ಈ ಚಿತ್ರೋತ್ಸವದಲ್ಲಿ ನೋಡಲೇಬೇಕಿರುವ ಚಿತ್ರ, ಇಂದಿನ ಮಣಿಪುರದ ಸಂಘರ್ಷದ ಹಿನ್ನೆಲೆಯಲ್ಲಿ ಚಿತ್ರಿತವಾಗ ʼಬೂಂಗ್ʼ. ಬೂಂಗ್ ಎಂಬ ತುಂಟ ಬಾಲಕನ ಸುತ್ತ ಹೆಣೆದ ಕಥೆ. ಸ್ಥಳೀಯ ಕಥೆಯಂತೆ ಆರಂಭವಾಗುವ ಈ ಚಿತ್ರ ಮುಗಿಯುವ ವೇಳೆಗೆ ಭಾರತವಷ್ಟೇ ಅಲ್ಲ, ಇಡೀ ವಿಶ್ವದಾದ್ಯಂತ ನಡೆಯುತ್ತಿರುವ ಜನಾಂಗೀಯ ಕದನಕ್ಕೆ ಕನ್ನಡಿ ಹಿಡಿಯುತ್ತಾ, ಒಂದು ಅಗಾಧ ಜಗತ್ತನ್ನ ಪ್ರೇಕ್ಷಕರ ಮುಂದೆ ಅನಾವರಣಗೊಳಿಸುತ್ತದೆ. ಈ ಚಿತ್ರೋತ್ಸವದ ಒಂದು ವಿಶೇಷವೆಂದರೆ, ́ಹೆಣ್ಣೆಂದರೆ ಅಷ್ಟೇ ಸಾಕೇ…? ಎನ್ನುವಂಥ ಮಹಿಳಾ ಪ್ರಧಾನ ಚಿತ್ರಗಳು.
ವಿಶ್ವದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಒಂದಾದ The New York Indian Film Festival ನ, 26ನೇ ಅವೃತ್ತಿಯ ತೆರೆ ಸರಿಯಲು ಇನ್ನು ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಇದೆ. ಅಮೆರಿಕೆಯ ಭಾರತೀಯ ಸಮುದಾಯ ಈ ಉತ್ಸವಕ್ಕಾಗಿ ಕಾತುರದಿಂದ ಎದುರು ನೋಡುತ್ತಿದೆ. ಭಾರತೀಯ ಸಮುದಾಯವಷ್ಟೇ ಅಲ್ಲ, ಅಮೆರಿಕೆಯಲ್ಲಿ ನೆಲೆಸಿರುವ ಸಿನಿಮಾವನ್ನು ಪ್ರೀತಿಸುವ ವಿಶ್ವದ ವಿವಿಧ ಸಮುದಾಯಗಳು ಭಾರತದ ಆತ್ಮವನ್ನು ಸಾಧ್ಯವಾದಷ್ಟು ದೃಶ್ಯ ಸರಣಿಯ ಮೂಲಕ ಅರ್ಥಮಾಡಿಕೊಳ್ಳಲು ಕಾತುರದಿಂದ ಕಾದಿವೆ. ಏಕೆಂದರೆ ಈ ಚಿತ್ರೋತ್ಸವದಲ್ಲಿ ಭಾರತದ ಆತ್ಮವನ್ನು ಹಲವು ಕೋನಗಳಿಂದ, ಹಲವು ಸ್ತರಗಳಲ್ಲಿ ಸೆರೆಹಿಡಿದಿರುವ 45 ಕಥಾಚಿತ್ರ, ಸಾಕ್ಷ್ಯಚಿತ್ರ, ಕಿರುಚಿತ್ರ ಹಾಗೂ, ಸಿನಿಮಾ ತಜ್ಞರ ಮೂಲಕ ಅರ್ಥಮಾಡಿಕೊಳ್ಳಲು ಕಾತುರವಾಗಿವೆ. ಭಾರತೀಯ ಸಮುದಾಯಕ್ಕಂತೂ ಈ ಚಿತ್ರೋತ್ಸವ ಕೇವಲ ಮನರಂಜನೆಯ ಮಾಧ್ಯಮವಾಗಿ ಮಾತ್ರ ಮುಖ್ಯವಾಗುತ್ತಿಲ್ಲ. ಇದೊಂದು ರೀತಿಯಲ್ಲಿ ಅಂದಿನ ಎಂದಿನ ಭಾರತವನ್ನು ಅರ್ಥ ಮಾಡಿಕೊಳ್ಳುವ ಭಾವುಕವಾದ ಕೊಂಡಿ. ಭಾರತೀಯ ಸಮಾಜವನ್ನು ನಿಜರೂಪದಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅವರ ಭಾವನೆ.
ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಕೆಲವು ಕಥಾಚಿತ್ರಗಳ ಕುರಿತಾದ ಒಳನೋಟ ನೀಡುವ ಯತ್ನ ಇದು. ಈ ಪೈಕಿ ಸಂಘರ್ಷವೇ ಬದುಕಿನ ಭಾಗವಾಗಿರುವ ಭಾರತದ ಈಶಾನ್ಯ ಸೀಮೆಯ ಮಣಿಪುರವನ್ನು ಪ್ರತಿನಿಧಿಸುವ ಚಿತ್ರ ʼಬೂಂಗ್ʼ. ಈ ಚಿತ್ರ ಇತ್ತೀಚೆಗೆ ಆಸ್ಕರ್ ನಷ್ಟೇ ಪ್ರಧಾನವಾದ ಲಂಡನ್‌ನ ಪ್ರತಿಷ್ಠಿತ ಬಾಫ್ಟಾ (BAFTA) ‘ಅತ್ಯುತ್ತಮ ಮಕ್ಕಳ ಮತ್ತು ಕೌಟುಂಬಿಕ ಚಿತ್ರ’ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಈ ಚಿತ್ರ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಂದು, Biffes ನ ಘನತೆಯನ್ನು ಹೆಚ್ಚಿಸಿತ್ತು.
ಮಣಿಪುರದ ಜನಾಂಗೀಯ ಕದನಕ್ಕೆ ಹಿಡಿದ ಕನ್ನಡಿ ʼಬೂಂಗ್ʼ
ಇಂದಿನ ಮಣಿಪುರದ ಸಂಘರ್ಷದ ಹಿನ್ನೆಲೆಯಲ್ಲಿ ಚಿತ್ರಿತವಾಗ ʼಬೂಂಗ್ʼ ಬೂಂಗ್ ಎಂಬ ತುಂಟ ಬಾಲಕನ ಸುತ್ತ ಹೆಣೆದ ಕಥೆ. ಸ್ಥಳೀಯ ಕಥೆಯಂತೆ ಆರಂಭವಾಗುವ ಈ ಚಿತ್ರ ಮುಗಿಯುವ ವೇಳೆಗೆ ಭಾರತವಷ್ಟೇ ಅಲ್ಲ, ಇಡೀ ವಿಶ್ವದಾದ್ಯಂತ ನಡೆಯುತ್ತಿರುವ ಜನಾಂಗೀಯ ಕದನಕ್ಕೆ ಕನ್ನಡಿ ಹಿಡಿಯುತ್ತಾ, ಒಂದು ಅಗಾಧ ಜಗತ್ತನ್ನ ಪ್ರೇಕ್ಷಕರ ಮುಂದೆ ಅನಾವರಣಗೊಳಿಸುತ್ತದೆ. ಈ ಬೂಂಗ್ ಬಾಲಕನ ಪಾತ್ರವನ್ನು ಮಾಡಿರುವ ಹುಡುಗ ಗುಗುನ್ ಕಿಪ್ಜೆನ್, ಈ ಹುಡುಗ ಕಾಣೆಯಾಗಿರುವ ಅಥವಾ ಮರಣಹೊಂದಿರುವ ಸಾಧ್ಯತೆ ಇರುವ ತನ್ನ ತಂದೆ ಜೋಯ್ ಕುಮಾರ್ ನನ್ನು ಹುಡುಕಿಕೊಂಡು ಹೊರಡುವ ಪ್ರಯಾಣದ ಕಥೆ. ಈ ಕಥೆ ಮೊರೇಹ್ ಎಂಬ ಪುಟ್ಟ ಊರಿನ ಸುತ್ತು ಚಲಿಸುತ್ತದೆ. ಆದರೆ ಜನಾಂಗೀಯ ಕದನದಲ್ಲಿ ಈ ಕಥೆಯ ಕೇಂದ್ರ ಬಿಂದುವಾಗಿರುವ ಮೊರೇಹ್ ನಾಶವಾಗುತ್ತದೆ. ಈ ಚಿತ್ರವನ್ನು ನೋಡುವ ಮಣಿಪುರದ ಮಂದಿ ಕೊನೆಯ ಕಾಲಘಟ್ಟದಲ್ಲಿ ತಮ್ಮ ಮೊರೇಹ್ ಹೇಗಿತ್ತು ಎನ್ನುವ ಚಿತ್ರವನ್ನು ಕಾಣಬಹುದು. ಎಂದೂ ಮೊರೇಹ್ ಅನ್ನು ನೋಡದ ನಾವೂ ಕೂಡ ನೋಡಬಹುದು. ಈ ಚಿತ್ರವನ್ನು ನಿರ್ಮಿಸುವಾಗ ಮೊರೇಹ್ ನಲ್ಲಿ ಒಂದು ಉತ್ಸವ ನಡೆಯುತ್ತಿತ್ತಂತೆ. ಮೊರೇಹ್ ನ ಹೆಬ್ಬಾಗಿಲಲ್ಲಿ ಒಂದು ದೇವತೆಯ ವಿಗ್ರಹವಿತ್ತಂತೆ. ಅಲ್ಲೊಂದು ದೇವಾಲಯವಿದ್ದು, ಅಲ್ಲಿ ಪ್ರತಿವರ್ಷ ಜಾತ್ರೆಯಂಥ ಹಬ್ಬ ನಡೆಯುತ್ತಿತ್ತಂತೆ. ಇಲ್ಲಿಗೆ ತಮಿಳರು, ಮಾರವಾಡಿಗಳು, ಬರ್ಮೀಯರೂ ಸೇರಿದಂತೆ ಹಲವು ಜನಾಂಗದವರು ಸೇರುತ್ತಿದ್ದರಂತೆ. ಆ ಮೋರೇಹ್, ಈಗ ವೆರ್ನರ್ ಹೆರ್ಜೋಗ್ ನ In To The Inferno ಚಿತ್ರದ ಪಟ್ಟಣದಂತೆ ಕಾಣುತ್ತಿದೆ ಎನ್ನುವುದು ಕಾಲದ ವ್ಯಂಗ್ಯ.

‘ಬೂಂಗ್’ ಮಣಿಪುರಿ ಸಿನಿಮಾವನ್ನು ಲಕ್ಷ್ಮಿಪ್ರಿಯಾ ದೇವಿ ನಿರ್ದೇಶನ ಮಾಡಿದ್ದು, ಇದು ಅವರ ಮೊಟ್ಟ ಮೊದಲ ಸಿನಿಮಾ. ಈ ಚಿತ್ರ ನಿರ್ಮಾಣ ಮಾಡಿರುವುದು ಖ್ಯಾತ ಬಾಲಿವುಡ್ ನಟ ಮತ್ತು ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ, ವಿಕೇಶ್ ಭುತಾನಿ, ಅಲನ್ ಮೆಕ್ ಅಲೆಕ್ಸ್ ಮತ್ತು ಶುಜಾತ್ ಸೌದಾಗರ್. ಈ ಚಿತ್ರವು ಮಣಿಪುರದ ಶಾಲಾ ಬಾಲಕ ಬೂಂಗ್‌ನ ಸುತ್ತ ಸುತ್ತುತ್ತದೆ. ಜನಾಂಗೀಯ ಸಂಘರ್ಷ ಮತ್ತು ಗಡಿಭಾಗದ ಸವಾಲುಗಳ ನಡುವೆ, ತನ್ನ ಒಡೆದು ಹೋದ ಕುಟುಂಬವನ್ನು ಮತ್ತೆ ಒಂದುಗೂಡಿಸಲು ಆತ ನಡೆಸುವ ಪ್ರಯತ್ನ ಮತ್ತು ಭಾವನಾತ್ಮಕ ಪ್ರಯಾಣವನ್ನು ಈ ಸಿನಿಮಾ ಕಟ್ಟಿಕೊಡುತ್ತದೆ. ಈ ಚಿತ್ರವನ್ನು ತಯಾರಿಸುತ್ತಿರುವಾಗ ಡೇರೆಯಲ್ಲಿ ಸೊಳ್ಳೆಪರದೆಯೊಳಗೆ ಹುದುಗಿ ಮಲಗಿರುತ್ತಿದ್ದ ನಿರ್ದೇಶಕಿ ದೂರದಿಂದ ಬಂದೂಕುಗಳಿಂದ ಹಾರುತ್ತಿದ್ದ ಗುಂಡುಗಳ ಸದ್ದು, ಸತ್ತು ನೆಲಕ್ಕುರುಳಿದ್ದ ಜೀವಗಳ ಆರ್ತನಾದ ಕೇಳಿಸುತ್ತಿತ್ತಂತೆ.
ಮೈತೇಯಿ ಕುಕಿ ಸಂಘರ್ಷದ ಹಿನ್ನೆಲೆ
ಮಣಿಪುರದಲ್ಲಿ ನಡೆಯುತ್ತಿರುವ ಪ್ರಸಕ್ತ ಜನಾಂಗೀಯ ಸಂಘರ್ಷಕ್ಕೆ ಈಗ ಮೂರು ವರ್ಷವಾಗಿದೆ. ಈ ಸಂಘರ್ಷದಿಂದ ಮಣಿಪುರದ ಮನಸ್ಸು, ದೇಹ ಆತ್ಮ ಎಲ್ಲೂವ ಛಿದ್ರ ಛಿದ್ರವಾಗಿದೆ. ಇದು ಈಶಾನ್ಯ ಭಾರತ ಕಂಡಿರುವ ಅತ್ಯಂತ ದೊಡ್ಡ ಆಂತರಿಕ ಸಂಘರ್ಷ ಎನ್ನಬಹುದು. ಈ ಸಂಘರ್ಷ ನಡೆಯುತ್ತಿರುವುದು ಇಂಫಾಲ್ ಕಣಿವೆಯಲ್ಲಿ ಬಹುಸಂಖ್ಯಾತರಾಗಿರುವ ಬಹುಜನಾಂಗೀಯ ಮೈತೇಯಿ ಸಮುದಾಯ ಮತ್ತು ಕಣಿವೆಯ ಪರ್ವತ ಪ್ರದೇಶಗಳಲ್ಲಿರುವ ಹೊರಗಿರುವ ಕುಕಿ-ಜೋ ಬುಡಕಟ್ಟಿನ ಸಮುದಾಯಗಳ ನಡುವೆ. ಈ ನಡುವೆ ನಾಗಾ ಜನಾಂಗದವರು ಕೂಡ ರಾಜಕೀಯ ಮತ್ತು ಪ್ರಾಂತೀಯ ಕಾರಣಕ್ಕಾಗಿ ಈ ಸಂಘರ್ಷದ ಒಂದು ಭಾಗವಾಗಿದ್ದಾರೆ. ಈ ಸಂಘರ್ಷಕ್ಕೆ ಕಾರಣವಾಗಿದ್ದು, ಮಣಿಪುರದ ಉಚ್ಛ ನ್ಯಾಯಾಲಯ ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ವರ್ಗ (ST) ಸ್ಥಾನಮಾನ ನೀಡಬೇಕೆಂದು ಆದೇಶಿಸಿದ್ದು. ಆದರೆ ಮೈತಿ ಸಮುದಾಯದ ಅಸ್ತಿತ್ವಕ್ಕೆ ಧಕ್ಕೆ ಬಂದಂತಾಗಿದೆ. ಅವರ ಸ್ಥಳೀಯ ಅಸ್ಮಿತೆ ಪ್ರಶ್ನಾರ್ಹವಾಗುತ್ತದೆ ಎಂಬ ಭಯ ಅವರನ್ನು ಕಾಡುತ್ತಿದೆ. ಇದರಿಂದಾಗಿ ಸಾಂವಿಧಾನಿಕವಾಗಿ ದಕ್ಕಿರುವ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುವ ಭಯ ಅವರನ್ನು ಕಾಡುತ್ತಿದೆ. ಹಾಗಾಗಿ ಮೇ 3, 2023ರಲ್ಲಿ ನಡೆದ ಬುಡಕಟ್ಟಿನ ಏಕತೆ ಮತ್ತು ಒಗ್ಗಟ್ಟಿಗೆ ಧಕ್ಕೆಯಾಗುತ್ತದೆ ಎಂದು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತು. ಅಲ್ಲಿಂದ ಬಹುಸಂಖ್ಯಾತ ಮೈತೇಯಿ ಸಮುದಾಯ ಹೋರಾಟಕ್ಕೆ ಇಳಿದು, ಇದರ ಕಾವು ಇನ್ನೂ ಆರಿಲ್ಲ. ಪರಸ್ಪರ ಹಿಂಸೆ ಇಡೀ ಕಣಿವೆಯನ್ನು ರಕ್ತಸಿಕ್ತವಾಗಿಸಿದೆ. ಈ ಸಂಘರ್ಷದಿಂದ ಕಳೆದ ಮೂರು ವರ್ಷದಲ್ಲಿ ಸಾವಿರಾರು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಕುಕಿಗಳ ಅಸ್ತಿತ್ವ ಅಳಿಸಿ ಹೋಗುವ ಸ್ಥಿತಿ ಎದುರಾಗಿದೆ. ಸುಮಾರು 60,000 ಮಂದಿ ನಿರ್ವಸಿತರಾಗಿದ್ದಾರೆ. ಎಷ್ಟೋ ಮಂದಿ ಇನ್ನೂ ಆಶ್ರಯ ಶಿಬಿರಗಳಲ್ಲಿ ಕಾಲ ಸವೆಸುತ್ತಿದ್ದಾರೆ. ಹಾಗಾಗಿ ಕುಕಿಗಳು ತಮಗಾಗಿ ಪ್ರತ್ಯೇಕವಾದ ಕೇಂದ್ರಾಡಳಿತ ಪ್ರದೇಶಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಸಂಘರ್ಷದಿಂದಾಗಿ ಮಣಿಪುರದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಕ್ಷಣಾತ್ಮಕ ಪ್ರಶ್ನೆಗಳು ಕೇಂದ್ರ ಸರ್ಕಾರದ ಮುಂದಿದೆ. ಆದರೆ ದೇಶವನ್ನು ಆಳುತ್ತಿರುವವರಿಗೆ ಈಗ ಅವರ ಸಮಸ್ಯೆಗಳನ್ನು ಪರಿಹರಿಸುವಷ್ಟು ಸಮಯವಿಲ್ಲ ಎಂದು ಖಚಿತವಾಗಿದೆ. ಈ ಸಂಘರ್ಷದಲ್ಲಿ ಕಳೆದುಹೋಗಿರುವ ತಂದೆಯನ್ನು ಹುಡುಕಲು ಹೊರಟಿರುವ ಹುಡುಗನೊಬ್ಬನ ಮೂಲಕ ಇಡೀ ಸಮುದಾಯ ಎದುರಿಸುತ್ತಿರುವ ಸಂಕೀರ್ಣ ಸ್ಥಿತಿಯನ್ನು ಸುಮಾರು ಒಂದೂವರೆ ಗಂಟೆಯ ʼಬೂಂಗ್ʼ ಯಶಸ್ವಿಯಾಗಿ ಹೇಳುತ್ತದೆ.
ಮಣಿಪುರದಲ್ಲಿ ಪ್ರಸ್ತುತ ನಡೆಯುತ್ತಿರುವ ಸಂಘರ್ಷ ನಿಲ್ಲಬೇಕು, ಶಾಂತಿ-ಸೌಹಾರ್ದತೆ ನೆಲೆಸಬೇಕು. ಈ ಸಂಘರ್ಷದಿಂದ ಮನೆ-ಬದುಕು, ಮತ್ತು ಕುಟುಂಬವನ್ನು ಕಳೆದುಕೊಂಡ ಮಕ್ಕಳಿಗೆ, ಅವರ ಬಾಲ್ಯ, ಜೀವನ ಪುನಃ ದಕ್ಕಬೇಕು. ಅವರ ಬಾಲ್ಯದ ಸಂತೋಷ, ಕನಸುಗಳು ಮತ್ತೆ ಕಂಡುಕೊಳ್ಳುವಂತಾಗಬೇಕು. ಕ್ಷಮೆ ಎಂಬುದು ಮನುಷ್ಯನ ಅತಿದೊಡ್ಡ ಮಾನವೀಯ ನಡೆ. ಯಾವುದೇ ಸಂಘರ್ಷ ಈ ಗುಣವನ್ನು ನಾಶಪಡಿಸಲು ಸಾಧ್ಯವಿಲ್ಲ ಎಂಬುದನ್ನು ಈ ಚಿತ್ರದ ಮೂಲಕ ಮನವರಿಕೆ ಮಾಡಿಕೊಡುವ ಯತ್ನ ಆಕೆಯದು.
‘ಬೂಂಗ್’ ಚಿತ್ರ ಮೊದಲು 2024ರ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ನಂತರ ವಾರ್ಸಾ, ಮುಂಬೈ, ಗೋವಾ ಮತ್ತು ಮೆಲ್ಬೋರ್ನ್ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಗುಗುನ್ ಕಿಪ್ಜೆನ್, ಬಾಲಾ ಹಿಜಾಮ್ ನಿಂಗ್ಥೌಜಮ್ ಮತ್ತು ಅಂಗೋಮ್ ಸನಾಮತಮ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಮಣಿಪುರ ಚಿತ್ರದ ಈ ಸಾಧನೆ ಇಡೀ ದೇಶಕ್ಕೆ ಹೆಮ್ಮೆಯ ಕ್ಷಣ ಎಂಬುದಂತು ಖಂಡಿತ.
ಪಲಾಯನ ಮಾಡದ ಪಲಾಶನ ಅದಮ್ಯ
ಮೊನ್ನೆ ಮೊನ್ನೆಯಷ್ಟೇ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆದು ತೃಣಮೂಲ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು, ಮೂಲಭೂತವಾದದಲ್ಲಿ ನಂಬಿಕೆ ಇರುವ, ಸಂವಿಧಾನದ ಬಗ್ಗೆ ತುಸುವೂ ಗೌರವವಿಲ್ಲದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದೇ ರೀತಿ ಕೆಲವು ವರ್ಷಗಳ ಮೂವತ್ತು ವರ್ಷಗಳ ಕಾಲ ಅಧಿಕಾರ ಸೂತ್ರ ಹಿಡಿದಿದ್ದ ಎಡಪಂಥೀಯ ಪಕ್ಷಗಳನ್ನು ಅಳಿಸಿ ಈ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಒಂದು ಕಾಲದಲ್ಲಿ ಕ್ರಾಂತಿ ಕಿಡಿಯಂಥ ಸಿನಿಮಾಗಳನ್ನು ಮಾಡುತ್ತಿದ್ದ ಪಶ್ಚಿಮ ಬಂಗಾಳದ ಚಿತ್ರಕರ್ತರು ಕಾಣೆಯಾಗುತ್ತಿದ್ದಾರೆ ಎಂಬ ಭಾವನೆಯೂ ಪ್ರೇಕ್ಷಕರಲ್ಲಿ ಮೂಡಿತ್ತು. ಅಂಥ ಹೊತ್ತಿನಲ್ಲಿ ರಂಜನ್ ಘೋಷ್ ಅವರ ʼಅದಮ್ಯʼ ಚಿತ್ರ ಪ್ರೇಕ್ಷಕರಲ್ಲಿ ಹೊಸ ಭರವಸೆ ಮೂಡಿಸಿದೆ.
ಈ ಚಿತ್ರದ ಕಥೆಯೇ ಕುತೂಹಲಕಾರಿಯಾಗಿದೆ. ವಿಫಲ ರಾಜಕೀಯ ಹತ್ಯೆಯ ನಂತರ ೨೩ ವರ್ಷದ ಯುವಕ ಪಲಾಶ್ ಪಲಾಯನದ ದಾರಿ ಹಿಡಿಯುತ್ತಾನೆ. ಸಂಘರ್ಷದ ನೆಲೆಯಾದ ಸುಂದರಬನದ ದಾರಿ ಹಿಡಿಯುವ ಪಲಾಶ್‌ಗೆ ನಿಧಾನವಾಗಿ ತಾನು ನಂಬಿದ ತತ್ವ-ಸಿದ್ಧಾಂತ, ಪ್ರತಿಭಟನೆಯ ಮಾದರಿ, ಮತ್ತು ಅಸ್ಮಿತೆ ಮುಂತಾದ ಹಣೆಪಟ್ಟಿ ಕಟ್ಟಿಕೊಂಡಂತೆ ಕಾಣಿಸತೊಡಗುತ್ತದೆ. ಪಲಾಶ್ ನ ಪಯಣವೇ ಒಂದರ್ಥದಲ್ಲಿ ಅವನ ಹುಡುಕಾಟದ ಹಾದಿಯಾಗುತ್ತದೆ. ಆದರೆ ಈ ಪಯಣದಲ್ಲಿ ತಾನು ನಂಬಿದ್ದನ್ನು ಮತ್ತಷ್ಟು ಗಟ್ಟಿಮಾಡಿಮಾಡಿಕೊಳ್ಳುವುದು, ಈ ಚಿತ್ರದ ತೀರಾ ಧನಾತ್ಮಕ ಅಂಶವೆನ್ನಿಸಿ, ಮನಸ್ಸಿಗೆ ಹಿತವೆನ್ನಿಸುತ್ತದೆ.

ಒಟ್ಟಿನಲ್ಲಿ ʼಅದಮ್ಯʼ ಒಂದು ರೀತಿಯಲ್ಲಿ ರಾಜಕೀಯವಾಗಿ ರೋಮಾಂಚನಗೊಳಿಸುವ ವಸ್ತುವನ್ನು ಹೊಂದಿರುವ ಚಿತ್ರ. ಇದರಲ್ಲಿ ತತ್ವ-ಸಿದ್ಧಾಂತದ ಮನೋವೈಜ್ಞಾನಿಕ ತಾಕಲಾಟವನ್ನು ದೃಶ್ಯಗಳ ಮೂಲಕ ಸೆರೆಹಿಡಿಯುವುದರಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ. ಈ ಚಿತ್ರವನ್ನು ನೋಡುವಾಗ ನೆನಪಾಗುವುದು 2006ರಲ್ಲಿ ರಾಕ್ಯೇಶ್ ಓಂಪ್ರಕಾಶ್ ಮೆಹ್ರಾ ಅವರ ʼರಂಗದೇ ಬಸಂತಿʼ ಚಿತ್ರ. ಆದರೆ ʼಅದಮ್ಯʼ ನೋಡುವಾಗ ಅನ್ನಿಸುವುದು ಒಂದು ರೀತಿಯ ಅನುಭಾವಿ ಅಂತ್ಯವೆಂದೇ. ಏಕೆಂದರೆ ಅದರ ದೃಶ್ಯ ಧ್ವನಿಸುವ ಅರ್ಥಗಳು ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಚಿತ್ರದ ನೆಲೆ ಮಾತ್ರ, ಬಹಳ ಹಿಂದೆ ಎಂ.ಎಸ್. ಸತ್ಯು ನಿರ್ದೇಶಿಸಿದ ʼಕಹಾಂ ಕಹಾಂ ಸೇ ಗುಜರ್ ಗಯಾʼ ಕೂಡ ನೆನಪಾಗುತ್ತದೆ. ಜೊತೆಯಲ್ಲಿ ಜೀನ್ ಲುಕ್ ಗೊದಾರ್ದ್ ನೆನಪಾಗುತ್ತದೆ. ಅವನು ಹೇಳುವುದು Cinema is a Gun ಎಂದೇ. ಅದು ʼಅದಮ್ಯʼ ನೋಡಿದಾಗ ನೆನಪಾದದ್ದು ಪಲಾಶ್ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಭಗತ್ ಸಿಂಗ್ ಚಿತ್ರ. ಈ ಒಂದು ದೃಶ್ಯದ ಮೂಲಕ ಬಂಗಾಳಿ ಸಿನಿಮಾ ಇನ್ನೂ ತನ್ನ ಅತ್ಮವನ್ನು ಮಾರುಕಟ್ಟೆಗೆ ಮಾರಿಕೊಂಡಿಲ್ಲ ಎನ್ನುವುದು ಸ್ಪಷ್ಟವಾಯಿತು. ಆದರೆ 2026ರ ಈ ಚಿತ್ರವನ್ನು ಈಗಿರುವ ಬಿಜೆಪಿ ಸರ್ಕಾರ ಹೇಗೆ ನೋಡುತ್ತದೋ ಗೊತ್ತಿಲ್ಲ. ಸದ್ಯಕ್ಕೆ ಚಲನಚಿತ್ರೋತ್ಸವಗಳಿಗೆ ಪ್ರವೇಶ ಪಡೆಯುತ್ತಿರುವ ಈ ಚಿತ್ರ, ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆಯ ಬಗ್ಗೆ ನನಗಂತೂ ಅನುಮಾನವಿದೆ. ಆದರೆ, ಮಾರ್ಕಿಸ್ಟ್ ಸಿದ್ಧಾಂತವನ್ನು ಈ ಚಿತ್ರ ಚರ್ಚೆಗೆ ಒಳಪಡಿಸುವುದರಿಂದ ಬಿಜೆಪಿ ಸರ್ಕಾರ ಇದಕ್ಕೆ ರಿಯಾಯತಿ ತೋರಿದರೂ ತೋರಬಹುದು ಎಂಬುದು ಇನ್ನೊಂದು ನಂಬಿಕೆ. ಆದರೆ ಈ ಚಿತ್ರ ಭಾರತದ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡರೆ, ಇದೊಂದು ಅತ್ಯಂತ ಧೈರ್ಯದಿಂದ ಮಾಡಿದ ಕ್ರಾಂತಿಕಾರಿ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗುವುದಂತೂ ಖಂಡಿತ. ಸುಮಾರು 120 ನಿಮಿಷಗಳ ಈ ಚಿತ್ರವನ್ನು ಅಪರ್ಣಾ ಸೇನ್ ಅರ್ಪಿಸಿದ್ದಾರೆ. ಈ ಚಿತ್ರಕ್ಕೆ ಛಾಯಾಗ್ರಹಣ ನೀಡಿದವರು ಹೆಸರಾಂತ ಛಾಯಾಗ್ರಾಹಕ ಅರ್ಕಪ್ರಭೋದಾಸ್. ಇದು ಥಿಯೇಟರ್ ಗಳಲ್ಲಿ ಬಿಡುಗಡೆಯಾದದ್ದು ಫೆಬ್ರುವರಿ 13, 2026. ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಸುಖಂತ ಭಟ್ಟಾಚಾರ್ಯ ಅವರ ಪದ್ಯಗಳಿಂದ ಪ್ರೇರಿತವಾಗಿರುವುದು ಮತ್ತು ಪಶ್ಚಿಮ ಬಂಗಾಳದ ಹಲವು ಮೂಲೆಗಳಲ್ಲಿ ಚಿತ್ರವನ್ನು ಚಿತ್ರೀಕರಿಸಿರುವುದು. ಈ ಚಿತ್ರ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಹಣ ಹಾಕುವವರು ಯಾರೂ ಮುಂದೆ ಬರಲಿಲ್ಲ. ಆಗ ಚಿತ್ರ ಮಾಡುವುದನ್ನು ಉಚ್ವಾಸ-ನಿಶ್ವಾಸವೆಂದುಕೊಂಡ ಆರು ಮಂದಿ ಜೊತೆಗೂಡಿ ಹಠದಿಂದ ಮಾಡಿದ ಚಿತ್ರವಿದು. ಇದಕ್ಕೊಂದು ಲಾಲ್ ಸಲಾಮ್ ಅನ್ನದೇ, ಈ ಲೇಖಕನಿಗೆ ಬೇರೆ ದಾರಿ ಕಾಣುತ್ತಿಲ್ಲ. ಈ ಚಿತ್ರ FIPRESCI India Film Festival ̄2026ಗೆ ಆಯ್ಕೆಯಾಗಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿ. ಈ ಚಿತ್ರ. The New York Indian Film Festival ನ, 26ನೇ ಅವೃತ್ತಿಯಲ್ಲಿ ಪ್ರದರ್ಶನಗೊಳ್ಳುವುದರ ಮೂಲಕ ಚಿತ್ರೋತ್ಸವದ ಗೌರವವನ್ನು ಹೆಚ್ಚಿಸಿದೆ ಎಂದರೆ ಆತಿಶಯೋಕ್ತಿಯಲ್ಲ.
ಮಸೂರದ ಮೂಲಕ ಕಂಡ ಪಂಜಾಬ್ ನ ಸಮಾಜ
ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಮತ್ತೊಂದು ಚಿತ್ರ Flowers of Acacia . ಈ ಚಿತ್ರ ಪಂಜಾಬಿ ಭಾಷೆಯದು. ಪಂಜಾಬಿ ಭಾಷೆಯಲ್ಲಿ ಇದನ್ನುʼಕಿಕ್ಕರಾನ್ ದೇ ಫುಲ್ʼ ಎಂದು ಹೆಸರಿಸಲಾಗಿದೆ. ಈ ಚಿತ್ರವನ್ನು ನಿರ್ದೇಶಿಸಿದವರು ಅನ್ಮೋಲ್ ಸಿಧು. ಈ ಚಿತ್ರ ನೈಜವಾದ ಘಟನೆಗಳನ್ನು ಆಧರಿಸಿದ್ದು. ಮದುವೆಗಳಲ್ಲಿ ನರ್ತಿಸುವ ಆರ್ಕೇಸ್ಟ್ರಾ ನರ್ತಕಿಯರ ಬದುಕನ್ನು ಆಧರಿಸಿದ ಚಿತ್ರ ಇದು. ಈ ಚಿತ್ರ ಈ ಜನರ ಬದುಕಿನ ಖಾಸಗಿ ಕನಸುಗಳು ಮತ್ತು ಕಟು ವಾಸ್ತವ ಜೊತೆಯಲ್ಲಿ ಪಿತೃಪ್ರಧಾನ ವ್ಯವಸ್ಥೆ ಹಾಗೂ ಪುರುಷ ಅಹಂಕಾರದ ವಿವಿಧ ಮಜಲುಗಳನ್ನು ಪರಿಚಯಿಸುವ ಚಿತ್ರ. ಈ ಚಿತ್ರದ ಮೂಲಕ ಇಡೀ ಪಂಜಾಬ್ ಬದುಕಿನ ಹಲವು ವಿವರಗಳು, ಹಲವು ಸ್ತರಗಳಲ್ಲಿ ಅನಾವರಣಗೊಳ್ಳುತ್ತದೆ. ಇದಕ್ಕೆ English sub titles ಇರುವುದರಿಂದ ಚಿತ್ರವನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಕಷ್ಟವಾಗಲಾರದು.
ತಾಯಿ-ಮಗಳ ಸಂಕೀರ್ಣ ಸಂಬಂಧದ ʼತಿಘಿʼ
ಈ ಚಿತ್ರೋತ್ಸವದ ಮತ್ತೊಂದು ಆಕರ್ಷಣೆ ಮರಾಠಿ ಚಿತ್ರ ʼತಿಘಿʼ (TIghee)̤ ಈ ಚಿತ್ರ ಒಂದು ಹೆಣ್ಣಿನ ತನ್ನ ತಾಯಿಯೊಂದಿಗಿನ ಸಂಕೀರ್ಣ ಸಂಬಂಧವನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿದೆ. ತಾಯಿ-ಮಗಳ ಸಂಬಂಧದಲ್ಲಿ ಅತ್ಯಂತ ಮೂಲಭೂತ ಮತ್ತು ಸಂಕೀರ್ಣ ಸಂಬಂಧವೆಂದರೆ, ಆಕೆ ತನ್ನ ತನವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ತಾಯಿಯೊಂದಿಗಿನ ತನ್ನ ಹಲವು ಪದರಗಳ ಸಂಬಂಧವನ್ನು ತನ್ನ ಪ್ರಬುದ್ಧತೆ, ಬದ್ಧತೆ, ಪ್ರಾಮಾಣಿತೆಯನ್ನು ಅದರ ಎಳೆಗಳು ಕತ್ತರಿಸದಂತೆ ಕಾಪಾಡಿಕೊಳ್ಳುವುದು. ಈ ಚಿತ್ರವನ್ನು ನಿರ್ದೇಶಿಸಿದವರು ಜೀಜಿವಿಶ ಕಾಳೆ ಎಂಬ ಹೆಣ್ಣುಮಗಳು ಎಂಬುದು ವಿಶೇಷವಾದುದು. ತಿಘಿ ಎಂದರೆ ಮೂರು ಹೆಣ್ಣುಗಳು ಎಂದರ್ಥ. ಈ ಚಿತ್ರ, ಹೇಮಲತಾ (ಭಾರತಿ ಅಚ್ರೇಕರ್), ಆಕೆಯ ಮಕ್ಕಳಾದ ಸ್ವಾತಿ (ನೇಹಾ ಪೆಂಡ್ಸೆ) ಹಾಗು ಸಾರೀಕಾ (ಸೋನಾಲಿ ಕುಲಕರ್ಣಿ) ಅವರ ಸಂಬಂಧಗಳ ಸುತ್ತ ಹೆಣೆದ ಕಥೆ.

ನಿಖಿಲ್ ಮಹಾಜನ್ ಅವರ ಅದ್ಭುತವಾದ ಚಿತ್ರಕಥೆ ಮತ್ತು ಪ್ರಜಾಕ್ತ ದೇಶಮುಖ್ ಅವರ ಅರ್ಥಪೂರ್ಣ ಸಂಭಾಷಣೆಗಳಿಂದಾಗಿ ಈ ಚಿತ್ರ ಪ್ರೇಕ್ಷಕರ ಅಂತರಾಳಕ್ಕೆ ಇಳಿಯುತ್ತದೆ. ಹೃದಯವನ್ನು ತಟ್ಟುತ್ತದೆ. ಕೇವಲ ನೂರು ನಿಮಿಷಗಳ ಈ ಚಿತ್ರ ನಡೆಯುವ ಪ್ರಕ್ರಿಯೆಯನ್ನು ಅನುಭವಿಸುವುದೇ ಒಂದು ಹೊಸ ಅನುಭವ. ಇತರ ಚಿತ್ರಗಳಂತೆ ಈ ಚಿತ್ರ ನಾಟಕ ಅಥವಾ ಟೆಲಿವಿಷನ್ ಧಾರವಾಹಿಗಳ ರೂಪ ಪಡೆಯದೆ, ತನ್ನದೇ ಆದ ಸಿನಿಮೀಯ ತಂತ್ರಗಳಿಂದಾಗಿ ತನ್ನ ನಿಲುವನ್ನು ಸ್ಪಷ್ಟವಾಗಿ ಪ್ರಕಟಿಸುತ್ತದೆ. ಮಿಲಿಂದ್ ಜೋಗ್ ಅವರ ಛಾಯಾಗ್ರಹಣ, ಈ ಚಿತ್ರಕಥೆಗೆ ಪೂರಕವಾಗಿದೆ ಎಂದರೆ ಸರಿಯಾಗುತ್ತದೆ. ಹೃಷಿಕೇಶ್ ಪೆಟ್ವೆ ಚಿತ್ರದ ಲಯವನ್ನು ತಮ್ಮ Editing ನಲ್ಲಿ ಅದ್ಭುತ ಪರಿಣಾವನ್ನು ಸೃಷ್ಟಿಸಿದ್ದಾರೆ. ಜೀವಿಶರಂಥ ಹಲವು ನಿರ್ದೇಶಕಿಯರು ಚಿತ್ರರಂಗಕ್ಕೆ ಬಂದರೆ, ಚಿತ್ರದ ವ್ಯಾಕರಣ, ಮತ್ತು ಅರ್ಥವಂತಿಕೆ ಹೆಚ್ಚುತ್ತದೆ ಎಂದು ಹೇಳಿದರೆ ಅದನ್ನು ಅತಿಶಯೋಕ್ತಿ ಎನ್ನುವಂತಿಲ್ಲ. ತಿಘಿ ಒಂದರ್ಥದಲ್ಲಿ ಪ್ರೇಕ್ಷಕರು ಒಂದು ರೀತಿಯ ಚಿತ್ರವನ್ನು ಬಯಸುತ್ತಾರೆ ಎಂಬ ನಂಬಿಕೆಯನ್ನು ಒಡೆಯುತ್ತದೆ. ʼಧುರಂಧರ್ʼ ಬಿಡುಗಡೆಯಾದ ಹೊತ್ತಲ್ಲೇ ʼತಿಘಿʼ ಬಿಡುಗಡೆಯಾದರೂ, ಪ್ರೇಕ್ಷಕರು, ʼತಿಘಿʼಯನ್ನು ಮುಂಬೈನಲ್ಲಿ ನಿಲ್ಲಿಸಿದ್ದು ಒಂದು ಚರಿತ್ರಾರ್ಹ ಬೆಳವಣಿಗೆ ಎನ್ನಬಹುದು.
ಮಹಿಳಾ ತಂಡದ್ದೇ ಚಿತ್ರ
ಇವು ಕಥಾಚಿತ್ರಗಳ ಕುರಿತಾದರೆ, ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ʼಚುನ್ನಿʼ ಎಂಬ ಕಿರುಚಿತ್ರದ ಬಗ್ಗೆ ಹೇಳಲೇಬೇಕಿದೆ. ಈ ೧೫ ನಿಮಿಷದ ಚಿತ್ರ ನಿರ್ಮಿಸಿ ನಿರ್ದೇಶಿಸಿದವರೆಲ್ಲರೂ ಮಹಿಳೆಯರೇ ಎನ್ನುವುದು ಇಲ್ಲಿ ಮುಖ್ಯ. ಈ ಕಿರುಚಿತ್ರವನ್ನು ನಿರ್ದೇಶಿಸಿದವರು ಕಾಶ್ವಿ ಅಗರ್ವಾಲ್. ಈ ಚಿತ್ರದ ಮೂಲ ಧಾತುವಾದ ಮಹಿಳಾ ಸ್ವಾತಂತ್ರ್ಯ ಪ್ರವೃತ್ತಿ ಹಾಗೂ ಸಮಾಜದ ನಿರೀಕ್ಷೆಗಳನ್ನು ದೆಹಲಿಯ ಭೂಮಿಕೆಯ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ.

ಈ ಚಿತ್ರದ ಕೇಂದ್ರಬಿಂದು ಅವ್ನಿ ಎಂಬ ಯುವತಿ (ಈ ಪಾತ್ರಕ್ಕೆ ಜೀವತುಂಬಿದ ಕಲಾವಿದೆ ಪ್ರೀತಿ ಪಾಣಿಗ್ರಾಹಿ) ಆಕೆಯ ಕುಟುಂಬ ಅವ್ನಿಗೆ ಆಕೆಯ ಶಾಲೆಯ ಕಾರ್ಯಕ್ರಮವೊಂದರಲ್ಲಿ ಕಿರು ಉಡುಗೆಗಳನ್ನು ಧರಿಸಲು ಅವಕಾಶ ನಿರಾಕರಿಸಿದಾಗ, ಆಕೆ ಅದನ್ನು ಹೇಗೆ ತನ್ನದೇ ರೀತಿಯಲ್ಲಿ ನಿಭಾಯಿಸುತ್ತಾಳೆ ಎನ್ನುವುದು ಕಥೆಯ ಹಂದರ. ಮಧ್ಯರಾತ್ರಿ 3 ಗಂಟೆಗೆ ಮನೆಯಿಂದ ಮರೆಯಾಗುವ ಈ ಹುಡುಗಿಯ ಮನೋಭಾವವನ್ನು ಕೇವಲ ಹದಿಹರೆಯದ ಪ್ರತಿಭಟನೆಯ ಸ್ವರೂಪದಲ್ಲಿ ಗ್ರಹಿಸದೆ ದೆಹಲಿಯ ಬೀದಿಯಲ್ಲಿ ಹದಿಹರೆಯ ಹುಡುಗಿಯೊಬ್ಬಳನ್ನು ಕಾಣುವ ಕ್ರಿಯೆಯನ್ನು ರೂಪಕವಾಗಿ ಗ್ರಹಿಸಲಾಗಿದೆ ಎನ್ನುವುದು ಮುಖ್ಯ. ಈ ಚಿತ್ರದಲ್ಲಿ ಮೌನವಾದ ನಿಯಮಗಳು ಹೇಗೆ ಯುವ ಮನಸ್ಸುಗಳನ್ನು ನಿಯಂತ್ರಿಸುತ್ತದೆ ಎಂಬುದನ್ನು ಕಾಣಬಹುದು. ಈ ಪ್ರೀತಿ ಪಾಣಿಗ್ರಾಹಿ ಈ ಹಿಂದೆ Girls Will Be Girls ಚಿತ್ರದಲ್ಲಿ ಅಭಿನಯಿಸಿದ್ದಾಕೆ. ಈಕೆ ಅವ್ನಿಯಾಗಿ ತನ್ನ ಸ್ವಾಯತ್ತತೆಗಾಗಿ ನಡೆಸುವ ಹೋರಾಟದ ಬಗ್ಗೆ ಅನುಭಾವಿ ಚಿತ್ರಣವಿದೆ. ಈ ಚಿತ್ರದ ಪ್ರೀಮಿಯರ್ ಈ ಚಿತ್ರೋತ್ಸವದಲ್ಲಿ ನಡೆಯುತ್ತಿರುವುದು ನಿಜಕ್ಕೂ ವಿಶೇಷ. “ಇದು ನಮ್ಮ ಕಥೆಗಳನ್ನು ಹೇಳುವ ಕಾಲ. ನಮ್ಮ ಭಾವನೆಗಳಿಗೆ ಕಲಾತ್ಮಕ ರೂಪ ಕೊಡಲು ಇದು ಸಕಾಲ ಅನ್ನಿಸುತ್ತಿದೆ. ನಮ್ಮ ಪ್ರಯತ್ನ ಮಹಿಳಾ ಸಬಲೀಕರಣದ ಒಂದು ಪ್ರಯತ್ನ ಎಂಬುದು ನನ್ನ ಅನಿಸಿಕೆ ಎನ್ನುತ್ತಾರೆ ನಿರ್ಮಾಪಕಿ ಜಿಯಾ ಭಾರದ್ವಾಜ್ “ಚುನ್ನಿʼ ಮೂಲತಃ ತೀರಾ ಖಾಸಗಿ ಅನುಭವವನ್ನು ಹಂಚಿಕೊಳ್ಳುವ ಒಂದು ಸರಳ ಪ್ರಯತ್ನ. ನನ್ನ ತಾಯಿಯೊಂದಿಗೆ ಒಮ್ಮೆ ನಡೆದ ದೀರ್ಘ ಸಂಭಾಷಣೆಯಿಂದ ಹುಟ್ಟಿದ ಕಥೆ ಎಂದು ನಿರ್ದೇಶಕಿ ಕಾಶ್ವಿ ಅಗರ್ವಾಲ್ ಹೇಳುತ್ತಾರೆ. ಸದ್ಯಕ್ಕೆ ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಪ್ರಮುಖ ಚಿತ್ರಗಳ ಬಗ್ಗೆ ನನ್ನ ಅನಿಸಿಕೆಯನ್ನು ದಾಖಲಿಸಿದ್ದೇನೆ. ಸಾಧ್ಯವಾದರೆ ಇನ್ನಷ್ಟು ಉತ್ತಮ ಚಿತ್ರಗಳ ಹುಡುಕಾಟ ನಡೆಸುತ್ತೇನೆ.

ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.



