ಐಪಿಎಲ್ 16ನೇ ಆವೃತ್ತಿಯ ಬಹು ನಿರೀಕ್ಷಿತ ಬದ್ಧ ವೈರಿಗಳ ʻಎಲ್ ಕ್ಲಾಸಿಕೊʼ ಕದನಕ್ಕೆ ಶನಿವಾರ ಮುಂಬೈನ ವಾಂಖೆಡೆ ಮೈದಾನ ಸಾಕ್ಷಿಯಾಗಲಿದೆ.
ಐಪಿಎಲ್ ಟೂರ್ನಿಯ ಅತ್ಯಂತ ಯಶಸ್ವಿ ತಂಡಗಳಾದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಇಂದು ಮುಂಬೈನಲ್ಲಿ ರಾತ್ರಿ ಮುಖಾಮುಖಿಯಾಗಲಿವೆ.
ಪ್ರಸಕ್ತ ಟೂರ್ನಿಯಲ್ಲಿ ಈಗಾಗಲೇ ಎರಡು ಪಂದ್ಯಗಳನ್ನಾಡಿರುವ ಚೆನ್ನೈ ತಲಾ ಒಂದು ಗೆಲುವು ಮತ್ತು ಸೋಲು ಕಂಡಿದೆ. ಮತ್ತೊಂದೆಡೆ ಮುಂಬೈ, ಬೆಂಗಳೂರಿನಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಹೀನಾಯ ಸೋಲು ಕಂಡಿತ್ತು. 5 ದಿನಗಳ ವಿಶ್ರಾಂತಿಯ ಬಳಿಕ ತವರಿನ ಅಭಿಮಾನಗಳೆದುರು ಮೈದಾನಕ್ಕಿಳಿಯುತ್ತಿರುವ ಇಂಡಿಯನ್ಸ್ ಗೆಲುವಿನ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದೆ.
ಮಹೇಂದ್ರ ಸಿಂಗ್ಸ್ ಧೋನಿ ಮತ್ತು ರೋಹಿತ್ ಶರ್ಮ ಮುಖಾಮುಖಿಯಾಗುತ್ತಿರುವುದು ಇಂದಿನ ಪಂದ್ಯದ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅಭಿಮಾನಿಗಳ ನೆಚ್ಚಿನ ಎರಡು ತಂಡಗಳ ನಡುವೆ ಜಿದ್ದಾಜಿದ್ದಿನ ಪಂದ್ಯ ನಡೆಯುವ ನಿರೀಕ್ಷೆ ಹೆಚ್ಚಾಗಿದೆ. ಮೇಲ್ನೋಟಕ್ಕೆ ತವರಿನಂಗಳದಲ್ಲಿ ರೋಹಿತ್ ಪಡೆ ಒತ್ತಡದಲ್ಲಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮುಂಬೈನ ಬ್ಯಾಟಿಂಗ್-ಬೌಲಿಂಗ್ ದೌರ್ಬಲ್ಯ ಸ್ಪಷ್ಟವಾಗಿ ಗೋಚರಿಸಿದೆ.
ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ಬೆಟ್ಟಿಂಗ್ ದಂಧೆಯಲ್ಲಿ ಬೇಯುತ್ತಿರುವ ದೇಶ; ಅಮೃತಕಾಲ-ವಿಶ್ವಗುರು ಜಪಿಸುತ್ತಿರುವ ಬಿಜೆಪಿ
ಚೆನ್ನೈಗೆ ಋತುರಾಜ್ ಬಲ
ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನೇ ಚೆನ್ನೈ ಬಹುವಾಗಿ ನೆಚ್ಚಿಕೊಂಡಿದೆ. ಆರಂಭಿಕ ಋತುರಾಜ್ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 92 ಮತ್ತು 57 ರನ್‌ಗಳಿಸಿರುವುದು ತಂಡಕ್ಕೆ ಬಲ ತುಂಬಿದೆ. 8 ಮಂದಿ ಬ್ಯಾಟರ್‌ಗಳು ತಂಡದಲ್ಲಿದ್ದಾರೆ. ಆದರೆ ಬೌಲಿಂಗ್ ವಿಭಾಗಕ್ಕೆ ರನ್ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಪಂದ್ಯದಲ್ಲಿ ಮಿಂಚಿದ್ದ ಸ್ಪಿನ್ನರ್ ಮೊಯಿನ್ ಅಲಿ, ತನ್ನ 4 ಓವರ್‌ಗಳ ದಾಳಿಯಲ್ಲಿ 26 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆಯುವ ಮೂಲಕ ಗೆಲುವಿನ ರುವಾರಿಯಾಗಿದ್ದರು.