ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಮರಳಲು ಆಸಕ್ತಿ ತೋರಿದ್ದರು. ಆದರೆ, ‘ತಮಗೇ ನಾಯಕತ್ವ ನೀಡಬೇಕು’ ಎಂಬ ಅವರ ಶರತ್ತಿನ ಕಾರಣದಿಂದಾಗಿ ಅವರ ಪ್ರಸ್ತಾಪವನ್ನು ಗುಜರಾತ್ ಫ್ರಾಂಚೈಸಿ ತಿರಸ್ಕರಿಸಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
2022ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯತ್ವ ನಿರ್ವಹಿಸಿದ್ದ ಹಾರ್ದಿಕ್, ತಮ್ಮ ಚೊಚ್ಚಲ ನಾಯಕತ್ವದಲ್ಲೇ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿದ್ದರು. 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿಕಕೊಂಡಿದ್ದರು. ಮೂಲಗಳ ಪ್ರಕಾರ, ಗುಜರಾತ್ ಫ್ರಾಂಚೈಸಿಯು ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಮುಕ್ತವಾಗಿತ್ತು. ಈ ಕುರಿತು ಹಾಲಿ ನಾಯಕ ಶುಭಮನ್ ಗಿಲ್ ಅವರೊಂದಿಗೂ ಚರ್ಚಿಸಲಾಗಿತ್ತು. ಗಿಲ್ ಕೂಡ ಹಾರ್ದಿಕ್ ಮರಳುವುದಕ್ಕೆ ಸಮ್ಮತಿ ಸೂಚಿಸಿದ್ದರು. ಆದರೆ, ‘ತಂಡಕ್ಕೆ ಮರಳಿದರೆ ನಾಯಕತ್ವವನ್ನೇ ನೀಡಬೇಕು’ ಎಂಬ ಹಾರ್ದಿಕ್ ಪಾಂಡ್ಯ ನೀಡಿದ ಶರತ್ತನ್ನು ಒಪ್ಪಿಕೊಳ್ಳಲು ಗುಜರಾತ್ ಟೈಟಾನ್ಸ್ ಮ್ಯಾನೇಜ್‌ಮೆಂಟ್ ನಿರಾಕರಿಸಿದೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಲು ಗುಜರಾತ್ ಟೈಟಾನ್ಸ್ ಪ್ರತಿನಿಧಿ ನಿರಾಕರಿಸಿದ್ದಾರೆ. ಇತ್ತ ಹಾರ್ದಿಕ್ ಪಾಂಡ್ಯ ಅವರ ವಕ್ತಾರರು ಸ್ಪಷ್ಟನೆ ನೀಡಿದ್ದು, “ಹಾರ್ದಿಕ್ ಪಾಂಡ್ಯ ಯಾವುದೇ ಫ್ರಾಂಚೈಸಿಯೊಂದಿಗೆ ನೇರವಾಗಿ ವ್ಯವಹಾರ ಅಥವಾ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ. ಒಂದು ವೇಳೆ ಯಾರಾದರೂ ಸಂಪರ್ಕಿಸಿದ್ದರೆ ಅದನ್ನು ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್‌ಗೆ ತಿಳಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಜಾರ್ಖಂಡ್ | ಸರ್ಕಾರ ದಮನಿಸಿದರೂ, ಮೂರು ಪರೀಕ್ಷೆ ರದ್ದಾದರೂ ಶಮನವಾಗದ ವಿದ್ಯಾರ್ಥಿಗಳ ಆಕ್ರೋಶ
ಸದ್ಯಕ್ಕೆ, ಮುಂಬೈ ಇಂಡಿಯನ್ಸ್ ತಂಡದಲ್ಲಿಯೂ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಕುರಿತು ಕಳೆದ ಕೆಲವು ವಾರಗಳಿಂದ ತೀವ್ರ ಅನಿಶ್ಚಿತತೆ ಇದೆ. 2026ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ ನೀಡಿತ್ತು. ಆಡಿದ 14 ಪಂದ್ಯಗಳಲ್ಲಿ 10ರಲ್ಲಿ ಸೋತು, ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿತ್ತು. ಅಲ್ಲದೆ, ಅದರ ಹಿಂದಿನ ಅಂದರೆ 2025ರ ಟೂರ್ನಿಯಲ್ಲಿಯೂ ತಂಡ ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ, ತಂಡದ ಮ್ಯಾನೇಜ್‌ಮೆಂಟ್ ಹಾರ್ದಿಕ್ ಅವರನ್ನು ನಾಯಕತ್ವದಲ್ಲಿ ಮುಂದುವರಿಸಲು ನಿರಾಸಕ್ತಿ ತೋರಿದೆ ಎಂದು ವರದಿಯಾಗಿದೆ.
2026ರ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ನ ಕೊನೆಯ ಪಂದ್ಯದ ನಂತರ ನಡೆದ ತಂಡದ ಸಭೆಯಲ್ಲಿ, ಹಿರಿಯ ಆಟಗಾರರ ನಡವಳಿಕೆ ಬಗ್ಗೆ ಕೋಚಿಂಗ್ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದರು. “ಆಟಗಾರರು ಡೇಟಾ ಆಧಾರಿತ ಸಲಹೆಗಳನ್ನು ಪಾಲಿಸುತ್ತಿಲ್ಲ” ಎಂದು ತರಬೇತುದಾರರು ನೇರವಾಗಿಯೇ ಸಭೆಯಲ್ಲಿ ಆಕ್ರೋಶ ಹೊರಹಾಕಿದ್ದರು.



