CNN, MS NOW ಮತ್ತು Politico ಸುದ್ದಿ ಸಂಸ್ಥೆಗಳ ಪತ್ರಕರ್ತರಿಗೆ ಶ್ವೇತಭವನ ಪ್ರವೇಶ ನಿರ್ಬಂಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರಕ್ಕೆ ಫೆಡರಲ್ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ. ನಿರ್ಬಂಧವು ಸಂವಿಧಾನಬಾಹಿರವಾಗಿರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿರುವ ಅಮೆರಿಕ ಜಿಲ್ಲಾ ನ್ಯಾಯಾಧೀಶ ಟಿಮೋತಿ ಕೆಲ್ಲಿ, 14 ದಿನಗಳ ಕಾಲ ನಿರ್ಬಂಧ ಜಾರಿಗೊಳಿಸದಂತೆ ಆದೇಶಿಸಿದ್ದಾರೆ.
ಸೆಪ್ಟೆಂಬರ್ 18ರಂದು ಟ್ರಂಪ್ ಈ ಮೂರು ಮಾಧ್ಯಮ ಸಂಸ್ಥೆಗಳ ಪತ್ರಕರ್ತರಿಗೆ ಶ್ವೇತಭವನ ಪ್ರವೇಶ ನಿರ್ಬಂಧಿಸಿದ್ದರು. ತಮ್ಮ ಆಡಳಿತದ ಕುರಿತು ಈ ಸಂಸ್ಥೆಗಳು ನಿರಂತರವಾಗಿ “ಸುಳ್ಳು ಸುದ್ದಿಗಳನ್ನು” ವರದಿ ಮಾಡುತ್ತಿವೆ ಎಂದು ಟ್ರಂಪ್ ಆರೋಪಿಸಿದ್ದರು. ಇದನ್ನು ಪ್ರಶ್ನಿಸಿ CNN, MS NOW ಮತ್ತು Politico ಸೋಮವಾರ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ, ಪತ್ರಕರ್ತರ ಪ್ರವೇಶವನ್ನು ಮರುಸ್ಥಾಪಿಸುವಂತೆ ಮನವಿ ಮಾಡಿದ್ದವು. ನಿರ್ಬಂಧವು ತಮ್ಮ ಸಂವಿಧಾನದ ಮೊದಲ ತಿದ್ದುಪಡಿ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಅವು ವಾದಿಸಿದ್ದವು.
ಈ ಅರ್ಜಿಗೆ ಪ್ರತಿಕ್ರಿಯಿಸಿದ ಅಮೆರಿಕ ನ್ಯಾಯಾಂಗ ಇಲಾಖೆ, ಶ್ವೇತಭವನ ಪ್ರವೇಶವು ಪತ್ರಕರ್ತರ ಹಕ್ಕಲ್ಲ, ಅದು ನೀಡಲಾಗುವ ಸವಲತ್ತು ಎಂದು ವಾದಿಸಿತು. ಅಧಿಕೃತ ಪತ್ರಕರ್ತರಿಗೆ ಕನಿಷ್ಠ ಮಾನದಂಡಗಳನ್ನು ಜಾರಿಗೊಳಿಸುವುದು ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ರಕ್ಷಿಸುವುದು ಸರ್ಕಾರದ ಪ್ರಮುಖ ಹಿತಾಸಕ್ತಿ ಎಂದು ಇಲಾಖೆ ಹೇಳಿತ್ತು. ಆದರೆ ನ್ಯಾಯಾಧೀಶ ಟಿಮೋತಿ ಕೆಲ್ಲಿ ಈ ವಾದವನ್ನು ಒಪ್ಪದೆ, ನಿರ್ಬಂಧವು ಸಂವಿಧಾನಬಾಹ್ಯವಾಗಿರುವ ಸಾಧ್ಯತೆಯಿದೆ ಎಂದು ಹೇಳಿ ತಾತ್ಕಾಲಿಕ ತಡೆ ವಿಧಿಸಿದರು.

ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಟ್ರಂಪ್ ಸೋಮವಾರವೇ Truth Social ಪೋಸ್ಟ್‌ನಲ್ಲಿ ಸೂಚಿಸಿದ್ದರು. ಏತನ್ಮಧ್ಯೆ, ಟ್ರಂಪ್ ಆಡಳಿತದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ನಾಲ್ಕು ಪ್ರಮುಖ ಟಿವಿ ನೆಟ್‌ವರ್ಕ್‌ಗಳಾದ ABC, CBS, NBC ಮತ್ತು Fox News, ಶ್ವೇತಭವನದ ಮಾಧ್ಯಮ ಪೂಲ್‌ನಲ್ಲಿ ಭಾಗವಹಿಸುವುದನ್ನು ನಿರಾಕರಿಸಿದ್ದವು. ಅಧ್ಯಕ್ಷರ ಸಾರ್ವಜನಿಕ ಕಾರ್ಯಕ್ರಮಗಳನ್ನು ವರದಿ ಮಾಡುವ ಪತ್ರಕರ್ತರು, ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್‌ಗಳ ಪರ್ಯಾಯ ತಂಡವೇ ಈ ಮಾಧ್ಯಮ ಪೂಲ್.
ಇದರ ಪರಿಣಾಮವಾಗಿ ಸೋಮವಾರ ಶ್ವೇತಭವನದ ಹೊಸ ಹೆಲಿಪ್ಯಾಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಟ್ರಂಪ್ ಮಾತನಾಡಿದಾಗ, ಮಾಧ್ಯಮ ಪೂಲ್ ಸಾಮಾನ್ಯವಾಗಿ ಒದಗಿಸುವ ಮೈಕ್ರೋಫೋನ್ ಇರಲಿಲ್ಲ. ಹೀಗಾಗಿ ಅವರ ಮಾತುಗಳು ಸ್ಪಷ್ಟವಾಗಿ ಕೇಳಿಸಲಿಲ್ಲ ಎಂದು ವರದಿ ತಿಳಿಸಿದೆ. ಇದೇ ವೇಳೆ ಶ್ವೇತಭವನವು ‘TRUMP TV: The Essentials Station’ ಹೆಸರಿನಲ್ಲಿ ಯೂಟ್ಯೂಬ್ ಸ್ಟ್ರೀಮ್ ಆರಂಭಿಸಿದ್ದು, ಟ್ರಂಪ್ ಆಡಳಿತದ ಪ್ರಮುಖ ಕಾರ್ಯಕ್ರಮಗಳು ಮತ್ತು ವಿಡಿಯೋಗಳನ್ನು ಒಂದೇ ಕಡೆ ಪ್ರಸಾರ ಮಾಡುವುದಾಗಿ ತಿಳಿಸಿತ್ತು.
ಸೆಪ್ಟೆಂಬರ್ 18ರಂದು ಟ್ರಂಪ್ Truth Socialನಲ್ಲಿ ಈ ನಿರ್ಬಂಧದ ಘೋಷಣೆ ಮಾಡಿದ್ದರು. ನಿರ್ದಿಷ್ಟ ವರದಿಯೊಂದರ ಕಾರಣದಿಂದ ಈ ಕ್ರಮ ಕೈಗೊಂಡಿಲ್ಲ; ಹಲವು ವರ್ಷಗಳಿಂದ ಪ್ರಕಟವಾದ ವರದಿಗಳ ಒಟ್ಟಾರೆ ಪರಿಣಾಮದಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಹೇಳಿದ್ದರು. ಶ್ವೇತಭವನವು ‘ಜನರ ಮನೆ’ ಆಗಿರುವುದರಿಂದ ತನ್ನ ಬಗ್ಗೆ ನಕಾರಾತ್ಮಕ ವರದಿ ಮಾಡುವ ಮಾಧ್ಯಮಗಳಿಗೆ ಅಲ್ಲಿ ಪ್ರವೇಶ ನೀಡುವ ಅಗತ್ಯವಿಲ್ಲ ಎಂಬ ರೀತಿಯಲ್ಲಿ ಟ್ರಂಪ್ ಪ್ರತಿಕ್ರಿಯಿಸಿದ್ದರು.
ಶನಿವಾರ CNNನ ಬೆಟ್ಸಿ ಕ್ಲೈನ್, MS NOWನ ಅಕೈಲಾ ಗಾರ್ಡ್ನರ್ ಮತ್ತು Politicoದ ಚೆನ್ನಿ ಹ್ಯಾಸ್ಲೆಟ್ ಅವರನ್ನು ಶ್ವೇತಭವನದ ಭದ್ರತಾ ಸಿಬ್ಬಂದಿ ಪ್ರವೇಶಿಸದಂತೆ ತಡೆದರು. ಅವರ ಶ್ವೇತಭವನ ಪ್ರವೇಶಕ್ಕೆ ಅಗತ್ಯವಿದ್ದ ಹಾರ್ಡ್ ಪಾಸ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ನಂತರ ಈ ಮೂವರು ಪತ್ರಕರ್ತರನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಅರ್ಜಿದಾರರನ್ನಾಗಿ ಸೇರಿಸಲಾಯಿತು.
ಶ್ವೇತಭವನದ ಪತ್ರಕರ್ತರ ಸಂಘಟನೆ White House Correspondents’ Association ಕೂಡ ಈ ಕ್ರಮವನ್ನು ಖಂಡಿಸಿತು. ಜನರಿಂದ ಆಯ್ಕೆಯಾದ ಅಧಿಕಾರಿಗಳನ್ನು ಸ್ವತಂತ್ರ ಮಾಧ್ಯಮ ಪರಿಶೀಲಿಸುವ ಅವಕಾಶ ಇರಬೇಕು ಮತ್ತು ಮಾಧ್ಯಮ ವರದಿಯ ವಿಷಯವನ್ನು ಆಧರಿಸಿ ಸರ್ಕಾರ ಪ್ರವೇಶ ನಿರಾಕರಿಸಬಾರದು ಎಂದು ಸಂಘಟನೆ ಹೇಳಿತು.
ಸೋಮವಾರ CNN, MS NOW ಮತ್ತು Politico ಜಂಟಿಯಾಗಿ ನ್ಯಾಯಾಲಯದ ಮೊರೆ ಹೋದವು. ಸರ್ಕಾರವೇ ಮಾಧ್ಯಮ ಏನು ವರದಿ ಮಾಡಬೇಕು ಅಥವಾ ಪ್ರಕಟಿಸಬೇಕು ಎಂಬುದನ್ನು ನಿರ್ಧರಿಸುವಂತಿಲ್ಲ; ತಮ್ಮ ಮೊದಲ ತಿದ್ದುಪಡಿ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಮೊಕದ್ದಮೆ ಹೂಡಿರುವುದಾಗಿ ಮೂರು ಸಂಸ್ಥೆಗಳು ತಿಳಿಸಿವೆ. ಟ್ರಂಪ್ ಮತ್ತು ಶ್ವೇತಭವನ ತಮ್ಮ ಆಡಳಿತಕ್ಕೆ ಇಷ್ಟವಾಗದ ವರದಿಗಳಿಗಾಗಿ ಪ್ರತೀಕಾರದ ಕ್ರಮ ಕೈಗೊಂಡಿವೆ ಎಂದು ಅವು ಅರ್ಜಿಯಲ್ಲಿ ಆರೋಪಿಸಿವೆ.
ಈ ಬೆಳವಣಿಗೆಗೆ ಇತರ ಮಾಧ್ಯಮ ಸಂಸ್ಥೆಗಳೂ ಪ್ರತಿಕ್ರಿಯಿಸಿವೆ. Washington Post, New York Times ಮತ್ತು HuffPost, ಟ್ರಂಪ್ ನ್ಯೂಯಾರ್ಕ್ ಪ್ರವಾಸದ ಚಿತ್ರಗಳನ್ನು ಪ್ರಕಟಿಸದೆ ನಿರ್ಬಂಧಿತ ಪತ್ರಕರ್ತರಿಗೆ ಬೆಂಬಲ ಸೂಚಿಸಿದವು. ಬುಧವಾರ ಹಲವು ಮಾಧ್ಯಮ ಸಂಸ್ಥೆಗಳು CNN, MS NOW ಮತ್ತು Politico ಪರವಾಗಿ ನ್ಯಾಯಾಲಯಕ್ಕೆ amicus brief ಸಲ್ಲಿಸಿ, ಇತರ ಸುದ್ದಿಸಂಸ್ಥೆಗಳ ಮೇಲೂ ಇದೇ ರೀತಿಯ ನಿರ್ಬಂಧಗಳು ಮುಂದುವರಿಯುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದವು.
ವಿಶ್ವಸಂಸ್ಥೆಗೆ ತೆರಳಿದ ಸಂದರ್ಭದಲ್ಲಿ CNN ಪತ್ರಕರ್ತೆ ಕೈಟ್ಲನ್ ಕಾಲಿನ್ಸ್ ಅವರನ್ನು ಕಂಡ ಟ್ರಂಪ್, “ನೀವು ಇಲ್ಲಿ ಇರಬಾರದು” ಎಂದು ಹೇಳಿದ್ದರು. ಆದರೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ವರದಿ ಮಾಡಲು ತಮಗೆ ವಿಶ್ವಸಂಸ್ಥೆಯಿಂದಲೇ ಮಾನ್ಯತೆ ಇದೆ ಎಂದು ಕಾಲಿನ್ಸ್ ಪ್ರತಿಕ್ರಿಯಿಸಿದ್ದರು. ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಕೂಡ ಟ್ರಂಪ್ ನಿರ್ಧಾರವನ್ನು ಸಮರ್ಥಿಸಿ, CNN ಅನ್ನು ಮುಚ್ಚಲಾಗಿಲ್ಲ; ಶ್ವೇತಭವನದ ಕಾರ್ಯಸ್ಥಳದಿಂದ ವರದಿ ಮಾಡಲು ಮಾತ್ರ ಅವಕಾಶ ನೀಡಲಾಗುತ್ತಿಲ್ಲ ಎಂದು ಹೇಳಿದ್ದರು.
ಟ್ರಂಪ್ ಮತ್ತು ಅಮೆರಿಕದ ಮಾಧ್ಯಮಗಳ ನಡುವಿನ ಸಂಘರ್ಷ ಈಗ ಆರಂಭವಾದದ್ದಲ್ಲ. 2018ರಲ್ಲಿ CNNನ ಶ್ವೇತಭವನ ವರದಿಗಾರ ಜಿಮ್ ಅಕೋಸ್ಟಾ ಅವರ ಪತ್ರಿಕಾ ಪಾಸ್‌ನ್ನು ರದ್ದುಪಡಿಸಲಾಗಿತ್ತು. CNN ನ್ಯಾಯಾಲಯದ ಮೊರೆ ಹೋದ ಬಳಿಕ, ಫೆಡರಲ್ ನ್ಯಾಯಾಧೀಶ ಟಿಮೋತಿ ಕೆಲ್ಲಿ ಅವರ ಪಾಸ್‌ನ್ನು ಮರುಸ್ಥಾಪಿಸುವಂತೆ ಆದೇಶಿಸಿದ್ದರು. 2019ರಲ್ಲಿ Playboy ವರದಿಗಾರ ಬ್ರಿಯಾನ್ ಕೆರೆಮ್ ಅವರ ಪಾಸ್‌ನ್ನೂ ಶ್ವೇತಭವನ ರದ್ದುಪಡಿಸಿತ್ತು; ನಂತರ ನ್ಯಾಯಾಲಯ ಅದನ್ನು ಮರುಸ್ಥಾಪಿಸುವಂತೆ ಸೂಚಿಸಿತ್ತು.
ಇದನ್ನೂ ಓದಿ: 11 ವರ್ಷಗಳ ಬಳಿಕ ಅಮೆರಿಕಕ್ಕೆ ಜಿನ್‌ಪಿಂಗ್; ಭೇಟಿಯ ನಿರೀಕ್ಷೆ ಏನು?
ಕಳೆದ ವರ್ಷ ಟ್ರಂಪ್ ಆಡಳಿತವು Associated Pressನ ಪತ್ರಕರ್ತರನ್ನು Oval Office, Air Force One ಹಾಗೂ ಕೆಲವು ಅಧಿಕೃತ ಕಾರ್ಯಕ್ರಮಗಳಿಂದ ನಿರ್ಬಂಧಿಸಿತ್ತು. Gulf of Mexicoಗೆ ಟ್ರಂಪ್ ಬಯಸಿದ ‘Gulf of America’ ಎಂಬ ಹೆಸರನ್ನು ಬಳಸಲು AP ನಿರಾಕರಿಸಿದ್ದೇ ಇದಕ್ಕೆ ಕಾರಣ ಎಂದು ವರದಿಯಾಗಿತ್ತು. AP ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ಇನ್ನೂ ಮುಂದುವರಿದಿದೆ. ಕಳೆದ ಡಿಸೆಂಬರ್‌ನಲ್ಲಿ ಪೆಂಟಗನ್ ಕೂಡ ಪತ್ರಕರ್ತರಿಗೆ ಹೊಸ ನಿರ್ಬಂಧಗಳನ್ನು ಹೇರಿತ್ತು. ಕೆಲವು ಮಾಧ್ಯಮ ಸಂಸ್ಥೆಗಳು ಆ ನಿಯಮಕ್ಕೆ ಸಹಿ ಹಾಕಲು ನಿರಾಕರಿಸಿದ ಬಳಿಕ ಅವರ ಪತ್ರಿಕಾ ಪಾಸ್‌ಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿತ್ತು.
ಶ್ವೇತಭವನದ ಮಾಧ್ಯಮ ಪೂಲ್ ಇಲ್ಲದೆ ಟ್ರಂಪ್ ಭಾಗವಹಿಸಿದ ಮೊದಲ ಕಾರ್ಯಕ್ರಮದಲ್ಲೂ ಮಾಧ್ಯಮ ವ್ಯವಸ್ಥೆಯ ಪರಿಣಾಮ ಗೋಚರಿಸಿತು. ಹೊಸ ಹೆಲಿಪ್ಯಾಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಟ್ರಂಪ್ ಮಾತನಾಡಿದ ವೇಳೆ ಹೆಲಿಕಾಪ್ಟರ್‌ನ ಶಬ್ದದಿಂದ ಅವರ ಮಾತುಗಳು ಶ್ವೇತಭವನದ ವಿಡಿಯೋ ಫೀಡ್‌ನಲ್ಲಿ ಬಹುತೇಕ ಕೇಳಿಸಲಿಲ್ಲ ಎಂದು ವರದಿ ತಿಳಿಸಿದೆ.




