ಅಮೆರಿಕನ್ ಮಾಧ್ಯಮಗಳು ತೋರುವ ಈ ನಿರ್ಭೀತ ಎದೆಗಾರಿಕೆಗೆ ಮುಖ್ಯ ಕಾರಣವೇ ಅಲ್ಲಿನ ಸಂವಿಧಾನದ ‘ಫಸ್ಟ್ ಅಮೆಂಡ್ಮೆಂಟ್(ಮೊದಲ ತಿದ್ದುಪಡಿ). 1791ರ ಡಿಸೆಂಬರ್ 15ರಂದು ಜಾರಿಗೆ ಬಂದ ಈ ತಿದ್ದುಪಡಿಯು, ವಾಕ್ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ನಾಗರಿಕರ ಬಹುದೊಡ್ಡ ಮೂಲಭೂತ ಹಕ್ಕನ್ನಾಗಿ ಮಾಡಿದೆ. ‘ಪತ್ರಿಕಾ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಯಾವುದೇ ಕಾನೂನನ್ನು ಸರ್ಕಾರ ರೂಪಿಸುವಂತಿಲ್ಲ’ ಎಂದು ಈ ತಿದ್ದುಪಡಿ ಅತ್ಯಂತ ಸ್ಪಷ್ಟವಾಗಿ ಸಾರುತ್ತದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ನಡೆದ ಗುಂಡಿನ ದಾಳಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತು. ಪ್ರಜಾಪ್ರಭುತ್ವ ದೇಶದ ಪ್ರಭಾವಿ ನಾಯಕರೊಬ್ಬರ ಮೇಲಿನ ಈ ಭೀಕರ ದಾಳಿಯನ್ನು ಅಮೆರಿಕನ್ ಮಾಧ್ಯಮಗಳು ವರದಿ ಮಾಡಿದ ರೀತಿ, ಭದ್ರತಾ ಲೋಪಗಳ ಕುರಿತು ಅಲ್ಲಿನ ‘ಸೀಕ್ರೇಟ್ ಸರ್ವೀಸ್’ ಸಂಸ್ಥೆಯನ್ನು ನಿರ್ದಾಕ್ಷಿಣ್ಯವಾಗಿ ಪ್ರಶ್ನಿಸಿದ ಪರಿ, ನೈಜ ಪತ್ರಿಕಾ ಧರ್ಮಕ್ಕೆ ಸಾಕ್ಷಿಯಾಗಿತ್ತು. ಯಾವುದೇ ಮುಲಾಜಿಗೆ ಒಳಗಾಗದೆ, ಗುಂಡಿನ ದಾಳಿಯ ಸತ್ಯಾಸತ್ಯತೆಗಳನ್ನು ಕಟುವಾಗಿ ವಿಶ್ಲೇಷಿಸುವ ಮೂಲಕ ಅಲ್ಲಿನ ಮಾಧ್ಯಮಗಳು ತಮ್ಮ ವೃತ್ತಿಪರತೆಯನ್ನು ಮತ್ತೊಮ್ಮೆ ಜಗತ್ತಿಗೆ ಪರಿಚಯಿಸಿದವು.
ಈ ಶೂಟೌಟ್ ಘಟನೆಯು ಕೇವಲ ಒಂದು ಅಪರಾಧದ ವರದಿಯಷ್ಟೇ ಆಗಿರದೆ, ಬಿಕ್ಕಟ್ಟಿನ ಸಮಯದಲ್ಲಿ ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ನೈಜ ಪಾತ್ರವೇನು ಎಂಬುದನ್ನು ಮರುಪರಿಶೀಲಿಸುವಂತೆ ಮಾಡಿದೆ. ಇಂತಹ ಸೂಕ್ಷ್ಮ ಹಾಗೂ ಆಘಾತಕಾರಿ ಸಂದರ್ಭಗಳಲ್ಲಿ ಆಡಳಿತ ವ್ಯವಸ್ಥೆಯು ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸುವುದು ಸಹಜ. ಆದರೆ, ಅಮೆರಿಕದ ಪತ್ರಕರ್ತರು ತಮ್ಮ ತನಿಖಾ ವರದಿಗಳು ಹಾಗೂ ನಿರಂತರ ಪ್ರಶ್ನೆಗಳ ಮೂಲಕ ಅಧಿಕಾರಿಶಾಹಿಯ ಕುತ್ತಿಗೆಪಟ್ಟಿ ಹಿಡಿದು ಜವಾಬು ಕೇಳುತ್ತಾರೆ. ಇದು ಕೇವಲ ವೈಯಕ್ತಿಕ ಪತ್ರಕರ್ತರ ಧೈರ್ಯವಷ್ಟೇ ಅಲ್ಲ, ಬದಲಾಗಿ ಅಮೆರಿಕೆಯ ಸಾಂವಿಧಾನಿಕ ರಕ್ಷಣೆಯ ಫಲವಾಗಿದೆ.
ಸರ್ಕಾರದ ಯಾವುದೇ ಹಂಗಿಗೆ ಬೀಳದೆ, ಅಧಿಕಾರಸ್ಥರ ಕಣ್ಣಿಗೆ ಕಣ್ಣಿಟ್ಟು ಪ್ರಶ್ನಿಸುವ ಅಮೆರಿಕನ್ ಮಾಧ್ಯಮಗಳ ಈ ಎದೆಗಾರಿಕೆಯು ಕೇವಲ ಶೂಟೌಟ್ನಂತಹ ಬಿಕ್ಕಟ್ಟಿನ ಸಮಯದಲ್ಲಷ್ಟೇ ಅಲ್ಲ, ವಾರ್ಷಿಕ ಸಂಭ್ರಮಗಳಲ್ಲೂ ಎದ್ದು ಕಾಣುತ್ತಿದೆ. ಇದಕ್ಕೆ ಅತ್ಯುತ್ತಮ ನಿದರ್ಶನವೇ ಪ್ರತಿ ವರ್ಷ ನಡೆಯುವ ‘ಶ್ವೇತಭವನ ಪತ್ರಕರ್ತರ ಸಂಘದ ವಾರ್ಷಿಕ ಭೋಜನಕೂಟ’(White House Correspondents Dinner – WHCD). ಪ್ರಜಾಪ್ರಭುತ್ವದಲ್ಲಿ ಸರ್ಕಾರ ಮತ್ತು ಮಾಧ್ಯಮಗಳ ನಡುವೆ ಇರಬೇಕಾದ ಆರೋಗ್ಯಕರ ಅಂತರವನ್ನು ಈ ಭೋಜನಕೂಟವು ಬಹಳ ಸುಂದರವಾಗಿ ಬೆಸೆದು, ಪತ್ರಿಕಾ ಸ್ವಾತಂತ್ರ್ಯವನ್ನು ಆಚರಿಸುವ ವಿಶಿಷ್ಟ ವೇದಿಕೆಯಾಗಿ ರೂಪುಗೊಂಡಿದೆ.
1921ರಲ್ಲಿ ಆರಂಭವಾದ ಈ ಪ್ರತಿಷ್ಠಿತ ಸಂಪ್ರದಾಯವು ಸಂಪೂರ್ಣವಾಗಿ ಆರ್ಥಿಕ ಸ್ವಾವಲಂಬನೆಯಿಂದ ಕೂಡಿದೆ. ಈ ಅದ್ದೂರಿ ಭೋಜನಕೂಟದ ಖರ್ಚನ್ನು ಮಾಧ್ಯಮ ಸಂಸ್ಥೆಗಳು ಹಾಗೂ ಪತ್ರಕರ್ತರೇ ಟಿಕೆಟ್ ಖರೀದಿಸುವ ಮೂಲಕ ಭರಿಸುತ್ತಾರೆಯೇ ಹೊರತು, ಆಡಳಿತಾರೂಢ ಸರ್ಕಾರದಿಂದ ಒಂದು ಪೈಸೆ ಹಣವನ್ನು ಪಡೆಯುವುದಿಲ್ಲ. ಸರ್ಕಾರದ ಆತಿಥ್ಯದ ಅಥವಾ ಉಚಿತ ಸೌಲಭ್ಯಗಳ ಬಲಗೆ ಬೀಳದೆ, ಯಾವುದೇ ಮುಲಾಜಿಲ್ಲದೇ ಕಠಿಣ ಪ್ರಶ್ನೆಗಳನ್ನು ಕೇಳಲು ಪತ್ರಕರ್ತರಿಗೆ ಈ ಆರ್ಥಿಕ ಸ್ವಾವಲಂಬನೆಯೇ ಅಚಲವಾದ ಬೆನ್ನೆಲುಬಾಗಿದೆ.
‘ವಾಷಿಂಗ್ಟನ್ನ ನರ್ಡ್ ಪ್ರಾಮ್’ ಎಂದೇ ಕರೆಯಲ್ಪಡುವ ಈ ಭೋಜನಕೂಟವು ವಿಶ್ವದ ಇತರ ಯಾವುದೇ ದೇಶದ ಸರ್ಕಾರಿ ಕಾರ್ಯಕ್ರಮಗಳಿಗಿಂತ ಸಂಪೂರ್ಣ ಭಿನ್ನವಾಗಿರುತ್ತದೆ. ಇಲ್ಲಿಗೆ ವಿಶೇಷವಾಗಿ ಆಹ್ವಾನಿತರಾಗುವ ಅತಿಥಿ ವಿಡಂಬನಕಾರರೊಬ್ಬರು ವೇದಿಕೆಯ ಮೇಲೆ ನಿಂತು ಎದುರಿಗೆ ಕುಳಿತಿರುವ ಅಧ್ಯಕ್ಷರನ್ನು, ಸರ್ಕಾರದ ಪ್ರಮುಖ ನೀತಿಗಳನ್ನು ಮುಕ್ತವಾಗಿ ಟೀಕಿಸುತ್ತಾರೆ ದೇಶದ ಅತ್ಯಂತ ಬಲಶಾಲಿ ನಾಯಕನನ್ನು ವೇದಿಕೆಯಲ್ಲೇ ಕೂರಿಸಿಕೊಂಡು, ಆತನ ಅಥವಾ ಆಕೆಯ ಮುಖಕ್ಕೆ ಹೊಡೆದಂತೆ ತಪ್ಪುಗಳನ್ನು ಹಾಸ್ಯದ ಮೂಲಕ ಝಾಡಿಸುವ ಈ ಪದ್ಧತಿಯು ಸರ್ಕಾರದ ಮೇಲೆ ಮಾಧ್ಯಮಗಳಿಗಿರುವ ನೈತಿಕ ಮೇಲುಗೈಯನ್ನು ಎತ್ತಿ ತೋರಿಸುತ್ತದೆ.
ಇದನ್ನು ಓದಿದ್ದೀರಾ? ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ
ಶ್ವೇತಭವನದ ಭೋಜನಕೂಟದಲ್ಲಿನ ಮುಕ್ತ ವಾತಾವರಣವಿರಲಿ ಅಥವಾ ಇತ್ತೀಚಿನ ಗುಂಡಿನ ದಾಳಿಯಂತಹ ಬಿಕ್ಕಟ್ಟಿನ ಸಮಯವಿರಲಿ; ಅಮೆರಿಕನ್ ಮಾಧ್ಯಮಗಳು ತೋರುವ ಈ ನಿರ್ಭೀತ ಎದೆಗಾರಿಕೆಗೆ ಮುಖ್ಯ ಕಾರಣವೇ ಅಲ್ಲಿನ ಸಂವಿಧಾನದ ‘ಫಸ್ಟ್ ಅಮೆಂಡ್ಮೆಂಟ್(ಮೊದಲ ತಿದ್ದುಪಡಿ). 1791ರ ಡಿಸೆಂಬರ್ 15ರಂದು ಜಾರಿಗೆ ಬಂದ ಈ ತಿದ್ದುಪಡಿಯು, ವಾಕ್ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ನಾಗರಿಕರ ಬಹುದೊಡ್ಡ ಮೂಲಭೂತ ಹಕ್ಕನ್ನಾಗಿ ಮಾಡಿದೆ. ‘ಪತ್ರಿಕಾ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಯಾವುದೇ ಕಾನೂನನ್ನು ಸರ್ಕಾರ ರೂಪಿಸುವಂತಿಲ್ಲ’ ಎಂದು ಈ ತಿದ್ದುಪಡಿ ಅತ್ಯಂತ ಸ್ಪಷ್ಟವಾಗಿ ಸಾರುತ್ತದೆ.
ಈ ಫರ್ಸ್ಟ್ ಅಮೆಂಡ್ಮೆಂಟ್ ಪತ್ರಿಕಾ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವದ ಅತ್ಯುನ್ನತ ಎತ್ತರದಲ್ಲಿರಿಸಿದೆ. ಸರ್ಕಾರದ ತಪ್ಪುಗಳನ್ನು ನಿರ್ಬೀತವಾಗಿ ಟೀಕಿಸುವ, ರಹಸ್ಯ ದಾಖಲೆಗಳನ್ನು ಜನಹಿತಕ್ಕಾಗಿ ಬಹಿರಂಗಪಡಿಸುವ ಮತ್ತು ಮುಕ್ತ ಜನಾಭಿಪ್ರಾಯ ರೂಪಿಸುವ ಹಕ್ಕನ್ನು ಇದು ರಕ್ಷಿಸುತ್ತದೆ. ಅಮೆರಿಕದಲ್ಲಿ ಸರ್ಕಾರವು ಯಾವುದೇ ಸುದ್ದಿಯನ್ನು ಪ್ರಕಟವಾಗುವ ಮುನ್ನವೇ ತಡೆಯುವಂತಿಲ್ಲ. (Doctrine of No Prior Restraint). ಈ ಪ್ರಬಲ ಸಾಂವಿಧಾನಿಕ ಬಲದಿಂದಾಗಿಯೇ ಅಮೆರಿಕನ್ ಮಾಧ್ಯಮಗಳು ಸರ್ಕಾರದ ಯಾವುದೇ ಬೆದರಿಕೆಗೆ ಜಗ್ಗದೆ, ಅತ್ಯುನ್ನತ ಅಧ್ಯಕ್ಷರನ್ನೇ ಕಟಕಟೆಯಲ್ಲಿ ನಿಲ್ಲಿಸುವ ಅಗಾಧ ಸಾಮರ್ಥ್ಯ ಹೊಂದಿದೆ.
ಅಮೆರಿಕದ ಈ ಪತ್ರಿಕಾ ಧರ್ಮ, ಸ್ವಾಯತ್ತತೆ ಹಾಗೂ ವ್ಯವಸ್ಥೆಯನ್ನು ನೋಡಿದಾಗ, ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ‘ಗೋದಿ ಮೀಡಿಯಾ’ ಎಂಬ ಪದದ ಕರಾಳ ವಾಸ್ತವದ ಅರಿವಾಗುತ್ತದೆ. ‘ಗೋದಿ ಮೀಡಿಯಾ’ ಎಂದರೆ ಆಳುವ ಸರ್ಕಾರದ ಮಡಿಲಲ್ಲಿ ಕುಳಿತು, ಆಡಳಿತ ಪಕ್ಷದ ಅಘೋಷಿತ ಮುಖವಾಣಿಯಂತೆ ವರ್ತಿಸುವ ಮಾಧ್ಯಮಗಳು ಎಂಬುದು ಸಾರ್ವಜನಿಕ ಟೀಕೆಯಾಗಿದೆ. ಈ ಮಾಧ್ಯಮಗಳು ಜನಪರ ಕಾಳಜಿಯಿಂದ ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವ ಬದಲು, ಸದಾ ಅಧಿಕಾರಸ್ಥರನ್ನು ಸಮರ್ಥಿಸುವ ಮತ್ತು ವಿಪಕ್ಷಗಳನ್ನು ನಿರಂತರವಾಗಿ ದೂಷಿಸುವ ಕೆಲಸಕ್ಕೆ ಸೀಮಿತವಾಗಿವೆ.
ಭಾರತದ ‘ಗೋದಿ ಮೀಡಿಯಾ’ ಮತ್ತು ಅಮೆರಿಕನ್ ಮಾಧ್ಯಮಗಳ ನಡುವಿನ ಮೂಲಭೂತ ವ್ಯತ್ಯಾಸವೇ ‘ಅಧಿಕಾರಸ್ಥರನ್ನು ಪ್ರಶ್ನಿಸುವ ಎದೆಗಾರಿಕೆ’. ಅಮೆರಿಕದ ಶ್ವೇತಭವನದಲ್ಲಿ ನಡೆಯುವ ಪತ್ರಿಕಾಗೋಷ್ಠಿಗಳಲ್ಲಿ ಪತ್ರಕರ್ತರು ಅಧ್ಯಕ್ಷರನ್ನು ಅಥವಾ ಸರ್ಕಾರದ ವಕ್ತಾರರನ್ನು ತೀಕ್ಷ್ಣವಾದ ಪ್ರಶ್ನೆಗಳಿಂದಲೇ ಬೆವರಿಳಿಸುತ್ತಾರೆ. ಸರಿಯಾದ ಉತ್ತರ ಸಿಗದಿದ್ದರೆ, ಬಿಡದೆ ಮರುಪ್ರಶ್ನೆ ಹಾಕಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆದರೆ, ಭಾರತದ ‘ಗೋದಿ ಮೀಡಿಯಾ’ ವ್ಯವಸ್ಥೆಯಲ್ಲಿ ನಾಯಕರು ಮುಕ್ತ ಪತ್ರಿಕಾಗೋಷ್ಠಿಗಳನ್ನು ಎದುರಿಸುವುದೇ ಬಹುಪಾಲು ನಿಂತುಹೋಗಿದೆ. ಒಂದೊಮ್ಮೆ ಸಂದರ್ಶನಗಳು ನಡೆದರೂ, ಅವುಗಳಲ್ಲಿ ಮೊದಲೇ ಸಿದ್ಧಪಡಿಸಿದ, ನಾಯಕರಿಗೆ ಯಾವುದೇ ಮುಜುಗರ ತಾರದಂತಹ ಅತಿ ಮೃದುವಾದ ಪ್ರಶ್ನೆಗಳನ್ನಷ್ಟೇ ಕೇಳುವ ಭಟ್ಟಂಗಿ ಸಂಸ್ಕೃತಿ ನಮ್ಮಲ್ಲಿ ಬೇರೂರಿದೆ
ಸತ್ಯ ಮತ್ತು ಅಂಕಿಅಂಶಗಳನ್ನು ಬಳಸುವ ವಿಚಾರದಲ್ಲೂ ಈ ಎರಡು ಮಾಧ್ಯಮಗಳ ನಡುವೆ ಭಾರಿ ವ್ಯತ್ಯಾಸವಿದೆ. ಅಮೆರಿಕದ ಮಾಧ್ಯಮಗಳು ನಾಯಕರು ಹೇಳಿದ್ದನ್ನು ಕಣ್ಮುಚ್ಚಿ ನಂಬದೆ, ‘ಫ್ಯಾಕ್ಟ್ ಚೆಕ್’ (ಸತ್ಯಾಸತ್ಯತೆ ಪರಿಶೀಲನೆ) ಮಾಡಿ ಜನರಿಗೆ ವಾಸ್ತವವನ್ನು ತಿಳಿಸುತ್ತವೆ. ಆದರೆ ನಮ್ಮಲ್ಲಿ, ‘ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ’ದಲ್ಲಿ (2024ರ ಅವಧಿ) ಭಾರತ 180 ದೇಶಗಳ ಪೈಕಿ 159ನೇ ಸ್ಥಾನಕ್ಕೆ ಕುಸಿದಿರುವ ಆಘಾತಕಾರಿ ಸತ್ಯವನ್ನೇ ಮುಚ್ಚಿಡಲಾಗುತ್ತದೆ. ಸರ್ಕಾರದ ವೈಫಲ್ಯಗಳನ್ನು ತೋರಿಸುವ ನೈಜ ಅಂಕಿಅಂಶಗಳನ್ನು ಮರೆಮಾಚಿ, ಸರ್ಕಾರವೇ ನೀಡುವ ತಿರುಚಿದ ಮಾಹಿತಿಯನ್ನೇ ಅಪ್ಪಟ ಸತ್ಯ ಎಂಬಂತೆ ಬಿಂಬಿಸಿ ಜನರನ್ನು ದಿಕ್ಕುತಪ್ಪಿಸಲಾಗುತ್ತಿದೆ.
ಹತ್ಯಾಯತ್ನದಂತಹ ಬಿಕ್ಕಟ್ಟಿನ ಸಮಯವಿರಲಿ ಅಥವಾ ದೈನಂದಿನ ಆಡಳಿತವಿರಲಿ, ಅಮೆರಿಕದ ಮಾಧ್ಯಮಗಳು ಸಂವಿಧಾನ ನೀಡಿದ ಶಕ್ತಿಯಿಂದಾಗಿ ಪ್ರಜಾಪ್ರಭುತ್ವದ ನೈಜ ‘ಕಾವಲುನಾಯಿ’ಯಂತೆ (Watchdog) ಎಚ್ಚರದಿಂದ ಕೆಲಸ ಮಾಡುತ್ತಿವೆ. ಶ್ವೇತಭವನದ ಭೋಜನಕೂಟವು ಅಧಿಕಾರಸ್ಥರು ಮತ್ತು ಮಾಧ್ಯಮಗಳ ನಡುವೆ ಇರಬೇಕಾದ ಆರೋಗ್ಯಕರ ಅಂತರವನ್ನು ಜಗತ್ತಿಗೆ ತೋರಿಸಿಕೊಡುತ್ತದೆ. ನಮ್ಮ ದೇಶದ ಮಾಧ್ಯಮಗಳೂ ಈ ‘ಗೋದಿ’ ಸಂಸ್ಕೃತಿಯಿಂದ ಹೊರಬಂದು, ಪತ್ರಿಕಾ ಧರ್ಮವನ್ನು ಉಳಿಸಲು ಜನರ ಪರವಾದ ನಿರ್ಭೀತ ಧ್ವನಿಯಾಗಬೇಕಾದ ತುರ್ತು ಅಗತ್ಯವಿದೆ.





