಾಮಣ್ಣನವರು ಅಂದು ತಾಲೂಕು ರೈತ ಸಂಘದ ಅದ್ಯಕ್ಷರಾಗಿ ಇಡೀ ಸಭೆಯ ನೇತೃತ್ವ ವಹಿಸಿದ್ದರು.

WhatsApp Image 2026 07 02 at 19.24.22
ಸಭೆಯೊಂದರಲ್ಲಿ ಮೂಡುಬಾಗಿಲು ರಾಮಪ್ಪನವರು

ನಲವತ್ತೈದು ವರ್ಷಗಳ ಹಿಂದೆ ರಾಮಪ್ಪನವರ ಉಲ್ಲಾಸ-ಉತ್ಸಾಹ ಹೇಗಿತ್ತೋ, 2017ರಲ್ಲಿ ಸಿಕ್ಕಿದ್ದಾಗಲೂ ಹಾಗೇ ಇತ್ತು. ಮತ್ತೆ 2020ರ ಮಾರ್ಚ್ ಹದಿನಾಲ್ಕರ ಸಂಜೆ ಶಾಂತವೇರಿ ಗೋಪಾಲಗೌಡರ ಜನ್ಮ ದಿನಾಚರಣೆಯ ಅಂಗವಾಗಿ ‘ವಿಹಂಗಮ’ದಲ್ಲಿ ಮಾಡಿದ್ದ ಭಾಷಣದಲ್ಲೂ ಅದೇ ಉತ್ಸಾಹ ತುಂಬಿಕೊಂಡಿತ್ತು. “ಗೋಪಾಲಗೌಡರು ಬದುಕಿದ್ದಿದ್ದರೆ ಜಿಲ್ಲಾಧಿಕಾರಿಯನ್ನು ಒಂಟಿ ಕಾಲಿನ ಮೇಲೆ ನಿಲ್ಲಿಸುತ್ತಿದ್ದರು. ಈಗಿನ ಮಂತ್ರಿ ಶಾಸಕರಿಗೆ ಅಂತಹ ತಾಕತ್ತು ಇದೆಯೇ” ಎಂದು ಪ್ರಶ್ನಿಸುತ್ತಿದ್ದಾಗ ಇಡೀ ಸಭೆ ಶಾಂತವಾಗಿ ಆಲಿಸುತ್ತಿತ್ತು. ಅಂದು ಸಂಜೆ ಆಡಿದ್ದ ಅಷ್ಟೂ ಮಾತುಗಳು ಸಂಗ್ರಹಯೋಗ್ಯವಾಗಿದ್ದವು.

ನಂತರದ ದಿನಗಳಲ್ಲಿ ಅವರ ಮೂಡುಬಾಗಿಲಿನ ಮನೆಗೆ ನಾನೂ, ಕಡಿದಾಳು ದಯಾನಂದ್ ಮತ್ತು ಕಂಬ್ಳಿಗೆರೆ ರಾಜೇಂದ್ರ ಹೋದಾಗ, ಅರವತ್ತು ಮತ್ತು ಎಪ್ಪತ್ತರ ದಶಕದ ರಾಜಕಾರಣವನ್ನು ಅವರು ಬಿಚ್ಚಿಡುತ್ತಿದ್ದ ರೀತಿಗೆ ಇಡೀ ಕುಂದಾದ್ರಿಯ ತಪ್ಪಲು ಮೌನವಾಗುತ್ತಿತ್ತು. ಒಮ್ಮೆ ನಾನೂ ಮತ್ತು ರಾಜೇಂದ್ರ ಅವರನ್ನು ಮಾತಾಡಿಸಲು ಹೋದಾಗ ಶಾಂತವೇರಿ ಗೋಪಾಲಗೌಡರ ವಿಷಯವನ್ನೆತ್ತಿಕೊಂಡರು. ಮಾತಾಡುತ್ತಾ ಮಾತಾಡುತ್ತಾ ಭಾವುಕರಾದರು. ಉತ್ಸಾಹದ ಬುಗ್ಗೆಯಾದರು. ಒಂದೊಂದೇ ಘಟನೆಗಳನ್ನು ವಿವರಿಸತೊಡಗಿದರು. ಗೋಪಾಲಗೌಡರ ವ್ಯಕ್ತಿತ್ವಕ್ಕೆ ಮೆರಗು ನೀಡುವಂತಹ ಘಟನೆಯೊಂದನ್ನು ವಿವರಿಸುತ್ತಿದ್ದಾಗ ಭಾವನೆಗಳು ಬರಿಯ ಮಾತಾಗದೆ ಕಣ್ಣೀರಿನ ಜೊತೆ ಸೇರಿಕೊಂಡವು. ಕೈಕಾಲುಗಳು ಸೆಟೆದುಕೊಂಡವು. ಉಸಿರು ಮೇಲೆ ಕೆಳಗಾಗತೊಡಗಿತು. ಮತ್ತೆ ಮತ್ತೆ ಏನೋ ಮುಖ್ಯವಾದದ್ದನ್ನು ಹೇಳಲು ಪ್ರಯತ್ನಿಸಿದಾಗ ಇಡೀ ದೇಹ ಅದಕ್ಕೆ ಅವಕಾಶ ನೀಡದೆ ಸತಾಯಿಸತೊಡಗಿತು. ಕೈ ಸನ್ನೆ ಬಾಯಿ ಸನ್ನೆಯ ಮೊರೆ ಹೋದರು. ಪರಿಸ್ಥಿತಿ ಗಂಭೀರವಾಗತೊಡಗಿತು. ತನ್ನ ತಂದೆಗೆ ಏನಾಯಿತೋ ಏನೋ ಎಂದು ಅವರ ಪುತ್ರಿ ಶುಭಾ ದಿಗಿಲುಗೊಂಡರು. ರಾಮಪ್ಪನವರ ಸಹೋದರರು ಹಾಗೂ ಮಗಳ ಸಹಾಯದೊಂದಿಗೆ ಎತ್ತಿಕೊಂಡು ಹಾಸಿಗೆಯಲ್ಲಿ ಮಲಗಿಸಿದೆವು. ಆ ನಂತರದ ದಿನಗಳಲ್ಲಿ ಅವರ ಆರೋಗ್ಯ ಕ್ಷೀಣಿಸುತ್ತಾ ಹೋಯಿತು. ಸಮಾಜವಾದಕ್ಕೆ ಸಂಬಂಧಿಸಿದ ಎರಡೋ ಮೂರೋ ಕಾರ್ಯಕ್ರಮಗಳಿಗೆ ಅತ್ಯಂತ ಪ್ರಯಾಸಪಟ್ಟು ಕರೆ ತಂದಿದ್ದ ನೆನಪು. ಮೊದಲಿನಂತೆ ಲೀಲಾಜಾಲವಾಗಿ ಮಾತಾಡುವುದು ಕಷ್ಟವಾಗತೊಡಗಿತು.

ಇದನ್ನು ಓದಿದ್ದೀರಾ?: ಕೆ.ವಿ. ಸುಬ್ಬಣ್ಣ, ಬಿಡದಿ, ಬಂಡವಳಿಗರ ಗಾಲ್ಫ್: ದಶಕಗಳ ಹಿಂದಿನ ಎಚ್ಚರಿಕೆ

1931ರಲ್ಲಿ ಕೆಂದಾಳಬೈಲಿನ ಮೂಡುಬಾಗಿಲಿನಲ್ಲಿ ಹುಟ್ಟಿದ ಎಂ.ಆರ್. ರಾಮಪ್ಪನವರು ತಮ್ಮ ತೊಂಭತ್ತೈದನೇ ವಯಸ್ಸಿನಲ್ಲಿ, ತಮ್ಮ ಮಗಳ ಮನೆ ಮಂಡಗದ್ದೆ ಸಮೀಪದ ಹಳಗದಲ್ಲಿ ನಿಧನರಾದರು. ತೀರ್ಥಹಳ್ಳಿಯ ಸಮಾಜವಾದಿ ಬದುಕಿನ ಕೊನೆಯ ಕೊಂಡಿ ಲೋಕ ತೊರೆದಿದೆ. ತನ್ನೊಳಗೆ ಅಡಗಿಸಿಕೊಂಡಿದ್ದ ಇನ್ನೂ ನೂರಾರು ವಿಷಯಗಳನ್ನು ಹೆಕ್ಕಿ ತೆಗೆವ ಪ್ರಯತ್ನದಲ್ಲಿ ನಾನೂ ಮತ್ತು ನನ್ನ ಗೆಳೆಯರು ಇರುವಾಗಲೇ ಹೊರಟು ಹೋಗಿದ್ದಾರೆ. ಸಾಕಷ್ಟು ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ತಾವು ಉಡುತ್ತಿದ್ದ ಆ ಬಿಳಿಯ ಅಡ್ಡ ಪಂಚೆ ಮತ್ತು ಅರ್ಧ ತೋಳಿನ ಬಿಳಿಯ ಅಂಗಿಯಷ್ಟೇ ಅವರ ಬದುಕು ಕೂಡ ಶುಭ್ರವಾದುದು. ಹೋಗಿ ಬನ್ನಿ ರಾಮಪ್ಪನವರೆ…

Nempe Devaraj
ನೆಂಪೆ ದೇವರಾಜ್
+ posts

ಪತ್ರಕರ್ತ, ಲೇಖಕ, ಸಂಘಟಕ, ಹೋರಾಟಗಾರ ಮತ್ತು ಕೃಷಿಕ

ಪೋಸ್ಟ್ ಹಂಚಿಕೊಳ್ಳಿ:

ನೆಂಪೆ ದೇವರಾಜ್
ನೆಂಪೆ ದೇವರಾಜ್
ಪತ್ರಕರ್ತ, ಲೇಖಕ, ಸಂಘಟಕ, ಹೋರಾಟಗಾರ ಮತ್ತು ಕೃಷಿಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ಸಾಫ್ಟ್‌ವೇರ್ ದೋಷ: ಹೈಕೋರ್ಟ್ ಮೆಟ್ಟಿಲೇರಿದ ಗೋವಾದ ನಾಗರಿಕನ ಹೋರಾಟ

ಉತ್ತರ ಗೋವಾದ ಸಾಂತಾಕ್ರೂಜ್ ಕ್ಷೇತ್ರದ ನಿವಾಸಿ, 41 ವರ್ಷದ ಪರೇಶ್ ಸಾಲ್ಗಾಂವ್ಕರ್...

‘ದಿಮಾಗಿ ನಕ್ಸಲ್’ ಟೀಕೆಗಳಿಗೆ ಬಗ್ಗದಿರಿ, ಹೋರಾಟ ಮುಂದುವರಿಸಿ: ಪರಿಸರವಾದಿಗಳಿಗೆ ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಓಕಾ ಕರೆ

ಪರಿಸರ ರಕ್ಷಣೆ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವ ಹೋರಾಟಗಾರರನ್ನು ‘ದಿಮಾಗಿ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ ಶಾಪವೇ?‌ – ಭಾಗ 2

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು...

ಮುಂಬೈ ಪ್ರತಿಭಟನೆ: ಸಿಜೆಪಿ ಆಯೋಜಕರು, 500ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲು

ಮುಂಬೈನ ಪ್ರಸಿದ್ಧ ಶಿವಾಜಿ ಪಾರ್ಕ್‌ನಲ್ಲಿ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ ಆರೋಪದ ಮೇಲೆ...