ಕೇರಳದಲ್ಲಿ ಉನ್ನತ ಮಟ್ಟದ ಮಹಿಳಾ ನಾಯಕಿಯರು ಇದ್ದರೂ ಅವರು ಬರೀ ಪ್ರಾಸಂಗಿಕ ನಾಯಕರು. ಅವರ ನಾಯಕತ್ವಕ್ಕೆ ಬೆಲೆಯೂ ಇಲ್ಲ. ಪ್ರಸ್ತುತ ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆ ಕೇರಳದಲ್ಲಿ ಮಹಿಳೆಯರಿಗೆ ಸ್ಥಾನ ಯಾಕಿಲ್ಲ? ಇಷ್ಟು ಪ್ರಗತಿ ಹೊಂದಿರುವ ರಾಜ್ಯವೂ ಪರಂಪರಾಗತ ಅನ್ಯಾಯ ಮುಂದುವರಿಸುವುದು ಯಾಕೆ ಎಂಬ ಪ್ರಶ್ನೆಯನ್ನು ಹುಟ್ಟಿಸಿದೆ.
ದೇಶದ ಅತ್ಯಂತ ಪ್ರಗತಿಪರ ರಾಜ್ಯಗಳಲ್ಲಿ ಕೇರಳವೂ ಒಂದು. ಶಿಕ್ಷಣ, ಆರೋಗ್ಯ, ಲಿಂಗ ಸಮಾನತೆ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ (HDI) ಕೇರಳ ಉನ್ನತ ಸ್ಥಾನದಲ್ಲಿದೆ. ಅಧಿಕ ಸಾಕ್ಷರತೆ ಇರುವ ರಾಜ್ಯ, ಕಡಿಮೆ ಶಿಶು ಮರಣ ದರ, ದೇಶದ ಮೊದಲ ಕಡು ಬಡತನ ಮುಕ್ತ ರಾಜ್ಯ – ಹೀಗೆ ಹಲವು ಸಾಧನೆಗಳು ಕೇರಳದ್ದು. ಎಷ್ಟೇ ಆದರೂ ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯದ ವಿಚಾರಕ್ಕೆ ಬಂದಾಗ ಕೇರಳ ಹಿಂದುಳಿಯುತ್ತದೆ. ಈ ವಿಧಾನಸಭೆ ಚುನಾವಣೆಗೂ ಮುನ್ನ ಟಿಕೆಟ್ ಹಂಚಿಕೆಯು ಕೇರಳದಲ್ಲಿ ಎಡ ಪಕ್ಷಗಳು ಸೇರಿದಂತೆ ಎಲ್ಲ ಪಕ್ಷಗಳು ಮಹಿಳೆಯರನ್ನು ಹೊರಗಿಡುತ್ತಿದೆ ಎಂಬುದನ್ನು ಖಚಿತಪಡಿಸುತ್ತದೆ.
ಹಾಗೆಂದ ಮಾತ್ರಕ್ಕೆ ಕೇರಳದ ರಾಜಕೀಯ ಇತಿಹಾಸದಲ್ಲಿ ಎಂದಿಗೂ ಬಲಿಷ್ಠ ನಾಯಕಿಯರಿಗೆ ಕೊರತೆ ಇರಲಿಲ್ಲ. 1957ರಲ್ಲಿ ಕೇರಳದಲ್ಲಿ ಮೊದಲ ಕಮ್ಯುನಿಸ್ಟ್ ಆಡಳಿತದಲ್ಲಿ ಸಚಿವಾಲಯದ ಭಾಗವಾಗಿದ್ದ ಕೆ ಆರ್ ಗೌರಿ, 1967ರಲ್ಲಿ ಮತ್ತೆ ಸಂಪುಟ ದರ್ಜೆಯ ಹುದ್ದೆಗಳನ್ನು ಅಲಂಕರಿಸಿದರು. 1987ರ ಹೊತ್ತಿಗೆ ಗೌರಿ ಅಮ್ಮ ಮುಖ್ಯಮಂತ್ರಿ ಆಗಬಹುದು ಎಂಬ ಅಭಿಪ್ರಾಯಗಳೂ ಇದ್ದವು. ಆ ಸ್ಥಾನಕ್ಕೆ ಅರ್ಹರಾಗಿದ್ದವರು ಗೌರಿ ಅಮ್ಮ. ಆದರೆ ಸಿಎಂ ಸ್ಥಾನ ಮಾತ್ರ ಅವರಿಗೆ ದಕ್ಕಲಿಲ್ಲ. ಅಂದು ಎಡ ಪಕ್ಷದಲ್ಲಿದ್ದ ಪಿತೃಪ್ರಭುತ್ವವು ಗೌರಿ ಅಮ್ಮನಿಗೆ ಸಿಎಂ ಹುದ್ದೆ ಸಿಗದಂತೆ ಕಾವಲು ಕೂತಿತ್ತು.
ಇದನ್ನು ಓದಿದ್ದೀರಾ? ಹಿರಿಯ ನಾಯಕರ ನಿರ್ಲಕ್ಷ್ಯ; ಕೇರಳ ಚುನಾವಣೆಗೂ ಮುನ್ನ ಬಂಡಾಯ ಸಿಪಿಐಎಂಗೆ ದುಬಾರಿಯಾಗುವುದೇ?
ಅದಾದ ಬಳಿಕ ದಶಕಗಳ ನಂತರ ಕೇರಳ ರಾಜಕೀಯದಲ್ಲಿ ಕಾಣಿಸಿಕೊಂಡ ಪ್ರಬಲ ಮಹಿಳಾ ರಾಜಕಾರಣಿ ಕೆ ಕೆ ಶೈಲಜಾ. ರಾಜಕೀಯಕ್ಕೆ ಬರುವ ಮುನ್ನ ಶಿಕ್ಷಕರಾಗಿದ್ದ ಕಾರಣ ‘ಟೀಚರಮ್ಮ’ ಎಂದೇ ಪ್ರಸಿದ್ಧರಾದವರು ಶೈಲಜಾ. 2016ರಲ್ಲಿ ಪಿಣರಾಯಿ ವಿಜಯನ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಹಲವು ಬಿಕ್ಕಟ್ಟುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರು ಟೀಚರಮ್ಮ. ಈ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದರು. ಆದರೆ 2021ರ ವೇಳೆಗೆ ಸಿಪಿಐಎಂನ ವಯಸ್ಸಿನ ಮಿತಿ ನಿಯಮದಿಂದಾಗಿ ಸಚಿವ ಸಂಪುಟದಿಂದ ಶೈಲಜಾ ಅವರನ್ನು ಸಚಿವ ಸಂಪುಟದಿಂದ ಹೊರಗಿಡಲಾಯಿತು. ಆದರೆ ಸಿಎಂ ಪಿಣರಾಯಿಗೆ ಮಾತ್ರ ಈ ನಿಯಮದಿಂದ ವಿನಾಯಿತಿ ನೀಡಲಾಯಿತು. ಇದೀಗ ರಾಜಕೀಯ ಬಿಕ್ಕಟ್ಟು ಉಂಟಾಗುವುದನ್ನು ತಡೆಯಲು ಟೀಚರಮ್ಮಗೆ ಟಿಕೆಟ್ ನೀಡಲಾಗಿದೆ. ಪೆರಾವೂರಿನಲ್ಲಿ ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ಸನ್ನಿ ಜೋಸೆಫ್ ವಿರುದ್ಧ ಕಠಿಣ ಚುನಾವಣೆಯನ್ನು ಎದುರಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.
ರಾಜಕೀಯದಲ್ಲಿದೆಯೇ ಲಿಂಗ ಸಮಾನತೆ?
ಲಿಂಗ ಸಮಾನತೆ ಎಂಬುದು ಮಹಿಳೆಯರು ಸದ್ಯ ನಮ್ಮ ಹಕ್ಕು ಎಂದು ಕೇಳಿ ಪಡೆಯಬೇಕಾಗಿದೆ. ಇದು ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲ ಸಾಮಾಜಿಕ ಸ್ತರದಲ್ಲಿಯೂ ಮಹಿಳೆಯರಿಗಿರುವ ಸವಾಲು. ಕೇರಳದಲ್ಲಿ ಉನ್ನತ ಮಟ್ಟದ ಮಹಿಳಾ ನಾಯಕಿಯರು ಇದ್ದರೂ ಅವರು ಬರೀ ಪ್ರಾಸಂಗಿಕ ನಾಯಕರು. ಅವರ ನಾಯಕತ್ವಕ್ಕೆ ಬೆಲೆಯೂ ಇಲ್ಲ. ಪ್ರಸ್ತುತ ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆ ಕೇರಳದಲ್ಲಿ ಮಹಿಳೆಯರಿಗೆ ಸ್ಥಾನ ಯಾಕಿಲ್ಲ? ಇಷ್ಟು ಪ್ರಗತಿ ಹೊಂದಿರುವ ರಾಜ್ಯವೂ ಪರಂಪರಾಗತ ಅನ್ಯಾಯ ಮುಂದುವರಿಸುವುದು ಯಾಕೆ ಎಂಬ ಪ್ರಶ್ನೆಯನ್ನು ಹುಟ್ಟಿಸಿದೆ.
ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) 140 ಸ್ಥಾನಗಳಲ್ಲಿ ಬರೀ 15 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಿಪಿಐಎಂ 12, ಸಿಪಿಐ 5, ಕೆಸಿಎಂ 1 ಟಿಕೆಟ್ ಅನ್ನು ಮಹಿಳೆಯರಿಗೆ ನೀಡಿದೆ. ಈ ಹಿಂದಿಗಿಂತ ಕೊಂಚ ಸುಧಾರಣೆಯಾಗಿದ್ದರೂ ಸಮಾನತೆಯಿಂದ ಇನ್ನೂ ದೂರವಿದೆ. ಯುಡಿಎಫ್ ಇಲ್ಲಿಯವರೆಗೆ 12 ಮಹಿಳೆಯರಿಗೆ ಮಾತ್ರ ಟಿಕೆಟ್ ನೀಡಿದೆ. ಕಾಂಗ್ರೆಸ್ 9, ಐಯುಎಂಎಲ್ 2, ಆರ್‌ಎಂಪಿಐ ಒಬ್ಬರು ಮಹಿಳೆಯರನ್ನು ಕಣಕ್ಕಿಳಿಸಿದೆ. ಇದನ್ನು ಬಿಟ್ಟರೆ ಎನ್‌ಡಿಎ 18 ಮಹಿಳೆಯರಿಗೆ ಟಿಕೆಟ್ ನೀಡಿದೆ. ಆದರೆ ಈ ಮಹಿಳೆಯರು ಶಾಸಕಿಗಳಾಗುವುದು ಕೊಂಚ ದೂರದ ಮಾತು. ಹೆಚ್ಚಾಗಿ ಯಾವ ಕ್ಷೇತ್ರದಲ್ಲಿ ಯುಡಿಎಫ್, ಎಲ್‌ಡಿಎಫ್ ಅಭ್ಯರ್ಥಿಗಳನ್ನು ಮಣಿಸಲು ಕಷ್ಟವಿದೆಯೋ ಅದೇ ಕ್ಷೇತ್ರದಲ್ಲಿ ಮಹಿಳೆಯರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಕೇರಳದ ರಾಜಕೀಯ ಪರಂಪರೆಯನ್ನು ನಾವು ನೋಡಿದಾಗಲೂ ಮಹಿಳೆಯರ ಪ್ರಾತಿನಿಧ್ಯದ ಕೊರತೆ ಎದ್ದು ಕಾಣುತ್ತದೆ. 1957ರಿಂದ, ಕೇರಳ ವಿಧಾನಸಭೆಯಲ್ಲಿ ಮಹಿಳೆಯರ ಉಪಸ್ಥಿತಿ ಶೇಕಡ 10 ದಾಟಿರುವುದು ಅತಿ ವಿರಳ. ಪ್ರಸ್ತುತ ವಿಧಾನಸಭೆಯಲ್ಲಿರುವುವ ಮಹಿಳಾ ಪ್ರಾತಿನಿಧ್ಯ ಶೇಕಡ 8. ಇದು ಕೇರಳದ ಸಾಮಾಜಿಕ ಸೂಚಕಗಳಿಗೆ ವ್ಯತಿರಿಕ್ತವಾದುದ್ದು. ಕೇರಳದಲ್ಲಿ ಸಾಕ್ಷರತೆ, ಆರೋಗ್ಯ ಮತ್ತು ಜೀವಿತಾವಧಿಯಲ್ಲಿ ಮಹಿಳೆಯರು ಉತ್ತಮ ಸ್ಥಾನದಲ್ಲಿದ್ದಾರೆ. ಸಾಮಾಜಿಕ ಪ್ರಗತಿ ಇದ್ದರೂ ರಾಜಕೀಯ ಪ್ರಾತಿನಿಧ್ಯ ಮಾತ್ರ ಇಲ್ಲದಾಗಿದೆ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಕ್ರೈಸ್ತ ಸಮುದಾಯದ ಮತಗಳು ‘ಗೇಮ್ ಚೇಂಜರ್’ ಆಗಬಹುದೇ?
ಗೆಲುವಿನ ಸಾಧ್ಯತೆ ಇರುವವರಿಗೆ ಮಾತ್ರ ಮಣೆ ತಂತ್ರ
ಸಾಮಾನ್ಯವಾಗಿಯೇ ಯಾರು ಗೆಲ್ಲಲೂ ಸಾಧ್ಯ ಇದೆಯೋ ಅವರಿಗೆ ಮಣೆ ಹಾಕುವ ತಂತ್ರವನ್ನು ಕೇರಳದಲ್ಲಿ ಎಲ್‌ಡಿಎಫ್, ಯುಡಿಎಫ್ ಮಾಡುತ್ತಾ ಬಂದಿದೆ ಎಂಬ ವಾದವೂ ಇದೆ. ಆದರೆ ಮಹಿಳಾ ಸಂಘಟನೆಗಳು ಮತ್ತು ಇತರೆ ಗುಂಪುಗಳು ಈ ನಿಲುವನ್ನು ಪ್ರಶ್ನಿಸಿದೆ. ರಾಜಕೀಯ ಅನುಕೂಲದ ಹೆಸರಿನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದನ್ನು ಸಹಿಸಲಾಗದು ಎಂದು ಹೇಳಿದೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡದ ಯುಡಿಎಫ್, ಎಲ್‌ಡಿಎಫ್‌ನಲ್ಲಿ ಯಾವ ಸಮಾನತೆ ಇದೆ? ನಾವು ನೋಟಾಗೆ ಮತ ಹಾಕುವುದೇ ಒಳಿತಲ್ಲವೇ ಎಂಬ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಎತ್ತಲಾಗಿದೆ. ಇದೇ ಸಂದರ್ಭದಲ್ಲಿ ಏನೇ ಆದರೂ ಎನ್‌ಡಿಎಗೆ ಬೆಂಬಲ ನೀಡುವುದಿಲ್ಲ ಎಂಬ ಸ್ಪಷ್ಟ ನಿಲುವು ಎದ್ದು ಕಾಣುತ್ತಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತ್ರಿಶೂರ್ ಮೂಲದ ವಕೀಲೆ ಮತ್ತು ಸಮಾನ ಪ್ರಾತಿನಿಧ್ಯ ಚಳವಳಿಯ ಪ್ರಮುಖ ಧ್ವನಿಯಾಗಿರುವ ರೆಮಾ ಕೆ, “ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಅಂಗೀಕರಿಸಿ ಇನ್ನೂ ಜಾರಿಗೆ ತರದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಎಲ್‌ಡಿಎಫ್, ಯುಡಿಎಫ್ ಎರಡೂ ರಂಗಗಳು ಶೇಕಡ 33ರಷ್ಟು ಸ್ಥಾನಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಬಹುದಿತ್ತು. ಎಲ್‌ಡಿಎಫ್ ಷರತ್ತುಗಳಿಲ್ಲದೆ ಕಾನೂನು ಜಾರಿಗೆ ಒತ್ತಾಯಿಸಿತ್ತು. ಆ ಬೇಡಿಕೆ ಪ್ರಾಮಾಣಿಕವಾಗಿದ್ದರೆ, ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಶೇ.33ರಷ್ಟು ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಬಹುದಿತ್ತು. ಪಿತೃಪ್ರಭುತ್ವವನ್ನು ವಿರೋಧಿಸಲು ನಾವು ಧ್ವನಿ ಎತ್ತಬೇಕು” ಎಂದು ಕರೆ ನೀಡಿದ್ದಾರೆ.
ಹಲವು ರಾಜಕೀಯ ಪಕ್ಷಗಳು ಗೆಲುವಿನ ಇಂಗಿತಕ್ಕೆ ಜೋತು ಬಿದ್ದು ಪುರುಷ ನಾಯಕರುಗಳಿಗೆ ಬೆಂಬಲ ನೀಡುತ್ತಲೇ ಬಂದಿದೆ. ಈ ಮೂಲಕ ಮಹಿಳೆಯರಿಗೆ ತಮ್ಮ ಸ್ಥಾನ ಸ್ಥಾಪಿಸಲು ಅವಕಾಶವನ್ನೂ ನೀಡಲಾಗುತ್ತಿಲ್ಲ. ಗೆಲುವಿನ ಅಸ್ತ್ರವನ್ನು ಮಹಿಳೆಯರಿಗೆ ಸ್ಥಾನ ನಿರಾಕರಣೆಯನ್ನು ಸಮರ್ಥಿಸಲು ಬಳಸಲಾಗುತ್ತಿದೆ ಎಂದು ಸ್ಪಷ್ಟ. ಇನ್ನೊಂದೆಡೆ ಸಾಂಸ್ಕೃತಿಕ ಮತ್ತು ಸಾಂಸ್ಥಿಕ ಅಡೆತಡೆಗಳೂ ಇವೆ. ಇದನ್ನು ದಶಕಗಳ ಹಿಂದೆಯೇ ಗೌರಿ ಅಮ್ಮ ಹೇಳಿದ್ದಾರೆ. ಅವರು ಹೇಳುವಂತೆ, “ಸೈದ್ಧಾಂತಿಕ ಬದ್ಧತೆಗಳು ಯಾವುದೇ ಸ್ಥಾಪಿತ ಶ್ರೇಣಿಗಳನ್ನು ಕೆಡವಲು ಸಹಾಯ ಮಾಡುವುದಿಲ್ಲ” ಮಹಿಳೆಯರಲ್ಲಿ ಎಷ್ಟೇ ಸೈದ್ಧಾಂತಿಕ ಬದ್ಧತೆ ಇದ್ದರೂ ಅವರಿಗೆ ಸ್ಥಾನವಿಲ್ಲ.
ಮಹಿಳಾ ನಾಯಕಿಯರಿಗೆ ಅಧಿಕಾರ ಸೀಮಿತ
ಗಂಡು, ಹೆಣ್ಣು ಎಂಬ ಲಿಂಗದ ವಿಚಾರದಲ್ಲಿ ಐತಿಹಾಸಿಕವಾಗಿ ಪ್ರಗತಿಪರ ನಿಲುವನ್ನು ಪ್ರತಿಪಾದಿಸುತ್ತಾ ಬಂದಿರುವ ಎಡಪಂಥೀಯರಲ್ಲಿ, ಚುನಾವಣೆ ವಿಚಾರಕ್ಕೆ ಬಂದಾಗ ವಿರೋಧಾಭಾಸವು ಸ್ಪಷ್ಟವಾಗಿ ಗೋಚರಿಸುತ್ತದೆ. ಎಡರಂಗವು ಹಲವು ನಾಯಕಿಯರನ್ನು ಸೃಷ್ಟಿಸಿದೆ. ಸಾಮೂಹಿಕ ಸಂಘಟನೆಗಳ ಮೂಲಕ ಮಹಿಳಾ ಕಾರ್ಯಕರ್ತರ ಬಲವಾದ ನೆಲೆಯನ್ನು ಹೊಂದಿದೆ. ಆದರೆ ಶಾಸಕಾಂಗ ಪ್ರಾತಿನಿಧ್ಯ, ಅಧಿಕಾರದ ವಿಚಾರಕ್ಕೆ ಬಂದಾಗ ಕೊಂಚ ಹಿಂದುಳಿದಿದೆ. ಇದಕ್ಕೆ ಕೆ ಕೆ ಶೈಲಜಾ ಅವರ ವಿಚಾರ ಸ್ಪಷ್ಟ ಉದಾಹರಣೆ.

ಟೀಚರಮ್ಮ ಜನಪ್ರಿಯತೆ, ಆಡಳಿತಾತ್ಮಕ ಸಾಧನೆಯನ್ನು ವಿಪಕ್ಷಗಳೂ ಹಾಡಿ ಹೊಗಳಿದೆ. ಹಾಗಿದ್ದರೂ ಸಾಂಸ್ಥಿಕ ನಿಯಮಗಳು ಮತ್ತು ಆಂತರಿಕ ವಿಚಾರದಲ್ಲಿ ಶೈಲಜಾ ಇನ್ನಷ್ಟೂ ಉನ್ನತ ಸ್ಥಾನಕ್ಕೆ ಹೋಗುವುದನ್ನು ತಡೆಯಲಾಗಿದೆ. ಈ ಬಾರಿ ಸಾಂಪ್ರಾದಾಯಿಕವಾಗಿ ಯುಡಿಎಫ್ ಭದ್ರಕೋಟೆಯಾಗಿರುವ ಕಣ್ಣೂರು ಜಿಲ್ಲೆಯ ಪೆರವೂರ್ ವಿಧಾನಸಭೆ ಕ್ಷೇತ್ರದಲ್ಲಿ ಶೈಲಜಾ ಅವರನ್ನು ಕಣಕ್ಕಿಳಿಸಲಾಗಿದೆ. ಇದು ಟೀಚರಮ್ಮನ ರಾಜಕೀಯ ಜೀವನದ ಪರೀಕ್ಷೆಯೂ ಹೌದು. ಇದು ಶೈಲಜಾ ಅವರನ್ನು ರಾಜಕೀಯವಾಗಿ ಬದಿಗಿಡುವ ಉದ್ದೇಶಪೂರ್ವಕ ಪ್ರಯತ್ನ ಇದು ಎಂಬುದು ಕೆಲವರ ಆರೋಪ.
ಕಾಂಗ್ರೆಸ್‌ನಲ್ಲಿ ಕೊಂಚ ವಿಭಿನ್ನ. ಆದರೆ ಇದೇ ರೀತಿಯ ಚಿತ್ರಣವಿದೆ. ‘ಕೈ’ ಪಕ್ಷದಲ್ಲಿ ಮಹಿಳಾ ನಾಯಕಿಯರ ಗುಂಪೇನೋ ಇದೆ. ಆದರೆ ಅವರಲ್ಲಿ ಹಲವರು ಸ್ಥಳೀಯ ಮಟ್ಟದಲ್ಲಿ ಮಾತ್ರ ಸಕ್ರಿಯರು. ರಾಜ್ಯಮಟ್ಟದಲ್ಲಿ ಪ್ರಬಲ ಸ್ಥಾನದಲ್ಲಿ ಮಹಿಳೆಯರನ್ನು ಬಿಂಬಿಸಲು ಇಂದಿಗೂ ಕಾಂಗ್ರೆಸ್ ಹೆಣಗಾಡುತ್ತಿದೆ. ಅಭ್ಯರ್ಥಿ ಆಯ್ಕೆಯು ಸಾಮಾನ್ಯವಾಗಿಯೇ ಆಂತರಿಕ ಬಣ ತಿಕ್ಕಾಟವನ್ನು ಸರಿದೂಗಿಸುವಷ್ಟರಲ್ಲಿಯೇ ಮುಗಿದುಹೋಗುತ್ತದೆ. ಹಾಗಿರುವಾಗ ಮಹಿಳೆಯರಿಗೆ ಅವಕಾಶ ಸಿಗುವುದು ಅತಿ ವಿರಳ.
ಯುಡಿಎಫ್‌ನ ಮತ್ತೊಂದು ಪ್ರಮುಖ ಮಿತ್ರ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಕಥೆ ಇನ್ನೊಂದು ರೀತಿಯದ್ದು. ಐತಿಹಾಸಿಕವಾಗಿಯೇ ಐಯುಎಂಎಲ್ ಕಠಿಣ ಸಂಪ್ರದಾಯವಾದವನ್ನು ಹೊಂದಿರುವಂತದ್ದು. ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಬಿಡಿ ವಿಪಕ್ಷಗಳ ಮಹಿಳಾ ಅಭ್ಯರ್ಥಿಗಳ ಬಗ್ಗೆಯೂ ಕೆಟ್ಟದಾಗಿ ಮಾತನಾಡುವ ನಾಯಕರು ಐಯುಎಂಎಲ್‌ನಲ್ಲಿದ್ದಾರೆ. ಇತ್ತೀಚೆಗೆ ಸಿಪಿಐ(ಎಂ) ಶಾಸಕಿ ಯು. ಪ್ರತಿಭಾ ಬಗ್ಗೆ ಸ್ತ್ರೀದ್ವೇಷದ ಹೇಳಿಕೆಯನ್ನು ಎ ಇರ್ಷಾದ್ ನೀಡಿದ್ದು, ಸಾಮಾಜಿಕವಾಗಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಪಕ್ಷದಿಂದ ತೆಗೆದು ಹಾಕಲಾಗಿದೆ. IUML 2021ರಲ್ಲಿ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ, ಆದರೆ ಅಭ್ಯರ್ಥಿ ಸೋತಿದ್ದಾರೆ. ಈ ಬಾರಿ ಕೊಂಚ ಮುಂದುವರೆದು ಇಬ್ಬರು ಮಹಿಳೆಯರನ್ನು ಕಣಕ್ಕಿಳಿಸಿದೆ. ಕೊಂಚ ಬದಲಾವಣೆ ಕಂಡರೂ ಈ ಸಂಖ್ಯೆ ಅತಿ ಚಿಕ್ಕದ್ದು.
ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಇವೆಲ್ಲವುದರ ಬಗ್ಗೆ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. “ನಮ್ಮನ್ನು ತಿರಸ್ಕರಿಸಲಾಗಿದೆ, ಆದರೆ ನಾವು ಸೋತಿಲ್ಲ. ಕೇರಳದಲ್ಲಿ ಕಾಂಗ್ರೆಸ್ ಮಹಿಳೆಯರನ್ನು ಬೆಂಬಲಿಸಬೇಕು ಎಂದು ನಾನು ನನ್ನ ನಾಯಕ ರಾಹುಲ್ ಗಾಂಧಿಯನ್ನು ಗೌರವದಿಂದ ಒತ್ತಾಯಿಸುತ್ತೇನೆ. 92 ಟಿಕೆಟ್‌ಗಳಲ್ಲಿ, ಕೇವಲ 9 ಟಿಕೆಟ್‌ಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ, 16 ಟಿಕೆಟ್‌ಗಳಲ್ಲಿ ಕೇವಲ 1 ಟಿಕೆಟ್ ಮಹಿಳೆಯರಿಗೆ ನೀಡಲಾಗಿದೆ. ಮಹಿಳೆಯರು ಸಮರ್ಥರಾಗಿದ್ದರೂ ಟಿಕೆಟ್ ನೀಡದಿರುವುದು ತೀವ್ರ ನಿರಾಶಾದಾಯಕ” ಎಂದು ಬರೆದುಕೊಂಡಿದ್ದಾರೆ.
ಮಹಿಳೆಯರಿಗೆ ಶಾಸಕಾಂಗಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡುವ ಬೇಡಿಕೆಯು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಇವೆಲ್ಲವುದಕ್ಕೂ ಈ ಪುರುಷ ಪ್ರಧಾನ ಸಮಾಜ ಮುಂದಿಡುವ ನೆಪ ಸೋಲು ಕಾಣುವ ಕಳವಳ. ಪ್ರತಿ ಚುನಾವಣೆಯಲ್ಲಿಯೂ ಇದೇ ನಡೆಯುತ್ತಿರುವುದು. ಪ್ರಗತಿಪರ ರಾಜ್ಯ ಎಂಬ ಘನತೆಯನ್ನು ಕೇರಳ ರಾಜ್ಯ ಉಳಿಸಿಕೊಳ್ಳಬೇಕಾದರೆ ಮಹಿಳೆಯರಿಗೆ ರಾಜಕೀಯದಲ್ಲಿ ಸ್ಥಾನಮಾನ ನೀಡುವುದು ಅತ್ಯಗತ್ಯ. ಸಾಕ್ಷರತೆ ಬೆಳವಣಿಗೆ, ಸಾಮಾಜಿಕ ಅಭಿವೃದ್ಧಿಗೆ ಮಹಿಳೆಯರು ನೀಡುವ ಕೊಡುಗೆ ಬೇಕೆಂದ ಮೇಲೆ, ರಾಜಕೀಯದಲ್ಲಿ ಮಹಿಳೆಯರಿಗೆ ಯಾಕಿಲ್ಲ ಸ್ಥಾನ? ಪರಂಪರಾಗತ ಅನ್ಯಾಯ ಮುಂದುವರಿಸುವುದಕ್ಕೆ ತಡೆ ಯಾವಾಗ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



