ಯುವಜನರು ಭವಿಷ್ಯದತ್ತ ನೋಡುವವರು. ಅವರಿಗೆ ಅವಕಾಶಗಳು, ಆಶಾವಾದ ಹಾಗೂ ತಮ್ಮ ಪ್ರತಿಭೆಗೆ ತಕ್ಕ ಮಾನ್ಯತೆ ಬೇಕು. ಆದರೆ, ಭಾರತದ ಅನೇಕ ಯುವಜನರಿಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕ ಉದ್ಯೋಗವೂ ಇಲ್ಲ, ಬದುಕಿನ ಬಗ್ಗೆ ಭರವಸೆಯೂ ಇಲ್ಲ. ಇದೇ ಕಾರಣದಿಂದ ಅವರು ತಮ್ಮ ಧ್ವನಿಯನ್ನು ಎತ್ತುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದು ಸಹಜ. ಆದರೆ, ಈ ಅಸಮಾಧಾನವನ್ನು ಕೇವಲ ಪ್ರತಿಭಟನೆಯಾಗಿ ಮಾತ್ರ ನೋಡದೆ, ಅದನ್ನು ದೇಶದ ಅಭಿವೃದ್ಧಿಯ ದಿಕ್ಕಿನ ಬಗ್ಗೆ ನಡೆಯುವ ಚರ್ಚೆಯಾಗಿ ಪರಿವರ್ತಿಸುವ ಜವಾಬ್ದಾರಿ ರಾಜಕೀಯ ವ್ಯವಸ್ಥೆಯ ಮೇಲಿದೆ. ಅದರಲ್ಲಿ ವಿಪಕ್ಷದ ಪಾತ್ರ ಅತ್ಯಂತ ಪ್ರಮುಖವಾಗಿದೆ.
ಇಂದು ದೇಶದ ರಾಜಕೀಯದಲ್ಲಿ ವಿರೋಧ ಪಕ್ಷವು ಬಹುತೇಕ ಸರ್ಕಾರದ ಪ್ರತಿಯೊಂದು ಕ್ರಮವನ್ನೂ ವಿರೋಧಿಸುವುದರಲ್ಲೇ ತೊಡಗಿದೆ. ಆಡಳಿತದಲ್ಲಿರುವವರ ತಪ್ಪುಗಳನ್ನು ಪ್ರಶ್ನಿಸುವುದು ಅದರ ಕರ್ತವ್ಯವೇ ಸರಿ. ಆದರೆ, ಕೇವಲ ವಿರೋಧಿಸುವುದರಿಂದ ಮಾತ್ರ ಜನರಲ್ಲಿ ವಿಶ್ವಾಸ ಮೂಡುವುದಿಲ್ಲ. ‘ನಾವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ?’ ಎಂಬ ಸ್ಪಷ್ಟ ಉತ್ತರವನ್ನು ವಿಪಕ್ಷ ನೀಡಬೇಕಿದೆ.
ಪ್ರಜಾಪ್ರಭುತ್ವದಲ್ಲಿ ಜನರು ಕೇವಲ ಆಡಳಿತದ ವೈಫಲ್ಯವನ್ನು ಗಮನಿಸುವುದಿಲ್ಲ; ಅದರ ಬದಲಿಗೆ ಯಾರು ಉತ್ತಮ ಆಡಳಿತ ನೀಡಬಲ್ಲರು ಎಂಬುದನ್ನೂ ಅಳೆಯುತ್ತಾರೆ. ಆದ್ದರಿಂದ, ವಿರೋಧ ಪಕ್ಷವು ದೇಶಕ್ಕೆ ತನ್ನದೇ ಆದ ಸ್ಪಷ್ಟ ಕಾರ್ಯಸೂಚಿಯನ್ನು ನೀಡಬೇಕು.
ಉದಾಹರಣೆಗೆ ಶಿಕ್ಷಣವನ್ನು ತೆಗೆದುಕೊಳ್ಳೋಣ. ಭಾರತದಲ್ಲಿ ಉತ್ತಮ ಶಿಕ್ಷಣವೇ ಸಾಮಾಜಿಕ ಚಲನಶೀಲತೆ ಮತ್ತು ಆರ್ಥಿಕ ಪ್ರಗತಿಯ ಮುಖ್ಯ ಸಾಧನ. ಆದರೆ, ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಸಮಾನವಾಗಿ ದೊರೆಯುತ್ತಿಲ್ಲ. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಸುಧಾರಿಸುವುದು, ಶಿಕ್ಷಕರ ತರಬೇತಿಗೆ ಹೆಚ್ಚಿನ ಒತ್ತು ನೀಡುವುದು, ಉನ್ನತ ಶಿಕ್ಷಣವನ್ನು ಹೆಚ್ಚು ಜನರಿಗೆ ಕೈಗೆಟುಕುವಂತೆ ಮಾಡುವುದು ಮುಂತಾದ ವಿಷಯಗಳಲ್ಲಿ ವಿರೋಧ ಪಕ್ಷವು ಸ್ಪಷ್ಟವಾದ ಯೋಜನೆಯನ್ನು ಮುಂದಿಡಬೇಕು.
ಆರೋಗ್ಯ ಕ್ಷೇತ್ರದಲ್ಲೂ ಇದೇ ಅನ್ವಯಿಸುತ್ತದೆ. ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಇಲ್ಲದೆ ಬಡತನದ ದುಷ್ಚಕ್ರವನ್ನು ಮುರಿಯುವುದು ಕಷ್ಟ. ಆರೋಗ್ಯ ಸೇವೆಗೆ ಹೆಚ್ಚಿನ ಸಾರ್ವಜನಿಕ ಹೂಡಿಕೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲವರ್ಧನೆ, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಕೊರತೆಯನ್ನು ನೀಗಿಸುವುದು ಮುಂತಾದ ವಿಷಯಗಳಲ್ಲಿ ಪರ್ಯಾಯ ನೀತಿಗಳನ್ನು ಜನರ ಮುಂದೆ ಇಡಬೇಕು.
ಉದ್ಯೋಗ ಸೃಷ್ಟಿಯೂ ಅಷ್ಟೇ ಮುಖ್ಯ. ಉತ್ಪಾದನಾ ವಲಯವನ್ನು ಬಲಪಡಿಸುವುದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು, ಹೊಸ ತಂತ್ರಜ್ಞಾನಗಳಿಗೆ ಹೊಂದುವ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವುದು ಹಾಗೂ ಮಹಿಳೆಯರ ಉದ್ಯೋಗ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವಂತಹ ನೀತಿಗಳನ್ನು ಸ್ಪಷ್ಟವಾಗಿ ಪ್ರಸ್ತಾಪಿಸಬೇಕು.
ಇವೆಲ್ಲವೂ ಕೇವಲ ಚುನಾವಣಾ ಭರವಸೆಗಳಾಗಿರಬಾರದು. ಅವುಗಳನ್ನು ಹೇಗೆ ಜಾರಿಗೆ ತರಲಾಗುತ್ತದೆ? ಹಣಕಾಸು ಎಲ್ಲಿಂದ ಬರುತ್ತದೆ? ಯಾವ ಅವಧಿಯಲ್ಲಿ ಫಲಿತಾಂಶ ಕಾಣಬಹುದು? ಎಂಬುದಕ್ಕೆ ಸೂಕ್ತ ಉತ್ತರ ನೀಡುವಂತಹ ಕಾರ್ಯಯೋಜನೆಯೂ ಇರಬೇಕು.
ಭಾರತದ ಪ್ರಜಾಪ್ರಭುತ್ವಕ್ಕೆ ಇಂದು ಬಲಿಷ್ಠ ವಿರೋಧ ಪಕ್ಷದ ಅಗತ್ಯವಿದೆ. ಆದರೆ, ಆ ಬಲವು ಕೇವಲ ಪ್ರತಿಭಟನೆಗಳಿಂದ ಬರದು. ಅದು ವಿಶ್ವಾಸಾರ್ಹ ಪರ್ಯಾಯವನ್ನು ನೀಡುವ ಸಾಮರ್ಥ್ಯದಿಂದ ಬರುತ್ತದೆ.
ಸಂವಿಧಾನವನ್ನು ರಕ್ಷಿಸಬೇಕೆಂದರೆ ಕೇವಲ ಘೋಷಣೆಗಳು ಸಾಲವು. ಅದಕ್ಕಾಗಿ ಸಂವಿಧಾನದ ಮೌಲ್ಯಗಳನ್ನು ಪ್ರತಿಬಿಂಬಿಸುವ ಆಡಳಿತ ಮಾದರಿಯನ್ನು ಜನರ ಮುಂದೆ ಇಡಬೇಕು. ಕೇಂದ್ರ ಸಂಸ್ಥೆಗಳ ದುರುಪಯೋಗವನ್ನು ಟೀಕಿಸುವುದಷ್ಟೇ ಅಲ್ಲ, ಅವುಗಳನ್ನು ಹೇಗೆ ಸ್ವಾಯತ್ತ ಮತ್ತು ಉತ್ತರದಾಯಿತ್ವಪೂರ್ಣವಾಗಿಡಬಹುದು ಎಂಬುದನ್ನೂ ವಿವರಿಸಬೇಕು.
ಈ ಲೇಖನ ಓದಿದ್ದೀರಾ?: ದೇಶದ ಉನ್ನತ ಹುದ್ದೆಗಳಲ್ಲಿ ಯಾರಿದ್ದಾರೆ? ದಲಿತ, ಹಿಂದುಳಿದ, ಅಲ್ಪಸಂಖ್ಯಾತರನ್ನು ಬದಿಗೆ ಸರಿಸಿದ ಮೀಸಲಾತಿಯ ಸತ್ಯ
ಅಲ್ಪಸಂಖ್ಯಾತರ ಭದ್ರತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ನ್ಯಾಯಾಂಗದ ಸ್ವಾಯತ್ತತೆ, ಮಾಧ್ಯಮಗಳ ಸ್ವಾತಂತ್ರ್ಯ, ಕೇಂದ್ರ ತನಿಖಾ ಸಂಸ್ಥೆಗಳ ಸ್ವಾಯತ್ತತೆ ಮತ್ತು ಒಕ್ಕೂಟ ವ್ಯವಸ್ಥೆಯ ಬಲವರ್ಧನೆ ಕುರಿತು ಸ್ಪಷ್ಟ ನಿಲುವು ಹಾಗೂ ಕಾರ್ಯಯೋಜನೆ ಇರಬೇಕು.
ಇದರ ಜೊತೆಗೆ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯವನ್ನು ಪರಸ್ಪರ ವಿರುದ್ಧವಾದ ಗುರಿಗಳೆಂದು ನೋಡಬಾರದು. ವೇಗವಾದ ಆರ್ಥಿಕ ಬೆಳವಣಿಗೆ ಇಲ್ಲದೆ ಬಡತನ ಕಡಿಮೆಯಾಗುವುದಿಲ್ಲ; ಸಾಮಾಜಿಕ ನ್ಯಾಯ ಇಲ್ಲದೆ ಆ ಬೆಳವಣಿಗೆ ಶಾಶ್ವತವಾಗುವುದಿಲ್ಲ. ಈ ಎರಡನ್ನೂ ಸಮತೋಲನಗೊಳಿಸುವ ಅಭಿವೃದ್ಧಿ ಮಾದರಿಯನ್ನು ವಿರೋಧ ಪಕ್ಷ ಪ್ರಸ್ತಾಪಿಸಬೇಕು.
ಇಂದು ಭಾರತದ ರಾಜಕೀಯದಲ್ಲಿ ಅತ್ಯಂತ ದೊಡ್ಡ ಕೊರತೆ ಎಂದರೆ ಭವಿಷ್ಯದ ಕುರಿತು ವಿಶ್ವಾಸ ತುಂಬುವ ಪರ್ಯಾಯ ಕಥನದ ಅಭಾವ. ಜನರು ಕೇವಲ ಸರ್ಕಾರದ ವಿರುದ್ಧದ ಟೀಕೆಗಳನ್ನು ಕೇಳಲು ಬಯಸುವುದಿಲ್ಲ; ದೇಶವನ್ನು ಕೊಂಡೊಯ್ಯುವ ದೃಷ್ಟಿಕೋನವನ್ನೂ ನೋಡಲು ಬಯಸುತ್ತಾರೆ.
ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಸರ್ಕಾರ ಎಷ್ಟು ಅಗತ್ಯವೋ, ಅಷ್ಟೇ ಬಲಿಷ್ಠ ಮತ್ತು ದೂರದೃಷ್ಟಿಯುಳ್ಳ ವಿರೋಧ ಪಕ್ಷವೂ ಅಗತ್ಯ. ಆ ವಿರೋಧ ಪಕ್ಷವು ಕೇವಲ ‘ಇಲ್ಲ’ ಎಂದು ಹೇಳುವ ರಾಜಕೀಯವನ್ನು ಮೀರಿ, ‘ಇದಾಗಿದೆ ನಮ್ಮ ದಾರಿ’ ಎಂದು ದೇಶದ ಮುಂದೆ ವಿಶ್ವಾಸದಿಂದ ನಿಲ್ಲಬೇಕಾಗಿದೆ. ಆಗ ಮಾತ್ರ ಅದು ನಿಜವಾದ ಪರ್ಯಾಯವಾಗಿ ಜನರ ವಿಶ್ವಾಸವನ್ನು ಗಳಿಸಬಲ್ಲದು.
ಮೂಲ: ಇ ಇಂಡಿಯನ್ ಎಕ್ಸ್‌ಪ್ರೆಸ್
ಬರಹ: ರಘುರಾಮ್ ರಾಜನ್ (ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ , ಅರ್ಥಶಾಸ್ತ್ರಜ್ಞ)
ಕನ್ನಡಕ್ಕೆ: ಸೋಮಶೇಖರ್ ಚಲ್ಯ



