ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ 1992ರ ವಿಶ್ವಕಪ್ ವಿಜೇತ ನಾಯಕ ಇಮ್ರಾನ್ ಖಾನ್ ಅವರ ಆರೋಗ್ಯ ಹದಗೆಡುತ್ತಿದ್ದು, ಅವರಿಗೆ ಸೂಕ್ತ ವೈದ್ಯಕೀಯ ನೆರವು ಒದಗಿಸುವ ನಿಟ್ಟಿನಲ್ಲಿ ರಾಜತಾಂತ್ರಿಕವಾಗಿ ಮಧ್ಯಪ್ರವೇಶಿಸುವಂತೆ ಆಸ್ಟ್ರೇಲಿಯಾದ ಏಳು ಮಂದಿ ಮಾಜಿ ಕ್ರಿಕೆಟ್ ನಾಯಕರು ತಮ್ಮ ದೇಶದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರನ್ನು ಒತ್ತಾಯಿಸಿದ್ದಾರೆ. ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿರುವ ಇಮ್ರಾನ್ ಅವರ ಸ್ಥಿತಿಯ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ಪರ 87 ಟೆಸ್ಟ್ ಪಂದ್ಯಗಳನ್ನು ಆಡಿರುವ ಹಾಗೂ ಭಾರತೀಯ ಪುರುಷರ ಕ್ರಿಕೆಟ್ ತಂಡದ ಮಾಜಿ ತರಬೇತುದಾರರೂ ಆಗಿರುವ ಗ್ರೆಗ್ ಚಾಪೆಲ್ ನೇತೃತ್ವದಲ್ಲಿ ಈ ಪತ್ರ ಬರೆಯಲಾಗಿದೆ. ಇವರೊಂದಿಗೆ ಆಸ್ಟ್ರೇಲಿಯಾ ಕ್ರಿಕೆಟ್‌ನ ದಿಗ್ಗಜರಾದ ಗ್ರೆಗ್ ಚಾಪೆಲ್, ಆಲನ್ ಬಾರ್ಡರ್, ಇಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್, ಕಿಮ್ ಹ್ಯೂಸ್, ಮಾರ್ಕ್ ಟೇಲರ್ ಹಾಗೂ ಸ್ಟೀವ್ ವಾ ಅವರು ಕೂಡ ಕೈಜೋಡಿಸಿದ್ದಾರೆ. ಇಮ್ರಾನ್ ಖಾನ್ ಅವರ ಕುರಿತು ಚರ್ಚಿಸಲು ವಿದೇಶಾಂಗ ಸಚಿವೆ ವಾಂಗ್ ಅವರ ಭೇಟಿಗೂ ಗ್ರೆಗ್ ಚಾಪೆಲ್ ಸಮಯಾವಕಾಶ ಕೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಗ್ರೆಗ್ ಚಾಪೆಲ್, “ಅವರು (ಇಮ್ರಾನ್) ಜೈಲಿನಲ್ಲೇ ಮೃತಪಡಬಹುದು ಎಂಬ ಆತಂಕ ನಮಗಿದೆ” ಎಂದು ಹೇಳಿದ್ದಾರೆ. ಸಚಿವರಿಗೆ ಬರೆದ ಪತ್ರದಲ್ಲಿ, “2022ರಲ್ಲಿ ಇಮ್ರಾನ್ ಪ್ರಧಾನಿಯಾಗಿದ್ದಾಗ ಗ್ರೆಗ್ ಚಾಪೆಲ್ ಅವರನ್ನು ಇಸ್ಲಾಮಾಬಾದ್‌ನಲ್ಲಿ ಭೇಟಿಯಾಗಿದ್ದರು. ಆಗ ಅವರು ಅತ್ಯಂತ ಆರೋಗ್ಯವಂತ ಹಾಗೂ ಫಿಟ್ ಆಗಿದ್ದರು. ಆದರೆ ಈಗ ಜೈಲಿನಿಂದ ಬರುತ್ತಿರುವ ವರದಿಗಳು ಕಳವಳಕಾರಿಯಾಗಿವೆ. ನಾವು ರಾಜಕಾರಣಿಗಳಾಗಿ ಅಲ್ಲ, ಬದಲಾಗಿ ಓರ್ವ ಸಹ ಆಟಗಾರನಿಗಾಗಿ ಮಾಜಿ ನಾಯಕರಾಗಿ ಈ ವಿಚಾರದಲ್ಲಿ ಧ್ವನಿ ಎತ್ತುತ್ತಿದ್ದೇವೆ” ಎಂದು ಉಲ್ಲೇಖಿಸಿದ್ದಾರೆ.
”ಇಮ್ರಾನ್ ಖಾನ್ ತಮ್ಮ ದೇಶಕ್ಕೆ ಏಕೈಕ ವಿಶ್ವಕಪ್ ತಂದುಕೊಟ್ಟಿದ್ದಾರೆ. ಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಕ್ಯಾನ್ಸರ್ ಆಸ್ಪತ್ರೆಗಳನ್ನು ನಿರ್ಮಿಸುವ ಮೂಲಕ ಜನರ ಜೀವನ ಮಟ್ಟ ಸುಧಾರಿಸಿದ್ದಾರೆ. ಅವರನ್ನು ಆಸ್ಟ್ರೇಲಿಯನ್ನರು ಅತ್ಯಂತ ಗೌರವದಿಂದ ಕಾಣುತ್ತಾರೆ. ಅವರ ವಿರುದ್ಧದ ರಾಜಕೀಯ ಅಥವಾ ಕಾನೂನು ಪ್ರಕರಣಗಳು ಪಾಕಿಸ್ತಾನದ ಆಂತರಿಕ ವಿಚಾರ. ಆದರೆ, ಜೈಲಿನಲ್ಲಿರುವ ಯಾವುದೇ ವ್ಯಕ್ತಿಗೆ ಕನಿಷ್ಠ ಮಾನವೀಯತೆ ಆಧಾರದ ಮೇಲಾದರೂ ಮೂಲಭೂತ ಸೌಲಭ್ಯಗಳನ್ನು ನೀಡಬೇಕು. ಆದರೆ, ಅವರಿಗೆ ಸರಿಯಾದ ವೈದ್ಯಕೀಯ ಸೌಲಭ್ಯ, ಕುಟುಂಬದ ಭೇಟಿ ಹಾಗೂ ಕಾನೂನು ನೆರವು ಸಿಗುತ್ತಿಲ್ಲ ಎಂದು ಅವರ ಮಕ್ಕಳೇ ಅಳಲು ತೋಡಿಕೊಂಡಿದ್ದಾರೆ” ಎಂದು ಪತ್ರದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಲಾಗಿದೆ.
73 ವರ್ಷದ ಇಮ್ರಾನ್ ಖಾನ್ ಅವರು 2022ರಲ್ಲಿ ಪ್ರಧಾನಿ ಹುದ್ದೆ ಕಳೆದುಕೊಂಡಿದ್ದರು. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಅವರಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, 2023ರಿಂದ ಅವರು ಜೈಲುವಾಸ ಅನುಭವಿಸುತ್ತಿದ್ದಾರೆ. ಅವರ ಮೇಲೆ ಭ್ರಷ್ಟಾಚಾರ, ಲಂಚ, ಗೌಪ್ಯ ಮಾಹಿತಿ ಸೋರಿಕೆ ಸೇರಿದಂತೆ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆದರೆ, ಇವೆಲ್ಲವೂ ರಾಜಕೀಯ ಪ್ರೇರಿತ ಆರೋಪಗಳು ಎಂದು ಇಮ್ರಾನ್ ಹಾಗೂ ಅವರ ಪಕ್ಷ ‘ಪಿಟಿಐ’ (ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್) ನಿರಂತರವಾಗಿ ನಿರಾಕರಿಸುತ್ತಲೇ ಬಂದಿವೆ.
ಇದಕ್ಕೂ ಮುನ್ನ ಈ ವರ್ಷದ ಆರಂಭದಲ್ಲಿ ಭಾರತದ ದಿಗ್ಗಜರಾದ ಸುನಿಲ್ ಗಾವಸ್ಕರ್, ಕಪಿಲ್ ದೇವ್ ಮತ್ತು ದಿಲೀಪ್ ವೆಂಗ್‌ಸರ್ಕರ್ ಸೇರಿದಂತೆ 21 ಅಂತರರಾಷ್ಟ್ರೀಯ ಮಾಜಿ ನಾಯಕರು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪತ್ರ ಬರೆದು, ಇಮ್ರಾನ್ ಅವರನ್ನು ಮಾನವೀಯತೆಯಿಂದ ನಡೆಸಿಕೊಳ್ಳುವಂತೆ ಮನವಿ ಮಾಡಿದ್ದರು. ಆ ಬಳಿಕ ಪ್ಯಾಟ್ ಕಮಿನ್ಸ್, ಬ್ರಿಯಾನ್ ಲಾರಾ, ವಾಸಿಂ ಅಕ್ರಮ್, ರಮೀಜ್ ರಾಜಾ, ಜಾವೇದ್ ಮಿಯಾಂದಾದ್ ಮತ್ತು ಮೈಕೇಲ್ ಹೋಲ್ಡಿಂಗ್ ಕೂಡ ಇಮ್ರಾನ್ ಪರವಾಗಿ ಧ್ವನಿ ಎತ್ತಿದ್ದರು. ಇತ್ತೀಚೆಗೆ ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಇಮ್ರಾನ್ ಪುತ್ರರ ಸಂದರ್ಶನವೊಂದು ಪ್ರಸಾರವಾಗಿತ್ತು, ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಸಮಾಧಾನಕ್ಕೂ ಕಾರಣವಾಗಿತ್ತು.




