NEET ಸೇರಿದಂತೆ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾಪಾರ್ಟಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಪ್ರಧಾನ್ ರಾಜೀನಾಮೆ ನೀಡುವವರೆಗೂ ಅಹೋರಾತ್ರಿ ಧರಣಿ ನಡೆಸುವುದಾಗಿ ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ಘೋಷಿಸಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದೀಪ್ಕೆ, “ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ಸಮಯದಲ್ಲಿ ಕೊರೋನ ಓಡಿಸಲು ತಟ್ಟೆ-ಲೋಟ ಬಾರಿಸಲು ಕರೆ ಕೊಟ್ಟಿದ್ದರು. ಅಂತೆಯೇ ಕುರ್ಚಿಗೆ ಅಂಟಿಕೊಂಡಿರುವ ಧರ್ಮೇಂದ್ರ ಪ್ರಧಾನ್ ಅವರನ್ನು ತೊಲಗಿಸಲು ನಾವೂ ಕೂಡ ಇಂದು ತಟ್ಟೆ ಲೋಟ ಬಡಿದು ಪ್ರತಿಭಟನೆ ನಡೆಸಿದ್ದೇವೆ. ಪ್ರಧಾನ್ ರಾಜೀನಾಮೆ ನೀಡುವವರೆಗೂ ನಾವು ಪ್ರತಿಭಟನಾ ಸ್ಥಳ ಬಿಟ್ಟು ಕದಲುವುದಿಲ್ಲ” ಎಂದು ಘೋಷಿಸಿದ್ದಾರೆ.
ಸ್ಥಳದಲ್ಲಿದ್ದ ಪೊಲೀಸರಿಗೆ ನಾಳೆ ಸಂಜೆವರೆಗೂ ಪ್ರತಿಭಟನೆ ಮುಂದುವರೆಸಲು ಅವಕಾಶ ನೀಡುವಂತೆ ಕೋರಿದ ಪ್ರತಿಭಟನಾಕಾರರು, ಭಾನುವಾರ ಅಹೋರಾತ್ರಿ ಧರಣಿಗಾಗಿ ಅನುಮತಿ ಕೋರಿ ಪೊಲೀಸರಿಗೆ ಮನವಿ ಪತ್ರ ಸಲ್ಲಿಸುವ ಸಾಧ್ಯತೆ ಇದೆ.




