ಕಳೆದ ಹನ್ನೆರೆಡು ವರ್ಷಗಳಲ್ಲಿ ಸಿಬಿಐ, ಆರ್‌ಟಿಐ, ಇಡಿ, ಆದಾಯ ತೆರಿಗೆ ಇಲಾಖೆ ಮುಂತಾದ ಸಾರ್ವಜನಿಕ ಸಂಸ್ಥೆಗಳ ಜೊತೆಗೆ ಯುಎಪಿಎ ಎನ್ನುವ ಶಾಸನದ ಮೂಲಕ ಮೋದಿ ಮತ್ತು ಶಾ ತಮ್ಮ ಫ್ಯಾಸಿಸಂ ಆಡಳಿತವನ್ನು ಜಾರಿಗೊಳಿಸಿದ್ದಾರೆ. ಯುಎಪಿಎ ಶಾಸನವು ಮೋದಿ ನೇತೃತ್ವದ ಸರ್ಕಾರವು ತನ್ನ ರಾಜಕೀಯ, ಸೈದ್ಧಾಂತಿಕ ವಿರೋಧಿಗಳ ಶಕ್ತಿಯನ್ನು ಕುಂಠಿತಗೊಳಿಸಲು ಬಳಸಿಕೊಂಡ ಪ್ರಮುಖ ಅಸ್ತ್ರವಾಗಿದೆ. ಕಾಲಕ್ರಮೇಣ ಇದು ನಿಜವಾದ ಭಯೋತ್ಪಾದಕರ ವಿರುದ್ಧದ ಕಾನೂನಾಗಿರದೆ ಯಾವುದೇ ಭಿನ್ನಮತೀಯ ಧ್ವನಿಯನ್ನು ‘ಭಯೋತ್ಪಾದಕರು’ ವರ್ಗಕ್ಕೆ ಸೇರಿಸುವ ಮಟ್ಟಕ್ಕೆ ವಿಸ್ತರಿಸಿದೆ.
ಪ್ರೊ. ಪ್ರದೀಪ್ ಚಿಬ್ಬರ್ ಮತ್ತು ಪ್ರೊ. ನಸೀಮುಲ್ಲ ಅವರು ನಿರಂಕುಶ ಪ್ರಭುತ್ವದ ಕುರಿತು ”ಫಿಲಿಫೈನ್ಸ್‌ನ ರೋಡ್ರಿಗೋ ಡುಟೆರ್ಟೆ, ಟರ್ಕಿಯ ಎರ್ಡೊಗನ್, ಹಂಗರಿಯ ವಿಕ್ಟೋರ್ ಒರ್ಬನ್, ಯುಎಸ್‌ಎನ ಟ್ರಂಪ್, ಭಾರತದ ಮೋದಿಯಂತಹ ಬಲಪಂಥೀಯ ನಾಯಕರು ಜನಪ್ರಿಯತೆ ಮತ್ತು ತಮ್ಮ ವ್ಯಕ್ತಿತ್ವದ ಮೂಲಕ ಚುನಾವಣೆಯನ್ನ ಗೆಲ್ಲುತ್ತಿದ್ದಾರೆ. ಒಂದು ಕಾಲದಲ್ಲಿ ತಮ್ಮದು ಎಂತಹ ಅಸಾಧಾರಣ ದೇಶವಾಗಿತ್ತು ಎನ್ನುವ ಕಥನವನ್ನ ಮುಂದಿಡುವ ಈ ‘ಆತಂಕಗೊಳಿಸುವ ಜನಪ್ರಿಯ ನಾಯಕರು'(Apprehensive populists) ತಮ್ಮ ವಾಕ್ಚಾತುರ್ಯದ ಮೂಲಕ ಭೀತಿ ಮತ್ತು ಹಾನಿಗೆ ಒತ್ತು ಕೊಡುತ್ತಾರೆ. ಅಲ್ಪಸಂಖ್ಯಾತರು, ವಲಸೆಗಾರರು ಮತ್ತು ಇಲ್ಲಿನ ಮೂಲ ನಿವಾಸಿಗಳು ಇವರೆಲ್ಲರಿಂದ ತಮ್ಮ ದೇಶದ ಹಿಂದಿನ ಹೆಗ್ಗಳಿಕೆಗೆ ಭಂಗ ಬಂದಿದೆ ಎಂದು ಭೀತಿ ಹುಟ್ಟಿಸುತ್ತಾರೆ. ಟ್ರಂಪ್ ಮತ್ತು ಒರ್ಬನ್‌ರಂತವರು ತಮ್ಮ ದೇಶದ ಗಡಿಗಳನ್ನ ಮುಕ್ತಗೊಳಿಸಿದರೆ ದೇಶವು ಅಪಾರವಾದ ಹಾನಿಗೆ ಒಳಗಾಗಬೇಕಾಗುತ್ತದೆ, ಸಾಂಪ್ರದಾಯಿಕ ಸಂಸ್ಕೃತಿಯನ್ನ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಅಥವಾ ಹಿಂದಿನ ಶ್ರೇಣೀಕರಣವನ್ನ ಮರಳಿ ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ಗಡಿಯಾರದ ಮುಳ್ಳನ್ನು ಹಿಂದಕ್ಕೆ ತಿರುಗಿಸುವುದರ ಮೂಲಕ ತಮ್ಮ ದೇಶವನ್ನ ಮತ್ತೆ ಅಪ್ರತಿಮಗೊಳಿಸುವ ಯೋಜನೆಗಳನ್ನ ಪ್ರಾರಂಭಿಸಬೇಕು ಎನ್ನುವ ಸಂದೇಶ ಕೊಡುತ್ತಾರೆ. ಈ ‘ಮಹತ್ವಾಕಾಂಕ್ಷೆ ಜನಪ್ರಿಯ ನಾಯಕರು’ ದೇಶದ ಉಜ್ವಲ ಭವಿಷ್ಯಕ್ಕಾಗಿ ಯೋಜನೆಗಳನ್ನ ರೂಪಿಸಬೇಕಾಗಿದೆ ಎಂದು ಹೇಳುತ್ತಾರೆ. ಇವರ ಪ್ರಕಾರ ದೇಶವು ಒಂದೆ, ಏಕರೂಪಿ ಸಮುದಾಯವನ್ನ ಒಳಗೊಂಡಿರಬೇಕು ಮತ್ತು ತಮ್ಮನ್ನು ಅನುಸರಿಸಿದರೆ ಮಾತ್ರ ದೇಶಕ್ಕೆ ಉತ್ತಮ ಭವಿಷ್ಯವಿದೆ ಎಂದು ಸಂದೇಶ ಕೊಡುತ್ತಾರೆ. ಈ ಮಾದರಿಯ ಮಹತ್ವಾಕಾಂಕ್ಷೆ ರಾಜಕಾರಣವು ಮೋದಿಯವರ ಆದ್ಯತೆ, ಯೋಜನೆಯಾಗಿದೆ. ಮೋದಿ ‘ಏಕರೂಪಿ, ಒಂದೆ ಭಾರತದ ಏಳಿಗೆಗಾಗಿ ಎಲ್ಲಾ ಭಾರತೀಯರು ಒಂದಾಗಿ ಕೆಲಸ ಮಾಡಬೇಕು ಮತ್ತು ಇದು ತಮ್ಮ ಸರಕಾರದ ಏಕೈಕ ಗುರಿಯಾಗಿದೆ’ ಎಂದು ಪದೆ ಪದೆ ಹೇಳುತ್ತಿರುತ್ತಾರೆ” ಎಂದು ಬರೆಯುತ್ತಾರೆ.
ಮಹತ್ವಾಕಾಂಕ್ಷೆ ರಾಜಕಾರಣಿ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಮೇಲಿನ ಭೀತಿಗೆ ಒತ್ತು ಕೊಟ್ಟು ಅಧಿಕಾರ ಬಲಪಡಿಸಿಕೊಳ್ಳುವ ‘ಆತಂಕಗೊಳಿಸುವ ಜನಪ್ರಿಯ ನಾಯಕರʼ ಅಂಶಗಳಿವೆ. ಕಳೆದ ಹನ್ನೆರಡು ವರ್ಷಗಳಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರವು ಮುಸ್ಲಿಂ ಸಮುದಾಯವನ್ನ ಕೇಂದ್ರವಾಗಿಟ್ಟುಕೊಂಡು ಅವರಿಂದ ದೇಶದ ಭದ್ರತೆಗೆ ಧಕ್ಕೆ ಇದೆ ಎನ್ನುವ ಭೀತಿ ಸೃಷ್ಟಿಸಿ ತ್ರಿವಳಿ ವಿಚ್ಛೇದನ ಮಸೂದೆ, ಕಾನೂನುಬಾಹಿರ ಚಟುವಟಿಕೆ (ನಿಗ್ರಹ) ಮಸೂದೆಗಳಾದ ಯುಎಪಿಎ (ತಿದ್ದುಪಡಿ), ಸಿಎಎ ಮಸೂದೆಗಳಿಗೆ ತಮಗಿರುವ ದೈತ್ಯ ಸದೃಶ್ಯ ಬಹುಮತದ ಮೂಲಕ ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಂಡುಬಿಟ್ಟರು. ರಾಷ್ಟ್ರೀಯ ನಾಗರಿಕರ ನೋಂದಣಿ ಮಸೂದೆ (ಎನ್‌ಆರ್‌ಎ)ಯ ಮೂಲಕ ಇಲ್ಲಿನ ಮುಸ್ಲಿಮರು ಯಾವತ್ತಿಗೂ ಹೊರಗಿನವರು ಅವರಿಗೆ ಇಲ್ಲಿ ಸ್ಥಳವಿಲ್ಲ ಎನ್ನುವ ಶಾಸನವನ್ನ ಜಾರಿಗೊಳಿಸಿದರು. ಇದೆಲ್ಲವೂ ‘ಜನಪ್ರಿಯತೆ, ಮಹತ್ವಾಕಾಂಕ್ಷೆ’ಯ ಮುಖವಾಡದಲ್ಲಿ ಭೀತಿ ಹುಟ್ಟಿಸುವ ಕಾರ್ಯ ತಂತ್ರಗಳಾಗಿವೆ. ಆದರೆ ಆಳದಲ್ಲಿ ಆರ್‌ಎಸ್‌ಎಸ್‌ನ ಬ್ರಾಹ್ಮಣಶಾಹಿ ಕಾರ್ಯಸೂಚಿಯನ್ನು ಜಾರಿಗೊಳಿಸುವ ಅಜೆಂಡಾಗಳಿವೆ.
ಇದನ್ನು ಓದಿದ್ದೀರಾ?: ರುಬಿಯೊ-ಜೈಶಂಕರ್ ಸಭೆ: ಭಾರತದ ಪ್ರಮುಖ 5 ನಿಲುವುಗಳನ್ನು ವಿವರಿಸಿದ ವಿದೇಶಾಂಗ ಸಚಿವ
ಸಂವಾದಕ್ಕಾಗಿ ಈ ಯುಎಪಿಎ ಕುರಿತು ಗಮನಿಸೋಣ
ಯುಎಪಿಎ ಇತಿಹಾಸ
ಇದಕ್ಕೆ ಉದಾಹರಣೆಯಾಗಿ ಯುಎಪಿಎ ಕಾಯ್ದೆಯ (ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ) ಇತಿಹಾಸ, ಅದರ ಪರಿಣಾಮ ನಾವು ‘ಚುನಾಯಿತ ಸರ್ವಾಧಿಕಾರ’ ಆಡಳಿತದ ಅಡಿಯಲ್ಲಿದ್ದೇವೆ ಎಂದು ಸಾಬೀತುಪಡಿಸುತ್ತದೆ. ಇದು ಕೆಲವು ಮುಖ್ಯ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಪ್ರಜಾಪ್ರಭುತ್ವದಲ್ಲಿ ಭಿನ್ನಮತವನ್ನು ಏಕೆ ಹತ್ತಿಕ್ಕುವ ಮನೋಭಾವದಿಂದ ಎದುರಿಸಲಾಗುತ್ತದೆ? ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು, ವಿಮರ್ಶೆ, ಟೀಕೆಯನ್ನು ದಾಖಲಿಸಲು ಹಕ್ಕಿದೆ. ಆದರೆ ಮೋದಿ ನೇತೃತ್ವದ ಆಡಳಿತವು ತಮ್ಮ ಸೈದ್ಧಾಂತಿಕ ವಿರೋಧಿಗಳ ಅಭಿಪ್ರಾಯಗಳಿಂದ ತಾನು ಮತ್ತು ತನ್ನ ಪಕ್ಷ ಅಪಾಯದಲ್ಲಿದೆ ಎಂದು ಭಾವಿಸುತ್ತಾರೆ. ಅವರನ್ನು ಬಂಧಿಸಿ ವರ್ಷಗಳ ಕಾಲ ಜೈಲಿನಲ್ಲಿಡುತ್ತಾರೆ. ಇದಕ್ಕೆ ಯುಎಪಿಎ ಕಾಯ್ದೆಯ ಪ್ರಯೋಗವೇ ಒಂದು ಜ್ವಲಂತ ನಿದರ್ಶನವಾಗಿದೆ.
ಬ್ರಿಟಿಷರ ಕಾಲದ ಶಾಸನವಾದ ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ ವಸಾಹತೋತ್ತರ ಭಾರತದಲ್ಲಿಯೂ ಮುಂದುವರಿಯುತ್ತಿದೆ. ವಸಾಹತುಶಾಹಿ ಆಡಳಿತದ ವಿರುದ್ಧ ಮಾತನಾಡುವ ಯಾರೇ ಆಗಿರಲಿ ಅವರನ್ನು ಕಾರಾಗೃಹ ಶಿಕ್ಷೆಗೆ ಒಳಪಡಿಸಬಹುದು ಎನ್ನುವ ಆಗಿನ ಈ ಶಾಸನ ಮೋದಿಯವರ ಆಡಳಿತದಲ್ಲಿ ಮತ್ತಷ್ಟು ಕರಾಳತೆಯ ಸ್ವರೂಪ ಪಡೆದುಕೊಂಡಿದೆ.

ವಸಾಹತುಶಾಹಿ ಆಡಳಿತಗಾರರು ತಮ್ಮ ಆಳ್ವಿಕೆಗೆ ವಿರುದ್ಧವಾದ ಯಾವುದೇ ಚಳವಳಿಯನ್ನು ನಿಯಂತ್ರಿಸಲು ಅನೇಕ ಕಾನೂನುಗಳನ್ನು ತಂದರು. 1908ರ ಕ್ರಿಮಿನಲ್ ಲಾ ತಿದ್ದುಪಡಿ ಕಾಯ್ದೆಯಲ್ಲಿ ಮೊದಲ ಬಾರಿಗೆ ‘ಅಕ್ರಮ ಸಂಘಟನೆ’ ಎಂಬ ಪದವನ್ನು ಬಳಸಿಕೊಂಡು ಭಾರತೀಯ ರಾಷ್ಟ್ರೀಯ ಚಳವಳಿಯನ್ನು ಅಪರಾಧವನ್ನಾಗಿ ಪರಿಗಣಿಸಲಾಯಿತು. ವ್ಯಂಗ್ಯವೆಂದರೆ ಸ್ವಾತಂತ್ರ್ಯಾನಂತರದ ಸರ್ಕಾರಗಳು ಇದೇ ದಬ್ಬಾಳಿಕೆಯನ್ನು ಯುಎಪಿಎ ಮುಂತಾದ ಕಾನೂನುಗಳ ಮೂಲಕ ರಾಜಕೀಯ ಭಿನ್ನಮತವನ್ನು ಹತ್ತಿಕ್ಕಲು ಬಳಸುತ್ತಿವೆ. ವಸಾಹತುಶಾಹಿಗಳು ಜಾರಿಗೆ ತಂದ ಕ್ರೂರ ಕಾನೂನುಗಳಲ್ಲಿ 1911ರ Prevention of Seditious Meetings Act ಪ್ರಮುಖವಾಗಿತ್ತು. ಅದು ಮುಂದೆ 1971ರ Maintenance of Internal Security Act (MISA), 1980ರ National Security Act (NSA), 1985ರ Terrorist and Disruptive Activities (Prevention) Act (TADA), 2002ರ Prevention of Terrorism Act (POTA), ಮತ್ತು ನಂತರ 1967ರ ಯುಎಪಿಎಗೆ 2004, 2008, 2012 ಹಾಗೂ 2019ರಲ್ಲಿ ಮಾಡಿದ ತಿದ್ದುಪಡಿಗಳ ರೂಪದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಶಾಸನ ವ್ಯವಸ್ಥೆಯ ಭಾಗವಾಗಿದೆ. ಇವುಗಳೆಲ್ಲವೂ ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಘಟನೆ ಮತ್ತು ಸಭೆ ನಡೆಸುವ ಮೂಲಭೂತ ಹಕ್ಕುಗಳನ್ನು ಇನ್ನಷ್ಟು ನಿರ್ಬಂಧಿಸಿವೆ. ಯುಎಪಿಎಯ ಮೂಲ ಸ್ವರೂಪವಾಗಿದ್ದ 1919ರ ರೌಲಟ್ ಕಾಯ್ದೆ (Anarchical and Revolutionary Crimes Act) ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಮೂಲಕ ಜಾರಿಗೆ ಬಂದಿತ್ತು.
ಇಂತಹ ಶಾಸನಗಳ ಉದ್ದೇಶ, ಪರಿಣಾಮ ಮತ್ತು ಫಲಿತಾಂಶವೆಂದರೆ ”ದೇಶಕ್ಕೆ ಹಾನಿ ಉಂಟುಮಾಡುವ ನಿಜವಾದ ಭಯೋತ್ಪಾದಕ ಕೃತ್ಯಗಳನ್ನು ಮತ್ತು ಪ್ರಭುತ್ವದ ನೀತಿಗಳ ವಿರುದ್ಧ ಪ್ರತಿಭಟಿಸುವ, ಮಾತನಾಡುವ ಸಂಘಟನೆ, ವ್ಯಕ್ತಿಗಳನ್ನು ಒಂದೇ ರೀತಿಯಾಗಿ ಪರಿಗಣಿಸುವುದು. ಎರಡನ್ನೂ ರಾಷ್ಟ್ರದ ‘ಸಾರ್ವಭೌಮತ್ವಕ್ಕೆ’ ಅಪಾಯ ಉಂಟುಮಾಡುತ್ತದೆ” ಎಂದು ಒಂದೇ ತಕ್ಕಡಿಯಲ್ಲಿಟ್ಟು ಬ್ರಾಂಡ್ ಮಾಡುವುದು. ಈ ರೀತಿಯಾಗಿ, ಪ್ರಭುತ್ವವು ತನ್ನ ಸರ್ವಾಧಿಕಾರವನ್ನು ಉಳಿಸಿಕೊಳ್ಳುವ ಹೆಸರಿನಲ್ಲಿ ತನ್ನ ಆಡಳಿತ ವಿರೋಧಿ ಆಲೋಚನೆಗಳನ್ನು ಸುಲಭವಾಗಿ ಹತ್ತಿಕ್ಕುತ್ತದೆ.
ಅನುಷ್ಕಾ ಸಿಂಗ್ ತಮ್ಮ ‘ಸೆಡೆಷನ್ ಇನ್ ಲಿಬರಲ್ ಡೆಮಾಕ್ರಟೀಸ್’ ಕೃತಿಯಲ್ಲಿ ‘ಇಂದಿನ ಉದಾರ ಪ್ರಜಾಪ್ರಭುತ್ವದಲ್ಲಿ ದೇಶದ್ರೋಹವೆಂದರೆ ಆಡಳಿತ ನಡೆಸುತ್ತಿರುವ ಸರ್ಕಾರವನ್ನು ಪ್ರತಿನಿಧಿಸುವ ಪ್ರಭುತ್ವದ ವಿರುದ್ಧ ಯುದ್ಧ ನಡೆಸುವುದು ಅಥವಾ ಅದಕ್ಕಾಗಿ ಪ್ರಯತ್ನಿಸುವುದು’ ಎಂದು ಹೇಳುತ್ತಾರೆ. ಮೂಲತಃ ಭಯೋತ್ಪಾದನೆ ವಿರೋಧಿ ಕಾನೂನಾಗಿ ಬಂದ ಯುಎಪಿಎ ಮೋದಿ ನೇತೃತ್ವದ ಆಡಳಿತದಲ್ಲಿ ಭಿನ್ನಮತೀಯರನ್ನು ದೇಶದ್ರೋಹಿಗಳೆಂದು ಕರೆದು ಅವರನ್ನು ಹಣಿಯುವ ಕಾನೂನಾಗಿ ರೂಪಾಂತರಗೊಂಡಿದೆ. ಅನುಷ್ಕಾ ಸಿಂಗ್ ಇದನ್ನು ದೇಶದ್ರೋಹ ಕಾನೂನು ಮತ್ತು ಯುಎಪಿಎ ನಡುವಿನ ‘ಕಾನೂನುಬದ್ಧ ವಿವಾಹ’ ಎಂದು ವಿವರಿಸುತ್ತಾ ‘ದೇಶದ್ರೋಹ ಕಾನೂನಿನ ಬಳಕೆ ಪ್ರಾರಂಭಿಕ ಹಂತದಲ್ಲಿ ಜಾಮೀನನ್ನು ತಡೆಹಿಡಿಯುತ್ತದೆ, ಏಕೆಂದರೆ ಅದಕ್ಕೆ ಸೆಷನ್ಸ್ ನ್ಯಾಯಾಲಯ ಅಥವಾ ಅದಕ್ಕಿಂತ ಮೇಲಿನ ನ್ಯಾಯಾಲಯದ ಆದೇಶ ಬೇಕಾಗುತ್ತದೆ. ಆದರೆ ಯುಎಪಿಎ ಬಳಕೆ ಹೆಚ್ಚಿನ ಪ್ರಕರಣಗಳಲ್ಲಿ ಜಾಮೀನು ಸಾಧ್ಯತೆಯನ್ನೇ ಅಳಿಸಿಬಿಡುತ್ತದೆ’ ಎಂದು ಹೇಳುತ್ತಾರೆ. ಒಮ್ಮೆ ಯುಎಪಿಎ ಅಡಿಯಲ್ಲಿ ಆರೋಪಿಯಾದರೆ ಜಾಮೀನು ಪಡೆದು ಹೊರಬರುವುದು ಅತ್ಯಂತ ಕಷ್ಟ.
ಈ ಕಾಯ್ದೆಯ ಸ್ವರೂಪ ಮತ್ತು ರಚನೆ ಸರ್ಕಾರಕ್ಕೆ ‘ಅಪರಿಮಿತ ಅಧಿಕಾರ’ ಒದಗಿಸುತ್ತದೆ. ಇದು ಸೆಕ್ಷನ್ 43ಎ ಮತ್ತು 43ಬಿ ಮೂಲಕ ಬಂಧನ, ಶೋಧನೆ ಮತ್ತು ವಶಪಡಿಸಿಕೊಳ್ಳುವಿಕೆಯಲ್ಲಿ ಪೊಲೀಸ್ ಅಧಿಕಾರವನ್ನು ಮತ್ತಷ್ಟು ಬಲಪಡಿಸುತ್ತದೆ. ಸೆಕ್ಷನ್ 43ಡಿ(1) ಮೂಲಕ ಎಲ್ಲಾ ಅಪರಾಧಗಳನ್ನು cognizable ಆಗಿ ಮಾಡುತ್ತದೆ. ಪ್ರಕರಣದ ತನಿಖೆಗೆ ಹೆಚ್ಚಿನ ಸಮಯದ ಅವಶ್ಯಕತೆ ಇದ್ದರೆ, ನ್ಯಾಯಾಲಯದ ಅನುಮತಿಯೊಂದಿಗೆ ಚಾರ್ಜ್‌ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಸುವ ಗಡುವನ್ನು ಹೆಚ್ಚಿಸಬಹುದು. ಈ ಸೆಕ್ಷನ್ ಪ್ರಕಾರ ನಿಗದಿತ 90 ದಿನಗಳ ಬದಲಾಗಿ 180 ದಿನಗಳವರೆಗೆ ತನಿಖೆಯನ್ನು ವಿಸ್ತರಿಸಲು ಅವಕಾಶವಿದೆ. ಸೆಕ್ಷನ್ 43ಡಿ(3) ಮೂಲಕ ಬಂಧನದ ಅವಧಿಯನ್ನು ವಿಸ್ತರಿಸುತ್ತದೆ. ನ್ಯಾಯಾಲಯದ ಅಧಿಕಾರವನ್ನು ಕುಗ್ಗಿಸುತ್ತದೆ. ಸೆಕ್ಷನ್ 43ಡಿ(4) ಮೂಲಕ ನಿರೀಕ್ಷಣಾ ಜಾಮೀನು ನಿರಾಕರಿಸುತ್ತದೆ. ಸೆಕ್ಷನ್ 43ಡಿ(5) ಮೂಲಕ ಜಾಮೀನಿನ ಮೇಲಿನ ನಿರ್ಬಂಧಗಳನ್ನು ಹೆಚ್ಚಿಸುತ್ತದೆ. ಸೆಕ್ಷನ್ 43ಇ ಮೂಲಕ ಆರೋಪಿಯ ಅಪರಾಧಿತನವನ್ನು ಊಹಿಸುತ್ತದೆ. ಸಾಮಾನ್ಯ ಅಪರಾಧಿ ಕಾನೂನಿನಲ್ಲಿ ‘ತಪ್ಪಿತಸ್ಥರೆಂದು ಸಾಬೀತುಪಡಿಸುವವರೆಗೆ ವ್ಯಕ್ತಿ ನಿರಪರಾಧಿ’ ಎಂಬ ನಿಯಮವಿದ್ದರೆ ಇದರ ಅಡಿಯಲ್ಲಿ ಆರೋಪಿಯು ತಾನು ನಿರಪರಾಧಿ ಎಂದು ಸಾಬೀತುಪಡಿಸಬೇಕಾಗುತ್ತದೆ. ಸೆಕ್ಷನ್ 44ರ ಮೂಲಕ ಇನ್-ಕ್ಯಾಮೆರಾ ವಿಚಾರಣೆ ಮತ್ತು ಸಾಕ್ಷಿದಾರರ ಗುರುತನ್ನು ರಹಸ್ಯವಾಗಿಡಲು ಅವಕಾಶ ನೀಡುತ್ತದೆ. ಸೆಕ್ಷನ್ 46ರ ಮೂಲಕ ದೂರವಾಣಿ ಅಥವಾ ಇತರೆ ಸಂವಹನಗಳನ್ನು ಸಾಕ್ಷಿಯಾಗಿ ಬಳಸಲು ಅವಕಾಶ ನೀಡುತ್ತದೆ. ಮೋದಿ ಮತ್ತು ಅಮಿತ್ ಶಾ ಈ ಎಲ್ಲಾ ಸೆಕ್ಷನ್‌ಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳನ್ನು, ಸೈದ್ಧಾಂತಿಕ ವಿರೋಧಿಗಳನ್ನು ಬಂಧಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ತಳಹದಿಯನ್ನು ನಾಶ ಮಾಡುತ್ತಿದ್ದಾರೆ.

2019ರಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ಯುಎಪಿಎ ಕಾಯ್ದೆಯ ತಿದ್ದುಪಡಿ ಮಾಡಿತು. ಅದರ ಪ್ರಮುಖಾಂಶಗಳು
ಸೆಕ್ಷನ್ 35ನ್ನು ತಿದ್ದುಪಡಿ ಪ್ರಕಾರ: ಈ ತಿದ್ದುಪಡಿಯ ಮೊದಲು ಕೇವಲ ಸಂಘಟನೆಗಳನ್ನು ಮಾತ್ರ ಭಯೋತ್ಪಾದಕರೆಂದು ಘೋಷಿಸಬಹುದಿತ್ತು. ತಿದ್ದುಪಡಿಯ ನಂತರ, ಸರ್ಕಾರವು ನೇರವಾಗಿ ವ್ಯಕ್ತಿಗಳನ್ನು ಕೂಡ ಭಯೋತ್ಪಾದಕರೆಂದು ಪಟ್ಟಿ ಮಾಡಬಹುದು.
ಅಧಿಕಾರ: ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ, ಭಯೋತ್ಪಾದನೆಗೆ ಯೋಜನೆ ರೂಪಿಸುತ್ತಿದ್ದಾರೆ, ಪ್ರೋತ್ಸಾಹಿಸುತ್ತಿದ್ದಾರೆ ಅಥವಾ ಯಾವುದೇ ರೀತಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಸರ್ಕಾರ ನಂಬಿದರೆ, ಕೇವಲ ಶಂಕೆಯ ಆಧಾರದಲ್ಲಿ ಆ ವ್ಯಕ್ತಿಯನ್ನುಬಂಧಿಸಬಹುದು. ಈ ಸೆಕ್ಷನ್ ಅಡಿಯಲ್ಲಿ ಘೋಷಿಸಲ್ಪಟ್ಟ ವ್ಯಕ್ತಿಗಳ ಹೆಸರನ್ನು ಕಾಯಿದೆಯ 4ನೇ ಶೆಡ್ಯೂಲ್‌ನಲ್ಲಿ ಸೇರಿಸಲಾಗುತ್ತದೆ.
ಪರಿಣಾಮಗಳು: ಈ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಮತ್ತು ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬಹುದು.
ಸೆಕ್ಷನ್ 43D ತಿದ್ದುಪಡಿ ಮಾಡಿ ಸೆಕ್ಷನ್ 43D(5) ಸೇರಿಸಲಾಗಿದೆ. ಇದರ ಪ್ರಕಾರ: ಸಂಘಟನೆ/ವ್ಯಕ್ತಿಯ ವಿರುದ್ಧ ಸರ್ಕಾರದ ಬಳಿ ‘ಪ್ರಾಥಮಿಕ ಸಾಕ್ಷಿ’ ಇದ್ದರೆ ಯುಎಪಿಎಯ ಅಧ್ಯಾಯ IV (ಭಯೋತ್ಪಾದನಾ ಚಟುವಟಿಕೆಗಳು) ಮತ್ತು VI (ಭಯೋತ್ಪಾದಕ ಸಂಘಟನೆಗಳು) ಅಡಿಯಲ್ಲಿ ಆರೋಪ ಹೊರಿಸಲಾದ ವ್ಯಕ್ತಿಗಳಿಗೆ ಜಾಮೀನು ನೀಡುವುದನ್ನು ನಿರ್ಬಂಧಿಸುತ್ತದೆ.
ಪ್ರಾಥಮಿಕ ಸಾಕ್ಷ್ಯದ ಮೌಲ್ಯಮಾಪನ: ಪ್ರಕರಣದ ಡೈರಿ ಅಥವಾ ಚಾರ್ಜ್ ಶೀಟ್ ಪರಿಶೀಲಿಸಿದಾಗ, ಆರೋಪವು ಮೇಲ್ನೋಟಕ್ಕೆ ಸತ್ಯವೆಂದು ನ್ಯಾಯಾಲಯಕ್ಕೆ ಅನಿಸಿದರೆ, ಜಾಮೀನು ನೀಡಲು ಬರುವುದಿಲ್ಲ.
ಆರೋಪಿಗೆ ಜಾಮೀನು ನೀಡುವ ಮುನ್ನ, ಜಾಮೀನು ಅರ್ಜಿಯ ಬಗ್ಗೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ವಿಚಾರಣೆಗೆ ಅವಕಾಶ ನೀಡಬೇಕು. ಈ ತಿದ್ದುಪಡಿಯ ಪ್ರಕಾರ ಆರೋಪಿಯ ವಿರುದ್ಧದ ಪ್ರಕರಣ ಮೊದಲ ನೋಟಕ್ಕೆ ಸತ್ಯವೆಂದು ನ್ಯಾಯಾಲಯಕ್ಕೆ ತೋರುತ್ತಿದ್ದರೆ ಜಾಮೀನು ನಿರಾಕರಿಸಬೇಕು. ಈ ನಿಯಮ ಜಾಮೀನು ಪಡೆಯುವುದನ್ನು ಬಹಳ ಕಷ್ಟಮಾಡಿದೆ. ಏಕೆಂದರೆ ನ್ಯಾಯಾಲಯವು ಆರೋಪಿಯ ಅಪರಾಧಿತನವನ್ನು ಕೇವಲ ಎನ್‌ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ತಯಾರಿಸಿದ ಚಾರ್ಜ್‌ಶೀಟ್ ಆಧಾರದ ಮೇಲೆ ಮಾತ್ರ ಪರಿಶೀಲಿಸಬೇಕು. ಆರೋಪಿಯು ತನ್ನ ರಕ್ಷಣೆಗೆ ಚಾರ್ಜ್‌ಶೀಟ್ ಹೊರಗಿನ ಯಾವುದೇ ಸಾಕ್ಷಿಯನ್ನು ನೀಡಲು ಅವಕಾಶವಿಲ್ಲ
ತನಿಖಾ ಅವಧಿ: ತನಿಖೆ ಪೂರ್ಣಗೊಳಿಸಲು ಮತ್ತು ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸ್ ಅಥವಾ ತನಿಖಾ ಸಂಸ್ಥೆಗಳಿಗೆ 90 ದಿನಗಳಿಂದ 180 ದಿನಗಳವರೆಗೆ (ನ್ಯಾಯಾಲಯದ ಅನುಮತಿಯೊಂದಿಗೆ) ಸಮಯ ವಿಸ್ತರಿಸಲು ಅವಕಾಶವಿದೆ. ಆದರೆ ಈ ಕಾಯ್ದೆಯು ಸಂವಿಧಾನದ ವಿಧಿ 19, 21, 22ರ ಉಲ್ಲಂಘನೆಯಾಗಿದೆ.
ವಾಸ್ತವದಲ್ಲಿ ವ್ಯಕ್ತಿಗಳನ್ನು ಬಂಧಿಸಿದ ನಂತರ ತನಿಖಾ ಏಜೆನ್ಸಿ ಮತ್ತು ಪೋಲೀಸರು ನ್ಯಾಯಾಂಗದ ಮುಂದೆ ಅವರ ಮೇಲಿನ ಆರೋಪ ಸಾಬೀತುಪಡಿಸಬೇಕು. ಯುಎಪಿಎ ಶಾಸನದ ಪ್ರಕಾರ ಬಂಧನಕ್ಕೊಳಗಾದ ಆರೋಪಿಗಳು ತಾವು ನಿರಪರಾಧಿ ಎಂದು ಸಾಬೀತುಪಡಿಸಬೇಕು. ಇದು ಮುಖ್ಯ ಕರಾಳತೆಯಾಗಿದೆ. ಬಂಧನಕ್ಕೊಳಗಾದ ನಂತರ ಯಾವುದೇ ಆರೋಪಿಗೆ ತಾನು ‘ನಿರಪರಾಧಿ’ ಎಂದು ಸಾಬೀತುಪಡಿಸುವುದು ಕಷ್ಟ. ಈ ಕಾರಣದಿಂದ ಬಂಧಿತರಿಗೆ ಜಾಮೀನು ದೊರಕುವುದು ತುಂಬಾ ದುಸ್ತರವಾಗುತ್ತದೆ.
ಸೆಕ್ಷನ್ 13ರ ಪ್ರಕಾರ: ಸರ್ಕಾರ/ತನಿಖಾ ಏಜೆನ್ಸಿ/ಪೋಲೀಸರು ಆರೋಪಿಸುವ ‘ಕಾನೂನುಬಾಹಿರ ಚಟುವಟಿಕೆಗಳನ್ನು’ ಯಾವುದೆಂದು ವಿವರಿಸಿಲ್ಲ. ಅಸ್ಪಷ್ಟತೆ ಇದೆ. ಸರ್ಕಾರದ ನೀತಿ, ಸಿದ್ಧಾಂತದ ವಿರುದ್ಧ ಶಾಂತಿಯುತ ಪ್ರತಿಭಟನೆ, ವಿಮರ್ಶೆಯನ್ನು ಮೋದಿ ಆಡಳಿತವು ‘ಕಾನೂನುಬಾಹಿರ’ ಎಂದು ನಿರ್ಧರಿಸಿ ಸಾವಿರಾರು ವ್ಯಕ್ತಿಗಳನ್ನು ಅಕ್ರಮವಾಗಿ ಬಂಧಿಸಿದೆ.

ದುಷ್ಪರಿಣಾಮಗಳು
2022ರ ಪಿಯುಸಿಎಲ್ ವರದಿಯ ಪ್ರಕಾರ 2015-2020ರ ಅವಧಿಯಲ್ಲಿ 8371 ವ್ಯಕ್ತಿಗಳನ್ನು ಬಂಧಿಸಲಾಗಿದೆ. 20 ಮೇ 2026ರ ಪ್ರಜಾವಾಣಿಯಲ್ಲಿನ ವರದಿಯ ಪ್ರಕಾರ 2019-2023ರ ನಾಲ್ಕು ವರ್ಷಗಳ ಅವಧಿಯಲ್ಲಿ 10,440 ವ್ಯಕ್ತಿಗಳನ್ನು ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧಿಸಿದ್ದಾರೆ. 335 ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಾಗಿದೆ. 2019ರಲ್ಲಿ 1948(34 ವ್ಯಕ್ತಿಗಳಿಗೆ ಶಿಕ್ಷೆ), 2020ರಲ್ಲಿ 1321(80 ವ್ಯಕ್ತಿಗಳಿಗೆ ಶಿಕ್ಷೆ), 2021ರಲ್ಲಿ 1621(62 ವ್ಯಕ್ತಿಗಳಿಗೆ ಶಿಕ್ಷೆ), 2022ರಲ್ಲಿ 2636(41 ವ್ಯಕ್ತಿಗಳಿಗೆ ಶಿಕ್ಷೆ), 2023ರಲ್ಲಿ 2914(118 ವ್ಯಕ್ತಿಗಳಿಗೆ ಶಿಕ್ಷೆ) ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಒಟ್ಟು 335 ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಾಗಿದೆ. ಶಿಕ್ಷೆಯ ಪ್ರಮಾಣ ಕೇವಲ ಶೇ3.2ರಷ್ಟಿದೆ. ಶೇ.92.88ರಷ್ಟು ಪ್ರಮಾಣದ ಬಂಧಿತರು ಆರೋಪಪಟ್ಟಿ ಇಲ್ಲದೆಯೋ, ವಿಚಾರಣೆ ಮುಗಿಯದೆಯೋ ಜೈಲಿನಲ್ಲಿದ್ದಾರೆ. ಇದು ಪ್ರಜಾಪ್ರಭುತ್ವದ ಸೋಲು, ಮಾನವೀಯತೆಯ ದಮನ.
31 ಡಿಸೆಂಬರ್ 2017ರ ಭೀಮಾ ಕೋರೆಗಾಂವ್ ಗಲಭೆ ಪ್ರಕರಣದ ಆಧಾರದಲ್ಲಿ 2020-2023ರ ಅವಧಿಯಲ್ಲಿ 16 ಸಾಮಾಜಿಕ ಕಾರ್ಯಕರ್ತರು, ಚಿಂತಕರು, ನ್ಯಾಯವಾದಿಗಳನ್ನು ಯುಎಪಿಎ ಅಡಿಯಲ್ಲಿ ಬಂಧಿಸಿದರು. ಬಿಕೆ-16 ಪ್ರಕರಣ ಎಂದು ಕರೆಯಲಾಗುವ ಇದರಲ್ಲಿ ಸುಧಾ ಭಾರದ್ವಾಜ್, ಆನಂದ ತೇಲ್ತುಂಬ್ಡೆ, ಸ್ಟಾನ್ಲಿ ಸ್ವಾಮಿ(ತಮ್ಮ 84ನೆ ವಯಸ್ಸಿನಲ್ಲಿ ಬಂಧನದಲ್ಲಿ ಸೂಕ್ತ ಆರೈಕೆ ಸಿಗದೆ ನಿಧನರಾದರು), ವರವರರಾವ್, ಗೊನ್ಸಾಲ್ವೇಸ್, ಅರಣ್ ಫೆರೇರಾ, ಜ್ಯೋತಿ ಜಗ್ತಾಪ್, ಶೋಮಾ ಸೇನ್, ಗೌತಮ್ ನವ್ಲಾಖಾ, ರೋನಾ ವಿಲ್ಸನ್, ಸುರೇಂದ್ರ ಗ್ಯಾಡ್ಲಿಂಗ್, ಸುಧೀರ್ ಧಾವಲೆ, ಮಹೇಶ್ ರಾವುತ್, ಹನಿಬಾಬು, ಸಾಗರ್, ಗೋರಾಖೆ, ರಮೇಶ್ ಗಾಯ್ಚಾರ್ ಅಕ್ರಮವಾಗಿ ಬಂಧಿತರಾಗಿದ್ದರು. ಸರಾಸರಿ 4-5 ವರ್ಷಗಳ ಬಂಧನದಲ್ಲಿದ್ದು ಈಗ ಜಾಮೀನು ಮೇಲೆ ಹೊರಬಂದಿದ್ದಾರೆ(ಗ್ಯಾಡ್ಲಿಂಗ್ ಅವರನ್ನು ಹೊರತುಪಡಿಸಿ). ಇವರ ಇಡೀ ಬದುಕು ನಶಿಸಿಹೋಗಿದೆ.
ಪತ್ರಕರ್ತ, ನ್ಯೂಸ್‌ಕ್ಲಿಕ್ ಸಂಪಾದಕ ಪ್ರಭೀರ್ ಪುರಕಾಯಸ್ತ ಯುಎಪಿಎ ಅಡಿ 2023ರಲ್ಲಿ ಬಂಧಿತರಾಗಿ ಏಳು ತಿಂಗಳುಗಳ ನಂತರ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ 2024ರಲ್ಲಿ ಬಿಡುಗಡೆಗೊಂಡ ಕೆಲವೇ ದಿನಗಳ ನಂತರ “UAPA in Delhi: Punishment without Trial” ಎಂಬ ಚರ್ಚಾಸಭೆ ನಡೆಯಿತು. ಇದರಲ್ಲಿ ಭಾಗವಹಿಸಿ ಮಾತನಾಡಿದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಹಾಗೂ ಹ್ಯೂಮನ್ ರೈಟ್ಸ್ ಲಾ ನೆಟ್‌ವರ್ಕನ ಸಂಸ್ಥಾಪಕರಾದ ಕೋಲಿನ್ ಗೋನ್ಸಾಲ್ವೇಸ್ ‘ಕಳೆದ ಹನ್ನೆರೆಡು ವರ್ಷಗಳಲ್ಲಿ ಮೋದಿ ನೇತೃತ್ವದ ಸರ್ಕಾರವು ಇದುವರೆಗೆ ನೋಡದ ರೀತಿಯಲ್ಲಿ ಭಯೋತ್ಪಾದನೆ ವಿರೋಧಿ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡಿದೆ, ನಾವು ನಮ್ಮ ಇತಿಹಾಸದ ಅತ್ಯಂತ ಅಸ್ಥಿರ ಹಾಗೂ ಅಪಾಯಕಾರಿ ಅವಧಿಯೊಂದರಲ್ಲಿ ಬದುಕುತ್ತಿದ್ದೇವೆ’ ಎಂದು ಹೇಳಿದರು.
ಗೋನ್ಸಾಲ್ವೇಸ್ ಅವರು ಭಯೋತ್ಪಾದನೆ ಆರೋಪಗಳನ್ನು ಸಮರ್ಥಿಸುವ ಸಾಕ್ಷಿಗಳ ಕೊರತೆಯಿಂದ ಕೊನೆಗೆ ಬಿಡುಗಡೆಗೊಂಡ ಹಲವಾರು ಪ್ರಕರಣಗಳನ್ನು ಉಲ್ಲೇಖಿಸಿದರು: ಗೌತಮ್ ನವ್ಲಾಖಾ, ಪಿಂಜರಾ ತೋಡ್ ಸದಸ್ಯರು, ಕಿಶೋರ್ಚಂದ್ರ ವಾಂಗ್ಚೆಮ್, ವೆರ್ನನ್ ಗೋನ್ಸಾಲ್ವೇಸ್, ಜಿ.ಎನ್.ಸಾಯಿಬಾಬ ಅವರ ಜಾಮೀನುಗಳನ್ನು ಉದಾಹರಿಸಿದರು. ಅನೇಕ ಪ್ರಕರಣಗಳಲ್ಲಿ, ವಿಶೇಷವಾಗಿ ಹೋರಾಟಗಾರ ಉಮರ್ ಖಲೀದ್ ಅವರ ಪ್ರಕರಣದಲ್ಲಿ, ಆರೋಪಪಟ್ಟಿ ಅತಿಯಾಗಿದೆಯೆಂದು ಅಭಿಯೋಜಕರು ವಾದಿಸುತ್ತಾರೆ ಎಂದು ಹೇಳಿದರು.
ಹಿರಿಯ ವಕೀಲ ಸಂಜಯ್ ಪರೀಖ್ ಅವರು ಯುಎಪಿಎಯನ್ನು ಮನಬಂದಂತೆ ಪ್ರಯೋಗಿಸುವುದನ್ನು ಟೀಕಿಸುತ್ತಾ ‘ಹಲವಾರು ಸಂದರ್ಭಗಳಲ್ಲಿ ಆರೋಪಿತರಿಗೂ ನಿಜವಾದ ಕಾನೂನುಬಾಹಿರ ಚಟುವಟಿಕೆಗಳಿಗೂ ಯಾವುದೇ ಸ್ಪಷ್ಟ ಸಂಬಂಧವಿರುವುದಿಲ್ಲ, ಯುಎಪಿಎ ಅಡಿಯಲ್ಲಿ ನಡೆಯುತ್ತಿರುವ ಈ ಅಧಿಕಾರದ ದುರುಪಯೋಗವು ವ್ಯಕ್ತಿಯ ಸಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇದರ ಕಠಿಣ ಜಾಮೀನು ನಿಯಮಗಳು ಟಾಡಾ( Terrorists and Disruptive Activities (Prevention) Act) ರೀತಿ ಸಾಬೀತುಪಡಿಸುವ ಹೊಣೆಗಾರಿಕೆಯನ್ನು ಸರ್ಕಾರದ ಬದಲು ಆರೋಪಿತರ ಮೇಲೆಯೇ ಹಾಕಲಾಗಿದೆ’ ಎಂದು ವಾದಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿಗಳಾದ ಶಾಹ್ರುಕ್ ಆಲಂ ಅವರು ಅಮೆರಿಕದ ವಿದ್ಯಾರ್ಥಿ ಪ್ರತಿಭಟನೆಗಳನ್ನು ಭಾರತದ ಪ್ರತಿಭಟನೆಗಳೊಂದಿಗೆ ಹೋಲಿಸುತ್ತಾ ”ಅಮೆರಿಕದಲ್ಲಿ ಪೊಲೀಸ್ ವ್ಯವಸ್ಥೆಯನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದರೂ ಬಹುತೇಕ ಪ್ರತಿಭಟನಾಕಾರರು ಗಂಭೀರ ಆರೋಪಗಳನ್ನು ಎದುರಿಸುವುದಿಲ್ಲ, ಆದರೆ ಭಾರತದಲ್ಲಿ ಅದರ ವಿರುದ್ಧ ಪರಿಸ್ಥಿತಿ ಇದೆ. 2020ರ ದೆಹಲಿ ಗಲಭೆಗಳ ‘ಸಂಚುಕೋರರು’ ಎಂಬ ಆರೋಪದಡಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲ್ಪಟ್ಟ ಖಲೀದ್ ಸೈಫಿ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಕುರಿತು ವಿವರಿಸುತ್ತಾ ಅಭಿಯೋಜಕರು, ‘ಅವರು ಮಸೀದಿಗಳಿಗೆ ಹೋಗಿ ಇಮಾಮರೊಂದಿಗೆ ಮಾತನಾಡಿ ಅವರನ್ನು ಸಿಎಎ (Citizenship (Amendment) Act) ವಿರುದ್ಧ ಒಗ್ಗೂಡಿಸುತ್ತಿದ್ದರು, ಆದ್ದರಿಂದ ನಾವು ಅವರಿಗೆ ಜಾಮೀನು ವಿರೋಧಿಸುತ್ತಿದ್ದೇವೆ’ ಎಂದು ಹೇಳಿದರು. ಅದು ಅವರ ಪ್ರಜಾಸತ್ತಾತ್ಮಕ ಹಕ್ಕಲ್ಲವೇ? ಇದೇ ರೀತಿ ಉಮರ್ ಖಾಲಿದ್ ಅವರ ಪ್ರಕರಣದಲ್ಲೂ, ‘ಈ ವ್ಯಕ್ತಿ ಮುಸ್ಲಿಮರಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಶಬ್ದಕೋಶವನ್ನೇ ನೀಡುತ್ತಿದ್ದಾನೆ’ ಎಂದು ಅಭಿಯೋಜಕರು ವಾದಿಸಿದರು. ಅದು ಹೇಗೆ ಸಮಸ್ಯೆಯಾಗಬಹುದು? ಅದು ಅವರ ಪ್ರಜಾಸತ್ತಾತ್ಮಕ ಹಕ್ಕು” ಎಂದು ಹೇಳಿದರು.
ನಿಜದಲ್ಲಿ ಸಿಎಎ ಮುಸ್ಲಿಮರಿಗೆ, ‘ನೀವು ಈಗ ಭಾರತ ನಾಗರಿಕರಾಗಿರಬಹುದು, ಆದರೆ ಬಹುಕಾಲ ಹಾಗಿರಲಾರಿರಿ’ ಎಂಬ ಸಂದೇಶವನ್ನು ನೀಡಲು ಬಯಸುತ್ತದೆ, ಅದು ಮುಸ್ಲಿಮರಿಗೆ ‘ನೀವು ರಾಜಕೀಯವಾಗಿ ಸಂಘಟಿಸಿಕೊಳ್ಳಲು ಸಾಧ್ಯವಿಲ್ಲ, ನಿಮ್ಮ ರಾಜಕೀಯವನ್ನು ನಾವು ತೀರ್ಮಾನಿಸುತ್ತೇವೆ ಮತ್ತು ಅದನ್ನು ಭಯೋತ್ಪಾದಕ ಕೃತ್ಯ ಎಂದು ಗುರುತಿಸುತ್ತೇವೆ’ ಎಂದು ಹೇಳುತ್ತದೆ. ಈ ಅನ್ಯಾಯದ ವಿರುದ್ಧ ಮಾತನಾಡಿದವರನ್ನು ದೇಶದ್ರೋಹಿಗಳೆಂದು ಕರೆಯಲಾಗಿದೆ.

ಸುಪ್ರೀಂ ಕೋರ್ಟ್
2026ರಲ್ಲಿ ಸುಪ್ರೀಂ ಕೋರ್ಟ್ ವ್ಯಾಖ್ಯಾನ ಅನಿರ್ದಿಷ್ಟ ಕಾಲ ಜೈಲಿನಲ್ಲಿಡುವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಮತ್ತು ಜಾಮೀನು ನಿಯಮ, ಜೈಲು ವಿನಾಯಿತಿ ತತ್ವವು (Bail is Rule, Jail is Exception) ಯುಎಪಿಎ ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತಿಳಿಸಿದೆ. ಆದರೆ ಈ ಸೆಕ್ಷನ್‌ನ ಷರತ್ತುಗಳು ಅನ್ವಯಿಸುತ್ತವೆ. ಸುಪ್ರೀಂ ಕೋರ್ಟ್ 2026 ಮೇ 18ರಂದು ಸೈಯದ್ ಇಫ್ತೇಕರ್ ಅಂದ್ರಾಬಿ ವರ್ಸಸ್ ಎನ್‌ಐಎ ಪ್ರಕರಣದಲ್ಲಿ ಮಹತ್ವದ ತೀರ್ಪೊಂದನ್ನು ನೀಡಿತು. ಈ ತೀರ್ಪು ಯುಎಪಿಎ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಕಾಳಜಿಬದುಕುವ ಹಕ್ಕು, ಮತ್ತು ಸಂವಿಧಾನದ ವಿಧಿ 21 ಅಡಿಯಲ್ಲಿ ಇರುವ ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ನಡುವೆ ಸಮತೋಲನವನ್ನು ಸಾಧಿಸಲು ಯತ್ನಿಸಿದೆ. ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಬರೆದ, ನ್ಯಾಯಮೂರ್ತಿ ಬಿ.ವಿ.ನಾಗರತ್ನ ಸಹಮತ ವ್ಯಕ್ತಪಡಿಸಿದ ತೀರ್ಪಿನಲ್ಲಿ ಸುಮಾರು ಆರು ವರ್ಷಗಳ ಕಾಲ ಬಂಧನದಲ್ಲಿದ್ದ ಅಪೀಲುದಾರರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು. ದೀರ್ಘಕಾಲದ ವಿಚಾರಣೆಗೆ ಮುನ್ನದ ಬಂಧನವು ವಾಸ್ತವಿಕ ಶಿಕ್ಷೆಯಾಗಿ ಮಾರ್ಪಡಬಾರದು ಎಂದು ನ್ಯಾಯಾಲಯ ಒತ್ತಿ ಹೇಳಿತು. ಮುಂದಿನ ದಿನಗಳಲ್ಲಿ ಈ ತೀರ್ಪು ವಿಚಾರಣೆಗೆ ಸಂಬಂಧಿಸಿದಂತೆ ಅತಿಯಾದ ವಿಳಂಬಗತಿಯಲ್ಲಿರುವ ಯುಎಪಿಎ ಮತ್ತು ಎನ್‌ಡಿಪಿಎಸ್ ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಾಮೀನು ಅರ್ಜಿಗಳನ್ನು ಹೇಗೆ ಪರಿಗಣಿಸುತ್ತವೆ ಎಂಬುದನ್ನು ಮರು ರೂಪಿಸುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ?: ಆರ್ಥಿಕ ಬಿಕ್ಕಟ್ಟು ಬಿಜೆಪಿಯ ಹಿಂದೂ-ಮುಸ್ಲಿಂ ರಾಜಕೀಯವನ್ನು ಹಿಂದಿಕ್ಕಲಿದೆ: ರಾಹುಲ್ ಗಾಂಧಿ
ಕೊನೆಯಿಲ್ಲದ ಟಿಪ್ಪಣಿಗಳು
ಕಳೆದ ಹನ್ನೆರೆಡು ವರ್ಷಗಳಲ್ಲಿ ಸಿಬಿಐ, ಆರ್‌ಟಿಐ, ಇಡಿ, ಆದಾಯ ತೆರಿಗೆ ಇಲಾಖೆ ಮುಂತಾದ ಸಾರ್ವಜನಿಕ ಸಂಸ್ಥೆಗಳ ಜೊತೆಗೆ ಯುಎಪಿಎ ಎನ್ನುವ ಶಾಸನದ ಮೂಲಕ ಮೋದಿ ಮತ್ತು ಶಾ ತಮ್ಮ ಫ್ಯಾಸಿಸಂ ಆಡಳಿತವನ್ನು ಜಾರಿಗೊಳಿಸಿದ್ದಾರೆ. ಯುಎಪಿಎ ಶಾಸನವು ಮೋದಿ ನೇತೃತ್ವದ ಸರ್ಕಾರವು ತನ್ನ ರಾಜಕೀಯ, ಸೈದ್ಧಾಂತಿಕ ವಿರೋಧಿಗಳ ಶಕ್ತಿಯನ್ನು ಕುಂಠಿತಗೊಳಿಸಲು ಬಳಸಿಕೊಂಡ ಪ್ರಮುಖ ಅಸ್ತ್ರವಾಗಿದೆ. ಕಾಲಕ್ರಮೇಣ ಇದು ನಿಜವಾದ ಭಯೋತ್ಪಾದಕರ ವಿರುದ್ಧದ ಕಾನೂನಾಗಿರದೆ ಯಾವುದೇ ಭಿನ್ನಮತೀಯ ಧ್ವನಿಯನ್ನು ‘ಭಯೋತ್ಪಾದಕರು’ ವರ್ಗಕ್ಕೆ ಸೇರಿಸುವ ಮಟ್ಟಕ್ಕೆ ವಿಸ್ತರಿಸಿದೆ.
16ನೆ ಶತಮಾನದ ಫ್ರೆಂಚ್ ನ್ಯಾಯಾಧೀಶ, ಲೇಖಕ ಡಿ ಲಾ ಬೊಯೆಟಿ ಒಂದೆಡೆ ”ನಿರಂಕುಶ ಪ್ರಭುತ್ವವೆಂದರೆ ನಿನ್ನನ್ನು ನಾಶ ಮಾಡಲು ಆವರಿಗೆ ಅಧಿಕಾರ ಕೊಡುವುದು” ಎಂದು ಹೇಳುತ್ತಾನೆ. ಜನತೆ ಸ್ವಯಂಪ್ರೇರಿತರಾಗಿ ತಮಗೆ ಗಾಯವನ್ನುಂಟು ಮಾಡುವ ಶೋಷಿತರನ್ನೇ ಆಯ್ಕೆ ಮಾಡುವ ಹಂತಕ್ಕೆ ಯಾಕೆ ತಲಪುತ್ತಾರೆ ಎನ್ನುವುದಕ್ಕೆ ಇಂದಿಗೂ ಉತ್ತರವಿಲ್ಲ. ಇಲ್ಲಿನ ಪ್ರಜ್ಞಾವಂತರು ಈ ಸಂಕೀರ್ಣ ಸಿಕ್ಕುಗಳನ್ನು ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದು ಆಶಾವಾದದ ಸೂಚನೆ ಎನ್ನಬಹುದೇ? ಅಥವಾ ಯಾಜಮಾನಕೀಯತೆಯನ್ನು ನಿರಾಕರಿಸುವ ನಾಟಕವೇ? ಇಲ್ಲಿನ ಪ್ರಜ್ಞಾವಂತರು ಇಂಡಿಯಾದ ಪ್ರಜಾಪ್ರಭುತ್ವ ಶಿಥಿಲ ತಳಹದಿಯ ಮೇಲೆ ಕಟ್ಟಲ್ಪಟಿದೆಯೋ ಅಥವಾ ಸದೃಢ ಪ್ರಜಾಪ್ರಭುತ್ವ ಶಿಥಿಲಗೊಳ್ಳುತ್ತಿದೆಯೋ ಎನ್ನುವ ಗೊಂದಲಗಳಲ್ಲಿ ಮುಳುಗಿದ್ದಾರೆ. ರಾಜಕೀಯಶಾಸ್ತ್ರಜ್ಞ ಅರೆಂಟ್ ”ಸರ್ವಾಧಿಕಾರವೆಂದರೆ ಶಕ್ತಿಶಾಲಿಯಾದ ಪ್ರಭುತ್ವವಲ್ಲ” ಎಂದು ಹೇಳುತ್ತಾನೆ. ಇದನ್ನೇ ಮುಂದುವರೆಸಿ ಹೇಳಬೇಕೆಂದರೆ ನಿರಂಕುಶ ಪ್ರಭುತ್ವವನ್ನು ಸಂಭ್ರಮಿಸುತ್ತಿರುವ ಪ್ರಜೆಗಳು ಇರುವವರೆಗೂ ನರಿಯಂತಹ ಫ್ಯಾಸಿಸ್ಟ್ ಪ್ರಭುತ್ವವು ಹುಲಿಯ ಮುಖವಾಡದಲ್ಲಿ ಗುರಾಯಿಸುತ್ತಲೇ ಇರುತ್ತದೆ. ಇಂತಹ ದಿನಗಳಿಗಾಗಿಯೇ ಪೂರ್ವ ತಯಾರಿ ಮಾಡಿಕೊಂಡಿರುತ್ತದೆ. ಇದನ್ನು ಮೀರಲೇಬೇಕಾಗಿದೆ.

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ



