ಎಲ್ಲಿಯವರೆಗೆ ಶಿಕ್ಷಣ ಒದಗಿಸುತ್ತಿರುವ ಅವಕಾಶಗಳಿಗೆ ತಕ್ಕಂತೆ ಉದ್ಯೋಗದ ಅವಕಾಶಗಳು ಒದಗುವುದಿಲ್ಲವೋ ಅಲ್ಲಿಯವರೆಗೆ ಭಾರತದ ಯುವ ಜನರ ಬವಣೆ ತಪ್ಪಿದ್ದಲ್ಲ. ಭಾರತದ ಆರ್ಥಿಕ ವ್ಯವಸ್ಥೆ ಸೂಕ್ತವಾದ ವ್ಯವಸ್ಥೆಯನ್ನು ಒದಗಿಸದೆ ಈ ಯುವ ಜನರ ಉದ್ಯೋಗದ ಆಸೆ ಆಕಾಂಕ್ಷೆಗಳು ಈಡೇರುವುದಿಲ್ಲ. ಹಾಗಾಗಿ ಸೂಕ್ತ ಆರ್ಥಿಕ ವ್ಯವಸ್ಥೆಯ ನಿರ್ಮಾಣಕ್ಕಾಗಿ ಕಾಯುವುದು ಇಂದಿನ ಯುವ ಜನರಿಗೆ ಅನಿವಾರ್ಯವಾಗಿದೆ.
ಒಂದು ಪರೀಕ್ಷೆಯ ಪೇಪರ್ ಲೀಕ್ ಆಯಿತೆಂದು ಶುರುವಾದ ಹೋರಾಟ ಕಾಕ್ರೋಚ್ ಜನತಾ ಪಾರ್ಟಿಯ ಹೋರಾಟವಾಗಿತ್ತು. ಈ ಹೋರಾಟದಲ್ಲಿ ಭಾರತದ ಯುವ ಜನರು ಸಾಕಷ್ಟು ಪ್ರಮಾಣದಲ್ಲಿ ತೊಡಗಿಕೊಂಡರು. ಇದು ಕೇವಲ ಒಂದು ಪರೀಕ್ಷೆಯ ಪೇಪರ್ ಲೀಕ್ ಸೃಷ್ಟಿಸಿದ ಸಮಸ್ಯೆಯನ್ನು ಮೀರಿದ ಸಮಸ್ಯೆಯನ್ನು ಸೂಚಿಸುತ್ತಿತ್ತು ಎನ್ನುವುದು ಈ ಹೋರಾಟದ ಒಳಗನ್ನು ಹೊಕ್ಕಿ ನೋಡಿದಾಗ ತಿಳಿಯುತ್ತದೆ. ಒಂದೆಡೆ ದಿನೇ ದಿನೇ ಕಡಿಮೆಯಾಗುತ್ತಿರುವ ಉದ್ಯೋಗದ ಅವಕಾಶಗಳು ಇದ್ದರೆ, ಇನ್ನೊಂದೆಡೆ ಅವರ ಭವಿಷ್ಯವನ್ನು ಕೆಲವೇ ಕೆಲವು ಸೀಮಿತ ಸ್ಪರ್ಧಾತ್ಮಕ ಪರೀಕ್ಷೆಗಳು ನಿರ್ಧರಿಸುವ ಸ್ಥಿತಿ ಇದೆ. ಇಂತಹ ಉಸಿರುಗಟ್ಟಿಸುವ ಪರಿಸ್ಥಿತಿಯಿಂದ ರೋಸಿ ಹೋದ ಯುವ ಜನರು ಬೀದಿಗಿಳಿದು ತಮ್ಮ ಅಸಮಾಧಾನವನ್ನು ಹೊರ ಚೆಲ್ಲುತ್ತಿದ್ದರು.
ಹಿಂದಿನ ತಲೆಮಾರಿಗೆ ಹೋಲಿಸಿದರೆ, ಇಂದಿನ ಯುವ ಜನರು ಹೆಚ್ಚು ಓದಿದವರಾಗಿದ್ದಾರೆ. ವಿವಿಧ ಪಕ್ಷಗಳ ಸರ್ಕಾರಗಳು ಕೌಶಲ್ಯಾಭಿವೃದ್ಧಿ, ಶಿಷ್ಯವೃತ್ತಿ ಮತ್ತು ಉದ್ಯೋಗಾಧಾರಿತ ತರಬೇತಿಯ ಪ್ರಮಾಣಗಳನ್ನು ಗಣನೀಯವಾಗಿ ಹೆಚ್ಚಿಸಿವೆ. ಆದರೆ ಈ ಬಂಡವಾಳ ಹೂಡಿಕೆ ಲಭ್ಯವಿರುವ ಉದ್ಯೋಗದ ಮಾರುಕಟ್ಟೆಯೊಂದಿಗೆ ಸಂಘರ್ಷಕ್ಕೆ ಅವಕಾಶ ಮಾಡಿದೆ. ಏಕೆಂದರೆ ಈ ಎಲ್ಲಾ ತರಬೇತಿಗಳ ಮೂಲಕ ಸಿದ್ಧರಾಗುವ ದುಡಿಯುವ ಕೈಗಳಿಗೆ ಸೂಕ್ತ ಉದ್ಯೋಗ ಒದಗಿಸಲು ಉದ್ಯೋಗದ ಮಾರುಕಟ್ಟೆ ವಿಫಲವಾಗಿದೆ. ಪ್ರಸ್ತುತ 15-29 ವಯಸ್ಸಿನ ಗುಂಪಿನಲ್ಲಿ ಸುಮಾರು 307 ಮಿಲಿಯನ್ ಯುವ ಜನರಿದ್ದಾರೆ. ಇವರ ಪೈಕಿ 141 ಮಿಲಿಯನ್ ಯುವ ಜನರು ಕಾರ್ಮಿಕ ಕ್ಷೇತ್ರದಲ್ಲಿದ್ದರೆ, 127 ಮಿಲಿಯನ್ ಯುವ ಜನರು ನಿಯಮಿತ ಉದ್ಯೋಗ ಕ್ಷೇತ್ರದಲ್ಲಿದ್ದಾರೆ. ಹೀಗೆ ಉದ್ಯೋಗದಲ್ಲಿರುವವರಲ್ಲಿ ಕೇವಲ 15 ಮಿಲಿಯನ್ ಯುವ ಜನರು ಮಾತ್ರ ನಿಯಮಿತ ಸಂಬಳವಿರುವ ಉದ್ಯೋಗದಲ್ಲಿರುತ್ತಾರೆ. ಇವರಿಗೆ ನಿಗದಿತವಾದ ಸಂಬಳ ಮತ್ತು ಸಾಮಾಜಿಕ ಸುರಕ್ಷತೆ ಲಭ್ಯವಿರುತ್ತದೆ. ಈ ಉದ್ಯೋಗಗಳು ಆರೋಗ್ಯಕರ ವಾತಾವರಣ, ಸಾಮಾಜಿಕ ಸುರಕ್ಷತೆ, ಉತ್ತಮ ಉದ್ಯೋಗದ ಸನ್ನಿವೇಶ ಹಾಗೂ ಉದ್ಯೋಗದ ಪ್ರಗತಿಗೆ ಅವಕಾಶವನ್ನು ನೀಡುತ್ತವೆ. ಈ ಕೊರತೆಯು ಎರಡು ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದುರದೃಷ್ಟವಶಾತ್, ಇವುಗಳನ್ನು ಪ್ರತ್ಯೇಕ ಸಮಸ್ಯೆಗಳೆಂದು ಎಲ್ಲರೂ ತಿಳಿದಿದ್ದಾರೆ.
ಇದನ್ನು ಓದಿದ್ದೀರಾ?: ಕೇಸು ಹಾಕಿ ಬೇಟೆಯಾಡಿದರೆ ಮತ್ತೆ ಬೀದಿಗಿಳಿಯುತ್ತೇವೆ: ಕಾಕ್ರೋಚ್ ಪಾರ್ಟಿ ಎಚ್ಚರಿಕೆ
15-29ರ ವಯಸ್ಸಿನ ಗುಂಪಿನಲ್ಲಿರುವ ಬಹುತೇಕ ಯುವ ಜನರು ಬಹಳ ಬೇಗ ಶಿಕ್ಷಣವನ್ನು ಮೊಟಕುಗೊಳಿಸುತ್ತಾರೆ. ಇವರಲ್ಲಿ ಶೇ. 39ರಷ್ಟು ಜನರು ಹತ್ತನೇ ತರಗತಿಯ ನಂತರದ ಶಿಕ್ಷಣವನ್ನು ಪಡೆಯುವುದಿಲ್ಲ. ಇಂತಹವರಲ್ಲಿ ಬಹುತೇಕರು ದುಡಿಮೆಗೆ ಇಳಿಯುತ್ತಾರೆ. ಹೀಗೆ ಅಲ್ಪ ಪ್ರಮಾಣದಲ್ಲಿ ಶಿಕ್ಷಣ ಪಡೆದಿರುವವರ ಗುಂಪಿನಲ್ಲಿ ನಿರುದ್ಯೋಗದ ಪ್ರಮಾಣ ಶೇ. 5 ಮಾತ್ರವೇ ಇರುತ್ತದೆ. ಆದರೆ ಇವರಲ್ಲಿ ಬಹುತೇಕರು ಅನೌಪಚಾರಿಕ ಉದ್ಯೋಗ ಕ್ಷೇತ್ರದಲ್ಲಿರುತ್ತಾರೆ. ಇವರಲ್ಲಿ ಬಹುತೇಕರು ಕಡಿಮೆ ಕೂಲಿ ಒದಗಿಸುವ, ಸ್ವ ಉದ್ಯೋಗದಲ್ಲಿರುವ, ಇಲ್ಲವೇ ಕುಟುಂಬವು ನಡೆಸುವ ಉದ್ಯೋಗದಲ್ಲಿ ಕೂಲಿರಹಿತವಾದ ದುಡಿಮೆಯಲ್ಲಿರುತ್ತಾರೆ.

ಕೇವಲ ಎಂಟನೇ ತರಗತಿಯವರೆಗೆ ಓದಿರುವ ಕಾರ್ಮಿಕರು ಸರಾಸರಿಯಾಗಿ 12,300 ರೂ.ಗಳನ್ನು ಗಳಿಸುತ್ತಾರೆ. ಹಾಗೆ ಹತ್ತನೇ ತರಗತಿಯವರೆಗೆ ಶಿಕ್ಷಣವನ್ನು ಮುಗಿಸಿರುವವರು ಮೇಲಿನವರಿಗಿಂತ ಒಂದು ಸಾವಿರ ಹೆಚ್ಚಿನ ಆದಾಯವನ್ನು ಪಡೆಯುತ್ತಾರೆ. ಬಹುತೇಕ ಹೆಣ್ಣು ಮಕ್ಕಳು ಇಲ್ಲಿಯವರೆಗೆ ಬಂದು ನಿಲ್ಲುತ್ತಾರೆ. ಇಲ್ಲಿಂದ ಮುಂದಕ್ಕೆ ಹೆಣ್ಣು ಮಕ್ಕಳು ಉದ್ಯೋಗದಿಂದ ಹಿಂದೆ ಸರಿಯುತ್ತಾರೆ; ಮದುವೆಯಾಗುತ್ತಾರೆ ಮತ್ತು ಯಾವುದೇ ಹಣಕಾಸು ಪ್ರತಿಫಲವಿಲ್ಲದ ಕೌಟುಂಬಿಕ ದುಡಿಮೆಯಲ್ಲಿ ತೊಡಗಿಕೊಳ್ಳುತ್ತಾರೆ. ಪ್ರತಿ ಐವರು ಹೆಣ್ಣು ಮಕ್ಕಳಲ್ಲಿ ಇಬ್ಬರು ಯಾವುದೇ ದುಡಿಮೆಯಲ್ಲಿ ತೊಡಗುವುದಿಲ್ಲ. ಇಂತಹ ಪ್ರಮಾಣ ಪುರುಷರ ಗುಂಪಿನಲ್ಲಿ ಬಹುತೇಕ ಕಡಿಮೆಯಿರುತ್ತಾರೆ.
ಇನ್ನೊಂದಡೆ ಪದವಿ ಪಡೆದವರಿದ್ದಾರೆ. ಉತ್ತಮ ಶಿಕ್ಷಣವನ್ನು ಪಡೆದಿರುವ ಪದವೀಧರರು ದೈಹಿಕ ಶ್ರಮವಿಲ್ಲದ ಉದ್ಯೋಗಗಳಿಗೆ ಆದ್ಯತೆ ನೀಡಿ ಅನೇಕ ಉದ್ಯೋಗಗಳಿಂದ ದೂರವಿರುತ್ತಾರೆ ಎನ್ನುವ ಸಾಮಾನ್ಯ ಅಭಿಪ್ರಾಯವಿದೆ. ಆದರೆ ಲಭ್ಯವಿರುವ ದತ್ತಾಂಶ ನೀಡುವ ಚಿತ್ರಣವೇ ಬೇರೆ ಇರುತ್ತದೆ. ಉಳಿದೆಲ್ಲಾ ಗುಂಪುಗಳಿಗೆ ಹೋಲಿಸಿದರೆ ಪದವೀಧರರು ಅತೀ ಹೆಚ್ಚಿನ ನಿರುದ್ಯೋಗವನ್ನು ಹೊಂದಿರುತ್ತಾರೆ. ಪದವೀಧರರಲ್ಲಿ ಸುಮಾರು ಶೇ. 22.7 ಪ್ರಮಾಣದ ನಿರುದ್ಯೋಗವಿದೆ. ಇದು ಉಳಿದ ಗುಂಪುಗಳಿಗಿಂತ ಸುಮಾರು ಮೂರುಪಟ್ಟು ಹೆಚ್ಚಿರುತ್ತದೆ. ಭಾರತದಲ್ಲಿರುವ ಯುವ ಜನರಲ್ಲಿ ಶೇ. 17ರಷ್ಟು ಪದವೀಧರರಿದ್ದಾರೆ. ಆದರೆ ಒಟ್ಟಾರೆ ನಿರುದ್ಯೋಗಗಳ ಪ್ರಮಾಣದಲ್ಲಿ ಪದವೀಧರರ ಪ್ರಮಾಣ ಶೇ. 56 ಇರುತ್ತದೆ. ಕೆಲವು ನಿರ್ದಿಷ್ಟ ಉದ್ಯೋಗಗಳಿಗೆ ಹೆಚ್ಚಿನ ಆಸಕ್ತಿಯಿರುತ್ತದೆ ಎನ್ನುವುದು ಸಹಜವಾದರೂ, ಶ್ರಮವಿಲ್ಲದ ಉದ್ಯೋಗಗಳಿಗೆ ಪದವೀಧರರು ಕಾಯುತ್ತಾರೆ ಎನ್ನುವ ಸಂಗತಿ ಸತ್ಯವಲ್ಲ. ಹಾಲಿ ಉದ್ಯೋಗದಲ್ಲಿರುವ ಯುವ ಜನತೆಯಲ್ಲಿ ಶೇ. 22 ಮಾತ್ರ ಮಾಸಿಕವಾಗಿ 15,000 ರೂ.ಗಳನ್ನು ದುಡಿಯುತ್ತಾರೆ. ಶೇ. 55ರಷ್ಟು ಯುವ ಜನರು ಮಾಸಿಕ 9,000 ರೂ.ಗಳನ್ನು ಗಳಿಸುತ್ತಾರೆ. ಪದವೀಧರರಲ್ಲಿ ಶೇ. 17ರಷ್ಟು ಯುವ ಜನರು ಮಾತ್ರ ಅವರ ಪದವಿಗಳಿಗೆ ತಕ್ಕನಾದ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಭಾರತದಲ್ಲಿ ಲಭ್ಯವಿರುವ ಉದ್ಯೋಗಗಳ ಪ್ರಮಾಣ 15 ಮಿಲಿಯನ್ ಆಗಿದ್ದರೆ, ಈ ಉದ್ಯೋಗಗಳನ್ನು ಪಡೆಯಲು ಕಾಯುತ್ತಿರುವವರ ಸಂಖ್ಯೆ 300 ಮಿಲಿಯನ್ ಆಗಿದೆ!
ಸರ್ಕಾರಿ ಉದ್ಯೋಗಗಳ ಆಕರ್ಷಣೆ
ಹೀಗಾಗಿ, ಸರ್ಕಾರಿ ಉದ್ಯೋಗಗಳಿಗಾಗಿ ನಡೆಯುವ ಪ್ರವೇಶ ಪರೀಕ್ಷೆಗಳು ಹೆಚ್ಚಿನವರನ್ನು ಆಕರ್ಷಿಸುತ್ತವೆ. ಮೊದಲ ತಲೆಮಾರಿನ ಪದವೀಧರರಿಗೆ ಉತ್ತಮ ಸಂಪನ್ಮೂಲಗಳನ್ನು ಒದಗಿಸಿಕೊಳ್ಳುವ ಖಚಿತ ಮಾರ್ಗ ಸರ್ಕಾರಿ ಉದ್ಯೋಗವಾಗಿರುತ್ತದೆ. ಇಂತಹ ಮೊದಲ ತಲೆಮಾರಿನವರಿಗೆ ಸೀಮಿತವಾದ ಕೌಟುಂಬಿಕ ಸಂಪನ್ಮೂಲಗಳು (ಉನ್ನತವಾದ ಕೌಶಲ್ಯ / ಜನ ಸಂಪರ್ಕ / ವಿವಿಧ ಉನ್ನತ ಹುದ್ದೆಗಳಲ್ಲಿರುವವರ ಒಡನಾಟ ಇತ್ಯಾದಿ) ಲಭ್ಯವಿರುತ್ತವೆ. ಇಂತಹ ಸೌಲಭ್ಯಗಳಿರುವ ಕುಟುಂಬಗಳಿಂದ ಬರುವವರಿಗೆ ಸ್ವಲ್ಪ ಕಡಿಮೆ ಬುದ್ಧಿಶಕ್ತಿಯಿದ್ದರೂ ಉತ್ತಮವಾದ ಉದ್ಯೋಗದ ಅವಕಾಶಗಳು ಲಭಿಸುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ಅಭ್ಯರ್ಥಿಯ ಬುದ್ಧಿಶಕ್ತಿಯನ್ನು ನಿಖರವಾಗಿ ನಿರ್ಧರಿಸುವ ವಾಗ್ಧಾನ ನೀಡುತ್ತವೆ. 2024ರಲ್ಲಿ ಲಭ್ಯವಿದ್ದ 17,700 ಸರ್ಕಾರಿ ಉದ್ಯೋಗಗಳಿಗೆ ಸುಮಾರು 30 ಲಕ್ಷ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಂದರೆ ಲಭ್ಯವಿದ್ದ ಒಂದು ಸರ್ಕಾರಿ ಉದ್ಯೋಗಕ್ಕೆ ಸರಾಸರಿ 170 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು!

ಹೀಗೆ ಕಲಿಕೆಯಿಂದ ಉದ್ಯೋಗಕ್ಕೆ ದಾಟುವ ಮಾರ್ಗವೇ ಕಡಿದು ಹೋಗಿರುವುದು ಇಂದಿನ ಅಶಾಂತ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ. ನಿರೀಕ್ಷಿತ ಸಂಬಳ ಮತ್ತು ವಾಸ್ತವ ಸ್ಥಿತಿಗತಿಗಳ ನಡುವೆ ಅಗಾಧವಾದ ಅಂತರಗಳಿರುವುದನ್ನು ʻಫೀಲ್ಡ್ಜಾಬ್ ನೆಟ್ವರ್ಕ್ʼ ಅನ್ನುವ ಸಂಸ್ಥೆ ತನ್ನ ಅಧ್ಯಯನದಲ್ಲಿ ಖಚಿತಪಡಿಸಿದೆ. ಯುವ ಜನರು ತಮ್ಮ ನಿರೀಕ್ಷೆಗಳನ್ನು ಸುಸ್ಪಷ್ಟವಾಗಿ ಗುರುತಿಸುತ್ತಾರೆ. ಆದರೆ ಆ ಗುರಿಯನ್ನು ತಲುಪಲು ಯಾವ ಕೋರ್ಸ್ ಓದಬೇಕೆಂಬ ಸ್ಪಷ್ಟತೆಯನ್ನು ಪಡೆಯುವಲ್ಲಿ ಪೂರ್ಣವಾಗಿ ಸೋಲುತ್ತಾರೆ. ಸಾಮಾನ್ಯವಾಗಿ ಪದವೀಧರರು ಮಾಸಿಕ 20,000 – 25,000 ರೂ.ಗಳ ಉದ್ಯೋಗವನ್ನು ನಿರೀಕ್ಷೆ ಮಾಡುವ ಸಂದರ್ಭದಲ್ಲಿ ಲಭ್ಯವಿರುವ ಉದ್ಯೋಗಗಳು ನೀಡುವ ಸಂಬಳ ಮಾಸಿಕ 10,000 – 15,000 ರೂ.ಗಳಾಗಿರುತ್ತವೆ. ಹಾಗೆ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ಮಾಡುವಂತಹ ಕೆಲಸಗಳು ತಿಂಗಳಿಗೆ 30,000 ರಿಂದ 40,000 ರೂಪಾಯಿ ಸಂಬಳ ನೀಡಿದರೆ ಮಾತ್ರ ಅನುಕೂಲಕರವಾಗಿರುತ್ತವೆ. ದುಡಿಯುವ ಮಾರ್ಗದ ಕುರಿತು ಸ್ವಷ್ಟತೆಯಿರದ ಕಾರಣ, ಬಹುತೇಕರು ಸಾಮಾನ್ಯ ಪದವಿ ಕೋರ್ಸುಗಳಿಗೆ ಸೇರಿ, ಪರೀಕ್ಷೆಗಳ ಸರತಿಗೆ ಬಂದು ನಿಲ್ಲುತ್ತಾರೆ.
ಇದನ್ನು ಓದಿದ್ದೀರಾ?: ವರಸೆ ಬದಲಿಸಿದ ಸರ್ಕಾರ; FIR ಹಿಂಪಡೆಯುವ ಭರವಸೆ ಎಲ್ಲರಿಗೂ ಅಲ್ಲ ಎಂದ ಕೇಂದ್ರ
ಇಂತಹ ಸಮಸ್ಯೆಗಳು ಶೈಕ್ಷಣಿಕ ವ್ಯವಸ್ಥೆಯಲ್ಲಿನ ಗಂಭೀರ ದೋಷಗಳನ್ನು ಸೂಚಿಸುತ್ತವೆ. ಭಾರತದ ಆರ್ಥಿಕ ವ್ಯವಸ್ಥೆ ಉತ್ತಮವಾದ ಹಣ ಗಳಿಕೆಯನ್ನು ನೀಡುತ್ತಾದರೂ, ಉದ್ಯೋಗದ ಸೃಷ್ಟಿಯಲ್ಲಿ ಉತ್ತಮವಾದ ಪ್ರಗತಿಯನ್ನು ಸಾಧಿಸುವುದಿಲ್ಲ. 2010ರ ದಶಕಗಳಲ್ಲಿ ಅರ್ಥ ವ್ಯವಸ್ಥೆ ಉತ್ತಮವಾದ ಪ್ರಗತಿಯನ್ನು ತೋರಿಸಿದರೂ, ಉದ್ಯೋಗಗಳ ಸೃಷ್ಟಿಯಲ್ಲಿ ಪ್ರಗತಿ ಇರಲಿಲ್ಲ. 2019ರ ನಂತರದ ವರ್ಷಗಳಲ್ಲಿ ಕಡಿಮೆ ಕೂಲಿ ದೊರೆಯುವ ಕೃಷಿಯಾಧಾರಿತ ಕೆಲಸಗಳಿಗೆ ಜನ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಂಡಿರುತ್ತಾರೆ. ಈ ಅವಧಿಯಲ್ಲಿ ಉತ್ತಮವಾದ ಸಂಬಳ ನೀಡುವ ಉದ್ಯೋಗಗಳು ಕಡಿಮೆ ಪ್ರಮಾಣದಲ್ಲಿ ಸೃಷ್ಟಿಯಾಗಿರುತ್ತವೆ. ಬಹುತೇಕ ಬಂಡವಾಳ ಹೂಡಿಕೆಯು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆಯಾಗಿದೆ. ಜೊತೆಗೆ ಆಟೋಮೇಷನ್ ಪ್ರಮಾಣ ಹೆಚ್ಚಿರುವ ಕಾರಣ, ಸೃಷ್ಟಿಯಾಗುವ ಉದ್ಯೋಗಗಳ ಪ್ರಮಾಣ ಗಣನೀಯವಾಗಿ ಕಡಿಮೆ ಇರುತ್ತವೆ.
ಸರ್ಕಾರ ಸಾಕಷ್ಟು ಬಂಡವಾಳವನ್ನು ಹೂಡಿದೆಯಾದರೂ, ಇದರ ಬಹುಪಾಲು ಹೂಡಿಕೆ ಆಗಿರುವುದು ಮೂಲಭೂತಸೌಕರ್ಯಗಳ ಅಭಿವೃದ್ಧಿ ಕ್ಷೇತ್ರದಲ್ಲಿ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದ ಬಂಡವಾಳ ಹೂಡಿಕೆ ನಗಣ್ಯ ಪ್ರಮಾಣದಲ್ಲಿರುತ್ತದೆ. ಒಟ್ಟಾರೆ ಜಿಡಿಪಿಯ ಶೇ. 6ರಷ್ಟು ಮೊತ್ತವನ್ನು ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಗುರಿಯನ್ನು ಭಾರತ ಸರ್ಕಾರ ಹೊಂದಿದ್ದರೂ, ಅದರ ಸರಾಸರಿ ವಾರ್ಷಿಕ ಹೂಡಿಕೆಯ ಪ್ರಮಾಣ ಶೇ. 2.7 ಮಾತ್ರವೇ ಆಗಿರುತ್ತದೆ. ರಾಷ್ಟ್ರೀಯ ಆರೋಗ್ಯ ಅಧ್ಯಯನದ ಪ್ರಕಾರ, ಅರೋಗ್ಯ ಕ್ಷೇತ್ರಕ್ಕೆ ಒಟ್ಟಾರೆ ಜಿಡಿಪಿಯ ಶೇ. 4.6 ಪ್ರಮಾಣದ ಹಣವನ್ನು ನಿಗದಿಪಡಿಸಬೇಕೆಂದು ಇದ್ದರೂ, ವಿನಿಯೋಗವಾಗುತ್ತಿರುವ ಸರಾಸರಿ ಪ್ರಮಾಣ ಕೇವಲ ಶೇ. 1.9 ಮಾತ್ರವೇ ಆಗಿದೆ.

ಇದ್ಯಾವುದು ಇಂದಿನ ಯುವ ಜನರ ತಪ್ಪಲ್ಲ. ಶಾಲೆ ಬಿಟ್ಟು ಕೂಲಿರಹಿತ ಮನೆಕೆಲಸದಲ್ಲಿ ತೊಡಗಿರುವ ಹಾಗೂ ಪ್ರವೇಶ ಪರೀಕ್ಷೆಯನ್ನು ಐದನೇ ಬಾರಿ ಬರೆಯಲು ಸಿದ್ಧವಾಗುತ್ತಿರುವ ವ್ಯಕ್ತಿಗಳ ನಡುವೆ ಸಮಾನವಾದ ಅಂಶವೊಂದಿದೆ: ಇವರ ಶ್ರಮದಲ್ಲಿ ಯಾವುದೇ ದೋಷವಿಲ್ಲ; ಇಬ್ಬರೂ ಸಮಾನವಾಗಿ ದುಡಿಯುತ್ತಿದ್ದಾರೆ. ಆದರೆ ಉತ್ತಮ ಗುಣಮಟ್ಟದ ಉದ್ಯೋಗವಾಕಾಶಗಳು ಇಲ್ಲವಾಗುತ್ತಿವೆ.
ಇದನ್ನು ಓದಿದ್ದೀರಾ?: ಪ್ರತಿಭಟನಾಕಾರರ ಹಿನ್ನೆಲೆ ಕೆದಕುತ್ತಿರುವ ಪೊಲೀಸರು; ವಿದ್ಯಾರ್ಥಿಗಳನ್ನು’ಕ್ರಿಮಿನಲ್’ ಎಂದು ಬಿಂಬಿಸುತ್ತಿರುವ ಗೋದಿ ಮಾಧ್ಯಮಗಳು!
ಜಂತರ್ಮಂತರ್ನಲ್ಲಿ ನಡೆದ ಯುವ ಜನರ ಪ್ರತಿಭಟನೆ ಸರ್ಕಾರದ ವಿಫಲತೆಗೆ ಸಾಕ್ಷಿಯಾಗಿದೆ. ಈ ವಿಫಲತೆಯ ಉತ್ತರದಾಯಿತ್ವವನ್ನು ಸರ್ಕಾರ ಹೊರಬೇಕೆಂದು ಸ್ಪಷ್ಟಪಡಿಸುವಲ್ಲಿ ಈ ಹೋರಾಟ ಯಶಸ್ವಿಯಾಗಿದೆ. ಆದರೆ ಎಲ್ಲಿಯವರೆಗೆ ಪ್ರತಿ ಸರ್ಕಾರಿ ಉದ್ಯೋಗಕ್ಕೆ 170 ಅಭ್ಯರ್ಥಿಗಳ ಸ್ಪರ್ಧೆ ಇರುತ್ತದೋ, ಅಲ್ಲಿಯವರೆಗೆ ಪರಿಸ್ಥಿತಿ ಉತ್ತಮವಾಗಿರಲು ಸಾಧ್ಯವೇ ಇಲ್ಲ. ಹೀಗಾಗಿ ದೇಶದ ಆರ್ಥಿಕಾಭಿವೃದ್ಧಿಯನ್ನು ಮರುನಿರೂಪಿಸುವ ಸವಾಲು ಇಂದಿನ ಸರ್ಕಾರದ ಮುಂದಿದೆ.
ಎಲ್ಲಿಯವರೆಗೆ ಶಿಕ್ಷಣ ಒದಗಿಸುತ್ತಿರುವ ಅವಕಾಶಗಳಿಗೆ ತಕ್ಕಂತೆ ಉದ್ಯೋಗದ ಅವಕಾಶಗಳು ಒದಗುವುದಿಲ್ಲವೋ ಅಲ್ಲಿಯವರೆಗೆ ಭಾರತದ ಯುವ ಜನರ ಬವಣೆ ತಪ್ಪಿದ್ದಲ್ಲ. ಭಾರತದ ಆರ್ಥಿಕ ವ್ಯವಸ್ಥೆ ಸೂಕ್ತವಾದ ವ್ಯವಸ್ಥೆಯನ್ನು ಒದಗಿಸದೆ ಈ ಯುವ ಜನರ ಉದ್ಯೋಗದ ಆಸೆ ಆಕಾಂಕ್ಷೆಗಳು ಈಡೇರುವುದಿಲ್ಲ. ಹಾಗಾಗಿ ಸೂಕ್ತ ಆರ್ಥಿಕ ವ್ಯವಸ್ಥೆಯ ನಿರ್ಮಾಣಕ್ಕಾಗಿ ಕಾಯುವುದು ಇಂದಿನ ಯುವ ಜನರಿಗೆ ಅನಿವಾರ್ಯವಾಗಿದೆ.
(ಕೃಪೆ: ದಿ ಹಿಂದೂ, ಲೇ: ಶಿಪ್ರ ನಿಗಂ, ಕನ್ನಡಕ್ಕೆ: ಸದಾನಂದ ಆರ್.)




