ಕರ್ನಾಟಕ ಏಕೀಕರಣವಾದಾಗ ಟಿಪ್ಪು ಗುರುತಿಸಿದ ಭೂ ಭಾಗಗಳ ಆಧಾರದಲ್ಲೇ ಬಹುತೇಕ 'ಕರ್ನಾಟಕ ರಾಜ್ಯ' ಉದಯವಾಯಿತು. ಹಾಗಾಗಿ ಈಗಿನ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸೇರ್ಪಡೆಯೂ ಸೇರಿದಂತೆ ಕರ್ನಾಟಕ ಏಕೀಕರಣದ ಮೂಲ ಪುರುಷ ಟಿಪ್ಪು ಸುಲ್ತಾನ್. ಇಂತಹ ಹಲವು ಒಳನೋಟಗಳುಳ್ಳ ಟಿಪ್ಪು ಮತ್ತು ಹೈದರ್ ಕೃತಿ ಬಿಡುಗಡೆ ಮಾ. 29ರ ಭಾನುವಾರದಂದು...
ಪ್ರಜಾಪ್ರಭುತ್ವ- ಕರ್ನಾಟಕದಲ್ಲಿ ಟಿಪ್ಪು ಮತ್ತು ಮಂಗಳೂರು ಪಾತ್ರ
ಟಿಪ್ಪು ಸುಲ್ತಾನ್ ಸಹಜ ಮತ್ತು ಅಘೋಷಿತ (Naturally and unannounced) ಪ್ರಜಾಪ್ರಭುತ್ವವಾದಿಯಾಗಿದ್ದರು. ಅದಕ್ಕೆ ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದ್ದು, ಟಿಪ್ಪು ಸುಲ್ತಾನ್ ಉಳಿದ ರಾಜರುಗಳಂತೆ ಊಳಿಗಮಾನ್ಯ (ಜಮೀನ್ದಾರಿ/ಫ್ಯೂಡಲ್) ಕುಟುಂಬದಿಂದಲೋ, ಮೇಲ್ಜಾತಿ-ಕೆಳಜಾತಿ ಎಂಬ ಜಾತಿ ಆಧರಿತ ಧರ್ಮದಿಂದಲೋ ಬಂದ ರಾಜನಲ್ಲ! ಇನ್ನೊಂದು ಮುಖ್ಯ ಕಾರಣ ಮಂಗಳೂರು ಯುದ್ದ ಮತ್ತು ಬ್ರಿಟಿಷ್-ಫ್ರೆಂಚರ ಜೊತೆಗಿನ ಚರ್ಚೆಗಳು ಟಿಪ್ಪುವಿಗೆ ಕಲಿಸಿದ ಪಾಠಗಳು!
ದಕ್ಷಿಣ ಕನ್ನಡ ಜಿಲ್ಲೆ ಎನ್ನುವುದು ರಾಜನಿಲ್ಲದ ಊರು ಎಂಬ ಮಾತಿದೆ. ಯಾಕೆಂದರೆ ಇಲ್ಲಿ ಒಬ್ಬ ಸಾರ್ವಭೌಮ ರಾಜ ಇದ್ದಿದ್ದೇ ಇಲ್ಲ. ಎರಡ್ಮೂರು ಗ್ರಾಮಗಳು, ಹೆಚ್ಚೆಂದರೆ ಹತ್ತು ಗ್ರಾಮಗಳಿಗೊಬ್ಬ ರಾಜನಿದ್ದ. ಹೈದರಾಲಿ ಮತ್ತು ಟಿಪ್ಪು ಆಡಳಿತದಲ್ಲೂ ಈ ರಾಜರುಗಳು ಸಕ್ರಿಯರಾಗಿದ್ದರು. ಕಂದಾಯ ವಸೂಲಿ, ನ್ಯಾಯ ವ್ಯವಸ್ಥೆಯೂ ಸೇರಿದಂತೆ ಎಲ್ಲಾ ಅಧಿಕಾರಗಳನ್ನು ಈ ರಾಜರುಗಳು ಹೊಂದಿದ್ದರು. ಬಂಗರಸರು, ಚೌಟರು, ಹೆಗ್ಗಡೆಯವರು, ಕುಂಬಳೆ, ನೀಲೇಶ್ವರ ರಾಜರುಗಳು, ಅಜಿಲರು ಸೇರಿದಂತೆ ಹಲವು ರಾಜರುಗಳು ಅಲ್ಲಲ್ಲಿ ಅರಮನೆಗಳನ್ನು ಕಟ್ಟಿಕೊಂಡು ರಾಜ್ಯಾಡಳಿತ ಮಾಡುತ್ತಿದ್ದರು. ಟಿಪ್ಪು ಈ ರಾಜರುಗಳ ಜೊತೆ ರಾಜತಾಂತ್ರಿಕವಾಗಿ ಉತ್ತಮ ಸಂಬಂಧ ಹೊಂದಿದ್ದರು. ಆದರೆ ಮಿತಿಮೀರಿದ ಕಂದಾಯ ವಸೂಲಿಯೂ ಸೇರಿದಂತೆ ಯಾವುದೇ ರೀತಿಯಲ್ಲಿ ಮಂಗಳೂರಿನ ಪ್ರಜೆಗಳಿಗೆ ಕಿರುಕುಳವಾದರೆ ಟಿಪ್ಪು ನಿರ್ದಾಕ್ಷಿಣ್ಯವಾಗಿ ಮಂಗಳೂರಿನ ಪ್ರಜೆಗಳ ಪರವಾಗಿ ನಿಂತು ಬಿಡುತ್ತಿದ್ದರು. ‘ತುಂಡರಸರು ಅವರ ಪ್ರಜೆಗಳಿಂದ ಎಷ್ಟಾದರೂ ಕಂದಾಯ ವಸೂಲಿ ಮಾಡಲಿ, ನನ್ನ ಕಪ್ಪ ನನಗೆ ಬಂದರಾಯ್ತು’ ಎಂಬ ನಿಲುವನ್ನು ಟಿಪ್ಪು ಹೊಂದಿರಲಿಲ್ಲ. ಭಾರತದ ಉಳಿದ ಎಲ್ಲಾ ರಾಜರುಗಳಂತೆ ಟಿಪ್ಪು ತನ್ನ ನಾಗರಿಕರನ್ನು ಜೀತಕ್ಕೆ/ಉಚಿತವಾಗಿ ದುಡಿಸಿಕೊಂಡಿಲ್ಲ. ಟಿಪ್ಪುವಿನ ಜೊತೆಗಿದ್ದ ಕಾರ್ಮಿಕರೆಲ್ಲರೂ ‘ಸಂಬಳ’ ವ್ಯವಸ್ಥೆಯಡಿ ಬರುತ್ತಿದ್ದರು. ಕಾರ್ಮಿಕನ ಬೆವರು ಆರುವ ಮುನ್ನವೇ ಸಂಬಳ ನೀಡಬೇಕು ಎಂಬ ತತ್ವ ಪಾಲಿಸುತ್ತಿದ್ದ ಟಿಪ್ಪು, ಕಾರ್ಮಿಕರಿಗೆ ಪ್ರತೀ ತಿಂಗಳ 24ನೇ ತಾರೀಕಿನಂದೇ ತಿಂಗಳ ಸಂಬಳ ನೀಡುತ್ತಿದ್ದರು. ಇದಕ್ಕೆ ಕಾರಣ, ಟಿಪ್ಪು ಊಳಿಗಮಾನ್ಯ/ಜಮೀನ್ದಾರ ಕುಟುಂಬದಿಂದ ಬಂದ ರಾಜನಲ್ಲದೇ ಇರುವುದು!
ಇದನ್ನು ಓದಿದ್ದೀರಾ?: ಕಾರ್ಮಿಕರ ಕೊರತೆ | ಸಿಬ್ಬಂದಿ ತುಂಬಲು ಭಾರತದ ಕಡೆ ಮುಖ ಮಾಡಿದ ಜರ್ಮನಿ
ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ರಾಜ್ಯವು 2,00,000 ಚ. ಕಿ.ಮೀಗಳನ್ನು ಒಳಗೊಂಡಿತ್ತು. ಮಂಗಳೂರು, ಉತ್ತರ ಕನ್ನಡ, ಕಾಸರಗೋಡು ಕೂಡ ಮೈಸೂರು ಸಾಮ್ರಾಜ್ಯವಾಗಿತ್ತು. ಟಿಪ್ಪು ಹುತಾತ್ಮರಾದ ಬಳಿಕ ಇಡೀ ಕರಾವಳಿಯನ್ನು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಎಂದು ವಿಭಜಿಸಿದ ಬ್ರಿಟಿಷರು, ದಕ್ಷಿಣ ಕನ್ನಡ ಜಿಲ್ಲೆಯನ್ನು ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸಿದ್ದರು. ಉತ್ತರ ಕನ್ನಡ ಭಾಗವನ್ನು ಮುಂಬೈ ಪ್ರಾಂತ್ಯಕ್ಕೆ ಸೇರಿಸಿದ್ದರು. ಸ್ವಾತಂತ್ರ್ಯ ಬಂದ ನಂತರ ಮೈಸೂರು ರಾಜ್ಯಕ್ಕೆ ಟಿಪ್ಪುವಿನ ಭೂ ಭಾಗಗಳೆಲ್ಲವೂ ವಾಪಸ್ ಬಂದವು. ಟಿಪ್ಪು ಹುತಾತ್ಮರಾಗಿ ನೂರಾರು ವರ್ಷಗಳು ಸಂದರೂ, ಕರ್ನಾಟಕ ಏಕೀಕರಣವಾದಾಗ ಟಿಪ್ಪು ಗುರುತಿಸಿದ ಭೂ ಭಾಗಗಳ ಆಧಾರದಲ್ಲೇ ಬಹುತೇಕ ‘ಕರ್ನಾಟಕ ರಾಜ್ಯ’ ಉದಯವಾಯಿತು. ಹಾಗಾಗಿ ಈಗಿನ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸೇರ್ಪಡೆಯೂ ಸೇರಿದಂತೆ ಕರ್ನಾಟಕ ಏಕೀಕರಣದ ಮೂಲ ಪುರುಷ ಟಿಪ್ಪು ಸುಲ್ತಾನ್ ಎಂದರೆ ತಪ್ಪಾಗಲಾರದು.
ಬ್ರಿಟಿಷರು ಟಿಪ್ಪುವನ್ನು ತೀವ್ರವಾಗಿ ದ್ವೇಷಿಸಲು ಮತ್ತು ಭಯಗೊಳ್ಳಲು ಮುಖ್ಯ ಕಾರಣ, ಟಿಪ್ಪುವಿಗಿದ್ದ ರಾಜಕೀಯ ಪ್ರಜ್ಞೆ. ಟಿಪ್ಪು ಸುಲ್ತಾನ್ ಭಾರತದ ಇತರ ರಾಜರಂತೆ ಕೇವಲ ರಾಜನಾಗಿರಲಿಲ್ಲ. ಟಿಪ್ಪುವಿನೊಳಗೊಬ್ಬ ಸಮ ಸಮಾಜ ನಿರ್ಮಾಣದ ಸ್ವಾತಂತ್ರ್ಯ ಹೋರಾಟಗಾರ, ಪ್ರಜಾಪ್ರಭುತ್ವವಾದಿ ಇದ್ದ. ಹಾಗಾಗಿ ಟಿಪ್ಪುವಿನ ಬಗೆಗೆ ಬ್ರಿಟಿಷರು ಭಯಗೊಂಡಿದ್ದರು. ಟಿಪ್ಪು ಬ್ರಿಟಿಷ್ ಸಾಮ್ರಾಜ್ಯಶಾಹಿಯ ಬಗ್ಗೆ ಸಂಪೂರ್ಣ ಅರಿವನ್ನು ಹೊಂದಿದ್ದರು. ಬಾದಶಹ, ಬಹದ್ದೂರ್, ನವಾಬ ಎಂಬ ಬಿರುದಾಂಕಿತ ಟಿಪ್ಪು ಸುಲ್ತಾನ್ ತನ್ನನ್ನು ತಾನು ‘ನಾಗರಿಕ ಟಿಪ್ಪು’ ಎಂದು ಕರೆಸಿಕೊಂಡು ರಾಜ್ಯದ ತುಂಡರಸರುಗಳ ಮೂಲಕ ರಾಜ್ಯದ ಜನತೆಯನ್ನು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸುತ್ತಿದ್ದರು. ತನ್ನ ನಾಗರಿಕರೆಲ್ಲರೂ ಪ್ರಜಾಪ್ರಭುತ್ವವನ್ನು ಅರಿಯಬೇಕು ಎಂದು ಬಯಸಿದ್ದರು. ನಾಗರಿಕರು ಪ್ರಜಾಪ್ರಭುತ್ವವನ್ನು ಅರಿಯುವ ಮೊದಲು ತಾನು ಅರಿಯಬೇಕು ಎಂದು ಫ್ರೆಂಚರ ಜೊತೆಗೆ ಒಂದು ಕ್ಲಬ್ ನಿರ್ಮಾಣ ಮಾಡಿ ಗಣರಾಜ್ಯದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಟಿಪ್ಪುವಿಗೆ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ತುಡಿತ ಹೆಚ್ಚಾಗುತ್ತಾ ಹೋಯಿತು. ಇದು ಕುಂಬಳೆಯ ರಾಜ ಮತ್ತು ಫ್ರೆಂಚರಿಗೆ ಟಿಪ್ಪು ಬರೆದ ಪತ್ರಗಳನ್ನು ಓದಿದರೆ ಅರ್ಥವಾಗುತ್ತದೆ. ಟಿಪ್ಪುವಿನ ಈ ‘ನಾಗರಿಕ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ’ದ ತಿಳಿವಳಿಕೆಗೆ ಕಾರಣವಾದ ನೆಲ ಯಾವುದು ಎಂದರೆ, ಅದು ಮಂಗಳೂರು!
ಮಂಗಳೂರು ಬಂದರು ಮೂಲಕ ನಡೆಯುತ್ತಿದ್ದ ಅಂತಾರಾಷ್ಟ್ರೀಯ ವ್ಯವಹಾರಗಳು, ಆ ಮೂಲಕ ನಡೆಯುತ್ತಿದ್ದ ಫ್ರಾನ್ಸ್ ಮತ್ತು ಕೊಲ್ಲಿ ರಾಷ್ಟ್ರಗಳ ಜೊತೆಗಿನ ಪತ್ರ ವ್ಯವಹಾರಗಳು ಬಹದ್ದೂರ್ ಟಿಪ್ಪುವನ್ನು ಕ್ರಮೇಣ ಸಮ ಸಮಾಜದ ಸಮಾಜವಾದಿ, ಪ್ರಜಾಪ್ರಭುತ್ವವಾದಿ ನಾಗರಿಕ ಟಿಪ್ಪುವನ್ನಾಗಿಸಿದ್ದವು.
ಬ್ರಿಟಿಷರಿಗೆ ಟಿಪ್ಪುವಿನ ‘ವಸಾಹತುಶಾಹಿ ವಿರೋಧಿ ನಿಲುವು’ ಮಂಗಳೂರು ಒಪ್ಪಂದದ ಕಾಲದಲ್ಲೇ ಮನವರಿಕೆಯಾಗಿತ್ತು. ಮದ್ರಾಸ್ ಬ್ರಿಟಿಷ್ ಶಾಂತಿ ಆಯೋಗ ಸಿದ್ಧಪಡಿಸಿಕೊಂಡು ಬಂದಿದ್ದ ಒಪ್ಪಂದ ಸೂತ್ರವನ್ನು ಟಿಪ್ಪು ಸಂಪೂರ್ಣ ನಿರಾಕರಿಸಿದ್ದರು. ಯಾಕೆಂದರೆ ಆ ಒಪ್ಪಂದ ಸೂತ್ರದಲ್ಲಿ ಬ್ರಿಟಿಷರು ಮೈಸೂರು ರಾಜ್ಯದ ಆಂತರಿಕ ವಿಷಯಗಳ ಬಗ್ಗೆ ಹಸ್ತಕ್ಷೇಪ ಮಾಡಿದ್ದರು ಮತ್ತು ಪ್ರತ್ಯೇಕ ವಸಾಹತುಗಳನ್ನು ಸ್ಥಾಪಿಸುವ, ಪ್ರತ್ಯೇಕ ಮಿಲಿಟರಿ ವ್ಯವಸ್ಥೆ ಸ್ಥಾಪಿಸುವ ಹುನ್ನಾರ ಹೊಂದಿದ್ದರು. ಇದನ್ನು ಟಿಪ್ಪು ಅರಿತುಕೊಂಡು ಒಪ್ಪಂದ ಸೂತ್ರವನ್ನೇ ಬದಲಿಸಿದ್ದರು. ಟಿಪ್ಪುವಿನ ಈ ದೂರದರ್ಶಿತ್ವ ಕಂಡು ಬ್ರಿಟಿಷರು ದಂಗಾಗಿದ್ದರು. ಆದರೆ ಟಿಪ್ಪುವಿನ ಭಯದಿಂದ ಮಂಡಿಯೂರಿ ಮಂಗಳೂರು ಒಪ್ಪಂದವನ್ನು ಬ್ರಿಟಿಷರು ಒಪ್ಪಲೇಬೇಕಾಯಿತು.
ಇದನ್ನು ಓದಿದ್ದೀರಾ?: ಹೊಸ ಓದು | ಬಿ. ಶ್ರೀಪಾದ ಭಟ್ ಅವರ ಕೃತಿ- ಉನ್ನತ ಶಿಕ್ಷಣ: ಒಳಗೂ ಹೊರಗೂ
ದಕ್ಷಿಣ ಕನ್ನಡ ಜಿಲ್ಲೆಯ ಮೂಲಕವೇ ಟಿಪ್ಪು ರಾಜ್ಯದ ಹಲವು ಅನಿಷ್ಟ ಪದ್ದತಿಗಳನ್ನು ತೊಡೆದು ಹಾಕಿದರು. ಬಹು ಪತಿತ್ವ ಪದ್ದತಿ, ಹಿಂದುಳಿದ ವರ್ಗದ ಮಹಿಳೆಯರ ನಗ್ನತೆಯ ಪದ್ದತಿಯನ್ನು ತೊಡೆದು ಹಾಕಿ ಟಿಪ್ಪು ಮೊದಲ ಸಮಾಜ ಸುಧಾರಕ ಎನ್ನಿಸಿಕೊಂಡರು.
ವಸಾಹತುಶಾಹಿ ವಿರೋಧಿ ಸ್ವಾತಂತ್ರ್ಯ ಹೋರಾಟ, ಪ್ರಜಾಪ್ರಭುತ್ವ, ಸೌಹಾರ್ದತೆ, ಬ್ರಾತೃತ್ವ, ಕನ್ನಡ ನಾಡಿನ ಏಕೀಕರಣ, ಸಮಾಜ ಸುಧಾರಣೆ ಸೇರಿದಂತೆ ಹಲವು ಮೊದಲುಗಳನ್ನು ಟಿಪ್ಪು ಮೂಲಕ ಸಾರಿದ್ದು ದಕ್ಷಿಣ ಕನ್ನಡ ಜಿಲ್ಲೆ ಎಂದರೆ ತಪ್ಪಾಗಲಾರದು. ಹಾಗಾಗಿ ಟಿಪ್ಪು ಸುಲ್ತಾನ್ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆ! ಅವಿಭಜಿತ ದಕ್ಷಿಣ ಕನ್ನಡ (ಉತ್ತರ ಕನ್ನಡ-ಕಾಸರಗೋಡು ಸೇರಿದಂತೆ) ಜಿಲ್ಲೆಯ ಜನತೆಗೆ, ‘ನಾವು ಮೊದಲ ಸ್ವಾತಂತ್ರ್ಯ ಹೋರಾಟಗಾರ, ಪ್ರಜಾಪ್ರಭುತ್ವವಾದಿ ಟಿಪ್ಪು ನಡೆದಾಡಿದ, ರಾಜಕೀಯ ಮಾಡಿದ, ಬ್ರಿಟಿಷರನ್ನು ಬಗ್ಗು ಬಡಿದ ನೆಲದಲ್ಲಿ ಬದುಕುತ್ತಿದ್ದೇವೆ’ ಎಂಬುದೇ ಒಂದು ಹೆಮ್ಮೆಯ ಸಂಗತಿಯಾಗಬೇಕು!
(ಕರಾವಳಿಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕೃತಿಯಿಂದ ಆಯ್ದ ಭಾಗ)





