ತುರ್ತು ಪರಿಸ್ಥಿತಿ ಹಾಗೂ ವಿಪತ್ತು ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಆರಂಭಿಸಿದ್ದ ‘ಪಿಎಂ ಕೇರ್ಸ್’ (PM CARES) ನಿಧಿಯು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅತಿದೊಡ್ಡ ಸಾಂಸ್ಥಿಕ ಹಗರಣಗಳಲ್ಲಿ ಒಂದಾಗಿದ್ದು, ಇದು ಸಾರ್ವಜನಿಕರ ವಿಶ್ವಾಸಕ್ಕೆ ಎಸಗಿದ ಬಹುದೊಡ್ಡ ದ್ರೋಹ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಆ ಹಣವನ್ನು ಬಳಸುವ ನೈಜ ಉದ್ದೇಶವೇ ಸರ್ಕಾರಕ್ಕಿಲ್ಲದಿದ್ದಾಗ, ದೇಶಿ ಹಾಗೂ ವಿದೇಶಿ ದಾನಿಗಳಿಂದ ತುರ್ತು ಪರಿಹಾರದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ಮೋದಿಯವರ ಸರ್ಕಾರವೇಕೆ ಸಂಗ್ರಹಿಸುತ್ತಿದೆ ಎಂದು ಸಚಿವ ಖರ್ಗೆ ಪ್ರಶ್ನಿಸಿದ್ದಾರೆ. ನಿಧಿಯ ಮೂಲ ಉದ್ದೇಶ ಮತ್ತು ಸರ್ಕಾರದ ಪ್ರಸ್ತುತ ನಡೆಯ ನಡುವಿನ ಅಜಗಜಾಂತರ ವ್ಯತ್ಯಾಸವನ್ನು ಅವರು ಬಿಚ್ಚಿಟ್ಟಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ 2024-25ನೇ ಸಾಲಿನ ಪಿಎಂ ಕೇರ್ಸ್ ನಿಧಿಯ ಆಡಿಟ್ ವರದಿಯ ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ಅವರು, ಸರ್ಕಾರದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಡಿಟ್ ವರದಿಯ ಪ್ರಕಾರ, ಪ್ರಸ್ತುತ ಈ ನಿಧಿಯಲ್ಲಿ ಬರೋಬ್ಬರಿ 8,452 ಕೋಟಿ ರೂಪಾಯಿಗಳ ಬೃಹತ್ ಮೊತ್ತ ಲಭ್ಯವಿದೆ. ಆದರೆ, ತುರ್ತು ಪರಿಸ್ಥಿತಿ ಅಥವಾ ಪರಿಹಾರ ಕಾರ್ಯಗಳಿಗಾಗಿ ಅದರಲ್ಲಿ ಬಳಕೆಯಾಗಿರುವುದು ಕೇವಲ ಶೇ 0.01ರಷ್ಟು ಹಣ ಮಾತ್ರ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಲೆಕ್ಕಪತ್ರದಲ್ಲಿನ ಕೆಲವು ಅನುಮಾನಾಸ್ಪದ ನಮೂದುಗಳ (Entries) ಬಗ್ಗೆಯೂ ಗೃಹ ಸಚಿವರು ಬೆಳಕು ಚೆಲ್ಲಿದ್ದಾರೆ. ಯೋಜನೆಗಳ ಜಾರಿ ಏಜೆನ್ಸಿಗಳು 324 ಕೋಟಿ ರೂಪಾಯಿಗಳನ್ನು ನಿಧಿಗೆ ಮರುಪಾವತಿ ಮಾಡಿವೆ ಎಂದು ಹೇಳಲಾಗಿದೆ. ಆದರೆ, ಆ ಜಾರಿ ಏಜೆನ್ಸಿಗಳು ಯಾವುವು ಮತ್ತು ಅವರು ಆ ಹಣವನ್ನು ಮರುಪಾವತಿಸಲು ಕಾರಣವೇನು ಎಂಬ ಬಗ್ಗೆ ಯಾವುದೇ ಸ್ಪಷ್ಟನೆಯಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಈ ಹಣಕಾಸು ಲೆಕ್ಕಾಚಾರಗಳಿಗೆ ಪೂರಕವಾಗಿ ನೀಡಬೇಕಿದ್ದ ‘ಲಗತ್ತಿಸಲಾದ ಟಿಪ್ಪಣಿ’ಗಳನ್ನು ನಿಗೂಢವಾಗಿ ಕೈಬಿಟ್ಟಿರುವುದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.
ದೇಶದಲ್ಲಿ ಎದುರಾಗುವ ತುರ್ತು ಹಾಗೂ ಸಂಕಷ್ಟದ ಪರಿಸ್ಥಿತಿಗಳನ್ನು ತ್ವರಿತವಾಗಿ ನಿಭಾಯಿಸುವ ಉದ್ದೇಶದಿಂದ 2020ರ ಮಾರ್ಚ್‌ನಲ್ಲಿ ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಭಾರತವು ಕೋವಿಡ್ ಮಹಾಮಾರಿಯ ಭೀಕರತೆ, ವಿನಾಶಕಾರಿ ಚಂಡಮಾರುತಗಳು, ಕೇರಳ ಮತ್ತು ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ದೇಶದ ಹಲವೆಡೆ ಆವರಿಸಿರುವ ತೀವ್ರ ಬರಗಾಲದಂತಹ ಸಾಲು ಸಾಲು ಸಂಕಷ್ಟಗಳನ್ನು ಎದುರಿಸಿದೆ ಎಂಬುದನ್ನು ಪ್ರಿಯಾಂಕ್ ಖರ್ಗೆ ನೆನಪಿಸಿದ್ದಾರೆ.
ಒಂದೆಡೆ ಜನರು ಪ್ರಕೃತಿ ವಿಕೋಪಗಳಿಂದ ತತ್ತರಿಸಿ ಜೀವನ್ಮರಣದ ಹೋರಾಟ ನಡೆಸುತ್ತಿರುವಾಗ, ಅವರಿಗಾಗಿ ಮೀಸಲಿಟ್ಟ ಪರಿಹಾರ ನಿಧಿಯ ಹಣವನ್ನು ಮಾತ್ರ ಬಿಡುಗಡೆ ಮಾಡದೆ ಹಾಗೆಯೇ ಇಟ್ಟುಕೊಂಡಿರುವುದು ಕೇಂದ್ರ ಸರ್ಕಾರದ ಅತ್ಯಂತ ಕ್ರೂರ ನಡೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.




