ಸ್ವಪ್ರತಿಷ್ಠೆಯ ರಾಜಕಾರಣಿಗಳಿಂದ ಚಳವಳಿಗೆ ಅಪಾಯವಿರುತ್ತದೆ. ಹೀಗಾಗಿ ಚನ್ನರಾಯಪಟ್ಟಣ ಭೂ ಹೋರಾಟವು ರಾಜಕಾರಣಿಗಳನ್ನು ತಂತ್ರಗಾರಿಕೆಯ ಭಾಗವಾಗಿ ಬಳಸಿಕೊಂಡರೂ, ಅವರಿಂದ ಅಂತರ ಕಾಯ್ದುಕೊಂಡಿತು. ಹೋರಾಟ ಸಮಿತಿಯೇ ನಿಜವಾದ ಶಕ್ತಿಯಾಗಿತ್ತು. ಇದು ಬಿಡದಿ ರೈತರಿಗೆ ದೊಡ್ದ ಪಾಠ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ತಮ್ಮ 1,777 ಎಕರೆ ಕೃಷಿ ಭೂಮಿಯನ್ನು ರಕ್ಷಿಸಿಕೊಳ್ಳುವುದಕ್ಕೆ ನಡೆಸಿದ ಹೋರಾಟಕ್ಕೂ, ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 25 ಗ್ರಾಮಗಳ ರೈತರು ಸುಮಾರು 9,640 ಎಕರೆ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟಕ್ಕೂ ಕೆಲವು ಸಾಮ್ಯತೆಗಳಿವೆ, ವೈರುಧ್ಯಗಳೂ ಇವೆ.
ಸರ್ಕಾರವು ಬಿಡದಿ ಭಾಗದಲ್ಲಿ ಸ್ವಾಧೀನಕ್ಕೆ ಪಡೆದುಕೊಳ್ಳಲು ಯೋಜಿಸಿರುವ ಭೂಮಿಯ ಗಾತ್ರ ಚನ್ನರಾಯಪಟ್ಟಣಕ್ಕೆ ಹೋಲಿಸಿದರೆ 5 ಪಟ್ಟು ಹೆಚ್ಚಿದೆ. ಆದರೆ ಚನ್ನರಾಯಪಟ್ಟಣ ರೈತರು ರೂಪಿಸಿದ ಐತಿಹಾಸಿಕ ಚಳವಳಿಯಿಂದ ಬಿಡದಿ ರೈತರು ಕಲಿಯಬೇಕಾದ ಪಾಠಗಳು ನೂರಾರಿವೆ ಎನ್ನುತ್ತಾರೆ ಹೋರಾಟಗಾರರು.
ಚನ್ನರಾಯಪಟ್ಟಣ ರೈತ ಹೋರಾಟದ ಎದುರಾಗಿ ಎಲ್ಲ ರಾಜಕೀಯ ಪಕ್ಷಗಳು ನಿಂತಿದ್ದವು. ರೈತರು ವರ್ಸಸ್ ರಾಜಕೀಯ ಪಕ್ಷಗಳು ಎಂದು ಸುಲಭವಾಗಿ ಗೆರೆ ಎಳೆದು ಅಲ್ಲಿ ತೋರಿಸಬಹುದಿತ್ತು. ಪ್ರತಿಪಕ್ಷಗಳು ಮತ್ತು ಮಾತು ಕೊಟ್ಟು ವಿಳಂಬ ಮಾಡಿದ ಆಡಳಿತ ಪಕ್ಷ- ಈ ಎರಡೂ ಸಮಾನ ಅಪರಾಧಿ ಸ್ಥಾನದಲ್ಲಿ ನಿಂತಿದ್ದವು. ಆಗ ಕುರ್ಚಿಯಲ್ಲಿದ್ದ ಸಿದ್ದರಾಮಯ್ಯನವರು ರೈತ ಚಳವಳಿ ಮತ್ತು ಸಮಾಜವಾದಿ ಹಿನ್ನಲೆಯಿಂದ ಬಂದವರಾಗಿದ್ದ ಕಾರಣ, ರೈತರಿಗೊಂದು ಭರವಸೆಯೂ ಇತ್ತು. ಚಳವಳಿಯ ಮೂಲಕ ಸಿದ್ದರಾಮಯ್ಯನವರಿಗೆ ಬಲ ತುಂಬುವುದು ಅನಿವಾರ್ಯವೆಂದು ರೈತರು ಭಾವಿಸಿದ್ದರು. ರಾಜಕೀಯ ಬಲದ ಅಗತ್ಯತೆಯಷ್ಟೇ ಅಂತರವೂ ಮುಖ್ಯ ಎಂದು ಅರಿತಿದ್ದರು. ಹೀಗಾಗಿ ಚನ್ನರಾಯಪಟ್ಟಣ ರೈತ ಹೋರಾಟಕ್ಕೆ ಸೈದ್ಧಾಂತಿಕ ತಳಹದಿ ಗಟ್ಟಿಯಾಗಿತ್ತು. ಸಿದ್ದರಾಮಯ್ಯನವರ ನೈತಿಕ ಪ್ರಜ್ಞೆಯನ್ನು ಬಡಿದೆಬ್ಬಿಸುವ ಶಕ್ತಿ ಈ ಚಳವಳಿಗಿತ್ತು. ಆದರೆ ಬಿಡದಿ ರೈತ ಹೋರಾಟವು ಇಂತಹ ಅನೇಕ ಕೊಂಡಿಗಳ ಗೈರು ಹಾಜರಿಯನ್ನು ತೋರಿಸುತ್ತಿದೆಯೇ? ದೊಡ್ಡ ಸುದ್ದಿಯಾಗುತ್ತಿರುವ ಚಳವಳಿ ಆಂತರ್ಯದಲ್ಲಿ ಗಟ್ಟಿಬೇರುಗಳನ್ನು ಹೊಂದಿದೆಯೇ?
ಬಿಡದಿ ಹೋರಾಟಕ್ಕೆ ಮುಖ್ಯವಾಹಿನಿ ಮಾಧ್ಯಮಗಳು ನೀಡಿರುವಷ್ಟು ಪ್ರಚಾರವನ್ನು ಚನ್ನರಾಯಪಟ್ಟಣ ಚಳವಳಿಗೆ ಕೊಟ್ಟಿದ್ದು ಕಾಣಲಿಲ್ಲ. ಪರ್ಯಾಯ ಮಾಧ್ಯಮಗಳು ಆ ಹೋರಾಟದ ಜೊತೆಯಲ್ಲಿ ಕಾಣಿಸಿಕೊಂಡವಾದರೂ ದೊಡ್ಡ ಮಾಧ್ಯಮಗಳಲ್ಲಿ ನಿರಂತರ ಚರ್ಚೆಯ ವಸ್ತುವಾಗಿರಲಿಲ್ಲ. ಆ ಹೋರಾಟ ಟಿಆರ್‌ಪಿಯ ಸರಕೂ ಆಗಿರಲಿಲ್ಲ. ಆದರೂ ಅದು ಸರ್ಕಾರವನ್ನು ಮಣಿಸಿತು! ಕಾರಣ- ಆ ಹೋರಾಟ ಸ್ಥಳೀಯ ಮಟ್ಟದಲ್ಲಿ ಗಟ್ಟಿಯಾಗಿತ್ತು. 13 ಹಳ್ಳಿಗಳ ರೈತರು ರೂಪಿಸಿದ ‘ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ’ಯೇ ಚಳವಳಿಯನ್ನು ಸಂಪೂರ್ಣವಾಗಿ ಮುನ್ನಡೆಸಿತು. ಅಲ್ಲಿ ವ್ಯಕ್ತಿಪ್ರತಿಷ್ಠೆಗಳಿರಲಿಲ್ಲ. ರಾಜಕೀಯ ಮೇಲಾಟಗಳಿರಲಿಲ್ಲ. ಸ್ವಪ್ರತಿಷ್ಠೆಯ ಟೀಕಾಪ್ರಹಾರಗಳಿರಲಿಲ್ಲ. ಇದ್ದದ್ದು ರೈತರ ಒಗ್ಗಟ್ಟಷ್ಟೇ. ತಳಪಾಯ ಗಟ್ಟಿಯಾಗಿದ್ದರೆ, ಮತ್ತಷ್ಟು ಶಕ್ತಿ ತಂತಾನೇ ಬಂದು ಸೇರಿಕೊಳ್ಳುತ್ತದೆ ಎಂಬಂತೆ ಈ ಚಳವಳಿಗೆ ‘ಸಂಯುಕ್ತ ಹೋರಾಟ ಕರ್ನಾಟಕ’ ಜೊತೆಗೂಡಿತ್ತು.
ಚನ್ನರಾಯಪಟ್ಟಣ ಹೋರಾಟ ಎಂದ ತಕ್ಷಣ ಅಲ್ಲಿನ ಸಮಿತಿ ವಹಿಸಿದ ಪಾತ್ರ ನೆನಪಿಗೆ ಬಾರದೆ ಇರುವುದಿಲ್ಲ. ಬಿಡದಿ ರೈತ ಹೋರಾಟದಲ್ಲಿ ಕಾಣುವ ದೊಡ್ಡ ಗೈರು ಇದುವೇ ಆಗಿದೆ. ‘ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಪಂ ಸುತ್ತಮುತ್ತಲಿನ ರೈತರ ಭೂ ಹಿತರಕ್ಷಣಾ ಸಮಿತಿ’ ಇದೆಯಾದರೂ, ರಾಜಕೀಯ ಪಕ್ಷಗಳ ಸದ್ದೇ ಸಮಿತಿಯ ಚಳವಳಿಗಿಂತ ದೊಡ್ಡ ಮಟ್ಟದಲ್ಲಿ ಕಾಣಿಸುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕಿರುಚಾಟಗಳು ಜೋರಾಗಿ, ರೈತರ ದನಿ ಕೇಳಿಸದಂತಾಗುತ್ತಿದೆ ಅನಿಸತೊಡಗಿದೆ.
“ರಾಜಕೀಯ ಪಕ್ಷಗಳು ಬಂದು ಹೋಗುತ್ತವೆ. ಆದರೆ ನಾವು ಅವರಿಂದ ಅಂತರ ಕಾಯ್ದುಕೊಂಡಿದ್ದೇವೆ. ಎಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ನೆಲೆಯು ಇದೇ ಪ್ರದೇಶವಾಗಿರುವುದರಿಂದ ಸಾಮಾನ್ಯವಾಗಿ ಅವರ ಪೈಪೋಟಿ ಸದ್ದು ಮಾಡುತ್ತಿದೆ. ನಾವು ಪಕ್ಷಾತೀತವಾಗಿ ಹೋರಾಟ ಕಟ್ಟಿದ್ದೇವೆ” ಎನ್ನುತ್ತಾರೆ ಬೈರಮಂಗಲ- ಕಂಚುಗಾರನಹಳ್ಳಿ ಭೂ ಹೋರಾಟ ಸಮಿತಿಯ ಖಜಾಂಚಿ ನಾಗರಾಜ್.
ಚಳವಳಿ ದಿಕ್ಕುತಪ್ಪಬಾರದೆಂಬ ಕಾಳಜಿ ಅವರಿಗಿದೆಯಾದರೂ ಇಲ್ಲಿ ಸ್ವಪ್ರತಿಷ್ಠೆಯ ರಾಜಕಾರಣಿಗಳಿಗೆ ಚಳವಳಿ ಜಾಗಕೊಡುತ್ತಿದೆ ಎಂಬುದನ್ನು ಅವರು ಹೇಳಲು ಹಿಂಜರಿಯುತ್ತಾರೆ. ಆದರೆ ಬಿಡದಿ ಹೋರಾಟವನ್ನು ಬೆಂಬಲಿಸುತ್ತಿರುವ ಹೋರಾಟಗಾರರು ಕೆಲವು ಅಪಾಯಗಳನ್ನು ಗ್ರಹಿಸದೆ ಇಲ್ಲ.
ದೇವನಹಳ್ಳಿ ರೈತ ಹೋರಾಟವನ್ನು ತಳಮಟ್ಟದಲ್ಲಿ ಗಟ್ಟಿಯಾಗಿ ಕಟ್ಟಿದ್ದ ದಲಿತ ಸಂಘರ್ಷ ಸಮಿತಿಯ ಕಾರಳ್ಳಿ ಶ್ರೀನಿವಾಸ್ ಅವರು ಮೂಲತಃ ಜೆಡಿಎಸ್ ಪಕ್ಷದವರು. ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದರೂ ಪಕ್ಷದ ರಾಜಕಾರಣವನ್ನು ಚಳವಳಿಯ ಒಳಗಡೆಗೆ ಬಿಟ್ಟುಕೊಳ್ಳಲಿಲ್ಲ. ಪಕ್ಷದ ಮುಖವಾಗಿ ಅವರು ಎಂದಿಗೂ ಕಾಣಿಸಿಕೊಳ್ಳಲಿಲ್ಲ ಎಂಬುದೇ ಆ ಚಳವಳಿಯ ಶಕ್ತಿ.
ಶ್ರೀನಿವಾಸ್ ಅವರ ನಾಯಕತ್ವದ ಕುರಿತು ಹೃದಯತುಂಬಿ ಮಾತನಾಡಿದ ಹೋರಾಟಗಾರ ಚೀಮಾಚನಹಳ್ಳಿ ರಮೇಶ್, “ಚಳವಳಿ ಮತ್ತು ಪಕ್ಷದ ನಡುವೆ, ಚಳವಳಿಯೇ ಮೊದಲ ಆಯ್ಕೆ ಅಂದವರು ಕಾರಳ್ಳಿ. ನಾನು ಮೊದಲು ಡಿಎಸ್ಎಸ್ ನವನು, ನಂತರ ಪಕ್ಷವಷ್ಟೇ ಎಂದು ಸ್ಪಷ್ಟವಾಗಿ ಹೇಳಿದ್ದರು. ನನ್ನದೇ ಪಕ್ಷದ ಮುಖಂಡರು ಬಂದು ಹೋದರೂ, ಅದಕ್ಕೆ ಹೆಚ್ಚು ಮಹತ್ವ ನೀಡಬೇಕಿಲ್ಲ. ಸಮಿತಿ ನಿರ್ಧಾರವೇ ಅಂತಿಮ ಎನ್ನುವ ಸ್ಪಷ್ಟ ಮಾತುಗಳನ್ನು ತಿಳಿಸಿದ್ದರು. ಸಮಿತಿ ರಚನೆಯಾಗಿ, ಅದರ ನೇತೃತ್ವ ವಹಿಸಿದ ಮೇಲೆ ಪಕ್ಷದ ಯಾವುದೇ ಕಾರ್ಯಕ್ರಮಕ್ಕೂ ಅವರು ಹೋಗಲಿಲ್ಲ. ತಳಮಟ್ಟದಲ್ಲಿ ನೈತಿಕವಾಗಿ ಹೋರಾಟ ಗಟ್ಟಿಯಾಗಿತ್ತು. ಅದರಿಂದ ಸರ್ಕಾರವನ್ನು ಮಣಿಸಿದೆವು” ಎನ್ನುತ್ತಾರೆ.
ಮುಂದುವರಿದು, “ದೇವನಹಳ್ಳಿ ಭೂ ರಕ್ಷಣಾ ಹೋರಾಟದಲ್ಲಿ ಎಲ್ಲ ಪಕ್ಷದ ಕಾರ್ಯಕರ್ತರೂ ಇದ್ದರು. ಲೀಡ್ ಮಾಡುವವರು ಎಂದಿಗೂ ಪಕ್ಷದ ಬಣ್ಣವನ್ನು ಹಚ್ಚಿಕೊಂಡಿರಲಿಲ್ಲ. ಪಾರ್ಟಿ ವಿಚಾರಗಳು ಮುನ್ನೆಲೆಗೆ ಬರಲು ಯಾರೂ ಬಿಡುತ್ತಿರಲಿಲ್ಲ. ಹೋರಾಟದ ಜೊತೆ ರಾಜಕೀಯ ಮುಖಂಡರು ಬಂದು ಸೇರಿಕೊಂಡಿದ್ದರೆ ಹೊರತು, ರಾಜಕಾರಣಿಗಳ ಜೊತೆ ಚಳವಳಿ ಹೋಗಲಿಲ್ಲ. ಅಂತಿಮವಾಗಿ ಹೋರಾಟವನ್ನು ಮುನ್ನಡೆಸಿದ್ದು ಸಮಿತಿಯಷ್ಟೇ. ಕಾರಳ್ಳಿ ಶ್ರೀನಿವಾಸ್ ಮತ್ತು ಸಮಿತಿಯ ಒಳಗಿದ್ದ ನಮ್ಮೆಲ್ಲರಿಗೂ ಮೊದಲಿನಿಂದಲೂ ಚಳವಳಿಗಳ ನೆಟ್ ವರ್ಕ್ ಗೊತ್ತಿತ್ತು” ಎಂದು ತಿಳಿಸುತ್ತಾರೆ.
ಚಳವಳಿಗೆ ರಾಜಕೀಯ ಬಲ ಬೇಕು ಎಂಬುದನ್ನು ಚನ್ನರಾಯಪಟ್ಟಣ ಹೋರಾಟಗಾರರು ಅಲ್ಲಗಳೆದಿರಲಿಲ್ಲ. ಆದರೆ ರಾಜಕೀಯ ಮೇಲಾಟವು ಚಳವಳಿಯ ನೈತಿಕ ತಳಹದಿ ಮೇಲೆ ಸವಾರಿ ಮಾಡುವ ಅಪಾಯವನ್ನೂ, ಚಳವಳಿಯನ್ನು ಆಪೋಷನ ತೆಗೆದುಕೊಳ್ಳುವ ಸಾಧ್ಯತೆಗಳನ್ನೂ ಅರಿತಿದ್ದರು. “ನಮಗೆ ವಾಸ್ತವಗಳ ಎಚ್ಚರಿಕೆ ಇತ್ತು. ರಾಜಕಾರಣಿಗಳನ್ನು ತಂತ್ರಗಾರಿಕೆಯ ಭಾಗವಾಗಿ ನೋಡಿದ್ದೆವು. ಧರಣಿ ಜಾಗಕ್ಕೆ ಬಂದು ಹೋಗಲು ಕುಮಾರಸ್ವಾಮಿಯವರಿಗೆ ಆಹ್ವಾನ ನೀಡಿದ್ದು ಕೂಡ ಸ್ಟಾಟಜಿಯ ಭಾಗವಾಗಿತ್ತು. ಯಾರೇ ಬಂದು ಹೋದರೂ ಮುಂದಾಳತ್ವ ವಹಿಸಿದ್ದು ಮಾತ್ರ ಸಮಿತಿಯೇ. ರಾಜಕಾರಣಿಗಳು ಬಂದ ತಕ್ಷಣ ಬದಲಾಗುತ್ತದೆ ಎಂದಲ್ಲ. ಅದರಿಂದ ಒಂದಿಷ್ಟು ಸುದ್ದಿಯಾಗುತ್ತದೆ, ಆ ಸುದ್ದಿಯನ್ನು ಹೇಗೆ ಬಳಸುತ್ತೇವೆ ಎಂಬುದು ಮುಖ್ಯ ಎನ್ನುತ್ತಿದ್ದರು ಕಾರಳ್ಳಿ ಶ್ರೀನಿವಾಸ್. ಸಿದ್ದರಾಮಯ್ಯನವರೂ ಹೋರಾಟಕ್ಕೆ ಬೆಂಬಲ ನೀಡಿದ್ದರು. ಅವರು ಕೊಟ್ಟ ಮಾತಿಗೆ ತಪ್ಪದಂತೆ ಚಳವಳಿ ನೋಡಿಕೊಂಡಿತು” ಎನ್ನುತ್ತಾರೆ ರಮೇಶ್.
ಚನ್ನರಾಯಪಟ್ಟಣ ಹೋರಾಟಕ್ಕೂ ಬಿಡದಿ ಹೋರಾಟಕ್ಕೂ ತುಲನೆ ಮಾಡಿ ನೋಡಿದರೆ ಪ್ರಶ್ನೆಗಳು ಏಳುವುದು ಇಲ್ಲಿಯೇ. “ಕುಮಾರಸ್ವಾಮಿ ಅವರು ಬಿಡದಿ ರೈತ ಹೋರಾಟಕ್ಕೆ ಕೇವಲ ಬೆಂಬಲ ಕೊಡುತ್ತಿದ್ದಾರೆಂದು ಅನಿಸುತ್ತಿದೆಯೇ? ಬೆಂಬಲ ಕೊಡುವುದಕ್ಕಷ್ಟೇ ಅವರು ಬಂದು ಮಾತನಾಡುತ್ತಿಲ್ಲ. ಕುಮಾರಸ್ವಾಮಿಯವರಿಗೆ, ನಿಖಿಲ್ ಗೌಡರಿಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ರೈತರನ್ನು ಮುಂದೆ ಬಿಟ್ಟು, ಅವರು ಹಿಂದೆ ನಿಲ್ಲಬೇಕಾಗಿತ್ತು. ತಾವೇ ಮುಂದೆ ನಿಲ್ಲುವುದೆಂದರೆ ರಾಜಕೀಯ ಅಜೆಂಡಾ ಇದೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ರಮೇಶ್ ಅಭಿಪ್ರಾಯಪಡುತ್ತಾರೆ.
“ಬಿಡದಿ ರೈತರು ನಿಜಕ್ಕೂ ಮುಗ್ದರು. ಸಮಿತಿಯಲ್ಲಿರುವ ಕೆಲವರು ಜೆಡಿಎಸ್ ಜೊತೆಯೂ ಇರಬಹುದು. ಕುಮಾರಸ್ವಾಮಿ ಅವರೇ ಮುನ್ನಡೆಸಿದರೆ, ದೇವೇಗೌಡರು ಮಧ್ಯೆ ಪ್ರವೇಶಿಸಿದರೆ ಎಲ್ಲವೂ ಸರಿಯಾಗುತ್ತದೆ ಎಂಬ ನಂಬಿಕೆ ಅವರಿಗಿರುವಂತೆ ಕಾಣಿಸುತ್ತದೆ. ಆದರೆ ರಿಯಾಲಿಟಿ ಬೇರೆ ಇದೆ. ಸಮಿತಿಯನ್ನು ಗಟ್ಟಿಯಾಗಿ ಕಟ್ಟಬೇಕು. ಚಳವಳಿಯನ್ನು ಮುನ್ನಡೆಸುತ್ತೇವೆ ಎಂದು ಬಂದವರ ಕೈಗೆ ಹೋರಾಟವನ್ನು ಕೊಡಬಾರದು. ಸಮಿತಿ ಒಳಗೆ ಇರುವ ರೈತರು ಮೋಸಗಾರರಲ್ಲ. ಆದರೆ ಅವರು ಬಹಳ ಮುಗ್ಧರಷ್ಟೇ” ಎಂದು ತಿಳಿಸುತ್ತಾರೆ.
ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಬಿಡದಿ ಭೂಮಿಯು ವ್ಯಕ್ತಿಪ್ರತಿಷ್ಠೆಯ ವಿಷಯವಾಗಿರುವುದನ್ನು ಮತ್ತು ಅಲ್ಲಿ ರೈತರ ದನಿ ಗೌಣವಾಗುತ್ತಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್ ಗುರುತಿಸುತ್ತಾರೆ.
ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟವರ ದ್ವಿತೀಯ ಪತ್ನಿಗೂ ಪರಿಹಾರ ಪಡೆಯುವ ಹಕ್ಕಿದೆ: ಹೈಕೋರ್ಟ್
ಒಂದೂವರೆ ವರ್ಷದಿಂದಲೂ ಬಿಡದಿ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಅವರು, “ಹೋರಾಟವನ್ನು ದಮನಿಸಲು ರಾಜ್ಯ ಸರ್ಕಾರ ತನ್ನ ತೀವ್ರ ಪ್ರಯತ್ನದ ಜೊತೆಗೆ ಹಲವಾರು ರೀತಿಯ ತಂತ್ರ -ಕುತಂತ್ರವನ್ನು ಬಳಸುತ್ತಿದೆ. ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರೈತರೇ ಇಲ್ಲ, ಯಾರೂ ಕೃಷಿ ಮಾಡುತ್ತಿಲ್ಲ ಎಂಬ ಅಪಪ್ರಚಾರವು ಈಗಲೂ ನಡೆಯುತ್ತಿದೆ. ಇತ್ತೀಚಿನ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಪಂಥಾಹ್ವಾನಗಳು ಹಾಗೂ ವಾಕ್ಸಮರಗಳು ಬಿಡದಿ ರೈತರ ಹೋರಾಟವನ್ನು ಮುನ್ನೆಲೆಗೆ ತರುವ ಬದಲು ಗೌಣವಾಗಿಸುತ್ತಿದೆ. ಅತ್ಯಂತ ಫಲವತ್ತಾದ, ನೀರಾವರಿ ಸಮೃದ್ಧ, ಬಹು ವಾರ್ಷಿಕ ಬೆಳೆಗಳು ಇರುವ ತಮ್ಮ ಅಮೂಲ್ಯ ಕೃಷಿ ಭೂಮಿ ಉಳಿವಿಗಾಗಿ ನಡೆಸುತ್ತಿರುವ ರೈತರ ಹೋರಾಟದ ದನಿಯನ್ನು ಹತ್ತಿಕ್ಕಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಮುಂದುವರಿದು, “ಈ ಕೃಷಿ ಭೂಮಿ ನಂಬಿ ಬದುಕುತ್ತಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಕೃಷಿ ಕೂಲಿಕಾರರು, ಗೇಣಿ ರೈತರು ತಮ್ಮಲ್ಲಿ ಯಾವುದೇ ಒಡಕು ಇಲ್ಲದಂತೆ ಅತ್ಯಂತ ಒಗ್ಗಟ್ಟಿನ ಹೋರಾಟವನ್ನು ನಡೆಸುತ್ತಿದ್ದಾರೆ. ಒಟ್ಟಾರೆ ಬಹುಸಂಖ್ಯಾತ ರೈತರು ಶೇಕಡಾ 90 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದರೂ ರಾಜಕೀಯ ಮೇಲಾಟದಿಂದ ಈ ರೈತರ ವಿರೋಧವನ್ನು ಹಿನ್ನಲೆಗೆ ಸರಿಸಲಾಗುತ್ತಿದೆ. ಇದು ಜೆಡಿಎಸ್ -ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ರಾಜಕೀಯ ಪ್ರಶ್ನೆ ಅಲ್ಲ. ಈ ಮೂರು ಪಕ್ಷ ಕೂಡ ತಮ್ಮ ರಾಜಕೀಯ ಅಧಿಕಾರವನ್ನು ರಿಯಲ್ ಎಸ್ಟೇಟ್ ಭೂ ಕಬಳಿಕೆ ಹಾಗೂ ಕಾರ್ಪೊರೇಟ್ ಭೂ ಕಬಳಿಕೆಯ ದುರುದ್ದೇಶಕ್ಕಾಗಿ ಬಳಸಿರುವ ಇತಿಹಾಸ ಹೊಂದಿವೆ. ಚನ್ನರಾಯಪಟ್ಟಣ ರೈತರು ಹೇಗೆ ತಮ್ಮ ಹೋರಾಟ ಸಮಿತಿಯ ಪಕ್ಷಾತೀತ ಸ್ವರೂಪವನ್ನು ಕಾಪಾಡಿಕೊಂಡು ದೀರ್ಘಕಾಲದ ಚಳವಳಿಯಲ್ಲಿ ಭಾಗಿಯಾದರೋ ಅದೇ ರೀತಿ ಬೈರಮಂಗಲ -ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೂ ಹಿತರಕ್ಷಣಾ ಸಮಿತಿಯು ಕೂಡ ಪಕ್ಷಾತೀತ ಸ್ವರೂಪವನ್ನು ಕಾಪಾಡಿಕೊಳ್ಳಬೇಕು. ಪಕ್ಷಾತೀತ ಸ್ವರೂಪಕ್ಕೆ ಧಕ್ಕೆ ತರುವ ಯಾವುದೇ ರಾಜಕೀಯ ಪಕ್ಷದ ಹುನ್ನಾರಕ್ಕೆ ಬಲಿಯಾಗಬಾರದು” ಎಂದು ಕಿವಿಮಾತು ಹೇಳುತ್ತಾರೆ.
“ರಾಜಕೀಯ ಪಕ್ಷಗಳ ಯಾವುದೇ ರೀತಿಯ ಪ್ರಚೋದನೆಗೆ ಪ್ರತಿಕ್ರಿಯಿಸದೆ ಕೃಷಿ ಭೂಮಿ ರಕ್ಷಣೆಗೆ ಬೈರಮಂಗಲ -ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ಭೂ ಹಿತರಕ್ಷಣಾ ಸಮಿತಿ ಹಾಗೂ ರೈತರು ಸೂಕ್ತ ಎಚ್ಚರಿಕೆ ವಹಿಸಬೇಕು. ಪಕ್ಷಾತೀತ ಒಗ್ಗಟ್ಟು ಕಾಪಾಡಿಕೊಳ್ಳಬೇಕು. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ವಿವೇಕ ಹಾಗೂ ವಿವೇಚನೆ ಕಳೆದುಕೊಂಡು ಒಬ್ಬರ ಪರ ಅಥವಾ ವಿರೋಧ ಎಂಬಂತೆ ಭಾಗ ಆಗಬಾರದು. ಇಡೀ ರೈತರು ಭಾಗ ಆಗುವಂತೆ ಸಹಕರಿಸಬಾರದು” ಎಂದು ವಿನಂತಿಸಿದರು.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.



