ಇಂದು(ಜೂ.20) ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ವೇಗದ ಬೌಲರ್, ಕನ್ನಡಿಗ ಪ್ರಸಿದ್ಧ್ ಕೃಷ್ಣ ಮತ್ತು ನಾಯಕ ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ.
ಭಾರತವು ಈವರೆಗೆ ಆಡಿರುವ 1,078 ಏಕದಿನ ಪಂದ್ಯಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಇನಿಂಗ್ಸ್‌ನ ಮೊದಲ ಮೂರೂ ವಿಕೆಟ್‌ಗಳು ಒಂದೇ ಬೌಲರ್ ಮತ್ತು ಒಂದೇ ಫೀಲ್ಡರ್ (ಕ್ಯಾಚ್) ಸಂಯೋಜನೆಯಲ್ಲಿ ಪತನಗೊಂಡ ಅಪರೂಪದ ಸಾಧನೆಗೆ ಈ ಜೋಡಿ ಪಾತ್ರವಾಗಿದೆ.
ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ, ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಪ್ರಸಿದ್ಧ್ ಕೃಷ್ಣ ಅವರು ಆರಂಭಿಕ ಸ್ಫೋಟಕ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ (5 ರನ್) ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಭರ್ಜರಿ ಆರಂಭ ಒದಗಿಸಿದರು. ಫಸ್ಟ್ ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾ ಅತ್ಯದ್ಭುತ ಕ್ಯಾಚ್ ಹಿಡಿಯುವ ಮೂಲಕ ಗುರ್ಬಾಜ್ ಪೆವಿಲಿಯನ್ ಸೇರುವಂತೆ ಮಾಡಿದರು.
ಇದನ್ನು ಓದಿದ್ದೀರಾ? ಫಿಫಾ ಜಗತ್ತಿನಲ್ಲಿ ಭಾರತದ ಹೆಜ್ಜೆಗುರುತು – ಕನ್ನಡಿಗ ಕೆಂಪಯ್ಯನವರ ಮರೆಯಲಾಗದ ಸಾಧನೆ
ತಮ್ಮ ಶಿಸ್ತುಬದ್ಧ ದಾಳಿಯನ್ನು ಮುಂದುವರಿಸಿದ ಕೃಷ್ಣ, ಆರನೇ ಓವರ್‌ನಲ್ಲಿ ರಹಮತ್ ಶಾ (5 ರನ್) ಅವರನ್ನು ಬಲಿಪಡೆದರು. ಈ ಬಾರಿಯೂ ರೋಹಿತ್ ಶರ್ಮಾ ಅವರೇ ಸ್ಲಿಪ್‌ನಲ್ಲಿ ಕ್ಯಾಚ್ ಪಡೆದರು. ಬಳಿಕ ಎಂಟನೇ ಓವರ್‌ನಲ್ಲಿ ಬ್ಯಾಟರ್ ಇಬ್ರಾಹಿಂ ಝದ್ರಾನ್ ಅವರು ಬ್ಯಾಟ್‌ನ ಅಂಚಿಗೆ ತಗುಲಿದ ಚೆಂಡನ್ನು ರೋಹಿತ್ ಶರ್ಮಾ ಮೂರನೇ ಕ್ಯಾಚ್ ಆಗಿ ಪಡೆದುಕೊಳ್ಳುವ ಮೂಲಕ ಈ ಐತಿಹಾಸಿಕ ಹ್ಯಾಟ್ರಿಕ್ ಸಾಧನೆಯನ್ನು ಪೂರ್ಣಗೊಳಿಸಿದರು. ವಿಶೇಷವೆಂದರೆ, ಈ ಮೂರೂ ವಿಕೆಟ್‌ಗಳು ಬ್ಯಾಟ್‌ನ ಹೊರ ಅಂಚಿಗೆ (ಔಟ್ ಸೈಡ್ ಎಡ್ಜ್) ತಗುಲಿ ರೋಹಿತ್ ಕೈಸೇರುವ ಮೂಲಕವೇ ಪತನಗೊಂಡವು.
ಹಿಂದಿನ ದಾಖಲೆಗಳೇನು?
ಭಾರತದ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಈ ಹಿಂದೆ ಒಂದೇ ಪಂದ್ಯದಲ್ಲಿ ಒಬ್ಬನೇ ಬೌಲರ್‌ನ ಬೌಲಿಂಗ್‌ನಲ್ಲಿ ಒಬ್ಬ ಫೀಲ್ಡರ್ ಮೂರು ಕ್ಯಾಚ್ ಹಿಡಿದ ನಿದರ್ಶನಗಳಿವೆ. ಆದರೆ, ಇನಿಂಗ್ಸ್‌ನ ಮೊದಲ ಮೂರೂ ವಿಕೆಟ್‌ಗಳು ಸತತವಾಗಿ ಒಂದೇ ಬೌಲರ್-ಫೀಲ್ಡರ್ ಜೋಡಿಗೆ ಸಿಕ್ಕಿರುವುದು ಇದೇ ಮೊದಲು.
ಒಂದೇ ಬೌಲರ್‌ನ ಬೌಲಿಂಗ್‌ನಲ್ಲಿ 3 ಕ್ಯಾಚ್ ಪಡೆದ ಹಿಂದಿನ ನಿದರ್ಶನಗಳು:
ವಿ.ವಿ.ಎಸ್. ಲಕ್ಷ್ಮಣ್ – ಇರ್ಫಾನ್ ಪಠಾಣ್ ಬೌಲಿಂಗ್‌ನಲ್ಲಿ (ಜಿಂಬಾಬ್ವೆ ವಿರುದ್ಧ, ಪರ್ತ್, 2004)
ಶಿಖರ್ ಧವನ್ – ಜಸ್‌ಪ್ರೀತ್ ಬೂಮ್ರಾ ಬೌಲಿಂಗ್‌ನಲ್ಲಿ (ಬಾಂಗ್ಲಾದೇಶ ವಿರುದ್ಧ, ದುಬೈ, 2018)
ಇದೀಗ ರೋಹಿತ್ ಶರ್ಮಾ – ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ (ಅಫ್ಘಾನಿಸ್ತಾನ ವಿರುದ್ಧ, ಚೆನ್ನೈ, 2026)
ಈ ಪಂದ್ಯಕ್ಕೂ ಮುನ್ನ ಭಾರತ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.




