ದಕ್ಷಿಣ ಅಮೆರಿಕದ ಪ್ರಮುಖ ರಾಷ್ಟ್ರವಾದ ವೆನೆಜುವೆಲಾದಲ್ಲಿ ಬುಧವಾರ ಸಂಭವಿಸಿದ ಪ್ರಬಲ ಅವಳಿ ಭೂಕಂಪಗಳಿಂದಾಗಿ ಮೃತಪಟ್ಟವರ ಸಂಖ್ಯೆ 164ಕ್ಕೆ ಏರಿಕೆಯಾಗಿದೆ. 971ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ನೂರಾರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರಿಗಾಗಿ ತೀವ್ರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಇತ್ತೀಚಿನ ವರ್ಷಗಳಲ್ಲೇ ಅತಿ ಭೀಕರವಾದ ಈ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ತತ್ತರಿಸಿರುವ ವೆನೆಜುವೆಲಾಕ್ಕೆ ಅಮೆರಿಕ, ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಭಾರೀ ನೆರವು ಹರಿದುಬರುತ್ತಿದೆ.
ಅಮೆರಿಕದ ಭೂಗರ್ಭ ಸಮೀಕ್ಷಾ ಕೇಂದ್ರದ (USGS) ಪ್ರಕಾರ, ಕೇವಲ ಒಂದು ನಿಮಿಷದ ಅಂತರದಲ್ಲಿ ಎರಡು ಪ್ರಬಲ ಭೂಕಂಪಗಳು ಅಪ್ಪಳಿಸಿವೆ. ಮೊದಲ ಭೂಕಂಪವು ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆ ದಾಖಲಿಸಿದ್ದು, ಕೆರಿಬಿಯನ್ ಕರಾವಳಿಯ ಮೊರಾನ್‌ನ ಪಶ್ಚಿಮಕ್ಕೆ 22 ಕಿ.ಮೀ ಆಳದಲ್ಲಿ ಕೇಂದ್ರಿಕೃತವಾಗಿತ್ತು. ಒಂದು ನಿಮಿಷದ ಬಳಿಕ 7.5 ತೀವ್ರತೆಯ ಮತ್ತೊಂದು ಭೀಕರ ಭೂಕಂಪವು 10 ಕಿ.ಮೀ ಆಳದಲ್ಲಿ ಮೊರಾನ್‌ನಿಂದ 16 ಕಿ.ಮೀ ನೈರುತ್ಯ ಭಾಗದಲ್ಲಿ ಸಂಭವಿಸಿದೆ. ಇದರ ತೀವ್ರತೆ ಬ್ರೆಜಿಲ್‌ನವರೆಗೂ ಅನುಭವಕ್ಕೆ ಬಂದಿದೆ.
‘ಲಾ ಗುವೈರಾ’ ಪ್ರಾಂತ್ಯವು ಭೂಕಂಪದಿಂದ ಅತಿ ಹೆಚ್ಚು ಹಾನಿಗೀಡಾಗಿದ್ದು, ಅಲ್ಲಿ ಡಜನ್‌ಗಟ್ಟಲೆ ಬೃಹತ್ ಕಟ್ಟಡಗಳು ಧರೆಗುರುಳಿವೆ. ಪರಿಸ್ಥಿತಿಯ ಗಂಭೀರತೆ ಅರಿತು ಈ ಪ್ರದೇಶವನ್ನು ‘ವಿಪತ್ತು ಪೀಡಿತ ವಲಯ’ ಎಂದು ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಘೋಷಿಸಿದ್ದಾರೆ. ಮೈಕೆಟಿಯಾ ವಿಮಾನ ನಿಲ್ದಾಣಕ್ಕೆ ತೀವ್ರ ಹಾನಿಯಾಗಿದ್ದು, ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅನಿಲ ಪೂರೈಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಆಂತರಿಕ ಸಚಿವ ಡಿಯೊಸ್ಡಾಡೊ ಕಬೆಲ್ಲೊ ತಿಳಿಸಿದ್ದಾರೆ. ನಿರಾಶ್ರಿತರಿಗಾಗಿ ಶಾಲೆಗಳನ್ನು ಪರಿಹಾರ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಬಿರುಸುಗೊಂಡಿದ್ದು, ಲಾ ಗುವೈರಾ ಪ್ರಾಂತ್ಯದಲ್ಲಿ ಧರೆಗುರುಳಿದ ಕಟ್ಟಡದ ಅವಶೇಷಗಳ ಅಡಿಯಿಂದ ಮೂವರು ಮುಗ್ಧ ಮಕ್ಕಳನ್ನು ಜೀವಂತವಾಗಿ
ರಕ್ಷಿಸಲಾಗಿದೆ. ಚಕಾವೊ ನಗರ ಪ್ರದೇಶದಲ್ಲಿ 18 ಜನರನ್ನು ರಕ್ಷಿಸಲಾಗಿದ್ದು, 500ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಹಗಲಿರುಳು ತೊಡಗಿದ್ದಾರೆ. ನಾಪತ್ತೆಯಾದವರ ಮಾಹಿತಿಗಾಗಿ ಮತ್ತು ಹಾನಿಯ ನಿಖರ ವಿವರ ನೀಡಲು ‘ವೆನ್‌ಆ್ಯಪ್’ (VenApp) ಬಳಸುವಂತೆ ಸರ್ಕಾರ ಮನವಿ ಮಾಡಿದೆ. ಸದ್ಯ ಅವಶೇಷಗಳಡಿ ಸಿಲುಕಿರುವವರ ಪ್ರಾಣ ರಕ್ಷಣೆಗೆ ಸರ್ಕಾರ ಮೊದಲ ಆದ್ಯತೆ ನೀಡಿದೆ.
ಈ ಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿರುವ ನಾಯಕರಿಗೆ ಡೆಲ್ಸಿ ರೊಡ್ರಿಗಸ್ ಕೃತಜ್ಞತೆ ಸಲ್ಲಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದಂತೆ ವೈದ್ಯಕೀಯ ಮತ್ತು ಮಾನವೀಯ ನೆರವು ರವಾನಿಸಲಾಗುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸಾವು-ನೋವಿಗೆ ಸಂತಾಪ ಸೂಚಿಸಿದ್ದು, ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಐರೋಪ್ಯ ಒಕ್ಕೂಟ ಉಪಗ್ರಹ ಕಣ್ಗಾವಲು ವ್ಯವಸ್ಥೆ ಮೂಲಕ ನೆರವಿಗೆ ಧಾವಿಸಿದೆ. ಮುಂದಿನ ಒಂದು ವಾರದವರೆಗೆ 3 ರಿಂದ 4 ತೀವ್ರತೆಯ ಪಶ್ಚಾತ್‌ಕಂಪನಗಳು ಸಂಭವಿಸುವ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.




