ವಿಶ್ವನಾಥ್, ಸುಧಾಕರ್‌, ಸದಾನಂದಗೌಡ; ಸ್ವ-ಪ್ರತಿಷ್ಠೆಯ ವ್ಯಕ್ತಿಗಳಿಂದ ಬಿಜೆಪಿ ಛಿದ್ರ?

Date:

ಸುಧಾಕರ್‌ V/S ವಿಶ್ವನಾಥ್ V/S ಸದಾನಂದಗೌಡ ಸಮರವನ್ನು ನಿಯಂತ್ರಿಸುವಲ್ಲಿ ಪಕ್ಷದ ನಾಯಕತ್ವ ಸಂಪೂರ್ಣ ವಿಫಲವಾಗಿದೆ. ಬಣರಾಜಕಾರಣದಿಂದಾಗಿ ಪಕ್ಷವು ಅಳಿತಪ್ಪಿದೆ. ಶಿಸ್ತಿನ ಸಂಘಟನೆ ಬಿಜೆಪಿ ಎಂಬುದು ಕರ್ನಾಟಕದ ಮಟ್ಟಿಗೆ ಅತಿದೊಡ್ಡ ಜೋಕ್ ಆಗಿ ಕಾಣಿಸುತ್ತಿದೆ.

ರಾಜ್ಯ ಬಿಜೆಪಿಯಲ್ಲಿ ಏನಾಗುತ್ತಿದೆ? ಯಲಹಂಕ ಶಾಸಕ ಎಸ್.ಆರ್‌. ವಿಶ್ವನಾಥ್ ಮತ್ತು ಚಿಕ್ಕಬಳ್ಳಾಪುರ ಸಂಸದ ಡಾ.ಕೆ ಸುಧಾಕರ್‌ ನಡುವೆ ತಿಕ್ಕಾಟ, ವಿಶ್ವನಾಥ್ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ನಡುವೆ ವಾಕ್ಸಮರ; ಮತ್ತೊಂದೆಡೆ ಸದಾನಂದಗೌಡರದ್ದು ಎನ್ನಲಾದ ಆಡಿಯೋ ವೈರಲ್!

- Advertisement -

ಈಗಾಗಲೇ, ಅಡ್ಡ ಮತದಾನದಿಂದ ಆಂತರಿಕ ಸಂಘರ್ಷ ಏರ್ಪಟ್ಟಿರುವ ಹೊತ್ತಿನಲ್ಲಿ ಬಿಜೆಪಿಯಲ್ಲಿ ಮತ್ತಷ್ಟು ಕಚ್ಚಾಟಗಳು ನಡೆಯುತ್ತಿವೆ. ಬಿಜೆಪಿಯ ಪ್ರಭಾವಿಗಳು ಬೀದಿ ಕಾಳಗದಲ್ಲಿ ತೊಡಗಿದ್ದಾರೆ. ಈ ಒಳಜಗಳವನ್ನು ತಡೆಯುವಲ್ಲಿ ಬಿಜೆಪಿ ನಾಯಕರು ವಿಫಲರಾದಂತೆ ಕಾಣುತ್ತಿದೆ. ಜೊತೆಗೆ, ಈ ಸ್ವಪ್ರತಿಷ್ಠೆಯ ವ್ಯಕ್ತಿಗಳಿಗೆ ಪಕ್ಷದ ನಾಯಕರೇ ಕುಮ್ಮಕ್ಕು ಕೊಡುತ್ತಿದ್ದಾರೆ ಎಂಬ ಆರೋಪಗಳೂ ಇವೆ. ಸಧ್ಯ, ರಾಜ್ಯದಲ್ಲಿ ಬಿಜೆಪಿ ಒಡಕಿನ ಕೋಟೆಯಂತೆ ಕಾಣುತ್ತಿದೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹವ್ಯಾಸದಿಂದ ಉದ್ಯಮದತ್ತ: ಶಿರಸಿ ಮಹಿಳೆಯರ ʻಡೇರೆʼ ಕೃಷಿಗೆ ಸ್ವಾವಲಂಬನೆಯ...

ಮನೆಯಂಗಳದ ಅಂದ ಹೆಚ್ಚಿಸುವ ಹೂವಷ್ಟೇ ಆಗಿದ್ದ ಡೇರೆ ಹೂವು (ಡೇಲಿಯಾ), ಇದೀಗ ಮಲೆನಾಡಿನ ಮಹಿಳೆಯರ ಪಾಲಿಗೆ ಹೊಸ ಆದಾಯದ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಶಿವಮೊಗ್ಗ...

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ವಿಶ್ವನಾಥ್ ವರ್ಸಸ್ ಸುಧಾಕರ್

ಎಸ್.ಆರ್ ವಿಶ್ವನಾಥ್ ಮತ್ತು ಸುಧಾಕರ್‌ ಇಬ್ಬರೂ ಭಾರೀ ದುಡ್ಡಿನ ಕುಳಗಳು. ಬೆಂಗಳೂರು ಉತ್ತರ ಭಾಗದಲ್ಲಿ ರಾಜಕೀಯ ಹಿಡಿತ ಸಾಧಿಸಲು ಈ ಹಣವಂತರ ನಡುವೆ ಹಣಾಹಣಿ ನಡೆಯುತ್ತಿರುವುದು ಹೊಸಕಥೆಯೇನೂ ಅಲ್ಲ. ಆದರೆ, ಎಂಎಲ್‌ಸಿ ಚುನಾವಣೆಯಲ್ಲಿ ಭಾರೀ ಮುಖಭಂಗ ಆಗಿರುವ ಹೊತ್ತಿನಲ್ಲಾದರೂ ಈ ಇಬ್ಬರ ನಡುವೆ ಸಮರಗಳು ಬದಿಗೆ ಸರಿಯಲಿಲ್ಲ. ಜೂನ್ 27ರಂದು ನಡೆದ ‘ಕೆಂಪೇಗೌಡ ಜಯಂತಿ’ಯು ಈ ಇಬ್ಬರ ಕದನಕ್ಕೆ ವೇದಿಕೆಯಾಗಿಬಿಟ್ಟಿತು. ಒಂದಾಗಿ ಆಚರಿಸಬೇಕಿದ್ದ ಜಯಂತಿ- ಎರಡು ಕಡೆ ಜರುಗಿತು.

2024ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ತಮ್ಮ ಪುತ್ರ ಅಲೋಕ್‌ ಅವರನ್ನು ಕಣಕ್ಕಿಳಿಸಲು ಎಸ್.ಆರ್ ವಿಶ್ವನಾಥ್ ಬಯಸಿದ್ದರು. ಆದರೆ, ಕೆ ಸುಧಾಕರ್ ಇದಕ್ಕೆ ಆಸ್ಪದ ನೀಡಲಿಲ್ಲ. ‘ನನಗೆ ನನ್ನದೇ ಆದ ಮತದಾರರಿದ್ದಾರೆ. ಒಕ್ಕಲಿಗ ಮತದಾರರು ನನ್ನ ಜೊತೆ ಇದ್ದಾರೆ’ ಎಂಬುದು ಸುಧಾಕರ್ ಅವರ ಪ್ರತಿಪಾದನೆಯಾಗಿತ್ತು. ಟಿಕೆಟ್ ಗಿಟ್ಟಿಸಿಕೊಳ್ಳುವ ಆಟದಲ್ಲಿ ಕೊನೆಗೆ ಸುಧಾಕರ್ ಗೆದ್ದರೂ, ವಿಶ್ವನಾಥ್‌ ಅವರು ಚಿಕ್ಕಬಳ್ಳಾಪುರದ ಮೇಲೆ ಆಸಕ್ತಿಯೇನೂ ಕಳೆದುಕೊಳ್ಳಲಿಲ್ಲ.

ಚಿಕ್ಕಬಳ್ಳಾಪುರದತ್ತ ತಮ್ಮ ನೆಲೆ ವಿಸ್ತರಿಸಿಕೊಳ್ಳಬೇಕಾದರೆ ಅಲ್ಲೊಬ್ಬರು ತಮ್ಮ ಪರವಾಗಿ ಇರಬೇಕೆಂದು ವಿಶ್ವನಾಥ್ ಯೋಚಿಸಿದರು. ಆಗ ಕಂಡ ಮುಖವೇ ಸ್ಥಳೀಯ ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ. ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ಗೆ ಪರ್ಯಾಯವಾಗಿ ಸಂದೀಪ್ ರೆಡ್ಡಿಯವರನ್ನು ಬೆಳೆಸುವುದರಿಂದ, ತನ್ನ ಹಿತಾಸಕ್ತಿಗಳನ್ನು ಕ್ಷೇತ್ರದಲ್ಲಿ ಕಾಪಾಡಿಕೊಳ್ಳಬಹುದು ಮತ್ತು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಗನನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರಬಹುದು ಎಂಬುದು ವಿಶ್ವನಾಥ್ ಅವರ ಲೆಕ್ಕಾಚಾರ!

ಯಲಹಂಕ ವಿಧಾನಸಭಾ ಕ್ಷೇತ್ರವು ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿ ಒಕ್ಕಲಿಗರೇ ನಿರ್ಣಾಯಕ ಮತದಾರರು. ವಿಶ್ವನಾಥ್ ಮತ್ತು ಸುಧಾಕರ್ ನಡುವೆ ಒಕ್ಕಲಿಗ ನಾಯಕತ್ವದ ಸಮರ ಏರ್ಪಟ್ಟಿದೆ.

ಲೋಕಸಭಾ ಚುನಾವಣೆಯಲ್ಲಿ ಸುಧಾಕರ್ ಅವರು ಗೆಲ್ಲಲು ದೊಡ್ಡ ಮಟ್ಟದ ಲೀಡ್ ಕೊಟ್ಟಿದ್ದು ಯಲಹಂಕ ವಿಧಾನಸಭಾ ಕ್ಷೇತ್ರ. ಆದರೆ, “ಈ ಲೀಡ್ ಸಮುದಾಯದ ಪ್ರೀತಿಯಿಂದ ಬಂದಿದೆಯೇ ಹೊರತು, ವಿಶ್ವನಾಥ್ ಅವರ ಕೆಲಸಗಳಿಂದೇನೂ ಅಲ್ಲ. ಚುನಾವಣೆ ಸಂದರ್ಭದಲ್ಲಿ ವಿಶ್ವನಾಥ್ ಅವರು ಅಸಹಕಾರ ತೋರಿದರು. ಚಿಕ್ಕಬಳ್ಳಾಪುರ ವಿಧಾನಸಭಾ ವ್ಯಾಪ್ತಿಯಲ್ಲಿ ಸಂದೀಪ್ ರೆಡ್ಡಿಯವರು ನನ್ನ ವಿರುದ್ಧ ಕೆಲಸ ಮಾಡಿದರು. ಇದಕ್ಕೆಲ್ಲ ವಿಶ್ವನಾಥ್ ಕಾರಣ” ಎಂಬುದು ಸುಧಾಕರ್ ಅವರ ವಾದ.

ಚುನಾವಣಾ ಸಂದರ್ಭದಲ್ಲಿ ಸುಧಾಕರ್ ಅವರ ಆಪ್ತರ ಮನೆಯಲ್ಲಿ ಐದೂವರೆ ಕೋಟಿ ರೂ.ಗಳನ್ನು ಚುನಾವಣಾ ಆಯೋಗ ವಶಕ್ಕೆ ಪಡೆದಿತ್ತು. ಎಫ್‌ಐಆರ್ ಕೂಡ ದಾಖಲಾಯಿತು. ಈ ರೈಡ್ ಹಿಂದೆ ವಿಶ್ವನಾಥ್ ಕೆಲಸ ಮಾಡಿದ್ದಾರೆ ಎಂಬ ಗುಮಾನಿ ಸುಧಾಕರ್ ಆಪ್ತರಲ್ಲಿ ಈಗಲೂ ಇದೆ.

ಲೋಕಸಭಾ ಟಿಕೆಟ್ ಸುಧಾಕರ್ ಅವರಿಗೆ ಸಿಕ್ಕಾಗಲೂ ಮನಸ್ತಾಪಗಳು ಮುಂದುವರಿದಿದ್ದವು. ಆದರೆ ಚುನಾವಣೆಯನ್ನು ಗೆಲ್ಲಲು ಎಲ್ಲರ ಸಹಕಾರ ಅಗತ್ಯವೆಂದು ತಿಳಿದಿದ್ದ ಸುಧಾಕರ್, ಬಿಜೆಪಿ ಮತಗಳು ಚದುರಿ ಹೋಗುವುದನ್ನು ತಡೆಯುವುದಕ್ಕಾಗಿ ವಿಶ್ವನಾಥ್ ಅವರ ಮನೆಗೆ ಹೋಗಿದ್ದರು. ಆದರೆ, ವಿಶ್ವನಾಥ್‌ ಮೊದಲ ಭೇಟಿಯಲ್ಲಿ ಸಿಕ್ಕಿರಲಿಲ್ಲ. ಮತ್ತೊಮ್ಮೆ ಬಿಜೆಪಿಯ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರ ಜೊತೆಯಲ್ಲಿ ಸುಧಾಕರ್ ಹೋದರು. ಆಗ ವಿಶ್ವನಾಥ್ ಅವರ ಮನೆಯಲ್ಲಿ ಸೌಹಾರ್ದಯುತ ಔತಣಕೂಟವೂ ನಡೆಯಿತು. ಆನಂತರ ಎಲ್ಲವೂ ಸರಿಯಾಯಿತು ಎಂದೇ ವಿಶ್ವನಾಥ್ ಪ್ರತಿಪಾದಿಸುತ್ತಾ ಬಂದಿದ್ದರು. ಆದರೆ ಸುಧಾಕರ್ ಅವರಿಗಿದ್ದ ಅಪನಂಬಿಕೆ ಕಡಿಮೆಯಾಗಲಿಲ್ಲ.

ವಿಶ್ವನಾಥ್ ಅವರು ವಿಜಯೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡರೆ, ಸುಧಾಕರ್ ಅವರು ಬಿಜೆಪಿಯೊಳಗಿನ ತಟಸ್ಥ ಬಣದ ಜೊತೆಯಲ್ಲಿದ್ದಾರೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ವಿಜಯೇಂದ್ರ ಸಖ್ಯವನ್ನು ಬಳಸಿಕೊಂಡು, ಸಂದೀಪ್ ರೆಡ್ಡಿಯವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ನೇಮಿಸುವಲ್ಲಿ ವಿಶ್ವನಾಥ್ ಯಶಸ್ವಿಯಾದಾಗ, ಸುಧಾಕರ್ ಅಕ್ಷರಶಃ ಕುದಿದು ಹೋದರು. “ಸ್ಥಳೀಯ ಸಂಸದನಾದ ನನ್ನ ಅಭಿಪ್ರಾಯ ಕೇಳದೆ, ಒಂದೇ ಒಂದು ಮಾತೂ ಆಡದೆ ಆಯ್ಕೆ ಮಾಡಿದ್ದು ಹೇಗೆ?” ಎಂದು ವಿಜಯೇಂದ್ರ ವಿರುದ್ಧ ಸಿಡಿದೆದ್ದರು. ದೆಹಲಿವರೆಗೂ ಹೋಗಿ, ಸಂದೀಪ್ ನೇಮಕವನ್ನು ತಡೆಹಿಡಿದು ತಾಕತ್ತು ಪ್ರದರ್ಶಿಸಿದ ಸುಧಾಕರ್, ತಮ್ಮ ಆಪ್ತರಾದ ಸೀಕಲ್‌ ರಾಮಚಂದ್ರಗೌಡ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವಲ್ಲಿ ಯಶಸ್ವಿಯಾದರು.

ಒಂದೇ ಪಕ್ಷದ ಪ್ರಭಾವಿ ನಾಯಕರಿಬ್ಬರ ಕದನ ಇಲ್ಲಿಗೆ ನಿಲ್ಲಲಿಲ್ಲ. ವಿಶ್ವನಾಥ್ ಇದನ್ನು ಪ್ರತಿಷ್ಠೆಯ ವಿಷಯವಾಗಿಯೂ ತೆಗೆದುಕೊಂಡಂತೆ ಕಾಣುತ್ತದೆ. ಸಂದೀಪ್ ಅವರ ಮುಖೇನ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹೆಚ್ಚಾಯಿತು. ಸಂದೀಪ್ ಮಾಡುವ ಯಾವುದೇ ದಾನ, ಧರ್ಮಗಳ ಹಿಂದೆ ವಿಶ್ವನಾಥ್‌ ಅವರ ನೆರಳು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಚಿಕ್ಕಬಳ್ಳಾಪುರ ಕ್ಷೇತ್ರದ ಮೇಲೆ ವಿಶ್ವನಾಥ್ ಹಿಡಿತ ಸಾಧಿಸುವುದನ್ನು ತಪ್ಪಿಸುವುದಕ್ಕಾಗಿ ಸುಧಾಕರ್ ಹೊಸ ತಂತ್ರವನ್ನು ಹೆಣೆದರು. “ನೀನು ಚಿಕ್ಕಬಳ್ಳಾಪುರಕ್ಕೆ ಬಂದರೆ, ನಾನು ಯಲಹಂಕಕ್ಕೆ ಬರುತ್ತೇನೆ” ಎಂಬ ಸ್ಪಷ್ಟ ಸಂದೇಶ ನೀಡಲು ಮುಂದಾದರು.

ಚಿಕ್ಕಬಳ್ಳಾಪುರದಲ್ಲಿ ವಿಶ್ವನಾಥ್ ಪರ ಸಂದೀಪ್ ರೆಡ್ಡಿ ಅವರು ಕೆಲಸ ಮಾಡುತ್ತಿರುವಂತೆಯೇ ಯಲಹಂಕದಲ್ಲಿ ಸುಧಾಕರ್ ಅವರ ಪರ ಇರುವಾತ ಸತೀಶ್ ಕಡತನಮಲೆ. ಯಲಹಂಕ ಭಾಗದ ಪ್ರಮುಖ ರಾಜಕೀಯ ಮುಖಂಡರೂ ಆಗಿರುವ ಸತೀಶ್, ಬೆಂಗಳೂರು ಸಹಕಾರ ಹಾಲು ಉತ್ಪಾದಕರ ಸಂಘದ ನಿರ್ದೇಶಕರು ಹೌದು. ಯಲಹಂಕ ಕ್ಷೇತ್ರದಲ್ಲಿ ಸುಧಾಕರ್ ಅವರು ಕಾರ್ಯಕ್ರಮಗಳನ್ನು ಸಂಘಟಿಸಲು ನೆರವಾಗಿರುವವರಲ್ಲಿ ಸತೀಶ್ ಪ್ರಮುಖರು ಎಂದು ಸ್ಥಳೀಯ ಪತ್ರಕರ್ತರು ಹೇಳುತ್ತಾರೆ. ಇದರ ಜೊತೆಗೆ ಯಲಹಂಕ ಒಕ್ಕಲಿಗರ ಸಂಘದ ವಿಶ್ವಾಸ ಗಳಿಸುವಲ್ಲಿ ಸುಧಾಕರ್ ಯಶಸ್ವಿಯಾಗಿದ್ದಾರೆ. “ವಿಶ್ವನಾಥ್‌ ಅವರು ನಿಜವಾದ ಒಕ್ಕಲಿಗರೇ ಅಲ್ಲ” ಎನ್ನುವಷ್ಟರ ಮಟ್ಟಿಗೆ ಸುಧಾಕರ್ ಬಣದ ನರೇಟಿವ್‌ಗಳು ಬೆಳೆದಿವೆ. ಚಿಕ್ಕಬಳ್ಳಾಪುರಕ್ಕೆ ವಿಶ್ವನಾಥ್ ಬರುವುದು ಹೆಚ್ಚಾದಂತೆ ಯಲಹಂಕದತ್ತ ಸುಧಾಕರ್ ಹೆಚ್ಚು ಗಮನಹರಿಸಿದ್ದಾರೆ.

ಯಲಹಂಕದಲ್ಲಿ ಜೂನ್ 27ರಂದು ಸುಧಾಕರ್ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತಿಯು ವಿಶ್ವನಾಥ್ ಅವರ ಕಣ್ಣನ್ನು ಕೆಂಪಗೆ ಮಾಡಿತು. ಅದರ ಹಿಂದಿನ ದಿನ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಶ್ವನಾಥ್ ಸವಾಲು ಎಸೆದರು. “ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಂದೀಪ್ ರೆಡ್ಡಿಯವರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಲ್ಲಿ ಕೋರುತ್ತೇವೆ. ಜನ ಬಯಸಿದರೆ ನಾನೇ ಸ್ಪರ್ಧೆ ಮಾಡುತ್ತೇನೆ. ನೀವೇ (ಸುಧಾಕರ್) ಬೇಕಾದರೆ ಯಲಹಂಕಕ್ಕೆ ಬಂದು ನನ್ನ ವಿರುದ್ಧ ಸ್ಪರ್ಧಿಸಬಹುದು. ಬಿಜೆಪಿಯಿಂದ ಸ್ಪರ್ಧಿಸಲು ನಿಮಗೆ ಅವಕಾಶ ಸಿಗದು. ಬೇರೆ ಯಾವುದರ ಮೂಲಕವಾದರೂ ನನ್ನ ವಿರುದ್ಧ ಸ್ಪರ್ಧಿಸಿ” ಎಂದು ಸಮರ ಸಾರಿದರು.

“ನನ್ನ ವಿಷಯಕ್ಕೆ ಬಂದರೆ ನಾನು ಸುಧಾಕರ್ ಬುಡಕ್ಕೆ ಕೈಹಾಕುವೆ. ಚಿಕ್ಕಬಳ್ಳಾಪುರದಲ್ಲೇ ಕೆಂಪೇಗೌಡರ ಜಯಂತಿ ಮಾಡುವೆ. 2008ರಿಂದ ಯಲಹಂಕ ಕ್ಷೇತ್ರದಲ್ಲಿ ಶಾಸಕನಾಗಿದ್ದೇನೆ. ಅಂದಿನಿಂದ ಪ್ರತಿವರ್ಷವೂ ಎಲ್ಲರನ್ನೂ ಸೇರಿಸಿಕೊಂಡು ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸುತ್ತಾ ಬಂದಿದ್ದೇನೆ. ಆದರೆ ನಮ್ಮ ಪಕ್ಷದ ಸಂಸದರೇ ಆದ ಸುಧಾಕರ್ ಅವರು ನನಗೆ ಮಾಹಿತಿ ನೀಡದೆ ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಿದರು. ಆದ ಕಾರಣ ನಾನು ಇಲ್ಲಿಗೆ ಬಂದು ಮಾತನಾಡುತ್ತಿದ್ದೇನೆ” ಎಂದರು.

ಇದಕ್ಕೆ ಸುಧಾಕರ್ ಪ್ರತ್ಯುತ್ತರ ನೀಡಿದ್ದಾರೆ. “ಅನೇಕ ವರ್ಷಗಳಿಂದ ಯಲಹಂಕದಲ್ಲಿ ಅವರೇ ಶಾಸಕರಾಗಿದ್ದಾರೆ. ಈ ಹಿಂದೆ ಕಾರ್ಯಕ್ರಮವನ್ನು ಸರಿಯಾಗಿ ನಡೆಸಿದ್ದರೆ ನಮ್ಮ ಸಂಘದವರು ಈ ರೀತಿಯಾಗಿ ಕಾರ್ಯಕ್ರಮ ನಡೆಸುವ ಪ್ರಯತ್ನ ಮಾಡುತ್ತಿರಲಿಲ್ಲ. ಈ ಕ್ಷೇತ್ರದ ಸಂಸತ್ ಸದಸ್ಯನಾಗಿ ಬಹುಸಂಖ್ಯಾತ ಜನರ ಪರವಾಗಿ, ಕೆಂಪೇಗೌಡರ ಜಯಂತಿಯನ್ನು ಮಾಡುವುದು ಹೆಮ್ಮೆಯ ವಿಷಯ. ಜಾತ್ಯತೀತವಾಗಿ, ಪಕ್ಷಾತೀತವಾಗಿ ಈ ಕಾರ್ಯಕ್ರಮವನ್ನು ಸಂಘ ಹಮ್ಮಿಕೊಂಡಿದೆ. ಅವರಿಗೂ ಸಂಘ ಆಹ್ವಾನ ನೀಡರಬಹುದು. ಸಂಘದ ಕಾರ್ಯಕ್ರಮ ಬಿಟ್ಟು ಅವರು ವೈಯಕ್ತಿಕವಾಗಿ ಆಚರಣೆ ಮಾಡುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ‘ಲೋ ಕರಿಯ..’ ‘ಹಂದಿ ಚಿತ್ರ’…….. ಇತ್ಯಾದಿ; ಕಾರ್ಟೂನ್ ಬಳಸಿ ಹುಬ್ಬಳ್ಳಿ ವಕೀಲ ಬಿತ್ತುತ್ತಿರುವ ಕೋಮುದ್ವೇಷವೆಷ್ಟು?

ಮುಂದುವರಿದು, “ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸುವುದಾದರೆ ಅವರಿಗೆ ಹಾರ್ದಿಕ ಸುಸ್ವಾಗತವನ್ನು ಕೋರುತ್ತೇನೆ. ಅವರಿಗೆ ಧೈರ್ಯ ಇದೆಯಾ ಕೇಳಿ. ಸುಮ್ಮನೆ ಕ್ಯಾಮೆರಾ ಮುಂದೆ ಮಾತನಾಡುವುದಲ್ಲ. ಪಕ್ಷದ ಸಿಂಬಲ್ ಬೇಡ. ಇಂಡಿಪೆಂಡೆಂಟ್ ಆಗಿ ನಿಲ್ಲಲು ನಾನು ಸಿದ್ಧವಾಗಿದ್ದೇನೆ” ಎಂದು ತಿರುಗೇಟು ನೀಡಿದರು.

ಹೀಗೆ ವಿಶ್ವನಾಥ್ ಮತ್ತು ಸುಧಾಕರ್ ನಡುವೆ ನಡೆಯುತ್ತಿರುವುದು ಪ್ರಾದೇಶಿಕ ಹಿಡಿತ ಸಾಧಿಸುವ ರಾಜಕೀಯ ತಿಕ್ಕಾಟ. ಇವರಿಬ್ಬರ ನಡುವೆ ವ್ಯಕ್ತಿಗತ ಪ್ರತಿಷ್ಠೆಯೇ ಎದ್ದು ಕಾಣುತ್ತಿದೆ. ಈ ಹಗ್ಗಜಗ್ಗಾಟದ ಮೇಲೆ ಪಕ್ಷದ ನಿಯಂತ್ರಣ ಸಂಪೂರ್ಣ ಕೈತಪ್ಪಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಎಸ್.ಆರ್ ವಿಶ್ವನಾಥ್‌ ವರ್ಸಸ್ ಸದಾನಂದ ಗೌಡ

‘ಪಕ್ಷದ ರಾಜ್ಯ ನಾಯಕರ ಉದಾಸೀನತೆಯೇ ಕಾಂಗ್ರೆಸ್‍ನ ಐದನೇ ಅಭ್ಯರ್ಥಿ ಗೆಲುವಿಗೆ ಪ್ರಮುಖ ಕಾರಣ. ಕಾಂಗ್ರೆಸ್ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗಲೇ ನಾವು(ಬಿಜೆಪಿ) ಎಚ್ಚೆತ್ತುಕೊಳ್ಳಬೇಕಿತ್ತು’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದರ ಬೆನ್ನಲೇ ವಿಶ್ವನಾಥ್ ಅವರ ಹೇಳಿಕೆ ಹೊರಬಿದ್ದಿತು. ಅಡ್ಡಮತದಾನ ಮತ್ತು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾತನಾಡಿರುವ ಎಸ್.ಆರ್. ವಿಶ್ವನಾಥ್, “ಅವರದ್ದು ವಕ್ರ ಬುದ್ಧಿ” ಎಂದು ಜರಿದರು.

ತಮ್ಮ ಕಾರ್ಯಕ್ರಮಕ್ಕೆ ಬಾರದೆ ಇದ್ದದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ವಿಶ್ವನಾಥ್, “ನೀವು ಒಬ್ಬ ಹಿರಿಯ ಬಿಜೆಪಿ ನಾಯಕರಾಗಿದ್ದುಕೊಂಡು ಕಾಂಗ್ರೆಸ್‌ನವರು ಆಯೋಜಿಸಿದ್ದ ಸಭೆ ಅಥವಾ ಕಾರ್ಯಕ್ರಮಕ್ಕೆ ಹೇಗೆ ಹೋಗುತ್ತೀರಿ? ನಾವು ಹೋಗಬೇಡಿ ಎಂದು ಮನವಿ ಮಾಡಿದರೂ ಕೇಳಲಿಲ್ಲ. ಅವರ ಬುದ್ಧಿಯೇ ವಕ್ರ ಬುದ್ಧಿ. ಅವರು ಕೇಂದ್ರ ಸಚಿವರಾಗಿ, ಮುಖ್ಯಮಂತ್ರಿಗಳಾಗಿದ್ದಾಗ ನಾವು ಅವರಿಗಾಗಿ ಗಂಟೆಗಟ್ಟಲೆ ಬಾಗಿಲು ಕಾಯ್ದು ನಿಲ್ಲುತ್ತಿದ್ದೆವು. ಆದರೆ, ಇಂದು ಅವರ ವರ್ತನೆ ಪಕ್ಷಕ್ಕೆ ಶೋಭೆ ತರುವಂತದ್ದಲ್ಲ” ಎಂದರು.

ಮುಂದುವರಿದು, “ಇವತ್ತು ಅವರಿಗೆ ದಿಢೀರನೆ ಜಾತಿ ಅಭಿಮಾನ ಬಂದುಬಿಟ್ಟಿದೆ. ಸದಾನಂದ ಗೌಡರು ಮಂಗಳೂರು ಕಡೆಯವರಾಗಿದ್ದು, ಸಾಮಾನ್ಯವಾಗಿ ಹಳೇ ಮೈಸೂರು ಭಾಗದವರನ್ನು ಮಾತ್ರ ಒಕ್ಕಲಿಗರು ಎನ್ನಲಾಗುತ್ತದೆ, ಅವರೇನೂ ದೊಡ್ಡ ಗೌಡರಲ್ಲ” ಎಂದು ಲೇವಡಿ ಮಾಡಿದರು.

ಅದಕ್ಕೆ ಸದಾನಂದ ಗೌಡರು ತಿರುಗೇಟು ನೀಡಿದರು. “ನನಗೆ ಯಲಹಂಕದ ಕೆಂಪೇಗೌಡ ಜಯಂತಿಗೆ ಹೋಗಬೇಡಿ ಎಂದು ಕರೆ ಮಾಡಲಾಗಿತ್ತು. ವಿಶ್ವನಾಥ್ ನನ್ನನ್ನು ಒಕ್ಕಲಿಗ ಅಲ್ಲ ಎಂದಿದ್ದಾರೆ. ಆದರೆ ನಾನು ಒಕ್ಕಲಿಗ ಅಲ್ಲ ಅನ್ನಲು ಅವರಾರು? ವಿಶ್ವನಾಥ್ ಗೂಂಡಾಗಿರಿ ಮಾಡಿ ಬಂದವರು. ಅವರು ಈ ಹಿಂದೆ ಭೂಗತ ಲೋಕದ ಡಾನ್ ಮುತ್ತಪ್ಪ ರೈ ಕೈಕೆಳಗೆ ಕೆಲಸ ಮಾಡಿದವರು. ನಾನು ಅದೇ ಮುತ್ತಪ್ಪ ರೈ ವಿರುದ್ಧ ಹೋರಾಟ ಮಾಡಿ ಬಂದವನು. ವಿಶ್ವನಾಥ್‌ಗೆ ದುಡ್ಡಿನ ಅಮಲು ಹೆಚ್ಚಾಗಿದೆ” ಎಂದು ಗುಡುಗಿದ್ದಾರೆ.

ಈ ಇಬ್ಬರ ಗುದ್ದಾಟದಲ್ಲಿ ಮಂಗಳೂರಿನ ಆದಿಚುಂಚನಗಿರಿ ಶಾಖಾಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ ಕೂಡ ಎಂಟ್ರಿಯಾದರು. “ಯಾವತ್ತೂ ಇತಿಹಾಸವನ್ನು ಸರಿಯಾಗಿ ಅವಲೋಕಿಸಿ ಮಾತನಾಡುವುದು ಸಮಂಜಸ. ತಮ್ಮ ಸ್ವಾರ್ಥಕ್ಕಾಗಿ ಸಮುದಾಯವನ್ನು ಎಳೆದು ತರುವುದು ಸರಿಯಲ್ಲ. ಸದಾನಂದಗೌಡರು ಈ ಭಾಗದ ಧೀಮಂತ ನಾಯಕರು. ಬಾಲಿಷ ಹೇಳಿಕೆಗಳಿಂದ ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗುತ್ತಿದೆ. ಕರಾವಳಿ ಭಾಗದಲ್ಲಿ ಕೆದಂಬಾಡಿ ರಾಮೇಗೌಡರಂತಹ ಧೀಮಂತ ಸ್ವಾತಂತ್ರ್ಯ ಹೋರಾಟಗಾರರಿದ್ದರು. ಮಂಗಳೂರಿನಲ್ಲಿ ಒಕ್ಕಲಿಗರು ಎಲ್ಲ ರೀತಿಯ ಪ್ರಬೇಧಗಳಲ್ಲಿ ಇದ್ದಾರೆ. ತುಳುಗೌಡರು ಇರಬಹುದು, ಅರೆಭಾಷೆಗೌಡರಿರಬಹುದು, ಕನ್ನಡ ಗೌಡರು ಇರಬಹುದು, ಯಾವುದೇ ಗೌಡರು ಇರಬಹುದು, ಎಲ್ಲರೂ ಸಾಮರಸ್ಯದಿಂದ ಬದುಕುತ್ತಿರುವ ಕಾಲಘಟ್ಟದಲ್ಲಿ ಸಮಾಜವನ್ನು ಒಡೆಯುವ ಹೇಳಿಕೆ ನೀಡುವುದು ಸರಿಯಲ್ಲ” ಎಂದು ವಿಶ್ವನಾಥ್‌ಗೆ ಬುದ್ಧಿ ಹೇಳಿದರು.

ಮುಂದಾಗುವ ಅಪಾಯ ಅರಿತಿರುವ ವಿಶ್ವನಾಥ್ ಸಮುದಾಯದಲ್ಲಿ ಕ್ಷಮೆಯಾಚಿಸಿದ್ದಾರೆ. ಆದರೆ ಸದಾನಂದಗೌಡರ ವಿಚಾರದಲ್ಲಿ ರಾಜಿ ಆಗದೆ ಉಳಿದಿದ್ದಾರೆ.

ಈ ಲೇಖನ ಓದಿದ್ದೀರಾ?: ರಾಮ ಮಂದಿರ ದೇಣಿಗೆ ದಗಾ: ಬಿಜೆಪಿಯ ಅವನತಿ ಆರಂಭ

ಸದಾನಂದಗೌಡರನ್ನು ಟೀಕಿಸಿದ ಬೆನ್ನಲ್ಲೇ, ವಿಶ್ವನಾಥ್ ಅವರ ಕುಟುಂಬಿಕ ವಿಚಾರಗಳನ್ನು ಪ್ರಸ್ತಾಪಿಸಿ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಕಮೆಂಟ್ ಮಾಡಿದ್ದಾರೆ. ಕಾಂಗ್ರೆಸ್ ಸಚಿವ ಬೈರತಿ ಸುರೇಶ್ ಅವರ ಮಗನಿಗೆ, ತಮ್ಮ ಮಗಳನ್ನು ಎಸ್.ಆರ್ ವಿಶ್ವನಾಥ್‌ ವಿವಾಹ ಮಾಡುತ್ತಿದ್ದಾರೆ.  ಹೀಗಿರುವಾಗ ಸದಾನಂದಗೌಡರನ್ನು ಪ್ರಶ್ನಿಸುವ ನೈತಿಕತೆ ವಿಶ್ವನಾಥ್ ಅವರಿಗೆ ಇಲ್ಲ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

ಸದಾನಂದಗೌಡರ ಆಡಿಯೋ ಹರಿಕಥೆ

ಸದಾನಂದಗೌಡ ಮತ್ತು ಬಿ.ಎಸ್ ಯಡಿಯೂರಪ್ಪ ಫ್ಯಾಮಿಲಿಯ ನಡುವೆ ತಿಕ್ಕಾಟ ಹೊಸದೇನೂ ಅಲ್ಲ. ತಾವು ಜೈಲಿಗೆ ಹೋದ ಸಂದರ್ಭದಲ್ಲಿ ಯಡಿಯೂರಪ್ಪನವರು ಸದಾನಂದಗೌಡರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿದ್ದರು. ಗೌಡರು ತಮ್ಮ ಆಣತಿಗೆ ತಕ್ಕಂತೆ ಕುಣಿಯುತ್ತಾರೆಂಬ ಲೆಕ್ಕಾಚಾರದಲ್ಲಿದ್ದ ಯಡಿಯೂರಪ್ಪನವರಿಗೆ ಮುಖಭಂಗವಾಗಿತ್ತು. “ನಾನು ಪಕ್ಷದ ಹೈಕಮಾಂಡ್ ಮಾತುಗಳನ್ನು ಕೇಳುತ್ತೇನೆ ಹೊರತು, ಯಡಿಯೂರಪ್ಪನವರ ಕೈಗೊಂಬೆಯಲ್ಲ” ಎಂದು ಸದಾನಂದಗೌಡರು ತಿರುಗಿಬಿದ್ದಿದ್ದರಿಂದ, ಸಿಟ್ಟಿಗೆದ್ದ ಯಡಿಯೂರಪ್ಪ ಅವರು ಗೌಡರ ಜಾಗಕ್ಕೆ ಜಗದೀಶ್ ಶೆಟ್ಟರ್ ಅವರನ್ನು ತಂದು ಕೂರಿಸಿದ್ದು ರಾಜಕೀಯ ಚರಿತ್ರೆ.

ಅಂದರೆ ಯಡಿಯೂರಪ್ಪನವರ ಕುಟುಂಬಕ್ಕೆ ನಿಷ್ಠರಲ್ಲ ಎನ್ನುವ ದೊಡ್ಡ ಪಡೆಯೇ ಬಿಜೆಪಿ ಒಳಗೆ ಕೆಲಸ ಮಾಡುತ್ತಿದೆ. ಅಡ್ಡಮತದಾನ ಪ್ರಕರಣ ಘಟಿಸಿದ ಮೇಲೆ ಈಗ ವಿಜಯೇಂದ್ರ ನಾಯಕತ್ವದ ಕುರಿತೂ ಅಪಸ್ಪರಗಳು ಕೇಳಿಬರುತ್ತಿವೆ.

ಇದೇ ಹೊತ್ತಿನಲ್ಲಿ, ಸದಾನಂದಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಬಿಜೆಪಿ ಕೇಂದ್ರ ನಾಯಕ ಪ್ರದೀಪ್ ಎಂಬವರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆ ಆಡಿಯೋದಲ್ಲಿ, ʻವಿಜಯೇಂದ್ರ ಅವರ ಅವಧಿ ನವೆಂಬರ್‌ಗೆ ಮುಗಿಯಲಿದೆ. ಆಗ ಹುದ್ದೆಯಿಂದ ತೆಗೆದುಬಿಡಿ. ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್. ಅಕ್ಟೋಬರ್ ಹೊತ್ತಿಗೆ ವಿಜಯೇಂದ್ರ ಅವರನ್ನು ಕಿಕ್ ಔಟ್ ಮಾಡಿ. ಆಗ ಲಿಂಗಾಯತರ ವಿರೋಧವೇನೂ ಬರುವುದಿಲ್ಲ’ ಎಂದಿರುವುದು ವಿವಾದ ಹುಟ್ಟುಹಾಕಿದೆ. “ಈ ಮಾತುಗಳನ್ನು ನಾನು ಆಡಿಲ್ಲ. ಇದಕ್ಕೆ ಸ್ಪಷ್ಟನೆ ಕೊಡುವ ಅಗತ್ಯವೂ ಇಲ್ಲ” ಎಂದು ಗೌಡರು ಸಿಡಿಮಿಡಿಗೊಂಡಿದ್ದಾರೆ. ವರದಿ ಮಾಡಿದ ಮಾಧ್ಯಮವೊಂದರ ಮೇಲೂ ಕಿಡಿಕಾರಿದ್ದಾರೆ.

ಅಂದರೆ ಬಿಜೆಪಿಯೊಳಗೆ ಎಲ್ಲವೂ ಸರಿ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಬಣ ರಾಜಕಾರಣದಿಂದಾಗಿ ಪಕ್ಷವು ಅಳಿತಪ್ಪಿದೆ. ಶಿಸ್ತಿನ ಸಂಘಟನೆ ಬಿಜೆಪಿ ಎಂಬುದು ಕರ್ನಾಟಕದ ಮಟ್ಟಿಗೆ ದಾರಿತಪ್ಪದಂತೆಯೂ, ಅತಿದೊಡ್ಡ ಜೋಕ್ ಆಗಿಯೂ ಕಾಣುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

3,000 ಮದರಸಾಗಳ ನಿರ್ವಹಣೆ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ರಾಜಸ್ಥಾನ ಹೈಕೋರ್ಟ್‌ ಸೂಚನೆ

ರಾಜಸ್ಥಾನದಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು 3,000 ಮದರಸಾಗಳ ಪರಿಣಾಮಕಾರಿ ನಿರ್ವಹಣೆ, ಮೇಲ್ವಿಚಾರಣೆ ಹಾಗೂ...

45 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಷಡ್ಯಂತ್ರ; ಮುಖ್ಯ ಚುನಾವಣಾಧಿಕಾರಿಗೆ ಸಿಎಂ ದೂರು

ರಾಜ್ಯದಲ್ಲಿ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಸುಮಾರು 45...

ದ್ವೇಷಭಾಷಣ ಆರೋಪ: TMC ಸಂಸದೆ ಮಹುವಾ ಮೊಯಿತ್ರಾಗೆ ಬಂಧನದಿಂದ ಮುಕ್ತಿ; ಕ್ಷೇತ್ರ ಭೇಟಿ ವೇಳೆ ಭದ್ರತೆ ನೀಡಲು ಹೈಕೋರ್ಟ್‌ ಸೂಚನೆ

ದ್ವೇಷಪೂರಿತ ಭಾಷಣ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಗಾಳದ ಟಿಎಂಸಿ...