ಐಪಿಎಲ್ 6ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಗ್ಗರಿಸಿರುವ ಚೆನ್ನೈ, ಸೋಮವಾರ ತವರು ಮೈದಾನದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಸಾರಥ್ಯದ ಲಖನೌ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದೆ. ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಭಾರಿ ಗೆಲುವಿನ ದಾಖಲೆ ಹೊಂದಿರುವುದು ಧೋನಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ನಾಲ್ಕು ವರ್ಷಗಳ ಬಳಿಕ ಸಿಎಸ್‌ಕೆ ತಂಡ ತವರು ಮೈದಾನದಲ್ಲಿ ಪಂದ್ಯವನ್ನಾಡಲಿದೆ. ಹೀಗಾಗಿ ಪಂದ್ಯದ ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್ ಆಗಿದೆ.
ಚೆನ್ನೈ ತಂಡದಲ್ಲಿ ಬದಲಾವಣೆ ಸಾಧ್ಯತೆ
ಗುಜರಾತ್ ಟೈಟನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ ತುಶಾರ್ ದೇಶಪಾಂಡೆ ಯಾವುದೇ ಇಂಪ್ಯಾಕ್ಟ್ ಮಾಡುವಲ್ಲಿ ವಿಫಲರಾಗಿದ್ದರು. 3.2 ಓವರ್ ಎಸೆದಿದ್ದ ತುಶಾರ್, ವೈಡ್ – ನೋಬಾಲ್ ಸೇರಿದಂತೆ ಒಟ್ಟು 51 ರನ್ ಬಿಟ್ಟುಕೊಡುವ ಮೂಲಕ ದುಬಾರಿಯಾಗಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ತುಶಾರ್ ಬದಲು ಆಲ್‌ರೌಂಡರ್ ಸಿಮರ್ಜಿತ್ ಸಿಂಗ್ ಅವಕಾಶ ಪಡೆಯುವ ಸಾಧ್ಯತೆಯಿದೆ.
ಇನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಗೆ ಸಿಎಸ್‌ಕೆ ಮುಂದಾಗಿದ್ದು, ಮೂರನೇ ಕ್ರಮಾಂಕದಲ್ಲಿ ಮೊಯಿನ್ ಅಲಿ ಬದಲು ಬೆನ್ ಸ್ಟೋಕ್ಸ್ ಬಡ್ತಿ ಪಡೆಯಲಿದ್ದಾರೆ. ಶಾರ್ಟ್ ಪಿಚ್ ಎಸೆತಗಳಲ್ಲಿ ರನ್ ಗಳಿಸಲು ಅಲಿ ಕಷ್ಟಪಡುತ್ತಿದ್ದಾರೆ. ಆದರೆ ಸ್ಪಿನ್ ಎದುರು ಅವರ ಸರಾಸರಿ ಅತ್ಯುತ್ತಮವಾಗಿದೆ. ಹೀಗಾಗಿ ಅಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ.
ಗೆಲುವಿನ ಆರಂಭ ಪಡೆದಿರುವ ಲಖನೌ, ಕಳೆದ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಚೆನ್ನೈ ವಿರುದ್ಧವೂ ಕಣಕ್ಕಿಳಿಸುವ ಸಾಧ್ಯತೆಯಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 4 ಓವರ್ ಎಸೆದು ಕೇವಲ 14 ರನ್ ನೀಡಿ 5 ವಿಕೆಟ್ ಪಡೆದಿದ್ದ ವೇಗಿ ಮಾರ್ಕ್ ವುಡ್ ಮತ್ತು ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಕೈಲ್ ಮೇಯರ್ಸ್ ಲಖನೌ ಪಾಲಿಗೆ ಟ್ರಂಪ್ ಕಾರ್ಡ್ ಆಗಿದ್ದಾರೆ.
ಚೆನ್ನೈ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು ಹೆಚ್ಚಿನ ಪಂದ್ಯಗಳನ್ನು ಗೆದ್ದ ದಾಖಲೆ ಇದೆ. ಈ ಹಿನ್ನಲೆ ಇಂದಿನ ಪಂದ್ಯದಲ್ಲೂ ಟಾಸ್ ಸಹ ನಿರ್ಣಾಯಕ ಪಾತ್ರ ವಹಿಸಲಿದೆ.
ಈ ಸುದ್ದಿ ಓದಿದ್ದೀರಾ?: ನೋಬಾಲ್ ತೀರ್ಪು ನೀಡಿದ ಅಂಪೈರ್; ಚಾಕುವಿನಿಂದ ಇರಿದು ಹತ್ಯೆ
ಸಂಭವನೀಯ ಆಡುವ ಬಳಗ
ಚೆನ್ನೈ ಸೂಪರ್ ಕಿಂಗ್ಸ್; ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ಶಿವಂ ದುಬೆ, ಎಂ ಎಸ್ ಧೋನಿ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ರಾಜವರ್ಧನ್ ಹಂಗರ್ಗೇಕರ್
ಇಂಪ್ಯಾಕ್ಟ್ ಪ್ಲೇಯರ್ – ಸಿಮರ್ಜೀತ್ ಸಿಂಗ್
ಲಖನೌ: ಕೆ ಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯ್ನಿಸ್ಸ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಮಾರ್ಕ್ ವುಡ್, ರವಿ ಬಿಷ್ಣೋಯ್, ಜಯದೇವ್ ಉನಾದ್ಕತ್, ಅವೇಶ್ ಖಾನ್
ಇಂಪ್ಯಾಕ್ಟ್ ಪ್ಲೇಯರ್ – ಕೆ ಗೌತಮ್