ಜನಪ್ರತಿನಿಧಿಗಳು ಕೋಟಿಗಟ್ಟಲೆ ವೆಚ್ಚದ ಬಂಗಲೆಗಳಲ್ಲಿ ವಾಸಿಸುವುದು ನೈತಿಕವಾಗಿ ಎಷ್ಟು ಸರಿ ಎಂಬ ಪ್ರಶ್ನೆ ಹುಟ್ಟಿಸುತ್ತದೆ. ಏನೇ ಆದರೂ ಇಂದು ಈ ಬಂಗಲೆಗಳು ಕೇವಲ ರಾಜಕಾರಣಿಗಳ ವಾಸದ ಮನೆಗಳಾಗಿ ಉಳಿದಿಲ್ಲ. ಅಧಿಕಾರ ಮತ್ತು ಪ್ರತಿಷ್ಠೆಯ ಸಂಕೇತಗಳಾಗಿ ಮಾರ್ಪಟ್ಟಿವೆ ಎಂಬುದು ವಾಸ್ತವ.
ರಾಜಕಾರಣ ಎಂಬುದು ಒಂದು ಕಾಲದಲ್ಲಿ ಜನಸೇವೆಯ ಮಾಧ್ಯಮವಾಗಿತ್ತು. ನಾಯಕರು ಜನಸಾಮಾನ್ಯರಂತೆ ಬದುಕುತ್ತಿದ್ದರು. ಆದರೆ ಇಂದು ಎಲ್ಲವೂ ಬದಲಾಗಿದೆ. ಸೈದ್ಧಾಂತಿಕವಾಗಿ ಎಷ್ಟೇ ಪ್ರಬುದ್ಧ ಎನಿಸಿದರೂ ಐಷಾರಾಮಿ ಕಾರುಗಳು, ಬಂಗಲೆಗಳಿಗೆ ಮತ್ತು ಆಡಂಬರದ ಜೀವನಕ್ಕೆ ಜೋತುಬೀಳುವ ರಾಜಕಾರಣಿಗಳೇ ಹೆಚ್ಚು. ಇಂತಹ ಅಬ್ಬರಗಳಿಲ್ಲದೆ ಸರಳವಾಗಿ ಬದುಕುವ ರಾಜಕಾರಣಿಗಳು ಕಾಣಸಿಗುವುದು ಅತಿ ಅಪರೂಪ. ಈ ಐಷಾರಾಮಿ ಜೀವನಶೈಲಿಯ ಮೂಲಕ ಈಗ ಹೆಚ್ಚು ಚರ್ಚೆಗೆ ಸಿಲುಕಿರುವವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್.
ಸೊರೇನ್ ಅವರ ಈ ಹಿಂದಿನ ನಿವಾಸ ಬ್ರಿಟಿಷ್ ಕಾಲದ್ದು. ಆದ್ದರಿಂದ ಈಗ ಹೊಸದಾಗಿ ಮುಖ್ಯಮಂತ್ರಿ ಬಂಗಲೆಯನ್ನು ನಿರ್ಮಿಸಲಾಗುತ್ತಿದೆ. ಆದರೆ ಈ ಬಂಗಲೆಗಾಗಿ ಮಾಡುತ್ತಿರುವ ವೆಚ್ಚವು ಸದ್ಯ ತೀವ್ರ ವಿವಾದಕ್ಕೆ ಕಾರಣವಾಗಿರುವುದು. ಈ ಸಂದರ್ಭದಲ್ಲೇ ನಾನು ಜನನಾಯಕ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಬಂಗಲೆ, ನಾವು ಸರಳವಾಗಿ ಬದುಕುವವರು ಎಂದು ಹೇಳಿಕೊಂಡೇ ಐಷಾರಾಮಿ ಜೀವನಕ್ಕೆ ಕಾಲಿಟ್ಟ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಪ್ ನಾಯಕರುಗಳೂ ನೆನಪಾಗುತ್ತಾರೆ. ಹಾಗಿದ್ದಾಗ ರಾಜಕಾರಣ ಸರಳವಾಗುವುದು ಯಾವಾಗ ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿಯುತ್ತದೆ. ಸರಳತೆ ಅಪ್ಪಬೇಕಾದ ರಾಜಕಾರಣಿಗಳು ಐಷಾರಾಮಿ ಜೀವನ ಅಪ್ಪಿಕೊಂಡು ಮುಂದೆ ಸಾಗುತ್ತಲೇ ಇರುತ್ತಾರೆ.
ಇದನ್ನು ಓದಿದ್ದೀರಾ? 1.5 ಕೋಟಿ ರೂ.ತೆರಿಗೆ ಬಾಕಿ : ತ.ನಾಡು ಮಾಜಿ ಸಿಎಂ ಜಯಲಲಿತಾ ಅವರ ಹೈದರಾಬಾದ್ ಬಂಗಲೆ ಜಪ್ತಿ
ಹೇಮಂತ್ ಸೊರೇನ್ ನೂತನ ಸಿಎಂ ನಿವಾಸ
ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರು ಸದ್ಯ ವಾಸವಿರುವ ನಿವಾಸದಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲ ಎಂಬ ನೆಪವೊಡ್ಡಿ ಈಗ ಹೊಸ ಬಂಗಲೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಈ ಹೊಸ ಬಂಗಲೆಯ ಅಂದಾಜು ವೆಚ್ಚ ಸುಮಾರು 69 ಕೋಟಿ ರೂಪಾಯಿ. ಆದರೆ ಒಳಾಂಗಣ ವಿನ್ಯಾಸ ಎಲ್ಲ ಸೇರಿದಾಗ 100 ಕೋಟಿ ರೂಪಾಯಿ ದಾಟಬಹುದು. ಸಿಎಂ ಬಂಗಲೆಗೆ ಕೋಟಿಗಟ್ಟೆಲೆ ಖರ್ಚು ಮಾಡುತ್ತಿರುವುದು ಸದ್ಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಿಎಂ ಸೊರೇನ್ ಐಷಾರಾಮಿ ಬಂಗಲೆ ರಾಂಚಿಯ ಕಾಂಕೆ ರಸ್ತೆಯಲ್ಲಿರುವ 22 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ಇದರಲ್ಲಿ 2 ಕೋಟಿ ರೂ. ವೆಚ್ಚದ ಕಾರಂಜಿ, 2.5 ಕೋಟಿ ರೂ. ವೆಚ್ಚದ ಉದ್ಯಾನವನ, ಸುಸಜ್ಜಿತ ಕಚೇರಿ, ಅತಿಥಿ ಗೃಹಗಳು ಮತ್ತು ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಇರಲಿದೆ.
ಸದ್ದು ಮಾಡಿದ್ದ ಕೇಜ್ರಿವಾಲ್ ‘ಶೀಶ್ ಮಹಲ್’
ದೆಹಲಿಯ 6, ಫ್ಲ್ಯಾಗ್‌ಸ್ಟಾಫ್ ರೋಡ್‌ನಲ್ಲಿರುವ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಹಿಂದೆ ವಾಸವಿದ್ದ ಅಧಿಕೃತ ನಿವಾಸವು ದೇಶದಲ್ಲಿ ಅತಿ ಹೆಚ್ಚು ವಿವಾದಕ್ಕೆ ಒಳಗಾದ ಬಂಗಲೆಗಳಲ್ಲಿ ಒಂದು. ಅದಕ್ಕೆ ಪ್ರಮುಖ ಕಾರಣ ಈ ಬಂಗಲೆ ನವೀಕರಣಕ್ಕೆ ತಗುಲಿದ ವೆಚ್ಚ. ಅದರಲ್ಲೂ ನಮ್ಮದು ಸರಳ ಜೀವನ, ‘ಸಾಮಾನ್ಯ ಮನುಷ್ಯ’ (ಆಮ್ ಆದ್ಮಿ) ಎಂದು ಹೇಳಿಕೊಂಡ ಕೇಜ್ರಿವಾಲ್ ಅವರೇ ಇಷ್ಟೊಂದು ಐಷಾರಾಮಿ ಬಂಗಲೆಯಲ್ಲಿ ವಾಸಿಸುವುದೇ ಎಂದು ನಾವು ಹುಬ್ಬೇರಿಸಿ ನೋಡುವಂತಾಗಿತ್ತು.
ಆರಂಭದಲ್ಲಿ ಈ ಬಂಗಲೆ ನವೀಕರಣಕ್ಕೆ 7.9 ಕೋಟಿ ರೂ. ವೆಚ್ಚಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಅಂತಿಮವಾಗಿ ಸುಮಾರು 33.66 ಕೋಟಿ ರೂ.ನಿಂದ 45 ಕೋಟಿ ರೂ. ವರೆಗೆ ಖರ್ಚು ಮಾಡಲಾಗಿದೆ. ಸುಮಾರು 1 ಕೋಟಿ ರೂ. ಬೆಲೆಯ ವಿದೇಶಿ ಮಾರ್ಬಲ್‌ಗಳನ್ನು (Vietnam Marble) ಈ ಬಂಗಲೆಯಲ್ಲಿ ಹಾಕಲಾಗಿದೆ. ಸನ್ನೆ ಮಾಡಿದರೆ ತೆರೆಯುವ ಸ್ವಯಂಚಾಲಿತ ಬಾಗಿಲುಗಳನ್ನು ಹಾಕಲಾಗಿದೆ. 8 ಲಕ್ಷದಿಂದ 10 ಲಕ್ಷ ರೂ. ಬೆಲೆಯ ಪರದೆಗಳು ಮತ್ತು ಅತ್ಯಾಧುನಿಕ ಗೃಹೋಪಯೋಗಿ ಉಪಕರಣಗಳನ್ನೂ ಖರೀದಿಸಲಾಗಿದೆ ಎಂಬ ಆರೋಪಗಳಿವೆ. ಇವೆಲ್ಲವೂ ದುಂದುವೆಚ್ಚವಲ್ಲದೆ ಮತ್ತೇನು?
ಪ್ರಧಾನಿ ನರೇಂದ್ರ ಮೋದಿ ಹೊಸ ನಿವಾಸ
ದೆಹಲಿಯ ಸೆಂಟ್ರಲ್ ವಿಸ್ಟಾ ಪುನರ್ ಅಭಿವೃದ್ಧಿ ಯೋಜನೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೊಸ ನಿವಾಸ ಮತ್ತು ಕಚೇರಿ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಪ್ರಧಾನ ಮಂತ್ರಿಗಳ ಹೊಸ ನಿವಾಸವೊಂದಕ್ಕೇ ಸುಮಾರು 467 ಕೋಟಿ ರೂ. ವೆಚ್ಚವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇಡೀ ‘ಎಕ್ಸಿಕ್ಯೂಟಿವ್ ಎನ್‌ಕ್ಲೇವ್’ (PMO, ಕ್ಯಾಬಿನೆಟ್ ಸೆಕ್ರೆಟರಿಯೇಟ್ ಇತ್ಯಾದಿ) ವೆಚ್ಚ ಸಾವಿರಾರು ಕೋಟಿಗಳಷ್ಟಿದೆ. ಸುಮಾರು 36,328 ಚದರ ಅಡಿ ವಿಸ್ತೀರ್ಣದ ಬಂಗಲೆ ಇದಾಗಲಿದೆ. ಭೂಗತ ಸುರಂಗ ಮಾರ್ಗದ ಮೂಲಕ ಪ್ರಧಾನಿ ಕಚೇರಿ ಮತ್ತು ಸಂಸತ್ತಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಅತ್ಯಾಧುನಿಕ ಭದ್ರತೆ, ನ್ಯೂಕ್ಲಿಯರ್ ಬಂಕರ್ ಮಾದರಿಯ ಸುರಕ್ಷಿತ ಕೊಠಡಿಗಳು ಮತ್ತು ಹೈ-ಟೆಕ್ ಸಂವಹನ ವ್ಯವಸ್ಥೆ ಇರಲಿದೆ.
ಇದನ್ನು ಓದಿದ್ದೀರಾ? ‘ಶೀಶ್ ಮಹಲ್’ ಪ್ರಕರಣ: ಕೇಜ್ರಿವಾಲ್ ವಿರುದ್ಧ ತನಿಖೆಗೆ ಕೇಂದ್ರ ಆದೇಶ
ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿರುವಾಗ ಪ್ರಧಾನಿಯ ಐಷಾರಾಮಿ ಜೀವನಕ್ಕಾಗಿ ಇಷ್ಟೊಂದು ವೆಚ್ಚ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳನ್ನು ವಿಪಕ್ಷಗಳು ಎತ್ತಿವೆ. ಆದರೆ ಸರ್ಕಾರ ಇದು ಪ್ರಧಾನಿ ವೈಯಕ್ತಿಕ ಮನೆಯಲ್ಲ, ಸಾಂಸ್ಥಿಕ ಭದ್ರತೆಯ ಭಾಗ ಎಂದು ಸಮರ್ಥಿಸಿಕೊಂಡಿದೆ. ನಾನು ಚೌಕಿದಾರ ನಿಮ್ಮ ಕಾವಲುಗಾರ ಅಥವಾ ರಕ್ಷಕ ಎಂದು ಹೇಳಿಕೊಳ್ಳುವ ಮೋದಿ ಇಷ್ಟೊಂದು ಖರ್ಚು ಮಾಡುವುದೇ?
ಜಗನ್ ಮೋಹನ್ ರೆಡ್ಡಿ ‘ಋಷಿಕೊಂಡ ಅರಮನೆ’
ವಿಶಾಖಪಟ್ಟಣದ ಋಷಿಕೊಂಡ ಬೆಟ್ಟದ ಮೇಲಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಭವ್ಯ ಬಂಗಲೆ ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಭಾರೀ ಸುದ್ದಿಯಾಗಿದೆ. ಈ ಬಂಗಲೆಯ ನಿರ್ಮಾಣಕ್ಕೆ ಸುಮಾರು 500 ಕೋಟಿ ರೂ. ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ಜಗನ್ ಮಾತ್ರ ಇದು 240 ಕೋಟಿ ರೂಪಾಯಿ ವೆಚ್ಚದ ಬಂಗಲೆ ಎಂದು ಹೇಳಿಕೊಂಡಿದ್ದಾರೆ. ಕಡಲತೀರದ ಅದ್ಭುತ ನೋಟ ಹೊಂದಿರುವ ಈ ಸಂಕೀರ್ಣದಲ್ಲಿ ಇಟಾಲಿಯನ್ ಮಾರ್ಬಲ್, ಅತ್ಯಾಧುನಿಕ ಜಿಮ್, ಬೃಹತ್ ಕಾನ್ಫರೆನ್ಸ್ ಹಾಲ್‌ಗಳು ಮತ್ತು ವಿದೇಶಿ ವಿನ್ಯಾಸದ ಪೀಠೋಪಕರಣಗಳಿವೆ. ಆರಂಭದಲ್ಲಿ ಇದನ್ನು ಪ್ರವಾಸೋದ್ಯಮ ಇಲಾಖೆಯ ಯೋಜನೆಯೆಂದು ಹೇಳಿ ರಹಸ್ಯವಾಗಿ ನಿರ್ಮಿಸಲಾಗಿತ್ತು. ಆದರೆ, ಪರಿಸರ ನಿಯಮಗಳನ್ನು ಗಾಳಿಗೆ ತೂರಿ ಬೆಟ್ಟವನ್ನು ಕೊರೆದು ಈ ಬಂಗಲೆ ನಿರ್ಮಿಸಲಾಗಿದೆ ಎಂಬ ಆರೋಪವೂ ಇದೆ.
ಮಾಯಾವತಿಯ ’13-ಎ ಮಾಲ್ ಅವೆನ್ಯೂ’
ಬಿಎಸ್‌ಪಿ ನಾಯಕಿ ಮಾಯಾವತಿ, ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಲಕ್ನೋದಲ್ಲಿ ನಿರ್ಮಿಸಿಕೊಂಡ ’13-ಎ ಮಾಲ್ ಅವೆನ್ಯೂ’ ಬಂಗಲೆ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. 2007-2012ರ ಅವಧಿಯಲ್ಲಿ ಈ ಬಂಗಲೆಯ ನವೀಕರಣಕ್ಕೆ ಬರೋಬ್ಬರಿ 86 ಕೋಟಿ ರೂ.ನಿಂದ 100 ಕೋಟಿ ರೂ. ವೆಚ್ಚ ಮಾಡಲಾಗಿತ್ತು. 5 ಎಕರೆ ವಿಸ್ತೀರ್ಣದ ಈ ಬಂಗಲೆಯಲ್ಲಿ ಬುಲೆಟ್ ಪ್ರೂಫ್ ಗ್ಲಾಸ್ ಅಳವಡಿಸಿದ ಕಿಟಕಿಗಳಿವೆ. ಒಂದು ಕಿಟಕಿಯ ಬೆಲೆ ಸುಮಾರು 15 ಲಕ್ಷ ರೂ. ಎಂದು ಹೇಳಲಾಗಿತ್ತು. ಬಂಗಲೆ ನಿರ್ಮಾಣಕ್ಕೆ ರಾಜಸ್ಥಾನದ ಪ್ರಸಿದ್ಧ ಮರಳುಗಲ್ಲು (Sandstone) ಮತ್ತು ಬೆಲೆಬಾಳುವ ಅಮೃತಶಿಲೆಗಳನ್ನು ಬಳಸಲಾಗಿದೆ. ಬಡ ದಲಿತರ ಪರ ಎಂದು ಹೇಳಿಕೊಳ್ಳುವ ನಾಯಕರು ಇಷ್ಟು ಐಷಾರಾಮಿ ಜೀವನ ನಡೆಸುವುದರ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿತ್ತು.
ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ‘ಪ್ರಗತಿ ಭವನ್’
ಹೈದರಾಬಾದ್‌ನ ಬೇಗಂಪೇಟೆಯಲ್ಲಿರುವ ತೆಲಂಗಾಣದ ಮಾಜಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸವೂ ಹೆಚ್ಚು ಚರ್ಚಿತ. ಈ ‘ಪ್ರಗತಿ ಭವನ್’ ನಿರ್ಮಾಣ ವೆಚ್ಚ ಸುಮಾರು 38 ಕೋಟಿ ರೂ.ನಿಂದ 50 ಕೋಟಿ ರೂ. ಎಂದು ಹೇಳಲಾಗಿದೆ. 9 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಸಂಕೀರ್ಣವು ಸುಮಾರು 1 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದೆ. ಇದರಲ್ಲಿ 250 ಮಂದಿ ಕುಳಿತುಕೊಳ್ಳಬಹುದಾದ ಸಭಾಂಗಣವಿದೆ. ಮಿನಿ ಥಿಯೇಟರ್ ಮತ್ತು ಅತ್ಯಾಧುನಿಕ ಭದ್ರತಾ ವ್ಯವಸ್ಥೆಯಿದೆ. ಇದರ ಕಿಟಕಿಗಳಿಗೂ ಬುಲೆಟ್ ಪ್ರೂಫ್ ಗಾಜು ಅಳವಡಿಸಲಾಗಿದೆ. ಹಳೆಯ ಬಂಗಲೆ ಚೆನ್ನಾಗಿದ್ದರೂ ವಾಸ್ತು ಕಾರಣ ನೀಡಿ ಹೊಸ ಬಂಗಲೆ ನಿರ್ಮಿಸಿರುವುದಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಈಗಿನ ಸರ್ಕಾರ ಇದನ್ನು ‘ಪ್ರಜಾ ಭವನ’ ಎಂದು ಮರುನಾಮಕರಣ ಮಾಡಿದೆ.
ಇವರೆಲ್ಲರ ನಡುವೆ ವಿಭಿನ್ನವಾಗಿ ನಿಲ್ಲುವವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್. ಕೇರಳ ಸಿಎಂ ವಾಸವಿರುವ ಕ್ಲಿಫ್ ಹೌಸ್ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈಜುಕೊಳ ಮತ್ತು ಕೊಟ್ಟಿಗೆ ದುರಸ್ತಿಗೆ ಲಕ್ಷಾಂತರ ರೂ. ಖರ್ಚು ಮಾಡಿದ್ದೂ ವಿವಾದಕ್ಕೆ ಕಾರಣವಾಗಿತ್ತು. ಆದರೆ ಬಂಗಾಳ ಸಿಎಂ ಬ್ಯಾನರ್ಜಿ ಇಂದಿಗೂ ಕೋಲ್ಕತ್ತಾದ ಹರೀಶ್ ಚಟರ್ಜಿ ರಸ್ತೆಯಲ್ಲಿರುವ ತಮ್ಮ ಹಳೆಯ ಮತ್ತು ಸರಳವಾದ ಹೆಂಚಿನ ಮನೆಯಲ್ಲೇ ವಾಸಿಸುತ್ತಿದ್ದಾರೆ. ಸರ್ಕಾರಿ ಬಂಗಲೆ ಅಥವಾ ಸಂಬಳವನ್ನು ಪಡೆಯುತ್ತಿಲ್ಲ ಎಂಬುದು ಗಮನಾರ್ಹ.
ದೇಶದ ಬಹುತೇಕ ದೊಡ್ಡ ಸರ್ಕಾರಿ ಬಂಗಲೆಗಳು ಬ್ರಿಟಿಷ್ ಆಡಳಿತದ ಕಾಲದ್ದು. ಅಂದು ಬ್ರಿಟಿಷ್ ವೈಸರಾಯ್‌ಗಳು ಮತ್ತು ಅಧಿಕಾರಿಗಳು ಭಾರತೀಯರ ಮೇಲೆ ತಮ್ಮ ಪ್ರಭಾವ ಬೀರಲು ಬೃಹತ್ ವಿಸ್ತೀರ್ಣದ, ಉದ್ಯಾನವನಗಳಿಂದ ಕೂಡಿದ ಬಂಗಲೆಗಳನ್ನು ನಿರ್ಮಿಸಿಕೊಂಡಿದ್ದರು. ಸ್ವಾತಂತ್ರ್ಯಾನಂತರ, ಭಾರತೀಯ ನಾಯಕರು ಈ ಬಂಗಲೆಗಳಿಗೆ ಸ್ಥಳಾಂತರಗೊಂಡರು. ಆರಂಭದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯಂತಹ ನಾಯಕರು ಸರಳತೆಯನ್ನು ಪಾಲಿಸಿದರು. ಆದರೆ ಕಾಲಕ್ರಮೇಣ ಭದ್ರತೆ ಮತ್ತು ಆಡಳಿತಾತ್ಮಕ ಅಗತ್ಯಗಳ ಹೆಸರಲ್ಲಿ ಎಲ್ಲವೂ ಬದಲಾದವು. ಕೋಟ್ಯಂತರ ರೂಪಾಯಿ ವ್ಯಯಿಸುವ ಸಂಸ್ಕೃತಿ ಬೆಳೆಯುತ್ತಲೇ ಹೋಯಿತು.
ಮಾಯಾವತಿಯವರಂತಹ ನಾಯಕರು ಬೃಹತ್ ಬಂಗಲೆಗಳನ್ನು ನಿರ್ಮಿಸಿಕೊಂಡಾಗ ಅದನ್ನು ‘ದಲಿತರ ಶಕ್ತಿಯ ಸಂಕೇತ’ ಎಂದು ಸಮರ್ಥಿಸಿಕೊಳ್ಳಲಾಯಿತು. ಆದರೆ ತೆರಿಗೆ ಪೋಲು ಎಂಬುದು ನಿಜ. ದೇಶದಲ್ಲಿ ದೊಡ್ಡ ವರ್ಗ ಬಡತನ, ವಸತಿರಹಿತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಿರುವಾಗ ಜನಪ್ರತಿನಿಧಿಗಳು ಕೋಟಿಗಟ್ಟಲೆ ವೆಚ್ಚದ ಬಂಗಲೆಗಳಲ್ಲಿ ವಾಸಿಸುವುದು ನೈತಿಕವಾಗಿ ಎಷ್ಟು ಸರಿ ಎಂಬ ಪ್ರಶ್ನೆ ಹುಟ್ಟಿಸುತ್ತದೆ. ಏನೇ ಆದರೂ ಇಂದು ಈ ಬಂಗಲೆಗಳು ಕೇವಲ ರಾಜಕಾರಣಿಗಳ ವಾಸದ ಮನೆಗಳಾಗಿ ಉಳಿದಿಲ್ಲ. ಅಧಿಕಾರ ಮತ್ತು ಪ್ರತಿಷ್ಠೆಯ ಸಂಕೇತಗಳಾಗಿ ಮಾರ್ಪಟ್ಟಿವೆ ಎಂಬುದು ವಾಸ್ತವ. ಸಾರ್ವಜನಿಕ ಹಣವನ್ನು ಈ ರೀತಿ ವ್ಯಯಿಸುವುದು ಸರಿ ಎಂದನಿಸುತ್ತದೇ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



