ಮೊಯಿನ್ ಅಲಿ ಅವರ ಮಾರಕ ಸ್ಪಿನ್ ದಾಳಿ ಹಾಗೂ ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೆ ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲಖನೌ ಸೂಪರ್ ಜೈಂಟ್ಸ್‌ಅನ್ನು 12 ರನ್‌ಗಳ ಮೂಲಕ ಮಣಿಸಿ ಐಪಿಎಲ್ 16 ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿತು.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್‌ಕೆ ನೀಡಿದ 217 ರನ್‌ಗಳನ್ನು ಬೆನ್ನಟ್ಟಿದ ಕೆ ಎಲ್ ರಾಹುಲ್ ನೇತೃತ್ವದ ಲಖನೌ ತಂಡ ಕೈಲ್ ಮೇಯರ್ಸ್ ಹಾಗೂ ನಿಕೋಲಸ್ ಪೂರನ್ ಅವರ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ 20 ಓವರ್‌ಗಳಲ್ಲಿ 205 ರನ್‌ಗಳನ್ನು ಗಳಿಸಿ ಸೋಲಪ್ಪಿಕೊಂಡಿತು.
ಕೈಲ್ ಮೇಯರ್ಸ್ ಕೇವಲ 22 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 53 ರನ್ ಹಾಗೂ ಮತ್ತೊಬ್ಬ ಸ್ಫೋಟಕ ಆಟಗಾರ ನಿಕೋಲಸ್ ಪೂರನ್ 18 ಚಂಡುಗಳಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಮೂಲಕ ಲಖನೌ ತಂಡಕ್ಕೆ ಗೆಲುವಿನ ಆಶಾಭಾವನೆ ಮೂಡಿಸಿದರು. ಆದರೆ ಚೆನ್ನೈ ತಂಡದ ಕರಾರುವಕ್ ಬೌಲಿಂಗ್ ದಾಳಿ ಜಯದ ನಗೆ ಬೀರಲು ಅವಕಾಶ ನೀಡಲಿಲ್ಲ.
ನಾಲ್ಕು ವಿಕೆಟ್ ಪಡೆದ ಮೋಹಿನ್ ಅಲಿ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ಮೊಯಿನ್ ಅಲಿ, ಬೌಂಡರಿ ಹಾಗೂ ಸಿಕ್ಸರ್ ಮೂಲಕ ರನ್‌ಗಳ ಮಳೆ ಸುರಿಸುತ್ತಿದ್ದ ಲಖನೌದ ಸ್ಪೋಟಕ ಆಟಗಾರರಾದ ಕೈಲ್ ಮೇಯರ್ಸ್,ಮಾರ್ಕಸ್ ಸ್ಟೊಯಿನಿಸ್ ಹಾಗೂ ನಾಯಕ ಕೆ ಎಲ್ ರಾಹುಲ್,ಕೃನಾಲ್ ಪಾಂಡ್ಯ ಅವರ ವಿಕೆಟ್ ಪಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇವರೊಂದಿಗೆ ತುಷಾರ್ ದೇಶಪಾಂಡೆ ಎರಡು ಹಾಗೂ ಮಿಚೆಲ್ ಸ್ಯಾಂಟ್ನರ್ ಒಂದು ವಿಕೆಟ್ ಪಡೆದರು.
ಸ್ಫೋಟಿಸಿದ ಋತುರಾಜ್, ಡಿವೋನ್ ಕಾನ್ವೆ
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರರಾದ ಋತುರಾಜ್ ಹಾಗೂ ಡಿವೋನ್ ಕಾನ್ವೆ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ 7 ವಿಕೆಟ್ ನಷ್ಟಕ್ಕೆ 217 ರನ್‌ಗಳ ಭರ್ಜರಿ ಮೊತ್ತ ದಾಖಲಿಸಿತ್ತು. ಇಬ್ಬರೂ ಆಟಗಾರರು ಎರಡನೇ ಓವರ್‌ನಿಂದಲೇ ಬ್ಯಾಟ್ ಸಿಡಿಸಲು ಆರಂಭಿಸಿದರು.
ಕಾನ್ವೆ ಐದನೇ ಓವರ್‌ನಲಿ ಕೆ ಗೌತಮ್ ಬೌಲಿಂಗ್‌ನಲ್ಲಿ ಮೂರು ಸಿಕ್ಸರ್ ಬಾರಿಸಿದರು. ಇವರಿಬ್ಬರ ಜೋಡಿ ಮಾರ್ಕ್ ವುಡ್ ಬೌಲಿಂಗ್‌ನಲ್ಲಿ ಆರನೇ ಓವರ್‌ನಲ್ಲಿ 19 ಹಾಗೂ ಎಂಟನೇ ಓವರ್‌ನಲ್ಲಿ 15 ರನ್ ಬಾರಿಸಿದರು. ಹತ್ತನೆ ಓವರ್‌ನಲ್ಲಿ ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ಔಟಾದ ಋತುರಾಜ್ 31 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಮೂರು ಬೌಂಡರಿಗಳೊಂದಿಗೆ 57 ರನ್ ಸಿಡಿಸಿದ್ದರು.
ಡಿವೋನ್ ಕಾನ್ವೆ ಕೂಡ ತಾವೇನು ಕಡಿಮೆಯಿಲ್ಲದಂತೆ 29 ಚಂಡುಗಳಲ್ಲಿ 5 ಬೌಂಡರಿ, 2 ಅಮೋಘ ಸಿಕ್ಸರ್‌ನೊಂದಿಗೆ 47 ರನ್ ಪೇರಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಶಿವಂ ದುಬೆ ಕೇವಲ 16 ಚಂಡುಗಳಲ್ಲಿ 3 ಸೊಗಸಾದ ಸಿಕ್ಸರ್ ಹಾಗೂ ಒಂದು ಬೌಂಡರಿಯೊಂದಿಗೆ 27 ರನ್ ಕಲೆ ಹಾಕಿದರು.
ಆರನೇ ಕ್ರಮಾಂಕದಲ್ಲಿ ಆಗಮಿಸಿದ ಅಂಬಾಟಿ ರಾಯುಡು 14 ಚಂಡುಗಳಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿ ಮೂಲಕ 27 ರನ್ ಗಳಿಸಿ ಕೊನೆಯಲ್ಲಿ ಪ್ರೇಕ್ಷಕರಿಗೆ ರಸದೌತಣ ನೀಡಿದರು. ನಾಯಕ ಧೋನಿ ಕೂಡ 3 ಎಸೆತಗಳಲ್ಲಿ 2 ಸಿಕ್ಸರ್ ಮೂಲಕ 12 ರನ್ ಸ್ಪೋಟಿಸಿದರು.
ಲಖನೌ ಪರ ರವಿ ಬಿಷ್ಣೋಯಿ 28/3 ಗಳಿಸಿ ಯಶಸ್ವಿ ಬೌಲರ್ ಎನಿಸಿದರೆ, ಮಾರ್ಕ್‌ವುಡ್ ಹಾಗೂ ಆವೇಶ್ ಖಾನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.