ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಹಾಸನದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವವರ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದಾಗ- ಅತಿ ಹೆಚ್ಚಾಗಿ ಕಾಣಸಿಕ್ಕಿದ್ದು ಪುರುಷ ಹೆಸರುಗಳೆ! ರಂಗಭೂಮಿಯಲ್ಲಿ ಮಹಿಳೆಯರು ತೊಡಗಿಕೊಳ್ಳುವುದು ಸುಲಭದ ಮಾತಲ್ಲ. ಗಂಡಾಳ್ವಿಕೆಯ ರಂಗಭೂಮಿಯಲ್ಲಿ ಮಹಿಳೆಯರು ಪುರುಷರಿಗೆ ಸರಿಸಾಟಿಯಾಗಿ ನಿಂತು ರಂಗಭೂಮಿ, ವೃತ್ತಿ ಹಾಗೂ ತಮ್ಮ ವೈಯಕ್ತಿಕ ಜೀವನವನ್ನು ಸರಿದೂಗಿಸಿಕೊಂಡು ಹೋಗುವುದು ಯಾವತ್ತಿಗೂ ದೊಡ್ಡ ಸವಾಲಿನ ವಿಷಯವಾಗಿದೆ.
ಇದರ ಮಧ್ಯೆಯೂ ಹೆಜ್ಜೆಹೆಜ್ಜೆಗೂ ಎದುರಾಗುವ ಸವಾಲುಗಳನ್ನು ಸ್ವೀಕರಿಸುತ್ತಾ, ನೋವು-ನಲಿವುಗಳನ್ನು ಉಣ್ಣುತ್ತಾ, ನೂರಾರು ನಿಂದನೆಗಳನ್ನು ಅರಗಿಸಿಕೊಳ್ಳುತ್ತಾ, ಹವ್ಯಾಸಕ್ಕಾಗಿಯೋ ವೃತ್ತಿಗಾಗಿಯೋ ಮನೆಯಿಂದ ಹೊರಬಂದು ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಪುರುಷರಿಗೆ ಸಮನಾದ ಸಾಧನೆಗೈದ ಹಲವು ಮಹಿಳಾ ರಂಗಭೂಮಿ ಕಲಾವಿದೆಯರು ನಮ್ಮ ಸುತ್ತ ಒಂದಿಷ್ಟು ಮಂದಿಯಾದರೂ ಇದ್ದಾರೆ. ಅದೊಂದು ಸಮಾಧಾನ. ಹಾಸನದ ಹಲವು ಸಂಘ ಸಂಸ್ಥೆಗಳು, ಹವ್ಯಾಸಿ ರಂಗಭೂಮಿ ಕಲಾ ತಂಡಗಳು, ವೃತ್ತಿ ರಂಗಭೂಮಿ ಕಲಾ ತಂಡಗಳು- ಹಲವು ಕಲಾವಿದೆಯರನ್ನು ಸಮಾಜದ ಮುನ್ನೆಲೆಗೆ ತಂದಿರುವುದು ಸತ್ಯ.
ನಾಟಕಕ್ಕಾಗಿ ಮಹಿಳೆಯರನ್ನು ಹೊರ ಜಿಲ್ಲೆ, ರಾಜ್ಯಗಳಿಂದ ಕರೆತರುತ್ತಿದ್ದ ಹಿಂದಿನ ಕಾಲವೊಂದು ಇಲ್ಲಿತ್ತು. ಮಹಿಳಾ ಪಾತ್ರಗಳನ್ನು ನಿರ್ವಹಿಸಲು ಕಲಾವಿದೆಯರು ಸಿಗದೆ ಪುರುಷರೇ ಮಹಿಳಾ ಪಾತ್ರಗಳಲ್ಲಿ ಅಭಿನಯಿಸಿರುವುದು ಉಂಟು. 90ರ ಕಾಲಘಟ್ಟದಿಂದ ಪ್ರಸ್ತುತ ಕಾಲದವರೆಗೂ ಹಾಸನದ ಮಣ್ಣಿನಲ್ಲಿ ಹಲವಾರು ರಂಗ ಕಲಾವಿದೆಯರು ನೆಲೆ ನಿಂತಿದ್ದಾರೆ. ರಂಗಭೂಮಿಗಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಕೆಲವರು ಒಂದೆರಡು ನಾಟಕಗಳಲ್ಲಿ ಅಭಿನಯಿಸಿ, ಅಭಿನಯಿಸುವ ಅಭಿಲಾಷೆಯನ್ನು ಇಟ್ಟುಕೊಂಡೆ ರಂಗಭೂಮಿಯಿಂದ ದೂರವಾಗಿದ್ದಾರೆ. ಹಲವರು ಹವ್ಯಾಸವನ್ನಾಗಿ ಕಲೆಯನ್ನು ಸ್ವೀಕರಿಸಿ, ರಂಗಭೂಮಿಯನ್ನೂ ಬಿಡದೆ ಅದರಲ್ಲೇ ಸಾಧನೆಯತ್ತ ದಾಪುಗಾಲು ಹಾಕಿದ್ದಾರೆ. ಅಂತಹವರಲ್ಲಿ ಹಾಸನದ ರಂಗಭೂಮಿಯನ್ನು ಹಸನಾಗಿಸಿದ ಕೆಲವು ರಂಗಕಲಾವಿದೆಯರನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ.
ಇದನ್ನು ಓದಿದ್ದೀರಾ?: ಜಿಲ್ಲೆಯ ಗಮಕ ಲೋಕದ ತಾರೆಯರು
ಕಲಾವಿದೆಯರೆ ಸಿಗುವುದಿಲ್ಲ ಎಂಬ ಸಂದರ್ಭದಲ್ಲಿ ಹವ್ಯಾಸಿ ರಂಗಭೂಮಿ ಕಲಾವಿದೆಯಾಗಿ ಮೊದಲಿಗೆ ಮುನ್ನೆಲೆಗೆ ಬಂದವರು ಟಿ.ಡಿ.ಶಕುಂತಲಾ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು- ಇದಿಮಾಯಿ, ರಕ್ತಾಕ್ಷಿ, ಮಾನಿಷಾದ ಮುಂತಾದ ನಾಟಕಗಳಲ್ಲಷ್ಟೇ ಅಲ್ಲದೆ ಹಲವು ರೇಡಿಯೋ ನಾಟಕಗಳಿಗೂ ಧ್ವನಿಯಾಗಿದ್ದವರು ಇವರು. ರಾಜ್ಯಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿಯನ್ನು ತಂದವರು. ರಂಗಭೂಮಿಗೆ ಸಮರ್ಪಕವಾದ ಸ್ತ್ರೀ ಕೇಂದ್ರಿತ ನಾಟಕಗಳು ಕೊರತೆಯಿದ್ದ ಕಾಲದಿಂದಲೂ ಅದನ್ನು ಕೆಲಮಟ್ಟಿಗೆ ತುಂಬುತ್ತಾ ಬಂದವರು ಮಂಗಳಾ ಸತ್ಯನ್, ಪಾರ್ವತಿ ಕೃ.ನ.ಮೂರ್ತಿ, ಶ್ರೀವಿಜಯ ಹಾಸನ… ಮುಂತಾದವರು.
ಮಹಿಳೆಯರನ್ನೇ ಒಟ್ಟುಗೂಡಿಸಿ ಪೌರಾಣಿಕ ನಾಟಕಗಳನ್ನು ಮಾಡಿಸುತ್ತಿದ್ದ ದಿವಂಗತ ಮಂಗಳ ವೆಂಕಟೇಶ್ ಅವರು ಹತ್ತು ಹಲವು ನಾಟಕಗಳನ್ನು ನಿರ್ದೇಶಿಸಿ ಸ್ವತಃ ಅಭಿನಯಿಸಿದ್ದಷ್ಟೇ ಅಲ್ಲದೆ, ಶ್ವೇತ ಮೋಹನ್, ಗಾಯತ್ರಿ ಪ್ರಕಾಶ್, ಪುಟ್ಟಮ್ಮರಂತಹ ಕಲಾವಿದೆಯರನ್ನು ರಂಗಭೂಮಿಗೆ ಕೊಡುಗೆಯಾಗಿ ನೀಡಿದ್ದಾರೆ. ಇವರುಗಳು ಮಂಗಳ ವೆಂಕಟೇಶ್ ಅವರ ಕೈಕೆಳಗೆ ತರಬೇತುಗೊಂಡು ಪ್ರಚಂಡ ರಾವಣ, ಕುರುಕ್ಷೇತ್ರ, ಗಂಗೆ-ಗೌರಿ, ಶರ್ಮಿಷ್ಟೆ, ಸಂಗೊಳ್ಳಿ ರಾಯಣ್ಣ, ಹೋಳಿ ಹುಣ್ಣಿಮೆ, ಮಾನಿನಿಯರೇ ಎಚ್ಚರ… ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡು ನಿರಂತರವಾಗಿ ರಂಗಪ್ರಯೋಗಳಲ್ಲಿ ತೊಡಗಿಕೊಂಡಿದ್ದಾರೆ. ದಿವಂಗತ ಶೈಲಾ ಅಭಿನಂದನ್ ಅವರು ಅನೇಕ ಜೈನ ಧಾರ್ಮಿಕ ಕತೆ ಮತ್ತು ಪುರಾಣಗಳಿಂದ ಸಾರಾಂಶವನ್ನು ಆಯ್ದು, ತಾವೇ ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಮಹಿಳಾ ತಂಡ ಕಟ್ಟಿ ಅಭ್ಯಾಸ ಮಾಡಿಸಿ- ಧಾರ್ಮಿಕ ಮತ್ತಿತರ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುತ್ತಿದ್ದರು.
ಇದನ್ನು ಓದಿದ್ದೀರಾ?: ಹಲವು ಮೊದಲುಗಳ ಅನನ್ಯ ರಂಗ ಭರವಸೆ- ಶ್ವೇತಾ ಎಚ್.ಕೆ.
ಚನ್ನರಾಯಪಟ್ಟಣ ತಾಲೂಕಿನ ನೇರಲಕೆರೆ ಗ್ರಾಮದ ಸವಿತಾಕುಮಾರ ಅವರು, ಪೌರಾಣಿಕ ನಾಟಕ ಮತ್ತು ಸಂಗೀತ ನಿರ್ದೇಶಕಿಯಾಗಿ ಗಮನಿಸಬೇಕಾದ ಮುಖ್ಯ ಮಾದರಿಯಾಗಿ ಕಾಣುತ್ತಾರೆ. ಇವರು ಕಳೆದ 15 ವರ್ಷಗಳಲ್ಲಿ ಸುಮಾರು 48 ಬಾರಿ ಕುರುಕ್ಷೇತ್ರ ನಾಟಕವನ್ನು ಹಾಗೂ 65ಕ್ಕೂ ಹೆಚ್ಚು ಬಾರಿ ‘ರಾಜ ಸತ್ಯವ್ರತ’ ಎಂಬ ಪೌರಾಣಿಕ ನಾಟಕವನ್ನು ನಿರ್ದೇಶಿಸಿದ್ದು, ದೇವಿ ಮಹಾತ್ಮೆ ನಾಟಕವನ್ನೂ ನಿರ್ದೇಶಿಸಿದ್ದಾರೆ. ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕವನ್ನೂ ನಿರ್ದೇಶಿಸಿದ ಸಾಧನೆ ಇವರದು. ಇದಲ್ಲದೇ ಇತ್ತೀಚೆಗೆ ಸಂಪೂರ್ಣ ಮಹಿಳಾ ತಂಡದಿಂದಲೇ ನಾಟಕವನ್ನು ಆಡಿಸಿದ್ದಾರೆ. ಇವರ ರಂಗಭೂಮಿಯ ಸಾಧನೆಯನ್ನು ಮೆಚ್ಚಿ ಅನೇಕ ಪ್ರಶಸ್ತಿ, ಗೌರವಗಳನ್ನು ನೀಡಲಾಗಿದೆ. ‘ಕರುನಾಡ ಕಲಾರತ್ನ’ ಹಾಗೂ ‘ಕಿತ್ತೂರು ರಾಣಿ ಚನ್ನಮ್ಮ’ ಪ್ರಶಸ್ತಿ ಪ್ರಮುಖವಾದುವು.
ಮುಸ್ಲಿಂ ಸಮುದಾಯದಿಂದ ರಂಗಭೂಮಿಗೆ ಬಂದವರು ನಾಝೀಮ ಎಚ್.ಎಂ. ಇವರು 7ನೆಯ ತರಗತಿಯಲ್ಲಿರುವಾಗಲೆ ಸತ್ಯವಾನ್ ಸಾವಿತ್ರಿ ಎಂಬ ನಾಟಕದ ಯಮನ ಪಾತ್ರಕ್ಕಾಗಿ ಬಣ್ಣವನ್ನು ಹಚ್ಚಿ, ರಂಗಭೂಮಿಯನ್ನು ಪ್ರವೇಶಿಸಿದರು. ಮಾಯಾಕಿನ್ನರಿ, ಎಚ್ಚಮನಾಯಕ, ಶಿವರಾತ್ರಿ, ರಕ್ತಾಕ್ಷಿ, ಇದಿಮಾಯಿ, ಜಲಗಾರ, ಸಿಂಗಾರೆವ್ವ ಮತ್ತು ಅರಮನೆ, ಉಚಲ್ಯಾ, ಕಂಬಾಲಪಲ್ಲಿ, ಈಡಿಪಸ್ ಮತ್ತು ಅಂತಿಗೊನೆ, ಮೀಡಿಯಾ… ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಾಗೂ ಹಲವು ರೇಡಿಯೋ ನಾಟಕಗಳಿಗೆ ಧ್ವನಿಯಾಗಿದ್ದಾರೆ. ಉಡುಪಿ ರಂಗಭೂಮಿಯಲ್ಲಿ ನಡೆಯುವ ರಾಜ್ಯಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಮೂರು ಬಾರಿ ಶ್ರೇಷ್ಠ ಪೋಷಕ ನಟಿ ಹಾಗೂ ಶ್ರೇಷ್ಠ ನಟಿ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯಾದ್ಯಂತ ಸಂಚರಿಸಿ ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ. ಮಕ್ಕಳ ನಾಟಕಗಳನ್ನು ರಚಿಸುವ ಹಾಗೂ ನಿರ್ದೇಶಿಸುವ ರಂಗ ಚಟುವಟಿಕೆಯಲ್ಲಿ ಸದ್ಯ ತೊಡಗಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ?: ಜಿಲ್ಲಾ ಲೇಖಕಿಯರ ಬಳಗ ನಡೆದು ಬಂದ ಹಾದಿ
ಸಂಗ್ಯಾಬಾಳ್ಯಾ ನಾಟಕದ ಮೂಲಕ ಗಂಗಿ ಎಂದೇ ಮನೆಮಾತಾದ ರಂಗಕಲಾವಿದೆ ಚಿತ್ರಲೇಖ ಮಧು- ರಥಮುಸುಲ, ಹದ್ದು ಮೀರಿದ ಹಾದಿ, ನಾಟ್ಯರಾಣಿ ಶಾಂತಲೆ, ಸವತಿ ಗಂಧ, ತೆಂಕ ಬಡಗ, ಒಂದು ಬೊಗಸೆ ನೀರು, ಸಿಂಗಾರೆವ್ವ ಮತ್ತು ಅರಮನೆ ಮುಂತಾದ ಸಾಮಾಜಿಕ, ಜಾನಪದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರು ಕೂಡ ರಾಜ್ಯಾದ್ಯಂತ ಸಂಚರಿಸಿ ಹಲವು ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಇವರ ಅಭಿನಯದ ಸಂಗ್ಯಾಬಾಳ್ಯಾ ನಾಟಕವು 70 ಬಾರಿ ಪ್ರದರ್ಶನ ಕಂಡಿದೆ. ಪ್ರತಿ ಪ್ರದರ್ಶನದಲ್ಲೂ ಇವರ ಕಲೆ ಪರಿಪಕ್ವಗೊಳ್ಳುತ್ತಾ ಸಾಗಿ ಇವರು ರಂಗಭೂಮಿಯಲ್ಲೇ ತೊಡಗಿಕೊಳ್ಳಲು ಸಾಧ್ಯವಾಗಿಸಿದೆ. ಉಡುಪಿ ರಂಗಭೂಮಿಯಲ್ಲಿ ನಡೆಯುವ ರಾಜ್ಯಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಸಂಗ್ಯಾಬಾಳ್ಯಾ ನಾಟಕದ ಗಂಗಿ ಪಾತ್ರಕ್ಕಾಗಿ ಹಾಗೂ ರಥಮುಸುಲ ನಾಟಕದ ಮಲ್ಲಿಕಾ ಪಾತ್ರಕ್ಕಾಗಿ ಶ್ರೇಷ್ಠ ನಟಿ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಕ್ಕಳಿಗಾಗಿ ಒಂದು ರಂಗ ಚಟುವಟಿಕೆಯ ತಾಣವನ್ನು ನಿರ್ಮಿಸಬೇಕೆಂಬ ಕನಸನ್ನು ಕಂಡಿರುವ ಇವರು, ಮಕ್ಕಳಿಗಾಗಿ ಬೇಸಿಗೆ ಶಿಬಿರಗಳನ್ನು ಆಯೋಜಿಸಿ ನೃತ್ಯ ಹಾಗೂ ಕಲೆಯ ತರಬೇತಿಯನ್ನು ನೀಡುತ್ತಿದ್ದಾರೆ.
ಯಕ್ಷಗಾನ, ಬಯಲಾಟ, ಸಣ್ಣಾಟಗಳ ಮುಖಾಂತರ ರಂಗಭೂಮಿಯಲ್ಲಿ ಕಲಾವಿದೆಯಾಗಿ ತೊಡಗಿಕೊಂಡಿರುವ ರಾಣಿ ಅವರು- ಬೆನಕ ಕಲಾ ಸೌರಭ ಎಂಬ ಮಹಿಳಾ ತಂಡವನ್ನು ಕಟ್ಟಿ ಭಕ್ತ ಕನಕದಾಸ, ದೀಪದ ದೇವಿ, ಹೋಳಿ ಹುಣ್ಣಿಮೆ ಮುಂತಾದ ನಾಟಕಗಳನ್ನು ನಿರ್ದೇಶಿಸಿ, ಹಲವಾರು ಕಲಾವಿದೆಯರಿಗೆ ತಮ್ಮ ತಂಡದಲ್ಲಿ ಅವಕಾಶ ನೀಡಿ ಬೆಳೆಸಿ, ಜಿಲ್ಲೆ ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ಯಶಸ್ವೀ ಪ್ರದರ್ಶನಗಳನ್ನು ನೀಡಿದ್ದಾರೆ. ಹೋಳಿ ಹುಣ್ಣಿಮೆ, ಮಾನಿನಿಯರೇ ಎಚ್ಚರ, ಸಾಯೋ ಆಟ, ರಾವಿ ನದಿಯ ದಂಡೆಯಲ್ಲಿ… ಮುಂತಾದ ನಾಟಕಗಳಲ್ಲಿ ಇವರು ಸ್ವತಃ ಅಭಿನಯಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳಿಂದ ಕಲಾ ಪೋಷಕ ರತ್ನ, ನಾಟಕ ರತ್ನ ಮುಂತಾದ ಪ್ರಶಸ್ತಿಗಳನ್ನು, ಹಾಸನ ಜಿಲ್ಲಾಡಳಿತದ ವತಿಯಿಂದ ರಾಜ್ಯೋತ್ಸವ ಸನ್ಮಾನವನ್ನು ಪಡೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ?: ಜಿಲ್ಲೆಯ ಸಂಗೀತ ಲೋಕದ ಮಿಂಚುಗಳು
‘ಮುತ್ತಿನ ಮೂಗುತಿ’ ನಾಟಕದ ಮೂಲಕ ರಂಗಪ್ರವೇಶಿಸಿದ ಪೂಜಾ ಅವರು, ‘ಹೆಣ್ಣುಮಕ್ಕಳಿಗೆ ನಾಟಕದ ಗೀಳು ಇರಬಾರದು’ ಎಂಬ ಸಂಕುಚಿತ ಮನೋಭಾವದ ಸಂಬಂಧಿಕರ ಆಕ್ಷೇಪಗಳ ನಡುವೆಯೂ ಕಳೆದ 13 ವರ್ಷಗಳಿಂದ ನಿರಂತರವಾಗಿ ರಂಗಭೂಮಿಯಲ್ಲಿ ಯಶಸ್ವಿಯಾಗಿ ತೊಡಗಿಕೊಂಡಿದ್ದಾರೆ. ಇವರ ‘ತಾಯಿಯಾಗುವುದೆಂದರೆ…’ ಎಂಬ ಸುಮಾರು 65 ನಿಮಿಷಗಳ ಏಕವ್ಯಕ್ತಿ ರಂಗಪ್ರಯೋಗವು ರಾಜ್ಯಾದ್ಯಂತ ಹಾಗೂ ದೆಹಲಿಯಲ್ಲೂ ಸೇರಿದಂತೆ 35ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಈ ನಾಟಕದ ಮೂಲಕ ಸಂಗ್ರಹವಾದ ಐದೂವರೆ ಲಕ್ಷ ರೂಪಾಯಿಗಳನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಹಾಗೂ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನೀಡಿರುತ್ತಾರೆ. ‘ನಮ್ಮ ನಿಮ್ಮೊಳಗೊಬ್ಬ’ ಮತ್ತು ‘ಆಷಾಢದ ಒಂದು ದಿನ’ ಮುಂತಾದ ನಾಟಕಗಳಲ್ಲಿ ಹಾಗೂ ‘ಕೊನೆಯ ನಿಲ್ದಾಣ’, ‘ಪುಟ್ಟಗೂಡಿನ ಪಟ್ಟದರಸಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಪೂಜಾ ನಟಿಸಿದ್ದಾರೆ. ಇವರಿಗೆ ಕರ್ನಾಟಕ ಸರ್ಕಾರದ 2025ರ ‘ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ’, ಜಿಲ್ಲಾ ರಾಜ್ಯೋತ್ಸವ ಸನ್ಮಾನ, ಕೇಂದ್ರ ಸಾಹಿತ್ಯ ಅಕಾಡೆಮಿಯ ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳೊಂದಿಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರೆಜಿಲ್ನ ಕ್ಯಾಂಪಿನಾಸ್ ಚಿತ್ರೋತ್ಸವದಲ್ಲಿ ‘ಮಾರ್ವೆನ್’ (MARVEN) ಕಿರುಚಿತ್ರಕ್ಕಾಗಿ ‘ಅತ್ಯುತ್ತಮ ನಟಿ’ ಪ್ರಶಸ್ತಿಯು ಸಹ ಲಭಿಸಿದೆ.
ದಲಿತ ಸಮುದಾಯದಿಂದ ಬಂದು ನೀನಾಸಂನಲ್ಲಿ ನಟಿಯಾಗಿ ಗುರುತಿಸಿಕೊಂಡು, ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗಪದವಿಯನ್ನು ಪಡೆದು, ಸಾಣೇಹಳ್ಳಿ ರಂಗ ಶಾಲೆಯಲ್ಲಿ ಮೊದಲ ಮಹಿಳಾ ಪ್ರಾಂಶುಪಾಲೆಯಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ರಂಗ ಪ್ರತಿಭೆ ಶ್ವೇತಾ ರಾಣಿ. ಇವರು ರಂಗ ಕಲಾವಿದೆ, ರಂಗ ವಿನ್ಯಾಸಕಿ, ವಸ್ತ್ರ ವಿನ್ಯಾಸಕಿ, ರಂಗ ನಿರ್ದೇಶಕಿ, ಹೀಗೆ ಹಲವು ಪ್ರಕಾರಗಳಲ್ಲಿ ಯಶಸ್ವಿಯಾಗಿ ಗುರುತಿಸಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಅತೀ ಸೂಕ್ಷ್ಮ ರಾಜಕಾರಣದ ವಿಷಯಗಳನ್ನು ಕೇಂದ್ರವಾಗಿರಿಸಿಕೊಂಡು, ಅದನ್ನು ಈ ನೆಲದ ಬದುಕಿನ ಅಸ್ಮಿತೆಯ ಜೊತೆಗೆ ಸಮೀಕರಿಸಿ ನಾಟಕ ಕಟ್ಟುವ ಇವರ ಕ್ರಮವು, ಕನ್ನಡ ರಂಗಭೂಮಿಗೆ ಹೊಸ ಆಯಮಾವನ್ನು ನೀಡುತ್ತಿದೆ. 2024ರ ಡೆಕ್ಕನ್ ಹೆರಾಲ್ಡ್ನ- ಚೇಂಜ್ ಮೇಕರ್ನಂತಹ ಪ್ರಮುಖ ಪ್ರಶಸ್ತಿಗೆ ಭಾಜನರಾಗಿ, ಸಮಾಜದಲ್ಲಿ ಕಲೆಯ ಮೂಲಕ ಹೊಸ ಬದಲಾವಣೆಯೊಂದಿಗೆ ಹೊಸ ಹೊಸ ರಂಗ ಸಾಧ್ಯತೆಯನ್ನು ಕಟ್ಟಿ ಕೊಡುತ್ತಿರುವವರ ಸಾಲಿನಲ್ಲಿ ಮೊದಲಿಗರಾಗಿದ್ದಾರೆ.
ಇದನ್ನು ಓದಿದ್ದೀರಾ?: ಸಮಾಜ ಸ್ಪಂದನಶೀಲೆ- ಸೌಭಾಗ್ಯ ಸಿ.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆಯಾಗಿರುವ ಮಮತ ಅರಸೀಕೆರೆ ಅವರು ಒಂದು ಬೊಗಸೆ ನೀರು, ಮಹಾಮಾಯಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಷ್ಟೇ ಅಲ್ಲದೇ ಎನ್ಎಸ್ಡಿ ಬೆಂಗಳೂರು ಚಾಪ್ಟರ್ ಇಲ್ಲಿಂದ ‘ಶಿಕ್ಷಣದಲ್ಲಿ ರಂಗಕಲೆ’ ಎಂಬ ವಿಷಯದಲ್ಲಿ ತರಬೇತಿ ಪಡೆದು ಬೆಂಗಳೂರಿನಿಂದ ಬೀದರ್, ಗುಲ್ಬರ್ಗದವರೆಗೂ ತಿರುಗಾಟವನ್ನು ಕೈಗೊಂಡಿದ್ದಾರೆ. ಮಕ್ಕಳಿಗಾಗಿ ಹಲವಾರು ರಂಗಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಚನ್ನರಾಯಪಟ್ಟಣದ ದಿಂಡಿಗನೂರಿನ ಲಕ್ಷಿಯವರು ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘವನ್ನು ಕಟ್ಟಿಕೊಂಡು ಸ್ಥಳೀಯ ಸಮಸ್ಯೆಯನ್ನು ಕಥೆಯನ್ನಾಗಿ ಆಧರಿಸಿ ‘ಕೇರಿ ಹಾಡು’ ಎಂಬ ನಾಟಕವನ್ನು ಸಿದ್ಧಪಡಿಸಿ, ಮೈಸೂರು ಬಹುರೂಪಿ, ಬೆಂಗಳೂರು ಹಬ್ಬ ಮುಂತಾದ ಕಡೆಗಳಲ್ಲಿ ಪ್ರದರ್ಶಿಸಿದ್ದಾರೆ. ಮಹಾಮಾಯಿ ನಾಟಕದ ಮೂಲಕ ರಂಗಭೂಮಿಗೆ ಬಂದಂತಹ ಅರಸಿಕೆರೆಯ ಶ್ರೀಲಕ್ಷ್ಮಿಯವರು ರಂಗಾಯಣ ತರಬೇತಿ ಶಿಬಿರಗಳಲ್ಲಿ ತರಬೇತಿಯನ್ನು ಪಡೆದುಕೊಂಡು ಲಂಕೇಶ್ವರ, ಅಲೆಕ್ಸಾಂಡರ್ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ತಮ್ಮದೇ ಒಂದು ಬೀದಿ ನಾಟಕದ ತಂಡವನ್ನು ಕಟ್ಟಿಕೊಂಡು ಜಾಗೃತಿ ಮೂಡಿಸುವ ಹಲವು ಬೀದಿ ನಾಟಕಗಳನ್ನು ಮಾಡಿಸಿದ್ದಾರೆ.
ಕಳೆದ 12 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಕೊಂಡು ನಿಲುವಂಗಿಯ ಕನಸು, ಆಷಾಢದ ಒಂದು ದಿನ, ಏಕಲವ್ಯ ಮುಂತಾದ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ, ಧಾರಾವಾಹಿ ಮತ್ತು ಚಲನಚಿತ್ರ ನಟಿಯಾಗಿ ಗುರುತಿಸಿಕೊಂಡು ರಂಗಭೂಮಿಯ ಚಟುವಟಿಕೆಗಳಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದಾರೆ ಕಲಾವಿದೆ ವೇದ ವೈ.ಎಂ. ಕುರುಕ್ಷೇತ್ರ, ಈಡಿಪಸ್ ಮತ್ತು ಅಂತಿಗೊನೆ ಮುಂತಾದ ನಾಟಕಗಳ ಮೂಲಕ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ ಜಯ ರಮೇಶ್. ಇವರಷ್ಟೇ ಅಲ್ಲದೆ ಚನ್ನರಾಯಪಟ್ಟಣದ- ಅನುರಾಧ, ನಾಗರತ್ನ, ಸಿದ್ಧು, ಪೂರ್ಣಚಂದ್ರ, ಕವಿತಾ ಎಲ್.ಗೌಡ, ಶೋಭಿತ, ಶಿಲ್ಪಶ್ರೀ, ಪ್ರಮೀಳ ಮೋಹನ್, ಸಕಲೇಶಪುರದ- ಶೋಭಾ ಉಗ್ಗಪ್ಪ, ಶೋಭಾ ನೇರಲಮಕ್ಕಿ, ರಾಧ ರಕ್ಷಿದಿ, ರಮಾ ಸತೀಶ್, ರತ್ನ ಸಕಲೇಶಪುರ, ಬಿಂದು ರಕ್ಷಿದಿ, ಅರಸೀಕೆರೆಯ ಲಕ್ಷ್ಮಿ… ಹೀಗೆ ಅಗಣಿತ ಕಲಾವಿದೆಯರು ಹಾಸನ ರಂಗಭೂಮಿಗೆ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ, ನೀಡುತ್ತಲೆ ಇದ್ದಾರೆ. ಅಲ್ಲದೆ ರಂಗಭೂಮಿಯಲ್ಲಿ ಅತೀ ಹೆಚ್ಚಾಗಿ ಮಹಿಳಾ ಶಿಕ್ಷಕರು ತೊಡಗಿಕೊಂಡಿರುವುದು ವಿಶೇಷವಾಗಿದೆ. ಮಧುಕುಮಾರಿ ಎಂ.ಎಸ್, ರೂಪ ಎಂ.ಆರ್, ನಗ್ಮಾ ಎಚ್.ಎನ್ ಮುಂತಾದ ಶಿಕ್ಷಕಿಯರು ರಾವಿ ನದಿಯ ದಂಡೆಯ ಮೇಲೆ, ತುಘಲಕ್ನಂತಹ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರುಗಳಷ್ಟೇ ಅಲ್ಲದೆ ಅಗಣಿತ ರಂಗ ಕಲಾವಿದೆಯರು ರಂಗಭೂಮಿಯಲ್ಲಿ ತೊಡಗಿಕೊಂಡು ಸಾಮಾಜಿಕ, ಜಾನಪದ, ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವುದನ್ನು ಕಾಣಬಹುದು.
ಇದನ್ನು ಓದಿದ್ದೀರಾ?: ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು
ಇದಲ್ಲದೇ ಲಕ್ಷ್ಮಿ ಚಂದ್ರಶೇಖರ್ ಅವರು, ಹಾಸನದ ಚನ್ನರಾಯಪಟ್ಟಣದವರಾಗಿ ಇಡೀ ನಾಡಿನಾದ್ಯಂತ ಪ್ರಸಿದ್ಧರಾದ ರಂಗಭೂಮಿ ಮತ್ತು ಕಿರುತೆರೆ ಧಾರಾವಾಹಿ ಕಲಾವಿದೆ. ತಮ್ಮ ಕ್ರಿಯಾಶೀಲತೆ ಮತ್ತು ಶ್ರೇಷ್ಠ ಅಭಿವ್ಯಕ್ತಿಗಳಿಂದ ಮನೆಮಾತಾದವರು. 1977ರಿಂದ ಮೊದಲುಗೊಂಡಂತೆ ರಂಗ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಬದಲಾವಣೆಯ ಆಶಯ ಹೊತ್ತ ‘ಸಮುದಾಯ’ ರಂಗತಂಡದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳತೊಡಗಿದ ಇವರು- ಜೆ.ಎಂ.ಸೈಗಸ್ ಅವರ ‘ವೆಲ್ ಆಫ್ ದ ಸೈಂಟ್ಸ್’, ಪೀಟರ್ ಕೋರ್ ಅವರ ‘ಸ್ನೇಕ್ ಪಿಟ್’, ಬ್ರೆಕ್ಟರ ‘ಗೆಲಿಲಿಯೋ’, ಪ್ರಸನ್ನ ಅವರ ‘ದಂಗೆಯ ಮುಂಚಿನ ದಿನಗಳು’, ಎಂ.ಎಸ್.ಸತ್ಯು ಅವರ ‘ಕುರಿ’, ಯು.ಆರ್.ಅನಂತಮೂರ್ತಿಗಳ ‘ಸಂಸ್ಕಾರ’, ಡಾ. ಅಂಕುರ ಮ್ಯಾಕ್ಸಿಂಗೊರ್ಕಿ ಅವರ ‘ಲೋಯರ್ ಡೆಪ್ತ್’, ಸಿಂಗಾಪುರದ ನಾಟಕಕಾರ ಸ್ಟೆಲ್ಲಾ ಕೋನ್ರ ‘ಎಮಿಲಿ ಆಫ್ ಎಮರಾಲ್ಡ್ ಹಿಲ್’ ಆಧರಿತ ‘ಕಿತ್ತಲೆ ಮನೆ ಕಾವೇರಿ’ ಮುಂತಾದ ಪ್ರಸಿದ್ಧ ನಾಟಕಗಳ ರಂಗಪ್ರಯೋಗಗಳಲ್ಲಿ ಪಾಲ್ಗೊಂಡಿದ್ದಾರೆ. 1998ರಲ್ಲಿ ಅವರು ಅಮೆರಿಕಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಭಾರತೀಯತೆಯನ್ನು ಪ್ರತಿನಿಧಿಸುವ ಏನನ್ನಾದರೂ ವಿಶಿಷ್ಟವಾಗಿ ಹೇಳಬೇಕೆನಿಸಿತು. ಈ ನಿಟ್ಟಿನಲ್ಲಿ ಅವರು ಭಾರತೀಯ ಜಾನಪದ, ಸಾಹಿತ್ಯ ಮತ್ತು ಪುರಾಣಗಳನ್ನು ಅಭಿವ್ಯಕ್ತಿಸುವ ಸ್ತ್ರೀ ಪಾತ್ರಗಳಾದ ಗಾಂಧಾರಿ, ಸೀತಾ, ದ್ರೌಪದಿಯಂತಹ ಪಾತ್ರಗಳ ಜೊತೆ ಜೊತೆಗೆ ಸಮಕಾಲೀನ ವ್ಯಕ್ತಿಗಳಾದ ರೂಪ ಕನ್ವರ್, ಭನ್ವಾರಿ ದೇವಿ ಹೀಗೆ ಒಟ್ಟು ಏಳು ವಿವಿಧ ಸ್ತ್ರೀ ಪಾತ್ರಗಳನ್ನು ಒಳಗೊಂಡ ‘ಜಸ್ಟ್ ಎ ವುಮೆನ್’ ಎಂಬ ಏಕವ್ಯಕ್ತಿ ಅಭಿನಯದ ನಾಟಕವನ್ನು ಪ್ರದರ್ಶಿಸಿದರು. ಇದರ ಕನ್ನಡದ ರೂಪದ ಹೆಸರು ‘ಹೆಣ್ಣಲ್ಲವೆ’.
ಚಂದ್ರಶೇಖರ ಕಂಬಾರರ ‘ಸಿಂಗಾರೆವ್ವ ಮತ್ತು ಅರಮನೆಯ’ ರಂಗ ಅಳವಡಿಕೆಯನ್ನು ಸಹಾ ಇವರು ಇಂಗ್ಲಿಷಿನಲ್ಲಿ ‘ಸಿಂಗಾರೆವ್ವ ಅಂಡ್ ಪ್ಯಾಲೇಸ್’ ಎಂಬ ಹೆಸರಿನಲ್ಲಿ ಏಕವ್ಯಕ್ತಿ ನಾಟಕವನ್ನಾಗಿ ಪ್ರದರ್ಶಿಸಿದ್ದಾರೆ. ಭಾರತದ ಹಲವಾರು ರಂಗ ಉತ್ಸವಗಳು, ಅಮೆರಿಕ, ಯೂರೋಪಿನ ಹಲವಾರು ದೇಶಗಳಲ್ಲಷ್ಟೇ ಅಲ್ಲದೆ ಅನೇಕ ರಾಷ್ಟ್ರಗಳಲ್ಲಿಯೂ ಸಹಾ ರಂಗಪ್ರದರ್ಶನಗಳನ್ನು ನೀಡಿದ್ದಾರೆ. ಮಾಯಾಮೃಗ, ಗೃಹಭಂಗ ಮುಂತಾದ ಕಿರುತೆರೆಯ ಪಾತ್ರಗಳು ಇವರಿಗೆ ಪ್ರಶಸ್ತಿಗಳನ್ನು ಕೊಟ್ಟಿವೆ. ರಂಗಭೂಮಿಯಲ್ಲಿನ ಅವರ ಸಾಧನೆಗಾಗಿ ವಿಶ್ವದಾದ್ಯಂತ ಹಲವಾರು ಸಂಘ ಸಂಸ್ಥೆಗಳ ಗೌರವ ಪ್ರಶಸ್ತಿಗಳು ಲಭಿಸಿದೆ. ಇವೆಲ್ಲಕ್ಕೂ ಮಿಗಿಲಾಗಿ ಕನ್ನಡ ಜನರ ಪ್ರೀತಿ, ಅಭಿಮಾನ, ಪ್ರೋತ್ಸಾಹಗಳು ಅವರೊಡನೆ ನಿರಂತರವಾಗಿ ಜೊತೆಯಾಗಿವೆ.
ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್
ಹಾಸನ ರಂಗಭೂಮಿಯಲ್ಲಿ ಮಹಿಳಾ ಮೇಳದವರ ಪಾತ್ರ ಪ್ರಮುಖವಾದದ್ದು. ಮಹಿಳೆಯರೆ ಸೇರಿ ಮಾಡುವ ಪೌರಾಣಿಕ ನಾಟಕಗಳಲ್ಲಿ ಮಹಿಳೆಯರೇ ಮೇಳದ ಹಾಡುಗಳನ್ನು ಹಾಡುವುದು ವಿಶೇಷ. ತಮ್ಮ ಹದಿಹರೆಯದ ವಯಸಿನಲ್ಲೇ ನಾಟಕಗಳಿಗೆ ಗೀತೆಗಳನ್ನು ಹಾಡುವುದರ ಮೂಲಕ ರಂಗಭೂಮಿಗೆ ಪ್ರವೇಶಿಸಿದವರು ಬೇಬಿ ಜಿ.ಎನ್. ಮತ್ತು ದಿವ್ಯ ಜಿ.ಎನ್. ಈ ಅಕ್ಕ ತಂಗಿಯರಿಬ್ಬರೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರದರ್ಶನಗೊಂಡ ಹಲವಾರು ನಾಟಕಗಳಲ್ಲಿಯ ಮೇಳದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ರಥಮುಸಲ, ಸಂಗ್ಯಾ ಬಾಳ್ಯ, ಸಿಂಗಾರೆವ್ವ ಮತ್ತು ಅರಮನೆ ಮುಂತಾದ ನಾಟಕಗಳ ಹಿನ್ನೆಲೆ ಗಾಯನಕ್ಕಾಗಿ ರಾಜ್ಯಮಟ್ಟದಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇಂದಿಗೂ ರಂಗಭೂಮಿಯಲ್ಲಿ ಸಕ್ರಿಯರಾಗಿ ತೊಡಗಿಕೊಂಡಿರುವ ಇವರು ಮಕ್ಕಳನ್ನು ರಂಗಭೂಮಿಯ ನಾನಾ ಪ್ರಕಾರಗಳಿಗಾಗಿ ಸಿದ್ಧಪಡಿಸುತ್ತಿದ್ದಾರೆ.
ರಂಗಭೂಮಿಯಲ್ಲಿಯ ಸಾಮಾಜಿಕ ನಾಟಕಗಳಿಗೆ ಸೂಕ್ತ ಗೀತೆಗಳನ್ನು ರಚಿಸುವುದರೊಂದಿಗೆ ಸಂಗೀತ ನಿರ್ದೇಶನ ಮಾಡಿ ಗಾಯನದಲ್ಲೂ ತೊಡಗಿಕೊಂಡಿರುವವರು ವಾಣಿ ನಾಗೇಂದ್ರ. ಇವರು ಮೂಲತಃ ಸಂಗೀತಗಾರ್ತಿಯಾಗಿದ್ದು ತಂತಿ, ಗುಣಮುಖ, ಅಲಮೇಲಮ್ಮನ ಶಾಪ, ಬೇತಾಳನ ಸುಳ್ಳು ಕಥೆ ಮುಂತಾದ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿ ಹಾಡಿ, ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.
ಶಾಲಾ, ಕಾಲೇಜು ವಾರ್ಷಿಕೋತ್ಸವ ಅಲ್ಲದೆ ಜಿಲ್ಲೆಯ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರು ವರ್ಣಾಲಂಕಾರ ಮತ್ತು ವಸ್ತ್ರಾಲಂಕಾರ ಎಂದರೆ ನೆನಪಾಗುವುದು ಲಾವಣ್ಯ ಡ್ರಾಮಾ ಅಂಡ್ ಡ್ರೆಸ್ ಸಪ್ಲಯರ್ಸ್ ಚೂಡಾಮಣಿ ಅವರು. ಇವರು ಪೌರಾಣಿಕ, ಸಾಮಾಜಿಕ, ಜಾನಪದ ನಾಟಕಗಳು ಹಾಗೂ ನೃತ್ಯಗಳಿಗೆ, ಅಷ್ಟೇ ಅಲ್ಲದೆ ಇಂದಿನ ಆಧುನಿಕ ನೃತ್ಯಗಳಿಗೂ ಸರಿ ಹೊಂದುವಂತೆ ವಸ್ತ್ರಾಲಂಕಾರ ಹಾಗೂ ವರ್ಣಾಲಂಕಾರವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಇವರ ಈ ಕಾರ್ಯವು ಜಿಲ್ಲೆಗೆ ಮಾತ್ರ ಸೀಮಿತವಾಗಿರದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಹಗಲಿರುಳು ಎನ್ನದೆ ರಂಗಭೂಮಿಯ ಸೇವೆಗಾಗಿ ಇವರೊಟ್ಟಿಗೆ ಕೈ ಜೋಡಿಸಿ ನಿಂತವರೆಂದರೆ ಪಂಕಜಾ ಮತ್ತು ಸುನೀತಾ. ಇವರಷ್ಟೇ ಅಲ್ಲದೆ ಹಲವಾರು ಮಹಿಳೆಯರು ರಂಗಭೂಮಿಯ ಹಲವು ವಿಧದ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯವಾಗಿದೆ. ನನ್ನ ಪರಿಮಿತಿಯೊಳಗೆ ದಕ್ಕಿದ ರಂಗಭೂಮಿ ಸಂಬಂಧಿತ ಮಹಿಳೆಯರ ಕುರಿತ ಮಾಹಿತಿಯನ್ನಷ್ಟೇ ಇಲ್ಲಿ ದಾಖಲಿಸುತ್ತಿದ್ದು, ಇದರಾಚೆಗೂ ಹಲವಾರು ಹೆಣ್ಣುಮಕ್ಕಳು ಈ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ?: ಜಿಲ್ಲೆಯ ಫಲವತ್ತತೆಗೆ ಆಶಾ ತಾಯಂದಿರ ಕೊಡುಗೆ
‘ಹಲವು ನದಿಗಳು ಸೇರಿ ಸಾಗರವಾಗುವಂತೆ ಎಲ್ಲಾ ಕಲಾವಿದೆಯರು ಸೇರಿ ಕಲೆಯ ಅಲೆಯನ್ನು ಇನ್ನಷ್ಟು ಎತ್ತರಕ್ಕೆ, ವಿಸ್ತಾರಕ್ಕೆ ಏರಿಸಬೇಕಿದೆ.’ ರಂಗಭೂಮಿಯಲ್ಲಿ ಹೊಸತನವನ್ನು ಮೂಡಿಸಬೇಕಿದೆ. ಈ ಮೂಲಕ ಎಲ್ಲರೂ ಒಂದುಗೂಡಬೇಕಿದೆ. ಕಲೆಯ ಮೂಲಕ ಸ್ವಸ್ಥ ಸಮಾಜವನ್ನು ಕಟ್ಟಬೇಕಿದೆ. ಬನ್ನಿ ರಂಗದ ಮೂಲಕ ನಾವೆಲ್ಲರೂ ಒಂದೆಡೆ ಸೇರುವ ಹೊಸ ಹಾದಿಯನ್ನು ರೂಪಿಸೋಣ.
-ನಾಝೀಮ ಎಚ್.ಎಂ.




